ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Monday, October 14, 2013

ಮುಂದಿನ ಚುನಾವಣೆಗಳ ಅಸ್ಪಷ್ಟ ಮುಖಗಳು


ಭಾಗ - ೧
ನಮೋ ಮತ್ತು ರಾಗಾ

ಸ್ವತಂತ್ರ ಭಾರತದ ಹದಿನಾರನೆಯ ಲೋಕಸಭೆಯ ರಚನೆಗಾಗಿ ಮುಂದಿನ ವರ್ಷದ ಬೇಸಗೆಯಲ್ಲಿ ನಡೆಯಬೇಕಾಗಿರುವ ಸಾರ್ವತ್ರಿಕ ಚುನಾವಣೆಗಳಿಗೆ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳೂ ಭರದಿಂದ ತಯಾರಿ ಆರಂಭಿಸಿವೆ.  ಪ್ರಧಾನಮಂತ್ರಿ ಸ್ಥಾನಕ್ಕೆ ರಾಹುಲ್ ಗಾಂಧಿಯವರ ಅರ್ಹತೆಯನ್ನು ಜನತೆಗೆ ಮನದಟ್ಟು ಮಾಡಿಕೊಡುವ ಕಾರ್ಯದಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸದ್ದುಗದ್ದಲವಿಲ್ಲದೇ ತೊಡಗಿಕೊಂಡಿದ್ದರೆ ಭಾರತೀಯ ಜನತಾ ಪಕ್ಷ ಒಂದು ಹೆಚ್ಚೆ ಮುಂದೆ ಹೋಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ತನ್ನ ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಅಧಿಕೃತವಾಗಿ ಘೋಷಿಸಿದೆ.  ಮೋದಿಯವರ ಬಗೆಗಿನ ಬಿಜೆಪಿಯ ನಿರ್ಣಯ, ಅದು ಹೊರಬಂದ ಬಗೆ ಮಾಧ್ಯಮಗಳಲ್ಲಿ ತೀವ್ರ ಚರ್ಚೆ, ವಾದವಿವಾದಗಳಿಗೆ ಗ್ರಾಸವಾಗಿದೆ.  ಪ್ರಧಾನಮಂತ್ರಿ ಅಭ್ಯರ್ಥಿಯನ್ನು ಚುನಾವಣೆಗೆ ಮೊದಲೇ ಘೋಷಿಸುವ 'ಕೆಟ್ಟ' ಸಂಪ್ರದಾಯವೊಂದಕ್ಕೆ ಬಿಜೆಪಿ ನಾಂದಿ ಹಾಡಿದೆ ಎಂಬ ಕಟು ಟೀಕೆಗಳು ಮಾಧ್ಯಮದಿಂದಷ್ಟೇ ಅಲ್ಲ, ಕಾಂಗ್ರೆಸ್ ವಲಯಗಳಿಂದಲೂ ಕೇಳಿಬರುತ್ತಿವೆ.
ರಾಹುಲ್ ಗಾಂಧಿ ತನ್ನ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಕಾಂಗ್ರೆಸ್ ಅಧಿಕೃತವಾಗಿ ಘೋಷಿಸಿಲ್ಲ, ನಿಜ.  ಹಾಗೆ ಘೋಷಿಸುವ ಸಂಪ್ರದಾಯವನ್ನೂ ಅದು ರೂಢಿಸಿಕೊಂಡು ಬಂದಿಲ್ಲ.  ಅದರ ಅಗತ್ಯವೂ ಇದುವರೆಗೆ ಬಂದದ್ದಿಲ್ಲ.  ಅದೇ ನೀತಿಯನ್ನು ಅನುಸರಿಸಿಕೊಂಡು ಬಂದಿದ್ದ ಬಿಜೆಪಿ ಈಗ ಹಲವು ಕಾರಣಗಳಿಂದಾಗಿ ಆ ಸಂಪ್ರದಾಯವನ್ನು ಮುರಿಯುವ ಒತ್ತಡಕ್ಕೆ ಸಿಲುಕಿಕೊಂಡಿದೆ.  ಈ ಬೆಳವಣಿಗೆಗಳನ್ನು ಹಾಗೂ ಇವುಗಳಿಗೆ ಸಂಬಂಧಿಸಿದ ಐತಿಹಾಸಿಕ ಹಿನ್ನೆಲೆ ಮತ್ತು ವರ್ತಮಾನದ ಅಗತ್ಯಗಳನ್ನು ವಿವರಿಸಲು ಎರಡು ಭಾಗಗಳ ಈ ಲೇಖನದಲ್ಲಿ ಪ್ರಯತ್ನಿಸುತ್ತೇನೆ.  ರಾಜಕಾರಣವನ್ನು ವಿಂಗಡಿಸುವ ಬಗ್ಗೆ ಅಥವಾ ವ್ಯವಸ್ಥೆಯೊಂದರಲ್ಲಿ ಅಸ್ತಿತ್ವದಲ್ಲಿರುವ ವಿವಿಧ ಬಗೆಯ ರಾಜಕಾರಣಗಳನ್ನು ಗುರುತಿಸುವ ಬಗ್ಗೆ ರಾಜ್ಯಶಾಸ್ತ್ರದಲ್ಲಿ ಪ್ರಚಲಿತದಲ್ಲಿರುವ ವಿಧಾನವೊಂದರ ಮೂಲಕ ನನ್ನೀ ವಿಶ್ಲೇಷಣೆಯನ್ನು ಆರಂಭಿಸುತ್ತೇನೆ.
            'ಪ್ರಜಾಸತ್ತಾತ್ಮಕ ರಾಜಕಾರಣ ಹಾಗೂ ನಿರಂಕುಶ ರಾಜಕಾರಣ' ಎನ್ನುವುದು ರಾಜಕಾರಣವನ್ನು ವಿಭಾಗಿಸುವ ಹಲವು ಬಗೆಗಳಲ್ಲೊಂದು.  ಭಿನ್ನಮತವನ್ನು ಸಹಿಸದ, ವಿರೋಧವನ್ನು ಉಕ್ಕಿನ ಹೊಡೆತದಿಂದ ಹತ್ತಿಕ್ಕುವ ರಾಜಕಾರಣವನ್ನು ನಿರಂಕುಶ ರಾಜಕಾರಣವೆಂದೂ, ಭಿನ್ನಮತವನ್ನು ಗೌರವಿಸುವ ಆದರೆ ವಾದವಿವಾದ, ಚರ್ಚೆ, ಸಂಧಾನಗಳ ಮೂಲಕ ಅಂತಿಮವಾಗಿ ಒಮ್ಮತಕ್ಕೆ ಬರುವ ರಾಜಕಾರಣವನ್ನು ಪ್ರಜಾಸತ್ತಾತ್ಮಕ ರಾಜಕಾರಣವೆಂದೂ ಸ್ಥೂಲವಾಗಿ ವಿವರಿಸಬಹುದು.  ಕಾಂಗ್ರೆಸ್ ಮತ್ತು ಬಿಜೆಪಿಗಳ ಇದುವರೆಗಿನ ಆಂತರಿಕ ವಿದ್ಯಮಾನಗಳನ್ನು ವಸ್ತುನಿಷ್ಟವಾಗಿ ಅವಲೋಕಿಸಿದರೆ ನಿರಂಕುಶ ರಾಜಕಾರಣಕ್ಕೆ ಕಾಂಗ್ರೆಸ್ ಹಾಗೂ ಪ್ರಜಾಸತ್ತಾತ್ಮಕ ರಾಜಕಾರಣಕ್ಕೆ ಬಿಜೆಪಿ ಉದಾಹರಣೆಯಾಗಿರುವುದು ಕಂಡುಬರುತ್ತದೆ.  ಭಿನ್ನಮತಗಳ ಒತ್ತಡಕ್ಕೆ ಸಿಲುಕಿದಾಗ ಕಾಂಗ್ರೆಸ್ ಬಾಗುವುದಿಲ್ಲ, ಬದಲಾಗಿ ಮುರಿಯುತ್ತದೆ.  ಇದಕ್ಕೆ ವಿರುದ್ಧವಾಗಿ ಬಿಜೆಪಿ ಬಾಗುತ್ತದೆ, ಮುರಿಯುವುದಿಲ್ಲ.
