ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Thursday, March 14, 2013

ಭಾರತಕ್ಕೆ ಕಾಶ್ಮೀರ ಬೇಕೇ ಬೇಡವೇ?

ಕನ್ನಡ ದೈನಿಕ "ವಿಜಯವಾಣಿ"ಯ "ಜಗದಗಲ" ಅಂಕಣದಲ್ಲಿ ಕಳೆದ ತಿಂಗಳು ಎರಡು
ಭಾಗಗಳಲ್ಲಿ ಪ್ರಕಟವಾದ ಲೇಖನ


ಭಾರತಕ್ಕೆ ಕಾಶ್ಮೀರ ಬೇಕೇ ಬೇಡವೇ?

ಕಾಶ್ಮೀರ ಒಂದು ಸಮಸ್ಯೆಯಾದ ದಿನದಿಂದಲೂ ಈ ಪ್ರಶ್ನೆ ಉತ್ತರವನ್ನು ಬೇಡುತ್ತಿದೆ.  ಇತ್ತೀಚೆಗೆ ಹಿನ್ನೆಲೆಗೆ ಸರಿದಿದ್ದ ಇದನ್ನು ಕೇವಲ ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲಾದ ಅಫ್ಜಲ್ ಗುರುವಿನ ನೇಣು ಮತ್ತೆ ಮುಂಚೂಣಿಗೆ ತಂದಿದೆ, ಉಗ್ರವಾಗಿ.  ತನ್ನೀ ಕೃತ್ಯದ ಮೂಲಕ ಪಾಕಿಸ್ತಾನದ ಬತ್ತಳಿಕೆಗೆ ಮತ್ತೊಂದು ಅಸ್ತ್ರವನ್ನು ಸೇರಿಸಿದ್ದಲ್ಲದೇ, ಕಾಶ್ಮೀರ ಕಣಿವೆಯಲ್ಲಿ ಹಿಂತಿರುಗುತ್ತಿದ್ದ ಶಾಂತಿಯನ್ನು ದೆಹಲಿ ಕದಡಿದೆ.  ಅಂತಿಮವಾಗಿ ದೆಹಲಿಗೆ ಬೇಕಾಗಿರುವುದೇನು?  ಕಾಶ್ಮೀರದ ಬಗ್ಗೆ ಕಳೆದ ಅರವತ್ತೈದೂವರೆ ವರ್ಷಗಳಲ್ಲಿ ದೆಹಲಿ ತೋರುತ್ತಾ ಬಂದಿರುವ ಇಬ್ಬಂದಿ ನೀತಿಗೆ ಇರುವುದು ನಿರಾಕರಿಸಲಾಗದ, ನೇರ, ನಿರ್ದಿಷ್ಟ, ಸ್ಪಷ್ಟ ಸಾಕ್ಷಿಗಳು.  ಕೇವಲ ಸಾಂದರ್ಭಿಕ ಸಾಕ್ಷ್ಯಗಳಲ್ಲ.  ಅಂಕಣ ಬರಹದ ಮಿತಿಯಲ್ಲಿ ಈ ವಿಷಯಗಳ ವಿಶ್ಲೇಷನೆ ಎರಡು ಭಾಗಗಳ ಈ ಲೇಖನದ ಉದ್ದೇಶ.

ಪಕ್ಕದ ಪಂಜಾಬ್ ಅಥವಾ ದೂರದ ಬಂಗಾಲದಂತೆ ಕಾಶ್ಮೀರವೂ ಒಂದು ನೇರ ಬ್ರಿಟಿಷ್ ಆಡಳಿತದಲ್ಲಿದ್ದ ಪ್ರಾಂತ್ಯವಾಗಿದ್ದರೆ ಅದೊಂದು ಸಮಸ್ಯೆಯೇ ಆಗುತ್ತಿರಲಿಲ್ಲ.  ಆ ಎರಡು ಪ್ರಾಂತ್ಯಗಳನ್ನು ಧರ್ಮದ ಆಧಾರದಲ್ಲಿ ವಿಭಜಿಸಿದಂತೆ ಬ್ರಿಟಿಷರು ಇದನ್ನೂ ವಿಭಜಿಸಿ ಮುಸ್ಲಿಂ ಕಾಶ್ಮೀರವನ್ನು ಪಾಕಿಸ್ತಾನಕ್ಕೂ, ಹಿಂದೂ ಮತ್ತು ಬೌದ್ಧ ಕಾಶ್ಮೀರವನ್ನು ಭಾರತಕ್ಕೂ ಕೊಡುತ್ತಿದ್ದರು ಎಂದು ನಾನು ಸ್ಪಷ್ಟವಾಗಿ ನಂಬುತ್ತೇನೆ.  ಅದರ ಪ್ರಕಾರ ಜಮ್ಮು ಮತ್ತು ಲಡಾಖ್‌ಗಳು ಭಾರತಕ್ಕೂ ಉಳಿದ ಭಾಗಗಳು ಪಾಕಿಸ್ತಾನಕ್ಕೂ ಸೇರಿಹೋಗುತ್ತಿದ್ದವು.  ಹಾಗಾಗದಾಗ ಮತ್ತು ಒಟ್ಟಾರೆ ಜನಸಂಖ್ಯೆಯಲ್ಲಿ ಮುಸ್ಲಿಂ ಪ್ರಾಬಲ್ಯವಿದ್ದ ದೇಶೀಯ ಸಂಸ್ಥಾನ ಕಾಶ್ಮೀರ ಅದರಂತಹ ಖಾಯಿರ್‌ಪುರ್, ಬಹವಾಲ್‌ಪುರ್‌ಗಳಂತೆ ಪಾಕಿಸ್ತಾನಕ್ಕೆ ಸೇರಿಕೊಳ್ಳದೇ ಅನಿಶ್ಚಿತ ಪರಿಸ್ಥಿತಿ ಸೃಷ್ಟಿಸಿದಾಗ ಜಿನ್ನಾ ಸರಕಾರ ಹೂಡಿದ್ದು ಕೈ ತಿರುಚುವ ತಂತ್ರ.  ಕಾಶ್ಮೀರ ಸಂಸ್ಥಾನಕ್ಕೆ ಗೋಧಿ ಮುಂತಾದ ಆಹಾರಧಾನ್ಯಗಳು ಹಾಗೂ ಪೆಟ್ರೋಲ್ ಮತ್ತು ಡೀಸೆಲ್ ಮುಂತಾದ ಅಗತ್ಯ ವಸ್ತುಗಳು ಪೂರೈಕೆಯಾಗುತ್ತಿದ್ದುದು ರಾವಲ್ಪಿಂಡಿ ಮತ್ತು ಸಿಯಾಲ್‌ಕೋಟ್‌ಗಳಿಂದ.  ದೇಶವಿಭಜನೆಯಲ್ಲಿ ಈ ನಗರಗಳು ಪಾಕಿಸ್ತಾನಕ್ಕೆ ಸೇರಿಹೋದವು.  ಹೀಗಾಗಿ ಕಾಶ್ಮೀರಕ್ಕೆ ಅಗತ್ಯವಸ್ತುಗಳ ಪೂರೈಕೆಯನ್ನು ತಡೆಗಟ್ಟಿ ಆ ರಾಜ್ಯವನ್ನು ಆರ್ಥಿಕವಾಗಿ ಒತ್ತಡಕ್ಕೆ ಸಿಲುಕಿಸಿ ತನ್ನೊಳಗೆ ಐಕ್ಯಗೊಳ್ಳುವಂತೆ ಒತ್ತಡ ಹೇರುವುದು ಪಾಕಿಸ್ತಾನದ ತಂತ್ರವಾಗಿತ್ತು.  ಪಾಕ್ ಆರ್ಥಿಕ ದಿUಂಧನದಿಂದ ಕಂಗೆಟ್ಟ ಕಾಶ್ಮೀರೀ ಸರಕಾರ ಸಹಾಯಕ್ಕಾಗಿ ಭಾರತಕ್ಕೆ ಮೊರೆಯಿಟ್ಟಾಗ ಭಾರತ ಸರಕಾರದ ಪ್ರತಿಕ್ರಿಯೆ ನಿರಾಶಾದಾಯಕ.  ಅಲ್ಪ ಪ್ರಮಾಣದಲ್ಲಿ ವಸ್ತುಗಳನ್ನು ಪೂರೈಸಿದ ಭಾರತ, ಅನಿರ್ದಿಷ್ಟ ಕಾಲದವರೆಗೆ ಅಗತ್ಯವಸ್ತುಗಳ ಪೂರೈಕೆ ಸಾಧ್ಯವಿಲ್ಲವೆಂದೂ, ಕಾಶ್ಮೀರ ಬೇರೆ ವ್ಯವಸ್ಥೆ ಮಾಡಿಕೊಳ್ಳಬೇಕೆಂದೂ ನಿರ್ದಾಕ್ಷಿಣ್ಯವಾಗಿ ಹೇಳಿತು.  ಈ ಮಾತುಗಳನ್ನು, ಭಾರತ ಈಗ ಕಾಶ್ಮೀರದಲ್ಲಿ ಸುರಿಯುತ್ತಿರುವ ಹಣಕ್ಕೆ ಮತ್ತು ರಕ್ತಕ್ಕೆ ಹೋಲಿಸಿ.

