ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Thursday, February 21, 2013

ಹೀಗೊಂದು 'ಪ್ರೇಮ್‌'ವರ್ಕ್


  - ಜಯದೇವ ಪ್ರಸಾದ ಮೊಳೆಯಾರ



ಜನಪ್ರಿಯ ಹಾಗೂ ಸಮರ್ಥ ಕತೆಗಾರ ಪ್ರೇಮಶೇಖರ ಅವರ ಇನ್ನೊಂದು ಕಥಾ ಸಂಕಲನ "ಗೋಧ್ರಾ ಇನ್ನೆಷ್ಟು ದೂರ?" ಈಗಷ್ಟೇ ಉಡುಪಿಯಲ್ಲಿ ಬಿಡುಗಡೆ ಗೊಂಡಿದೆ. ೧೦ ಕತೆಗಳನ್ನೊಳಗೊಂಡ ಈ ಪುಸ್ತಕ ಪ್ರೇಮಶೇಖರ ಅವರ ಎಂಟನೆಯ ಕಥಾ ಸಂಕಲನ. ಉಳಿದಂತೆ ೨ ಕಾದಂಬರಿ, ೨ ಲೇಖನಗಳ ಸಂಗ್ರಹ ಹಾಗೂ ೧ ಸಂಶೋಧನಾ ಗ್ರಂಥವನ್ನು ಕನ್ನಡದಲ್ಲಿ ಪ್ರಕಟಿಸಿರುವ ಅವರು ಆಂಗ್ಲ ಭಾಷೆಯಲ್ಲಿ ತಮ್ಮ ಕಾರ್ಯ ಕ್ಷೇತ್ರವಾದ ರಾಜಕೀಯ ಶಾಸ್ತ್ರದಲ್ಲಿ ಹಲವಾರು ಸಂಶೋಧನೆಗಳನ್ನು ದೇಶ ವಿದೇಶಿ ಜರ್ನಲ್‌ಗಳಲ್ಲಿ ಪ್ರಕಟಿಸಿದ್ದಾರೆ. ವೃತ್ತಿಯಲ್ಲಿ ಪಾಂಡಿಚೆರಿ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿದ್ದ ಇವರು ಕನ್ನಡದಲ್ಲಿ ಕಥೆ ಕಾದಂಬರಿಗಳನ್ನು ಬರೆಯಲು ಆರಂಭಿಸಿದ್ದು ಯಾಕಿಷ್ಟು ಲೇಟ್ ಅನ್ನುವುದು ಯಾರೂ ಅರಿಯಲಾರದ ಒಂದು ರಹಸ್ಯವಾಗಿಯೇ ಉಳಿದಿದೆ. ಇಂತಹ ಸೃಜನಶೀಲ ಒರತೆಯನ್ನು ಅದು ಹೇಗೆ ಇಷ್ಟರವರೆಗೆ ಭದ್ರವಾಗಿ ತಡೆಗಟ್ಟಿ ಕುಳಿತರು ಅನ್ನುವುದೇ ಒಂದು ಅಚ್ಚರಿ.

