(ಬುಧವಾರ, ನವೆಂಬರ್ 12, 2014ರಂದು "ವಿಜಯವಾಣಿ" ದೈನಿಕದ "ಜಗದಗಲ" ಅಂಕಣದಲ್ಲಿ ಪ್ರಕಟವಾದ ಲೇಖನ)
ನನ್ನ ಪ್ರೀತಿಯ ಓದುಗರೇ,
ಕಾರಣಾಂತರಗಳಿಂದ ಕಳೆದವಾರ ನನ್ನ ಲೇಖನ ಕಾಣದೇಹೋದಾಗ ನಿಮ್ಮಲ್ಲಿ ಹಲವರು ಮೆಸೇಜ್
ಮೂಲಕ, ದೂರವಾಣಿ ಕರೆಗಳ ಮೂಲಕ ವ್ಯಕ್ತಪಡಿಸಿದ ಕಾಳಜಿ ನನ್ನನ್ನು ಮೂಕನನ್ನಾಗಿಸಿದೆ. ನಿಮ್ಮ ಪ್ರೀತಿ ಅಭಿಮಾನಕ್ಕಾಗಿ ತುಂಬು ಹೃದಯದ ಕೃತಜ್ಞತೆಗಳು. ಅಣ್ಣಾವ್ರ ಮಾತಿನಲ್ಲಿ ಹೇಳುವುದಾದರೆ ನೀವು ನನ್ನ ಅಭಿಮಾನಿ
ದೇವರುಗಳು. ಇನ್ನೆಂದೂ ನಿಮಗೆ ನಿರಾಶೆಯನ್ನುಂಟು ಮಾಡುವುದಿಲ್ಲ,
ನಿಮ್ಮ ಬುಧವಾರದ ಬೆಳಗು ನನ್ನ ಜತೆ ಎಂದು ಈ ಮೂಲಕ ಮಾತು ಕೊಡುತ್ತಿದ್ದೇನೆ.
ಈ ಬಾರಿ ನಾನೆತ್ತಿಕೊಳ್ಳುತ್ತಿರುವ ವಿಷಯ ಇಪ್ಪತ್ತೈದು ವರ್ಷಗಳ ಹಿಂದೆ ಕುಸಿದುಬಿದ್ದ ಬರ್ಲಿನ್
ಗೋಡೆಯದು. ಅದರ ನೆಪದಲ್ಲಿ ಜಗದಗಲದಿಂದ ಬದುಕಿನಗಲದವರೆಗೆ
ಒಂದಷ್ಟು ಆತ್ಮೀಯವಾಗಿ ನಿಮ್ಮೊಡನೆ ಹರಟುವ ಇರಾದೆ ನನ್ನದು. ಯಾವಾಗಲೂ ಸೀರಿಯಸ್ ಆಗಿರುವುದು ಬೇಡ. ಸ್ವಲ್ಪ ಹಗುರಾಗಿ, ತಮಾಷೆಯಾಗಿ, ನಗುತ್ತಾ ಕಾಲ ಕಳೆಯೋಣ.
ಹಾಗೆ ಮಾಡುತ್ತಲೇ ಈ ಜಗವೆಂಬ ಮಾಯಾಬಜಾರಿನಲ್ಲಿ ನರಗೊಂಬೆಯಾಟದ
ವಾಸ್ತವ ಮುಖಗಳನ್ನೂ ಅವಲೋಕಿಸೋಣ. ಒಂದು ಜೋಕ್‍ನಂಥಾ
ಕಟುವಾಸ್ತವದಿಂದಲೇ ಮಾತನ್ನು ಪ್ರಾರಂಭಿಸೋಣ.
ಮಾಸ್ಕೋದ ಅಪಾರ್ಟ್‍ಮೆಂಟೊಂದರ ಕರೆಗಂಟೆ ಬಾರಿಸುತ್ತದೆ, ಬಾಲಕಿಯೊಬ್ಬಳು ಬಾಗಿಲು ತೆರೆಯುತ್ತಾಳೆ,
ಅಗಂತುಕನೊಬ್ಬ ನಿಂತಿರುತ್ತಾನೆ.
ಅಗಂತುಕ: “ಅಪ್ಪ ಮನೆಯಲ್ಲಿದ್ದಾರೆಯೇ?”
ಬಾಲಕಿ: “ಇಲ್ಲ, ಅಪ್ಪ ಗಗನಯಾತ್ರಿ. ಅಂತರಿಕ್ಷಕ್ಕೆ ಹೋಗಿದ್ದಾರೆ.”
ಅಗಂತುಕ: “ಯಾವಾಗ ಮನೆಗೆ ಹಿಂತಿರುಗುತ್ತಾರೆ?”