            ಭಿನ್ನಮತವನ್ನು ಸಹಿಸದ ವರ್ತನೆಯನ್ನು ಕಾಂಗ್ರೆಸ್‌ನಲ್ಲಿ ಶತಮಾನದಿಂದಲೂ ಗುರುತಿಸಬಹುದು.  ೧೯೦೮ರಲ್ಲಿ ಉಗ್ರಗಾಮಿಗಳು ಮತ್ತು ಮಂದಗಾಮಿಗಳು ಎಂದು ಒಡೆದ ಕಾಂಗ್ರೆಸ್ ಅತ್ಯುಗ್ರ ಮಟ್ಟದ ನಿರಂಕುಶತೆಯನ್ನು ಪ್ರದರ್ಶಿಸಿದ್ದು ೧೯೨೭ರಲ್ಲಿ.  ಹಿಂದೂ-ಮುಸ್ಲಿಂ ಭಾವೈಕ್ಯತೆಯ ಹರಿಕಾರರಾಗಿದ್ದ ಮಹಮದ್ ಆಲಿ ಜಿನ್ನಾರಿಗೆ ಕಾಂಗ್ರೆಸ್ ವ್ಯವಹಾರಗಳಲ್ಲಿ ಅರ್ಹ ಪಾತ್ರ ನೀಡಲು ಮಹಾತ್ಮ ಗಾಂಧಿ ನಿರ್ಣಾಯಕವಾಗಿ ತೀರ್ಮಾನಿಸಿದ ವಿನಾಶಕಾರಿ ಬೆಳವಣಿಗೆ, ಅವರ ಅಭಿಮಾನಿಗಳು ಕಾಂಗ್ರೆಸ್ ಸಮಾವೇಶದ ವೇದಿಕೆಯಿಂದ ಜಿನ್ನಾರನ್ನು ಬಲವಂತವಾಗಿ ಕೆಳಗೆಳೆದು ತಂದ ವಿಷಾದಕರ ಘಟನೆ ನಡೆದದ್ದು ಆ ವರ್ಷ.  ತೀವ್ರವಾಗಿ ಮನನೊಂದ ಜಿನ್ನಾ ರಾಷ್ಟ್ರರಾಜಕಾರಣದಿಂದಲೇ ದೂರ ಸರಿಯತೊಡಗಿದರು.  ಆನಂತರ ವಿಭಜನಾಶಕ್ತಿಗಳು ಆ ಅದ್ಟುತ ವಾಗ್ಮಿಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಅವರ ಪ್ರಚಂಡ ಬುದ್ಧಿಮತ್ತೆಯನ್ನೆಲ್ಲಾ ಪಾಕಿಸ್ತಾನದ ಸೃಷ್ಟಿಗಾಗಿ ಬಳಸಿಕೊಳ್ಳಲು ಹೆಚ್ಚುಕಾಲ ಬೇಕಾಗಲಿಲ್ಲ.  ಆನಂತರವೂ ಮಹಾತ್ಮರ ನಿಲುವು ನೀತಿಗಳು ಸುಭಾಶ್ ಚಂದ್ರ ಬೋಸ್, ಸರ್ದಾರ್ ಪಟೇಲ್ ಮುಂತಾದ ಪ್ರಜ್ಞಾವಂತ, ಜವಾಬ್ದಾರಿಯುತ ನಾಯಕರ ಪೂರ್ಣ ಸೇವೆಯಿಂದ ರಾಷ್ಟ್ರ ವಂಚಿತವಾಗುವುದಕ್ಕೆ ಕಾರಣವಾದವು.
            ಸ್ವಾತಂತ್ರಾನಂತರ, ತನ್ನ ಕೆಳಗೆ ಬೇರಾವ ವೃಕ್ಷವೂ ಬೆಳೆಯದಂತೆ ನೋಡಿಕೊಳ್ಳುವ ಆಲದಮರದಂತೆ ರಾಷ್ಟ್ರರಾಜಕಾರಣದಲ್ಲಿ ತಾನೇ ತಾನಾಗಿ ಆವರಿಸಿಕೊಂಡ ನೆಹರೂ ದ್ವಿತೀಯ ಸ್ತರದ ನಾಯಕವರ್ಗ ತಲೆಯೆತ್ತಲು ಅವಕಾಶವನ್ನೇ ನೀಡಲಿಲ್ಲ.  ಆ ದಿನದಲ್ಲಿ ಪ್ರಚಲಿತವಿದ್ದ 'ನೆಹರೂ ನಂತರ ಯಾರು?' ಎಂಬ ಪ್ರಶ್ನೆ ರಾಷ್ಟ್ರರಾಜಕಾರಣದ ಒಂದು ಅತಿ ದೊಡ್ಡ ಶೂನ್ಯತೆಯತ್ತ ಬೆರಳು ಮಾಡುತ್ತಿತ್ತು.  ಅವರ ನಿಧನಾನಂತರ ಲಾಲ್ ಬಹಾದುರ್ ಶಾಸ್ತ್ರಿಯವರ ಅಧಿಕಾರ ಒಂದು ಮಧ್ಯಂತರ ವ್ಯವಸ್ಥೆಯಷ್ಟೇ ಆಗಿತ್ತು.  ಕೇಂದ್ರಮಂತ್ರಿಯಾಗಿ ಇಂದಿರಾ ಗಾಂಧಿ ಆಡಳಿತಾನುಭವ ಗಳಿಸಿಕೊಳ್ಳಲು ಶಾಸ್ತ್ರಿ ಮಂತ್ರಿಮಂಡಲ ವೇದಿಕೆ ಕಲ್ಪಿಸಿಕೊಟ್ಟಿತಷ್ಟೇ.  ಇಂದಿರಾರ ಅಧಿಕಾರಕ್ಕೆ ವಿರೋಧ ತೋರಿದ ಮೊರಾರ್ಜಿ ದೇಸಾಯಿ, ಚರಣ್ ಸಿಂಗ್ ಮುಂತಾದ ಹಿರಿಯ ನಾಯಕರಿಗೆ ಉಳಿದ ದಾರಿ ಕಾಂಗ್ರೆಸ್ ತೊರೆಯುವುದು.  ಸಂಧಾನಕ್ಕೆ, ಭಿನ್ನಮತವನ್ನು ಅಂತರ್ಗತಗೊಳಿಸಿಕೊಳ್ಳುವುದಕ್ಕೆ ಅವಕಾಶವೇ ಇರಲಿಲ್ಲ.  ೧೯೬೯ರಲ್ಲಿ ಬೆಂಗಳೂರಿನ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಕಾಂಗ್ರೆಸ್ ಎರಡು ಹೋಳಾಯಿತು.  ಅನಂತರ ಶ್ರೀಮತಿ ಇಂದಿರಾ ಗಾಂಧಿ ದೇಶ ಕಂಡ ಅತ್ಯುತ್ತಮ ಪ್ರಧಾನಮಂತ್ರಿಯಾಗಿ ಹೊರಹೊಮ್ಮಿದ್ದು ಈ ನಾಡಿನ ಅದೃಷ್ಟ.  ಆವರ ತಂದೆಯನ್ನೂ ಸೇರಿದಂತೆ ಉಳಿದೆಲ್ಲರ ಬಗ್ಗೆ ಹೀಗೆ ಹೇಳಲಾಗುವುದಿಲ್ಲ.  ಅದು ದುರಂತ.
ಮತ್ತೆ, ೧೯೭೭ರಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಎರಡು ಹೋಳು.  ಬಹುಪಾಲು ಈ ಎಲ್ಲಾ ವಿಭಜನೆಗಳಲ್ಲೂ ನೆಹರೂ-ಗಾಂಧಿ ಕುಟುಂಬಕ್ಕೆ ಸವಾಲೊಡ್ಡಿದ ವ್ಯಕ್ತಿಗಳು ಹಾಗೂ ಗುಂಪುಗಳು ಅಂತಿಮವಾಗಿ ತಮ್ಮೆಲ್ಲಾ ಸ್ವಾಭಿಮಾನವನ್ನು ಬದಿಗಿಟ್ಟು ಮಾತೃಪಕ್ಷಕ್ಕೆ ಹಿಂತಿರುಗಿ 'ಜೀಯ ಹಸಾದ' ಎಂಬ ನಿಲುವು ತಳೆದು ಸಿಕ್ಕಷ್ಟು ಕಾಲ ಅಧಿಕಾರ ಅನುಭವಿಸಿದ್ದು ಕಂಡುಬರುತ್ತದೆ.  ಸಂಸ್ಥಾ ಕಾಂಗ್ರೆಸ್ ಸೇರಿದ್ದ ವೀರೇಂದ್ರ ಪಾಟೀಲ್, ಕರ್ನಾಟಕ ಕ್ರಾಂತಿರಂಗ ಕಟ್ಟಿದ ಬಂಗಾರಪ್ಪ, ತಮಿಳ್ ಮಾಣಿಲ ಕಾಂಗ್ರೆಸ್ ಹುಟ್ಟುಹಾಕಿದ್ದ ಚಿದಂಬರಂ ಕೆಲವು ಉದಾಹರಣೆಗಳು.  ಸ್ವಾಭಿಮಾನಿ ದೇವರಾಜ ಅರಸ್, ಅರ್ಜುನ್ ಸಿಂಗ್‌ರಂಥವರು ಅಪವಾದಗಷ್ಟೇ.  ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್, ಶರದ್ ಪವಾರರ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ಸ್ವತಂತ್ರ ಅಸ್ತಿತ್ವ ಹೊಂದಿದ್ದರೂ ಅಧಿಕಾರಕ್ಕಾಗಿ ಕಾಂಗ್ರೆಸ್ ಮೇಲೆ ಅವಲಂಬಿತವಾಗಿರುವುದು ಅವು ಮಾಡಿಕೊಂಡ 'ಹೊಂದಾಣಿಕೆ'ಯ ಕುರುಹು ನೀಡುತ್ತವೆ ಮತ್ತು ಮುಂದೊಂದು ದಿನ ಅವು ಹಿಂದೆ ಹಲವರು ಮಾಡಿದಂತೆ ನೆಹರೂ-ಗಾಂಧಿ ಕುಟುಂಬದ ಹಿಡಿತದಲ್ಲಿರುವ ಮಾತೃಪಕ್ಷಕ್ಕೆ ಹಿಂತಿರುಗಲೂಬಹುದು ಎಂಬ ಸೂಚನೆಯನ್ನೂ ನೀಡುತ್ತವೆ.
