ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Monday, July 9, 2012

"ಮೋಡಿಗಾರ": ವಾಸ್ತವದ ನಗ್ನತೆಗೆ ಅವಾಸ್ತವದ ಸೀರೆ ತೊಡಿಸಿದ ಕಥೆಗಳು


ಪ್ರೊ. ಕೊ. ಶಿವಾನಂದ ಕಾರಂತ್


             ಬಹುಕಾಲದಿಂದ ಕನ್ನಡ ಕಥಾರಸಿಕರು ಹೊಸತನವನ್ನು ನಮ್ಮ ಲೇಖಕರ ಕಥೆಗಳಲ್ಲಿ ಕಾಣಲಾರೆವು ಎಂಬ ನಿರಾಶೆಯನ್ನು ಮೈಗೂಡಿಸಿಕೊಂಡಿದ್ದರೆ ಇಲ್ಲಿದೆ ಪ್ರೇಮಶೇಖರರು ಬರೆದ ನನಸು ಕನಸಾದ ಕಥೆಗಳು.  ಇವು ಲೇಖಕರೇ ಹೇಳಿಕೊಂಡಂತೆ ಮಾಂತ್ರಿಕ ವಾಸ್ತವ ಕಥೆಗಳು.  ಇಲ್ಲಿ ಲೇಖನಿ ಜಾದೂ ಮಾಡುತ್ತದೆ.  ಆ ಐಂದ್ರಜಾಲಿಕತನದಿಂದ ಉದುರುವುದು ವರ್ತಮಾನದ ಘಟನೆಗಳು.  ಇವುಗಳಲ್ಲಿ ಕೆಲವು ಕ್ರೂರ, ಭೀಬತ್ಸ, ಮತ್ತೆ ಕೆಲವು ಭಾವಸ್ಪರ್ಷಿಕತೆಗಳು.  ಲೇಖಕ ತನ್ನ ಅನುಭವಗಳನ್ನೆಲ್ಲಾ ಹ್ಯಾಂಡಿಕ್ಯಾಂ ತೆಗೆದುಕೊಂಡು ಚಿತ್ರಿಸಿದ್ದಾರೆ ಅಂತನಿಸುತ್ತದೆ.  ಇತಿಹಾಸದ ಗರ್ಭದಲ್ಲಿ ವರ್ತಮಾನದ ಘಟನೆಗಳನ್ನಿಟ್ಟು ಅದಕ್ಕೆ ತೋರಣ ಕಟ್ಟಿ ನೋಡುತ್ತಾರೆ.  ಓದುಗರ ಪಾಲಿಗೆ ಮೊದಲು ತಾವು ಭ್ರಮಾಲೋಕದಲಿದ್ದೇವೆ ಅಂತನಿಸುತ್ತದೆ.  ಅನಂತರ ವಾಸ್ತವದ ಗುರುತುಗಳು ತಮ್ಮ ಮೈಮೇಲಾಗಿರುವುದನ್ನು ಕಂಡು ಮೂಕವಿಸ್ಮಿತರಾಗುತ್ತಾರೆ.  ಈ ತೆರನ ಕಥೆಗಳು ಕನ್ನಡ ಸಾರಸ್ವತ ಲೋಕದಲ್ಲಿ ಅಪೂರ್ವ. ರೂಪಕಗಳ ಬಗ್ಗೆ ಕಥೆಗಾರ ತಲಕೆಡಿಸಿಕೊಳ್ಳುವುದೇ ಇಲ್ಲ.  ಅವೆಲ್ಲಾ ಸಹಜವಾಗಿ ಆತನ ಲೇಖನಿಯ ನಾಲಿಗೆಯ ತುದಿಗೆ ಅಂಟಿಕೊಂಡುಬಿಡುತ್ತವೆ.  ಇಂತಹ ಬರಹಗಳನ್ನು ನಮಗೆ ನೀಡಿದ ಲೇಖಕ ಸೃಜನಶೀಲ ಅನ್ನದೇ ಇನ್ನೇನನ್ನು ಹೇಳಲು ಸಾಧ್ಯ?