ಸುಮಾರು ೨೦೦೪ ರಿಂದ ಇತ್ತೀಚೆಗೆ ಮಾತ್ರವೇ ಪ್ರೇಮಶೇಖರ ಎಂಬ ಹೆಸರು ಪತ್ರಿಕೆಗಳಲ್ಲಿ ಕಾಣಬರುತ್ತಿದ್ದು ನಮ್ಮೆಲ್ಲರ ಗಮನ ಸೆಳೆದ ಓರ್ವ ವಿಶಿಷ್ಟ ಪ್ರತಿಭೆ. ಇವರು ವಿಶಿಷ್ಟ ಯಾಕೆ ಆಗುತ್ತಾರೆ ಎಂದರೆ ಇವರನ್ನು ಒಂದು ಫ್ರೇಮ್‌ವರ್ಕಿನಲ್ಲಿ ಹಾಕಲು ಸಾಧ್ಯವಾಗುವುದಿಲ್ಲ. ಇವರ ಪ್ರೇಮ್‌ವರ್ಕೇ ಒಂದು ರೀತಿ ಬೇರೆ. ಆರಂಭದ ಕೆಲವು ಕತೆಗಳನ್ನು ಅಲ್ಲಿ ಇಲ್ಲಿ ಓದಿಕೊಂಡ ನಾನು ಇವರೊಬ್ಬ ಪತ್ತೇದಾರಿ ಲೇಖಕ ಅಂದುಕೊಂಡರೆ ಕ್ಷಣದಲ್ಲಿಯೇ ಒಂದು ಅತ್ಯಂತ ಹೃದಯಸ್ಪರ್ಶಿ ಕತೆಯೊಂದಿಗೆ ಬಂದು ನಿಮ್ಮನ್ನು ಅಳಿಸಿಯೇ ಹಾಕುತ್ತಾರೆ. ಆ ಮಧ್ಯೆ ಅಲ್ಲಿಲ್ಲಿ ಒಂದೊಂದು ಲೇಖನಗಳು ಕಾಣ ಸಿಗುತ್ತವೆ. ಭಾರತ್-ಚೀನಾ, ಇಂಡೋ-ಪಾಕ್ ಇತ್ಯಾದಿ ಗಂಭೀರ ವಿಚಾರಗಳನ್ನು ಎತ್ತಿಕೊಂಡು ನೂರಾರು ವರ್ಷಗಳ ಚರಿತ್ರೆಯನ್ನು ಕೆದಕಿ "ಯಾಕೆ, ಏನು ಆಯಿತು ಮತ್ತು ಮುಂದಿನ ಹೆಜ್ಜೆ ಏನು" ಎಂಬುದನ್ನು ಎಳೆ ಎಳೆಯಾಗಿ ಹಿಂಜಿ ಇಡುತ್ತಾರೆ. ಮತ್ತೊಂದು ನೀಳ್ಗತೆ "ಬೊಳ್ಳೋಣಕಯ್ಯ" ಎಂಬ ವಿಚಿತ್ರ ವ್ಯಕ್ತಿಯನ್ನು ಸೃಷ್ಟಿಸಿ ಮನೆ ಮಾತಾಗುತ್ತಾರೆ. ಮತ್ತೊಂದು ಪತ್ತೇದಾರಿ ಆದರೆ ಮತ್ತೊಂದು ಮ್ಯಾಜಿಕ್ ರಿಯಾಲಿಸಮ್ ಅಥವ ಮಾಂತ್ರಿಕ ವಾಸ್ತವ ಶೈಲಿಯಲ್ಲಿ ವಿಭಿನ್ನ ಪ್ರಯೋಗದ ಕತೆಗಳು. ಸರಿ ಬಿಡಿ ಇವರು ಪತ್ತೇದಾರಿ, ಗಟ್ಟಿ ಕತೆಗಳು ಮತ್ತು ಲೇಖನಗಳನ್ನು ಬಹಳ ಚೆನ್ನಾಗಿ ಆಪ್ತವಾಗಿ ಬರೆಯುತ್ತಾರೆ, ಅಂದುಕೊಂಡು ಅವರನ್ನು ಆ ಫ್ರೇಮ್‌ನಲ್ಲಿ ಕೂರಿಸಿದರೆ ಇವೆಲ್ಲ ಪ್ರಕಾರಗಳನ್ನು ಅರೆದು ಹಾಕಿ ಚಟ್ನಿ ಮಾಡಿ ತಮ್ಮದೇ ಆದ ಒಂದು ಇನ್ನೂ ಹೆಸರಿಡದ ಒಂದು ಹೈಬ್ರಿಡ್ ಪ್ರಕಾರವನ್ನು ಸೃಷ್ಟಿಸಿ ಧುತ್ ಎಂದು ನಿಮ್ಮ ಮುಂದಿಡುತ್ತಾರೆ. ಅವುಗಳು ಜಾಗತಿಕ ರಾಜಕೀಯದ ವಾಸ್ತವ ಮತ್ತು ಅದರ ಬಗ್ಗೆಯ ಚಿಂತನೆಗಳೂ ಹೌದು, ಮನ ಮಿಡಿಯುವ ಕತೆಗಳೂ ಹೌದು. ನೆಂಜಿಕೊಳ್ಳಲು ಬೇಕಾದರೆ ಸ್ವಲ್ಪ ಮಾಂತ್ರಿಕತೆ ಈ ಮೋಡಿಗಾರನ ವತಿಯಿಂದ. ಆ ಮೇಲೆ ತಿಳಿಯುತ್ತದೆ ಅವರು ಕವನಗಳನ್ನೂ ಕಟ್ಟುತ್ತಾರೆ, ಚಿತ್ರಗಳನ್ನೂ ಬಿಡಿಸುತ್ತಾರೆ ಎಂದು! ಒಟ್ಟಿನಲ್ಲಿ ಇವರ ಪ್ರೇಮ್‌ವರ್ಕೇ ಹೀಗೆ. ಅವರೇ ಹೇಳಿಕೊಳ್ಳುವಂತೆ ಒಂದು ರೀತಿಯ ಸಾಹಿತ್ಯಕ ಅಲೆಮಾರಿ, ಒಂದೇ ಪ್ರಕಾರ ಒಂದೇ ಜಾಗದಲ್ಲಿ ಕುಳಿತಿರಲಾರದ ಒಬ್ಬ ಸಾಹಿತ್ಯಕ ಸಂಶೋಧಕ.