            ನೆಹರೂ-ಗಾಂಧಿ ಕುಟುಂಬದ ಹಿಡಿತದಲ್ಲಿರುವ ಮಾತೃಪಕ್ಷಕ್ಕೆ ಹಿಂತಿರುಗುವುದು ಅಂದರೆ ಆ ಕುಟುಂಬದ ಪ್ರಮುಖ ಸದಸ್ಯರೊಬ್ಬರನ್ನು ನಾಯಕ ಅಥವಾ ನಾಯಕಿ ಎಂದು ಪೂರ್ಣಮನಸ್ಸಿನಿಂದ ಸ್ವೀಕರಿಸಿ ನಿಷ್ಟರಾಗಿ ನಡೆದುಕೊಳ್ಳುವುದು.  ಇದುವರೆಗೂ ಹೀಗೆಯೇ ನಡೆದಿರುವುದರಿಂದ ಮತ್ತು ನೆಹರೂ-ಗಾಂಧಿ ಕುಟುಂಬಕ್ಕೆ ವಿರೋಧವೇ ಇಲ್ಲದ ಪರಿಸ್ಥಿತಿ ಬಹುತೇಕ ಸನ್ನಿವೇಶಗಳಲ್ಲಿ ನಿರ್ಮಾಣವಾಗಿರುವ ಐತಿಹಾಸಿಕ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಚುನಾವಣಾ ವಿಜಯ ಸಾಧಿಸಿದಲ್ಲಿ ಆ ಕುಟುಂಬದ ಸದಸ್ಯರೊಬ್ಬರೇ ಪ್ರಧಾನಮಂತ್ರಿಯಾಗುವುದೂ ಐತಿಹಾಸಿಕ ವಾಸ್ತವಗಳೇ ಆಗಿದೆ.  ಹೀಗಾಗಿ ಚುನಾವಣೆಗೆ ಮೊದಲೇ ತನ್ನ ಪ್ರಧಾನಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ಅಗತ್ಯವೇ ಕಾಂಗ್ರೆಸ್‌ಗೆ ಎದುರಾಗಿಲ್ಲ.  ಜವಾಹರ್‌ಲಾಲ್ ನೆಹರೂ ಅವರ ಆಳ್ವಿಕೆಯಲ್ಲಿ ನಡೆದ ಮೂರು ಚುನಾವಣೆಗಳಲ್ಲಿ ಅವರಲ್ಲದೇ ಬೇರಾರೂ ಪ್ರಧಾನಮಂತ್ರಿಯಾಗುವ ಕನಸನ್ನೂ ಕಾಣಲಾಗಲಿಲ್ಲ.  ಹಾಗೆಯೇ ಇಂದಿರಾ ನೇತೃತ್ವದ ಕಾಂಗ್ರೆಸ್ ಸಾಧಿಸಿದ ಮೂರು ಚುನಾವಣಾ ವಿಜಯಗಳು ಅವರನ್ನೇ ಪ್ರಧಾನಮಂತ್ರಿಯನ್ನಾಗಿಸಿದವು.  ಅವರ ಬದಲು ಬೇರಾರೋ ಪ್ರಧಾನಿಯಾಗುತ್ತಾರೆಂದು ಕಾಂಗ್ರೆಸ್ ಸದಸ್ಯರಿರಲಿ ಜನಸಾಮಾನ್ಯರೂ ನಿರೀಕ್ಷಿಸುತ್ತಿರಲಿಲ್ಲ.  ಇಂದಿರಾ ಹತ್ಯೆಯ ನಂತರ ಪ್ರಧಾನಿಯಾದ ರಾಜೀವ್ ಗಾಂಧಿ ಡಿಸೆಂಬರ್ ೧೯೮೪ರ ಚುನಾವಣೆಗಳಲ್ಲಿ ಅನುಕಂಪದ ಅಲೆಯ ಮೂಲಕ ಪ್ರಚಂಡ ಜಯ ಸಾಧಿಸಿದಾಗ ಅವರಲ್ಲದೇ ಬೇರೊಬ್ಬರು ಪ್ರಧಾನಿಯಾಗಬಹುದೆಂದು ಜನತೆಯಿರಲಿ ಸ್ವತಃ ರಾಜೀವ್ ಗಾಂಧಿ ಸಹಾ ಯೋಚಿಸಿರುವ ಸಾಧ್ಯತೆ ಇಲ್ಲ.  ನಿರಂಕುಶ ರಾಜಕಾರಣದಲ್ಲಿ ಪೂರ್ವ ಘೋಷಣೆ ಇರಲಿ ಇಲ್ಲದಿರಲಿ, ಅತ್ಯುನ್ನತ ಸ್ಥಾನ, ಅವಿರೋಧ ಅಧಿಕಾರ ನಾಯಕನಿಗೇ ಅಥವಾ ನಾಯಕಿಗೇ.
            ನೆಹರೂ-ಗಾಂಧಿ ಕುಟುಂಬಕ್ಕೆ ಪಕ್ಷದೊಳಗೆ ವಿರೋಧವಿಲ್ಲದಿದ್ದಾಗ ಅಂದರೆ ಪಕ್ಷ ಹೋಳಾಗುವ ಅಪಾಯವಿಲ್ಲದಿದ್ದಾಗ, ಆದರೆ ಆ ಕುಟುಂಬವನ್ನು ದೇಶ ಒಪ್ಪಿಕೊಳ್ಳದೇ ಇದ್ದಾಗ ಕಾಂಗ್ರೆಸ್, ಮುಖ್ಯವಾಗಿ ನೆಹರೂ-ಗಾಂಧಿ ಕುಟುಂಬ ಅತ್ಯಂತ ಚಾಕಚಕ್ಯತೆಯ Survival Tactic ಉಪಯೋಗಿಸಿದ್ದು ಕಂಡುಬರುತ್ತದೆ.  ೧೯೯೧ರ ಚುನಾವಣೆಗಳ ನಡುವೆ ರಾಜೀವ್ ಗಾಂಧಿಯವರ ಹತ್ಯೆಯಿಂದಾಗಿ ಕಾಂಗ್ರೆಸ್ ನಾಯಕತ್ವದ ಶೂನ್ಯತೆಗೊಳಗಾಯಿತು.  ಆ ಸ್ಥಾನವನ್ನು ತುಂಬಲು ಸೋನಿಯಾ ಗಾಂಧಿ ಅಥವಾ ಅವರ ಮಕ್ಕಳು ಅಶಕ್ತರಾಗಿದ್ದರು.  ಅಲ್ಲದೇ, ವಿದೇಶೀ ವಿನಿಮಯಕ್ಕಾಗಿ ೪೦೦ ಟನ್ ಚಿನ್ನವನ್ನು ಸ್ವಿಸ್ ಬ್ಯಾಂಕ್‌ನಲ್ಲಿ ಅಡವು ಇಡಬೇಕಾಗಿದ್ದಂತಹ ಆ ದಿನಗಳ ಭಯಾನಕ ಆರ್ಥಿಕ ದುಃಸ್ಥಿತಿ ಮತ್ತು ಉದ್ರಿಕ್ತ ಕಾಶ್ಮೀರದ ಒತ್ತಡದಲ್ಲಿ ಅವರು ಕುಸಿದುಹೋಗಿದ್ದರೆ ಅಲ್ಲಿಗೆ ರಾಷ್ಟ್ರ ರಾಜಕಾರಣದ ಮೇಲೆ ಆ ಕುಟುಂಬದ ಹಿಡಿತ ಬಹುಶಃ ಶಾಶ್ವತವಾಗಿ ಸಡಿಲಾಗಿಹೋಗುತ್ತಿತ್ತು.  ಇದನ್ನು ಆ ಕುಟುಂಬ ನಿರ್ವಹಿಸಿದ್ದು 'ಮತ್ತೊಬ್ಬ' ಲಾಲ್ ಬಹಾದುರ್ ಶಾಸ್ತ್ರಿಯನ್ನು ಹುಡುಕುವ ಮೂಲಕ.  ಪಿ. ವಿ. ನರಸಿಂಹರಾವ್ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ಕೆಳಗಿಳಿಯುತ್ತಿದ್ದಂತೇ ಅವರನ್ನೂ, ಸೀತಾರಾಮ್ ಕೇಸರಿಯವರನ್ನೂ ಅವಮಾನಕರ ರೀತಿಯಲ್ಲಿ ಮೂಲೆಗೊತ್ತರಿಸಿ ಸೋನಿಯಾ ಗಾಂಧಿ ಪಕ್ಷದ ನಾಯಕತ್ವವನ್ನು ತಮ್ಮ ಕೈಗೆ ತೆಗೆದುಕೊಂಡರು.  (ಇಂಥದೇ ನಿರ್ದಾಕ್ಷಿಣ್ಯ ನಿಲುವನ್ನು ಅವರು ಮೇ ೧೯೯೧ರಲ್ಲಿ ತೆಗೆದುಕೊಳ್ಳಲು ಹೋಗಲಿಲ್ಲ ಎನ್ನುವುದನ್ನು ನೆನಪಿಸಿಕೊಳ್ಳಿ.)  ೨೦೦೪ರ ಚುನಾವಣೆಗಳಲ್ಲಿ ಯುಪಿಎ ಅಧಿಕಾರಕ್ಕೇರುವ ಸಾಧ್ಯತೆ ಉಂಟಾದರೂ ಸಾಂವಿಧಾನಿಕ ಹಾಗೂ ರಾಜಕೀಯ ಸಂಪ್ರದಾಯದ ತೊಡಕುಗಳಿಂದಾಗಿ ಪ್ರಧಾನಮಂತ್ರಿಯಾಗುವ ಅವಕಾಶ ಸೋನಿಯಾರ ಕೈತಪ್ಪಿಹೋದಾಗ ಅವರು ಆಯ್ಕೆ ಮಾಡಿಕೊಂಡದ್ದು ಎಂದೂ ಸ್ವತಂತ್ರ ವ್ಯಕ್ತಿತ್ವ, ವರ್ಚಸ್ಸು ರೂಪಿಸಿಕೊಳ್ಳಲಾಗದ ಮನಮೋಹನ್ ಸಿಂಗ್‌ರನ್ನು.  ಅಧಿಕಾರದ ಚುಕ್ಕಾಣಿ ಸೋನಿಯಾರ ಕೈಯಲ್ಲಿ ಭದ್ರವಾಗಿಯೇ ಉಳಿಯಿತು.  ಸೋನಿಯಾರ 'ಆಯ್ಕೆ' ಅದೆಷ್ಟು ಪರಿಣಾಮಕಾರಿಯಾಗಿದೆಯೆಂದರೆ ಕೇವಲ ಆರ್ಥಿಕ ತಜ್ಞರಾಗಿದ್ದ ತಮ್ಮನ್ನು ರಾಜಕೀಯ ರಂಗಕ್ಕೆ ಕರೆತಂದ ನರಸಿಂಹರಾವ್ ಅವರನ್ನು ಮನಮೋಹನ್ ಸಿಂಗ್ ಸಂಪೂರ್ಣವಾಗಿ ಕಡೆಗಣಿಸಿ ನೆಹರೂ-ಗಾಂಧಿ ಕುಟುಂಬಕ್ಕೆ ನಿಷ್ಟರಾಗಿಹೋದರು.  ಇದೆಲ್ಲದರ ಪರಿಣಾಮ ಅತ್ಯಂತ ದಾರುಣ ಹಾಗೂ ಮಾರ್ಮಿಕವಾಗಿ ಕಂಡುಬಂದದ್ದು ರಾವ್ ಅವರ ಶವಕ್ಕೂ ಅವಮಾನವಾದಾಗ ಹಾಗೂ ಆ ನಾಯಕನ ಅಂತ್ಯಕ್ರಿಯೆಯೂ ನಡೆಯಬೇಕಾದ ಬಗೆಯಲ್ಲಿ ನಡೆಯದೇ ಹೋದಾಗ.
            ಹೀಗೆ ನೆಹರೂ-ಗಾಂಧಿ ಕುಟುಂಬಕ್ಕೆ ವಿರೋಧವೇ ಇಲ್ಲದಿರುವಾಗ, ವಿರೋಧಿಗಳು ಉದಿಸಿದರೂ ಅವರು ದೂರ ಹೋಗಿ ನಾಮಾವಶೇಷವಾಗುವುದರಿಂದ, ದೂರ ಹೋಗದವರು ಅನತೀಕಾಲದಲ್ಲೇ ನಿರ್ವೀರ್ಯರಾಗಿ ಅಡಿಯಾಳಾಗುವುದರಿಂದ ಯಾವುದೇ ಚುನಾವಣೆಯಲ್ಲಿ ಕಾಂಗ್ರೆಸ್ ವಿಜಯ ಸಾಧಿಸಿದರೆ ಪ್ರಧಾನಿ ಯಾರಾಗುತ್ತಾರೆಂದು ಯಾವ ಕೊರವಂಜಿಯೂ ನಮಗೆ ಹೇಳಬೇಕಾಗಿಲ್ಲ.  ಪ್ರಧಾನಮಂತ್ರಿ ಅಭ್ಯರ್ಥಿಯ ಹೆಸರೂ ಘೋಷಣೆಯಾಗಬೇಕಿಲ್ಲ.
            ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ, ಮುಖ್ಯವಾಗಿ ನೆಹರೂ-ಗಾಂಧಿ ಕುಟುಂಬಕ್ಕೆ ಇರುವ ಈ ಅನುಕೂಲತೆಗಳಿಗೆ ನೆಹರೂರಿಂದ ಹಿಡಿದು ಸೋನಿಯಾ ಗಾಂಧಿವರೆಗೆ ಕಾಂಗ್ರೆಸ್ ನಾಯಕರ ವಿವೇಕ, ದೂರಾಲೋಚನೆಗಳಷ್ಟೇ ಕಾರಣವೇ ಅಥವಾ ಇವುಗಳ ಹಿಂದೆ ಬೇರಾವುದೋ 'ಅನೂಹ್ಯ ಕೈ' ಕೆಲಸ ಮಾಡುತ್ತಿದೆಯೇ?  ಆ ಅನೂಹ್ಯ ಕೈಗಳ ಸಹಕಾರ ಬಿಜೆಪಿಗಿಲ್ಲದೇ ಅದು ತನ್ನೊಳಗಿನ ಭಿನ್ನಮತಗಳನ್ನು ಸಾರ್ವಜನಿಕವಾಗಿ ಒದರಿ ಪರಿಹರಿಸಿಕೊಳ್ಳುವ, ತನ್ಮೂಲಕ ಎಲ್ಲೆಡೆಯಿಂದಲೂ ಟೀಕೆಗೊಳಗಾಗುವ ದುರ್ಗತಿಗೀಡಾಗಿದೆಯೇ?
            ಈ ಪ್ರಶ್ನೆಗಳನ್ನು ಮುಂದಿನವಾರ ವಿಶ್ಲೇಷಣೆಗೆತ್ತಿಕೊಳ್ಳುತ್ತೇನೆ. ಆ ವಿಶ್ಲೇಷಣೆಗಳಿಗೆ ಪೂರಕವಾಗಿ ಕಾಂಗ್ರೆಸ್ ಮತ್ತು ಬುದ್ಧಿಜೀವಿಗಳು ನರೇಂದ್ರ ಮೋದಿ ವಿರುದ್ಧ ಎಸಗುತ್ತಿರುವ ವಾಗ್ದಾಳಿಗಳ ಹಿಂದಿರುವ ಕಾರಣಗಳು ಮತ್ತು ಅವುಗಳ ಬಲಹೀನತೆಗಳೂ ಚರ್ಚೆಗೊಳಗಾಗುತ್ತವೆ.
ಅಕ್ಟೋಬರ್ ೧, ೨೦೧೩
ಭಾಗ - ೨
ಇತಿಹಾಸದ ಬೇರಿಲ್ಲದ ವರ್ತಮಾನ ಸೀಳು ಕನ್ನಡಿ


ಇನ್ನು ಕೆಲವೇ ವರ್ಷಗಳಲ್ಲಿ ಕಮ್ಯೂನಿಸಂ ಕುಸಿದುಬೀಳುತ್ತದೆ.  ರಶಿಯಾದಲ್ಲಿ ಮತ್ತೆ ಕ್ರಿಶ್ಚಿಯಾನಿಟಿ ಪ್ರವರ್ಧಮಾನಕ್ಕೆ ಬರುತ್ತದೆ.  ವಿಶ್ವಕ್ಕೆ ಅಣುಯುದ್ಧದ ಅಪಾಯವಿಲ್ಲ.  ಇದನ್ನು ತಡೆಯಲು ಹಿಮಾಯಲದಲ್ಲಿನ ಮಹಾತ್ಮರು ಕಾರ್ಯಯೋಜನೆ ರೂಪಿಸಿದ್ದಾರೆ.
೧೯೮೩-೮೪ರ ಸಮಯದಲ್ಲಿ ಹರ್‌ದ್ವಾರ್‌ನಲ್ಲಿ ಆಚಾರ್ಯ ರಾಮತೀರ್ಥ ಎಂಬ ಸಂತರು ತಮ್ಮ ಪ್ರವಚನಗಳಲ್ಲಿ ಮತ್ತೆಮತ್ತೆ ಹೇಳುತ್ತಿದ್ದ ಮಾತುಗಳಿವು.  ರೊನಾಲ್ಡ್ ರೀಗನ್‌ರ ಸ್ಟಾರ್‌ವಾರ್ ಅಟ್ಟಹಾಸದ ಆ ದಿನಗಳಲ್ಲಿ ಈ ಸಂನ್ಯಾಸಿಯ ಮಾತುಗಳು ನಮಗೆ ನಗೆತರಿಸುತ್ತಿದ್ದವು.  ಆದರೆ ನಮ್ಮ ನಗೆಯನ್ನೂ, ವ್ಯಂಗ್ಯಮಾತುಗಳನ್ನೂ ನಾವೇ ನುಂಗಿಕೊಳ್ಳಬೇಕಾದಂತಹ ದಿನಗಳು ಕೆಲವೇ ವರ್ಷಗಳಲ್ಲಿ ಬಂದವು.  ಕಮ್ಯೂನಿಸಂ ಕುಸಿದುಬಿತ್ತು, ಸೋವಿಯೆತ್ ಯೂನಿಯನ್ ಇತಿಹಾಸವಾಯಿತು.  ರಶಿಯನ್ನರು ಮತ್ತೆ ತಮ್ಮ ಧರ್ಮವನ್ನು ಮುಕ್ತವಾಗಿ ಅಚರಿಸತೊಡಗಿದರು.  ಹಾಗೆಯೇ ಸೋವಿಯೆತ್ ಅಧೀನದಲ್ಲಿದ್ದ ಮಧ್ಯ ಏಶಿಯನ್ನರು ಸ್ವತಂತ್ರ ಗಳಿಸಿ ನಾಸ್ತಿಕ ಕಮ್ಯೂನಿಸಂನಿಂದ ತಮ್ಮ ಇಸ್ಲಾಂ ಧರ್ಮಕ್ಕೆ ಹಿಂತಿರುಗಿದರು.