ಪ್ರೇಮಶೇಖರ ಮನುಷ್ಯಸಮಾಜದ ಪದರಗಳನ್ನು ಜಾಗರೂಕತೆಯಿಂದ ತೆಗೆಯುತ್ತಾ ಹೋಗುತ್ತಾರೆ.  ಇಲ್ಲಿನ ಕಥೆಗಳು ಅನ್ವೇಷಕ ಶಕ್ತಿಯನ್ನು ಪಡೆದುಕೊಂಡಿವೆ.  ಸೂಕ್ಷ್ಮ ಕಣ್ಣುಗಳಿಂದ ಪ್ರತಿಯೊಂದನ್ನೂ ಪರಿವೀಕ್ಷಿಸುತ್ತಾ ಹೋಗುವ ಬರವಣಿಗೆ.  ಪ್ರತಿದಿನ ವರ್ತಮಾನ ಪತ್ರಿಕೆ ಅಥವಾ ದೃಶ್ಯಮಾಧ್ಯಮಗಳನ್ನು ನೋಡುವವರಿಗೆ ಹೊಸತರ.  ಆದರೆ ಅವುಗಳನ್ನು ಬಹುಕಾಲ ಹೊಸದಾಗಿ ಇರಿಸುವ ಕಥೆಗಾರನ ಜಾಣ್ಮೆ ಹೊಸತು.
          ಮೋಡಿಗಾರದಲ್ಲಿ ಒಟ್ಟು ಹದಿನಾಲ್ಕು ಕಥೆಗಳಿವೆ.  ಯಾವುದನ್ನೂ ಓದುಗ ಬೇಡ ಎಂದು ಬದಿಗಿರಿಸುವ ಹಾಗಿಲ್ಲ.  ಅಂತಹ ಮಾಂತ್ರಿಕತೆಯ ಸ್ಪರ್ಶವನ್ನು ಕಥೆಗಾರ ಇಲ್ಲಿ ನೀಡಿದ್ದಾರೆ.  ತುಂಬ ಸುಂದರವಾದ ಪೆಯಿಂಟಿಂಗ್.  ಮೊನ್ನೆತಾನೆ ಯಾರೋ ಒಬ್ಬರು ಮೊನಾಲಿಸಾ ರೂಪದರ್ಶಿಯನ್ನು ಬಿಡಿಸಿದ ಲಿಯನಾರ್ಡೋ ಡಾ ವಿಂಚಿಯ ಆ ಚಿತ್ರದ ಕುರಿತು ಹೇಳಿದರಂತೆ: ಮೊನಾಲಿಸಾಳನ್ನು ತಲೆಕೆಳಕಾಗಿ ನೋಡಿದರೆ ಅಲ್ಲಿ ಹುಲಿ, ನವಿಲು ಇನ್ನೂ ಏನೇನೋ ಕಂಡುಬರುತ್ತವೆಯಂತೆ.  ಅಂತೆಯೇ ಪ್ರೇಮಶೇಖರರ ಕಥೆಗಳನ್ನು ಹಿಂದುಮುಂದಾಗಿ ಓದಿದರೆ ಇನ್ನೂ ಏನೇನೋ ಹೊಳೆಯಬಹುದು.  ಬರವಣಿಗೆಯ ಶೈಲಿ ನಿರೂಪಣೆ, ಘಟನೆಗಳ ರಚನೆ ಎಲ್ಲವೂ ವಿಭಿನ್ನ.  ಅವುಗಳನ್ನು ಓದುತ್ತಾ ಓದುತ್ತಾ ನಮಗೆ ಏನೇನೋ ಆಲೋಚನೆಗಳು ಬರಬಹುದು.  ಕನ್ನಡದ ನವ್ಯ ನವ್ಯೋತ್ತರದ ಬರಹಗಳೆಲ್ಲಾ ಹಾಗೇ.  ಅವೆಲ್ಲಾ ಜೀವಂತ ಬರವಣಿಗೆಗಳು.  ಆದರೆ ನವ್ಯದವರು ಸೋತದ್ದು ಮತ್ತು ಪಥಭ್ರಾಂತರಾದದ್ದು ಅವುಗಳನ್ನು ಓದುಗರಿಗೆ ತಲುಪಿಸುವಲ್ಲಿ.  ನಿಜವಾಗಿ ಗೆದ್ದವರು ಪೂರ್ಣಚಂದ್ರ ತೇಜಸ್ವಿ.  