ಬಾಲಕಿ: “ನಾಳೆ ಬೆಳಿಗ್ಗೆ ಎಂಟುಗಂಟೆಗೆ.”
ಅಗಂತುಕ: “ಅಮ್ಮ?”
ಬಾಲಕಿ: “ಅಮ್ಮ ರೊಟ್ಟಿ ತರಲು ಬೇಕರಿಗೆ ಹೋಗಿದ್ದಾರೆ.”
ಅಗಂತುಕ: “ಯಾವಾಗ ಹಿಂತಿರುಗುತ್ತಾರೆ?”
ಬಾಲಕಿ: “ಗೊತ್ತಿಲ್ಲ.”
ಅಂತರಿಕ್ಷ ವಿಜ್ಞಾನ, ಸಮರತಂತ್ರಜ್ಞಾನ, ಪರಮಾನಸಶಾಸ್ತ್ರ ಮುಂತಾದ ಹಲವು ಕ್ಷೇತ್ರಗಳಲ್ಲಿ ಅಮೆರಿಕಾವನ್ನು
ಮೀರಿಸಿ ಅದ್ಭುತ ಪ್ರಗತಿ ಸಾಧಿಸಿದ್ದ ಕಮ್ಯೂನಿಸ್ಟ್ ದೈತ್ಯ ಸೋವಿಯೆತ್ ಯೂನಿಯನ್ ತನ್ನ ಜನರಿಗೆ ಹೊಟ್ಟೆತುಂಬ
ಊಟ ಹಾಕುವುದರಲ್ಲಿ ದಾರುಣವಾಗಿ ಸೋತಿತ್ತು. ಅಲ್ಲಿ
ಅಂತರಿಕ್ಷಕ್ಕೆ ಹೋದ ಗಗನಯಾತ್ರಿ ಯಾವಾಗ ಮನೆಗೆ ಹಿಂತಿರುಗುತ್ತಾನೆಂದು ನಿಖರವಾಗಿ ಹೇಳಬಹುದಾಗಿತ್ತು. ಆದರೆ ಹಸಿವು ತಣಿಸುವ ರೊಟ್ಟಿ ತರಲು ಬೇಕರಿಗೆ ಹೋದ ವ್ಯಕ್ತಿ
ಯಾವಾಗ ಹಿಂತಿರುಗಬಹುದು, ಹಿಂತಿರುಗುವಾಗ ಕೈಯಲ್ಲಿ ರೊಟ್ಟಿ ಇರುತ್ತದೆಯೇ, ಅಥವಾ ಬರಿಗೈಯೇ ಎಂದು ಹೇಳಲು
ಶಕ್ಯವಿರಲಿಲ್ಲ. ಹೀಗಾದದ್ದು ಯಾಕೆ ಮತ್ತು ಹೇಗೆ?
ಸ್ಟಾಲಿನ್ ನೇತೃತ್ವದ ಕಮ್ಯೂನಿಸ್ಟ್ ಪಕ್ಷ
ಎರಡನೆಯ ಮಹಾಯುದ್ಧದಿಂದ ಜರ್ಝರಿತಗೊಂಡಿದ್ದ ರಶಿಯನ್ನರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವ ಗುರುತರ
ಜವಾಬ್ದಾರಿಯನ್ನು ನಿರ್ಲಕ್ಷಿಸಿ ಇತರ ದೇಶಗಳಲ್ಲಿ ಕಮ್ಯೂನಿಸ್ಟ್ ಸರಕಾರಗಳನ್ನು ಸ್ಥಾಪಿಸಹೊರಟಿದ್ದೇ
ಎಲ್ಲ ಅನಾಹುತಗಳಿಗೂ ಮೂಲವಾಯಿತು. ಸ್ಟ್ಯಾಲಿನ್‍ನ
ಈ ನೀತಿ ನನಗೆ ಅತೀವ ಅಚ್ಚರಿಯನ್ನುಂಟುಮಾಡುತ್ತದೆ.