            ಹೀಗೆ, ಕಾಶ್ಮೀರವನ್ನು ಗೆಲ್ಲುವ ಮೊದಲ ಅವಕಾಶವನ್ನು ನೆಹರೂ ಸರಕಾರ ಚರಂಡಿಗೆಸೆಯಿತು.  ನಂತರ, ಆರ್ಥಿಕ ದಿUಂಧನದಿಂದ ನಿರೀಕ್ಷಿತ ಪರಿಣಾಮ ಬಾರದೇಹೋದ ಪರಿಣಾಮವಾಗಿ ಪಾಕಿಸ್ತಾನ ದಂಡದ ಪ್ರಯೋಗಕ್ಕೆ ಮುಂದಾಯಿತು.  ಪಾಕಿಸ್ತಾನೀ ಸೇನೆಯಿಂದ ತರಬೇತಿ ಮತ್ತು ಆಯುಧಗಳನ್ನು ಪಡೆದ ಸುಮಾರು ಐದುಸಾವಿರ ಪಠಾಣರು ಅಕ್ಟೋಬರ್ ೨೨, ೧೯೪೭ರ ರಾತ್ರಿ ಕಾಶ್ಮೀರದ ಗಡಿದಾಟಿ ಮುಝಾಫರಾಬಾದ್‌ನತ್ತ ಸಾಗಿದರು.  ಬೆಳಗಿನ ಜಾವದ ಹೊತ್ತಿಗೆ ಅವರು ಆ ಪಟ್ಟಣವನ್ನು ತಮ್ಮ ವಶಕ್ಕೆ ತೆಗೆದುಕೊಂಡರು.  ಅನಿರೀಕ್ಷಿತ ದಾಳಿಯಿಂದ ಕಂಗೆಟ್ಟ ಮಹಾರಾಜ ಹರಿಸಿಂಗ್ ಸೈನಿಕಸಹಾಯಕ್ಕಾಗಿ ಭಾರತಕ್ಕೆ ಮೊರೆಯಿಟ್ಟಾಗ ಭಾರತದ ಪ್ರತಿಕ್ರಿಯೆ?  ಗವರ್ನರ್ ಜನರಲ್, ಪ್ರಧಾನಮಂತ್ರಿ, ಗೃಹಮಂತ್ರಿ ಮತ್ತಿತರ ವರಿಷ್ಟರಿದ್ದ ಸಭೆಯಲ್ಲಿ ಹರಿಸಿಂಗ್‌ರ ಬೇಡಿಕೆಯನ್ನು ವಿವರವಾಗಿ ಚರ್ಚಿಸಲಾಯಿತು ಮತ್ತು ಕಾಶ್ಮೀರ ಭಾರತದ ಭಾಗವಾಗಿಲ್ಲದ ಕಾರಣ ಅಲ್ಲಿಗೆ ಭಾರತೀಯ ಸೇನೆಯನ್ನು ಕಳುಹಿಸಲಾಗದು ಎಂಬ ನಿರ್ಣಯಕ್ಕೆ ಬರಲಾಯಿತು.

            ಕೊನೆಗೂ ಅಕ್ಟೋಬರ್ ೨೬ರಂದು ಮಹಾರಾಜ ಹರಿಸಿಂಗ್ Iಟಿsಣಡಿumeಟಿಣ oಜಿ ಂಛಿಛಿessioಟಿಗೆ ಸಹಿ ಹಾಕಿ ಕಾಶ್ಮೀರವನ್ನು ಅಧಿಕೃತವಾಗಿ ಭಾರತದಲ್ಲಿ ವಿಲೀನಗೊಳಿಸಿ ಭಾರತದ ಸೇನಾಸಹಾಯಕ್ಕೆ ಆ ರಾಜ್ಯವನ್ನು ಅರ್ಹಗೊಳಿಸಿದ ಮೇಲೂ ಅಲ್ಲಿಗೆ ಸೇನೆ ಕಳುಹಿಸಲು ನೆಹರೂ ಸರಕಾರ ಮುಂದಾಗಲಿಲ್ಲ.  ಕಾಶ್ಮೀರದ ಪ್ರಧಾನಮಂತ್ರಿಯಾಗಿದ್ದ ಮೆಹರ್ ಚಂದ್ ಮಹಾಜನ್ ದೆಹಲಿಗೆ ಓಡಿಬಂದು ನೆಹರೂ ಮುಂದೆ ಗೋಗರೆಯಬೇಕಾಯಿತು.  ಇದರ ವಿವರಗಳನ್ನು ಮಹಾಜನ್ ತಮ್ಮ ಪುಸ್ತಕ Kashmir's Accession to India: An Inside Storyಯಲ್ಲಿ ದಾಖಲಿಸಿದ್ದಾರೆ.  ದೆಹಲಿಗೆ ಧಾವಿಸಿದ ಮಹಾಜನ್ ನೆಹರೂ ಅವರನ್ನು ಅವರ ನಿವಾಸ ತೀನ್ ಮೂರ್ತಿ ಭವನದಲ್ಲಿ ಭೇಟಿಯಾಗಿ ಶ್ರೀನಗರದ ರಕ್ಷಣೆಗಾಗಿ ತಕ್ಷಣವೇ ಭಾರತೀಯ ಸೇನೆಯನ್ನು ಕಳುಹಿಸಬೇಕೆಂದು ಒತ್ತಾಯಿಸಿದರು.  ಅದು ಸಾಧ್ಯವಿಲ್ಲವೆಂದೂ, ಎರಡು ವಾರಗಳ ನಂತರ ಶ್ರೀನಗರಕ್ಕೆ ಸೇನೆ ಕಳುಹಿಸುವುದಾಗಿಯೂ ನೆಹರೂ ಸ್ಪಷ್ಟವಾಗಿ ಹೇಳಿದರು.   ಅಷ್ಟು ತಡವಾಗಿ ನೀವು ಸೇನೆ ಕಳುಹಿಸಿದರೆ ಅಷ್ಟುಹೊತ್ತಿಗೆ ಶ್ರೀನಗರ ಶತ್ರುಗಳ ವಶವಾಗಿರುತ್ತದೆ ಎಂದು ಮಹಾಜನ್ ಬೇಸರದಿಂದ ಹೇಳಿದರು.  ಇದಕ್ಕೆ ನೆಹರೂ ಅವರದ್ದು ಶ್ರೀನಗರ ಶತ್ರುಗಳ ವಶವಾದರೆ ಆಗಲಿ ಬಿಡಿ.  ನಾವು ಆಮೇಲೆ ಅದನ್ನು ಮತ್ತೆ ನಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತೇವೆ ಎಂಬ ತಣ್ಣನೆಯ ಉತ್ತರ.  ನೆಹರೂ ಅವರ ಈ ಅಸಂವೇದನಾಶೀಲ ನೀತಿಗೆ ಮಹಾಜನ್ ಖಾರವಾಗಿಯೇ ಪ್ರತಿಕ್ರಿಯಿಸಿದರು: ನೀವು ಶ್ರೀನಗರವನ್ನು ಮತ್ತೆ ನಿಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತೇನೆಂದು ಹೇಳುತ್ತಿದ್ದೀರಿ.  ಆದರೆ ಆಗ ಶ್ರೀನಗರ ಯಾವ ಸ್ಥಿತಿಯಲ್ಲಿರುತ್ತದೆಂಬ ಅರಿವು ನಿಮಗಿದೆಯೇ?  ಶ್ರೀನಗರದ ರಕ್ಷಣೆಗಾಗಿ ನೀವು ಈ ಕೂಡಲೇ ಭಾರತೀಯ ಸೇನೆಯನ್ನು ಅಲ್ಲಿಗೆ ಕಳುಹಿಸಲೇಬೇಕು.  ಇಲ್ಲದಿದ್ದರೆ ನಾನು ಮೊದಲ ವಿಮಾನ ಹಿಡಿದು ಕರಾಚಿಗೆ ಹೋಗುತ್ತೇನೆ, ಜಿನ್ನಾ ಅವರ ಜತೆ ಮಾತುಕತೆ ಆರಂಭಿಸುತ್ತೇನೆ.  ನನ್ನ ಸುಂದರ ರಾಜಧಾನಿಯ ರಕ್ಷಣೆ ನನಗೆ ಮುಖ್ಯ.  ಮಹಾಜನ್‌ರ ಮಾತಿನಿಂದ ಕುಪಿತಗೊಂಡ ನೆಹರೂ ಇಲ್ಲಿಂದ ಹೊರನಡೆಯಿರಿ ಎಂದಬ್ಬರಿಸಿದರು.  ಅಷ್ಟೇ ಕೋಪದಿಂದ ಮಹಾಜನ್ ಹೊರಡಲೆಂದು ಮೇಲೆದ್ದರು.  ಆಗ ಪರಿಸ್ಥಿತಿಗೆ ಮತ್ತು ಇತಿಹಾಸಕ್ಕೆ ನಾಟಕೀಯ ತಿರುವು ನೀಡಿದ್ದು ಶೇಖ್ ಅಬ್ದುಲ್ಲಾ.  ಪಕ್ಕದ ಕೋಣೆಯಲ್ಲಿ ಕುಳಿತು ಸಂಭಾಷಣೆಯನ್ನು ಗಮನವಿಟ್ಟು ಆಲಿಸುತ್ತಿದ್ದ ಅವರು ಆ ನಿರ್ಣಾಯಕ ಗಳಿಗೆಯಲ್ಲಿ ಮಹಾಜನ್‌ರ ಮಾತುಗಳಿಗೆ ನನ್ನ ಸಹಮತವಿದೆ ಎಂದು ಒಂದು ಚೀಟಿಯಲ್ಲಿ ಬರೆದು ಸೇವಕನೊಬ್ಬನ ಮೂಲಕ ನೆಹರೂ ಅವರಿಗೆ ತಲುಪಿಸಿದರು.  ಅದನ್ನು ನೋಡಿದ ನೆಹರೂ ಅವರ ಸ್ವಭಾವದಲ್ಲಿ ಹಠಾತ್ ಬದಲಾವಣೆ ಉಂಟಾಯಿತು.  ಮಹಾಜನ್ ಅವರಿಗೆ ಕೂರಲು ಹೇಳಿದರು ಮತ್ತು ಶ್ರೀನಗರಕ್ಕೆ ಭಾರತೀಯ ಸೇನೆಯನ್ನು ಆದಷ್ಟು ಬೇಗನೆ ಕಳುಹಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನೂ ಕೈಗೊಳ್ಳುವುದಾಗಿ ಮಾತುಕೊಟ್ಟರು.  ಅದರಂತೆ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಭಾರತೀಯ ಸೇನೆಯ ಮೊದಲ ತುಕಡಿ ವಾಯುಮಾರ್ಗದ ಮೂಲಕ ಶ್ರೀನಗರ ತಲುಪಿತು.

