ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Thursday, September 11, 2014

ಟೋಕಿಯೋದಲ್ಲಿ ಮುಗ್ಗರಿಸಿದ ಮೋದಿ ಮ್ಯಾಜಿಕ್
  ತಮ್ಮ ಇತ್ತೀಚೆಗಿನ ಜಪಾನ್ ಭೇಟಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಡಿದ ಕೆಲವು ಮಾತುಗಳು, ಆ ಭೇಟಿಗೆ ಮೊದಲು ಮತ್ತು ನಂತರ ನವದೆಹಲಿಯಿಂದ ಹೊರಟ ಕೆಲವು ಹೇಳಿಕೆಗಳು ನೆರೆಯ ಚೀನಾ ಬಗ್ಗೆ ಪ್ರಸಕ್ತ ಕೇಂದ್ರ ಸರಕಾರಕ್ಕೆ ಸ್ಪಷ್ಟ ನಿಲುವಿಲ್ಲದಿರುವ ಚಿತ್ರಣ ನೀಡುತ್ತವೆ.  ಆಗಸ್ಟ್ 29ರಂದು ವಿದೇಶ ಮಂತ್ರಿ ಸುಷ್ಮಾ ಸ್ವರಾಜ್ ಚೀನೀ ವಿದೇಶ ಮಂತ್ರಿ ವ್ಯಾಂಗ್ ಯಿ ಜತೆ ದೂರವಾಣಿಯಲ್ಲಿ ಮಾತಾಡಿ ಅಧ್ಯಕ್ಷ ಝೀ ಜಿನ್‍ಪಿಂಗ್ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ನೀಡಲಿರುವ ಭೇಟಿ ಅತ್ಯಂತ ಫಲಪ್ರದವಾಗುವಂತೆ ಮಾಡಲು ಅಗತ್ಯವಾದ ತಯಾರಿಗಳಲ್ಲಿ ಭಾರತ ತೊಡಗಿದೆ ಎಂದು ಆಶ್ವಾಸನೆ ನೀಡಿದರು.  ಮುಂದುವರೆದು ಅವರು ಅಧ್ಯಕ್ಷ ಝಿ ಅವರ ಭಾರತಪ್ರವಾಸಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅತ್ಯಂತ ಹೆಚ್ಚಿನ ಮಹತ್ವ ನೀಡುತ್ತಿರುವುದಾಗಿಯೂ, ಅವರು ಅಧ್ಯಕ್ಷರ ಜತೆಗೆ ಫಲಪ್ರದ ಮಾತುಕತೆಗಳನ್ನು ಎದುರು ಡುತ್ತಿರುವುದಾಗಿಯೂ ತಿಳಿಸಿದರು.  ಈ ಮಾತುಗಳ, ಆಶ್ವಾಸನೆಗಳ ಹಿಂದಿದ್ದದ್ದು ಮರುದಿನವಷ್ಟೇ ಆರಂಭವಾಗಲಿದ್ದ ಮೋದಿಯವರ ಜಪಾನ್ ಭೇಟಿ ಚೀನಾದಲ್ಲಿ ಉಂಟುಮಾಡಿದ್ದ ಊಹಾಪೋಹಗಳನ್ನು, ಅನುಮಾನಗಳನ್ನು ನಿವಾರಿಸುವ ಉದ್ದೇಶವನ್ನು ಹೊಂದಿತ್ತೆನ್ನುವುದು ಮೇಲ್ನೋಟಕ್ಕೇ ಎದ್ದುಕಾಣುವ ಅಂಶ.  ಅದರಲ್ಲೂ, ಚೀನಾಗೆ ಹಿತವೆನಿಸುವ ಈ ಮಾತುಗಳನ್ನು ಸುಷ್ಮಾ ಸ್ವರಾಜ್ ಆಡಿದ್ದು  ರಶಿಯಾ-ಇಂಡಿಯಾ-ಚೀನಾ ತ್ರಿಪಕ್ಷೀಯ ಮಾತುಕತೆಗಳಿಗಾಗಿ ಚೀನಾದ ತಿಯಾನ್‍ಜಿನ್ ನಗರಕ್ಕೆ ತಾವು ನೀಡಬೇಕಾಗಿದ್ದ ಬೇಟಿಯನ್ನು ರದ್ದುಪಡಿಸಿದ ಕೆಲವೇ ದಿನಗಳಲ್ಲಿ.  ಈ ನಿಟ್ಟಿನಲ್ಲಿ, ಶ್ರೀಮತಿ ಸ್ವರಾಜ್ ಚೀನೀ ವಿದೇಶ ಮಂತ್ರಿಯವರ ಜತೆ ನಡೆಸಿದ ದೂರವಾಣಿ ಮಾತುಕತೆಯನ್ನು ತಪ್ಪನ್ನು ಸರಿಪಡಿಸುವ ಹೆಜ್ಜೆಯಂತೆ ಬೀಜಿಂಗ್ ಭಾವಿಸಿದರೆ ಅದು ಅಸಹಜವೇನೂ ಅಲ್ಲ. 


