ಚಿಕ್ಕಂದಿನಲ್ಲಿ ಅಜ್ಜಿಯಿಂದ ಒಂದು ಕಥೆ ಕೇಳಿದ್ದೆ. ಉಪಮೆ ಅಲಂಕಾರಗಳೊಡನೆ ಅಜ್ಜಿ ಒಂದಕ್ಕಿಂತ ಹೆಚ್ಚುಸಲ ಹೇಳಿ, ಪ್ರತಿಸಲವೂ
ಕಣ್ಣೀರು ಬರುವಂತೆ ಮಾಡುತ್ತಿದ್ದ ಆ ಕಥೆಯ ಸಂಕ್ಷಿಪ್ತ ರೂಪ:
ಒಬ್ಬ ಹುಡುಗ. ಮೈದಾಳ
ರಾಮಯ್ಯ ಅಂತ ಅವನ ಹೆಸರು. ಅಪ್ಪ ಅಮ್ಮನಿಗೆ ಒಬ್ಬನೇ
ಮಗ. ಹಿಂದಿಲ್ಲ ಮುಂದಿಲ್ಲ. ಆಡಾಡಿಕೊಂಡು ಬೆಳೆದ ಅವನಿಗೆ ಐದು ವರ್ಷವಾದಾಗ ಸ್ಕೂಲಿಗೆ
ಸೇರಿಸಿದರು. ಎರಡುಮೂರು ತಿಂಗಳಲ್ಲಿ ಗೌರಿಹಬ್ಬ ಬಂತು. ಹಬ್ಬಕ್ಕೆ ಎರಡುಮೂರು ದಿನವಿರುವಾಗಲೇ ಓರಗೆಯ ಹುಡುಗರೆಲ್ಲಾ
ಹಬ್ಬಕ್ಕೆ ಅಕ್ಕ ಭಾವನನ್ನು ಕರೆತರಲೆಂದು ಮೇಷ್ಟರನ್ನು ಕೇಳಿ ರಜೆ ಪಡೆದುಕೊಂಡು ಹೊರಟುಹೋದರು. ಹೋಗುವ ಮೊದಲು ರಾಮಯ್ಯನನ್ನು "ನೀನು ಅಕ್ಕ ಭಾವನನ್ನು ಕರೆಯಲು
ಯಾವಾಗ ಹೋಗುತ್ತೀ?" ಎಂದು ಕೇಳಿ ಅವನ ತಲೆಯೊಳಗೆ ಹುಳು ಬಿಟ್ಟರು. ರಾಮಯ್ಯ ಮನೆಗೆ ಬಂದವನೇ ಹಬ್ಬಕ್ಕೆ ಅಕ್ಕ ಭಾವನನ್ನು ಕರೆಯಲು
ತಾನೂ ಹೊರಡುವುದಾಗಿ ಅಪ್ಪ ಅಮ್ಮನಿಗೆ ಹೇಳಿದ. ಅವರು
"ಕಂದಾ, ನೀನು ಹುಟ್ಟಿದ್ದು ಒಂಟಿ, ಬೆಳೆದದ್ದು
ಒಂಟಿ, ನಿನಗ್ಯಾವ ಅಕ್ಕ? ನಿನಗೆ ಯಾವೂರ ಭಾವ?" ಎಂದು
ಹೇಳಿಕೊಂಡು ಕಣ್ಣೀರು ಹಾಕಿದರು. ಆದರೆ ರಾಮಯ್ಯನದು
ಒಂದೇ ಹಠ. "ಜತೆಯವರೆಲ್ಲಾ ಅಕ್ಕ ಭಾವನೊಡನೆ ಹಬ್ಬ ಆಚರಿಸುವುದಾದರೆ
ನಾನ್ಯಾಕೆ ಹಾಗೆ ಮಾಡಬಾರದು? ನನಗೆ
ಅಕ್ಕ ಭಾವ ಬೇಕೇಬೇಕು. ಅವರಿಲ್ಲದೇ ನಾನಂತೂ ಹಬ್ಬ
ಮಾಡುವುದೇ ಇಲ್ಲ, ಹಬ್ಬಕ್ಕೆಂದು
ನೀವು ನನಗೆ ತಂದಿರುವ ನಿಕ್ಕರ್ ಶರಟುಗಳನ್ನು ನಾನು ಹಾಕಿಕೊಳ್ಳುವುದಿಲ್ಲ. ನನಗೆ ಬೇಡ ಅವು.
ಬುಡುಬುಡಿಕೆ ತಿಮ್ಮಯ್ಯನ ಮೊಮ್ಮಕ್ಕಳಿಗೆ ಕೊಟ್ಟುಬಿಡಿ" ಎಂದೆಲ್ಲಾ ರಗಳೆ ಶುರುಹಚ್ಚಿಕೊಂಡ. ದಾರಿ ಕಾಣದ ಅಪ್ಪ ಅಮ್ಮ "ಕಂದಾ, ಪಾರ್ವತಿಯೇ
ನಿನ್ನಕ್ಕ, ಪರಶಿವನೇ ನಿನ್ನ ಭಾವ.
ಎಲ್ಲರಂತವರಲ್ಲ ನಿಮ್ಮಕ್ಕ ಭಾವ. ಅವರಿರುವುದು
ದೂರದ ಬೆಟ್ಟಗಳ ಸೀಮೆಯಲ್ಲಿ. ಅಲ್ಲಿಗೆ ಹೇಗೆ ಹೋಗುತ್ತೀಯಾ
ಮಗನೇ?" ಎಂದು ಹೇಳಿ ಅವನ ಉತ್ಸಾಹವನ್ನು ತಗ್ಗಿಸಲು ನೋಡಿದರು. ರಾಮಯ್ಯ ಅದಕ್ಕೂ ಬಗ್ಗಲಿಲ್ಲ. "ನನ್ನಕ್ಕ ಭಾವ ಅದೆಷ್ಟೇ ಯೋಜನ ದೂರದಲ್ಲಿರಲಿ, ದಾರಿ
ಒಂದು ತೋರಿಸಿಬಿಡಿ ಸಾಕು, ನಾನು ಹೋಗಿ ಕರೆದುಕೊಂಡು ಹಬ್ಬದ ದಿನ ಬೆಳಿಗ್ಗೆ ಬೆಳಿಗ್ಗೆಯೇ ಬಂದುಬಿಡುತ್ತೇನೆ"
ಎಂದ! ಅವನ ಹಠಕ್ಕೆ ಕೊನೆಗೂ ಸೋತ ಅಪ್ಪ ಅಮ್ಮ ಅವನ
ಹಣೆಯಲ್ಲಿಬರೆದಂತಾಗಲಿ ಎಂದು ತಮ್ಮನ್ನೇ ತಾವು ಸಂಭಾಳಿಸಿಕೊಂಡು ಅವನಿಗೊಂದು ಬುತ್ತಿಕಟ್ಟಿಕೊಟ್ಟು, ಸೋರೆಬುರುಡೆಯಲ್ಲಿ
ನೀರು ತುಂಬಿಕೊಟ್ಟು, ಊರ ಹೆಬ್ಬಾಗಿಲವರೆಗೆ ಅವನೊಂದಿಗೆ ಹೆಚ್ಚೆ ಹಾಕಿ, ಬೆಟ್ಟದ
ಸೀಮೆಯ ದಾರಿಯನ್ನು ಅವನಿಗೆ ತೋರಿ, "ತಾಯೀ ಪಾರ್ವತೀ, ಅಪ್ಪಾ ಶಿವಪ್ಪಾ, ನಿಮ್ಮ
ಕಂದ ನಿಮ್ಮನ್ನು ಹುಡುಕಿಕೊಂಡು ಬರುತ್ತಿದ್ದಾನೆ, ಅವನ ಕೈಹಿಡಿದು
ಕಾಪಾಡಿ" ಎಂದು ಪಾರ್ವತಿ ಪರಮೇಶ್ವರಲ್ಲಿ ಮೊರೆಯಿಟ್ಟು, ದೂರದೂರ
ಸಾಗಿ ಹೋಗುತ್ತಿರುವ ಮಗನನ್ನೇ ನೋಡುತ್ತಾ ಕಣ್ಣೀರುಗರೆಯುತ್ತಾ ನಿಂತರು.
