ಈ ಲೇಖನವನ್ನು
ಬರೆಯುವ ಹೊತ್ತಿನಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕುಮಾರಿ
ಜೆ. ಜಯಲಲಿತಾ ಅವರ ಜಾಮೀನು ಅರ್ಜಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯ ತಿರಸ್ಕರಿಸಿದ ಸುದ್ಧಿ ಬಂದಿದೆ. ಅರವತ್ತಾರು ವರ್ಷಗಳ ಜನನಾಯಕಿ ಬಂಧನದಲ್ಲೇ ಇರಬೇಕಾಗಿದೆ.
ಇದನ್ನು ವಿರೋಧಿಸಿ ಅವರ ಪಕ್ಷದ ಕಾರ್ಯಕರ್ತರು ಚೆನೈನಲ್ಲಿ
ಪ್ರತಿಭಟನೆಗಿಳಿದಿದ್ದಾರೆ. ಈ ಸಮಯದಲ್ಲಿ ನನ್ನನ್ನು
ಕಾಡುತ್ತಿರುವುದು ಘೋಷಿತ ಆದಾಯಕ್ಕೆ ಮೀರಿದ ಆಸ್ತಿ ಹೊಂದಿದ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿ ಹತ್ತುದಿನಗಳಿಗೂ
ಹಿಂದೆ ಜಯಲಲಿತಾ ಬಂಧನಕ್ಕೊಳಗಾದಾಗ ಅವರ ಅಭಿಮಾನಿಗಳು ನಡೆದುಕೊಂಡ ಬಗೆ. ತಮ್ಮ ನಾಯಕಿ ತಪ್ಪು ಮಾಡಿಲ್ಲ, ಅವರನ್ನು ವಿನಾಃಕಾರಣ ಶಿಕ್ಷೆಗೊಳಪಡಿಸಲಾಗಿದೆ
ಎಂಬ ತಮ್ಮ ವೈಯುಕ್ತಿಕ ಅಭಿಪ್ರಾಯವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿದ ಇವರು ತಮಿಳುನಾಡಿನಾದ್ಯಂತ
ಕಾನೂನುವ್ಯವಸ್ಥೆಗೆ ಭಂಗ ತರುವಂತಹ ಕೃತ್ಯಗಳಲ್ಲಿ ತೊಡಗಿದರು. ನ್ಯಾಯಾಲಯವೊಂದು ಸುಧೀರ್ಘವಾಗಿ ವಿಚಾರಣೆ ನಡೆಸಿ ತಕ್ಕ ಸಾಕ್ಷಾಧಾರಗಳ
ಮೂಲಕ ತಪ್ಪಿತಸ್ಥೆಯೆಂದು ತೀರ್ಮಾನಿಸಿದ ವ್ಯಕ್ತಿಯೊಬ್ಬರನ್ನು ನಿರಪರಾಧಿ ಎಂದು “ನಂಬುವ” ಮನೋಭಾವ
ನಮ್ಮ ಜನರಲ್ಲೇಕಿದೆ? ಯಾವ ಗುಣಗಳಿಗಾಗಿ ನಾವು ವ್ಯಕ್ತಿಯೊಬ್ಬನ/ಳನ್ನು
ಗೌರವದ ಸ್ಥಾನದಲ್ಲಿರಿಸಿರುವೆವೋ ಆ ಗುಣಗಳು ಆ ವ್ಯಕ್ತಿಯಲ್ಲಿ ಇಲ್ಲವೆಂದು ಸಾಕ್ಷಾಧಾರಗಳ ಮೂಲಕ ಸಾಬೀತಾದಾಗ
ಆ ವ್ಯಕ್ತಿಯ ಬಗೆ ನಮ್ಮ ಅಭಿಪ್ರಾಯ ಬದಲಾಗಬೇಕಲ್ಲವೇ?