          ನಂತರದ ಮೋದಿಯವರ ಜಪಾನ್ ಭೇಟಿ ಹಲವು ವಿಷಯಗಳಲ್ಲಿ ಮಹತ್ವಪೂರ್ಣ.   “ಭಾರತದಲ್ಲಿ ನಿಮಗೆ  ಕಾದಿರುವುದು ರೆಡ್ ಕಾರ್ಪೆಟ್, ರೆಡ್ ಟೇಪ್ ಅಲ್ಲ” ಎಂದು ಜಪಾನೀ ಉದ್ಯಮಿಗಳನ್ನು ಉತ್ತೇಜಿಸಿದ ಮೋದಿ ತಮ್ಮ ಅಕರ್ಷಕ ಮಾತುಗಳಿಂದ ಮಕ್ಕಳೂ ಸೇರಿದಂತೆ ಜಪಾನೀಯರ ಮನ ಗೆದ್ದುಕೊಂಡರು.  ಜಪಾನೀ ಬುಲೆಟ್ ಟ್ರೇನ್, ಯುದ್ಧವಿಮಾನಗಳು ಭಾರತಕ್ಕೆ ಸರಬರಾಜಾಗುವ ಬಗ್ಗೆ, ಜಪಾನೀ ಸಹಕಾರದಿಂದ ನೂರು ಸ್ಮಾರ್ಟ್ ಸಿಟಿಗಳನ್ನು ನಿರ್ಮಿಸುವ ಬಗ್ಗೆ, ಪವಿತ್ರ ಕ್ಷೇತ್ರ ವಾರಣಾನಿಯನ್ನು ಸಾವಿರ ಆಯಲಗಳ ನಗರ ಕ್ಯೋಟೊ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಬಗ್ಗೆ- ಹೀಗೆ ಹಲವು ಒಪ್ಪಂದಗಳಿಗೆ ಈ ಭೇಟಿಯಲ್ಲಿ ಸಹಿ ಬಿತ್ತು.  ಬಹುಶಃ ಇದು ಇಲ್ಲಿಯವರೆಗೆ ಭಾರತೀಯ ಪ್ರಧಾನಿಯೊಬ್ಬರ ಅತ್ಯಂತ ಯಶಸ್ವಿ ಹಾಗೂ ಮಹತ್ವಪೂರ್ಣ ಜಪಾನ್ ಭೇಟಿ.