ರಾಮಯ್ಯ ನಡೆದ, ನಡೆದ, ದಿನಪೂರ್ತಿ ನಡೆದ. ಬೆಟ್ಟ ಹತ್ತಿದ, ಬೆಟ್ಟ ಇಳಿದ. ಉಹ್ಞುಂ, ಅಕ್ಕ ಭಾವನ ಊರು ಎದುರಾಗಲಿಲ್ಲ. ತಾನೇನಾದರೂ ದಾರಿ ತಪ್ಪಿದ್ದೇನೆಯೋ ಎಂದು ಅಳುಕಿ ಬೆಟ್ಟದ ಮೇಲೆ ನಿಂತು "ಓ ಅಕ್ಕಾ, ಓ ಭಾವಾ" ಎಂದು ಕೂಗಿದ. ಎದುರಿನ ಬೆಟ್ಟ ಅವನ ಕೂಗನ್ನು ಪ್ರತಿಧ್ವನಿಸಿ "ಓ" ಅಂದಿತು. "ಓ ಅಲ್ಲಿದ್ದಾರೆ ನಮ್ಮಕ್ಕ ಭಾವ" ಅಂದುಕೊಂಡು ಸರಸರನೆ ಈ ಬೆಟ್ಟವಿಳಿದು ಓಡುತ್ತಾ ಆ ಬೆಟ್ಟ ಹತ್ತಿದ ರಾಮಯ್ಯ. ಅಲ್ಲಿ ಅಕ್ಕ ಭಾವ ಇಲ್ಲ! ಮತ್ತೆ ಕೂಗಿದ: "ಓ ಅಕ್ಕಾ, ಓ ಭಾವಾ!" ಎದುರಿನ ಬೆಟ್ಟ "ಓ" ಎಂದು ಕೂಗಿ ಮಾರ್ದನಿ ಕೊಟ್ಟಿತು. "ಅಹ್ಹಾ! ಅಲ್ಲಿದ್ದೀರಾ? ಇರಿ, ಈಗ ಬಂದೆ" ಎನ್ನುತ್ತಾ ಚಣದಲ್ಲಿ ಅಲ್ಲಿಗೆ ತಲುಪಿದ. ಅಕ್ಕ ಭಾವ ಅಲ್ಲೂ ಇಲ್ಲ! ಮತ್ತೊಮ್ಮೆ ಕೂಗಿದ, ಮತ್ತೊಂದು ಬೆಟ್ಟ ಓಗೊಟ್ಟಿತು. ಮಗದೊಮ್ಮೆ ಕೂಗಿದ, ಮಗಗೊಂದು ಬೆಟ್ಟ ಓಗೊಟ್ಟಿತು. ರಾಮಯ್ಯ ಬೆಟ್ಟ ಹತ್ತಿದ, ಬೆಟ್ಟ ಇಳಿದ,.. ಅಕ್ಕ ಭಾವ ಕಣ್ಣಿಗೆ ಬೀಳಲಿಲ್ಲ.
ಎಳೆಗಾಲುಗಳು ಸೋತವು.
ಅಂಗಾಲುಗಳು ಬಿರಿದವು. ಮೈಯ ಆಯಾಸ, ಮನದ ನಿರಾಸೆಯಲ್ಲಿ
ರಾಮಯ್ಯ ಕುಸಿದು ಕುಳಿತ. ನನ್ನ ಕೂಗಿಗೆ ಓಗೊಡುವ ಅಕ್ಕ
ಭಾವ ನಾನು ಅವರ ಬಳಿ ತಲುಪುವಷ್ಟರಲ್ಲಿ ಮತ್ತೊಂದು ಬೆಟ್ಟಕ್ಕೆ ಓಡಿಹೋಗಿ ಅಡಗಿಕೊಳ್ಳುತ್ತಿರುವುದೇಕೆ? ನನ್ನ ಜತೆ ಅವರಿಗೇಕೆ ಕಣ್ಣುಮುಚ್ಚಾಲೆಯಾಟ? ಎಂದೆಲ್ಲಾ ಚಿಂತಿಸಿದ.
ನನ್ನಕ್ಕ ಭಾವ ನನಗೆ ಸಿಗುವುದಿಲ್ಲವೇನೋ.
ಹಬ್ಬಕ್ಕೆ ಅವರನ್ನು ಕರೆದುಕೊಂಡು ಹೋಗುವುದು ನನಗೆ ಸಾಧ್ಯವಾಗುವುದೇ ಇಲ್ಲವೇನೋ ಅಂದುಕೊಂಡು
ಉಕ್ಕಿದ ನಿರಾಶೆಯಲ್ಲಿ ಬಿಕ್ಕಿಬಿಕ್ಕಿ ಅತ್ತ. ಕೊನೆಗೊಂದು
ನಿರ್ಧಾರಕ್ಕೆ ಬಂದ. ಎದ್ದು ನಿಂತವನೇ ಸೀದಾ ಬೆಟ್ಟದ
ನೆತ್ತಿಯ ಮೇಲೆ ಹತ್ತಿದ. ಆಳ ಕಮರಿಯ ಅಂಚಿಗೆ ಹೋಗಿ
ನಿಂತ. ಎರಡೂ ಕೈಗಳನ್ನೂ ಮೇಲೆತ್ತಿ ಕೂಗಿದ: "ಓ ಅಕ್ಕಾ, ಓ ಭಾವಾ! ನೀವಿಲ್ಲದ ಹಬ್ಬ ನನಗೆ ಬೇಡ. ನಿಮ್ಮನ್ನು ಪಡೆಯದ ಈ ಬದುಕೂ ಬೇಡ." ಹಾಗಂದವನೇ ಕಣ್ಣುಗಳನ್ನು
ಮುಚ್ಚಿಕೊಂಡು ಕಮರಿಗೆ ಜಿಗಿದುಬಿಟ್ಟ.
ತಕ್ಷಣ ಶಿವ ಕಮರಿಯಲ್ಲಿ ನಿಂತು ತನ್ನ ಹೆಗಲ ಮೇಲಿದ್ದ ಟವಲ್ ಅಗಲಿಸಿ
ಹಿಡಿದು ಮೈದಾಳ ರಾಮಯ್ಯನನ್ನು ಆತುಕೊಂಡ. ಕಣ್ಣುಬಿಟ್ಟ
ರಾಮಯ್ಯನ ಮುಂದೆ ಶಿವಪಾರ್ವತಿ ಮುಗುಳ್ನಗುತ್ತಿದ್ದರು.
ಮೈದಾಳ ರಾಮಯ್ಯನಿಗೆ ಅವನ ಅಕ್ಕ ಭಾವ ಸಿಕ್ಕಿಹೋಗಿದ್ದರು!
ಅಕ್ಕ ಭಾವನನ್ನು ಕರೆದುಕೊಂಡು ರಾಮಯ್ಯ ಹೆಮ್ಮೆಯಿಂದ ಮನೆಗೆ ಬಂದ. ಅಪ್ಪ ಅಮ್ಮನಿಗೆ ಹಿಗ್ಗೋ ಹಿಗ್ಗು. ಎಲ್ಲರೂ ಸಂಭ್ರಮದಿಂದ ಗೌರಿಹಬ್ಬ ಆಚರಿಸಿದರು. ಆಮೇಲೆ ಶಿವ ಪಾರ್ವತಿ ಪ್ರತಿ ಗೌರಿಹಬ್ಬಕ್ಕೂ ಮೈದಾಳ ರಾಮಯ್ಯನ
ಮನೆಗೆ ಬರುತ್ತಿದ್ದರಂತೆ!