            ಇಂದು ಪ್ರತ್ಯೇಕತಾವಾದಿಗಳ ಆಡಂಬೋಲವಾಗಿರುವ ಕಾಶ್ಮೀರಿ ಕಣಿವೆ, ಮುಖ್ಯವಾಗಿ ಬಾರಾಮುಲ್ಲಾ ಪಟ್ಟಣ ಅಂದು ಸಂಪೂರ್ಣ ಭಾರತೀಯವಾಗಿತ್ತು.  ಪಾಕಿಸ್ತಾನೀ ಆಕ್ರಮಣಕಾರರ ಪಾಶವೀಕೃತ್ಯಗಳಿಂದ ನೊಂದಿದ್ದ ಅಲ್ಲಿನ ಜನರನ್ನು ನಿಮ್ಮನ್ನು ಯಾರು ಆಳಬೇಕೆಂದು ನೀವು ಬಯಸುತ್ತೀರಿ ಎಂದು ಪ್ರಶ್ನಿಸಿದರೆ ಜನರಲ್ ತಿಮ್ಮಯ್ಯ ಎಂದು ಕಣ್ಣವೆ ಅಲುಗಿಸದೇ ಉತ್ತರಿಸುತ್ತಿದ್ದರಂತೆ!  ಈ ಜನರ ಭಾರತ ಪ್ರೀತಿಗೆ ಸ್ಪಷ್ಟ ಕಾರಣಗಳಿವೆ.  ಅಕ್ಟೋಬರ್ ೨೪, ೧೯೪೭ರಂದು ಬಾರಾಮುಲ್ಲಾ ಪಟ್ಟಣ ಪಾಕಿಸ್ತಾನೀ ಧಾಳಿಕೋರರ ವಶವಾದಾಗ ಅಲ್ಲಿನ ಜನಸಂಖ್ಯೆ ನಲವತ್ತೈದು ಸಾವಿರ.  ಆರುತಿಂಗಳ ನಂತರ ಭಾರತೀಯ ಸೇನೆ ಅದನ್ನು ವಿಮೋಚನೆಗೊಳಿಸಿದಾಗ ಅಲ್ಲಿ ಉಳಿದಿದ್ದವರು ಕೇವಲ ನಾಲ್ಕುಸಾವಿರದ ಇನ್ನೂರು ಜನ!  ಬಹುತೇಕ ಎಲ್ಲ ಮಹಿಳೆಯರು ಮಾನಭಂಗಕ್ಕೊಳಗಾಗಿದ್ದರು.  ಈ ಆಕ್ರಮಣಕಾರೀ ಕಿರಾತಕರು ಚರ್ಚ್ ಒಂದರಲ್ಲಿದ್ದ ಯೂರೋಪಿಯನ್ ಸಂನ್ಯಾಸಿನಿಯರನ್ನೂ ಬಿಡಲಿಲ್ಲವಂತೆ.