ಆದರೆ ಎಡವಟ್ಟಾದದ್ದು ಜಪಾನೀ ನೆಲದಲ್ಲಿ “ಚೀನಾ-ವಿರೋಧಿ”ಯೆಂದು ಅರ್ಥೈಸಬಹುದಾದ ಹೇಳಿಕೆಯೊಂದನ್ನು ಪ್ರಧಾನಿ ಮೋದಿ ನೀಡಿದಾಗ.  ಅಂತರರಾಷ್ಟ್ರೀಯ ರಂಗದಲ್ಲಿ ಧನಾತ್ಮಕವಾದ “ವಿಕಾಸವಾದ” ಮತ್ತು ಋಣಾತ್ಮಕವಾದ “ವಿಸ್ತಾರವಾದ”ಗಳ ಬಗ್ಗೆ ಅರ್ಥಪೂರ್ಣ ಮಾತುಗಳನ್ನಾಡಿದ ಪ್ರಧಾನಿಯವರು ಅಲ್ಲಿಗೇ ನಿಲ್ಲಿಸದೇ ಮುಂದುವರೆದು “...ಹದಿನೆಂಟನೆಯ ಶತಮಾನದ ವಿಚಾರಗಳನ್ನು ಹೊಂದಿದ, ಒತ್ತುವರಿಯಲ್ಲಿ ನಿರತರಾಗಿ ಇತರರ ಜಲಪ್ರದೇಶವನ್ನು ಅತಿಕ್ರಮಿಸುವವರನ್ನು ನಾವು ಕಾಣುತ್ತಿದ್ದೇವೆ” ಎಂದರು.  ಆನಂತರ ನವದೆಹಲಿಯಲ್ಲಿ ನಮ್ಮ ವಿದೇಶ ಮಂತ್ರಿಯವರಿಂದ ಅದೆಷ್ಟೇ ನಿರಾಕರಣೆಯ, ಸಮಜಾಯಿಷಿಯ ಮಾತುಗಳು ಬಂದರೂ ಮೋದಿಯವರ ಹೇಳಿಕೆ ನಿಶ್ಶಂಶಯವಾಗಿಯೂ ಚೀನಾವನ್ನು ಉದ್ದೇಶಿಸಿ ಹೇಳಿದ್ದು ಎನ್ನುವುದು ಸರ್ವವಿದಿತ.
ಚೀನಾ ವಿಸ್ತಾರವಾದವನ್ನು ಅನುಸರಿಸುತ್ತಿದೆಯೆನ್ನುವುದು ನಿಜ.  ಪ್ರಶ್ನೆ ಅದಲ್ಲ.  ಪೂರ್ವ ಚೀನಾ ಸಮುದ್ರದಲ್ಲಿ ಜಪಾನ್ ಜತೆಗಿನ ಚೀನಾದ ತಕರಾರಿನಲ್ಲಿ ಮೂರನೆಯ ದೇಶವಾದ, ಅದರಲ್ಲೂ ಜಪಾನ್ ಜತೆ ಯಾವುದೇ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿರದ ಭಾರತ ಮೂಗು ತೂರಿಸುವುದು ಎಷ್ಟು ವ್ಯಾವಹಾರಿಕ ಎನ್ನುವುದು ನಾವು ಗಂಭೀರವಾಗಿ ಪರಿಗಣಿಸಬೇಕಾದ ಪ್ರಶ್ನೆ.
ಮೋದಿ ಉತ್ಸಾಹೀ ಮಾತುಗಾರರು ನಿಜ. ಅವರ ಉತ್ಸಾಹ ಕೆಲವೊಮ್ಮೆ ಅನುಚಿತವೆನಿಸುವ ಹಂತಕ್ಕೂ ತಲುಪಿದ್ದನ್ನೂ ನೋಡಿದ್ದೇವೆ.  ದಶಕಕ್ಕೂ ಹಿಂದೆ ಚುನಾವಣೆಗಳ ಸಮಯದಲ್ಲೊಮ್ಮೆ ಅವರು ರಾಹುಲ್ ಗಾಂಧಿಯವರನ್ನುದ್ದೇಶಿಸಿ “ಹೈಬ್ರಿಡ್ ಕರು ಓಟು ಕೇಳಿಕೊಂಡು ಬಂದಿದೆ” ಎಂದು ನಗೆಯಾಡಿದ್ದರು.  ಅದರ ಅನುಚಿತತೆಯನ್ನು ತಕ್ಷಣ ಗುರುತಿಸಿದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಂತಹ ಹೇಳಿಕೆಗಳಿಂದ ದೂರವಿರಬೇಕೆಂದು ಮೋದಿಯವರಿಗೆ ಎಚ್ಚರಿಸಿದ್ದರು.  ಈಗ ವಾಜಪೇಯಿ ಅಸ್ವಸ್ತತೆಯಿಂದಾಗಿ ಮೌನಿ.  ಗೆದ್ದೆತ್ತಿನ ಬಾಲ ಹಿಡಿಯುವ ನಮ್ಮ ಬಹುತೇಕ ಮಾತಿನ ಮಲ್ಲರೂ ತಂತಮ್ಮ ಲೆಕ್ಕಾಚಾರಗಳಿಂದಾಗಿ ಮೌನಿಗಳು.  ಹೀಗಾಗಿ ನಾವು ಸಾಮಾನ್ಯ ಜನತೆ ಮಾತಾಡಬೇಕಾಗಿದೆ.
