ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Monday, November 18, 2013

"ದ ಬ್ಲಡ್ ಟೆಲಿಗ್ರಾಂ": ಒಂದು ರಕ್ತಸಿಕ್ತ ಇತಿಹಾಸ

("ವಿಜಯವಾಣಿ" ದೈನಿಕದ "ಜಗದಗಲ" ಅಂಕಣದಲ್ಲಿ ನವೆಂಬರ್ ೩೦, ೨೦೧೩, ಬುಧವಾರದಂದು ಪ್ರಕಟವಾದ ಲೇಖನ)

೧೯೭೧ರಲ್ಲಿ ಸತತ ಒಂಬತ್ತು ತಿಂಗಳುಗಳವರೆಗೆ ಪಾಕಿಸ್ತಾನಿ ಸೇನೆ ಪೂರ್ವ ಪಾಕಿಸ್ತಾನದಲ್ಲಿ ನಡೆಸಿದ ನರಮೇಧ, ನಂತರದ ಭಾರತ-ಪಾಕಿಸ್ತಾನ್ ಯುದ್ಧ ಹಾಗೂ ಆ ದಿನಗಳಲ್ಲಿ ದಕ್ಷಿಣ ಏಶಿಯಾ ಕುರಿತಾದ ಅಮೆರಿಕಾದ ನೀತಿಗಳ ಬಗ್ಗೆ ಮಹತ್ವದ ವಿವರಗಳನ್ನು ಹೊಂದಿರುವ ಕೃತಿಯೊಂದು ಇತ್ತೀಚೆಗಷ್ಟೇ ಪ್ರಕಟವಾಗಿದೆ.  ಇತ್ತೀಚಿನ ವರ್ಷಗಳಲ್ಲಿ ಬಹಿರಂಗಗೊಂಡಿರುವ ಸರಕಾರೀ ದಸ್ತಾವೇಜುಗಳಲ್ಲಿನ ಸೂಕ್ಷ್ಮ ವಿವರಗಳನ್ನು ಆಧರಿಸಿ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಲ್ಲಿ ರಾಜಕಾರಣ ಮತ್ತು ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಬೋಧಿಸುತ್ತಿರುವ ಪ್ರೊಫೆಸರ್ ಗ್ಯಾರಿ ಜೆ. ಬ್ಯಾಸ್ ರಚಿಸಿರುವ “The Blood Telegram: Nixon, Kissinger and a Forgotten Genocide” ಎಂಬ ಈ ಕೃತಿಯ ಪ್ರಕಾಶಕರು ರ್‍ಯಾಂಡಂ ಹೌಸ್.  ಈ ಕೃತಿಯ ದಕ್ಷಿಣ ಏಶಿಯಾ ಆವೃತ್ತಿ “The Blood Telegram: India’s Secret War in East Pakistan” ಎಂಬ ಹೆಸರಿನಲ್ಲಿ ಹೊರಬಂದಿದೆ.  ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನಗಳ ನಡುವೆ ತಪ್ಪಿದ ತಾಳಮೇಳ, ಪಶ್ಚಿಮ ಪಾಕಿಸ್ತಾನೀಯರಿಂದಲೇ ತುಂಬಿದ್ದ ಪಾಕ್ ಸೇನೆ ಮತ್ತು ಜನರಲ್ ಯಾಹ್ಯಾ ಖಾನ್ ನೇತೃತ್ವದ ಸೇನಾಡಳಿತ ಪೂರ್ವ ಪಾಕಿಸ್ತಾನವನ್ನು ಒಂದು ಆಕ್ರಮಿತ ಶತ್ರುರಾಷ್ಟ್ರದಂತೆ ಬಗೆದು ಬಂಗಾಲಿಗಳನ್ನು ದಮನಗೈಯಲು ಅನುಸರಿಸಿದ ಪೈಶಾಚಿಕ ಕೃತ್ಯಗಳ ವಿವರಗಳು ಅಗಣಿತ ಲೇಖನ, ಪುಸ್ತಕಗಳಲ್ಲಿ ಈಗಾಗಲೇ ದಾಖಲಾಗಿವೆ.  