1924ರಲ್ಲಿ ಲೆನಿನ್‍ನ ಮರಣಾನಂತರ ಅಧಿಕಾರಕ್ಕಾಗಿ ಹಣಾಹಣಿ ಶುರುವಾದದ್ದು ಲಿಯಾನ್ ಟ್ರಾಟ್ಸ್‌ಕಿ
ಮತ್ತು ಜೋಸೆಫ್ ಸ್ಟ್ಯಾಲಿನ್ ಮಧ್ಯೆ. ಎಲ್ಲ ದೇಶಗಳಲ್ಲೂ
ಎಕಕಾಲದಲ್ಲಿ ಕಮ್ಯೂನಿಸ್ಟ್ ಕ್ರಾಂತಿಗಳನ್ನು ಆಯೋಜಿಸಬೇಕೆಂದು ಟ್ರಾಟ್ಸ್‌ಕಿ ವಾದಿಸಿದರೆ ಸ್ಟ್ಯಾಲಿನ್
ಹೇಳಿದ್ದು ಕಮ್ಯೂನಿಸಮ್ಮನ್ನು ಮೊದಲು ಸೋವಿಯತ್ ರಶಿಯಾದಲ್ಲಿ ಭದ್ರವಾಗಿ ಬೇರೂರಿಸೋಣ, ಅನಂತರ ಇತತ
ದೇಶಗಳ ಉಸಾಬರಿ. ಅಂತಿಮವಾಗಿ ಸ್ಟ್ಯಾಲಿನ್‍ನ ಮಾತಿಗೆ
ಬೆಂಬಲ ದೊರೆತು ಆತ ಸೋವಿಯೆತ್ ನಾಯಕನಾದ. ಟ್ರಾಟ್ಸ್‌ಕಿ
ದೇಶವನ್ನೇ ತೊರೆದು ಓಡಿಹೋದ (ಅದು ಬೇರೆಯೇ ಕಥೆ).
ಆ ದಿನಗಳಲ್ಲಿ ರಶಿಯನ್ನರ ಸ್ಥಿತಿ ದಾರುಣ. ಪ್ರಥಮ ಮಹಾಯುದ್ಧ, ಕಮ್ಯೂನಿಸ್ಟ್ ಕ್ರಾಂತಿ, ನಾಲ್ಕು ವರ್ಷಗಳ
ಅಂತರ್ಯುದ್ಧ ಎಲ್ಲದರಿಂದ ಜನರಿಗೆ ಶಾಂತಿಯಿರಲಿ ಹೊಟ್ಟೆಗೆ ಊಟವೂ ಸಿಗದಂಥ ಪರಿಸ್ಥಿತಿ. ಕಾಕಸಸ್ ಪ್ರದೇಶದಲ್ಲಿ ಹಸಿವಿನಿಂದ ಕಂಗೆಟ್ಟ ಜನರು ನರಮಾಂಸವನ್ನೂ
ತಿಂದ ವರದಿಗಳು ಬರುತ್ತಿದ್ದವು. ಇದೆಲ್ಲವನ್ನೂ ಸರಿಪಡಿಸಲು
ಸ್ಟ್ಯಾಲಿನ್ ರೂಪಿಸಿದ ದಶವಾರ್ಷಿಕ ಆರ್ಥಿಕ ಅಭ್ಯುದಯ ಯೋಜನೆಗಳು ತಕ್ಷಣ ಫಲ ನೀಡಿ ಸೋವಿಯೆತ್ ಅರ್ಥವ್ಯವಸ್ಥೆಯನ್ನು
ವಿಶ್ವರಂಗದಲ್ಲಿ ಮುಂಚೂಣಿಗೆ ತಂದವು. ಮೂವತ್ತರ ದಶಕದಲ್ಲಿ
ಅಮೆರಿಕಾ ಆರ್ಥಿಕ ಮುಗ್ಗಟ್ಟಿನಿಂದ ಸೋತು ಸುಣ್ಣವಾಗಿ ಬಿದ್ದುಹೋದರೆ ರಶಿಯಾ ಸುಭಿಕ್ಷವಾಗಿ ಮುಂದುವರೆಯುತ್ತಿತ್ತು. ಅದೆಲ್ಲವನ್ನೂ ಹಾಳುಗೆಡವಿದ್ದು ಎರಡನೆಯ ಮಹಾಯುದ್ಧ. ಯುದ್ಧದಲ್ಲಿ ಅತ್ಯಂತ ಹೆಚ್ಚು ಹಾನಿಗೊಳಗಾದದ್ದು ರಶಿಯಾ.