ಪೂರ್ವ ಚೀನಾ ಸಮುದ್ರದಲ್ಲಿ ದಕ್ಷಿಣ ಕೊರಿಯಾ ಮತ್ತು ಜಪಾನ್, ದಕ್ಷಿಣ ಚೀನಾ ಸಮುದ್ರದಲ್ಲಿ ವಿಯೆಟ್ನಾಂ, ಮಲೇಶಿಯಾ, ಬ್ರುನೈ ಮತ್ತು ಪಿಲಿಫೀನ್ಸ್ ಜತೆ ಚೀನಾದ ಸಂಬಂಧಗಳನ್ನು ಏಕಾಏಕಿ ಕಳೆದೆರಡು ವರ್ಷಗಳಲ್ಲಿ ಸೂಕ್ಷ್ಮವಾಗಿಬಿಟ್ಟಿದೆ.  ಅದರಲ್ಲೂ ಸೆಂಕಾಕು ನಡುಗಡ್ಡೆಗಳ ಬಗ್ಗೆ ಅಕ್ಟೋಬರ್ 2012ರಿಂದೀಚೆಗೆ ಜಪಾನ್ ಮತ್ತು ಚೀನಾಗಳ ನಡುವೆ ಮಾತಿನ ಚಕಮಕಿ ಉಗ್ರವಾಗಿದೆ.  ಒಂದೆರಡು ಸಂದರ್ಭಗಳಲ್ಲಂತೂ ಇದು ಘರ್ಷಣೆಯ ವಾತಾವರಣವನ್ನು ಸೃಷ್ಟಿಸಿತ್ತು.  ದಕ್ಷಿಣ ಚೀನಾ ಸಮುದ್ರದಲ್ಲಿ ಪರಾಸೆಲ್ ಮತ್ತು ಸ್ಪ್ರಾಟ್ಲಿ ದ್ವೀಪಸ್ತೋಮಗಳ ಒಡೆತನ ಹಾಗೂ ಅಲ್ಲಿ ಸಮುದ್ರ ಗಡಿ ಬಗೆಗಿನ ಭಿನ್ನಮತಗಳಿಂದಾಗಿ ಆ ವಲಯದ ಬಹುತೇಕ ಎಲ್ಲ ದೇಶಗಳು ಚೀನಾವನ್ನು ಅನುಮಾನದಿಂದ, ಆತಂಕದಿಂದ ನೋಡುತ್ತಿವೆ.
ಇವೆಲ್ಲವೂ ವಾಸ್ತವ.  ಇದಾವುದನ್ನೂ ನಾವು ನಿರಾಕರಿಸಲಾಗುವುದಿಲ್ಲ.  ಪಾಕಿಸ್ತಾನಕ್ಕೆ ಬೆಂಬಲ ನೀಡುವ ಮೂಲಕ ಭಾರತವನ್ನು ದಕ್ಷಿಣ ಏಶಿಯಾದೊಳಗೇ ಕಟ್ಟಿಹಾಕುವ ಹಾಗೂ ನಮ್ಮ ಸುತ್ತಮುತ್ತ ನೆಲೆಗಳನ್ನು ಸ್ಥಾಪಿಸಿಕೊಂಡು ನಮ್ಮ ರಕ್ಷಣೆಗೆ ಕಂಟಕಪ್ರಾಯವಾಗುವ ಅದರ ಹುನ್ನಾರಗಳೂ ಕಟುವಾಸ್ತವ.  ಚೀನಾದ ಈ ನಿಲುವು ನಡೆಗಳು ನಮಗೆ ವಿನಾಶಕಾರಿಯಾಗದಂತೆ ನೋಡಿಕೊಳ್ಳುವ ಹಕ್ಕು ನಮಗಿದೆ, ನಮ್ಮ ಸುರಕ್ಷೆಗಾಗಿ ಎಲ್ಲ ಬಗೆಯ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಪೂರ್ಣ ಹಕ್ಕು ನಮ್ಮ ಸರಕಾರಕ್ಕಿದೆ.  ಆದರೆ ಜಪಾನೀ ನೆಲದಲ್ಲಿ ಚೀನಾದ ವಿರುದ್ಧ ಹೇಳಿಕೆ ನೀಡುವುದು ನಮ್ಮ ಸರಕಾರ ತನ್ನೀ ಹಕ್ಕನ್ನು ನಿರ್ವಹಿಸುವ ಸೂಕ್ತ ವಿಧಾನವಲ್ಲ ಎಂದು ವಿಷಾದದಿಂದ ಹೇಳಬೇಕಾಗಿದೆ.