            ಆ ದಿನಗಳ ಅಗಾಧ ಜನಬೆಂಬಲದೊಂದಿಗೆ ಭಾರತೀಯ ಸೇನೆ ಕಾಶ್ಮೀರದಿಂದ ಪಾಕಿಸ್ತಾನೀ ಆಕ್ರಮಣಕಾರರನ್ನು ಹೊರದಬ್ಬುವುದರಲ್ಲಿ ಮೊದಲ ಹೆಜ್ಜೆ ಇಡುತ್ತಿದ್ದಂತೇ ಜನವರಿ ೧, ೧೯೪೮ರಂದು ನೆಹರೂ ಸರಕಾರ ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ಒಯ್ದದ್ದಂತೂ ತಲೆಯ ಮೇಲೆ ಮಣ್ಣು ಹಾಕಿಕೊಳ್ಳುವಂತಹ ಕೃತ್ಯ.  ಇದರಿಂದ ಅನುಕೂಲವಾದದ್ದು ಪಾಕಿಸ್ತಾನಕ್ಕೆ.  ಪಾಕಿಸ್ತಾನವನ್ನು ಸೃಷ್ಟಿಸಲು ಮತ್ತು ಕಾಶ್ಮೀರ ಅದರ ಭಾಗವಾಗಲು ದಶಕಗಳಿಂದ ಹಂಚಿಕೆ ಹೂಡಿದ್ದ ಬ್ರಿಟನ್ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಪರ ನಿಂತಿತು.  ಎರಡನೇ ಮಹಾಯುದ್ಧದ ನಂತರ ಪಶ್ಚಿಮದ ಪ್ರಜಾಪ್ರಭುತ್ವವಾದೀ ಗುಂಪಿನ ನಾಯಕತ್ವವನ್ನು ಬ್ರಿಟನ್‌ನಿಂದ ಪಡೆದುಕೊಂಡಿದ್ದ ಅಮೆರಿಕಾ ಸಹಾ ತನ್ನ ಸೋವಿಯೆತ್ ವಿರೋಧೀ ನೀತಿಗಳಿಗೆ ಪಾಕಿಸ್ತಾನ ಅನುಕೂಲಕರವೆಂದು ಬಗೆದು ಆದರ ಪರವಾಗಿ ನಿಂತಿತು.  ಅಲಿಪ್ತ ನೀತಿಯನ್ನು ಬೋಧಿಸತೊಡಗಿದ ನೆಹರೂರನ್ನು ಅಮೆರಿಕಾ ಮತ್ತು ಬ್ರಿಟನ್ ಒಬ್ಬ ಶತ್ರುವಿನಂತೆ ಪರಿಗಣಿಸಿದ್ದು ಸಹಜವೇ ಆಗಿತ್ತು.  ಜತೆಗೇ ಸ್ಟ್ಯಾಲಿನ್‌ನ ಸೋವಿಯೆತ್ ಯೂನಿಯನ್ ಸಹಾ ಭಾರತವನ್ನು ಸಂಶಯದಿಂದ ನೋಡಿತು.  ಹೀಗಾಗಿ ವಿಶ್ವಸಂಸ್ಥೆಯಲ್ಲಿ ಭಾರತ ಏಕಾಂಗಿಯಾಯಿತು.  ನಿಜ ಹೇಳಬೇಕೆಂದರೆ ವಿಶ್ವಸಂಸ್ಥೆಯಲ್ಲಿ ರಾಜತಾಂತ್ರಿಕ ಯುದ್ಧಕ್ಕಿಂದ ಕಾಶ್ಮೀರದಲ್ಲಿ ಸೈನಿಕಯುದ್ದ ನಡೆಸುವುದು ಭಾರತಕ್ಕೆ ಅನುಕೂಲಕರವಾಗಿರುತ್ತಿತ್ತು.  ಆದರೆ ಯಾವ ವಿವೇಕಯುತ ಸಲಹೆಯನ್ನೂ ಗಣನೆಗೆ ತೆಗೆದುಕೊಳ್ಳುವ ಅಭ್ಯಾಸವೇ ಇಲ್ಲದ ನೆಹರು ಅನಗತ್ಯವಾಗಿ ವಿಶ್ವಸಂಸ್ಥೆಗೆ ಹೋಗಿ ತಾವು ಕೈ ಸುಟ್ಟುಕೊಂಡರು.  ಇದರಿಂದ ಲಾಭವಾದದ್ದು ಪಾಕಿಸ್ತಾನಕ್ಕೆ.  ಅಷ್ಟೇ ಅಲ್ಲ, ಜನವರಿ ೧, ೧೯೪೯ರಂದು ಕಾಶ್ಮೀರದ ಒಂದು ದೊಡ್ಡ ಭಾಗ ಪಾಕಿಸ್ತಾನೀ ಸೇನೆಯ ವಶದಲ್ಲಿರುವಾಗಲೇ ವಿಶ್ವಸಂಸ್ಥೆಯ ಕದನವಿರಾಮ ನಿರ್ಣಯವನ್ನು ಒಪ್ಪಿಕೊಂಡು ಯುದ್ಧ ನಿಲ್ಲಿಸಿ ನೆಹರೂ ಮತ್ತೊಂದು ದೊಡ್ಡ ಅವಿವೇಕದ ಕೆಲಸ ಮಾಡಿದರು.  ಕಾಶ್ಮೀರದ ಮೂರನೆಯ ಒಂದು ಭಾಗ ಪಾಕ್ ಆಕ್ರಮಣದಲ್ಲೇ ಉಳಿಯಲು ಬಿಟ್ಟ ನೆಹರೂ ಸರಕಾರ ನಕ್ಷೆಗಳಲ್ಲಿ ಮಾತ್ರ ಇಡೀ ಕಾಶ್ಮೀರವನ್ನು ಭಾರತಕ್ಕೆ ಸೇರಿಸಿಕೊಂಡಿತು.  ಕಾಶ್ಮೀರವನ್ನು ವಿಭಜಿಸಿ ಒಂದು ಭಾಗವನ್ನು ಶಾಶ್ವತವಾಗಿ ಪಾಕಿಸ್ತಾನಕ್ಕೆ ಕೊಟ್ಟುಬಿಡುವ ಇರಾದೆ ನೆಹರೂ ಸರಕಾರಕ್ಕಿತ್ತೆಂಬ ಸೂಚನೆಯನ್ನು ಜುಲೈ ೧೯೪೮ರಲ್ಲಿ ಶ್ರೀನಗರಕ್ಕೆ ಆಗಮಿಸಿದ್ದ ವಿಶ್ವಸಂಸ್ಥೆಯ ನಿಯೋಗದ ಸದಸ್ಯರಾಗಿದ್ದ ಜೋಸೆಫ್ ಕೋರ್ಬೆಲ್ ತಮ್ಮ ಪುಸ್ತಕ Danger in Kashmirನಲ್ಲಿ ನೀಡುತ್ತಾರೆ.

            ಹೋಗಲಿ, ತನ್ನ ಹಿಡಿತದಲ್ಲಿರುವ ಪ್ರದೇಶವನ್ನಾದರೂ ತನ್ನದಾಗಿಸಿಕೊಳ್ಳಲು ಭಾರತ ಪ್ರಾಮಾಣಿಕ ಪ್ರಯತ್ನ ಮಾಡಿದೆಯೇ?  ಶ್ರೀನಗರದಲ್ಲಿ ಒಬ್ಬರ ಮೇಲೊಬ್ಬರನ್ನು ಎತ್ತಿಕಟ್ಟುವ ತಂತ್ರದಿಂದಷ್ಟೇ ಕಾಶ್ಮೀರವನ್ನು ಭಾರತದ ಒಕ್ಕೂಟದಲ್ಲಿ ಉಳಿಸಿಕೊಳ್ಳಬಹುದೆಂದು ನಂಬಿರುವ ದೆಹಲಿಯ ಬಹುತೇಕ ಎಲ್ಲ ಸರಕಾರಗಳೂ ಅದನ್ನೇ ಮಾಡುತ್ತಾ ಬಂದಿವೆ.  ಐವತ್ತರ ದಶಕದಲ್ಲಿ ಇದನ್ನು ಆರಂಭಿಸಿ ಅರವತ್ತರ ದಶಕದಲ್ಲಿ ಮುಂದುವರೆಸಿ ಭಾರತದ ಬಗ್ಗೆ ಕಾಶ್ಮೀರಿಗಳಲ್ಲಿ ವಿಶ್ವಾಸ ಕುಂದುವಂತೆ ಮಾಡಿದ ದೆಹಲಿ ಇಂದಿರಾಗಾಂಧಿವರ ಕಾಲದಲ್ಲಿ ಸ್ವಲ್ಪ ಸಕಾರಾತ್ಮಕ ಹಾದಿ ಹಿಡಿದಿತ್ತು.  ಅದರೆ ಅವರ ಮಗ ರಾಜೀವ್ ಗಾಂಧಿ ಅದೆಲ್ಲವನ್ನು ಹಾಳುಮಾಡಿ ೧೯೮೮ರ ವಿಧಾನಸಭಾ ಚುನಾವಣೆಗಳಲ್ಲಿ ಅನೀತಿಯುತ ಚಟುವಟಿಕೆಗಳಿಗೆ ಮುಂದಾದದ್ದೇ ಪರಿಸ್ಥಿತಿ ಮತ್ತೆ ಹಿಂದಿನ ಹಾದಿ ಹಿಡಿಯಿತು.  ೧೯೮೮ರಲ್ಲಿ ಮೊದಲ ಅಫ್ಘನ್ ಯುದ್ದ ನಿಲುಗಡೆಗೆ ಬಂದದ್ದರಿಂದ ಕೆಲಸ ಕಳೆದುಕೊಂಡ  ಭಯೋತ್ಪಾದಕರನ್ನು ಪಾಕಿಸ್ತಾನದ ಐಎಸ್‌ಐ ಕಾಶ್ಮೀರಕ್ಕೇ ಅಟ್ಟಿದ್ದೇ ೯೦ರ ದಶಕದಲ್ಲಿ ಕಣಿವೆಯಲ್ಲಿ ಅಶಾಂತಿ, ಭಯೋತ್ಪಾದನೆ ಭುಗಿಲೆದ್ದುದಕ್ಕೆ ಕಾರಣವಾದರೂ ಭಾರತವಿರೋಧಕ್ಕ್ಕೆ ಫಲವತ್ತಾದ ಪರಿಸ್ಥಿತಿಯನ್ನು ತನ್ನ ಚುನಾವಣಾ ಭ್ರಷ್ಟಾಚಾರಗಳ ಮೂಲಕ ನಿರ್ಮಿಸಿದ್ದು ರಾಜೀವ್ ಗಾಂಧಿ ಸರಕಾರ ಎನ್ನುವುದನ್ನು ನಾವು ಮರೆಯಬಾರದು.

ಕಾಶ್ಮೀರದಲ್ಲಿ ಒಂದರ ಹಿಂದೊಂದರಂತೆ ರಾಜಕೀಯ ಗೊಂದಲಗಳನ್ನು ಸೃಷ್ಟಿಸಿಕೊಂಡ ಭಾರತ ತನ್ನ ವಿರುದ್ಧ ಉಪಯೋಗಿಸಲು ಪಾಕಿಸ್ತಾನಕ್ಕೆ ಹಲವು ಟೀಕಾಸ್ತ್ರಗಳನ್ನು ಒದಗಿಸಿದೆ.  ಅದರಲ್ಲಿ ಬಹುಮುಖ್ಯವಾದುದು ಕಾಶ್ಮೀರ ಭಾರತದಲ್ಲಿ ವಿಲೀನವಾದದ್ದಕ್ಕೆ ಸಂಬಂಧಿಸಿದ್ದು.  ಮಹಾರಾಜ ಹರಿಸಿಂಗ್ Iಟಿsಣಡಿumeಟಿಣ oಜಿ ಂಛಿಛಿessioಟಿಗೆ ಸಹಿ ಹಾಕಲೇ ಇಲ್ಲ ಎಂದು ಪಾಕಿಸ್ತಾನ ವಾದಿಸುತ್ತಿದೆ.  ದುರಂತವೆಂದರೆ ಇದಕ್ಕೆ ಅವಕಾಶ ಒದಗಿಸಿದವರು ನಾವೇ.  ಹರಿಸಿಂಗ್‌ರನ್ನು ಭೇಟಿಯಾಗಲು ಕಾಶ್ಮೀರಕ್ಕೆ ಹೋದವರು ಸರ್ದಾರ್ ಪಟೇಲ್‌ರ ಬಲಗೈಯಾಗಿದ್ದ ವಿ. ಪಿ. ಮೆನನ್ ಮತ್ತು (ಮುಂದೆ ಫೀಲ್ಡ್ ಮಾರ್ಷಲ್ ಆದ) ಮಾನೆಕ್‌ಷಾ.  ಹರಿಸಿಂಗ್ ಶ್ರೀನಗರದಿಂದ ಜಮ್ಮುವಿಗೆ ಓಡಿಬಂದ ನಂತರ ತಾವು ಅವರನ್ನು ಜಮ್ಮುವಿನಲ್ಲಿ ಭೇಟಿಯಾಗಿ ಪತ್ರಕ್ಕೆ ಸಹಿ ಹಾಕಿಸಿಕೊಂಡದ್ದಾಗಿ ಮೆನನ್ ತಮ್ಮ Integration of Indian Statesನಲ್ಲಿ ಬರೆಯುತ್ತಾರೆ.  ಆದರೆ ವಿದ್ವಾಂಸ ಪ್ರೇಮಶಂಕರ್ ಝಾ ಅವರಿಗೆ ೧೯೯೩ರಲ್ಲಿ ನೀಡಿದ ಸಂದರ್ಶನದಲ್ಲಿ ಮಾನೆಕ್‌ಷಾ ಹೇಳಿದ್ದು ಮಹಾರಾಜರು ಜಮ್ಮುವಿಗೆ ಹೊರಡುವ ಮೊದಲು ಶ್ರೀನಗರದಲ್ಲೇ ಪತ್ರಕ್ಕೆ ಸಹಿ ಹಾಕಿದರು ಎಂದು.  ಕಾಶ್ಮೀರಕ್ಕೆ ಹೋದ ಇಬ್ಬರು ಗಣ್ಯರು ಹೀಗೆ ಬೇರೆಬೇರೆ ಹೇಳಿಕೆ ನೀಡಿದರೆ ಯಾರನ್ನು ನಂಬುವುದು?

ಕಾಶ್ಮೀರದ ಬಗ್ಗೆ ಪಾಕಿಸ್ತಾನ ಎಲ್ಲೆಡೆ ಮಾಡುತ್ತಿರುವ ಅಪಪ್ರಚಾರಗಳಿಗೆ ಭಾರತವೆಂದಾದರೂ ಪರಿಣಾಮಕಾರಿ ಪ್ರತಿತಂತ್ರ ರೂಪಿಸಿದೆಯೇ, ಪಾಕಿಸ್ತಾನದ ಸುಳ್ಳುಗಳನ್ನು ಅಂತರರಾಷ್ಟ್ರೀಯ ರಂಗದಲ್ಲಿ ಬಯಲುಮಾಡಿದೆಯೇ ಅಂದರೆ ಅದೂ ಇಲ್ಲ.  ನಿಜ ಹೇಳಬೇಕೆಂದರೆ ಪಾಕಿಸ್ತಾನಕ್ಕೆ ಮುಸ್ಲಿಮರ ಮೇಲಾಗಲೀ, ಕಾಶ್ಮೀರಿಗಳ ಮೇಲಾಗಲೀ ಯಾವುದೇ ಪ್ರೀತಿಯಿಲ್ಲ.  ಇನ್ನೂ ಹಿಂದಕ್ಕೆ ಹೋಗುವುದಾದರೆ ಆರಂಭದಿಂದಲೂ ಮುಸ್ಲಿಂ ಲೀಗ್ ಮತ್ತು ಪಾಕಿಸ್ತಾನೀ ನಾಯಕರು ರಾಜಕೀಯ ಅಧಿಕಾರ ಹಾಗೂ ಸವಲತ್ತುಗಳಿಗಾಗಿ ಧರ್ಮವನ್ನು ದುರುಪಯೋಗ ಪಡಿಸಿಕೊಳ್ಳುತ್ತಲೇ ಬಂದಿದ್ದಾರೆ.  ಪಾಕಿಸ್ತಾನದ ನಿರ್ಮಾಣ ಉಪಖಂಡದ ಮುಸ್ಲಿಮರಿಗಾಗಿ ಎಂದು ಘೋಷಿಸಿದ ಜಿನ್ನಾ ಹೊಸರಾಷ್ಟ್ರ ಉದಯಿಸುತ್ತಿದ್ದಂತೇ ಹಿಂದೂ ಬಹುಸಂಖ್ಯಾತ ಜೈಪುರ, ಜೋಧಪುರ, ಜೈಸಾಲ್ಮೇರ್‌ಗಳ ಅರಸರಿಗೆ ಅಮಿಷವೊಡ್ಡಿ ಆ ರಾಜ್ಯಗಳನ್ನು ಪಾಕಿಸ್ತಾನಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸಿದರು.  ಮತ್ತೆ, ಭಾರತದ ವಿವಿದೆಡೆಗಳಿಂದ ಮುಸ್ಲಿಮರು ಪಾಕಿಸ್ತಾನದತ್ತ ಧಾವಿಸುವುದನ್ನು ವಿರೋಧಿಸಿ ಆ ದೇಶದ ಮೊದಲ ಪ್ರಧಾನಮಂತ್ರಿ ಲಿಯಾಖತ್ ಅಲೀ ಖಾನ್ ಪಾಕಿಸ್ತಾನಕ್ಕೆ ಬರುವ ಹಕ್ಕಿರುವುದು ಪೂರ್ವ ಪಂಜಾಬಿನ ಮುಸ್ಲಿಮರಿಗೆ ಮಾತ್ರ.  ಯುನೈಟೆಡ್ ಪ್ರಾವಿನ್ಸ್ ಸೇರಿದಂತೆ ಇನ್ನಾವ ಪ್ರದೇಶದ ಮುಸ್ಲಿಮರಿಗೂ ಪಾಕಿಸ್ತಾನದಲ್ಲಿ ಸ್ಥಳ ಇಲ್ಲ ಎಂದು ಬಹಿರಂಗ ಹೇಳಿಕೆ ನೀಡಿದರು.  (ಇದೇ ಲಿಯಾಖತ್ ಅಲೀ ಖಾನ್ ಮೂಲತಃ ಯುನೈಟೆಡ್ ಪ್ರಾವಿನ್ಸ್ ಅಂದರೆ ಇಂದಿನ ಉತ್ತರ ಪ್ರದೇಶದವರು!)  ಇವೆಲ್ಲಕ್ಕಿಂತಲೂ ಕಿರೀಟಪ್ರಾಯವಾದ ಘಟನೆಯೆಂದರೆ ಪೂರ್ವ ಪಾಕಿಸ್ತಾನದ ಬಗ್ಗೆ ಪಾಕಿಸ್ತಾನೀ ನಾಯಕರ ನೀತಿ.  ಪೂರ್ವ ಪಾಕಿಸ್ತಾನ (ಈಗಿನ ಬಾಂಗ್ಲಾದೇಶ) ಭೌಗೋಳಿಕವಾಗಿ ಪುಟ್ಟದಾದರೂ ಪಾಕಿಸ್ತಾನದ ಒಟ್ಟು ಜನಸಂಖ್ಯೆಯ ಶೇಕಡಾ ೫೬ರಷ್ಟು ಅಲ್ಲಿದ್ದರು.  ಜನಸಂಖ್ಯೆಯ ಆಧಾರದಲ್ಲಿ ನಿಜವಾದ ಪಾಕಿಸ್ತಾನವೆಂದರೆ ಪೂರ್ವ ಪಾಕಿಸ್ತಾನವೇ.  ಆದರೆ ೧೯೫೫ರಲ್ಲಿಪ್ರಧಾನಿ ಚೌಧರಿ ಮಹಮದ್ ಆಲಿಯವರು ಪೂರ್ವ ಪಾಕಿಸ್ತಾನವನ್ನು ತೆಗೆದುಕೊಂಡು ಬದಲಿಗೆ ಕಾಶ್ಮೀರವನ್ನು ಕೊಡುವಂತೆ ಭಾರತವನ್ನು ಕೇಳಿದ್ದರು!  ಇದೆಲ್ಲವುಗಳ ಅರ್ಥ ಪಾಕಿಸ್ತಾನೀ ನಾಯಕರಿಗೆ ಇಸ್ಲಾಮ್ ಮತ್ತು ಮುಸ್ಲಿಮರ ಬಗ್ಗೆ ಯಾವ ಕಾಳಜಿಯೂ ಇಲ್ಲ.  ಧರ್ಮವೆನ್ನುವುದು ಅವರ ಕೈಯಲ್ಲಿ ಬೇರೆಲ್ಲವನ್ನೂ ಗಳಿಸಿಕೊಳ್ಳಲು ಉಪಯೋಗಕ್ಕೆ ಬರುವ ಒಂದು ಆಯುಧ ಅಷ್ಟೇ.  ಅವರ ಕಾಶ್ಮೀರಪ್ರೀತಿಯ ಹಿಂದಿರುವುದೂ ಆರ್ಥಿಕ ಲಾಲಸೆ.  ಇಸ್ಲಾಂ ಅಲ್ಲ.   ೪೭-೪೮ರ ಯುದ್ಧ, ನಂತರದ ಕದನವಿರಾಮದ ಪರಿಣಾಮವಾಗಿ ಅಸ್ತಿತ್ವಕ್ಕೆ ಬಂದ ಹತೋಟಿರೇಖೆಯಿಂದಾಗಿ ಕಾಶ್ಮೀರೀ ಕಣಿವೆಯೊಂದನ್ನುಳಿದು ಇತರೆಲ್ಲಾ ಮುಸ್ಲಿಮ್ ಪ್ರದೇಶಗಳು ಪಾಕಿಸ್ತಾನದ ವಶವಾಗಿವೆ.  ಅದರರ್ಥ ಪಾಕಿಸ್ತಾನ ಶ್ರೀನಗರವನ್ನೊಳಗೊಂಡ ಕಾಶ್ಮೀರ್ ಕಣಿವೆಯನ್ನು ಮಾತ್ರ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸಬೇಕು ಎಂದು ನಿಷ್ಪಕ್ಷಪಾತೀ ಮನೋಭಾವದವರೆಲ್ಲರೂ ಭಾವಿಸುವುದು ಸಹಜ.  ಆದರೆ ಪಾಕಿಸ್ತಾನ ಇಡೀ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಕೇಳುತ್ತಿದೆ.  ಮುಸ್ಲಿಂ ಅಲ್ಲದ ಪ್ರದೇಶಗಳೂ ಅದಕ್ಕೆ ಯಾಕೆ ಬೇಕು?  ಇದಕ್ಕೆ ಉತ್ತರ ಆರ್ಥಿಕ ಸಂಪನ್ಮೂಲಗಳು.  ಸಿಂಧೂ ಮತ್ತು ಪಾಕಿಸ್ತಾನದ ಎಲ್ಲ ನದಿಗಳೂ ಹರಿದುಬರುವುದು ಬೌದ್ಧ ಮತ್ತು ಹಿಂದೂ ಪ್ರದೇಶಗಳ ಮೂಲಕ.  ಈ ಪ್ರದೇಶಗಳು ಭಾರತದ ವಶದಲ್ಲಿಯೇ ಉಳಿದರೆ ಪಾಕಿಸ್ತಾನ ತನ್ನ ನೀರಿನ ಅಗತ್ಯಕ್ಕಾಗಿ ಯಾವಾಗಲೂ ಭಾರತದ ದಾಕ್ಷಿಣ್ಯದಲ್ಲಿರಬೇಕಾಗುತ್ತದೆ.  ಭಾರತವೇನಾದರೂ ಆ ನದಿಗಳನ್ನು ತಡೆಗಟ್ಟಿದರೆ ಪಾಕಿಸ್ತಾನದ ಮೇಲೆ ಅದರ ಪರಿಣಾಮ ಭೀಕರ.  ಇಂತಹ ದುರವಸ್ಥೆಗೆ ಸಿಲುಕಬಾರದೆಂದೇ ಪಾಕಿಸ್ತಾನ ಇಡೀ ರಾಜ್ಯದ ಮೇಲೆ ತನ್ನ ಹತೋಟಿ ಸ್ಥಾಪಿಸಲು ಹೆಣಗುತ್ತಿದೆ.  ಇದರರ್ಥ ಕಾಶ್ಮೀರ ಸಮಸ್ಯೆಗೆ ಮೂಲ ಧರ್ಮವಲ್ಲ.  ಕಾಶ್ಮೀರ ಒಂದು ಧಾರ್ಮಿಕ ಪ್ರಶ್ನೆಯಲ್ಲ.  ಅದೊಂದು ಭೌಗೋಳಿಕ, ಆರ್ಥಿಕ ಪ್ರಶ್ನೆ.  ಪಾಕಿಸ್ತಾನ ಅದನ್ನು ಮುಚ್ಚಿಟ್ಟು ಧರ್ಮದ ಕಾರಣವನ್ನು ಮುಂದೆಮಾಡುತ್ತಿದೆ.