ಆ ವ್ಯಕ್ತಿ ಹಿಂದಿನಂತೆ ಗೌರವಕ್ಕೆ ಈಗ ಅರ್ಹನ/ಳಲ್ಲ ಎಂಬ ವಿವೇಕಯುತ ತೀರ್ಮಾನ ನಮ್ಮಲ್ಲಿ
ಬರಬೇಕಲ್ಲವೇ? ಹಾಗೇಕಾಗುತ್ತಿಲ್ಲ? ಈ ಪ್ರಶ್ನೆ ನಮ್ಮನ್ನು ಕಾಡುವ ಸಂದರ್ಭಗಳು ಮತ್ತೆಮತ್ತೆ
ಎದುರಾಗುತ್ತಿದ್ದರೂ ಅಂಕಣಬರಹದ ಮಿತಿಯನ್ನು ಗಮನದಲ್ಲಿಟ್ಟುಕೊಂಡು ಕೇವಲ ಎರಡು ಉದಾಹರಣೆಗಳ ಮೂಲಕ ಈ
ವಿಷಯವನ್ನು ಚರ್ಚೆಗೆತ್ತಿಕೊಳ್ಳುತ್ತೇನೆ. ಒಬ್ಬರು
ರಾಜಕಾರಣಿ, ಮತ್ತೊಬ್ಬರು ಸಾಹಿತಿಯನ್ನು ಪ್ರಾತಿನಿಧಿಕವಾಗಿ ತೆಗೆದುಕೊಂಡು ಈ ವಿಷಯದ ಚರ್ಚೆಯನ್ನು
ಬೆಳೆಸುವುದು ನನ್ನ ಉದ್ದೇಶ.
ಎಂಬತ್ತರ
ದಶಕದ ಉತ್ತರಾರ್ಧದಲ್ಲಿ ಬಂದ ಅನಧಿಕೃತ ವರದಿಯೊಂದರ ಪ್ರಕಾರ ಸ್ವಿಸ್ ಬ್ಯಾಂಕ್‍ಗಳಲ್ಲಿ ಅತ್ಯಧಿಕ ಹಣವನ್ನಿಟ್ಟಿರುವ
ಮೊದಲ ನಾಲ್ವರಲ್ಲಿ ಮೂವರು ಆಫ್ರಿಕಾದ ಸರ್ವಾಧಿಕಾರಿಗಳು, ನಾಲ್ಕನೆಯವರು ಭಾರತದ ಮಾಜಿ ಪ್ರಧಾನಿ ರಾಜೀವ್
ಗಾಂಧಿ. ಆ ವರದಿಯ ಸತ್ಯಾಸತ್ಯತೆ ಏನೇ ಇರಲಿ ಬೊಫೋರ್ಸ್ ಹಗರಣ ಸುದ್ಧಿಯಲ್ಲಿದ್ದ ಆ ದಿನಗಳಲ್ಲಿ ಸಹಜವಾಗಿಯೇ
ಈ ವರದಿ ಎಲ್ಲರ ಕುತೂಹಲ ಕೆರಳಿಸಿತ್ತು. ಅಲ್ಲಿಂದೀಚೆಯ
ಕಾಲು ಶತಮಾನದಲ್ಲಿ ಘೋಷಿತ ಆದಾಯದ ಮಿತಿಗೆ ಮೀರಿದ ಸಂಪತ್ತನ್ನು ಹೊಂದಿದ ಅಪಾದನೆ ಹಲವಾರು ರಾಜಕಾರಣಿಗಳ
ಮೇಲೆ ಬಂದಿದೆ. ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ
ಪ್ರಸಾದ್ ಯಾದವ್ ಜೈಲಿಗೆ ಹೋಗಿ ಬಂದಿದ್ದಾರೆ. ನಿಷ್ಪಕ್ಷಪಾತ,
ತ್ವರಿತ ವಿಚಾರಣೆ ನಡೆದರೆ ಇನ್ನೆಷ್ಟು ಜನನಾಯಕರು ಶಿಕ್ಷೆಗೊಳಗಾಗುತ್ತಾರೋ. ಸಧ್ಯಕ್ಕೆ ಈ ಚರ್ಚೆಗೆ ಸೂಕ್ತವಾದ ಉದಾಹರಣೆ ಜಯಲಲಿತಾ ಅವರದ್ದೇ.
ಹೀಗಾಗಿ ರಾಜಕಾರಣಿಯ ಉದಾಹರಣೆಯಾಗಿ ಅವರನ್ನೇ ತೆಗೆದುಕೊಳ್ಳೋಣ.