ಅವರ ಬರವಣಿಗೆಗಳಲ್ಲಿ ನುಸುಳುವ ತೆಳು ಹಾಸ್ಯ ಓದುಗರನ್ನು ಹಿಡಿದಿಡುತ್ತದೆ.  ಅವರಿಗಿಂತ ಪ್ರೇಮಶೇಖರ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.  ಇಲ್ಲಿ ಬುದ್ಧಿಜೀವಿಗಳ ಚೀರಾಟವಿದೆ, ಧರ್ಮರಜಕಾರಣಗಳು ಹುಟ್ಟು ಹಾಕುವ ಬೆತ್ತಲೆ ದುರಂತವಿದೆ, ಮಾಧ್ಯಮದದವರ ಸಾಮಾಜಿಕ ಹೊಣೆಗೇಡಿತನ ಮತ್ತು ದೃಶ್ಯವ್ಯಭಿಚಾರವಿದೆ, ಸಾಮಾನ್ಯನು ಅನುಭವಿಸುವ ನರಕಯಾತನೆ ಇದೆ.  ಅಂತಿಮವಾಗಿ ಪ್ರತಿಯೊಂದು ಕಥೆಯ ನೇಪಥ್ಯದಲ್ಲಿ ಮಾನವೀಯತೆಯನ್ನು ಉಳಿಸಿಕೊಳ್ಳೀ ಎಂಬ ಲೇಖಕನ ಹೃದಯವಿದ್ರಾವಕ ಧ್ವನಿ ಇದೆ.  ಈ ತೆರನ ಬರಹಗಳನ್ನು ಪಾಶ್ಚಾತ್ಯ ಲೇಖಕರಲ್ಲಿ ಮತ್ತು ನಮ್ಮ ಹಿರಿಯ ತಲೆಮಾರಿನ ರವೀಂದ್ರನಾಥ ಟ್ಯಾಗೋರರಲ್ಲಿ ಕಂಡಿದ್ದೆ.  ಮತ್ತೆ ಕನ್ನಡ ಸಾಹಿತ್ಯದಲ್ಲಿ ಎಲ್ಲೋ ಒಂದೋ ಎರಡೋ ಕಥೆಗಳನ್ನು ಓದಿದ್ದೇನೆ.  ನಾವೆಲ್ಲಾ ಸಂಬಂಧಿಕರು ಎನ್ನುವ ಕಥೆಗಾರನ ಹೃದಯವಂತಿಕೆಯನ್ನು ಕಂಡಾಗ ತಲ್ಲಣಿಸದಿರು ಕಂಡ್ಯಾ ತಾಳು ಮನವೇ ಎನ್ನುವುದು ಸ್ಮೃತಿಪಟಲದ ಮೇಲೆ ಹಾದುಹೋಗುತ್ತದೆ.
ಈ ಹೊತ್ತಗೆಯ ಮೊದಲ ಭಾಗ ಭಾರತ - ಪಾಕಿಸ್ತಾನ: ಧರ್ಮಾಧರ್ಮ.  ಇಲ್ಲಿ ದೇಶವಿಭಜನೆಯ ಅನಂತರದ ರುದ್ರಭೀಕರ ಸನ್ನಿವೇಶವನ್ನು ಕಥೆಗಾರ ಬಹಳಷ್ಟು ನೈಜತೆಯಿಂದ ಹೆಣೆಯುತ್ತಾರೆ.  ಇಲ್ಲಿ ಮೂರ್ತಗಳು ಕೆಲವೊಮ್ಮೆ ಅಮೂರ್ತಗಳಾಗುತ್ತವೆ, ಕೆಲವು ಮಾತುಗಳು ಮೌನವಾಗುತ್ತವೆ, ಧರ್ಮಾಧರ್ಮಗಳು ಬಣ್ಣಗಳನ್ನು ಪಡೆಯುತ್ತವೆ.  ಅವುಗಳು ಏನನ್ನೋ ಹೇಳಲು ಪ್ರಯತ್ನಿಸಿ ಸಾಯುತ್ತವೆ.  ನಮ್ಮೊಳಗಿನ ಯಾವುದೋ ಒಂದು ವೇದನಾಪೂರ್ಣ ಧ್ವನಿ ಇನ್ಯಾರದ್ದೋ ವೇಶ ಹಾಕಿಕೊಂಡು ನಮ್ಮನ್ನು ಮಾತನಾಡಿಸುತ್ತದೆ.