ಹೀಗೆಲ್ಲಾ ಅಗುತ್ತದೆಂದು ಆಚಾರ್ಯ ರಾಮತೀರ್ಥರಿಗೆ ಗೊತ್ತಿದ್ದಾದರೂ ಹೇಗೆ?  ಅಥವಾ ಅವರು ಹಲುಬಿದ್ದೆಲ್ಲಾ ಕಾಕತಾಳೀಯವೆಂಬಂತೆ ನಿಜವಾಗಿಬಿಟ್ಟಿತೇ?  ಅಥವಾ ಅವರು ಹೇಳುತ್ತಿದ್ದಂತೆ ಹಿಮಾಲಯದ ಮಹಾತ್ಮರು ವಿಶ್ವಶಾಂತಿಯ ಪಣತೊಟ್ಟು ಯಶಸ್ವಿಯಾದರೇ?  ಅಂದಹಾಗೆ ಅವರು ಯಾರು?
ಈ ಯಾವ ಪ್ರಶ್ನೆಗೂ ಉತ್ತರ ನನಗೆ ಗೊತ್ತಿಲ್ಲ.  ನನ್ನ ಅನುಭವಕ್ಕೆ ಬಂದ ಈ ಸಂಗತಿಯನ್ನು ನಿಮ್ಮ ಅವಗಾಹನೆಗೆ ತರುತ್ತಿದ್ದೇನೆ ಅಷ್ಟೇ.  ಈ ಬಗ್ಗೆ ನಿಮಗೆ ಇನ್ನೂ ಹೆಚ್ಚಿಗೆ ತಿಳಿದಿದ್ದಲ್ಲಿ ನನ್ನೊಡನೆ ಹಂಚಿಕೊಂಡು ನನ್ನ ಅರಿವನ್ನು ವಿಸ್ತರಿಸಿ.  ಅಲ್ಲಿಯವರೆಗೆ ಈ ಹಿಮಾಲಯದ ಮಹಾತ್ಮರಿಗೂ ರಾಷ್ಟ್ರದ ರಾಜಕಾರಣಕ್ಕೂ ಇರಬಹುದಾದ ಸಂಬಂಧಗಳ ಎಳೆಗಳನ್ನು ಹುಡುಕುವ ಪ್ರಯತ್ನ ಮಾಡುತ್ತೇನೆ.
ಭಾರತೀಯರ ರಾಜಕೀಯ ಆಶೋತ್ತರಗಳ ಚರ್ಚೆಗೆ ವೇದಿಕೆಯೊಂದನ್ನು ಸೃಷ್ಟಿಸುವ ಉದ್ದೇಶದಿಂದ ಸರ್ ಏ. ಓ. ಹ್ಯೂಮ್ ಡಿಸೆಂಬರ್ ೧೮೮೫ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸ್ಥಾಪಿಸಿದರಷ್ಟೇ.  ತಮ್ಮ ಕೃತ್ಯದ ಹಿಂದಿದ್ದದ್ದು ಹಿಮಾಲಯದ ಒಬ್ಬ ಮಹಾತ್ಮರು ಎಂದು ಹ್ಯೂಮ್ ಅದೆಷ್ಟೋ ಕಡೆ ಬರೆದದ್ದಲ್ಲದೇ ಹೇಳಿದ್ದಲ್ಲದೇ ವೈಸ್‌ರಾಯ್ ಲಾರ್ಡ್ ಡಫರಿನ್‌ರ ಗಮನಕ್ಕೂ ತಂದಿದ್ದರು.  ಹ್ಯೂಮ್ ಹೇಳಿದಂತೆ ಟಿಬೆಟ್‌ನ ಪ್ರಶಾಂತ ಪರ್ವತಗಳಲ್ಲಿ ಧ್ಯಾನನಿರತರಾಗಿದ್ದುಕೊಂಡು ವಿಶ್ವಶಾಂತಿಗಾಗಿ ಸದಾ ಶ್ರಮಿಸುತ್ತಿದ್ದ ಕಾಲಾತೀತ ಮಹಾತ್ಮರ ಗುಂಪಿನ ಒಬ್ಬ ಗುರುವನ್ನು ತಮಗೆ ಪರಿಚಯಿಸಿದ್ದು ಥಿಯಸಾಫಿಕಲ್ ಸೊಸೈಟಿಯ ಮದಾಂ ಬ್ಲವಾತ್ಸ್‌ಕಿ.  ಈ ಮಹಾತ್ಮರುಗಳು ಟಿಬೆಟ್‌ನಲ್ಲಿದ್ದರೂ ಬೇಕಾದಾಗ, ಬೇಕಾದಲ್ಲಿ, ಬೇಕಾದವರಿಗೆ 'ದರ್ಶನ' ನೀಡಬಲ್ಲವರಾಗಿದ್ದರಂತೆ.  ಹ್ಯೂಮ್‌ರ ಮಾತುಗಳನ್ನು ಹೆಚ್ಚಿನವರು ನಂಬಲಿಲ್ಲ.  ಸ್ವತಃ ವೈಸ್‌ರಾಯ್ ಸಹಾ ಅಸಹನೆ ತೋರಿ ಪುರಾವೆಗಳನ್ನು ಬಯಸಿದಾಗ ಅಂಥದೇನನ್ನೂ ಕೊಡಲು ಅಶಕ್ತರಾದ ಬಡಪಾಯಿ ಹ್ಯೂಮ್ ನನ್ನ ಈ ಆಧ್ಯಾತ್ಮಿಕ ಗುರುಗಳು ನಾ ಬಯಸಿದಾಗ ಕಾಣಿಸಿಕೊಂಡು ತಮ್ಮ ಇರುವಿಕೆಯ ಬಗ್ಗೆ ಪುರಾವೆ ನೀಡಲು ಬಂಸದ ಕಾರಣ ಯೂರೋಪಿಯನ್ನರು ನನ್ನನ್ನು ಮೋಸಗಾರ, ಸುಳ್ಳುಗಾರ ಎಂದು ತಿಳಿಯುವಂತಾಗಿದೆ ಎಂದು ಅಲವತ್ತುಕೊಂಡರು.
ಕಾಂಗ್ರೆಸ್‌ನ ಹುಟ್ಟಿನ ಹಿಂದಿರಬಹುದಾದ ಹಿಮಾಲಯದ ಮಹಾತ್ಮರ ಬಗ್ಗೆ, ಅವರ ಅತಿಮಾನುಷ ಅರಿವು ಮತ್ತು ಶಕ್ತಿಗಳ ಬಗ್ಗೆ ಹ್ಯೂಮ್‌ರ ಹೇಳಿಕೆಗಳು ಇತಿಹಾಸಕಾರರ ಮನ್ನಣೆ ಪಡೆದಿಲ್ಲ.  ಆದರೆ ನಂತರದ ದಿನಗಳಲ್ಲಿ ನೆರೆಯ ಚೀನಾ ಸೇರಿದಂತೆ ಬಹುಪಾಲು ಜಗತ್ತು ಸಾಮಾಜಿಕ ಹಾಗೂ ರಾಜಕೀಯ ಬದಲಾವಣೆಗಾಗಿ ಹಿಂಸಾಮಾರ್ಗ ಹಿಡಿದರೆ ಭಾರತ ಮಾತ್ರ ಕಾಂಗ್ರೆಸ್ ನೇತೃತ್ವದಲ್ಲಿ ಶಾಂತಿಮಾರ್ಗ ಅನುಸರಿಸಿದ್ದು, ಹಿಂಸೆಯ ಪ್ರಚೋದನೆಯನ್ನೆಲ್ಲಾ ಧಿಕ್ಕರಿಸಿ ದೇಶ ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ ಅಹಿಂಸೆ ಮತ್ತು ಶಾಂತಿಯ ಮಂತ್ರ ಪಠಿಸತೊಡಗಿದ್ದು ವಿಶ್ವ ಇತಿಹಾಸದಲ್ಲೊಂದು ಅಪವಾದ.  ಇದಕ್ಕೆ ಕಾರಣ ಭಾರತೀಯರ ಚಾರಿತ್ರಿಕ ಶಾಂತಿಪ್ರಿಯತೆ, ಹಿಂದೂಧರ್ಮದಲ್ಲಿನ ಅಹಿಂಸೆಯ ತತ್ವಗಳು ಎಂದು ಹೇಳಲಾಗುತ್ತದೆ.  ಇದರಲ್ಲಿ ಸತ್ಯವೆಷ್ಟು?