ಆ ಬರ್ಬರ ಕೃತ್ಯಗಳನ್ನು 'ಕ್ಷಮಿಸಿದ' ಅಧ್ಯಕ್ಷ ನಿಕ್ಸನ್ ಮತ್ತವರ ಚಾಣಾಕ್ಷ ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಹೆನ್ರಿ ಕಿಸಿಂಜರ್‌ರ ಪಾಕ್-ಪರ ನೀತಿಗಳೂ ಸಹಾ ಎಲ್ಲರಿಗೂ ತಿಳಿದಿರುವಂತವೇ.  ಆದರೆ ಇವರಿಬ್ಬರ ಭಾರತವಿರೋಧಿ ನೀತಿಗಳನ್ನು ಅವರ ಮಾತುಗಳಲ್ಲೇ ಆಧಾರಸಹಿತವಾಗಿ ನಮ್ಮ ಮುಂದಿಡುವುದು ಈ ಕೃತಿಯ ಹೆಗ್ಗಳಿಕೆ.  ಜತೆಗೇ, ಈ ಇಬ್ಬರು ನಾಯಕರ ನೀತಿಗಳನ್ನು ಒಪ್ಪದ, ಪಾಕ್ ದುಷ್ಕೃತ್ಯಗಳನ್ನು ಸ್ಪಷ್ಟ ಮಾತುಗಳಲ್ಲಿ ಖಂಡಿಸಿದ, ದಾಖಲಿಸಿದ ಅಮೆರಿಕನ್ ರಾಜತಂತ್ರಜ್ಞರ, ವಿದೇಶಾಂಗ ಇಲಾಖೆಯ ಅಧಿಕಾರಿಗಳ ಕುರಿತಾದ ವಿಸ್ತೃತ ಮಾಹಿತಿಯೂ ಈ ಪುಸ್ತಕದಲ್ಲಿದೆ.  ಈ ದೃಷ್ಟಿಯಲ್ಲಿ ದಕ್ಷಿಣ ಏಶಿಯಾ ಮತ್ತು ಅಮೆರಿಕಾಗಳ ನಡುವಿನ ಏರುಪೇರಿನ ಸಂಬಂಧಗಳ ಅಧ್ಯಯನಕಾರರಿಗೆ ಈ ಪುಸ್ತಕ ಮುಖ್ಯವಾಗುತ್ತದೆ.
ಉಪಖಂಡದ ವಿಭಜನೆಯೊಂದಿಗೆ ನಲವತ್ತೇಳರಲ್ಲಿ ಸೃಷ್ಟಿಯಾದ ಪಾಕಿಸ್ತಾನದ ಎರಡು ಭೂಭಾಗಗಳ ನಡುವಿನ ತಿಕ್ಕಾಟ ಮೂಲಭೂತವಾಗಿ ಎರಡು ಬಗೆಯದು. ಭೌಗೋಳಿಕ ಗಾತ್ರದಲ್ಲಿ ಪುಟ್ಟದಾದರೂ ಜನಸಂಖ್ಯೆಯ ದೃಷ್ಟಿಯಿಂದ ಪಶ್ಚಿಮ ಪಾಕಿಸ್ತಾನಕ್ಕಿಂತಲೂ ಪೂರ್ವ ಪಾಕಿಸ್ತಾನ ಹಿರಿದಾಗಿತ್ತು.  ಬೆರಳೆಣಿಕೆಯಷ್ಟು ಅಸ್ಸಾಮಿ ಭಾಷಿಕರನ್ನ್ನು ಬಿಟ್ಟರೆ ಪೂರ್ವ ಪಾಕಿಸ್ತಾನೀಯರ ಭಾಷೆ ಬಂಗಾಲಿ.  ಹೀಗಾಗಿ ಸುಮಾರು ಶೇಕಡಾ ೫೬ರಷ್ಟು ಪಾಕಿಸ್ತಾನೀಯರ ಮಾತೃಭಾಷೆ ಬಂಗಾಲೆ.  ೧೯೫೧ರಲ್ಲಿ ಪಾಕಿಸ್ತಾನದಲ್ಲಿ ರಾಷ್ಟ್ರೀಯ ಭಾಷೆಯೊಂದನ್ನು ಆರಿಸುವ ಪ್ರಸಂಗ ಬಂದಾಗ ಆ ಸ್ಥಾನ ತಮ್ಮ ಬಂಗಾಲಿ ಭಾಷೆಗೇ ದಕ್ಕುವುದೆಂದು ಪೂರ್ವ ಪಾಕಿಸ್ತಾನೀಯರು ಆಶಿಸಿದು ಸಹಜವೇ ಅಗಿತ್ತು.  ಆದರೆ ಅವರೆಣಿಕೆಗೆ ವಿರುದ್ಧವಾಗಿ ಕೇವಲ ಶೇಕಡಾ ನಾಲ್ಕರಷ್ಟು ಜನರ ಮಾತೃಭಾಷೆಯಾದ ಉರ್ದು ಭಾಷೆಗೆ ರಾಷ್ಟ್ರಿಯ ಭಾಷೆಯ ಸ್ಥಾನ ದಕ್ಕಿದಾಗ ಸಹಜವಾಗಿಯೇ ಅವರು ನಿರಾಶೆಗೊಂಡರು.  ಆ ನಿರಾಶೆ ವ್ಯಕ್ತವಾದದ್ದು ಸಾರ್ವತ್ರಿಕ ಮುಷ್ಕರ, ಹರತಾಳಗಳ ಮೂಲಕ.  ಎರಡು ಪಾಕಿಸ್ತಾನಗಳ ನಡುವೆ ಮೊದಲಿಗೆ ತಿಕ್ಕಾಟವನ್ನು ಮೂಡಿಸಿದ ಈ ಭಾಷಾವೈಷಮ್ಯ ದಿನೇದಿನೇ ಉಗ್ರವಾಗುತ್ತಾ ಸಾಗಿತು.
ಅಗಣಿತ ಪ್ರಾಕೃತಿಕ ಸಂಪತ್ತಿನಿಂದ ಕೂಡಿದ್ದ ಪೂರ್ವ ಪಾಕಿಸ್ತಾನವನ್ನು ಪಶ್ಚಿಮ ಪಾಕಿಸ್ತಾನ ತನ್ನ ವಸಾಹತುವಿನಂತೆ ಶೋಷಿಸುವುದು ಪಾಕಿಸ್ತಾನ ಸೃಷ್ಟಿಯ ಮೊದಲ ದಿನದಿಂದಲೇ ಅರಂಭವಾಯಿತು.  ಇದನ್ನು ಒಂದು ಉದಾಹರಣೆಯ ಮೂಲಕ ವಿಶದಪಡಿಸಬಹುದು.  ಅರವತ್ತರ ದಶಕದ ಆರಂಭದಲ್ಲಿ ಪಾಕಿಸ್ತಾನ ಗಳಿಸುತ್ತಿದ್ದ ವಿದೇಶೀ ವಿನಿಮಯದ ಶೇಕಡಾ ೭೦ರಷ್ಟು ಪೂರ್ವ ಪಾಕಿಸ್ತಾನದ ನಿರ್ಯಾತಗಳಿಂದ ಬರುತ್ತಿತ್ತು.  ಆದರೆ ಪಾಕಿಸ್ತಾನೀ ಸರಕಾರ ತನ್ನ ಅಭಿವೃದ್ದಿ ವೆಚ್ಚಗಳ ಶೇಕಡಾ ೮೦ರಷ್ಟು ಹಣವನ್ನು ಪಶ್ಚಿಮ ಪಾಕಿಸ್ತಾನದ ಉನ್ನತಿಗಾಗಿ ವ್ಯಯಿಸುತ್ತಿತ್ತು!  ಪರಿಣಾಮವಾಗಿ ಪಶ್ಮಿಮ ಪಾಕಿಸ್ತಾನ ಶ್ರೀಮಂತವಾಗುತ್ತಾ ಸಾಗಿದರೆ ಪೂರ್ವ ಪಾಕಿಸ್ತಾನ ಬಡತನದತ್ತ ಕುಸಿಯತೊಡಗಿತು.
ಈ ಎರಡು ಕಾರಣಗಳಿಂದಾಗಿ ಹೊತ್ತಿ ಉರಿಯತೊಡಗಿದ ವೈಷಮ್ಯ ಅಂತಿಮವಾಗಿ ಮುಜೀಬುರ್ ರಹಮಾನ್ ನಾಯಕತ್ವದ ಅವಾಮಿ ಲೀಗ್ ಪೂರ್ವ ಪಾಕಿಸ್ತಾನಕ್ಕೆ ಆಂತರಿಕ ಸ್ವಾಯುತ್ತತೆಗಾಗಿ ಒತ್ತಾಯಿಸುವ ಹಂತಕ್ಕೆ ತಲುಪಿತು.