ನಿಜಕ್ಕೂ ಅದು ನಾವೇ ಆಗಿರುತ್ತೇವೆ.  ಒಂದು ತೆರನ ವಿಸ್ಮೃತಿ, ವರ್ತಮಾನವು ಸತ್ಯವಾಗಿದ್ದರೂ ಅಸತ್ಯದ ಅಂಬರದಲ್ಲಿ ನಮ್ಮ ಮುಖಗಳನ್ನು ಮುಚ್ಚಿಕೊಳ್ಳುತ್ತೇವೆ.  ಯಾನ ನೀಳ್ಗತೆಯಲ್ಲಿ ಮೂಡಿಬರುವ ಗದ್ಯದ ತುಂಡೊಂದನ್ನು ಸಹೃದಯರ ಮುಂದಿರಿಸಲು ಪ್ರಯತ್ನಿಸುತ್ತೇನೆ:  ಬರಹಗಾರನ ಅಂತರಂಗದ ಅನಿಸಿಕೆಗಳಿಗೆ ನೀವೇ ಮುನ್ನುಡಿ ಮತ್ತು ಹಿನ್ನುಡಿ ಬರೆಯಿರಿ.
"...ನನಗಾದರೂ ಸಾವು ಯಾಕೆ ಬರಬೇಕಿತ್ತು ಹೇಳು?  ಅದೂ ಮೊಟ್ಟಮೊದಲ ಸಾವು!  ಅದರಲ್ಲೂ ಋತುಮತಿಯಾದ ಐದೇ ವರ್ಷಗಳಲ್ಲಿ!  ನೀ ನನ್ನನ್ನು ಪ್ರೀತಿಸುವುದು ನಿಂತ ಕ್ಷಣ ನನಗೆ ಸಾವುಂಟಾಗುತ್ತದೆಂದು ನಿನಗೆ ಯಾರೂ ಹೇಳಿರಲಿಲ್ಲವೇ?  ನಾನು ನಿನ್ನನ್ನು ಪ್ರೀತಿಸುವುದು ನಿಂತ ಕ್ಷಣವೇ ನಿನಗೆ ಸಾವು ಬರುತ್ತದೆ ಎಂದು ನನಗಂತೂ ಚೆನ್ನಾಗಿಯೇ ಗೊತ್ತು.  ಹೀಗಾಗಿಯೇ ನಿನ್ನನ್ನು ಉಳಿಸುವ ಬಯಕೆಯಿಂದ ನಿನ್ನನ್ನು ಪ್ರೀತಿಸುವುದನ್ನು ನಾ ನಿಲ್ಲಿಸಲೇ ಇಲ್ಲ.  ಪ್ರೀತಿಗೆ ಅಗಾಗ ಗೆರೆ ಎಳೆದು ನಿನ್ನನ್ನು ಅದೆಷ್ಟೋ ಬಾರಿ ಕೊಲ್ಲುವ ಅವಕಾಶಗಳು ನನ್ನ ಮಡಿಲಲ್ಲಿ ತುಂಬಿದ್ದವು.  ಆದರೆ ನಾ ಹಾಗೆ ಮಾಡಲಿಲ್ಲ.  ಇಲ್ಲದಿದ್ದರೆ ನಾ ಕಾಣುವ ಕನಸುಗಳಲ್ಲೆಲ್ಲಾ ನೀನೇ ಯಾಕೆ ಬರಬೇಕಿತ್ತು?  ಬರಿದಾಗಿಹೋಗಿದ್ದ ನನ್ನ ಉಡಿಗೆ ಕವನಗಳನ್ನು ತುಂಬುವ ಆಟ ಆಡಲು ನಿನಗೆ ಮನಸ್ಸಾದರೂ ಹೇಗೆ ಬಂತು?" (ಪುಟ ೨೫)
            ಇದೊಂದು ಗದ್ಯಹೃದ್ಯ ಕಾವ್ಯ.  ಇಂತಹ ಲವಲವಿಕೆ ಮತ್ತು ಜೀವಂತಿಕೆ ಇರುವುದರಿಂದ ಇಲ್ಲಿಯ ಎಲ್ಲಾ ಕಥೆಗಳೂ ನಿರಾಳವಾಗಿ ಉಸಿರಾಡುತ್ತವೆ.  ಕಥೆಯ ನಿರೂಪಕಿಗೆ ಹಸಿರಿನ ಬಗ್ಗೆ ಎಲ್ಲಿಲ್ಲದ ಮೋಹ.  ಹಸಿರು ಉಸಿರಾಗಿ ಇಲ್ಲಿ ನೃತ್ಯವಾಡುತ್ತದೆ.  ಅದೇ ಕಥೆಯಲ್ಲಿ ಇದ್ದಕ್ಕಿದ್ದಂತೇ ಸಾಕಾರವಾಗುವ ಸ್ಯಾಮ್ ನಿರೂಪಕಿಯನ್ನು ಕೇಳುತ್ತಾನೆ: ಹಸಿರಿನ ಬಗ್ಗೆ ನಿನಗೇಕಿಷ್ಟು ಮೋಹ ಮೂಡಿತು?  ನಾ ಕಂಡಂದಿನಿಂದಲೂ ನೀನೆಂದೂ ಹಸಿರುಡುಗೆ ಉಟ್ಟವಳಲ್ಲ.  ಏನೋಪ್ಪ, ಇತ್ತೀಚೆಗೆ ನಿನಗೇನಾಗಿದೆಯೋ ನನಗೆ ಅರ್ಥವೇ ಆಗುತ್ತಿಲ್ಲ.  ಇರಲಿ, ಹಸಿರು ಉಸಿರಿನ ಸಂಕೇತ, ಬದುಕಿನ ಆಸೆಯ ಕುರುಹು.  ನಿನ್ನ ಬದುಕು ಹಸಿರಾಗಲಿ.  ಆ ಹಸಿರು ಕಾನನದಲ್ಲಿ ನಾನೊಂದು ಹಸಿರು ಮಾಮರವಾಗಿ ನಿಲ್ಲುತ್ತೇನೆ...  ಇಂತಹ ನಮ್ಮ ಮರ್ಮಕ್ಕೆ ಪೆಟ್ಟುಕೊಡುವಂತೆ ಅಭಿವ್ಯಕ್ತಗೊಂಡ ಲೇಖಕರ ನುಡಿಗಳು ಧನ್ಯತೆಯನ್ನು ಆಸ್ವಾದಿಸುತ್ತದೆ.  ಈ ಭಾಗದ ಇತರ ಕಥೆಗಳಲ್ಲಿ ಅತಿ ಸನಿಹದ ಘಟನೆಗಳಾದ ಕ್ರಿಕೆಟ್, ದ್ರಾವಿಡ್, ಇಂಝಮಾಂ ಎಲ್ಲರೂ ಪಾತ್ರಧಾರಿಗಳು.  ನಾಯಕ ನಾಯಕಿರೇ ಇಲ್ಲದ ಜಗದ ಚರಾಚರ ಜೀವಿಗಳೆಲ್ಲಾ ಇಲ್ಲಿ ವೇಷ ತೊಡುತ್ತಾರೆ, ಕುಣಿಯುತ್ತಾರೆ, ಆನಂದಿಸುತ್ತಾರೆ, ದುಃಖಿಸುತ್ತಾರೆ, ಮತ್ತೆ ಸಾಯುತ್ತಾರೆ.  ಇನ್ನೊಂದು ರಮ್ಯ ಬರವಣಿಗೆ ಮುಖಾಮುಖಿ.  ಇದು ನಮ್ಮ ಜಾತ್ಯತೀತತೆ, ವಿಚಾರವಾದ, ಧರ್ಮರಾಜಕಾರಣ ಮತ್ತು ಸ್ವೇಚ್ಛಾಮಾಧ್ಯಮಗಳಿಗೆ ಹಿಡಿದ ಕನ್ನಡಿಯಂತಿದೆ.  ಈ ಕಥೆಯಲ್ಲಿನ ಗನ್ ಸಂನ್ಯಾಸಿ ತನ್ನ ಮಾತುಗಳನ್ನು ಉದುರಿಸುತ್ತಾನೆ: ಪುಣ್ಯಕಾಲಕ್ಕೆ ಇನ್ನು ಮೂರೇ ನಿಮಿಷಗಳಿವೆ.  ನಾನೀಗ ನನ್ನ ಬಲಗೈ ಎತ್ತುತ್ತೇನೆ.  