ಮೊದಲಿಗೆ ಮೋದಿಯವರ ಆಯ್ಕೆಯನ್ನು ವಿಶ್ಲೇಷಿಸೋಣ.  ಏಳು ದಶಕಗಳ ಹಿಂದಿನ ಜಪಾನ್‍ಗೂ ಇಂದಿನ ಜಪಾನ್‍ಗೂ ಅಜಗಜಾಂತರ ವ್ಯತ್ಯಾಸವಿದೆ.   ಹಿಂದೊಮ್ಮೆ ಪ್ರಬಲ ಸೇನಾಶಕ್ತಿಯಾಗಿ ಚೀನಾವನ್ನು ನುಂಗಿ ನೀರು ಕುಡಿದಿದ್ದ, ಬಲಿಷ್ಟ ಅಮೆರಿಕಾ ಮತ್ತು ಬ್ರಿಟನ್‍ಗಳನ್ನೇ ನಡುಗಿಸಿದ್ದ, ನಮ್ಮ ಪೂರ್ವದ ಬಾಗಿಲನ್ನು ಮುರಿದು ನಾಗಾಲ್ಯಾಂಡ್‍ನ ದಿಮಾಪುರ ಪ್ರವೇಶಿಸಿದ್ದ ಜಪಾನ್ ಈಗ ಒಂದು ಆರ್ಥಿಕ ಹಾಗೂ ವೈಜ್ಞಾನಿಕ ಶಕ್ತಿ ಮಾತ್ರ.   ಅದರ ಸೇನಾಶಕ್ತಿ ಸೀಮಿತ.  ಎರಡನೆಯ ಮಹಾಯುದ್ಧದಿಂದೀಚೆಗೆ ಅದರ ರಕ್ಷಣೆ ನಿಂತಿರುವುದು ಅಮೆರಿಕಾದ ಬೆಂಬಲದ ಮೇಲೆ.  ಈಗೊಮ್ಮೆ ಅಮೆರಿಕಾ ಕೈಬಿಟ್ಟರೆ ಚೀನಾ ಮುಂದೆ ಜಪಾನ್ ದಮ್ಮಯ್ಯಗುಡ್ಡೆ ಹಾಕಬೇಕಾಗುವುದು ನಿಶ್ಚಿತ.  ಹೀಗಾಗಿ, ಜಪಾನ್‍ನಿಂದ ನಮಗೇನು ಸಿಗಬಹುದೋ ಅದನ್ನಷ್ಟೇ ಗಮನಿಸಿ ಉಳಿದ ವಿಚಾರಗಳನ್ನು ಬದಿಗಿಡುವುದರಲ್ಲಿ ವಿವೇಕವಿದೆ.  ವೈಜ್ಞಾನಿಕ, ತಾಂತ್ರಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಜಪಾನ್ ಮಹತ್ವಪೂರ್ಣ ಸಹಯೋಗಿಯಾಗಬಲ್ಲುದು.  ರಕ್ಷಣಾ ಕ್ಷೇತ್ರದಲ್ಲಲ್ಲ.