ಕಾಶ್ಮೀರದ ಭೌಗೋಳಿತೆಗೆ ಭಾರತ ನೀಡಿದಷ್ಟು ಮಾನ್ಯತೆಯನ್ನು ಪಾಕಿಸ್ತಾನ ನೀಡಿಲ್ಲ. ಪಾಕಿಸ್ತಾನದ  ವಶದಲ್ಲಿರುವ ಪ್ರದೇಶಗಳೆಲ್ಲವನ್ನು ಒಟ್ಟಿಗೆ ಪಾಕ್ ಆಕ್ರಮಿತ ಕಾಶ್ಮೀರ ಎಂದು ನಾವು ಕರೆದರೆ ಪಾಕಿಸ್ತಾನದ ನಿಲುವೇ ಬೇರೆ.  ಗಿಲ್ಗಿಟ್ ಮತ್ತು ಬಾಲ್ಟಿಸ್ತಾನಗಳನ್ನು ಕಾಶ್ಮೀರದ  ಭಾಗ ಎಂದು ಪಾಕಿಸ್ತಾನ ಪರಿಗಣಿಸುವುದಿಲ್ಲ.  ಅಕ್ಟೋಬರ್ ೨೭, ೧೯೪೭ರಂದು ಮೊದಲ ಕಾಶ್ಮೀರ ಯುದ್ಧ ಆರಂಭವಾದ ಆರು ದಿನಗಳ ನಂತರ ನವೆಂಬರ್ ೨ರಂದು ಗಿಲ್ಗಿಟ್‌ನಲ್ಲಿದ್ದ ಬ್ರಿಟಿಷ್ ಸೇನೆ ಬ್ರಿಟಿಷ್ ಸ್ಕೌಟ್ಸ್ನ ಕಮ್ಯಾಂಡರ್ ಅಲೆಕ್ಸಾಂಡರ್ ಬ್ರೌನ್ ಅಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿ ಆ ಪ್ರದೇಶ ಪಾಕಿಸ್ತಾನದ ಭಾಗವೆಂದು ಘೋಷಿಸಿದರು.  ಇದನ್ನೇ ಮುಂದುಮಾಡಿ ಪಾಕ್ ಸರಕಾರ ಗಿಲ್ಗಿಟ್ ಮತ್ತು ಬಾಲ್ಟಿಸ್ತಾನಗಳನ್ನು ಜಮ್ಮು ಮತ್ತು ಕಾಶ್ಮೀರದ ಭಾಗ ಎಂದು ಪರಿಗಣಿಸದೇ ತನ್ನ ಅವಿಭಾಜ್ಯ ಅಂಗ ಎಂದು ಹೇಳಿ ಅದಕ್ಕೆ ನಾರ್ದರ್ನ್ ಟೆರಿಟರೀಸ್ ಎಂಬ ಹೆಸರಿಟ್ಟು ಕೇಂದ್ರ ಸರಕಾರದ ನೇರ ಆಡಳಿತಕ್ಕೆ ಒಳಪಡಿಸಿಕೊಂಡಿತು.  (೨೦೦೮ರಲ್ಲಿ ಅದರ ಹೆಸರನ್ನು ಅಧಿಕೃತವಾಗಿ ಗಿಲ್ಗಿಟ್-ಬಾಲ್ಟಿಸ್ತಾನ್ ಎಂದು ಬದಲಾಯಿಸಲಾಯಿತು).  ಅದರ ಹೊರತಾಗಿ ಭಾರತದ ವಶದಲ್ಲಿರುವ ಕಾಶ್ಮೀರಕ್ಕೆ ಪಶ್ಚಿಮ ಮತ್ತು ವಾಯುವ್ಯದಲ್ಲಿ ಮತ್ತು ಗಿಲ್ಗಿಟ್‌ನ ದಕ್ಷಿಣಕ್ಕಿರುವ ಒಂದು ಬಾಗಿಸಿದ ಬೆರಳಿನಂತಿರುವ ಪುಟ್ಟ ಪ್ರದೇಶವನ್ನು ಮಾತ್ರ ಕಾಶ್ಮೀರದ ಭಾಗವೆಂದು ಕರೆದು ತಾನದನ್ನು ಭಾರತದಿಂದ ವಿಮೋಚನೆಗೊಳಿಸಿರುವುದಾಗಿ ಹೇಳಿಕೊಂಡು ಅದನ್ನು ಅಜಾದ್ ಕಶ್ಮೀರ್ (ಸ್ವತಂತ್ರ ಕಾಶ್ಮೀರ) ಎಂಬ ಹೆಸರಿನಿಂದ ಪಾಕಿಸ್ತಾನ ಕರೆಯುತ್ತಿದೆ.

ಕಾಶ್ಮೀರದಲ್ಲಿ ಪ್ಲೆಬಿಸೈಟ್ ನಡೆಸಲು ಭಾರತ ತಯಾರಿಲ್ಲ ಎನ್ನುವ ಪಾಕಿಸ್ತಾನದ ಆಪಾದನೆಯೂ ಸುಳ್ಳಿನ ಕಂತೆ.  ಕಾಶ್ಮೀರಿಗಳು ತಮ್ಮ ಭವಿಷ್ಯವನ್ನು ತಾವೇ ನಿರ್ಧರಿಸಲು ಅನುವಾಗುವಂತೆ ಜನಮತಗಣನೆ ನಡೆಸುವ ಬಗ್ಗೆ ಮೊದಲು ಮಾತು ಕೊಟ್ಟಿದ್ದೇ ಭಾರತ.  ಯಾರೂ ಅದರ ಬಗ್ಗೆ ತಲೆ ಕೆಡಿಸಿಕೊಂಡಿರದಿದ್ದ ಕಾಲದಲ್ಲಿ ನೆಹರೂ ಅದನ್ನು ನವೆಂಬರ್ ೪, ೧೯೪೭ರಂದು ಆಲ್ ಇಂಡಿಯಾ ರೇಡಿಯೋದಲ್ಲಿ ಘೋಷಿಸಿಬಿಟ್ಟದ್ದು ಈಗ ಇತಿಹಾಸ.  ಆನಂತರ ವಿಶ್ವಸಂಸ್ಥೆಯೂ ಅದನ್ನೇ ಹೇಳಿತು.  ೧೯೪೮ರಲ್ಲಿ ಅದು ಅಂಗೀಕರಿಸಿದ ಮೂರು ನಿರ್ಣಯಗಳು ಹೀಗಿದ್ದವು: ೧. ಯುದ್ಧಸ್ತಂಭನವಾಗಬೇಕು, ೨. ಕಾಶ್ಮೀರದಿಂದ ತನ್ನ ಸೇನೆಯನ್ನು ಪಾಕಿಸ್ತಾನ ಹಿಂತೆಗೆದುಕೊಳ್ಳಬೇಕು, ೩. ಜನಮತಗಣನೆ ನಡೆಸಬೇಕು.  ಮೊದಲ ನಿರ್ಣಯವನ್ನು ಒಪ್ಪಿಕೊಂಡ ಭಾರತ, ಪಾಕಿಸ್ತಾನಗಳು ಜನವರಿ ೧, ೧೯೪೯ರಂದು ಕದನವಿರಾಮವನ್ನು ಘೋಷಿಸಿದವು.  ಎರಡನೆಯ ನಿರ್ಣಯವನ್ನು ಪಾಕಿಸ್ತಾನ ಇನ್ನೂ ಒಪ್ಪಿಕೊಂಡಿಲ್ಲ.  ತನ್ನ ಸೇನೆಯನ್ನು ಕಾಶ್ಮೀರದಿಂದ ವಾಪಸ್ ಕರೆಸಿಕೊಂಡಿಲ್ಲ.  ತನ್ನ ಜವಾಬ್ದಾರಿ ನಿರ್ವಹಿಸದೇ, ಮೂರನೆಯ ನಿರ್ಣಯದಂತೆ ಜನಮತಗಣನೆಯಾಗಬೇಕೆಂದು ಏಲ್ಲೆಡೆ ಕೂಗಾಡುವುದರಲ್ಲೇ ಅದು ಸಮಯ ಕಳೆಯುತ್ತಿದೆ.  ವಾಸ್ತವವಾಗಿ ಜನಮತಗಣನೆ ಪಾಕಿಸ್ತಾನಕ್ಕೆ ಬೇಕಿಲ್ಲ.  ಅದರಲ್ಲಿ ತಾನು ಸೋಲುವುದಾಗಿ ಅದು ಸ್ಪಷ್ಟವಾಗಿ ಅರಿತಿದೆ.  ಕಾಶ್ಮೀರದ ಜನಸಂಖ್ಯೆಯಲ್ಲಿ ಶೇಕಡಾ ೩೪ರಷ್ಟಿರುವ ಹಿಂದೂ ಮತ್ತು ಬೌದ್ಧರು ಭಾರತದ ಪರ.  ಶೇಕಡಾ ೨೭ರಷ್ಟಿರುವ ಶಿಯಾಗಳಿಗೂ ಪಾಕಿಸ್ತಾನ ಬೇಡ.  ಇನ್ನುಳಿದ ಸುನ್ನಿಗಳಲ್ಲಿ ಕಣಿವೆಯಲ್ಲಿರುವವರ ಹೊರತಾಗಿ ಉಳಿದೆಡೆಯಲ್ಲಿನ ಬಹುಜನರು ಭಾರತದ ಪರ.  ಅವರ ಶೇಕಡಾವಾರು ಕೊನೇಪಕ್ಷ ೧೦ ಇರಬಹುದು ಎಂದು ಭಾವಿಸಿದರೂ ಭಾರತಕ್ಕೆ ಸಿಗುವ ಬೆಂಬಲ ಶೇಕಡಾ ೭೧ರಷ್ಟು.  ಜನಮತಗಣನೆಯ ಫಲಿತಾಂಶ ತನಗೆ ಅನುಕೂಲಕರವಾಗಿರುವುದಿಲ್ಲ ಎಂದು ಸ್ಪಷ್ಟವಾಗಿ ಅರಿತ ಪಾಕಿಸ್ತಾನ ಅದನ್ನು ಆಯೋಜಿಸುವುದಕ್ಕೆ ಅವಕಾಶ ನೀಡುತ್ತಿಲ್ಲ.  ಪರಿಸ್ಥಿತಿ ಹೀಗೆ ಮುಂದುವರೆಯುವುದು, ಕಾಶ್ಮೀರದ ಹೆಸರಿನಲ್ಲಿ ಭಾರತದಲ್ಲಿ ನಿರಂತರ ರಕ್ತದೋಕುಳಿ ಆಗುತ್ತಿರುವಂತೆ ನೋಡಿಕೊಳ್ಳುವುದು, ತನ್ಮೂಲಕ We ತಿiಟಟ mಚಿಞe Iಟಿಜiಚಿ beeಜ ತಿih housಚಿಟಿಜ ಛಿus ಎಂಬ ಐಎವ್‌ಐ ನ ಮಾಜೀ ನೇತಾರ ಹಮೀದ್ ಗುಲ್‌ನ ಹೇಳಿಕೆಯನ್ನು ನಿರಂತರವಾಗಿ ಜಾರಿಯಲ್ಲಿರಿಸುವುದು ಇಸ್ಲಾಮಾಬಾದ್‌ನಲ್ಲಿ ಅಧಿಕಾರದ ಗದ್ದುಗೆ ಹಿಡಿಯುವ ಎಲ್ಲರ ನೀತಿಯಾಗಿದೆ.  ಆ ಮಾರ್ಗದಿಂದ ದೂರ ಸರಿದವರು ಅಧಿಕಾರದಲ್ಲಿರಲು ಸಾಧ್ಯವಿಲ್ಲ.  ೧೯೫೬ರಲ್ಲಿ ನಿಯಂತ್ರಣ ರೇಖೆಗೆ ಅಲ್ಪಸ್ವಲ್ಪ ಬದಲಾವಣೆ ಮಾಡಿ ಅಂತರರಾಷ್ಟ್ರೀಯ ಗಡಿರೇಖೆಯನ್ನಾಗಿಸಿ ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಂಡ ಜನರಲ್ ಇಸ್ಕಂದರ್ ಮಿರ್ಜಾರನ್ನು ಸೈನಿಕ ಕ್ರಾಂತಿಯಲ್ಲಿ ಉಚ್ಛಾಟಿಸಿ ಲಂಡನ್‌ಗೆ ಗಡೀಪಾರು ಮಾಡಲಾಯಿತು.  ೧೯೮೮ರಲ್ಲಿ ಅಂಥದೇ ಪ್ರಯತ್ನ ಮಾಡಿದ ಜಿಯಾ ಉಲ್ ಹಖ್‌ರನ್ನು ಒಂದು ವ್ಯವಸ್ಥಿತ ‘ವಿಮಾನಾಫಘಾತದ ಮೂಲಕ ಕೊಲ್ಲಲಾಯಿತು.  ಮತ್ತೆ ಅಂಥದೇ ಪ್ರಯತ್ನವನ್ನು ೨೦೦೬ ಮಾಡಹೊರಟ ಪರ್ವೆಜ್ ಮುಷರ್ರಫ್‌ಗೆ ಇನ್ನಿಲ್ಲದ ಕಾಟ ಕೊಟ್ಟು ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಲಾಯಿತು.