ನಿಮ್ಮೆಲ್ಲರ ವಸ್ತ್ರಗಳು ನಿಮ್ಮ ಮೈಮೇಲಿಂದ ತಾವಾಗಿಯೇ ಕಳಚಿಕೊಂಡು ನನ್ನತ್ತ ಹಾರಿಬರುತ್ತವೆ.  ಆತ ಅಂದ ಹಾಗೇ ಆಗುತ್ತದೆ.  ಆತ ಮತ್ತೊಂದು ಕೈ ಎತ್ತಿದಾಗ ಅವರ ಅಂದರೆ ಸಾರ್ವಜನಿಕರ ಒಳಉಡುಪುಗಳೂ ಕಳಚಿ ಅವನತ್ತ ಬರುತ್ತವೆ.  ನೆರೆದ ಜನ ನಾಚಿಕೆಯಿಂದ ನೀರಾಗಿಹೋಗುತ್ತಾರೆ.  ಅಲ್ಲಿದ್ದ ಯಾರ‍್ಯಾರೋ ಹೆಣ್ಣುಗಂಡುಗಳ ನಡುವೆ ತನ್ನಿಂದ ತಾನಾಗಿಯೇ ಗೋಡೆಗಳು ಎದ್ದು ನಿಲ್ಲುತ್ತವೆ.  ಈ ಕಥೆಯ ಅಂತ್ಯದಲ್ಲಿ ಮಹಿಳೆಯೊಬ್ಬಳು ಉಸಿರಿಸುವ ನುಡಿಗಳು ಕರುಳನ್ನು ಹಿಂಡುತ್ತವೆ: ಅನ್ಯಾಯಕಾರ.  ಇಡೀ ಒಂದ್ ಕೇಜಿ ಮಾಂಸಾನೇ ಕಿತ್ಕಂಡ್‌ಬಿಟ್ಟ.  ಅದೆಷ್ಟು ಜನ್ಮದಿಂದ ಬಾಡು ಕಂಡಿರಲಿಲ್ಲವೋ.  ರಾಕ್ಷಸನ ವಂಶದೋನು.  ನಮ್ಮ ಧರ್ಮಗಳು ಸಾರ್ವಜನಿಕ ರಂಗದಲ್ಲಿ ತಮ್ಮ ಪ್ರಭುತ್ವವನ್ನು ಊರಲು ಪ್ರಯತ್ನಿಸಿದಾಗ ಆಗುವ ಅನಾಚಾರಗಳಿಗೆ ಲೆಕ್ಕವಿಲ್ಲ.  ಒಟ್ಟಿನಲ್ಲಿ ಅಮಾನವೀಯತೆ ಬೆತ್ತಲ ಹೆಣವಾಗಿ ಇಲ್ಲಿ ಬಿದ್ದಿದೆ.  ದಯವಿಟ್ಟು ಮಾನವೀಯತೆಯ ಬಟ್ಟೆ ಹೊದಿಸಿರೋ ಎಂದು ಓದುಗರನ್ನು ಗೋಗರೆಯಬೇಕಾ? ಎಂತಹ ಅನುಪಮ ಬರವಣಿಗೆ ಇದು!  ಗಾಯ ಕಥೆಯಲ್ಲಿ ನಿರೂಪಕನ ಮನೆ ನಿರಾಶ್ರಿತರ, ಅನಾಥರ ಗುಡಿಸಲುಗಳ ನಡುವೆ ಇರುತ್ತದೆ.  ದೃಶ್ಯಮಾಧ್ಯಮದವರು ಬರುತ್ತಾರೆ, ಅಲ್ಲಿ ಉಗ್ರವಾದಿಗಳು ಬಂದು ಸೇರಿಕೊಂಡಿದ್ದಾರೆ ಎಂಬ ಊಹೆಯೊಂದಿಗೆ.  ಈ ದೃಶ್ಯವಂತೂ ಎದೆಯನ್ನೇ ನುಚ್ಚುನೂರುಗೊಳಿಸುವಂಥದ್ದು.  ದೂರದರ್ಶನವಾಹಿನಿಗಳ ಕ್ಯಾಮೆರಾ ಎಲ್ಲರ ಮನೆಗಳ ಮೇಲೆ ಕೇಂದ್ರೀಕೃತವಾಗುತ್ತದೆ.  ನಿರೂಪಕನ ಮನೆಯ ಕಿಟಕಿಗಳ ಮೂಲಕ ಹಾದುಹೋಗುತ್ತದೆ.  