ನನ್ನಂತೇ ಆಗಷ್ಟೇ ಸ್ಕೂಲಿಗೆ ಹೋಗತೊಡಗಿದ್ದ ಮೈದಾಳ ರಾಮಯ್ಯನಿಗೆ ಶಿವ
ಮತ್ತು ಪಾರ್ವತಿ ತೋರಿದ ಪ್ರೀತಿ ನನಗೆ ತುಂಬಾ ಇಷ್ಟವಾಯಿತು. ದೇವರು ಅಂದರೆ ಹೀಗಿರಬೇಕು ಅನಿಸಿಬಿಟ್ಟಿತು. ಆಮೇಲಾಮೇಲೆ ನೂರೊಂದು ಕಥೆಗಳು- ಒಂಟಿಯಾಗಿ ಬಂಡೆಯ ಮೇಲೆ ಕೂತು ಅಳುವ ತಬ್ಬಲಿ ಹುಡುಗಿ, ಮಲತಾಯಿಯಿಂದ
ಬರೆ ಹಾಕಿಸಿಕೊಂಡ ಹುಡುಗ, ದಿಕ್ಕಿಲ್ಲದ ಮುದುಕಿ, ಮನುಷ್ಯರಿರಲಿ, ಹಸಿವಿನಿಂದ
ಕಂಗೆಟ್ಟ ಕುಂಟ ನರಿಯವರೆಗೆ ನೊಂದು ಅಳುವ ಎಲ್ಲ ಜೀವಿಗಳ ಮುಂದೂ ತಾವಾಗಿಯೇ ಪ್ರತ್ಯಕ್ಷರಾಗಿ ಮೂರು
ವರಗಳನ್ನೋ ಇಲ್ಲಾ ಮೂರು ಗುಳಿಗೆಗಳನ್ನೋ ಕೊಟ್ಟು ಅವರ ಕಷ್ಟಗಳು ದೂರವಾಗುವ ದಾರಿ ತೋರಿ ಹೋಗುತ್ತಿದ್ದ
ಶಿವ ಪಾರ್ವತಿಯರು ನನಗೆ ತುಂಬಾ ಆತ್ಮೀಯರಾಗಿಹೋದರು.
ಬೆಳೆಯುತ್ತಾ ಹೋದಂತೆ
ಬೇರೆಲ್ಲಾ ದೇವರ ಹೆಸರುಗಳಿಗಿಂತಲೂ ಶಿವನ ಹೆಸರು ಹೆಚ್ಚು ಕಿವಿಗೆ ಬಿದ್ದು, ಕಣ್ಣಿಗೆ
ಕಾಣಿಸಿಕೊಂಡು ಕುತೂಹಲ ಕೆರಳಿಸತೊಡಗಿತು. ಫೆಬ್ರವರಿಯಲ್ಲಿ
ಮದುವೆ ಸೀಜ಼ನ್ ಶುರುವಾಗುತ್ತಿದ್ದಂತೇ ಧಂಡಿಯಾಗಿ ಮನೆಗೆ ಬರುತ್ತಿದ್ದ ಲಗ್ನಪತ್ರಿಕೆಗಳಲ್ಲೆಲ್ಲಾ
ಶಿವಪಾರ್ವತಿಯರ ಕಲರ್ ಕಲರ್ ಚಿತ್ರಗಳು. ತನ್ನ ಹೆಸರನ್ನು
ಯಾರು ಬೇಕಾದರೂ ಹೇಗೆ ಬೇಕಾದರೂ ಉಪಯೋಗಿಸಿಕೊಳ್ಳುವ ಸ್ವಾತಂತ್ರ್ಯವನ್ನು ಶಿವ ಎಲ್ಲರಿಗೂ ನೀಡಿರುವ
ಪರಿ ನನಗೆ ಆಸಕ್ತಿದಾಯಕವೆನಿಸಿತು. ಶಂಭುಲಿಂಗೇಶ್ವರ
ಮೋಟಾರ‍್ಸ್, ಸಿದ್ಧಲಿಂಗೇಶ್ವರ ಲಾರಿ ಸರ್ವೀಸ್, ಪೋಟಲಿಂಗೇಶ್ವರ, ಬಾರ್
ಅಂಡ್ ರೆಸ್ಟೋರೆಂಟ್... ಒಂದೇ ಎರಡೇ!
ಶಿವನಾಮದ ಉಪಯೊಗ ಹಿಂದೂಧರ್ಮಕ್ಕೆ
ಮಾತ್ರ ಸೀಮಿತವಲ್ಲ. ನಿಮ್ಮ ಟ್ರ್ಯಾನ್‌ಸಿಸ್ಟರಿನ
ಮೀಡಿಯಂ ವೇವ್‌ನಲ್ಲಿ ನಿಮ್ಮೂರಿನ ಆಕಾಶವಾಣಿ ಕೇಂದ್ರಕ್ಕಿಂತಲೂ ಜೋರಾಗಿ ಸದ್ದು ಮಾಡುವ ಸುವಾರ್ತೆಗಳನ್ನು
ಸಾರುವ ಬಾನುಲಿ ಕೇಂದ್ರದಲ್ಲಿ ಬೈಬಲ್‌ನ ಯೆಹೋವ ದೇವರನ್ನು ಈಶ್ವರ್, ಪರಮೇಶ್ವರ್
ಎಂಬ ಹೆಸರುಗಳಿಂದ ಕರೆಯಲಾಗುತ್ತದೆ! ಬೈಬಲ್ ಅನ್ನು
ಆಳವಾಗಿ ಅಭ್ಯಾಸ ಮಾಡಿರುವ, ಆಗಾಗ ಚರ್ಚ್‌ಗಳಲ್ಲಿ ಧರ್ಮೋಪದೇಶ ಮಾಡುವ ನನ್ನ ಆತ್ಮೀಯ ಕ್ರಿಶ್ಚಿಯನ್
ಮಿತ್ರರೊಬ್ಬರ ಪ್ರಕಾರ "ಓಂ" ಕ್ರಿಶ್ಚಿಯನ್ನರಿಗೂ ಪವಿತ್ರ!
ಅಷ್ಟೇ ಅಲ್ಲ, "ಅವರವರ
ಭಾವಕೆ, ಅವರವರ ಭಕುತಿಗೆ..." ಎಂಬಂತೆ ಗಂಡಸರಲ್ಲಿ ಕೆಲವು ಐಲುಗಳನ್ನು ಇಷ್ಟಪಡುವ
ಹೆಂಗಸರು ಶಿವನನ್ನು ಅವನ eccentric ಸ್ವಭಾವಗಳಿಗಾಗಿಯೇ ಇಷ್ಟಪಟ್ಟು ಅವನೇ ತನ್ನ ಗಂಡ ಎಂದು ಭಾವಿಸಿದ
ಹಲವು ಉದಾಹರಣೆಗಳನ್ನು ನನ್ನ ಪರಿಚಯದ ಸ್ತ್ರೀಸಂಕುಲದಲ್ಲೇ ನಾನು ಕಂಡಿದ್ದೇನೆ! ಅಂಥವರಲ್ಲಿ ವಿಶ್ವವಿದ್ಯಾಲಯವೊಂದರಲ್ಲಿ ತತ್ವಶಾಸ್ತ್ರದ
ಪ್ರಾಧ್ಯಾಪಕಿಯಾಗಿರುವ ಕನ್ನಡ ಕುವರಿಯಿಂದ ಹಿಡಿದು ತನ್ನ ಅಲೌಕಿಕ ಪತಿಗಾಗಿ ಎಲ್ಲವನ್ನೂ ತೊರೆದು ಭಾರತಕ್ಕೆ
ಬಂದು ಸರಳ ಜೀವನ ಸಾಗಿಸುತ್ತಿರುವ ದಕ್ಷಿಣ ಆಫ್ರಿಕಾದ ಶ್ವೇತಕನ್ಯೆಯೂ ಸೇರಿದ್ದಾರೆ.