ಸುಮಾರು ಸಾವಿರದೈನೂರು ರಶಿಯನ್ ಪಟ್ಟಣ ನಗರಗಳನ್ನು
ಜರ್ಮನ್ ಸೇನೆ ಧ್ವಂಸಗೊಳಿಸಿತ್ತು. ಎರಡು ಸಾವಿರಕ್ಕೂ
ಅಧಿಕ ಸೋವಿಯೆತ್ ಕೈಗಾರಿಕೆಗಳನ್ನು ಜರ್ಮನ್ನರು ಬಿಡಿಬಿಡಿಯಾಗಿ ಬೇರ್ಪಡಿಸಿ ಜರ್ಮನಿಗೆ ಕೊಂಡೊಯ್ದು
ಅಲ್ಲಿ ಸ್ಥಾಪಿಸಿಕೊಂಡಿದ್ದರು. ಯುದ್ಧದಲ್ಲಿ ಮಡಿದ
ಸೋವಿಯೆತ್ ನಾಗರಿಕರ, ಸೈನಿಕರ ಒಟ್ಟು ಸಂಖ್ಯೆ ಎರಡು ಕೋಟಿಯನ್ನು ದಾಟುತ್ತದೆ. ಆ ಲೆಕ್ಕದಲ್ಲಿ ಸೋವಿಯೆತ್ ರಶಿಯಾ ಅನುಭವಿಸಿದ ಹಾನಿ ಸೋತ
ಜರ್ಮನಿಗಿಂತಲೂ ಹಲವು ಪಟ್ಟು ಅಧಿಕ. ಇಂಥ ಪರಿಸ್ಥಿತಿಯಲ್ಲಿ
ಸೋವಿಯೆತ್ ಅರ್ಥವ್ಯವಸ್ಥೆಯನ್ನು ಮತ್ತೆ ಸರಿದಾರಿಗೆ ತರುವುದು ಸ್ಟ್ಯಾಲಿನ್‍ನ ಆಧ್ಯ ಕರ್ತವ್ಯವಾಗಿತ್ತು. ಆದರೆ ಆತ ಹದಿನೈದು ವರ್ಷಗಳ ಹಿಂದೆ ತೋರಿದ್ದ ವಿವೇಕವನ್ನು
ಕಳೆದುಕೊಂಡು ಪೂರ್ವ ಯೂರೋಪಿನ ದೇಶಗಳಲ್ಲಿ ಕಮ್ಯೂನಿಸಂ ಹರಡುವ ಭಾರಿ ಯೋಜನೆ ರೂಪಿಸಿದ. ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಡುತ್ತದಂತೆ,
ಸ್ಟ್ಯಾಲಿನ್‍ನ ಕಾರ್ಯಕ್ರಮಗಳಿಗೆ ತೀವ್ರ
ಪ್ರತಿರೋಧ ಒಡ್ಡಿದ ಅಮೆರಿಕಾದ ಕ್ರಮದಿಂದಾಗಿ ಶೀತಲ ಸಮರ ಆರಂಭವಾಯಿತು. ಇದು ಪ್ರತ್ಯಕ್ಷವಾಗಿ ಕಾಣಿಸಿಕೊಂಡದ್ದು ಜರ್ಮನಿಯಲ್ಲಿ. ಸೋತ ಜರ್ಮನಿಯನ್ನು ಅಮೆರಿಕಾ, ಬ್ರಿಟನ್, ಫ್ರಾನ್ಸ್ ಮತ್ತು
ರಶಿಯಾಗಳು ನಾಲ್ಕು ಭಾಗಗಳಾಗಿ ವಿಂಗಡಿಸಿಕೊಂಡು ತಂತಮ್ಮ ಭಾಗಗಳಲ್ಲಿ ಆಡಳಿತ ನಡೆಸುತ್ತಿದ್ದವು. ಹಾಗೆಯೇ ಜರ್ಮನ್ ರಾಜಧಾನಿ ಬರ್ಲಿನ್ ಸಹಾ ನಾಲ್ಕು ಭಾಗಗಳಾಗಿ
ವಿಭಜನೆಗೊಂಡಿತ್ತು. ಜರ್ಮನಿಯನ್ನು ಕಮ್ಯೂನಿಸ್ಟ್
ವ್ಯವಸ್ಥೆಯಲ್ಲಿ ಒಗ್ಗೂಡಿಸುವುದು ಸೋವಿಯೆತ್ ಆಶಯವಾಗಿದ್ದರೆ ಪ್ರಜಾಪ್ರಭುತ್ವೀಯ ವ್ಯವಸ್ಥೆಯಲ್ಲಿ
ಒಗ್ಗೂಡಿಸುವುದು ಅಮೆರಿಕಾ, ಬ್ರಿಟನ್ ಮತ್ತು ಫ್ರಾನ್ಸ್‌ಗಳ ನಿಲುವಾಗಿತ್ತು. ಈ ಭಿನ್ನಾಭಿಪ್ರಾಯದಿಂದಾಗಿ ಜರ್ಮನ್ ಏಕೀಕರಣ ಮರೀಚಿಕೆಯಾಗಿತ್ತು. 1946-47ರಲ್ಲಿ ಅಮೆರಿಕಾ, ಬ್ರಿಟನ್ ಮತ್ತು ಫ್ರಾನ್ಸ್‌ಗಳು
ಪಶ್ಚಿಮ ಜರ್ಮನಿಯ ಮತ್ತು ಪಶ್ಚಿಮ ಬರ್ಲಿನ್‍ನ ತಮ್ಮ ಮೂರೂ ಪ್ರದೇಶಗಳನ್ನು ಒಗ್ಗೂಡಿಸಿ ಪ್ರಜಾಪ್ರಭುತ್ವ
ವ್ಯವಸ್ಥೆಯ ನಿರ್ಮಾಣಕ್ಕೆ ಹಂತಹಂತವಾಗಿ ತೊಡಗಿಕೊಂಡವು.