ಇಂತಹ ವೈಷಮ್ಯಪೂರಿತ ಪರಿಸ್ಥಿತಿಯಲ್ಲಿ ಡಿಸೆಂಬರ್ ೧೯೭೧ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಗಳಲ್ಲಿ ಅವಾಮಿ ಲೀಗ್ ಬಹುಮತ ಗಳಿಸಿತು.  ಇದು ಸೇನಾಡಳಿತಗಾರ ಜನರಲ್ ಯಾಹ್ಯಾ ಖಾನ್ ಹಾಗೂ ಎರಡನೆಯ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಝುಲ್ಫಿಕರ್ ಆಲಿ ಭುಟ್ಟೋರಿಗೆ ಸಮ್ಮತವಾಗಲಿಲ್ಲ.  ಭುಟ್ಟೋರ ನಿರಂತರ ಕಿವಿಯೂದುವಿಕೆಗೆ ಬಲಿಯಾದ ಯಾಹ್ಯಾ ಖಾನ್ ಹೊಸ ಸಂಸತ್ತಿನ ರಚನೆಯನ್ನು ಅನಿರ್ಧಿಷ್ಟ ಕಾಲದವರೆಗೆ ಮುಂದೂಡಿದರು.  ಹೀಗೆ ಈ ಇಬ್ಬರ ಪಿತೂರಿಯಿಂದಾಗಿ ಅವಾಮಿ ಲೀಗ್ ಬಹುಮತವಿದ್ದರೂ ಅಧಿಕಾರದಿಂದ ವಂಚಿತವಾಯಿತು.  ಇದಕ್ಕೆ ಅದು ಪ್ರತಿಕ್ರಿಯಿಸಿದ್ದು ಪೂರ್ವ ಪಾಕಿಸ್ತಾನದ ಪ್ರತ್ಯೇಕತೆಯ ಕೂಗೆತ್ತಿ.  ಹಲವು ವಾರಗಳವರಗೆ ನಡೆದ ಈ ಪ್ರತ್ಯೇಕತಾ ಆಂದೋಲನದ ವಿರುದ್ಧ ಮಾರ್ಚ್ ೨೫, ೧೯೭೧ರಂದು ಯಾಹ್ಯಾ ಆಡಳಿತ ಸಮರ ಸಾರಿತು.  ಆ ರಾತ್ರಿ ಜನರಲ್ ಟಿಕ್ಕಾ ಖಾನ್ ನೇತೃತ್ವದ ಪಾಕಿಸ್ತಾನೀ ಸೇನೆ ಪೂರ್ವ ಪಾಕಿಸ್ತಾನದ ರಾಜಧಾನಿ ಢಾಕಾದಲ್ಲಿ ಆರಂಭಿಸಿದ ಹತ್ಯಾಕಾಂಡದಲ್ಲಿ ಸತ್ತವರ ಸಂಖ್ಯೆ ನಿಖರವಾಗಿ ಇನ್ನೂ ತಿಳಿದುಬಂದಿಲ್ಲ.  ಆ ಒಂದು ರಾತ್ರಿಯಲ್ಲಿ ಢಾಕಾ ವಿಶ್ವವಿದ್ಯಾಲಯವೊಂದರಲ್ಲೇ ಐನೂರಕ್ಕೂ ಮಿಕ್ಕಿ ಪ್ರಾಧ್ಯಾಪಕರು, ವಿದ್ಯಾರ್ಥಿಗಳನ್ನು ಅವರವರ ನಿವಾಸಗಳಿಂದ ಹೊರಗೆಳೆದು ತಂದು ಗುಂಡಿಕ್ಕಿ ಕೊಲ್ಲಲಾಯಿತು.  ಮಾರನೆಯ ದಿನ ಪಾಕ್ ಸೇನೆಯ ಬರ್ಬರ ಕೃತ್ಯಗಳು ಬಂದರು ನಗರ ಚಿಟ್ಟಗಾಂಗ್ ಸೇರಿದಂತೆ ಇಡೀ ದೇಶಕ್ಕೆ ಹರಡಿಹೋದವು.
ಢಾಕಾದಲ್ಲಿದ್ದ ಅಮೆರಿಕಾದ ಉಪರಾಯಭಾರಿ ಆರ್ಚರ್ ಬ್ಲಡ್ ತಾವು ಕಣ್ಣಾರೆ ಕಂಡ, ತಮಗೆ ತಿಳಿದುಬಂದ ಪ್ರತಿಯೊಂದು ವಿವರವನ್ನೂ ವಾಷಿಂಗ್‌ಟನ್‌ಗೆ ರವಾನಿಸಿದರು.  ಆದರೆ ಅಲ್ಲಿಂದ ಬಂದ ಪ್ರತಿಕ್ರಿಯೆಗಳು ಮಾತ ನಿರಾಶಾದಾಯಕ, ಪಾಕ್ ಸೇನೆಯ ಕುಕೃತ್ಯಗಳ ಬಗ್ಗೆ ತಲೆಕೆಡಿಸಿಕೊಳ್ಳಬಾರದೆಂಬ ಸೂಚನೆ.  ಆರ್ಚರ್ ಬ್ಲಡ್‌ರಿಗೆ ಆಘಾತವನ್ನುಂಟುಮಾಡಿದ ವಿಷಯವೆಂದರೆ ಪೂರ್ವ ಪಾಕಿಸ್ತಾನೀಯರ ಮಾರಣಹೋಮಕ್ಕೆ ಪಾಕ್ ಸೇನೆ ಬಳಸುತ್ತಿದ್ದುದು ಅಮೆರಿಕಾ ನೀಡಿದ್ದ ಶಸ್ತ್ರಾಸ್ತ್ರಗಳನ್ನು.  ಪಾಕ್ ಸೈನಿಕರನ್ನೂ, ಮಾರಕಾಸ್ತ್ರಗಳನ್ನೂ ಹೊತ್ತ ಅಮೆರಿಕಾ-ನಿರ್ಮಿತ ಸಿ-೧೩೦ ವಿಮಾನಗಳು ನಿರಂತರವಾಗಿ ಢಾಕಾ ವಿಮಾನನಿಲ್ದಾಣದಲ್ಲಿ ಬಂದಿಳಿಯುತ್ತಿದ್ದುದು ಅಧ್ಯಕ್ಷ ನಿಕ್ಸನ್‌ರಿಗೂ ತಿಳಿದೇ ಇತ್ತು.  ಈ ವಿವರಗಳು ಕಾಂಗ್ರೆಸ್‌ನ ಉಭಯ ಸದನಗಳಲ್ಲೂ ಭಾರಿ ವಿರೋಧಕ್ಕೆ ಕಾರಣವಾಗುವ ಸಾಧ್ಯತೆ ದಟ್ಟವಾಗಿದ್ದರೂ ನಿಕ್ಸನ್ ಮತ್ತು ಕಿಸಿಂಜರ್ ಇಬ್ಬರೂ ತಮ್ಮ ಯಾಹ್ಯಾ ಖಾನ್‌ರ ಬೆನ್ನಿಗೆ ನಿಂತದ್ದು ಬ್ಲಡ್‌ರನ್ನು ತೀವ್ರವಾಗಿ ಕಂಗೆಡಿಸಿತು.  ಅವರ ದುರದೃಷ್ಟಕ್ಕೆ ಇಸ್ಲಾಮಬಾದ್‌ನಲ್ಲಿದ್ದ ಅಮೆರಿಕದ ರಾಯಭಾರಿ ಜೋಸೆಫ್ ಫಾರ್‌ಲ್ಯಾಂಡ್ ನಿಕ್ಸನ್ ಸರಕಾರದ ನೀತಿಯ ಪರವಾಗಿದ್ದರು.  ಅವರ ಅಭಿಪ್ರಾಯದಲ್ಲಿ ಯಾಹ್ಯಾ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದು ಅಮೆರಿಕಾದ ಹಿತಾಸಕ್ತಿಗಳಿಗೆ ಮಾರಕವಾಗುತ್ತಿತ್ತು.