ಯಶಸ್ವಿ
ಚಿತ್ರನಟಿಯಾದ ಇವರು ರಾಜಕೀಯಕ್ಕಿಳಿದಾಗ ಅಭಿಮಾನಿವರ್ಗ ಬೆಂಬಲಿಸಿದ್ದು ಸಹಜ. ಹೊಸ ನಾಯಕಿಯಿಂದ ಸ್ಚಚ್ಚ, ಪರಿಣಾಮಕಾರಿ ಆಡಳಿತವನ್ನು ಅವರು
ಬಯಸಿದ್ದೂ ಸಹಜವೇ. ಆದರೆ 1991-96ರ ತಮ್ಮ ಮೊದಲ ಅವಧಿಯಲ್ಲಿ
ಅವರು ಮಾಡಿದ್ದೇನು? ಚೆನ್ನೈ, ಊಟಿ ಸೇರಿದಂತೆ ಹಲವು
ಕಡೆ ಸ್ಥಿರಾಸ್ತಿಗಳ ಗಳಿಕೆ, ದತ್ತುಮಗನ ಮದುವೆಗೆಂದು ನೂರೈವತ್ತು ಕೋಟಿ ರೂಪಾಯಿ ವ್ಯಯ. ಇಷ್ಟೆಲ್ಲವನ್ನೂ ಅವರು ಮಾಡಿದ್ದು ಮಾಸಿಕ ಒಂದೇ ಒಂದು ರೂಪಾಯಿಯ
ವೇತನದಿಂದ.
1996ರಲ್ಲಿ
ಚುನಾವಣೆಯಲ್ಲಿ ಸೋತ ನಂತರ ಅವರ ತಾತ್ಕಾಲಿಕ ಬಂಧನವಾಯಿತು.
ಅರವತ್ತಾರು ಕೋಟಿಗೂ ಮಿಕ್ಕಿದ ಅಕ್ರಮ ಆಸ್ತಿ ಹೊಂದಿದ್ದಾರೆಂಬ ಆರೋಪದ ಮೇಲೆ ನ್ಯಾಯಾಂಗ ವಿಚಾರಣೆಯೂ
ಆರಂಭವಾಯಿತು. ವಿಚಾರಣೆಯ ಅಂತಿಮ ಪರಿಣಾಮ ಏನೇ ಇರಲಿ,
ತೆರಿಗೆದಾರನ ಹಣದ ದುರುಪಯೋಗವಾಗಿದೆಯೆಂಬುದು ಮೇಲ್ನೋಟಕ್ಕೇ ಕಾಣುವಂತಿದ್ದಾಗ ಅವರ ಅಭಿಮಾನಿಗಳ ವರ್ತನೆ
ಹೇಗಿತ್ತು? 2000ನೇ ಇಸವಿಯ ಜನವರಿಯಲ್ಲಿ ಎರಡನೆಯ
ಬಾರಿಗೆ ಜಯಲಲಿತಾರ ತಾತ್ಕಾಲಿಕ ಬಂಧನವಾದಾಗ ಅವರ ಅಭಿಮಾನಿಗಳು ರಾಜ್ಯದಾದ್ಯಂತ ದಾಂಧಲೆಯೆಬ್ಬಿಸಿದರು. ಧರ್ಮಪುರಿಯಲ್ಲಿ ಕಾಲೇಜು ಬಸ್ಸೊಂದಕ್ಕೆ ಬೆಂಕಿ ಹಚ್ಚಿ ಮೂವರು
ಮುಗ್ಧ ವಿದ್ಯಾರ್ಥಿನಿಯರನ್ನು ಜೀವಂತ ದಹಿಸಿದರು.
ತನ್ನ
ಐದುವರ್ಷಗಳ ಆಡಳಿತದಲ್ಲಿ ಸ್ವಚ್ಚ ಆಡಳಿತವನ್ನೇನೂ ತಮ್ಮ ನಾಯಕಿ ನೀಡಲಿಲ್ಲ ಎಂದವರಿಗೇಕೆ ತಿಳಿಯಲಿಲ್ಲ? ಕೋಟ್ಯಾಂತರ ಜನ ಹೊಟ್ಟೆಗಿಲ್ಲದೇ ಇರುವ ದೇಶದಲ್ಲಿ ಒಂದು
ವಿವಾಹಕ್ಕೆಂದು ನೂರೈವತ್ತು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದು ತಪ್ಪು, ಅಕ್ಷಮ್ಯ ಎಂದೇಕೆ ಅವರಿಗೆ