ಇನ್ನೂ ಒಂದು ಮಾತು: ಭಾರತವಿರೋಧೀ ಸುನ್ನಿಗಳಲ್ಲಿ ಗಣನೀಯ ಪ್ರಮಾಣದ ಜನ ಕಾಶ್ಮೀರ ಸ್ವತಂತ್ರವಾಗಲು ಬಯಸುತ್ತಾರೆ.  ಪಾಕಿಸ್ತಾನದಲ್ಲಿ ಪಂಜಾಬಿಗಳು ಉಳಿದ ಸಿಂಧೀ, ಬಲೂಚೀ ಮತ್ತು ಪುಷ್ತೂಗಳ ಮೇಲೆ ದಬ್ಬಾಳಿಕೆ ನಡೆಸುತ್ತಿರುವಂತೆ ತಮ್ಮ ಮೇಲೂ ನಡೆಸಬಹುದು, ಪರಿಣಾಮವಾಗಿ ತಮ್ಮ ಕಶ್ಮೀರಿಯತ್ನ ಅಂತ್ಯವಾದಂತೇ ಎಂಬ ಭಯ ಅವರಲ್ಲಿ ಗಾಢವಾಗಿದೆ.  ಈ ಎಲ್ಲಾ ವಾಸ್ತವಗಳ ಅರಿವು ಪಾಕಿಸ್ತಾನಕ್ಕಿದೆ.  ಸ್ವತಂತ್ರ ಕಾಶ್ಮೀರವನ್ನು ಸಮರ್ಥಿಸುವ ಜೆಕೆಎಲ್‌ಎಫ್ ಮತ್ತು ಹಿಜ್ಬುಲ್ ಮುಜಾಹಿದೀನ್ ಸಂಘಟನೆಗಳನ್ನು ಪಾಕಿಸ್ತಾನ ಬೆಂಬಲಿಸುವುದಿಲ್ಲ.  ಅದರ ಬೆಂಬಲವೇನಿದ್ದರೂ ಪಾಕಿಸ್ತಾನೀ ಪಂಜಾಬಿಗಳಿಂದ ತುಂಬಿರುವ ಲಶ್ಕರ್ ಎ ತೋಯ್ಬಾಗೆ ಮತ್ತದರ ಸಹವರ್ತಿಗಳಿಗೆ ಮಾತ್ರ.

ಇದೆಲ್ಲವನ್ನೂ ದೆಹಲಿ ಸರಕಾರ ಕಾಶ್ಮೀರಿಗಳಿಗೆ, ಭಾರತದ ಇತರೆಡೆಗಳ ಜನತೆಗೆ, ವಿಶ್ವಕ್ಕೆ, ಮುಖ್ಯವಾಗಿ ಮುಸ್ಲಿಂ ರಾಷ್ಟ್ರಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನೇಕೆ ಮಾಡುತ್ತಿಲ್ಲ?  ಬದಲಾಗಿ, ಕಣಿವೆಯಲ್ಲಿ ಪರಿಸ್ಥಿತಿ ಸುಧಾರಿಸುತ್ತಿದ್ದ ಸಮಯದಲ್ಲಿ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿ ತನ್ನ ವಿರುದ್ದ ಅಪಪ್ರಚಾರಕ್ಕೆ ಹೊಸ ಅವಕಾಶ ಒದಗಿಸಿಕೊಟ್ಟಿದೆ.  ಇದು ಸಾಲದು ಎಂಬಂತೆ, ಗುರುವಿನ ಶವವನ್ನು ಕಾಶ್ಮೀರಕ್ಕೆ ಕಳುಹಿಸಿಕೊಡಬೇಕೆ ಬೇಡವೇ ಎನ್ನುವ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗಬೇಕು ಎಂದು ಪ್ರಧಾನಿ ಮನಮೋಹನ್ ಸಿಂಗ್ ಸೋಮವಾರ ಹೇಳಿಕೆ ನೀಡಿದ್ದಾರೆ.  ಸಂಸತ್ತಿನಲ್ಲಿ ಚರ್ಚೆಯಾಗುತ್ತದೆ ಎಂದರೆ ಸ್ವಯಂಘೋಷಿತ ಎಕ್ಸ್‌ಪರ್ಟ್ಗಳ ನಡುವೆ ಟಿವಿ ಚಾನಲ್‌ಗಳಲ್ಲಿ, ಭಾರತವಿರೋಧವನ್ನೇ ಬಂಡವಾಳವಾಗಿಸಿಕೊಂಡಿರುವ ಬುದ್ಧಿಜೀವಿಗಳ ನಡುವೆ ಪತ್ರಿಕೆಗಳಲ್ಲಿ, ಉದ್ರಿಕ್ತ ಜನರ ನಡುವೆ ಕಾಶ್ಮೀರದ ಬೀದಿಬೀದಿಗಳಲ್ಲಿ, ಭಾರತವಿರೋಧೀ ಮುಸ್ಲಿಂ ರಾಷ್ಟ್ರಗಳ ನಡುವೆ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಚರ್ಚೆ ಭುಗಿಲೇಳುತ್ತದೆ ಎಂದರ್ಥ.  ಇದು ಬೇಕಿತ್ತೇ?  ಕಾಶ್ಮೀರವನ್ನು ವಿವಾದಾತೀತವಾಗಿ ತನ್ನೊಳಗೆ ಐಕ್ಯಗೊಳಿಸಿಕೊಳ್ಳುವುದು ಭಾರತಕ್ಕೆ ಬೇಕೇ ಬೇಡವೆ?

 

2 comments:

  1. Liked the scholarly article very much. That a writer of your calibre is there in Karnataka writing in Kannada is remarkable. You must consider getting a wider readership across and beyond India.

    The last paragraph is especially noteworthy. Why are we second-rate in everything - be it policies or be it products?

    ReplyDelete