ಈಗಿನ ಭೌಗೋಳಿಕ ಮತ್ತು ಸಾಮರಿಕ ವಾಸ್ತವಗಳು ಹೇಗಿವೆಯೆಂದರೆ ಚೀನಾ ಮತ್ತು ಜಪಾನ್‍ಗಳ ನಡುವೆ ಪೂರ್ವ ಚೀನಾ ಸಮುದ್ರದಲ್ಲಿ ಘರ್ಷಣೆ ಆರಂಭವಾದರೆ ಜಪಾನ್‍ಗೆ ಯಾವ ಬಗೆಯಲ್ಲೂ ಸಹಕಾರ ನೀಡಲು ಭಾರತಕ್ಕೆ ಸಾಧ್ಯವಾಗುವುದಿಲ್ಲ.  ಹಾಗೆಯೇ ಹಿಮಾಲಯದಲ್ಲಿ ನಮ್ಮ ವಿರುದ್ಧ ಚೀನಾ ಯುದ್ಧಕ್ಕೆ ಮುಂದಾದರೆ ನಮ್ಮ ಸಹಕಾರಕ್ಕೆಂದೂ ಜಪಾನ್ ಬರಲಾಗದು.  ಒಂದುವೇಳೆ ಏಕಕಾದಲ್ಲಿ ಜಪಾನ್ ಮತ್ತು ಭಾರತಗಳೆರಡೂ ಚೀನಾ ವಿರುದ್ಧ ಆಕ್ರಮಣವೆಸಗಿದರೆ ಎರಡನ್ನೂ ಸಮರ್ಥವಾಗಿ ಎದುರಿಸುವ ಸೇನಾಸಾಮರ್ಥ್ಯ ಚೀನಾಕ್ಕಿದೆಯೆಂಬ ವಾಸ್ತವವನ್ನು ನಾವೆಂದೂ ಕಡೆಗಣಿಸಬಾರದು.  ಈ ವಾಸ್ತವದ ಅರಿವು ಜಪಾನಿಗಿದೆ.  ಹೀಗಾಗಿಯೇ ಮೋದಿಯವರ ಚೀನಾ ವಿರುದ್ಧದ ಹೇಳಿಕೆಗೆ ಪ್ರಧಾನಿ ಶಿಂಝೋ ಅಬೆ ಬಹಿರಂಗವಾಗಿ ದನಿಗೂಡಿಸಲಿಲ್ಲ.   ರಾಜತಂತ್ರ (Diplomacy) ಅಂದರೆ ಅದು.
ಜಪಾನೀ ನೆಲದಲ್ಲಿ ನಿಂತು ಚೀನಾ-ಜಪಾನ್ ವ್ಯವಹಾರದಲ್ಲಿ ಜಪಾನ್ ಪರ ಹೇಳಿಕೆ ನೀಡಿದುದರಿಂದಾಗಿ ತೆರೆಯ ಹಿಂದೆ ಭಾರತ ಮತ್ತು ಜಪಾನ್‍ಗಳ ನಡುವೆ ಚೀನಾ ವಿರುದ್ಧ ಸಾಮರಿಕ ಸಹಯೋಗ ಅಸ್ತಿತ್ವದಲ್ಲಿರಬಹುದೆಂಬ ಅನುಮಾನ ಚೀನೀ ನಾಯಕರಲ್ಲಿ ಮೂಡಲು ಅವಕಾಶವಾಗಿದೆ.  ಹಿಂದೆ ಇಂಥದೇ ತಪ್ಪನ್ನು ಜಾರ್ಜ್ ಫರ್ನಾಡೀಸ್ ಮಾಡಿದ್ದರು.  ಮೇ 1998ರ ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆಗಳ ನಂತರ ಆಗ ರಕ್ಷಣಾಮಂತ್ರಿಯಾಗಿದ್ದ ಫರ್ನಾಡೀಸ್ ನಮ್ಮ ಅಣ್ವಸ್ತ್ರಗಳು ಚೀನಾ ವಿರುದ್ಧ ಎಂದು ಬಹಿರಂಗವಾಗಿ ಘೋಷಿಸಿದರು.  ಸರಕಾರದ ರಹಸ್ಯ ನೀತಿಯಾಗಬೇಕಾಗಿದ್ದ ಇದು ಹೀಗೆ ಢಾಣಾಢಂಗುರವಾಯಿತು.  ಪರಿಣಾಮ?  ನಮ್ಮ ವಿರುದ್ಧ ಚೀನಾ ತನ್ನ ಅಣುಸಿಡಿತಲೆಗಳನ್ನೊಳಗೊಂಡ ಕ್ಷಿಪಣಿಗಳನ್ನು ಹೆಚ್ಚುಹೆಚ್ಚಾಗಿ ಟಿಬೆಟ್‍ನಲ್ಲಿ ಸಜ್ಜುಗೊಳಿಸತೊಡಗಿತು.  ಹಿಮಾಲಯ ವಿಭಾಗದಲ್ಲಿ ತನ್ನ ಸೇನಾ ಸ್ಥಿತಿಯನ್ನು ಗಣನೀಯವಾಗಿ ವೃದ್ಧಿಸಿಕೊಳ್ಳುವುದರ ಜತೆಗೆ ಹಿಂದೂಮಹಾಸಾಗರದಲ್ಲಿ ನೆಲೆಗಳ ಹುಡುಕಾಟವನ್ನು ತೀವ್ರಗೊಳಿಸಿತು.