ತಾಳ್ಮೆಗೆಟ್ಟ ಆರ್ಚರ್ ಬ್ಲಡ್ ಮತ್ತವರ ಸಹೋದ್ಯೋಗಿಗಳು ಪಾಕ್ ಸೇನೆಯ ದುಷ್ಕೃತ್ಯಗಳನ್ನು ವಿವರಿಸಿ, ನಿಕ್ಸನ್ ಸರಕಾರದ ನೀತಿಯನ್ನು ವಿರೋಧಿಸಿ ಏಪ್ರಿಲ್ ೬, ೧೯೭೧ರಂದು ವಾಷಿಂಗ್‌ಟನ್‌ನಲ್ಲಿದ್ದ ವಿದೇಶ ಮಂತ್ತಾಲಯಕ್ಕೆ, ಇಸ್ಲಾಮಾಬಾದ್‌ನಲ್ಲಿದ್ದ ಅಮೆರಿಕನ್ ದೂತಾವಾಸಕ್ಕೆ, ಕರಾಚಿ ಮತ್ತು ಲಾಹೋರ್‌ಗಳಲ್ಲಿದ್ದ ಕಾನ್ಸುಲೇಟ್‌ಗಳಿಗೆ ಕಳುಹಿಸಿದ ವಿಸ್ತೃತ ಕೇಬಲ್ ಬ್ಲಡ್ ಟೆಲಿಗ್ರಾಂ ಎಂದು ಹೆಸರಾಗಿ ಈಗ ಪ್ರೊ. ಬ್ಯಾಸ್ ಅವರ ಪುಸ್ತಕದ ಶಿರ್ಷಿಕೆಯಾಗಿ ಕಾಣಿಸಿಕೊಂಡಿದೆ.  ಈ ಟೆಲಿಗ್ರಾಂ ಪೂರ್ವ ಪಾಕಿಸ್ತಾನದಲ್ಲಿ ನಡೆಯುತ್ತಿದ್ದ ಕರ್ಮಕಾಂಡದ ವಿವರಗಳನ್ನು ವಿದೇಶಮಂತ್ರಾಲಯದ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟವು, ಪರಿಣಾಮವಾಗಿ ಕಿಸಿಂಜರ್ ಅತೀವವಾಗಿ ಕುಪಿತಗೊಂಡರು ಎಂದು ಬ್ಯಾಸ್ ಬರೆಯುತ್ತಾರೆ.  ಈ ಬ್ಲಡ್ ಟೆಲಿಗ್ರಾಂನ ವಿವರಗಳು ಪುಸ್ತಕದ ಐದನೆಯ ಅಧ್ಯಾಯದಲ್ಲಿವೆ.
ಪಾಕ್ ಸೇನೆಯ ಕುಕೃತ್ಯಗಳಿಂದ ಸುಮಾರು ಒಂದು ಕೋಟಿ ಬಂಗಾಲಿಗಳು ಗಡಿ ದಾಟಿ ನಿರಾಶ್ರಿತರಾಗಿ ಭಾರತಕ್ಕೆ ಓಡಿಬಂದರು.  ಸತತ ಒಂಬತ್ತು ತಿಂಗಳುಗಳ ಕಾಲ ನಡೆದ ಹತ್ಯಾಕಾಂಡದಲ್ಲಿ ಮಡಿದವರ ಸಂಖ್ಯೆ ಎರಡರಿಂದ ಮೂರು ದಶಲಕ್ಷ ಇರಬಹುದು ಎಂಬುದೊಂದು ಊಹೆಯಾಗಿದೆ.  ನಿಖರ ಸಂಖ್ಯೆ ಬಹುಶಃ ಎಂದಿಗೂ ತಿಳಿಯಲಾರದು.
ಪ್ರಜಾಪ್ರಭುತ್ವವಾದಿ ಅಮೆರಿಕಾ ಈ ಬಗೆಯ ಹತ್ಯಾಕಾಂಡದ ಬಗ್ಗೆ ಮೌನ ವಹಿಸಿದ್ದು, ಒಂದರ್ಥದಲ್ಲಿ ಸಮರ್ಥಿಸಿಕೊಂಡದ್ದು ಯಾಕೆ?