ಪ್ರೇಮಶೇಖರರ ಹೆಸರು ನೋಡಿ ಇವತ್ತಿನ ಸ್ಪೆಶಲ್ ಏನು? ಎಂಬಂತೆ ಕಾತರದಿಂದ ಓದುವವರಲ್ಲಿ ನಾನೂ ಒಬ್ಬ. ಏನಾದರೊಂದು ಹೊಸತನ - ವಸ್ತುವಿನಲ್ಲಾಗಲಿ ನಿರೂಪಣೆಯಲ್ಲಾಗಲಿ - ಇದ್ದೇ ಇರುತ್ತದೆ ಎಂಬ ನಂಬಿಕೆ.  ಈ ನಿರೀಕ್ಷೆ ಸುಮಾರಾಗಿ ಯಾವತ್ತೂ ಸುಳ್ಳಾಗಿಲ್ಲ. ಹಾಗಾಗಿ ನಾನು ಪ್ರೇಮ್ ಅವರನ್ನು ಒಬ್ಬ ಆಸಕ್ತಿದಾಯಕ ಮತ್ತು ನಂಬಿಗಸ್ಥ ಬರಹಗಾರರೆಂದು ಭಾವಿಸಿದ್ದೇನೆ. ಈ ಮಾಲಿಕೆಯಲ್ಲೂ ಸಹ ಹತ್ತು ಕತೆಗಳು ಹತ್ತು ತರಹ. ಪ್ರೇಮ್ ಎಂದಿನಂತೆ ನನ್ನ ನಂಬಿಕೆಯನ್ನು ಹುಸಿಯಾಗಿಸಲಿಲ್ಲ.

ಇದರಲ್ಲಿ ಗೋಧ್ರಾ ಇನ್ನೆಷ್ಟು ದೂರ? ಎಂಬ ಕತೆಯಲ್ಲಿ ಮಾಂತ್ರಿಕ ವಾಸ್ತವ ಘಟನಾವಳಿಗಳ ಮೂಲಕ ವಿಷಯದ ಮೇಲೆ ಲೇಖಕರ  ಟಿಪ್ಪಣಿ ಇದೆ. ದೆಹಲಿಯ ಒಂದು ಓವರ್ ಬ್ರಿಜ್ಜಿನ ಅಡಿಯಲ್ಲಿ ಬದುಕುವ ನಿರ್ಗತಿಕರ ಬದುಕಿನ ದಟ್ಟವಾದ ಹಾಗೂ ಸಮರ್ಥವಾದ ಚಿತ್ರಣ ಬಾಳಿಗೊಂದಿಷ್ಟು ಗಾಳಿ ಕತೆಯಲ್ಲಿದೆ. ಒಂದು ಕತೆ ತನ್ನನ್ನು ತಾನೆ ಮುಂದಕ್ಕೆ ತಳ್ಳಿಕೊಳ್ಳುತ್ತಾ ಹೋಗುವ ವಿಶಿಷ್ಟ ತಂತ್ರಗಾರಿಕೆಯ ಗುಡ್‌ಬೈ ಹೌರಾ ಎಕ್ಸ್ಪ್ರೆಸ್ ಎಂಬ ಪ್ರೇಮಗಾಥೆಯಿದೆ. ಕತೆಯ ಅಂತ್ಯ ಎಂಬ ಕತೆಯಲ್ಲಿ ಕಥಾ ನಾಯಕಿಯ ಬದುಕಿನ ಪ್ರತಿಮಾತ್ಮಕ ಚಿತ್ರಣವಿದೆ. ಪ್ರೊಫೆಸರ್ ನಾಥಮುನಿ ಅವರನ್ನು ಇಂದು ಬೆಳಗ್ಗೆ ಶಿಲುಬೆಗೆ ಏರಿಸಲಾಯಿತು ಎಂಬ ಕತೆಯಲ್ಲಿ ಮನಮುಟ್ಟುವಂತಹ ಶಿಲುಬೆಗೆ ಏರಿಸುವ ನೈಜ ಚಿತ್ರಣವಿದೆ. ಚಿನ್ನಿದಾಂಡು ಕತೆಯಲ್ಲಿ ಒಂದು ಹಳೆಯ ಕತೆಯನ್ನು ಕೆದಕಿ ಮಾನವ ಸಂಬಂಧಗಳ ಸಂಕೀರ್ಣತೆಯನ್ನು ಶೋಧಿಸುವ ಧೈರ್ಯ ಇದೆ. ಬದುಕೊಂದು ಕೋತಿಯಾಟದಲ್ಲಿ ಬದುಕಿನ ವಿಚಿತ್ರತೆಯ ವಿಶಿಷ್ಟ ಚಿತ್ರಣವಿದೆ. ಕನಸಿನ ತೀರ ದಲ್ಲಿ ಶಾಂತಿ ಪ್ರೇಮ ಇತ್ಯಾದಿಗಳ ಬಗ್ಗೆ ಸುಂದರ ವ್ಯಾಖ್ಯಾನವಿದೆ. ಅವಲ್ಲದೆ ರೇಖಾ ಗಣಿತ ಎಂಬ ತೀರಾ ವಿಭಿನ್ನವಾದ ಹೊಸ ಶೈಲಿಯ ಒಂದು ರೋಚಕ ಕತೆಯಿದೆ.