ಎಂಟರ್‌ಟೈನ್‌ಮೆಂಟ್‌ಗಾಗಲೀ ರೊಮಾನ್ಸ್‌ಗಾಗಲೀ ಸಮಯವೇ ಇಲ್ಲ, work is worship ಎನ್ನುವಂತೆ ಇಡೀ ಬದುಕನ್ನೇ ತನ್ನ ಕಾಯಕಕ್ಕೆ ಸಮರ್ಪಿಸಿಕೊಂಡು ಅದೆಲ್ಲೋ ಮೂಲೆಯಲ್ಲಿ ಸೈಲೆಂಟಾಗಿ ಕೂತಿರುವ ಬ್ರಹ್ಮ ಮತ್ತು ಯಾವಾಗಲೂ ಮಲಗಿಕೊಂಡು ಲಕ್ಷಿಯ ಜತೆ ಮಾತಾಡುತ್ತಾ ಮುದ್ದಣ - ಮನೋರಮೆಯರ ಸಲ್ಲಾಪವನ್ನು ನೆನಪಿಸುವ ವಿಷ್ಟುವಿಗಿಂತಲೂ (ಅವನ ಅವತಾರ‍್ಸ್ ವಿಷಯ ಬಿಡಿ) ಬೂದಿ ಬಳಿದುಕೊಂಡು, ಹಾವುಗಳನ್ನು ಹಿಡಿದುಕೊಂಡು ಎಲ್ಲೆಂದರಲ್ಲಿ ತಿರುಗುತ್ತಾ, ಮೂಡ್ ಬಂದರೆ ಕುಣಿಯುತ್ತಾ, ಹೆಂಡ ಕುಡಿಯುತ್ತಾ, ಇನ್ನೂ ಏನೇನೋ ಮಾಡುತ್ತಾ ಓಡಾಡುವ ಶಿವನನ್ನು ಗಂಡುಬೀರಿಯೊಬ್ಬಳು
ಎಂಟರ್‌ಟೈನ್‌ಮೆಂಟ್‌ಗಾಗಲೀ ರೊಮಾನ್ಸ್‌ಗಾಗಲೀ ಸಮಯವೇ ಇಲ್ಲ, work is worship ಎನ್ನುವಂತೆ ಇಡೀ ಬದುಕನ್ನೇ ತನ್ನ ಕಾಯಕಕ್ಕೆ ಸಮರ್ಪಿಸಿಕೊಂಡು ಅದೆಲ್ಲೋ ಮೂಲೆಯಲ್ಲಿ ಸೈಲೆಂಟಾಗಿ ಕೂತಿರುವ ಬ್ರಹ್ಮ ಮತ್ತು ಯಾವಾಗಲೂ ಮಲಗಿಕೊಂಡು ಲಕ್ಷಿಯ ಜತೆ ಮಾತಾಡುತ್ತಾ ಮುದ್ದಣ - ಮನೋರಮೆಯರ ಸಲ್ಲಾಪವನ್ನು ನೆನಪಿಸುವ ವಿಷ್ಟುವಿಗಿಂತಲೂ (ಅವನ ಅವತಾರ‍್ಸ್ ವಿಷಯ ಬಿಡಿ) ಬೂದಿ ಬಳಿದುಕೊಂಡು, ಹಾವುಗಳನ್ನು ಹಿಡಿದುಕೊಂಡು ಎಲ್ಲೆಂದರಲ್ಲಿ ತಿರುಗುತ್ತಾ, ಮೂಡ್ ಬಂದರೆ ಕುಣಿಯುತ್ತಾ, ಹೆಂಡ ಕುಡಿಯುತ್ತಾ, ಇನ್ನೂ ಏನೇನೋ ಮಾಡುತ್ತಾ ಓಡಾಡುವ ಶಿವನನ್ನು ಗಂಡುಬೀರಿಯೊಬ್ಬಳು
ಲೋಲುಕಿನ್ನರಿ ನುಡಿಸುತ್ತೀಯ
ಕೇರಿಕೇರಿ ತಿರುಗುತ್ತೀಯನಮ್ಮ ಕೇರಿಗೆ ಯಾಕೆ ಬರವಲ್ಲೋ?
ನಮ್ಮ ಕೇರಿಗೆ ಬಂದರೀಗ
ಕರಿಯ ಕಂಬಳಿ ಗದ್ದಿಗೆ ಹೂಡಿತಂದುಕೊಡುವೆ ಗಂಧವೀಳ್ಯವ
ಇಂತಹ ವಿಶಿಷ್ಟ ಶಿವ
ಮತ್ತು ಶಿವಲಿಂಗದ ಆರಾಧನೆಯ ಇತಿಹಾಸ ತುಂಬಾ ಪುರಾತನ.
ಶ್ರೀರಾಮ ಶಿವಲಿಂಗವನ್ನು ಪ್ರತಿಷ್ಟಾಪಿಸಿ ಆರಾಧಿಸಿದ ವಿಷಯ ರಾಮಾಯಣದಲ್ಲಿದೆ. ರಾವಣನಂತೂ ಅಪ್ಪಟ ಶಿವಭಕ್ತ. ಸಿಂಧೂ ಕಣಿವೆಯಲ್ಲಿ ದೊರೆತಿರುವ ಮುದ್ರಿಕೆಗಳಲ್ಲಿ ಪ್ರಾಣಿಗಳ
ನಡುವೆ ಯೋಗಭಂಗಿಯಲ್ಲಿ ಕುಳಿತಿರುವ ಮನುಷ್ಯ ಶಿವ (ಪಶುಪತಿ) ಇರಬಹುದು ಎಂದು ಊಹಿಸಲಾಗಿದೆ. ಫಲವತ್ತತೆಯ ಸಂಕೇತವಾಗಿ ಶಿವಲಿಂಗದ ಪೂಜೆ ಆಫ್ರಿಕಾದಲ್ಲಿ
ಆರಂಭವಾಗಿ ಭಾರತಕ್ಕೆ ಬಂದಿರುವ ಸಾಧ್ಯತೆಯನ್ನು ಹಲವು ವಿದ್ವಾಂಸರು ಹೇಳುತ್ತಾರೆ.
ನಮ್ಮ ಮನೆದೇವರುಗಳು
ತಿರುಮಕೂಡಲ ನರಸೀಪುರದ ನಡುಹೊಳೆ ಬಸವೇಶ್ವರ ಮತ್ತು ಎಡಹೊಳೆ ಚೌಡೇಶ್ವರಿ, ಶಿವಪಾರ್ವತಿಯರ
ರೂಪಗಳು. ಚಿಕ್ಕವನಾಗಿದ್ದಾಗ ಮನೆಯಲ್ಲಿ ಹಿರಿಯರು
ಹೇಳಿದಂತೆ ನಾನೂ ಕೈಮುಗಿದೋ ಅಡ್ಡಬಿದ್ದೋ ಪೂಜೆಯಲ್ಲಿ ಭಾಗಿಯಾಗುತ್ತಿದ್ದೆ. ಮಂತ್ರಗಳನ್ನು ಉಚ್ಛರಿಸುತ್ತಿದ್ದ, ತಂತ್ರವನ್ನೂ
ಅರಿತಿದ್ದ ಅಪ್ಪನಿಂದ ಅದ್ಯಾಕೋ ಅದ್ಯಾವುದನ್ನೂ ನಾನು ಕಲಿಯಲಾಗಲೇ ಇಲ್ಲ. ಅಮ್ಮನ ಪೂಜೆ ನಿಶ್ಶಬ್ಧವಾಗಿರುತ್ತಿತ್ತು. ಕೈಮುಗಿದು ಮೌನವಾಗಿ ನಿಲ್ಲುತ್ತಿದ್ದ ಆಕೆ ದೇವರಲ್ಲಿ ಅದೇನು
ಬೇಡಿಕೊಳ್ಳುತ್ತಿದ್ದಳು ಎಂದು ಇಂದಿಗೂ ನನಗೆ ಗೊತ್ತಿಲ್ಲ.
ಹೆಚ್ಚುಸಮಯವನ್ನು ಆಕೆಯೊಂದಿಗೇ ಕಳೆಯುತ್ತಿದ್ದ ನಾನು ಆಕೆಯನ್ನು ಅನುಕರಿಸಿ ಅದೆಷ್ಟೋ ದೇವರುಗಳಿಗೆ
ಮೌನವಾಗಿ ಕೈಮುಗಿದಿದ್ದೇನೆ, ಒಮ್ಮೆ ಶಿಲುಬೆಯ ಮುಂದೆಯೂ ಮಂಡಿಯೂರಿದ್ದೇನೆ. ದೇವರುಗಳಿರಲಿ, ಬೃಹದಾಕಾರದ
ಆರಳೀಮರದಿಂದ ಹಿಡಿದು ಪುಟ್ಟ ತುಳಸಿಯವರೆಗೆ ಪ್ರಕೃತಿಯ ಹಲವು ರೂಪಗಳ ಮುಂದೆ ಮೌನವಾಗಿ ಕೈಜೋಡಿಸಿ ನಿಂತಿದ್ದೇನೆ. ಎಲ್ಲವೂ ವಂದನಾರ್ಹ ಎಂದು ನಾನು ಕಲಿತದ್ದೇ ಅಮ್ಮನಿಂದ. ಆದರೆ ಕೈಮುಗಿದು ಕಣ್ಣುಮುಚ್ಚಿ ಮೌನವಾಗಿ ನಿಲ್ಲುತ್ತಿದ್ದ
ಅಮ್ಮನಿಂದ ದೇವರಲ್ಲಿ ಏನನ್ನು ಹೇಗೆ ಬೇಡಿಕೊಳ್ಳ್ಳಬೇಕೆಂಬ ಯಾವ ಟ್ರೈನಿಂಗೂ ಸಿಗದ ನಾನು ಎಳೆಯ ವಯಸ್ಸಿನಲ್ಲಿ
ನನ್ನಷ್ಟಕ್ಕೇ ರೂಪಿಸಿಕೊಂಡ ಒಂದೇ ವಾಕ್ಯದ ಪ್ರಾರ್ಥನೆ: "ದೇವರೇ, ಎಲ್ಲರಿಗೂ
ಒಳ್ಳೆಯದು ಮಾಡು."
ಬೆಳೆಯುತ್ತಿದ್ದಂತೆ
ದೇವರೇ ಇಲ್ಲವೇನೋ ಎಂಬ ಅನುಮಾನ ನನ್ನೊಳಗೇ ಮೊಳೆತು ಬೆಳೆಯತೊಡಗಿತು. ಮೌನಪೂಜೆಯ ಅಮ್ಮನಿಂದ ದೂರವಾಗಿ ಪೂಜೆಯನ್ನೇ ಮಾಡದ, ನಾ ಕಂಡಂತೆ
ಯಾವ ದೇವರಲ್ಲೂ ಏನನ್ನೂ ಬೇಡಿಕೊಳ್ಳದ ಪುಟ್ಟಕ್ಕನ ಜತೆಯಲ್ಲಿ ಬದುಕು ಸಾಗತೊಡಗಿದಾಗ ನನ್ನ agnostic ಪರಿಕಲ್ಪನೆಗಳು ಗಾಢವಾಗತೊಡಗಿದವು. ಪರಿಣಾಮವಾಗಿ ಅಮ್ಮನಿಂದ ಕಲಿತ "ಎಲ್ಲವೂ ವಂದನಾರ್ಹ" ಎಂಬ ಭಾವನೆ
ಮತ್ತು ಪುಟ್ಟಕ್ಕನಿಂದ ಕಲಿತ "ಧರ್ಮವೆಂದರೆ ನಮ್ಮನ್ನೂ, ನಮ್ಮ
ಮನೆಯನ್ನೂ ಶುದ್ಧವಾಗಿಟ್ಟುಕೊಳ್ಳುವುದು" ಎಂಬ ನಂಬಿಕೆಗಳೆರಡರ ತಳಹದಿಯ ಮೇಲೆ ನನ್ನ ಬದುಕಿನ ತಾತ್ವಿಕತೆಯನ್ನು
ರೂಪಿಸಿಕೊಂಡ ನಾನು ಸಖತ್ತಾಗಿ ಪೂಜೆಪುರಸ್ಕಾರಗಳನ್ನು ಮಾಡುವ ಅರುಂಧತಿಯನ್ನು ಮದುವೆಯಾದ ಮೇಲೆ ಆರಂಭದ
ಶಾಕ್‌ನಿಂದ ಅತಿಶೀಘ್ರವಾಗಿ ಹೊರಬಂದು ಆಕೆಯ ಜತೆ ದೇಶದ ಉತ್ತರ, ದಕ್ಷಿಣ
ಮತ್ತು ಪಶ್ಚಿಮ ರಾಜ್ಯಗಳಲ್ಲಿನ ನೂರೊಂದು ದೇವಸ್ಥಾನಗಳಿಗೆ ಯಾವ ಹಿಂಜರಿಕೆಯೂ ಇಲ್ಲದೇ ಹೋಗಿದ್ದೇನೆ. ಆಕೆ ಕೈಮುಗಿದಾಗ ನಾನೂ ಮುಗಿದಿದ್ದೇನೆ, ಪ್ರದಕ್ಷಿಣೆ
ಬಂದಿದ್ದೇನೆ. ಇದೆಲ್ಲವನ್ನೂ ನಾನು ಮಾಡುವುದು ದೇವರಿಗಾಗಲ್ಲ. ನನ್ನ ಜತೆ ಇರುವ ಮನುಷ್ಯರುಗಳು ನನಗೆ ಮುಖ್ಯ. ಅವರ ಖುಷಿಗಾಗಿ ನೆಮ್ಮದಿಗಾಗಿ ಯಾವ ದೇವರ ಮುಂದಾದರೂ ಕೈಮುಗಿದು
ನಿಲ್ಲುವುದಕ್ಕೆ ನಾನು ತಯಾರು. ನನಗೂ ದೇವರಿಗೂ ಇರುವ
ನಂಟು ಇಷ್ಟೇ.
ಈ ಮೈಸೂರಿನ ಹೆಣ್ಣುಮಕ್ಕಳಿಗೆ
ಚಾಮುಂಡಿ ಬೆಟ್ಟದ ಆಕರ್ಷಣೆ ಅದೆಷ್ಟು ಅಂತ ನನಗೆ ಆಗಾಗ ಆಶ್ಚರ್ಯವಾಗುತ್ತದೆ. ಬೆಂಗಳೂರು, ಊಟಿ, ನರಸೀಪುರ-
ಹೀಗೆ ಯಾವ ದಿಕ್ಕಿನಿಂದಾದರೂ ಮೈಸೂರಿಗೆ ಹತ್ತಿರವಾಗುತ್ತಿದ್ದಂತೇ ದೂರದಲ್ಲಿ ಚಾಮುಂಡಿಬೆಟ್ಟದ ತುದಿ
ಕಾಣುತ್ತಿದ್ದಂತೇ ಅರುಂಧತಿ "ಚಾಮುಂಡಿ ಬೆಟ್ಟಾ!" ಎಂದು ಮುಖವರಳಿಸಿಕೊಂಡು ಉದ್ಗರಿಸುತ್ತಾಳೆ. ನನ್ನನ್ನು ಅದೆಷ್ಟೋ ಬಾರಿ ಬೆಟ್ಟ ಹತ್ತಿಸಿದ್ದಾಳೆ. ಮೈಸೂರಿಗೆ ಹೋದಾಗಲೆಲ್ಲಾ ಚಾಮುಂಡಿ ಬೆಟ್ಟ ಹತ್ತದಿದ್ದರೆ
ಅವಳಿಗೆ ಸಮಾಧಾನವಿಲ್ಲ. ಅದರ ಜತೆ ನಂಜನಗೂಡಿಗೆ ಹೋಗಿಬಂದರಂತೂ
ಅವಳ ಖುಷಿಯನ್ನು ಕೇಳಲೇಬೇಡಿ. ಪಾಂಡಿಚೆರಿಯಲ್ಲಿ ಕಾರ್
ಕೊಂಡಾಗ ಅಲ್ಲಿನ ದೇವಸ್ಥಾನದಲ್ಲಿ ಮಾಡಿಸಿದ ಪೂಜೆ ಬರೀ ನಾಮ್ ಕೇ ವಾಸ್ತೆ. ಮೂರು ದಿನ ರಜಾ ಹಾಕಿ ಮೈಸೂರಿಗೆ ಗಾಡಿ ಓಡಿಸಿಕೊಂಡು ಬಂದು
ಚಾಮುಂಡಿ ಬೆಟ್ಟ ಹತ್ತಿಸಿ ಅಲ್ಲಿ ಪೂಜೆ ಮಾಡಿಸಿದಾಗಲೇ ಅವಳಿಗೆ ಸಮಾಧಾನ.
ಮದುವೆಗೆ ಮೊದಲೇ ದೆಹಲಿಯ
ಮಲೈ ಮಂದಿರ್‌ನಲ್ಲಿ ಅರುಂಧತಿಯ ಹಿಂದೆ ಪ್ರದಕ್ಷಿಣೆ ಸುತ್ತಿದ ನಾನು ತಾರಿಗೊಂದು ಮಾರಿಗೊಂದು ದೇವಸ್ಥಾನಗಳಿರುವ
ತಮಿಳುನೆಲಕ್ಕೆ ಕಾಲಿಟ್ಟಾಗಿನಿಂದ ಪ್ರದಕ್ಷಿಣೆ ಬಂದ ಗರ್ಭಗೃಹಗಳಿಗೆ ಲೆಕ್ಕವೇ ಇಲ್ಲ. ಅಂಥವುಗಳಲ್ಲಿ ಹೆಚ್ಚಿನವು ಶಿವನ ಆಲಯಗಳಾಗಿರುವುದಕ್ಕೆ ತಮಿಳುನಾಡಿನಲ್ಲಿ
ಶೈವಪಂಥದ ಪ್ರಾಮುಖ್ಯತೆಯೇ ಕಾರಣ. ಈ ಶಿವಾಲಯಗಳನ್ನು
ದರ್ಶಿಸಿದಾಗೆಲ್ಲಾ ನನಗೆ ಮೈದಾಳ ರಾಮಯ್ಯನೂ ಗಾಢವಾಗಿ ನೆನಪಾಗಿ ಬಾಲ್ಯವನ್ನು ಜೀವಂತಗೊಳಿಸಿಬಿಡುತ್ತಾನೆ.
ಏಳೆಂಟು ವರ್ಷಗಳ ಹಿಂದೆ
ದಕ್ಷಿಣ ತಮಿಳುನಾಡು ಮತ್ತು ದಕ್ಷಿಣ ಕೇರಳಗಳ ಪ್ರವಾಸದ ಕಾರ್ಯಕ್ರಮ ಹಾಕಿಕೊಂಡೆವು. ತಿರುವನಂತಪುರ, ಮಾರ್ತಾಂಡಂ, ನಾಗರಕೋಯಿಲ್, ಶುಚೀಂದ್ರಂ
ಮತ್ತು ಕನ್ಯಾಕುಮಾರಿಗಳನ್ನು ಮುಖ್ಯವಾಗಿ ಸಂದರ್ಶಿಸಿದ ಆ ಪ್ರವಾಸದಲ್ಲಿ ಶುಚೀಂದ್ರಂನ ಭೇಟಿ ನನಗೆ
ಇಷ್ಟವಾಯಿತು. ಗೌತಮನ ಪತ್ನಿ ಅಹಲ್ಯೆಯೊಡನೆ ಅನುಚಿತವಾಗಿ
ನಡೆದುಕೊಂಡು ಶಾಪಕ್ಕೊಳಗಾದ ಇಂದ್ರ ಪಾಪ ಕಳೆದುಕೊಂಡು ಶುಚಿಯಾದ ಸ್ಥಳ ಶುಚೀಂದ್ರಂ. ಇಲ್ಲಿರುವ ಶೋಧನಾತೀರ್ಥದಲ್ಲಿ ಅಹಲ್ಯೆಯೂ ಪರಿಶುದ್ಧಳಾದಳು
ಎಂದು ಹೇಳುತ್ತಾರೆ. ಇಲ್ಲಿನ ಶ್ರೀ ಸ್ಥಾನುಮಾಲಯನ್
ದೇವಸ್ಥಾನ ಹಲವು ಕಾರಣಗಳಿಂದಾಗಿ ನನಗೆ ವಿಶಿಷ್ಟವೆನಿಸಿತು. ನನ್ನ ಹುಟ್ಟೂರು ಕೊಳ್ಳೇಗಾಲದ ಸನಿಹದ ಸಿದ್ಧಯ್ಯನಪುರದ ಜಕ್ಕಣ್ಣನ
ಕಟ್ಟೆ ಕೆರೆಏರಿಯ ಮೇಲೊಂದು "ಬೊಮ್ಮಪ್ಪನ ಗುಡಿ" ಎಂಬ ಹೆಸರಿನ ಮೇಲ್ಛಾವಣಿಯಿಲ್ಲದ ಪುಟ್ಟ ದೇವಾಲಯವಿದೆ. ಅಲ್ಲಿರುವ ಲಿಂಗ ಬ್ರಹ್ಮೇಶ್ವರ. ಜನರ ಬಾಯಲ್ಲಿ ಬೊಮ್ಮೇಶ್ವರ, ಬೊಮ್ಮಪ್ಪ. ಆ ಲಿಂಗ ಶಿವನ ಜತೆ ಬ್ರಹ್ಮನನ್ನೂ ಸಂಕೇತಿಸಿ ನನ್ನ ಕುತೂಹಲ
ಕೆರಳಿಸಿತ್ತು. ಆದರೆ ಇಲ್ಲಿ ಶುಚೀಂದ್ರಂನಲ್ಲಿ ನಾನು
ಕಂಡದ್ದು ಅದಕ್ಕೂ ಮಿಗಿಲು. ಇಲ್ಲಿನ ಶ್ರೀ ಸ್ಥಾನುಮಾಲಯನ್
ದೇವಸ್ಥಾನದಲ್ಲಿರುವ ಲಿಂಗ ಕೆಳಗೆ ಬ್ರಹ್ಮನನ್ನೂ, ಮಧ್ಯದಲ್ಲಿ
ವಿಷ್ಣುವನ್ನೂ, ಮೇಲೆ ಶಿವನನ್ನೂ ಸಂಕೇತಿಸುತ್ತದೆ! ದೇವಸ್ಥಾನದ ಹೆಸರೇ ತ್ರಿಮೂರ್ತಿಗಳ ಹೆಸರುಗಳನ್ನು ಒಳಗೊಂಡಿದೆ. ತಮಿಳಿನಲ್ಲಿ ಸ್ಥಾನು ಅಂದರೆ ಶಿವ, ಮಾಲ್
ಅಂದರೆ ವಿಷ್ಣು, ಆಯನ್ ಅಂದರೆ ಬ್ರಹ್ಮ.
ಗರ್ಭಗೃಹದ ಮುಂದಿನ ಚಂಪಕರಾಮನ್ ಮಂಟಪದಲ್ಲಿನ ಆಕರ್ಶಕ ಕೆತ್ತನೆಯ ಮೂವತ್ತೆರಡು ಸ್ಥಂಭಗಳ ಜತೆ
ದೇವಾಲಯದ ಗೋಡೆಗಳ ಮೇಲಿನ ಸತಿ ಅನಸೂಯಾಳ ಬದುಕಿನ ವಿವಿಧ ಚಿತ್ರಣಗಳ ಕೆತ್ತನೆಗಳು, ಸ್ಥಂಭಗಳ
ಮೇಲಿನ ಆಕರ್ಷಕ ಆದರೆ ಧಾಳಿಕಾರರಿಂದ ಮುಖ ವಿರೂಪಗೊಂಡ ದೀಪಲಕ್ಷ್ಮಿಯರು ನನ್ನ ನೋಟವನ್ನು ಸೆಳೆದು ನಿಲ್ಲಿಸಿದ್ದಂತೂ
ನಿಜ. ಇಲ್ಲೊಂದು ಬೃಹದಾಕಾರದ ನಂದಿಯೂ ಇದೆ. ದೇವಾಲಯದ ಪ್ರಾಂಗಣದಲ್ಲಿರುವ ೨೦೦೦ ವರ್ಷ ಹಳೆಯದು ಎನ್ನಲಾಗುವ
ಪುರಾತನ ವೃಕ್ಷವೊಂದರ ಕಾಂಡದ ಟೊಳ್ಳಿನಲ್ಲಿ ತ್ರಿಮೂರ್ತಿಗಳನ್ನು ಸಂಕೇತಿಸುವ ಮೂರು ಲಿಂಗಗಳೂ, ಸತಿ ಅನಸೂಯಾಳ
ಪ್ರತಿಮೆಯೂ ಇವೆ.
ಹಿತ್ತಲ ಗಿಡ ಮದ್ದಲ್ಲ
ಎನ್ನುತ್ತಾರೆ. ಪಾಂಡಿಚೆರಿಗೆ ಹತ್ತಿರದಲ್ಲಿದ್ದರೂ, ಬೆಂಗಳೂರಿಗೆ
ಹೋಗುವಾಗ ಬರುವಾಗೆಲ್ಲಾ ನೋಡುತ್ತಿದ್ದರೂ ತಿರುವಣ್ಣಾಮಲೈನ ಶ್ರೀ ಅರುಣಾಚಲೇಶ್ವರ ದೇವಸ್ಥಾನಕ್ಕೆ ನಾವು
ಬಹಳ ಕಾಲ ಹೋಗಿಯೇ ಇರಲಿ. ಹೋಗಿಯೇ ಬಿಡುವಾ ಎಂದು ಒಮ್ಮೆ
ಹೋದೆವು. ಈ ಶಿವದೇವಾಲಯ ಬಹು ಪುರಾತನವಾದದ್ದು. ಇದರ ಬಗ್ಗೆ, ಇಲ್ಲಿನ
ಪೂಜಾವಿಧಿಗಳ ಬಗ್ಗೆ ತಮಿಳಿನ ಅತ್ಯಂತ ಹಳೆಯ ಗ್ರಂಥವೆನ್ನಲಾದ ತೊಲ್‌ಕಾಪ್ಪಿಯಂನಲ್ಲಿ ಉಲ್ಲೇಖವಿದೆ. ಇದಕ್ಕೆ ಸಂಬಂಧಿಸಿದ ಹಲವು ಪುರಾಣಗಳಲ್ಲೊಂದರ ಪ್ರಕಾರ ತನ್ನ
ತಪಸ್ಸಿಗೆ ಅಡಿಗಡಿಗೆ ಭಂಗವನ್ನೊಡ್ದುತ್ತಿದ್ದ ಮಹಿಷಾಸುರನ ಮೇಲೆ ರೋಷಗೊಂಡು ಉಮಾದೇವಿ ಅವನನ್ನು ಸಂಹರಿಸಿದ್ದು
ಕಾರ್ತಿಕ ಪೂರ್ಣಿಮೆಯ ರಾತ್ರಿ. ಆಗ ಶಿವ ಅರುಣಾಚಲ
ಬೆಟ್ಟದ ಮೇಲೆ ಒಂದು ಪ್ರಖರ ಜ್ಯೋತಿಯ ರೂಪದಲ್ಲಿ ಪ್ರತ್ಯಕ್ಷನಾಗಿ ಉಮಾದೇವಿ(ಪಾರ್ವತಿ)ಯನ್ನು ತನ್ನ
ಶರೀರದ ಎಡಭಾಗದಲ್ಲಿ ಅಂತರ್ಗತಗೊಳಿಸಿಕೊಂಡು ಅರ್ಧನಾರೀಶ್ವರನಾದ. ಹೀಗಾಗಿ ಪ್ರತಿ ವರ್ಷ ತಮಿಳು ಕಾರ್ತಿಕ ಮಾಸದ ಹತ್ತನೆಯ ದಿನ
ಸಂಜೆ ಆರುಗಂಟೆಗೆ ಸರಿಯಾಗಿ ಬೆಟ್ಟದ ಮೇಲೆ ಬಹುದೊಡ್ಡ ಜ್ಯೋತಿ ಹಚ್ಚಿ ಶಿವನ ಜ್ಯೋತಿಸ್ವರೂಪವನ್ನು
ಸಾಕಾರಗೊಳಿಸುತ್ತಾರೆ. ಆ ರಾತ್ರಿ ತಮಿಳು ಜನ ಮನೆ
ಮುಂದೆ ಸಾಲುಸಾಲು ದೀಪಗಳನ್ನು ಹಚ್ಚಿ ಕಾರ್ತಿಕ ದೀಪಂ ಆಚರಿಸುತ್ತಾರೆ. ಇದು ತಮಿಳುನಾಡಿಗೇ ವಿಶಿಷ್ಟವಾದ ಆಚರಣೆ. ಈ ಜನ ನಮ್ಮ ಹಾಗೆ ದೀಪಾವಳಿಯಂದು ದೀಪ ಹಚ್ಚುವುದಿಲ್ಲ. ಆವತ್ತೇನಿದ್ದರೂ ಶಿವಕಾಶಿಯ ಪಟಾಕಿಗಳ ದಾಂಧಲೆಯಷ್ಟೇ. ಈ ಕಾರ್ತಿಕ ದೀಪಗಳನ್ನು ನೋಡುವುದೇ ಒಂದು ಚಂದ.
ಹಲವು ವಿಶ್ವವಿಖ್ಯಾತ
ಶಿವ ದೇವಾಲಯಗಳನ್ನು ನೋಡಿದ್ದರೂ ನನಗೆ ತುಂಬಾ ಇಷ್ಟವಾದದ್ದು ಚೆಂಗಲ್‌ಪೇಟೆ ಮತ್ತು ಮಹಾಬಲಿಪುರಂಗಳ
ನಡುವೆ ಕಾಡು, ಬೆಟ್ಟಗಳ ನಡುವಿನ ಪ್ರಶಾಂತ ಪರಿಸರದಲ್ಲಿ ಅಡಗಿರುವ ತಿರುವಡಿಸೂಲಂನಲ್ಲಿರುವ
ಆಲಯ. ಹೆಚ್ಚಿನ ಜನಕ್ಕೆ ಗೊತ್ತೇ ಇಲ್ಲದ ಈ ಆಲಯದಲ್ಲೊಂದು
ಕಣ್ಸೆಳೆಯುವ ಮರಕತ ಲಿಂಗವಿದೆ. ನಾವು ಅಲ್ಲಿಗೆ ಹೋಗಿದ್ದಾಗ
ನಮ್ಮ ಹೊರತಾಗಿ ಅಲ್ಲಿದ್ದದ್ದು ಒಂದು ನವಜೋಡಿ ಮಾತ್ರ.
ಆ ಸ್ಥಳ ನನಗೆ ಶಾಂತವೆನಿಸಿ ಅಲ್ಲೇ ತುಂಬಾ ಹೊತ್ತು ಇರಬೇಕೆಂದು ಮನಸ್ಸಾಗಿತ್ತು. ಜನಜಂಗುಳಿ ಇಲ್ಲದ್ದರಿಂದ ಹೀಗಾಯಿತು ಎಂದು ಹೇಳಲಾರೆ. ಯಾಕೆಂದರೆ ಇಂಥದೇ ಅನುಭವ ನನಗೆ ಜನರಿಂದ ಗಿಜಿಗುಟ್ಟುವ ತಂಜಾವೂರಿನ
ಬೃಹದೀಶ್ವರ ದೇವಾಲಯದಲ್ಲೂ ಆಗಿ ಅಲ್ಲೇ ತುಂಬಾ ಹೊತ್ತು ಕುಳಿತಿದ್ದೆ. ಕೊನೆಗೂ ಅಲ್ಲಿಂದ ನಾನು ಏಳಲೇಬೇಕಾದದ್ದು ತಿರುಚಿಯ ಕಾಲೇಜೊಂದರಲ್ಲಿ
ನಾನು ಕೊಡಬೇಕಾಗಿದ್ದ ಉಪನ್ಯಾಸಕ್ಕೆ ಸಮಯವಾಗುತ್ತಿದೆಯೆಂದು ಜತೆಗಿದ್ದ ಗೆಳೆಯರು ಮತ್ತೆಮತ್ತೆ ನೆನಪಿಸಿದ್ದರಿಂದ.
ಒಮ್ಮೆ ನಮ್ಮ ಅತಿಥಿಗಳಾಗಿ
ನಮ್ಮಲ್ಲಿಗೆ ಬಂದಿದ್ದ ಕನ್ನಡ ಸಾಹಿತಿ ಮಿತ್ರರು ಮತ್ತವರ ಶ್ರೀಮತಿಯವರಿಗೆ ಚಿದಂಬರಂನ ಶ್ರೀ ನಟರಾಜ
ದೇವಾಲಯ ತೋರಿಸಲು ಆ ನೆಪದಲ್ಲಿ ನಾವೂ ಅದನ್ನು ನೋಡಲು ಹೊರಟೆವು. ವಿಶ್ವವಿಖ್ಯಾತವಾದ ಈ ದೇವಾಲಯದಲ್ಲಿರುವುದು ಹೆಸರೇ ಸೂಚಿಸುವಂತೆ
ನಾಟ್ಯಶಿವ. ಈ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಇರುವ
ಒಂದು ಕಥೆ ಶಿವ ಮತ್ತು ಪಾರ್ವತಿ(ಶಕ್ತಿ)ಯರ ನಡುವಿನ ಒಂದು ನಾಟ್ಯಸ್ಪರ್ಧೆಯ ಬಗ್ಗೆ ಹೇಳುತ್ತದೆ. ಎಲ್ಲ ಬಗೆಯಲ್ಲೂ ತನ್ನನ್ನು ಸರಿಗಟ್ಟಿದ ಶಕ್ತಿಯನ್ನು ಸೋಲಿಸಲೆಂದು
ಶಿವ ತನ್ನ ಎಡಗಾಲನ್ನು ಆಕಾಶಕ್ಕೆ ಎತ್ತಿದ. ಸ್ತ್ರೀಸಹಜ
ಸಂಕೋಚದಿಂದ ಶಕ್ತಿ ಹಾಗೆ ಮಾಡಲಾಗಲಿಲ್ಲ. ಈ ಬಗೆಯಲ್ಲಿ
ಶಿವ ಸ್ಪರ್ಧೆಯಲ್ಲಿ ಗೆದ್ದು ಪಾರ್ವತಿ ಆ ದೇವಾಲಯವನ್ನೇ ತೊರೆದು ದೂರ ಹೋದಳು. ಸ್ತ್ರೀಯ ಪ್ರಾಕೃತಿಕ ದೌರ್ಬಲ್ಯವನ್ನು ಪುರುಷ ದುರುಪಯೋಗಪಡಿಸಿಕೊಂಡದ್ದಕ್ಕೆ
ಒಂದು ದೊಡ್ಡ ಉದಾಹರಣೆಯಾಗಿ ಇದು ನನಗೆ ಕಾಣುತ್ತದೆ.
ಒಂಬತ್ತನೆಯ ತರಗತಿಯಲ್ಲಿದ್ದಾಗ
ನಮ್ಮ ಅಧ್ಯಾಪಕರೊಬ್ಬರು ಗಂಡು ಹೆಚ್ಚೋ, ಹೆಣ್ಣು ಹೆಚ್ಚೋ ಎಂಬ ಪ್ರಶ್ನೆಯನ್ನೆತ್ತಿ ಗಂಡಿನ ಪರವಾಗಿ ನನ್ನನ್ನೂ
ಹೆಣ್ಣಿನ ಪರವಾಗಿ ಲಿಲ್ಲಿಮೇರಿಯನ್ನೂ ವಾದಕ್ಕೆ ಹಚ್ಚಿದ್ದರು. ಆ ವಾದದಲ್ಲಿ ನಾನು ಸೋತುಹೋದೆ. ಆಗ ಆ ಅಧ್ಯಾಪಕರು ನಾವು ಗಂಡಸರು ಶರ್ಟು ಬನಿಯನ್ ತೆಗೆದು
ಊರೆಲ್ಲಾ ಸುತ್ತಿ ಬರುತ್ತೇವೆ, ನಿಮ್ಮಿಂದ ಅದು ಸಾಧ್ಯವೋ? ಎಂದು
ಲಿಲ್ಲಿಮೇರಿಯನ್ನು ಪ್ರಶ್ನಿಸಿ ಅವಳ ಬಾಯಿ ಮುಚ್ಚಿಸಿ ನನ್ನನ್ನು ಗೆಲ್ಲಿಸಿದ್ದರು. ಆ ಗೆಲುವು ನನಗೆ ಅಗತ್ಯವಿತ್ತೇ ಎಂಬ ಪ್ರಶ್ನೆ ವರ್ಷಗಳ ನಂತರ
ನನ್ನನ್ನು ಕಾಡತೊಡಗಿತು. ನಮ್ಮ ಅಧ್ಯಾಪಕರು ಹಾಕಿದ
ಪಟ್ಟನ್ನು ಸಾಕ್ಷಾತ್ ಶಿವನೇ ಹಾಕಿದ್ದನ್ನು ಚಿದಂಬರಂನಲ್ಲಿ ಕಂಡಾಗ ನನ್ನಲ್ಲುದಿಸಿದ ಗೊಂದಲ- ಶಿವನಿಂದ
ನಮ್ಮ ಅಧ್ಯಾಪಕರು ಸ್ಪೂರ್ತಿ ಪಡೆದರೋ ಅಥವಾ ಅವರಂಥವರಿಂದ ಅವರಂಥವರು ಸ್ಪೂರ್ತಿ ಪಡೆದು ಈ ಕೆಟ್ಟ ಚಾಳಿಯನ್ನು
ಶಿವನಿಗೆ ಆರೋಪಿಸಿದರೋ?
liked the post..... last para is too good....
ReplyDeleteThank you!
ReplyDeleteಆತ್ಮೀಯ ಬರಹ ಪ್ರೇಮಶೇಖರರೇ. ನಿಮ್ಮ ಬ್ಲಾಗಿಗೆ ಬಹಳ ದಿನದನಂತರ ಭೇಟಿ ಕೊಟ್ಟೆ. ಓದಿ ಮುದಗೊಂಡೆ
ReplyDeleteHappy to see your comment. Thank you!
DeleteTumba chenaagide. Ishta aaytu sir,
ReplyDeleteNice you liked this essay. Thank you!
Delete