ಪ್ರಾಚೀನ ಹಿಂದೂಧರ್ಮ ಶಾಂತಿಪ್ರಿಯವಾಗಿರಲಿಲ್ಲ ಎನ್ನುವುದಕ್ಕೆ ನಿರಾಕರಿಸಲಾಗದ ಪುರಾವೆಗಳಿವೆ.  ಈ ನೆಲದ ಪುರಾಣಗಳು ಭೀಷಣ ಹಿಂಸೆಗೆ ಉದಾಹರಣೆಗಳನ್ನೊದಗಿಸುತ್ತವೆ.  ಜತೆಗೇ ಅಹಿಂಸೆ ಉಪಖಂಡದ ಜನರ ರಕ್ತದಲ್ಲೇ ಇರುವುದಾದರೆ ದೇಶವಿಭಜನೆಯ ಸಮಯದಲ್ಲಾದ ಭಯಾನಕ ಹಿಂಸೆಗಳನ್ನು ಹೇಗೆ ವಿವರಿಸಬೇಕು?  ಅ ಪ್ರಮಾಣದ ಹಿಂಸೆ ವಿಶ್ವದ ಇನ್ನಾವ ದೇಶದಲ್ಲೂ ನಡೆದಿಲ್ಲ ಎಂಬ ವಾಸ್ತವ ಎತ್ತಿ ತೋರುವುದು ಏನನ್ನು?   ಭಾರತೀಯರ ಹಿಂಸಾಪ್ರವೃತ್ತಿಯನ್ನು 'ಯಾರೋ' ದಶಕಗಳ ಕಾಲ ಅಥವಾ ಶತಮಾನಗಳ ಕಾಲ ಮೂಗುದಾರ ಹಾಕಿ ಹಿಡಿದಿಟ್ಟಿದ್ದರೆ?  ಅವರು ಯಾರಿರಬಹುದು?  ಹಿಮಾಲಯದ ಮಹಾತ್ಮರೇ?
ಈ ಪ್ರಶ್ನೆಗೂ ಉತ್ತರ ನನಗೆ ಗೊತ್ತಿಲ್ಲ.  ನಾನು ನಿಮ್ಮನ್ನು ಪ್ರಶ್ನಿಸುತ್ತಿದ್ದೇನೆ ಅಷ್ಟೇ.  ಉತ್ತರಗಳನ್ನು ಹೇಳುತ್ತಿಲ್ಲ.
ಇನ್ನು ಕಾಂಗ್ರೆಸ್‌ನ ಒಳರಾಜಕೀಯಕ್ಕೇ ಬಂದರೆ ಅಲ್ಲೂ ಹಲವು ಪ್ರಶ್ನೆಗಳು ಏಳುತ್ತವೆ.  ಶಾಂತಿಮಂತ್ರದ ಹರಿಕಾರನಾದ ಕಾಂಗ್ರೆಸ್‌ನಲ್ಲಿ ಅಭಿಪ್ರಾಯಭೇದಗಳು ಆಗಾಗ ತಲೆಯೆತ್ತಿದರೂ ಅವು ಪಕ್ಷವನ್ನು ನಿರ್ಮೂಲನ ಮಾಡುವಷ್ಟು ಎಂದೂ ಬಲವಾಗಲಿಲ್ಲ.  ವ್ಯಕ್ತಿನಿಷ್ಟೇ ಕಾಂಗ್ರೆಸ್ಸಿಗರ ಧ್ಯೇಯವಾಕ್ಯವಾಗಿ ಪಕ್ಷದೊಳಗೆ ಮರ್ಮಾಘಾತ ಅಭಿಪ್ರಾಯಭೇದಗಳು ತಲೆಯೆತ್ತಲೇ ಇಲ್ಲ.  ಪರಿಣಾಮವಾಗಿ ಕಾಂಗ್ರೆಸ್ ರಾಷ್ಟ್ರರಾಜಕಾರಣದ ಮುಂಚೂಣಿಯಿಂದ ಎಂದೂ ಹಿಂದೆ ಸರಿಯಲಿಲ್ಲ.  ಪಾಕಿಸ್ತಾನವನ್ನು ಸ್ಥಾಪಿಸಿದ ಮುಸ್ಲಿಂ ಲೀಗ್ ಈಗ ಏನಾಗಿದೆ ನೋಡಿ.
ಇತ್ತೀಚಿನ ಕೆಲದಶಕಗಳಲ್ಲಂತೂ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯಾದ ಬಗೆ, ಮತ್ತು ಬಹುಜನರಿಗೆ ಸಮ್ಮತವಾದ ನಾಯಕತ್ವಕ್ಕೆ ಯಾವುದೇ ಅಂತರಿಕ ವಿರೋಧ ಮೊಳೆಯದ ಬಗೆ, ಮೊಳೆತು ಪಕ್ಷಕ್ಕೆ ಹಾನಿಕಾರಕವಾಗದ ಬಗೆ ಹಲವು ಪ್ರಶ್ನೆಗಳನ್ನುಂಟು ಮಾಡುತ್ತದೆ.
ಇಂದಿರಾ ಗಾಂಧಿಯವರ ಉತ್ತರಾಧಿಕಾರಿಯಾಗುವುದು ಉಡಾಳ, ದುರಂಹಕಾರಿ ಸಂಜಯ್ ಗಾಂಧಿ ಎಂಬುದು ಎಪ್ಪತ್ತರ ದಶಕದ ಉತ್ತರಾರ್ಧದಲ್ಲಿ ಯಾರೂ ನಿರಾಕರಿಸಲಾಗದ ಭವಿಶ್ಯವಾಣಿಯಾಗಿತ್ತು.  ಆದರೆ ಆದದ್ದೇನು?  ಇಂದಿರಾ ಹತ್ಯೆಯಾಗುವ ಹೊತ್ತಿಗೆ ಸಂಜಯ್ ಮರೆಯಾಗಿ ಅವರ ಸ್ಥಾನವನ್ನು ಶಾಂತಸ್ವಭಾವದ ರಾಜೀವ್ ಗಾಂಧಿ ತುಂಬಿದ್ದರು.  ರಾಜೀವ್ ಹತ್ಯೆಯಾದಾಗ ಶೂನ್ಯವನ್ನು ತುಂಬಲು ಚಾಣಾಕ್ಷ ಆದರೆ ನಿಸ್ವಾರ್ಥಿ ನರಸಿಂಹರಾವ್ ಕಾಣಿಸಿಕೊಂಡರು.  ಶ್ರೀಮತಿ ಸೋನಿಯಾ ಗಾಂಧಿ ಕಾಂಗ್ರೆಸ್ ಸೂತ್ರಗಳನ್ನು ಹಿಡಿದ ನಂತರ ಅವರಿಗೆ ಅರ್ಥಪೂರ್ಣ ಹಾಗೂ ಪ್ರಬಲ ಪ್ರತಿಸ್ಪರ್ಧೆ ಒಡ್ಡಬಲ್ಲವರಾಗಿದ್ದದ್ದು ಶ್ರೀ ಮಾಧವರಾವ್ ಸಿಂಧ್ಯಾ.  ಪ್ರಭಾವಶಾಲಿಯಾಗಿದ್ದ ಅವರೇನಾದರೂ ಸೋನಿಯಾ ವಿರುದ್ಧ ಬಂಡೆದ್ದಿದ್ದರೆ ಕಾಂಗ್ರೆಸ್ ನಡುಮಧ್ಯಕ್ಕೆ ಸೀಳೀ ಎರಡು ಹೋಳಾಗುವುದು ನಿಶ್ಚಿತವಾಗಿತ್ತು.  ಆದರೆ ವಾಯು ಅಫಘಾತದಲ್ಲಿ ಮರಣಹೋಂದಿ ಸಿಂಧ್ಯಾ ಪ್ರಶ್ನೆಯನ್ನು ಬಗೆಹರಿಸಿಬಿಟ್ಟರು.  ರಾಜೇಶ್ ಪೈಲಟ್ ಸಹಾ ಅದೇ ದಾರಿ ಹಿಡಿದರು.  ಮಾರಣಾಂತಕವಾಗಬಹುದಾಗಿದ್ದ ಆಂತರಿಕ ಭಿನ್ನಮತಗಳು ಮೊಳಕೆಯಲ್ಲೇ ಮುರುಟಿಹೋಗಿ ಸೋನಿಯಾರ ಅಧಿಕಾರಕ್ಕೆ ಸ್ಪರ್ಧೆಯೇ ಇಲ್ಲದಂತಾಯಿತು.
            ಇದಾದದ್ದು ಹೇಗೆ?  ಕಾಕತಾಳಿಯವೇ?  ವಿಧಿಯಾಟವೇ ಅಥವಾ ಹಿಮಾಲಯದ ಮಹಾತ್ಮರ ಕೈವಾಡವೇ?  ಅಥವಾ ಇದೆಲ್ಲದರ ಹಿಂದೆ ಯಾವುದಾದರೂ ಅಂತರರಾಷ್ಟ್ರೀಯ ರಾಜಕೀಯ ಅಥವಾ ಧಾರ್ಮಿಕ ಶಕ್ತಿ ಕಾರ್ಯನಿರತವಾಗಿದೆಯೇ?  ಸಿಐಏ? ವ್ಯಾಟಿಕನ್?  ಓಪಸ್ ಡೈ?
ಈ ಪ್ರಶ್ನೆಗೂ ಉತ್ತರ ನನಗೆ ಗೊತ್ತಿಲ್ಲ.  ಆದರೆ ಒಂದು ವಿಷಯ ಮಾತ್ರ ನನಗೆ ಸ್ಪಷ್ಟವಾಗಿ ತಿಳಿದಿದೆ.  ಇಂತಹ ಯಾವ 'ಬಾಹ್ಯ ಅನುಕೂಲ'ವೂ ಬಿಜೆಪಿಗೆ ಇರುವಂತೆ ಕಾಣುತ್ತಿಲ್ಲ.  ಕಾಲಕಾಲಕ್ಕೆ ಅಲ್ಲಿ ತೀವ್ರ ಭಿನ್ನಾಭಿಪ್ರಾಯಗಳು ತಲೆಯೆತ್ತುತ್ತವೆ, ಈ ಬಡಪಾಯಿ ಪಕ್ಷ ತನ್ನ ಕೊಳೆಬಟ್ಟೆಗಳನ್ನು ಸಾರ್ವಜನಿಕವಾಗಿ ಒಗೆಯುತ್ತದೆ!   'ವಿಧಿ'ಯ ಸಹಾಯವಿಲ್ಲದೇ ತಾನೇ ಕೈಯಾರೆ ಒಗೆದು ಶುದ್ಧಿ ಮಾಡಿಕೊಳ್ಳುವುದು ಬಿಜೆಪಿಯ ಜಾಯಮಾನವೇ ಅಗಿಹೋಗಿದೆ.  ಇದು ಮೋದಿಯವರನ್ನು ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದ ಬಗೆಯಲ್ಲೂ ನಿಜ.
ಅಧಿಕಾರದ ಕನಸನ್ನು ಬಿಜೆಪಿ ಮತ್ತು ಎಲ್. ಕೆ. ಅದ್ವಾನಿ ಮೊಟ್ಟಮೊದಲಿಗೆ ಕಂಡದ್ದು ೧೯೯೧ರಲ್ಲಿ.  ಆದರೆ ಚುನಾವಣೆಯ ಮಧ್ಯೆ ಘಟಿಸಿದ ರಾಜೀವ್ ಹತ್ಯೆಯಿಂದಾಗಿ ಭಾರಿ ಪ್ರಮಾಣದ ಸಂತಾಪ ಮತಗಳನ್ನು ಗಳಿಸಿದ ಕಾಂಗ್ರೆಸ್ ಅದ್ವಾನಿಯವರ ಕನಸನ್ನು ಮಣ್ಣುಗೂಡಿಸಿತು.  ಅಂಥದೇ ಕನಸನ್ನು ಅದು ಮತ್ತೆ ೧೯೯೬ರಲ್ಲಿ ಕಂಡರೂ ಬಾಬ್ರಿ ಮೈಲಿಗೆ ಹತ್ತಿಸಿಕೊಂಡ ಅದ್ವಾನಿ ಪ್ರಧಾನಿಯಾಗುವ ಕನಸನ್ನು ಮರೆತು ಪಕ್ಷದ ಹಿತದೃಷ್ಟಿಯಿಂದ ವಾಜಪೇಯಿವರವನ್ನು ಬೆಂಬಲಿಸಬೇಕಾಯಿತು.  ಪ್ರಧಾನಿಯ ಕನಸನ್ನು ಮತ್ತೆ ಅದ್ವಾನಿಯವರು ಕಾಣತೊಡಗಿದ್ದು ಈಗ.  ಮತ್ತೊಂದು ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶದ ಸಾಧ್ಯತೆ ಬಹುಶಃ ಕ್ಷೀಣವಾಗಿರುವುದನ್ನು ಮನಗಂಡ ಅವರು ತಮ್ಮೆಲ್ಲಾ ಆಶೋತ್ತರಗಳನ್ನು ಮುಂಬರುವ ಚುನಾವಣೆಗಳಿಗಷ್ಟೇ ಸೀಮಿತಗೊಳಿಸಿಕೊಂಡದ್ದು ಅತ್ಯಂತ ಸಹಜ.  ಆದರೆ ಅವರ ನಾಯಕತ್ವ ಹಾಗೂ ವ್ಯಕ್ತಿತ್ವ ಚುನಾವಣೆಯನ್ನು ಗೆಲ್ಲಲಾರದಷ್ಟು ಸವಕಲಾಗಿರುವುದು ಪಕ್ಷದ ಬಹುತೇಕ ನಾಯಕರಿಗೆ ಅರ್ಥವಾಗಿಹೋಗಿದೆ.  ಅವರ ಪ್ರಕಾರ ಪಕ್ಷದ ಮುಂದಿರುವ ಪ್ರಶ್ನೆ ಮುಂದಿನ ಚುನಾವಣೆಯಲ್ಲಿ ಪಕ್ಷ ಗೆಲ್ಲಬೇಕೋ ಬೇಡವೋ ಎನ್ನುವುದು, ಅದ್ವಾನಿ ಪ್ರಧಾನಮಂತ್ರಿಯಾಗಬೇಕೋ ಬೇಡವೋ ಎನ್ನುವುದಲ್ಲ.  ವ್ಯಕ್ತಿಗಿಂತ ಪಕ್ಷ ಮುಖ್ಯ ಎನ್ನುವುದು ಅವರ ಖಚಿತ ಅಭಿಪ್ರಾಯ.  ಈ ನಿಟ್ಟಿನಲ್ಲಿ ವರ್ಚಸ್ವಿ ನಾಯಕನೊಬ್ಬನನ್ನು ಮತದಾರರ ಮುಂದೆ ನಿಲ್ಲಿಸುವ ಅನಿವಾರ್ಯತೆಗೆ ಬಿಜೆಪಿ ಸಿಕ್ಕಿಕೊಂಡಿದೆ.  ಅಧಿಕೃತವಾಗಿ ಘೋಷಿಸದೇ ಇದ್ದರೂ ರಾಹುಲ್ ಗಾಂಧಿ ಕಾಂಗ್ರೆಸ್‌ನ ಪ್ರಧಾನಮಂತ್ರಿ ಅಭ್ಯರ್ಥಿ ಎಂಬ ನಿಲುವನ್ನು ಆ ಪಕ್ಷ ತಳೆದಿರುವುದು, ವಿವಿಧ ನೇತಾರರು ವಿವಿಧ ಬಗೆಯಲ್ಲಿ ಅದನ್ನು ವ್ಯಕ್ತಪಡಿಸುತ್ತಿರುವುದು, ತನ್ನ ವರ್ಚಸ್ಸನ್ನು ವೃದ್ಧಿಸಿಕೊಳ್ಳಲು ರಾಹುಲ್ ಗಾಂಧಿ ಹಾಕುತ್ತಿರುವ ವಿವಿಧ ಬಗೆಯ ಲಾಗಗಳು, ಅದನ್ನು ವೈಭವೀಕರಿಸುವುತ್ತಿರುವ ಇಂಗ್ಲಿಷ್ ಮಾಧ್ಯಮದ ಒಂದು ವರ್ಗ- ಇದೆಲ್ಲವನ್ನೂ ಗಮನಿಸಿದ ಬಿಜೆಪಿಗೆ ರಾಹುಲ್ ವಿರುದ್ಧ ಸೆಣಸಬಹುದಾದ ಸಮರ್ಥ ನಾಯಕನೆಂದರೆ ಮೋದಿ, ಅದ್ವಾನಿಯಲ್ಲ ಎನಿಸಿದ್ದು ಸಹಜ.
ಮೋದಿಯವರ ವಿರುದ್ಧ ಮಾಧ್ಯಮದ ಒಂದು ವರ್ಗ, ಬುದ್ಧಿಜೀವಿಗಳು ಮತ್ತು ಕಾಂಗ್ರೆಸ್ ನಡೆಸುತ್ತಿರುವ ಧಾಳಿಯೇ ಬಿಜೆಪಿ ಅಭ್ಯರ್ಥಿ ಮುಂದಿನ ಚುನಾವಣೆಯಲ್ಲಿ ಮಹತ್ತರ ಸಂಚಲನೆ ಉಂಟುಮಾಡಬಹುದೆಂಬ ಸೂಚನೆ ನೀಡುತ್ತದೆ.  ಮೋದಿ ಗೆಲ್ಲುತ್ತಾರೋ ಇಲ್ಲವೋ ಈಗಲೇ ಹೇಳಲಾಗುವುದಿಲ್ಲ, ಆದರೆ ಅವರು ಗೆದ್ದೇಬಿಡುತ್ತಾರೆ ಎಂದು ಅವರ ವಿರೋಧಿಗಳು ತಳಮಳಿಸುತ್ತಿರುವುದಂತೂ ನಿಜ.  ದಶಕದವರೆಗೆ ತಾವು ಅನೂಚಾನವಾಗಿ ನಡೆಸಿಕೊಂಡು ಬಂದ ಮೋದಿ-ವಿರೋಧಿ ಪ್ರಚಾರ ಈಗ ನಿರರ್ಥಕವಾಗುತ್ತಿರುವ ಅಪಾಯ ಅವರನ್ನು ಅಣಕಿಸತೊಡಗಿದೆ.  ಯಾಕೆಂದರೆ ತಮ್ಮ ವಾದದಲ್ಲಿದ್ದ ಮಿಥ್ಯೆಗಳ ಅರಿವು ಅವರಿಗೇ ಸ್ಪಷ್ಟವಾಗಿ ಗೊತ್ತು.  ಈ ಮಿಥ್ಯೆಯ ಸುಳಿವು ಸಿಗುವುದು ೨೦೦೨ರ ಗುಜರಾತ್ ಹತ್ಯಾಕಾಂಡದ ಒಂದು ಮುಖವನ್ನು ಮಾತ್ರ ಪ್ರಚಾರ ಮಾಡುವಂತೆ ಪಶ್ಚಿಮ ಏಶಿಯಾದ ದೇಶವೊಂದು ಭಾರತೀಯ ಪತ್ರಕರ್ತೆಯೊಬ್ಬರಿಗೆ ಅರ್ಧ ಮಿಲಿಯನ್ ಡಾಲರ್ ನೀಡಿದ 'ವದಂತಿ'ಯಲ್ಲಿ.