ಯಾವುದೇ ಕತೆಯ ಸಾರಾಂಶ ಹೇಳಿ ಅದರ ಸ್ವಾದ ಕೆಡಿಸುವ ಕಿಡಿಗೇಡಿತನಕ್ಕೆ ನಾನು ಖಂಡಿತಾ ಕೈ ಹಾಕಲಾರೆ. ಕತೆಗಳ ಸುಪ್ತ ಶಕ್ತಿ ಇರುವುದೇ ಅದನ್ನು ಏಕಾಂತದಲ್ಲಿ ಓದಿದಾಗ ಅದು ನಮ್ಮ ಮನದಾಳಕ್ಕೆ ಇಳಿದು ಅಲ್ಲಿಯ ಒಂದು ಭಾಗವಾಗಿ ನಮಗೆ ದಕ್ಕುವ ಪ್ರಕ್ರಿಯೆಯಲ್ಲಿ. ಅದಕ್ಕಾಗಿ ಕತೆಗಳನ್ನು ಕುಳಿತು ಇಡಿಯಾಗಿ ಹಾಗೆಯೇ ಓದಬೇಕು. ಓದಿ ಹೇಳಲೂ ಬಾರದು, ಸಾರಾಂಶ ಹೇಳಲೂ ಬಾರದು.

ಪ್ರೇಮ್ ಅವರ ಕತೆಗಳ ವಿಜಯ ಇರುವುದೇ ಅವರ ಗಟ್ಟಿಯಾದ ಕಥಾವಸ್ಥು ಮತ್ತು ಸಮರ್ಥ ವಿಭಿನ್ನ ನಿರೂಪಣೆಯಲ್ಲಿ. ಹೊಸ ಹೊಸ ತಂತ್ರಗಳು. ಹೊಸ ಹೊಸ ಪ್ಲಾಟ್, ಸರಳ ಸುಂದರ ಪಾತ್ರೋಚಿತ ಭಾಷೆ ಆಪ್ಯಾಯಮಾನವಾದ ವಾತಾವರಣ, ಸದೃಢ ಪಾತ್ರಗಳ ಚಿತ್ರಣ - ಇವೆಲ್ಲ ಅವರ ಕತೆಗಳನ್ನು ಜೀವಂತವಾಗಿಸಿವೆ.

ಗೋಧ್ರಾ ಇನ್ನೆಷ್ಟು ದೂರ? ಪುಸ್ತಕದ ಮೂಲಕ ಇನ್ನೂ ಹತ್ತು ಕತೆಗಳಿಗೆ ನಮ್ಮೆದುರು ಜೀವಕೊಟ್ಟಿದ್ದಾರೆ.

ಅವುಗಳನ್ನು ಓದಿ ಸ್ವೀಕರಿಸೋಣ.

2 comments: