ಮೂರು ವರ್ಷಗಳ ಹಿಂದೆ ಅಕ್ಟೋಬರ್ ೧೧, ೨೦೧೦ರಂದು ವಿಧಾನಸಭೆಯಲ್ಲಿ ಕೆಲ ಸದಸ್ಯರು ಮಾರ್ಷಲ್‌ಗಳೊಂದಿಗೆ ಜಟಾಪಟಿಗಿಳಿದು
ನಡೆಸಿದ ದೊಂಬಿಯ ಸಮಯದಲ್ಲಿ ಮೇಜಿನ ಮೇಲೆ ಹತ್ತಿ ನಿಲ್ಲುವುದರ ಮೂಲಕ ನಾಯಕನಲ್ಲಿ ಇರಲೇಬಾರದ ಅವಲಕ್ಷಣವೊಂದನ್ನು
ಪ್ರದರ್ಶಿಸಿದ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ ಆರುತಿಂಗಳಲ್ಲಿ ಕೆಲವು ವಿವಾದಾತ್ಮಕ
ನಿರ್ಣಯಗಳನ್ನು ಕೈಗೊಂಡಿದ್ದಾರೆ. ಇವೆಲ್ಲವುಗಳ ಹಿಂದೆ
ಎದ್ದುಕಾಣುವುದು ಏನನ್ನೋ ಸಾಧಿಸಬೇಕೆಂಬ ಅತ್ಯಾತುರದ ಆಸೆ.
ಆದರೆ ಮುಂದಾಲೋಚನೆ ಮಾತ್ರ ಶೂನ್ಯ. ತಮ್ಮ
ಕೈಯಲ್ಲಿ ಅಲ್ಲಾವುದ್ದಿನನ ಅದ್ಭುತ ದೀಪ ಇಲ್ಲ ಎನ್ನುವುದನ್ನು ಅವರೀಗ ತಪ್ಪುನಿರ್ಣಯಗಳ ಮೂಲಕ ಅರಿಯುತ್ತಿರಬಹುದು.
ಅಧಿಕಾರಕ್ಕೆ ಬಂದ ದಿನವೇ ಘೋಷಿಸಿದ ಅನ್ನಭಾಗ್ಯ ಯೋಜನೆಯ ಹಿಂದಿನ ಉದ್ಡೇಶ ಅದೆಷ್ಟೇ ಉದಾತ್ತವಾಗಿದ್ದರೂ
ಈಗಾಗಲೇ ಇರುವ ಕೊರತೆ ಬಜೆಟ್‌ನ ಮೇಲೆ ಅದರಿಂದಾಗಬಹುದಾದ ದುಷ್ಪರಿಣಾಮಗಳ ಬಗ್ಗೆ ಕಿಂಚಿತ್ ಗಮನ ಹರಿಸದೇಹೋದದ್ದು
ಮುಖ್ಯಮಂತ್ರಿಗಳ ಸೀಮಿತ ದೃಷ್ಟಿಕೋನಕ್ಕೊಂದು ದೃಷ್ಟಾಂತ.
ನಂತರದ ನಿರ್ಣಯಗಳಂತೂ ಅಧ್ವಾನ. ಮೂಢನಂಬಿಕೆಗಳ
ವಿರುದ್ಧದ ಕಾನೂನಿನ ಕರಡುಪ್ರತಿ ರಚಿಸಲು ಸಮಿತಿಯೊಂದನ್ನು ರಚಿಸಿದ್ದು ಸರಿಯಷ್ಟೇ. ಸಾಮಾಜಿಕ ಪಿಡುಗುಗಳಾಗಿ ಬೆಳೆದು ಲಕ್ಷಾಂತರ ಜನರ ಮಾನಸಿಕ
ಸಮತೋಲನವನ್ನೇ ಹಾಳುಮಾಡುತ್ತಿರುವ ವಾಸ್ತು, ಟೀವಿ ಜೋತಿಷ್ಯ, ಮಡೆಸ್ನಾನ ಮುಂತಾದ ಅನಿಷ್ಟಗಳನ್ನು ವ್ಯವಸ್ಥಿತವಾಗಿ ತಡೆಗಟ್ಟುವುದು ಈ
ದಿನದ ಅಗತ್ಯ, ನಿಜ. ಆದರೆ ಆ ಸಮಿತಿ ರಚಿಸಿದ ಕರಡು ದೇಶದ ಪ್ರಜೆಗಳಿಗೆ ಸಂವಿಧಾನ
ನೀಡಿರುವ ಧಾರ್ಮಿಕ ಸ್ವಾತಂತ್ರ್ಯವನ್ನೇ ಮುಕ್ಕಾಗಿಸಹೊರಟಿದೆ. ಇದು ಸಮಿತಿಯ ಸದಸ್ಯರ ತಪ್ಪಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ತಪ್ಪು. ಸಮಿತಿಗೆ ಸದಸ್ಯರನ್ನು ಆಯ್ಕೆಮಾಡುವಾಗಲೇ ಇದುವರೆಗೆ ವ್ಯಕ್ತವಾಗಿರುವ
ಅವರುಗಳ ಮನೋಭಾವ, ಮೌಲ್ಯಗಳ ಆಧಾರದ
ಮೇಲೆ ಅವರು ರೂಪಿಸಬಹುದಾದ ಕರಡು ಹೇಗಿರುತ್ತದೆಂಬ ಒಂದು ಸ್ಥೂಲ ಕಲ್ಪನೆ ಇಲ್ಲದೇಹೋದದ್ದು ಮುಖ್ಯಮಂತ್ರಿಗಳ
ಅನನುಭವಕ್ಕೊಂದು ಉದಾಹರಣೆ.
ಸಮಾಜವನ್ನು ಒಡೆಯುವ ಆರೋಪವನ್ನು ಬಿಜೆಪಿಯ ಮೇಲೆ ಹೊರಿಸುತ್ತಲೇ, “ಶಾದಿಭಾಗ್ಯ” ಹಾಗೂ ಅಹಿಂದ ಶಾಲಾಮಕ್ಕಳಿಗೆ
ಕರ್ನಾಟಕ ದರ್ಶನ ಯೋಜನೆಗಳ ಮೂಲಕ ಸಮಾಜವನ್ನು, ಎಳೆಮಕ್ಕಳನ್ನೂ ಒಡೆಯುವ ಹುನ್ನಾರಗಳನ್ನು ಹೂಡಿದ್ದು ಸಿದ್ದರಾಮಯ್ಯನವರ
ಚಿಂತನೆ ಸಾಗುತ್ತಿರುವ ಅಪಾಯಕಾರಿ ಜಾಡನ್ನು ಸೂಚಿಸುತ್ತದೆ. ಇವೆರಡಕ್ಕೂ ವ್ಯಕ್ತವಾದ ವಿರೋಧ ಮತ್ತು ಮೂಢನಂಬಿಕೆಗಳನ್ನು
ತಡೆಗಟ್ಟುವ ಕಾನೂನಿನ ಕರಡು ನಗೆಪಾಟಲಿಗೀಡಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ತಮ್ಮ ನಿರ್ಣಯಗಳನ್ನು
ಬದಲಾಯಿಸುವ ಸೂಚನೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಮುಂದಿನ ನಿರ್ಣಯ ಏನಿರಬಹುದು? ಅದು ಏನೇ ಇರಲಿ, ಆದರೆ ಮಾನ್ಯ ಸಿದ್ದರಾಮಯ್ಯನವರು ಗಿರೀಶ್ ಕಾರ್ನಾಡರಿಗೆ
ಮತ್ತೊಂದು ಲೋಕಪ್ರಸಿದ್ದ ನಾಟಕವನ್ನು ರಚಿಸಲು ವಸ್ತುವಾಗಲಾರರು ಎಂಬ ಆಶಯದೊಡನೆ ಅವರ ಇದುವರೆಗಿನ
ನಿರ್ಣಯಗಳ ಅವಲೋಕನವನ್ನು ಕೈಗೆತ್ತಿಕೊಳ್ಳುತ್ತೇನೆ.
ಮುಖ್ಯಮಂತ್ರಿಗಳ ಈ ಮುಂದಾಲೋಚನೆಯಿಲ್ಲದ ಆತುರದ ನಿರ್ಣಯಗಳ ಹಿಂದೆ ಇರುವುದು ಬಹುಶಃ ಒಂದಕ್ಕೊಂದು
ಪೂರಕವಾದ ಎರಡು ಕಾರಣಗಳು. ಒಂದು- ಮುಖ್ಯಮಂತ್ರಿ ಸ್ಥಾನಕ್ಕೆ
ತಮ್ಮ ಆಯ್ಕೆ ಅವಿರೋಧವಾದದ್ದಲ್ಲ ಎಂಬ ಅರಿವು ಅವರಿಗಿದೆ ಹಾಗೂ ಅದು ಯಾವಾಗ ಬೇಕಾದರೂ ತಮ್ಮ ಕೈತಪ್ಪಿಹೋಗಬಹುದೆಂಬ
ಕಳವಳ ಅವರನ್ನು ಕಾಡುತ್ತಿರಬಹುದು. ಸಿಕ್ಕಿದ ಅವಕಾಶದಲ್ಲಿ
ಏನನ್ನಾದರೂ ಸಾಧಿಸಿ ಜನಮಾನ್ಯನಾಗಬೇಕೆಂಬ ತುಡಿತ ಅವರಲ್ಲಿರಬಹುದು. ಆದರೆ ಅದು ಅರ್ಧರಾತ್ರಿಯಲ್ಲಿ ಕೊಡೆ ಹಿಡಿದಂತಾಗುತ್ತಿರುವುದು
ಅವರ ಇಲ್ಲಿಯವರೆಗಿನ ಅಧಿಕಾರಾವಧಿಯ ದುರಂತ.