ಇದರಿಂದ ಕುಪಿತಗೊಂಡ ರಶಿಯಾ ತನ್ನ ವಶದಲ್ಲಿದ್ದ ಪೂರ್ವ ಜರ್ಮನಿ ಮತ್ತು ಪೂರ್ವ ಬರ್ಲಿನ್‍ಗೆ
ಪ್ರಜಾಪ್ರಭುತ್ವದ ಗಾಳಿ ತಟ್ಟದಂತೆ ಉಗ್ರ ಕ್ರಮಗಳನ್ನು ಕೈಗೊಂಡಿತು. ಅದರ ಮೊದಲ ಹಂತ ಪೂರ್ವ ಜರ್ಮನಿಯ ರಶಿಯನ್ ಆಡಳಿತ ಪ್ರದೇಶದಿಂದ
ಸುತ್ತುವರೆದಿದ್ದ ಪಶ್ಮಿಮ ಬರ್ಲಿನ್ ಅನ್ನು ದಿಗ್ಬಂಧನಕ್ಕೊಳಪಡಿಸುವುದಾಗಿತ್ತು. ಅದು ಆರಂಭವಾಡದ್ದು ಏಪ್ರಿಲ್ 1, 1948ರಂದು. ಇದರಿಂದಾಗಿ ಪಶ್ಚಿಮ ಬರ್ಲಿನ್‍ನಲ್ಲಿ ಆಹಾರ ಮತ್ತು ಇಂಧನದ
ಕೊರತೆಯಾಗಿ ಹಾಹಾಕಾರವೆದ್ದಿತು.
ಆಗ ಅಮೆರಿಕಾಗಿದ್ದ ಮಾರ್ಗ ಸೋವಿಯೆತ್ ದಿಗ್ಬಂಧನವನ್ನು
ಧಿಕ್ಕರಿಸಿ ರಸ್ತೆ ಮತ್ತು ರೈಲು ಮಾರ್ಗಗಳ ಮೂಲಕ ಪಶ್ಚಿಮ ಬರ್ಲಿನ್‍ಗೆ ಅಗತ್ಯವಸ್ತುಗಳನ್ನು ಸಾಗಿಸುವುದು. ಆ ಕ್ರಮ ಮೂರನೆಯ ಮಹಾಯುದ್ಧಕ್ಕೆ ನಾಂದಿಯಾಗಬಹುದೆಂಬ ಆತಂಕ
ಅಲ್ಲಲ್ಲಿ ಹೊಗೆಯಾಡಿತು. ಕೊನೆಗೆ ಅಮೆರಿಕಾ ಆಯ್ದುಕೊಂಡದ್ದು
ವಾಯುಮಾರ್ಗ. 1945ರಲ್ಲೇ ಆಗಿದ್ದ ಒಪ್ಪಂದವೊಂದರ ಪ್ರಕಾರ
ಪಶ್ಚಿಮ ಜರ್ಮನಿಯ ಹ್ಯಾಂಬರ್ಗ್, ಫ್ರಾಂಕ್‍ಫರ್ಟ್ ಮತ್ತು ಸ್ಟುಟ್‍ಗರ್ಟ್ ನಗರಗಳ ಮೂಲಕ ಪಶ್ಚಿಮ ಬರ್ಲಿನ್‍ಗೆ
ಅನಿಯಂತ್ರಿಕ ವಿಮಾನಯಾನಕ್ಕೆ ಮಾಸ್ಕೋ ತಡೆಯೊಡ್ಡುವಂತಿರಲಿಲ್ಲ. ಇದನ್ನು ಉಪಯೋಗಿಸಿಕೊಂಡ ಅಮೆರಿಕಾ ಆ ಮೂರು ವಾಯುಮಾರ್ಗಗಳ
ಮೂಲಕ ಅಗತ್ಯವಸ್ತುಗಳನ್ನು ಪಶ್ಚಿಮ ಬರ್ಲಿನ್‍ಗೆ ಸಾಗಿಸತೊಡಗಿತು. ವಿಶ್ವಇತಿಹಾಸದಲ್ಲಿ ಇದೊಂದು ಅಭೂತಪೂರ್ವ ಪ್ರಕರಣ. ಪ್ರತಿದಿನವೂ ಸುಮಾರು 4500 ಟನ್ ಆಹಾರ ಮತ್ತು ಇಂಧನವನ್ನು
ಪಶ್ಚಿಮ ಬರ್ಲಿನ್‍ಗೆ ವಾಯುಮಾರ್ಗದ ಮೂಲಕ ಸಾಗಿಸಲಾಗುತ್ತಿತ್ತು. 1948-49ರ ಚಳಿಗಾಲದಲ್ಲಿ ಅದು ದಿನಕ್ಕೆ 5000 ಟನ್ ದಾಟಿತು. ಏಪ್ರಿಲ್ 1949ರ ಒಂದು ದಿನ ಮಿತ್ರರಾಷ್ಟ್ರಗಳ 1398 ವಿಮಾನಗಳು
12491 ಟನ್ ಸಾಮಗ್ರಿಗಳನ್ನು ಪಶ್ಚಿಮ ಬರ್ಲಿನ್‍ಗೆ ಸಾಗಿಸಿದವು! ಪ್ರತಿ 61.8 ಸೆಕೆಂಡ್‍ಗೊಮ್ಮೆ ಅಮೆರಿಕನ್ ವಿಮಾನಗಳು ಪಶ್ಚಿಮ
ಬರ್ಲಿನ್‍ನಲ್ಲಿಳಿಯುತ್ತಿದ್ದವು.