ಇದಕ್ಕೆ ಕಾರಣ ಆಗ ಅತ್ಯಂತ ತ್ವರಿತಗತಿಯಲ್ಲಿ ಬದಲಾಗುತ್ತಿದ್ದ ಅಂತರರಾಷ್ಟ್ರೀಯ ರಾಜಕಾರಣ.  ವಿಯೆಟ್ನಾಂನಲ್ಲಿ ಮುಖಭಂಗ ಅನುಭವಿಸಿದ ಅಮೆರಿಕಾ ಅಲ್ಲಿಂದ ತನ್ನ ಸೇನೆಯನ್ನು 'ಗೌರವಯುತವಾಗಿ' ಹೊರತೆಗೆಯಲು ಬಯಸಿದಾಗ ಉತ್ತರ ವಿಯೆಟ್ಮಾಮೀ ನಾಯಕತ್ವದಿಂದ ಬಂದ ಉತ್ತರ: ವಿಯೆಟ್ನಾಂಗೆ ದಾರಿ ಚೀನಾ ಮೂಲಕ.  ಹೀಗಾಗಿ ಇಲ್ಲಿಯವರೆಗೆ ದೂರವಿಟ್ಟಿದ್ದ ಕಮ್ಯೂನಿಸ್ಟ್ ಚೀನಾ ಜತೆ ಸಂಬಂಧಗಳನ್ನು ಸುಧಾರಿಸಿಕೊಳ್ಳುವುದು ಅಮೆರಿಕಾಗೆ ಅಗತ್ಯವಾಯಿತು.  ಈ ಕೆಲಸಕ್ಕೆ ತುರ್ತಾಗಿ ಬೇಕಾಗಿದ್ದುದ್ದು ಅಮೆರಿಕಾ ಹಾಗೂ ಚೀನಾಗಳೆರಡರ ಜತೆಗೂ ಸ್ನೇಹ ಹೊಂದಿದ್ದ ಒಂದು ದೇಶ.  ಈ ನಿಯಮಕ್ಕೆ ಸ್ಪಷ್ಟವಾಗಿ ಹೊಂದಿಕೊಳ್ಳುತ್ತಿದ್ದುದು ಪಾಕಿಸ್ತಾನ.
ಪಾಕಿಸ್ತಾನದ ಮಧ್ಯಸ್ತಿಕೆಯ ಮೂಲಕ ಚೀನಾ ಜತೆ ಸ್ನೇಹ ಕುದುರಿಸಿಕೊಳ್ಳುವ ಅಮೆರಿಕಾದ ಪ್ರಯತ್ನ ಯಶಸ್ವಿಯಾದದ್ದು ಜುಲೈ ೧೯೭೧ರಲ್ಲಿ.  ಪಾಕಿಸ್ತಾನಕ್ಕೆ ಭೇಟಿಯಿತ್ತ ಹೆನ್ಸಿ ಕಿಸಿಂಜರ್ ಅಲ್ಲಿಂದ ರಹಸ್ಯವಾಗಿ ಚೀನಾಗೆ ಹೋಗಿ ಚೀನೀ ನಾಯಕರೊಡನೆ ಮಾತುಕತೆ ನಡೆಸಿ ಅಂತರರಾಷ್ಟ್ರೀಯ ರಾಜಕಾರಣದಲ್ಲಿ ಒಂದುಬಗೆಯ ಕ್ರಾಂತಿಯೆಬ್ಬಿಸಿದುದು ಈಗ ಇತಿಹಾಸ.  ಒಂದು ಕಾಲದ ಮಿತ್ರ ಸೋವಿಯೆತ್ ಯೂನಿಯನ್ ಜತೆ ವೈರತ್ವ ಬೆಳೆಸಿಕೊಂಡಿದ್ದ ಚೀನೀ ನಾಯಕರಿಗೆ ಅಮೆರಿಕನ್ ಸಖ್ಯ ಈ ಬಗೆಯಾಗಿ ಒದಗಿಬಂದದ್ದು ನೆಮ್ಮದಿಯನ್ನುಂಟುಮಾಡಿತು.  ಆಗ ಆರಂಭವಾದ ಅಮೆರಿಕಾ-ಚೀನಾ ಮೈತ್ರಿ ಫೆಬ್ರವರಿ ೧೯೭೨ರಲ್ಲಿ ಅಧ್ಯಕ್ಷ ನಿಕ್ಸನ್ ಚೀನಾಗೆ ಅಧಿಕೃತ ಭೇಟಿ ನೀಡುವುದರೊಂದಿಗೆ ಮತ್ತಷ್ಟು ಬಲಗೊಂಡಿತು.  (ಮುಂದಿನ ಹನ್ನೊಂದು ತಿಂಗಳಲ್ಲಿ ಚೀನೀಯರ ಪ್ರಭಾವದಿಂದ ವಿಯೆಟ್ನಾಮಿಯರು ಪ್ಯಾರಿಸ್‌ನಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿ ಅಮೆರಿಕನ್ ಸೇನೆಯ 'ಗೌರವಯುತ' ವಾಪಸಾತಿಗೆ ಅನುಕೂಲ ಮಾಡಿಕೊಟ್ಟರು.)