ಈಗಲೂ ಚೀನಾದಿಂದ ಅಂತಹದೇ ಕ್ರಮವನ್ನು ನಿರೀಕ್ಷಿಸಬಹುದು.  ಏಕಕಾಲದಲ್ಲಿ ಅದು ತನ್ನ ಸೇನಾಸಾಮರ್ಥ್ಯವನ್ನು ಹಿಮಾಲಯ ಹಾಗೂ ಪೂರ್ವ ಚೀನಾ ಸಮುದ್ರಗಳೆರಡರಲ್ಲೂ ಗಣನೀಯವಾಗಿ ವೃದ್ಧಿಸಿಕೊಳ್ಳಬಹುದು.  ಅಗತ್ಯವಾದಷ್ಟು ವೃದ್ಧಿಯಾದ ನಂತರ ಅದರ ಹುಮ್ಮಸ್ಸೂ ಏರಬಹುದು.  ಭಾರತ ಮತ್ತು ಜಪಾನ್ ನಡುವೆ ಸಾಮರಿಕ ಸಹಯೋಗ ಅಸಾಧ್ಯ ಎಂದರಿತ ಅದು ತಾನೇ ಉತ್ಸಾಹದಿಂದ ಏಕಪಕ್ಷೀಯ ನಿರ್ಧಾರಗಳಿಗೆ ಮುಂದಾಗಬಹುದು.  ಅಗ ಹಾನಿಯಾಗುವುದು ಭಾರತ ಮತ್ತು ಜಪಾನ್‍ಗಳಿಗೆ.  ಇದು ಬೇಕಿತ್ತೇ?
ಮೋದಿಯವರು ಚೀನಾವನ್ನು ಸಂದೇಹಿಸುವುದು ತಪ್ಪು ಎಂದು ನನ್ನ ಮಾತಿನ ಅರ್ಥವಲ್ಲ.  ಪ್ರತಿಯೊಬ್ಬ ಭಾರತೀಯ ನಾಯಕನೂ ಚೀನಾ ಬಗ್ಗೆ ಎಚ್ಚರಿಕೆಯಿಂದಿರಲೇಬೇಕು.  ಆದರೆ ಅದನ್ನು ಬಹಿರಂಗಗೊಳಿಸಬೇಕೇ ಬೇಡವೇ, ಬಹಿರಂಗಗೊಳಿಸುವುದಾದರೆ ಹೇಗೆ, ಎಲ್ಲಿ, ಯಾರ ಮುಂದೆ ಎಂಬ ಅರಿವನ್ನು ಹೊಂದಿರಬೇಕು.  ಮತ್ತು, “ಆಡದೇ ಮಾಡುವವನು ರೂಢಿಯೊಳಗುತ್ತಮನು” ಎಂಬ ಮುತ್ತಿನಂತಹ ಮಾತನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು.
ಹಾಗಿದ್ದರೆ ಚೀನಾ ವಿರುದ್ಧ “ಮೌನವಾಗಿ” ನಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವ ಮಾರ್ಗಗಳೇನು?