ಅನಿಸಲಿಲ್ಲ? ಈ ದುಂದುವೆಚ್ಚಕ್ಕೆ, ವಿವಿಧೆಡೆ ಆಸ್ತಿಸಂಪಾದನೆಗೆ
ಹಣ ಬಂದದ್ದು ಅಕ್ರಮ ಮಾರ್ಗಗಳಿಂದಿರಬಹುದು ಎಂದು ಸಂಶಯಿಸಲು ಅವರೇಕೆ ಅಸಮರ್ಥರಾದರು? ಅಥವಾ, ಅದಲ್ಲವೂ ಅವರಿಗೆ ತಿಳಿದಿದ್ದರೂ ತಮ್ಮ ನಾಯಕಿ ಮಾಡಿದ್ದು
ಸರಿ ಎಂದೇ ಅವರು ಭಾವಿಸಿದರೇ? ತಮ್ಮ ನಾಯಕಿ ಭ್ರಷ್ಟ
ಮಾರ್ಗಗಳನ್ನು ಅನುಸರಿಸಿದ್ದಾರೆ ಎಂದು ಈಗ ನ್ಯಾಯಾಂಗವೂ ತೀರ್ಮಾನಿಸಿದ ಮೇಲೆಯೂ ಅವರ ವರ್ತನೆಯಲ್ಲಿ
ಯಾವ ಸಕಾರಾತ್ಮಕ ಬದಲಾವಣೆಯೂ ಇಲ್ಲವೇಕೆ? ಅಂದರೆ ತಪ್ಪೆಸಗುವ
ಸ್ವಾತಂತ್ರ್ಯ ಹಾಗೂ ಹಕ್ಕು ತಮ್ಮ ನಾಯಕಿಗಿದೆ ಎಂದವರು ತಿಳಿದರೇ? ಇದೆಲ್ಲದರ ಅರ್ಥ ಒಬ್ಬರನ್ನು ಒಮ್ಮೆ ಒಂದು ಉನ್ನತ ಸ್ಥಾನದಲ್ಲಿ
ಕೂರಿಸಿಬಿಟ್ಟರೆ ಆ ಸ್ಥಾನಕ್ಕೆ, ಗೌರವಕ್ಕೆ ಅವರು ಯೋಗ್ಯರಲ್ಲವೆಂದು ತಿಳಿದ ಮೇಲೂ ಅಲ್ಲಿಂದ ಅವರನ್ನು
ಕೆಳಗಿಳಿಸುವ ಮನೋಭಾವ ನಮ್ಮ ಜನಕ್ಕಿಲ್ಲವೇ? ನೀತಿ-ಅನೀತಿ,
ಯೋಗ್ಯತೆ-ಅಯೋಗ್ಯತೆಗಳಿಗೆ ಸಂಬಂಧಿಸಿದಂತೆ ನಮ್ಮ ಜನರ ಮೂಲಭೂತ ಚಿಂತನೆಯೇ ದೋಷಪೂರ್ಣವೇ?
ಪಶ್ಚಿಮದ
ಸಂಸ್ಕೃತಿಯ ಬಗ್ಗೆ, ಅದರ ಪ್ರಮುಖ್ಯ ಪ್ರತಿನಿಧಿಯಾದ ಅಮೆರಿಕಾದ ಜನತೆಯ ಕೆಲವು ಜೀವನ ಮೌಲ್ಯಗಳ ಬಗ್ಗೆ
ಹೆಚ್ಚಿನ ಭಾರತೀಯರಲ್ಲಿ ಸದಭಿಪ್ರಾಯವಿಲ್ಲ. ಅಮೆರಿಕನ್ನರು
ಬಟ್ಟೆ ಬದಲಿಸಿದಂತೆ ಸಂಗಾತಿಗಳನ್ನು ಬದಲಾಯಿಸುತ್ತಾರೆಂದು ಜರೆಯುತ್ತಾರೆ. ಅಮೆರಿಕನ್ನರ ಈ ಸ್ವಭಾವ ತಕ್ಕಮಟ್ಟಿಗೆ ನಿಜವೂ ಆಗಿರಬಹುದು. ಆದರೆ ಅದೇ ಅಮೆರಿಕನ್ನರು ತಮ್ಮನ್ನು ಆಳಲು ನಾಯಕರನ್ನು ಆಯ್ಕೆ
ಮಾಡುವಾಗ ಯಾವ ಮಾನದಂಡವನ್ನು ಉಪಯೋಗಿಸುತ್ತಾರೆಂದು ಸ್ವಲ್ಪ ಗಮನಿಸೋಣ. ಗ್ಯಾರಿ ಹಾರ್ಟ್ ಎಂಬ ರಾಜಕಾರಣಿ 1988ರ ಅಧ್ಯಕ್ಷೀಯ ಚುನಾವಣೆಗಳ
ಪ್ರಾಥಮಿಕ ಹಂತದಲ್ಲಿ ತುಂಬಾ ಭರವಸೆ ಮೂಡಿಸಿದ್ದರು.