ಇದೆಲ್ಲದರ ಅರ್ಥ ಆ ದಿನಗಳ ಶೀತಲಸಮರದ ಶಕ್ತಿ ರಾಜಕಾರಣದಲ್ಲಿ ಲಕ್ಷಾಂತರ ಅಮಾಯಕ, ನಿರಾಯುಧ ಬಂಗಾಲಿಗಳು ಬಲಿಯ ಕುರಿಗಳಾಗಿಹೋದರು.  ವಿಶ್ವ ಇತಿಹಾಸದ ಅತ್ಯಂತ ದಾರುಣ ಘಟನೆಗಳಲ್ಲಿ ಇದೊಂದು.  ಪ್ರೊ. ಬ್ಯಾಸ್ ಹೇಳುವ ಪ್ರಕಾರ ಈ ನರಮೇಧ ರವಾಂಡಾ, ಬೋಸ್ನಿಯಾಗಳಲ್ಲಿ ನಡೆದದ್ದಕಿಂತಲೂ ಹಲವು ಪಟ್ಟು ಕರಾಳ.
ಪೂರ್ವ ಪಾಕಿಸ್ತಾನಿಯರಿಗೆ ಸಹಕಾರಿಯಾಗಿ ನಿಂತು ಆವರ ಪರವಾಗಿ ಪಶ್ಚಿಮ ಪಾಕಿಸ್ತಾನದೊಂದಿಗೆ ಯುದ್ಧಕ್ಕಿಳಿದ ಭಾರತವನ್ನು ಹೆದರಿಸಿ ಹಿಮ್ಮೆಟ್ಟಿಸಲು ನಿಕ್ಸನ್-ಕಿಸಿಂಜರ್ ಮಹಾಶಯರು ಹೂಡಿದ ಹೂಟವನ್ನು ಕೊನೆಯ ಅಧ್ಯಾಯ“I Consider This Our Rhineland” ವಿವರಿಸುತ್ತದೆ.  ಅವರು ಅನುಸರಿಸಿದ ಮಾರ್ಗಗಳು ಮೂರು: ೧. ಇರಾನ್ ಮತ್ತು ಜೋರ್ಡಾನ್‌ಗಳಿಂದ ಪಾಕಿಸ್ತಾನಕ್ಕೆ ಅಗತ್ಯ ಯುದ್ಧವಿಮಾನಗಳು, ಶಸ್ತ್ರಾಸ್ತ್ರಗಳು ಸಾಗಿಬರುವಂತೆ ವ್ಯವಸ್ಥೆ ಮಾಡುವುದು, ೨. ಹಿಮಾಲಯ ಗಡಿಯಲ್ಲಿ ಸೇನಾಜಮಾವಣೆ ನಡೆಸಿ ಭಾರತೀಯ ಸೇನೆಯ ಗಮನವನ್ನು ಅತ್ತ ಸೆಳೆಯಲು ಚೀನೀಯರನ್ನು ಪ್ರೇರೇಪಿಸಿಸುವುದು, ಹಾಗೂ ೩. ಯುಎಸ್‌ಎಸ್ ಎಂಟರ್‌ಪ್ರೈಸಸ್ ನೇತೃತ್ವದ ೫೬ ಯುದ್ಧ ನೌಕೆಗಳ ಬೃಹತ್ ಸೆವೆಂತ್ ಫ್ಲೀಟ್ ಅನ್ನು ಬಂಗಾಲ ಕೊಲ್ಲಿಗೆ ಕಳುಹಿಸಿ ಭಾರತಕ್ಕೆ ನೇರ ಬೆದರಿಕೆ ಒಡ್ಡುವುದು.

ಆದರೆ ಇದೆಲ್ಲವೂ ವ್ಯರ್ಥವಾಗಿ ಭಾರತ ಯುದ್ಧದಲ್ಲಿ ಜಯಗಳಿಸಿ, ಸ್ವತಂತ್ರ ಬಾಂಗ್ಲಾದೇಶದ ಉದಯಕ್ಕೆ ಕಾರಣವಾದದ್ದು ಇತಿಹಾಸದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.

1 comment:

  1. Namaskara sir, I have been following your articles in vijayavani for the past ten months. You are perhaps the only writer in kannada who covers international politics and it's History . I request you to update each of your 'jagadagala' column on your blog since you have many readers outside karnataka as well. Good day

    ReplyDelete