೨೦೦೨ರ ಫೆಬ್ರವರಿ ಕೊನೆಯ ವಾರದಲ್ಲಿ ಗುಜರಾತ್‌ನಲ್ಲಿ ನಡೆದ ರಕ್ತಪಾತ ಖಂಡಿತವಾಗಿಯೂ ಅಕ್ಷಮ್ಯ, ನಾಗರಿಕ ಸಮಾಜದ ಒಂದು ಕಪ್ಪುಚುಕ್ಕೆ.  ಆದರೆ ಇದಕ್ಕೆ ಪ್ರೇರಣೆಯಾದದ್ದು ಗೋಧ್ರಾ ಹತ್ಯಾಕಾಂಡ.  ಗೋಧ್ರಾ ಘಟಿಸದೇ ಇದ್ದರೆ ಗುಜರಾತ್ ಹೊತ್ತಿ ಉರಿಯುತ್ತಿರಲಿಲ್ಲ.  ಇಷ್ಟಾಗಿಯೂ ಸ್ವಭಾವತಃ ಶಾಂತಮತಿಗಳಾದ ಸಾಮಾನ್ಯ ಗುಜರಾತಿಗಳು ಮತೀಯವಾಗಿ ಇಷ್ಟೇಕೆ ಉದ್ರಿಕ್ತರಾದರು ಎನ್ನುವುದಕ್ಕೆ ಉತ್ತರ ಇತಿಹಾಸದಲ್ಲಿದೆ.
ಇಸ್ಲಾಂ ಒಂದು ಸಾಮ್ರಾಜ್ಯಶಾಹಿ ಧರ್ಮ.  ಪ್ರವಾದಿಯವರ ನಿಧನಾನಂತರ ಒಂದೇ ತಲೆಮಾರಿನಲ್ಲಿ ಪರ್ಶಿಯಾದ ಸಸಾನಿದ್ ಸಾಮ್ರಾಜ್ಯವನ್ನು ಧೂಳೀಪಟಗೊಳಿಸಿ ಅಗ್ನಿ ಆರಾಧಕರ ಮೇಲೆ ಅರಬ್ಬರು ಇಸ್ಲಾಮನ್ನು ಹೇರಿದ್ದು ಕ್ರೂರ ವಿಧಾನಗಳ ಮೂಲಕ.  ಅದರಿಂದ ತಪ್ಪಿಸಿಕೊಂಡು ಓಡಿಬಂದ ಪಾರ್ಸಿಗಳಿಂದ ಇಸ್ಲಾಮ್‌ನ ಕ್ರೂರತೆಯ ಮೊದಲ ಪರಿಚಯ ಗುಜರಾತಿಗಾಯಿತು.  ಮುಂದಿನ ಐದಾರು ದಶಕಗಳಲ್ಲಿ ನೆರೆಯ ಸಿಂಧ್ ಅರಬ್ಬರ ವಶವಾದಾಗ ತಾನು ಹಿಂದೂಧರ್ಮದ ಗಡಿ ಎಂಬ ಅರಿವು ಆ ನಾಡಿಗಾಯಿತು.  ನಂತರ ೧೦೧೭ರಲ್ಲಿ ಘಜನಿಯ ಸುಲ್ತಾನ ಸೋಮನಾಥ ದೇವಾಲಯದ ಮೇಲೆ ನಡೆಸಿದ ಧಾಳಿಯ ಹಿಂದಿದ್ದದ್ದು ಲೂಟಿಯೇ ಆದರೂ ಆ ಲೂಟಿಗಾರರು ಮುಸ್ಲಿಂ ಅರಸನಿಗೆ ನಿಷ್ಟರಾಗಿದ್ದರು ಎಂಬುದೇ ಇಸ್ಲಾಂನಿಂದ ಒದಗಬಹುದಾದ ಹಾನಿಯ ಪರಿಚಯವನ್ನು ಗುಜರಾತಿಗಳಿಗೆ ಮಾಡಿಕೊಟ್ಟಿತು.  ಇದು ಗುಜರಾತಿಗಳ ಇಸ್ಲಾಂ-ವಿರೋಧಿ ಮನೋಭಾವ ಬೆಳೆದುಬಂದ ಬಗೆ.  ಹೀಗಾಗಿಯೇ ಇತಿಹಾಸದಲ್ಲಿ ದಾಖಲಾಗಿರುವಂತೆಯೇ ಹದಿನೇಳನೇ ಶತಮಾನದ ಆರಂಭದಿಂದಲೂ ಗುಜರಾತಿಗಳು ಆಗಾಗ್ಗೆ ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದಂತೆ ತೀವ್ರವಾಗಿ ಉದ್ರೇಕಿತರಾಗಿ ಹಿಂಸೆಯಲ್ಲಿ ತೊಡಗುವುದು ನಡೆದುಕೊಂಡೇ ಬಂದಿದೆ.  ಗೋಧ್ರಾ ಟ್ರೇನ್ ಹತ್ಯಾಕಾಂಡದ ರೂವಾರಿಗಳಿಗೆ ಇದರ ಅರಿವಿಲ್ಲದೇ ಹೋದದ್ದು ಭಾರಿ ದುರಂತಕ್ಕೆ ಮುನ್ನುಡಿಯಾಯಿತು.  ಗೋಧ್ರಾ ಸೃಷ್ಟಿಸಿದ ಪ್ರಚೋದನೆಯಿಂದಾಗಿ ಭುಗಿಲೆದ್ದ ಉಗ್ರ ಮುಸ್ಲಿಂ-ವಿರೋಧಿ ಭಾವನೆಯನ್ನು ಶಮನಗೊಳಿಸಲು ಮೋದಿಯ ಬಿಜೆಪಿ ಸರಕಾರವಿರಲಿ, ಕಾಂಗ್ರೆಸ್ ಸರಕಾರಕ್ಕೂ ಸಾಧ್ಯವಾಗುತ್ತಿರಲಿಲ್ಲ.  ಈ ಬಗ್ಗೆ ತನ್ನ ಮಿತಿಯನ್ನು ಕಾಂಗ್ರೆಸ್ ರಾಜಧಾನಿ ದೆಹಲಿಯಲ್ಲೇ ೧೯೮೪ರ ಅಕ್ಟೋಬರ್ ೩೧, ನವೆಂಬರ್ ೧, ೨ರಂದು ಇಡೀ ಜಗತ್ತಿಗೇ ಢಾಣಾಢಂಗುರವಾಗಿ ಸಾರಿದೆ.
ಇನ್ನು ಮುಂದಾದರೂ ನಮ್ಮ ಮಾಧ್ಯಮಗಳು ನಿಷ್ಪಕ್ಷಪಾತವಾದರೆ, ಬುದ್ಧಿಜೀವಿಗಳು ಸ್ವಾರ್ಥಪರ ಲಾಲಸೆಗಳನ್ನು ಬದಿಗಿಟ್ಟು ತಮ್ಮ ಬುದ್ಧಿಯನ್ನು ಸಮಾಜದ ಉನ್ನತಿಗೆ ಸದ್ವಿನಿಯೋಗಗೊಳಿಸತೊಡಗಿದರೆ ನಮ್ಮ ಇತಿಹಾಸದ ಬಗ್ಗೆ ನಮಗೆ ಸ್ಪಷ್ಟ ತಿಳುವಳಿಕೆಯುಂಟಾಗುತ್ತದೆ.  ಅದು ನಮ್ಮ ಭವಿಷ್ಯವನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಸಾಮರ್ಥ್ಯವನ್ನು ನಮಗೆ ನೀಡುತ್ತದೆ.
ಅಕ್ಟೋಬರ್ ೮, ೨೦೧೩

2 comments:

  1. Very nice analysis, sir!. I am your regular reader and I get lot of info and nice insights which i never get from so called 'famous ' writers.

    ReplyDelete
    Replies
    1. Thank you sir. I am happy you have found my writings useful.

      Delete