ಎರಡು- ಸಧ್ಯಕ್ಕೆ ತಾತ್ಕಾಲಿಕ ಎಂದೆನಿಸುತ್ತಿರುವ ತಮ್ಮ ಅಧಿಕಾರಾವಧಿಯನ್ನು ಕೊನೇಪಕ್ಷ ಐದು ವರ್ಷಗಳವರೆಗೆ
ವಿಸ್ತರಿಸಲು ಸಿದ್ದರಾಮಯ್ಯನವರು ಎಣಿಕೆ ಹಾಕಿರಬಹುದು.
ಅದಕ್ಕಾಗಿ ಅವರು ಕಣ್ಣಿಟ್ಟಿರುವುದು ಮುಂದಿನ ಲೋಕಸಭಾ ಚುನಾವಣೆಗಳು. ತಮ್ಮ ಯೋಜನೆಗಳ ಮೂಲಕ ಕಾಂಗ್ರೆಸ್‌ನ ವೋಟ್‌ಬ್ಯಾಂಕ್‌ಗಳನ್ನು
ವಿಸ್ತರಿಸಿ ಹಿಂದೆ ದೇವರಾಜ ಅರಸು ಮಾಡಿದ್ದಂತೆ ಕರ್ನಾಟಕವನ್ನು ಕಾಂಗ್ರೆಸ್‌ನ ಭದ್ರಕೋಟೆಯನ್ನಾಗಿಸುವುದು, ತನ್ಮೂಲಕ ಪಕ್ಷದ ಹೈಕಮಾಂಡ್‌ಗೆ ತಾವು ಪ್ರಿಯ
ಹಾಗೂ ಅನಿವಾರ್ಯವೆನಿಸುವುದು.
ಉನ್ನತ ಸ್ಥಾನವನ್ನು ಬಯಸುವುದು, ಅದು ಸಿಕ್ಕಿದಾಗ ಅಧಿಕಾರಾವಧಿಯನ್ನು ವಿಸ್ತರಿಸಿಕೊಳ್ಳುವುದು ರಾಜಕಾರಣಿಯೊಬ್ಬರ
ಸಹಜಧರ್ಮ. ಇದಕ್ಕೆ ಸಿದ್ದರಾಮಯ್ಯನವರೂ ಹೊರತಲ್ಲ. ಹೊರತಾಗಕೂಡದು ಸಹಾ. ಆದರೆ ಅವರು ತಮ್ಮ ಉದ್ದೇಶಸಾಧನೆಗಾಗಿ ಆಯ್ಕೆಮಾಡಿಕೊಳ್ಳುತ್ತಿರುವ
ಮಾರ್ಗಗಳು ದೋಷಪೂರ್ಣ ಹಾಗೂ ಪ್ರತಿಗಾಮಿ. ಅಧಿಕಾರದಲ್ಲುಳಿಯಲು
ಅಲ್ಪಸಂಖ್ಯಾತರ ಓಲೈಕೆಯೇ ಪರಿಣಾಮಕಾರಿ ಮಾರ್ಗ ಎಂದವರು ತಿಳಿದಿದ್ದಾರೆ. ಜತೆಗೇ, ಅದೇ ಸೆಕ್ಯೂಲರಿಸಂ ಎಂದೂ ನಂಬಿದ್ದಾರೆ. ಅವರ ತಪ್ಪು ನಿರ್ಣಯಗಳಿಗೆ ಇದು ಮೂಲಕಾರಣ.
ಸೆಕ್ಯೂಲರಿಸಂನ ಆಧ್ವರ್ಯು ಜವಾಹರ್‌ಲಾಲ್ ನೆಹರೂ ಮುಸ್ಲಿಮರ ಪರ ನಿಂತದ್ದಕ್ಕೆ ಕಾರಣ ಅಲ್ಪಸಂಖ್ಯಾತರ
ಓಲೈಕೆಯೇ ಸೆಕ್ಯೂಲರಿಸಂ ಎಂದವರು ಭಾವಿಸಿದ್ದಲ್ಲ.