ಡೆಮೋಕ್ರಾಟಿಕ್ ಪಕ್ಷದ ಅಭ್ಯರ್ಥಿಯಾಗಿ ಅವರು ಆಯ್ಕೆಯಾಗುವುದು ಸುನಿಶ್ಚಿತವೇ ಆಗಿತ್ತು. ಹಾಗೆಯೇ ಚುನಾವಣೆಗಳಲ್ಲಿ ಜಯಶಾಲಿಯಾಗಿ ಅವರು ಶ್ವೇತಭವನ
ಪ್ರವೇಶಿಸುವುದೂ ಸರಿಸುಮಾರು ನಿಶ್ಚಿತ ಎನ್ನುವ ಹಾಗೆಯೇ ಇತ್ತು.
ಒಂದು
ಬೆಳಿಗ್ಗೆ ಎಲ್ಲವೂ ತಿರುವುಮುರುವಾಗಿಹೋಯಿತು. ಬಹಾಮಾ
ದ್ವೀಪಗಳಲ್ಲೊಂದರಲ್ಲಿ ಗ್ಯಾರಿ ಹಾರ್ಟ್ ಮಾಡೆಲ್ ಒಬ್ಬಳನ್ನು ತೊಡೆಯ ಮೇಲೆ ಕೂರಿಸಿಕೊಂಡು ಕುಳಿತ ಚಿತ್ರ
ಪತ್ರಿಕೆಯೊಂದರ ಮುಖಪುಟದಲ್ಲಿ ಅಚ್ಚಾಯಿತು. ತಕ್ಷಣ
ಡೆಮೋಕ್ರಾಟಿಕ್ ಪಕ್ಷದ ಬೆಂಬಲಿಗರಲ್ಲೇ ಹಾರ್ಟ್ ಬಗ್ಗೆ ಅಭಿಪ್ರಾಯ ಬದಲಾಗಿಹೋಯಿತು. ಅವರು ಬಟ್ಟೆ ಬದಲಿಸಿದಂತೆ ಸಂಗಾತಿಗಳನ್ನು ಬದಲಿಸುವಂಥರಿರಬಹುದು. ಆದರೆ ತಮ್ಮ ನಾಯಕನಲ್ಲಿ ನೈತಿಕತೆಯನ್ನು ಅವರು ಕಡ್ಡಾಯವಾಗಿ
ಬಯಸುತ್ತಾರೆ. ತಮ್ಮನ್ನಾಳುವ ನಾಯಕ ತಮ್ಮಂತೆ ಸಾಮಾನ್ಯನಾಗಿರಬಾರದು
ಎಂದವರ ಖಚಿತ ನಿಲುವು. ಪರಿಣಾಮವಾಗಿ ಹಾರ್ಟ್ ಡೆಮೋಕ್ರಾಟಿಕ್
ಪಕ್ಷದ ಟಿಕೆಟ್ಟನ್ನೂ, ಶ್ವೇತಭವನ ಪ್ರವೇಶಿಸುವ ಕನಸನ್ನೂ ಶಾಶ್ವತವಾಗಿ ಮರೆಯಬೇಕಾಯಿತು. ಇದನ್ನು ನಮ್ಮಲ್ಲಿನ ಪರಿಸ್ಥಿತಿಯೊಂದಿಗೆ ಹೋಲಿಸಿ.
ರಾಜಕೀಯ
ನಾಯಕರ ಬಗೆಗಿನ ವರ್ತನೆಯನ್ನೇ ನಮ್ಮ ಜನ ಸಾಂಸ್ಕೃತಿಕ ನಾಯಕರ ಬಗೆಗೂ ತೋರುವ ಉದಾಹರಣೆಯಾಗಿ ಇತ್ತೀಚೆಗೆ
ನಿಧನರಾದ ಯು. ಆರ್. ಅನಂತಮೂರ್ತಿಯರು ಸೂಕ್ತ ಉದಾಹರಣೆಯಾಗಬಹುದು. ಸಮಾಜವಾದಿ ಚಿಂತನೆಗಳ ಪರವಾಗಿದ್ದ, ಮೌಲಿಕ ಕಥೆಗಳನ್ನು ಬರೆದ
ಮೂರ್ತಿಯವರು ಆ ದಿನಗಳ ಒಂದು ಪ್ರಭಾವಶಾಲಿ ಸಿದ್ದಾಂತಪ್ರೇರಿತ ಓದುಗವರ್ಗಕ್ಕೆ ಮೆಚ್ಚಿನವರಾದದ್ದು
ಸಹಜವೇ ಆಗಿತ್ತು. ಜತೆಗೆ ಅವರು ಪರಧರ್ಮೀಯ ಸ್ತ್ರೀಯನ್ನು
ವಿವಾಹವಾದದ್ದೇ ಅವರನ್ನು ಅಭಿಮಾನಿವರ್ಗ ಕ್ರಾಂತಿನಾಯಕನ ಪಟ್ಟದಲ್ಲಿ ಪ್ರತಿಷ್ಟಾಪಿಸಿ ಅರಾಧಿಸತೊಡಗಿತು. ಒಮ್ಮೆ ಅರಾಧನೆಯನ್ನಾರಂಭಿಸಿದೊಡನೇ ಮೂರ್ತಿಯವರ ಎಲ್ಲ ಕೃತ್ಯಗಳಿಗೂ
ಜೈಕಾರ ಹಾಕುವುದನ್ನು ಅದು ರೂಢಿಮಾಡಿಕೊಂಡುಬಿಟ್ಟಿತು.