ಇಂಥ ದುರ್ಭರ ಸನ್ನಿವೇಶದಲ್ಲೂ ಹಲವು ತಮಾಷೆಯ
ಪ್ರಸಂಗಗಳು ನಡೆದವು. ಅವುಗಳಲ್ಲೊಂದು ಹೀಗಿದೆ: ಪಶ್ಚಿಮ
ಬರ್ಲಿನ್‍ನಲ್ಲಿದ್ದ ಅಮೆರಿಕನ್ ಸೇನಾಧಿಕಾರಿ ಬ್ರಿಗೇಡಿಯರ್ ಜನರಲ್ ಫ್ರಾಂಕ್ ಹೌಲಿ ಪೂರ್ವ ಬರ್ಲಿನ್‍ನಲ್ಲಿದ್ದ
ರಶಿಯನ್ ಸೇನಾಧಿಕಾರಿ ಜನರಲ್ ಕೋತಿಕೋವ್ (ಎಷ್ಟು ಚಂದದ ಹೆಸರು!) ಅವರನ್ನು ಮಾತುಕತೆಗೆ ಆಹ್ವಾನಿಸಬೇಕಾಯಿತು. ಆಗ ಊಟಕ್ಕೆ ಕೋಳಿಮಾಂಸವನ್ನು ಬಡಿಸಲಾಯಿತು. “ಕೋಳಿಮಾಂಸ ತುಂಬ ಗಟ್ಟಿಯಾಗಿದೆ” ಎಂದು ಕೋತಿಕೋವ್ ಅಕ್ಷೇಪವೆತ್ತಿದರು. ಹೌಲಿ ತಣ್ಣಗೆ ಉತ್ತರಿಸಿದರು: “ಕೋಳಿ ಗಟ್ಟಿಯಾಗಿರಲೇಬೇಕು,
ವಿಧಿಯಿಲ್ಲ. ಅದು ಫ್ರಾಂಕ್‍ಫರ್ಟ್‍ನಿಂದ ಇಷ್ಟು ದೂರದವರೆಗೆ
ಹಾರಿಬರಬೇಕಾಗಿತ್ತಲ್ಲ?”
ಅಂತೂ ಪಶ್ಚಿಮ ಬರ್ಲಿನ್ ಅನ್ನು ನುಂಗಿ ನೊಣೆಯುವ
ತಮ್ಮ ಯೋಜನೆ ವಿಫಲವಾದಾಗ ರಶಿಯನ್ನರು ಮೇ 12, 1949ರಂದು ದಿಗ್ಬಂಧನವನ್ನು ತೆಗೆದುಹಾಕಿದರು. ಅವರಿಗೆ ಬೇರೆ ಮಾರ್ಗವೇ ಇರಲಿಲ್ಲ. ಅನಂತರ ಪೂರ್ವ ಜರ್ಮನಿಯ ರಶಿಯನ್ ಆಡಳಿತದಿಂದ, ಆರ್ಥಿಕ ಸಂಕಷ್ಟದಿಂದ
ತಪ್ಪಿಸಿಕೊಳ್ಳಲು ಅನೇಕ ಪೂರ್ವ ಜರ್ಮನ್ನರು ಪಶ್ಚಿಮ ಬರ್ಲಿನ್‍ಗೆ ನುಸುಳತೊಡಗಿದರು. ಅಲ್ಲಿಂದ ವಿಮಾನದ ಮೂಲಕ ಪಶ್ಚಿಮ ಜರ್ಮನಿಗೆ, ಸ್ವತಂತ್ರ
ಬದುಕಿಗೆ. ಇದನ್ನು ತಡೆಗಟ್ಟಲು 1961ರಲ್ಲಿ ರಶಿಯನ್ನರು
ಎರಡೂ ಬರ್ಲಿನ್‍ಗಳ ನಡುವೆ ಬಲವಾದ ಗೋಡೆಯನ್ನೆಬ್ಬಿಸಿದರು.
ಇದೇ ಕುಖ್ಯಾತ ಬರ್ಲಿನ್ ಗೋಡೆ. 24x7 ಸಶಸ್ತ್ರ
ಕಾವಲಿನಲ್ಲಿದ್ದ ಈ ಗೋಡೆಯನ್ನು ದಾಟುವುದು ಯಮಸಾಹಸವೇ ಸರಿ. ಆದರೂ ಪ್ರಯತ್ನಿಸಿ ಗುಂಡಿಗೆ ಬಲಿಯಾದವರು ನೂರಾರು ಜನ.
ಮುಂದಿನ ಇಪ್ಪತ್ತೆಂಟು ವರ್ಷಗಳವರೆಗೆ ಈ ಬರ್ಲಿನ್
ಗೋಡೆ ಎರಡು ಬರ್ಲಿನ್‍ಗಳನ್ನು, ಎರಡು ಜರ್ಮನಿಗಳನ್ನು, ಪೂರ್ವ ಮತ್ತು ಪಶ್ಚಿಮ ಯೂರೋಪ್‍ಗಳನ್ನು ಅಂತಿಮವಾಗಿ
ಜಗತ್ತನ್ನು ವಿಭಜಿಸುವ ಸಂಕೇತವಾಗಿ ನಿಂತಿತು. ಕೊನೆಗೆ
ಎಲ್ಲದಕ್ಕೂ ಅಂತ್ಯ ಹಾಡಿದ್ದು ಸೋವಿಯೆತ್ ನೇತಾರ ಮಿಖಾಯಿಲ್ ಗೋರ್ಬಚೆವ್.
1985ರ ಫೆಬ್ರವರಿಯಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ
ಶೀತಲ ಸಮರವನ್ನು ಕೊನೆಗಾಣಿಸಲು, ವಿಶ್ವಶಾಂತಿಯನ್ನು ಸ್ಥಾಪಿಸಲು ಪಣತೊಟ್ಟ ಗೋರ್ಬಚೆವ್ 1989ರ ಒಂದು
ನಿರ್ಣಾಯಕ ಘಳಿಗೆ ಹಿಂದಿನ ಸೋವಿಯೆತ್ ನೀತಿಯನ್ನು ಗಾಳಿಗೆ ತೂರಿ, ಪೂರ್ವ ಜರ್ಮನಿ ಮತ್ತು ಪಶ್ಚಿಮ
ಜರ್ಮನಿ ಪ್ರಜಾಪ್ರಭುತ್ವ ವಿಧಾನದಲ್ಲೇ ಒಂದಾಗುವುದಾದರೆ ತಮ್ಮ ಯಾವುದೇ ಅಭ್ಯಂತರವಿಲ್ಲ ಎಂದು ಘೋಷಿಸಿ
ಹೊಸ ಇತಿಹಾಸಕ್ಕೆ ನಾಂದಿ ಹಾಡಿದರು. ಪರಿಣಾಮ- ಮತ್ತೆ
ಏಕೀಕರಣವಾಗುತ್ತೇವೆಂದು ಸಂತೋಷದಿಂದ ಹುಚ್ಚೆದ್ದ ಬರ್ಲಿನರು ಹಾರೆ, ಪಿಕಾಸಿ- ಸಿಕ್ಕಿದ್ದನ್ನು ಕೈಗೆತ್ತಿಕೊಂಡು
ಬರ್ಲಿನ್ ಗೋಡೆಯನ್ನು ಸಿಕ್ಕಸಿಕ್ಕಲ್ಲಿ ಒಡೆದು ಕೆಡವಿದರು. ಇದು ಆರಂಭವಾದದ್ದು ನವೆಂಬರ್ 9, 1989ರ ಸಂಜೆ. ಕಳೆದ ಭಾನುವಾರ ಈ ಐತಿಹಾಸಿಕ ಘಟನೆಯ ಇಪ್ಪತ್ತೈದನೆಯ ವಾರ್ಷಿಕೋತ್ಸವ.
ಇಪ್ಪತ್ತೈದು ವರ್ಷಗಳ ಹಿಂದೆ ನಾನು ದೆಹಲಿಯಲ್ಲಿ ವಿದ್ಯಾರ್ಥಿ. ಬರ್ಲಿನ್ ಗೋಡೆ ಉರುಳುತ್ತಿದ್ದಾಗ ನಾನು ವಾಯುಮಾರ್ಗದ ಮೂಲಕ
ಮದ್ರಾಸಿಗೆ ಹೊರಟಿದ್ದೆ. ನವೆಂಬರ್‌ನ ತಂಪು ಸಂಜೆ
ಏಳೂವರೆಗೆ ದೆಹಲಿಯಿಂದ ಮದ್ರಾಸಿಗೆ ಹೋಗಬೇಕಾಗಿದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನ ತಾಂತ್ರಿಕ ಕಾರಣಗಳಿಂದ
ಮರುದಿನ ಬೆಳಿಗ್ಗೆ ಐದೂವರೆಗೆ ಹೊರಡುತ್ತದೆಂದು ಘೋಷಣೆಯಾದಾಗ ನಿರಾಶೆಯೇ ಆಯಿತು. ಏರ್‌ಲೈನ್ಸ್‌ನ ಅಧಿಕಾರಿಗಳು ಪಂಚತಾರಾ ಹೋಟೆಲೊಂದರಿಂದ ನಮಗೆಲ್ಲಾ
ಭರ್ಜರಿ ಊಟ ತರಿಸಿಕೊಟ್ಟದ್ದು, ಅದರಲ್ಲಿ ನನಗಿಷ್ಟವಾದ
ಚಿಕನ್ ಬಿರಿಯಾನಿ ಪುಷ್ಕಳವಾಗಿದ್ದದ್ದು ನಿರಾಶೆಯನ್ನು ತಕ್ಕಮಟ್ಟಿಗೆ ತಗ್ಗಿಸಿತು, ಅಂತೂ ಬೆಳಿಗ್ಗೆ ಐದೂವರೆಗೆ ವಿಮಾನ ದುಡುದುಡು
ಓಡುತ್ತಾ ಥೇಟ್ ನಾನು ಬಾಲ್ಯದ ಕನಸುಗಳಲ್ಲಿ ಓಡುತ್ತಾ ಸುಂಯ್ಯನೆ ಮೇಲೆ ಹಾರುತ್ತಿದ್ದಂತೇ ಗಗನಕ್ಕೇರಿತು. ನೆಮ್ಮದಿಯ ಉಸಿರ್ಗರೆದು ಗಗನಸಖಿಯಿಂದ ನನ್ನ ಬೆಳಗಿನ ಸಖಿ
ಇಂಡಿಯನ್ ಎಕ್ಸ್‌ಪ್ರೆಸ್ ಪಡೆದು ನೋಡಿದರೆ ಮುಖಪುಟದಲ್ಲಿ ಬ್ಯಾನರ್ ಹೆಡ್‍ಲೈನ್: “Berlin Wall
Pulled Down!” ಸರಿಸುಮಾರು ಮೂರು ದಶಕಗಳಿಂದ ಪೂರ್ವ
ಪಶ್ಚಿಮಗಳನ್ನು ವಿಭಾಗಿಸಿ ಅಟ್ಟಹಾಸಗೈಯುತ್ತಿದ್ದ ಆ ಗೋಡೆಯನ್ನು ಜರ್ಮನ್ನರು ಒದ್ದು ಉರುಳಿಸಿದ ಐತಿಹಾಸಿಕ
ಘಟನೆಯ ವಿವರಗಳನ್ನು ಕುತೂಹಲದಿಂದ ಓದಿದೆ. ಪಕ್ಕದಲ್ಲಿದ್ದಾಕೆಯ
ಜತೆ ಉತ್ಸಾಹದ ಚರ್ಚೆ ಶುರುಹಚ್ಚಿಕೊಂಡೆ. “ಇನ್ನೊಂದು
ವರ್ಷದೊಳಗೆ ಎರಡೂ ಜರ್ಮನಿಗಳು ಒಂದಾಗುತ್ತವೆ” ಎಂದು ನಾನು ಘೋಷಿಸುವಷ್ಟರಲ್ಲಿ ವಿಮಾನ ಮೀನಂಬಾಕ್ಕಂನಲ್ಲಿ
ಇಳಿಯತೊಡಗಿತ್ತು. ನಂತರ ನಡೆದದ್ದು ಇತಿಹಾಸ. ಒಂದು ವರ್ಷದೊಳಗೆ ಜರ್ಮನಿ ಒಂದಾಯಿತು. ನಾಲ್ಕು ವರ್ಷಗಳೊಳಗೆ ನಾವೂ ಮೈಸೂರಿನ ಬನ್ನಿಮಂಟಪದ “ಪಾರ್ವತಿ
ಕಲ್ಯಾಣಮಂಟಪ”ದಲ್ಲಿ ಗುರುಹಿರಿಯರ ಸಮಕ್ಷಮದಲ್ಲಿ ಶಾಸ್ತ್ರೋಕ್ತವಾಗಿ ಒಂದಾದೆವು.
No comments:
Post a Comment