ವೋಟ್‌ಬ್ಯಾಂಕ್ ಸೃಷ್ಟಿಸಿಕೊಳ್ಳಬೇಕಾದ ಅಗತ್ಯವೂ ಅವರಿಗಿರಲಿಲ್ಲ. ವಾಸ್ತವವಾಗಿ ಅವರಿದ್ದ ಕಾಲಘಟ್ಟದಲ್ಲಿ ಮುಸ್ಲಿಮರ ಪರ ನಿಲ್ಲುವುದು
ಒಂದು ಐತಿಹಾಸಿಕ ಅಗತ್ಯವಾಗಿತ್ತು. ರಕ್ತರಂಜಿತ ದೇಶವಿಭಜನೆಗೆ
ಮುಸ್ಲಿಂ ಲೀಗ್ ಕಾರಣವಾದದ್ದು, ಅದರಿಂದಾಗಿ ದೇಶದಲ್ಲಿ ಉದ್ಭವವಾದ ಮುಸ್ಲಿಂ-ವಿರೋಧಿ ಭಾವನೆಗಳು ಇಲ್ಲಿನ
ಅಮಾಯಕ ಮುಸ್ಲಿಮರ ಬದುಕನ್ನು ಅತಂತ್ರಗೊಳಿಸದಂತೆ ತಡೆಯಲು, ಬಹುಸಂಖ್ಯಾತರಂತೆ ಅವರೂ ನಿಶ್ಚಿಂತೆಯಿಂದ
ತಮ್ಮ ಬದುಕನ್ನು ಕಟ್ಟಿಕೊಳ್ಳಲು ಅಗತ್ಯವಾದ ಸವಲತ್ತುಗಳನ್ನು ಒದಗಿಸುವುದು ಆ ದಿನಗಳಲ್ಲಿ ಅತ್ಯಗತ್ಯವಾಗಿತ್ತು. ಕಾಲದ ಅಗತ್ಯಕ್ಕಷ್ಟೇ ನೆಹರೂರ ಸೆಕ್ಯೂಲರಿಸಂನ ಒಂದು ಭಾಗವಾಗಿದ್ದ
ಈ ಮುಸ್ಲಿಂ-ಪರ ನೀತಿಗಳನ್ನೇ ಪೂರ್ಣ ಹಾಗೂ ನಿಜವಾದ ಸೆಕ್ಯೂಲರಿಸಂ ಎಂದು ತಪ್ಪಾಗಿ ಅರ್ಥೈಸಿದ ನಂತರದ
ನಾಯಕರು ಮತ್ತು ಬುದ್ಧಿಜೀವಿಗಳು ಅದೇ ಹಾದಿಯಲ್ಲಿ ಮುಂದುವರೆದು ಮುಸ್ಲಿಂ ಓಲೈಕೆಯನ್ನು ಸರಕಾರಿ ನೀತಿಯನ್ನಾಗಿಸಿಬಿಟ್ಟಿದ್ದಾರೆ. ಬದಲಾದ ಕಾಲ ಮತ್ತದರ ಹೊಸ ಅಗತ್ಯಗಳನ್ನು ಗುರುತಿಸುವುದರಲ್ಲಿ
ಇವರು ಹೀನಾಯವಾಗಿ ಸೋತಿದ್ದಾರೆ. ಇದನ್ನೊಂದು ಸೂಕ್ತ
ಉದಾಹರಣೆಯ ಮೂಲಕ ವಿವರಿಸಬಹುದು. ಶ್ರಾದ್ಧದ ದಿನ ಎಲ್ಲೆಲ್ಲೂ ಓಡಾಡಿ ಮೈಲಿಗೆ ಮಾಡುತ್ತದೆಂದು ಮನೆಯ
ಬೆಕ್ಕನ್ನು ಕಟ್ಟಿಹಾಕುವುದನ್ನು ಒಬ್ಬಾತ ರೂಢಿಸಿಕೊಂಡರೆ ನಂತರದ ತಲೆಮಾರುಗಳು ಅದನ್ನೊಂದು ಶಾಸ್ತ್ರವೆಂದು
ಬಗೆದು ಪ್ರತಿ ಶ್ರಾದ್ಧದಂದು ಎಲ್ಲಿಂದಾದರೂ ಬಡಪಾಯಿ ಬೆಕ್ಕೊಂದನ್ನು ಹಿಡಿದುತಂದು ಕಟ್ಟಿಹಾಕುವ ಮೂರ್ಖತನದಂತಿದೆ
ಈಗಿನವರ ಸೆಕ್ಯೂಲರಿಸಂ. ಈ ತಪ್ಪು ಹಾದಿಯಲ್ಲೇ ಸಿದ್ದರಾಮಯ್ಯ
ನಡೆಯಹೊರಟಿದ್ದಾರೆ.
ಹಾಗೆ ನೋಡಿದರೆ ಪ್ರಜ್ಞಾವಂತ ಸಾಹಿತಿಗಳು, ಬುದ್ಧಿಜೀವಿಗಳು ಹಾಗೂ ಪತ್ರಕರ್ತರ ಸಂಪರ್ಕ ಹಿಂದಿನ ಮುಖ್ಯಮಂತ್ರಿಗಳಿಗಿಂತಲೂ
ಸಿದ್ದರಾಮಯ್ಯನವರಿಗೆ ಅಧಿಕವಾಗಿದೆ. ದುರಂತವೆಂದರೆ
ಅವರಲ್ಲಿ ಹೆಚ್ಚಿನವರು ಶ್ರಾದ್ಧದಂದು ಹುಡುಕಾಡಿ ಬೆಕ್ಕು ಹಿಡಿದುತಂದು ಕಟ್ಟಿಹಾಕುವಂಥವರೇ ಆಗಿದ್ದಾರೆ. ಸಿದ್ದರಾಮಯ್ಯನವರಿಗೆ ಸರಿದಾರಿ ತೋರುವುದಿರಲಿ, ಮುಖ್ಯಮಂತ್ರಿಗಳ ಈಗಿನ ನೀತಿಗಳಿಂದಾಗಿ ತಮ್ಮ
ಮೌಲ್ಯಗಳು ಉತ್ತುಂಗಕ್ಕೇರುತ್ತಿವೆ ಎಂದು ಈ ಜನ ಬೀಗುವ ಸಾಧ್ಯತೆಯೇ ಹೆಚ್ಚಾಗಿದೆ.
ತಮ್ಮ ಅಲ್ಪಸಂಖ್ಯಾತ-ಪರ ನೀತಿಗಳು ಅಂತಿಮವಾಗಿ ಉದ್ದೇಶಕ್ಕೆ ವ್ಯತಿರಿಕ್ತ ಪರಿಣಾಮಗಳನ್ನುಂಟುಮಾಡುತ್ತವೆಂದು
ಮುಖ್ಯಮಂತ್ರಿಗಳಿಗೂ ಅವರ ಆಪ್ತವಲಯಕ್ಕೂ ತಿಳಿದಿಲ್ಲ.
ಅಲ್ಪಸಂಖ್ಯಾತರಿಗೆ ತಮ್ಮ ನಡುವೆ ಸುರಕ್ಷಿತ ವಾತಾವರಣವನ್ನು ನಿರ್ಮಿಸಿಕೊಡುವುದರ ಬಗ್ಗೆ ಹಿಂದೂಗಳಿಗೆ
ಯಾವ ಮುಖ್ಯಮಂತ್ರಿಯೂ, ಬುದ್ಧಿಜೀವಿಯೂ
ಹೇಳಿಕೊಡಬೇಕಾಗಿಲ್ಲ. ದೇವರನ್ನು ತಲುಪಲು ತನ್ನದಲ್ಲದೇ
ಬೇರೆ ಮಾರ್ಗಗಳೂ ಇವೆ ಎಂದು ಒಪ್ಪಿಕೊಂಡಿರುವುದರಿಂದಲೇ ಹಿಂದೂಧರ್ಮ ತನ್ನ ನಡುವೆ ಬದುಕಿ ಬೆಳೆಯಲು
ಇತರರಿಗೆ ಅನಾದಿಕಾಲದಿಂದಲೂ ಅವಕಾಶ ಮಾಡಿಕೊಟ್ಟಿದೆ.
ತಮ್ಮದೊಂದೇ ಮಾರ್ಗ ಎಂದು ನಂಬಿದ ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿಗಳು ಇತಿಹಾಸದುದ್ದಕ್ಕೂ
ಇತರರೊಡನೆ ಹೊಂದಿಕೊಳ್ಳದೇ ಕಾಳಗ ನಡೆಸುತ್ತಲೇ ಬಂದಿವೆ.
ಈಗಲೂ ಅವು ಪರಮತಸಹಿಷ್ಣುವಾಗಿಲ್ಲ ಎನ್ನುವುದು ಪಾಕಿಸ್ತಾನ, ಬಾಂಗ್ಲಾದೇಶ, ಪಶ್ಚಿಮ ಏಶಿಯಾದಲ್ಲಿ ಢಾಣಾಡಂಗುರವಾಗಿ ಸಾರಲ್ಪದುತ್ತಿದೆ. ಮುಂದುವರೆದ ಯೂರೋಪ್ ಮತ್ತು ಅಮೆರಿಕಾದಲ್ಲೂ ಸೆಮೆಟಿಕ್-ವಿರೋಧಿ
ಭಾವನೆ ಸಾರ್ವತ್ರಿಕವಾಗಿದೆ. ಇದನ್ನು ಗುರುತಿಸದೇ, ಅಲ್ಪಸಂಖ್ಯಾತರ ಉದ್ದಾರ ತಮ್ಮಿಂದ ಮಾತ್ರ
ಸಾಧ್ಯ ಎಂದು ತಿಳಿಯುವ ರಾಜಕೀಯ ನೇತಾರರು ಅಂತಿಮವಾಗಿ ಹಿಂದೂಗಳಲ್ಲಿ ಅಭದ್ರತೆಯ ಭಾವನೆ ಉಂಟುಮಾಡಿ
ಅವರು ಸಿಡಿದೇಳುವಂತೆ ಮಾಡುತ್ತಾರೆ. ಇದರ ದುಷ್ಪರಿಣಾಮ
ತಟ್ಟುವುದು ಅಲ್ಪಸಂಖ್ಯಾತರ ಮೇಲೆ. ಈ ದೇಶದಲ್ಲಿ ಅಲ್ಪಸಂಖ್ಯಾತರು
ಸುರಕ್ಷಿತವಾಗಿರಬೇಕೆಂದರೆ ಬಹುಸಂಖ್ಯಾತರಲ್ಲಿ ಅಭದ್ರತೆಯ ಭಾವನೆಯನ್ನುಂಟು ಮಾಡಬಾರದೆಂಬ ಸುವರ್ಣ ಸೂತ್ರವನ್ನು
ಸಿದ್ದರಾಮಯ್ಯನವರೂ ಅವರ ಸುತ್ತ ಇರುವ ಜ್ಞಾನಿಗಳು ಅರಿಯುವುದು ಅಗತ್ಯ.
ಯಾವುದೇ ಜನಪರ, ಮನುಷ್ಯಪ್ರೀತಿಯ
ಸಂಸ್ಥೆ ಆರಂಭದಲ್ಲಿ ಉದಾತ್ತ ಧ್ಯೇಯಗಳೊಂದಿಗೇ ಕಾರ್ಯಾರಂಭ ಮಾಡುತ್ತದೆ. ಇದಕ್ಕೆ ಕಾರಣ ಸಂಸ್ಥೆಯ ಸೃಷ್ಟಿಕರ್ತರ ಮೇರುಮೌಲ್ಯಗಳು, ಕೊಳಕನ್ನು ತೊಳೆದು ಸ್ವಚ್ಛ ಹೊಸಯುಗವೊಂದಕ್ಕೆ
ನಾಂದಿ ಹಾಡಬೇಕೆನ್ನುವ ಅವರ ತುಡಿತ. ಆದರೆ ನಂತರದ
ತಲೆಮಾರಿನ ನಾಯಕರಲ್ಲಿ ಇದೇ ತುಡಿತ, ಉದಾತ್ತ ಧ್ಯೇಯಗಳು ಕ್ಷೀಣಿಸುತ್ತಾ ಸಾಗುತ್ತವೆ. ಪರಿಣಾಮವಾಗಿ ಸಂಸ್ಥೆ ಅಧೋಗತಿಗಿಳಿಯುತ್ತದೆ, ಅದರಲ್ಲಿ ಮನುಷ್ಯಪ್ರೀತಿ ಮಾಯವಾಗುತ್ತದೆ. ಅದರ ಅಸ್ತಿತ್ವ ಕೆಲವೇ ಜನರ ಸ್ವಾರ್ಥ ಸಾಧನೆಗಾಗಷ್ಟೇ ಉಳಿಯುತ್ತದೆ. ಇದು ರಾಜ್ಯ ಅಂದರೆ ಒಂದು ನಿರ್ದಿಷ್ಟ ಪ್ರದೇಶದಲ್ಲಿನ ಜನರ
ನಡುವೆ ಸಮಾನ ನ್ಯಾಯಹಂಚಿಕೆಗಾಗಿ ತನ್ಮೂಲಕ ಅವರೆಲ್ಲರ ಹಿತಸಾಧನೆಗಾಗಿ ಸ್ಥಾಪಿತವಾದ ಪರಮಾಧಿಕಾರವುಳ್ಳ
ಆಡಳಿತ ವ್ಯವಸ್ಥೆಗೂ ಅನ್ವಯಿಸುತ್ತದೆ. ಈ ಮಾತು ರಾಜಕೀಯ
ಚಿಂತಕ ಥಾಮಸ್ ಹಾಬ್ಸ್‌ನ ಪರಿಕಲ್ಪನೆಯ “ಅರಣ್ಯ ಕಾನೂನು”, ಅದರ ಪರಿಣಾಮವಾದ
ದುರ್ಭರ ಬದುಕನ್ನು ಸಹನೀಯಗೊಳಿಸಿಕೊಳ್ಳಲು ಇತಿಹಾಸಪೂರ್ವ ಕಾಲದಲ್ಲಿ ಮನುಷ್ಯ ಸೃಷ್ಟಿಸಿಕೊಂಡಿರಬಹುದಾದ
ರಾಜ್ಯ ಅಥವಾ ಸಮಾನ ನ್ಯಾಯಹಂಚಿಕಾವ್ಯವಸ್ಥೆಯಿಂದ ಹಿಡಿದು ೧೯೫೬ರಲ್ಲಿ ಏಕೀಕರಣಗೊಂಡ ಕರ್ನಾಟಕ ರಾಜ್ಯಕ್ಕೂ
ಅನ್ವಯಿಸುತ್ತದೆ. ಐವತ್ತೇಳು ವರ್ಷಗಳ ಹಿಂದೆ ನಮ್ಮ
ಚೆಲುವ ಕನ್ನಡನಾಡು ಮಹಾರಾಜರ ಮಾದರಿ ಮೈಸೂರಿನಿಂದ ಮೈಸೂರು ರಾಜ್ಯದ ಅವತಾರವೆತ್ತಿ, ಹದಿನೇಳರ ಜಾರುವ ಹರಯದಲ್ಲಿ ಕರ್ನಾಟಕವಾಗಿ
ಮೆಜಾರಿಟಿಗೆ ಬಂದಿತೋ ಆಗಿನಿಂದ ಹಲವು ಹತ್ತು ದುರ್ನಾಟಕಗಳಿಗೆ ರಂಗವಾದದ್ದನ್ನು ನೋಡುತ್ತಲೇ ಬಂದಿದ್ದೇವೆ. ಐದಾರು ದಶಕಗಳ ಹಿಂದೆ ಕನಸುಗಳನ್ನು ಸಾಕಾರಗೊಳಿಸಬೇಕಾಗಿದ್ದ
ಆ ಪರೀಕ್ಷಾದಿನಗಳಲ್ಲಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಏಕೀಕರಣ, ಸಕಲ ಕನ್ನಡಿಗರ ಹಿತಗಳೆಂಬ ಮಾಂತ್ರಿಕ ಶಬ್ಧಗಳು ನಮ್ಮ ನಾಯಕರುಗಳನ್ನು ಆದರ್ಶದ
ಹಾದಿಯಲ್ಲಿ ಮುನ್ನಡೆಸಿದ್ದು ಸಹಜವೇ ಆಗಿತ್ತು. ಹೀಗಾಗಿ
ಐವತ್ತು-ಅರವತ್ತರ ದಶಕಗಳಲ್ಲಿನ ಆರಂಭದ ಮುಖ್ಯಮಂತ್ರಿಗಳ ಕಾಲ ಭ್ರಷ್ಟಾಚಾರಗಳ ಕಳೆಗಳು ಬೆಳೆಯಲು ಫಲವತ್ತಾದ
ನೆಲವಾಗಿರಲಿಲ್ಲ. ನಂತರದ ಎಪ್ಪತ್ತರ ದಶಕದ ವೀರೇಂದ್ರ
ಪಾಟೀಲ್ ಮತ್ತು ದೇವರಾಜ ಅರಸರ ಕಾಲದಲ್ಲಿ ಹ್ಯಾಮ್ಲೆಟ್ ಕಾಂಪ್ಲೆಕ್ಸ್‍ನಲ್ಲಿ ತೊಳಲಾಡುತ್ತಾ ನಾಚಿಕೆಯಲ್ಲಿ
ಪರದೆಯ ಮರೆಯಲ್ಲೇ ಇರುತ್ತಿದ್ದ ಸ್ವಜನ ಪಕ್ಷಪಾತ, ಆರ್ಥಿಕ ಹಾಗೂ ನೈತಿಕ ಭ್ರಷ್ಟಾಚಾರಗಳೆಂಬ
ಅನಿಷ್ಟಗಳು ನಂತರದ ದಿನಗಳಲ್ಲಿ `ಎಲ್ಲವನ್ನೂ ಬಿಟ್ಟು' ಬೀದಿಯಲ್ಲಿ ಬೆತ್ತಲೆ ತಿರುಗತೊಡಗಿದವು. ಈಗ ಆ ಅನಿಷ್ಟಗಳ ಜತೆ ವಿರೂಪಗೊಂಡ ಸೆಕ್ಯೂಲರಿಸಂ ಸಹಾ ಸೇರಿಕೊಂಡಿದೆ.
ಇಂತಹ ನಿರಾಶಾದಾಯಕ ಸನ್ನಿವೇಶದಲ್ಲಿ ನಮಗೆಂತಹ ಸರಕಾರ ಬೇಕು ಎನ್ನುವುದನ್ನು ಒಂದು ಒಟ್ಟಾರೆ ಸಮಾಜವಾಗಿ
ಬಯಸುವ ಸ್ವಾತಂತ್ರವನ್ನು ನಾವೆಂದೋ ಕಳೆದುಕೊಂಡಿದ್ದೇವೆ.
ಬದಲಿಗೆ, ಇರುವ ಸರಕಾರದಿಂದ
ತನಗೆಷ್ಟು ಗಿಟ್ಟಬಹುದೆಂದು ಪ್ರತಿಯೊಬ್ಬ ವ್ಯಕ್ತಿಯೂ ವೈಯುಕ್ತಿಕವಾಗಿ ಲೆಕ್ಕಹಾಕುವ ದುರ್ಗತಿಗಿಳಿದಿದ್ದೇವೆ. ಹೀಗೆ ಲೆಕ್ಕ ಹಾಕುವವರರಲ್ಲಿ ಹಸಿದ ಹೊಟ್ಟೆ ಸೇರಬೇಕಾದ ಅನ್ನಭಾಗ್ಯ
ಯೋಜನೆಯ ಅಕ್ಕಿಯನ್ನು ಕದ್ದು ಹಣ ಮಾಡಿಕೊಳ್ಳುವ ಕಾರಕೂನನಿಂದ ಹಿಡಿದು ಕನ್ನಡದ 'ಒಳ್ಳೆಯ ಮನಸ್ಸುಗಳು' ಹಾಗೂ 'ಸಾಕ್ಷಿಪ್ರಜ್ಞೆ'ಗಳೂ ಸೇರಿವೆ. ಇದರ ಅರಿವು ಮುಖ್ಯಮಂತ್ರಿಗಳಿಗೆ ಇರಬೇಕಾದ ಅಗತ್ಯವಿದೆ. ಈಗ ಸಾಗುತ್ತಿರುವ ಸೈದ್ಧಾಂತಿಕ ಇಳಿಜಾರಿನ ಹಾದಿಯಿಂದ ವಿಮುಖರಾಗದೇ
ಯಶಸ್ವಿ ನಾಯಕನಾಗುವುದು ಸಾಧ್ಯವಿಲ್ಲ ಎನ್ನುವುದನ್ನು ಸಿದ್ದರಾಮಯ್ಯ ಅರಿಯಬೇಕಿದೆ. ಆರು ದಶಕಗಳ ಹಿಂದೆ ರಾಜ್ಯದ ಉದಯದ ಹಿಂದಿದ್ದ ಆ ಉದಾತ್ತ
ಧ್ಯೇಯಗಳಿಗೆ, ಮುಖ್ಯವಾಗಿ “ಸಕಲ ಕನ್ನಡಿಗರ ಹಿತ”ದ ಕಾರ್ಯಕ್ರಮಗಳಿಗೆ ಹಿಂತಿರುಗುವುದರ ಮೂಲಕವಷ್ಟೇ
ತಾವೊಬ್ಬ ಯಶಸ್ವಿ ಮುಖ್ಯಮಂತ್ರಿಯಾಗಬಹುದು ಎಂಬ ಸತ್ಯವನ್ನು ಅವರು ಎಷ್ಟು ಬೇಗ ಅರ್ಥ ಮಾಡಿಕೊಳ್ಳುತ್ತಾರೋ
ಅಷ್ಟು ಬೇಗ ಅವರ ಆಡಳಿತ ಪರಿಣಾಮಕಾರಿ ಹಾಗೂ ಜನಮಾನ್ಯವಾಗತೊಡಗುತ್ತದೆ. ತಾವು ಬಯಸುತ್ತಿರುವ ಜನಪ್ರಿಯತೆಯನ್ನು
ಗಳಿಸುವುದರಲ್ಲಿ ಅವರು ಸಫಲರಾಗುತ್ತಾರೆ. ಪರಿಣಾಮವಾಗಿ
ಅವರ ಅಧಿಕಾರಾವಧಿ ವಿಸ್ತರಿಸಲೂಬಹುದು. ಇದರರ್ಥ, ಅವರ ಉದ್ದೇಶಗಳೆಲ್ಲವೂ ಈಡೇರುತ್ತವೆ.
No comments:
Post a Comment