“ಸಂಸ್ಕಾರ” ಕಾದಂಬರಿಯಲ್ಲಿ ಕಾಫ್ಕಾನ “ಪ್ಲೇಗ್” ಮತ್ತು ನಮ್ಮ ಕನ್ನಡದ್ದೇ ಟಿ. ಜಿ. ರಾಘವ
ಅವರ “ಶ್ರಾದ್ಜ”ದ ಛಾಪು ಢಾಳಾಗಿಗೆ ಎನ್ನುವ ಅಭಿಪ್ರಾಯಗಳನ್ನು ವಿಮರ್ಶಾತ್ಮಕವಾಗಿ ತೆಗೆದುಕೊಂಡು ಪರಿಶೀಲಿಸಲು
ಅದು ಪ್ರಯತ್ನಿಸಲೇ ಇಲ್ಲ. ಇತರರು ಪ್ರಯತ್ನಿಸಿದಾಗ
ಸುಮ್ಮನಿರಲೂ ಇಲ್ಲ. 1974ರಲ್ಲೊಮ್ಮೆ ಕನ್ನಡ ಸಾಹಿತ್ಯ
ಪರಿಷತ್ತು ಆಯೋಜಿಸಿದ್ದ ಸಮಾವೇಶವೊಂದರಲ್ಲಿ ಎಸ್, ಎಲ್. ಭೈರಪ್ಪನವರು “ಭಾರತೀಪುರ” ರಾಮಚಂದ್ರದೇವ
ಅವರ “ದಂಗೆಯ ಪ್ರಕರಣ” ಕಥೆಯ ವಿಸ್ತೃತ ರೂಪ, ಇದನ್ನು ಸಹೃದಯಿ ವಿಮರ್ಶಕರು ಪರಿಶೀಲಿಸಬೇಕು ಎಂದರು. ವಿದೇಶಿ ಕೃತಿಗಳಿಂದ ಮೂರ್ತಿಯವರು ‘ಎರವಲು’ ಪಡೆದಿರುವುದರ
ಉದಾಹರಣೆಯಾಗಿ ಮೂರ್ತಿಯವರ ಕಾದಂಬರಿಗಳ ಆಯ್ದ ಭಾಗಗಳನ್ನೂ, ಅವುಗಳ ತದ್ರೂಪಗಳಂತೆ ಕಾಣುತ್ತಿದ್ದ ವಿದೇಶಿ
ಕೃತಿಗಳ ಭಾಗಗಳನ್ನೂ ಸಭಿಕರಿಗೆ ಓದಿ ಹೇಳಿದರು. ಇದಕ್ಕೆ
ಅನಂತಮೂರ್ತಿಯವರ ಅಭಿಮಾನಿಗಳು ಪ್ರತಿಕ್ರಿಯಿಸಿದ್ದು ಅತ್ಯಂತ ಋಣಾತ್ಮವಾಗಿ. ತಮ್ಮ ಅರಾಧ್ಯದೈವ ಆರಾಧನೆಗೆ ಯೋಗ್ಯವಲ್ಲ ಎಂಬ ವಿವೇಕಯುತ
ತೀರ್ಮಾನಕ್ಕೆ ಬಂದು, ಅದನ್ನು ಪೀಠದಿಂದ ಕೆಳಗಿಳಿಸುವ ಬದಲು, ಅದರ ಮುಖವಾಡವನ್ನು ಕಿತ್ತೊಗೆದ ಭೈರಪ್ಪನವರ
ಮೇಲೆ ದೈಹಿಕ ಹಲ್ಲೆಗೆ ಮೂರ್ತಿಯವರ ಅಭಿಮಾನಿಗಳು ಮುಂದಾದರು. ಜಯಲಲಿತಾರ ಅಭಿಮಾನಿಗಳಿಗೂ ಅನಂತಮೂರ್ತಿಯವರ ಅಭಿಮಾನಿಗಳಿಗೂ
ಯಾವ ವ್ಯತ್ಯಾಸವಿದೆ? ಬಹುಶಃ ಇರಬಹುದಾದ ಒಂದೇಒಂದು
ವ್ಯತ್ಯಾಸವೆಂದರೆ ಜಯಲಲಿತಾರ ಅಭಿಮಾನಿಗಳಲ್ಲಿ ಬಹುತೇಕರು ಅವಿದ್ಯಾವಂತರು, ಮೂರ್ತಿಯವರ ಅಭಿಮಾನಿಗಳಲ್ಲಿ
ಬಹುತೇಕರು ದೇಶವಿದೇಶಗಳ ಸಾಹಿತ್ಯ, ತತ್ವಶಾಸ್ತ್ರಗಳನ್ನು ಆಳವಾಗಿ ಅಭ್ಯಸಿಸಿದ ಸುಶಿಕ್ಷಿತರು.