ಇಲ್ಲಿಯವರೆಗೂ ಭಾರತವನ್ನು ಕಾಡಿದ ಭಯೋತ್ಪಾದನೆ ಈಗ ಭಾರತಕ್ಕೆ ಅನುಕೂಲವಾಗಿ ಬದಲಾಗುತ್ತಿದೆ ಮತ್ತು ಅದೀಗ ಪಾಕಿಸ್ತಾನವನ್ನು ಕಾಡುತ್ತಿದೆ.  ಪಾಕಿಸ್ತಾನ ಅಶಾಂತಿಯಲ್ಲಿ ಬೆಂದಷ್ಟೂ ಅದು ಪಾಕ್ ನೆಲದ ಮೂಲಕ ಅರಬ್ಬೀ ಸಮುದ್ರ ತಲುಪುವ  ಚೀನಿ ಯೋಜನೆಗಳಿಗೆ ಹೊಡೆತ ನೀಡುತ್ತದೆ.  ಪಾಕಿಸ್ತಾನಕ್ಕೆ ಚೀನೀಯರ ಬೆಂಬಲ ಹೆಚ್ಚಿದಷ್ಟೂ ತಾಲಿಬಾನಿಗಳ ಹತಾಷ ಆಕ್ರೋಷ ಚೀನಾದತ್ತ ತಿರುಗಿ ಪಶ್ಚಿಮ ಚೀನಾದ ಮುಸ್ಲಿಂ ಉಯ್ಘರ್ ಝಿನ್‍ಝಿಯಾಂಗ್ ಪ್ರಾಂತ್ಯ ಹೊತ್ತಿ ಉರಿಯತೊಡಗುತ್ತದೆ.  ಪರಿಣಾಮವಾಗಿ ಚೀನೀಯರು ಅರಬ್ಬೀ ಸಮುದ್ರವನ್ನೂ, ಪಾಕಿಸ್ತಾನವನ್ನೂ ಮರೆತು ಉಯ್ಘರ್ ಪ್ರಾಂತ್ಯವನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ಹೆಣಗಬೇಕಾಗುತ್ತದೆ.
ತಾಲಿಬಾನ್ ಭಯೋತ್ಪಾದನೆ ತನಗೆ ಮತ್ತಷ್ಟು ಅನುಕೂಲವಾಗಲು ಭಾರತ ಕಾಶ್ಮೀರದಲ್ಲಿ ಪರಿಸ್ಥಿತಿ ಹದಗೆಡದಂತೆ ನೋಡಿಕೊಳ್ಳಬೇಕು.  ಸಧ್ಯಕ್ಕೆ ಅಲ್ಲಿ ಶಾಂತಿ ಮರಳಿದೆ.  ಅದು ಕದಡಿದಷ್ಟೂ ತಾಲಿಬಾನ್‍ನ ಭಯೋತ್ಪಾದಕ ರೆಡಾರ್‍ ಸ್ಕ್ರೀನ್‍ನಲ್ಲಿ ಭಾರತವೂ ಮತ್ತೆ ಸ್ಥಾನ ಪಡೆಯುತ್ತದೆ.
ಇದೆಲ್ಲದರ ಜತೆ, ಸಾಮರಿಕವಾಗಿ ನಮಗೆ ಅನುಕೂಲವಾಗಬಲ್ಲ ಅಮೆರಿಕಾ ಮತ್ತು ಆಸ್ಟ್ರೇಲಿಯಾ ಜತೆ ರಕ್ಷಣಾ ಮತ್ತು ಸಾಮರಿಕ ಸಹಯೋಗಕ್ಕೆ ನಮ್ಮ ಸರಕಾರ ಮುಂದಾಗಬೇಕು.
ಮೋದಿಯವರ ಟೋಕಿಯೋ ಹೇಳಿಕೆ ಮತ್ತು “ಸ್ಕಾಟ್‍ಲೆಂಡ್‍ನ ಸ್ವಾತಂತ್ರಕ್ಕೆ ನಮ್ಮ ಬೆಂಬಲವಿದೆ” ಎಂದು ಸೋಮವಾರ ವಿದೇಶ ಮಂತ್ರಿ ಸುಷ್ಮಾ ಸ್ವರಾಜ್ ನೀಡಿದ ಹೇಳಿಕೆ ಎತ್ತಿ ತೋರುವುದೇನೆಂದರೆ ಮೋದಿ ಸರಕಾರಕ್ಕೆ ವಿದೇಶವ್ಯವಹಾರಗಳಿಗೆ ಸಂಬಂಧಿಸಿದಂತೆ ಪರಿಣಿತ ಸಲಹೆಗಾರರಿಲ್ಲ ಎನ್ನುವುದನ್ನು.  ಆಯಾ ದಿನದ ಹೆಡ್‍ಲೈನ್‍ಗಳ ಮೇಲೆ ಕಣ್ಣಾಡಿಸಿ ಸಮರ್ಥ ಸಲಹೆಗಾರರಾಗಲು ಸಾಧ್ಯವಿಲ್ಲ.  ಅದಕ್ಕೆ ಇತಿಹಾಸದ, ವರ್ತಮಾನದ, ಭೂಗೋಳದ ಅಳ ಅರಿವಿನ ಅಗತ್ಯವಿದೆ.

No comments:

Post a Comment