ಸರಿಸುಮಾರು
ದಶಕದ ನಂತರ ಸುಮತೀಂದ್ರ ನಾಡಿಗರು ತದ್ರೂಪಗಳಂತಿದ್ದ ಮೂರ್ತಿಯವರ “ಮೌನಿ” ಮತ್ತು ಮ್ಯಾಲಮೂಡ್‍ನ “ದ
ಮೌರ್ನರ್” ಕಥೆಗಳ ಆಯ್ದ ಭಾಗಗಳನ್ನು ಅಕ್ಕಪಕ್ಕದಲ್ಲಿಟ್ಟು ಲೇಖನ ಪ್ರಕಟಿಸಿಬಿಟ್ಟರು. ಮೂರ್ತಿಯವರ ಅಭಿಮಾನಿಗಳು ಕಣ್ಣು ಕೆಂಪಗಾಗಿಸಿಕೊಂಡರೇ ವಿನಃ
ತಾವು ಮೂರ್ತಿಯವರ ಯಾವ ಗುಣಗಳಿಂದಾಗಿ ಅವರ ಅಭಿಮಾನಿಗಳಾದೆವೋ ಆ ಗುಣಗಳು ವಾಸ್ತವವಾಗಿ ಮೂರ್ತಿಯವರಲ್ಲಿಲ್ಲ
ಎಂದು ಗುರುತಿಸಲಾರದೇ ಹೋದರು. ಆನಂತರ ನಾಡಿಗರೂ ತಮ್ಮ
ನಿಲುವಿನಿಂದ ಹಿಂದೆ ಸರಿದು ತಾವು ಮಾಡಿದ್ದು ತುಂಟತನವಷ್ಟೇ, ತಾವೂ ಮೂರ್ತಿಯವರೂ ತುಂಬ ಆತ್ಮೀಯರು,
ಮೂರ್ತಿಯವರು ತಮಗೆ “ಅನಂತು” ಹಾಗೂ ಮೂರ್ತಿಯವರಿಗೆ ತಾವು “ಸುಮತಿ” ಎಂದು ತಿಪ್ಪೆ ಸಾರಿಸಿಬಿಟ್ಟರು; ಇದು ಸಂತೋಷವನ್ನುಂಟುಮಾಡಿದ್ದು ಅನಂತಮೂರ್ತಿಯವರ ಅಭಿಮಾನಿಗಳಿಗಷ್ಟೇ,
ಒರಿಜಿನಲ್ ಶುದ್ಧಸಾಹಿತ್ಯವನ್ನು ಬಯಸುವ ಓದುಗರಿಗಲ್ಲ.
ಹೀಗೆ
ನಮ್ಮ ದೇಶದಲ್ಲಿ ಬಣ್ಣ ಹಚ್ಚಿಕೊಂಡು ಅಥವಾ ಕೇವಲ ಬಣ್ಣದ ಮಾತುಗಳನ್ನು ಆಡಿಕೊಂಡು ಯಾರು ಬೇಕಾದರೂ ರಾಜಕೀಯ
ನಾಯಕರಾಗಿ ನಮ್ಮನ್ನು ಆಳಬಹುದು. ಯಾವ ನೀತಿ ನೈತಿಕತೆಯ
ಅವಶ್ಯಕತೆಯೂ ಇಲ್ಲ. ಹಾಗೆಯೇ ಆಯಾ ಕಾಲದದಲ್ಲಿ ಪ್ರಸ್ತುತವೆನಿಸುವ
ಸಿದ್ಧಾಂತಗಳನ್ನು ಚಂದದ ಮಾತುಗಳಲ್ಲಿ ಹೇಳಿಕೊಂಡು ಯಾರು ಬೇಕಾದರೂ ಸಾಂಸ್ಕೃತಿಕ ನಾಯಕರಾಗಿ ಪ್ರಶಸ್ತಿ,
ಸನ್ಮಾನಗಳಿಗೆ ಭಾಜನರಾಗಬಹುದು. ಆಡಿದ್ದನ್ನು ಆಚರಿಸುವ
ಅಗತ್ಯವಿಲ್ಲವೇ ಇಲ್ಲ. ಇದಕ್ಕೆ ಮೂಲವನ್ನೆಲ್ಲಿ ಹುಡುಕಬೇಕು? ನಮ್ಮ ಧಾರ್ಮಿಕ ಚಿಂತನೆಯಲ್ಲೇ? ನಮ್ಮ ಕಪಟ, ಕುಯುಕ್ತಿ, ಮೋಸ, ಲಂಪಟತೆಗಳನ್ನು ನಮ್ಮ ದೇವರುಗಳಿಗೂ
ಆರೋಪಿಸಿ ಆರಾಧಿಸುತ್ತಿರುವುದರಿಂದಲೇ ಅದೇ ಗುಣಗಳುಳ್ಳ
ನಮ್ಮ ನಾಯಕ ನಾಯಕಿಯರೂ ನಮಗೆ ಸಹ್ಯ, ಪ್ರಿಯರಾಗಿದ್ದಾರೆಯೇ? ನಮ್ಮ ದೇವರುಗಳಿಗೆ ತೋರುವ ವಿನಾಯಿತಿಯನ್ನೇ ನಮ್ಮ ನಾಯಕ/ನಾಯಕಿಯರಿಗೂ
ತೋರುತ್ತಿದ್ದೇವೆಯೇ? ಇದರರ್ಥ ನಮ್ಮ ಜನ, ಸುಶಿಕ್ಷಿತರೂ
ಸಹಾ, ಹೊರಗೆ ಧರ್ಮವನ್ನು ಅದೆಷ್ಟೇ ತಿರಸ್ಕರಿಸಿ ಸಮಾಜವಾದಿ, ಸಮತಾವಾದಿ ಹಣೆಪಟ್ಟಿಗಳನ್ನು ಹಚ್ಚಿಕೊಂಡರೂ
ಆಳದಲ್ಲಿ ಧಾರ್ಮಿಕರಾಗಿಯೇ ಇದ್ದಾರೆ. ಅಂದರೆ ಎಲ್ಲಿಯವರೆಗೆ
ನಮ್ಮ ಧಾರ್ಮಿಕ ಆರಾಧ್ಯದೈವಗಳಲ್ಲಿ ಸದ್ಗುಣಗಳನ್ನಷ್ಟೇ ಬಯಸುವ ಉದಾತ್ತ ಚಿಂತನೆಗಳನ್ನು ನಾವು ರೂಢಿಸಿಕೊಳ್ಳುವುದಿಲ್ಲವೋ
ಅಲ್ಲಿಯವರೆಗೆ ಅನೀತಿವಂತ ಭ್ರಷ್ಟ ರಾಜಕೀಯ, ಸಾಹಿತ್ಯಕ ದೇವದೇವಿಯರನ್ನು ಆರಾಧಿಸುವ ದುರ್ಗತಿ ನಮ್ಮದಾಗಿರುತ್ತದೆ.
Food for thought.
ReplyDeleteactually serious food for serious thought!
Thanks.
I did not know about Byrappa Vs Ananthamurthy issue and issue you have raised on the source of his novels..
ReplyDeleteByrappa is a outstanding and excellent Novelist. He is an independent and unique thinker. I felt this way as I read many of his novels... His IQ level is very high...
Ananthamurthy is an average novelists but he took the important contemporary subject in his novels.. If these novel's baseline is borrowed from some others books/novels then its a serious issue.. Gnanapeetha committee should investigate this and if it finds that it is true then the committee should consider taking back the Gnanapeetha Award..
Regards,
Srinivasa S S