ನಿರೂಪಕ ಟಾಯ್ಲೆಟ್‌ಗೆ ಹೋದಾಗ ಯಾವ ಅವಸ್ತೆಯಲ್ಲಿರುತ್ತಾನೋ ಆ ದೃಶ್ಯ ಟೀವಿ ಪರದೆಯ ಮೇಲೆ ಬಿಂಬಿತವಾಗುತ್ತದೆ.  ಆತನ ಹೆಂಡತಿಗೂ ಇದೇ ಸಂಕಟ.  ಆದರೆ ದೃಶ್ಯಮಾಧ್ಯಮ ಸಿಕ್ಕಿದ ಸ್ವಾತಾಂತ್ರ್ಯವನ್ನು ಎಷ್ಟೊಂದು ಅಸಹ್ಯವಾಗಿ ಉಪಯೋಗಿಸಿಕೊಳ್ಳುದೆ!  ನಿರೂಪಕನ ಎಂಟುವರ್ಷದ ಎಳೇ ಮಗಳು ತನ್ನ ಕೋಣೆಯ ಹಾಸಿಗೆಯಲ್ಲಿ ನಿದ್ರೆಯಲ್ಲಿರುವುದರಿಂದ ಆಕೆಯ ಉಡುಪು ಅಸ್ತವ್ಯಸ್ತವಾಗಿರುತ್ತದೆ.  ಆ ಮಗುವಿನ ತೊಡೆಯ ಮೇಲೆ ಕ್ಯಾಮೆರಾ ಕಣ್ಣು ಬೀಳುತ್ತದೆ.  ಆ ಅಶ್ಲೀಲವನ್ನು ವೈಭವೀಕರಿಸುವ ರೀತಿ ಅಮಾನವೀಯ.  ಇಲ್ಲಿ ಮುಗ್ಧತೆ ಸತ್ತುಹೋಗುತ್ತದೆ.
         ದೃಶ್ಯಮಾಧ್ಯಮ ತನ್ನ ವ್ಯಭಿಚಾರವನ್ನು ಗ್ಲೋರಿಫೈ ಮಾಡುತ್ತಲೇಹೋಗುತ್ತದೆ.  ಇವೆಲ್ಲವನ್ನೂ ನಾವು ಈ ದಿನಗಳಲ್ಲಿ ನೋಡಿ ಮುಜುಗರ ಪಟ್ಟುಕೊಳ್ಳುವುದಿಲ್ಲವೇ?  ಈ ನಗ್ನ ಸತ್ಯವನ್ನು ಅಕ್ಷರಗಳಲ್ಲಿ ಬಿಂಬಿಸುವ ಧೈರ್ಯವಿದ್ದವರೇ ನಿಜವಾಗಿಯೂ ಸಾಮಾಜಿಕ ಜವಾಬ್ಧಾರಿಯನ್ನು ಹೊತ್ತ ಲೇಖಕ ಎನ್ನಬಹುದು.  ಸಂಬಂಧಗಳು ಕಥೆಯಲ್ಲಿ ಬರುವ ಮತ್ಸ್ಯಕನ್ಯೆ ಲೋಕದಲ್ಲಿರುವ ವಾಸಿಸುವ ಮನುಷ್ಯರೆಲ್ಲಾ ಒಬ್ಬರಿಗೂಬ್ಬರು ಸಂಬಂಧಿಕರು ಎನ್ನುವುದನ್ನು ಮನಮುಟ್ಟುವಂತೆ ಕೂಗಿ ಹೇಳುತ್ತಾಳೆ.  ಈ ಬದುಕು ಸುಂದರ ಮಧುರ ಎಂದು ಹೇಳುವ ಅಪ್ಯಾಯಮಾನವಾದ ಬರಹಗಳು ನಂಬಿಕೆ ಅಪನಂಬಿಕೆ ವಿಭಾಗದಲ್ಲಿವೆ.
ಪ್ರೇಮಶೇಖರ್ ಸಹೃದಯರು, ಪ್ರೇಮಿಸುವ ಯೋಚಿಸುವ ತವಕ ತಲ್ಲಣಗಳಿಗೆ ಒಳಗಾಗುವ ಕಥೆಗಳನ್ನು ವಿಶಿಷ್ಟ ಮಾದರಿಯಲ್ಲಿ ಸಾದರ ಪಡಿಸಿದ್ದಾರೆ.  ಇಲ್ಲಿರುವುದೆಲ್ಲಾ ಕೃತಿಕಾರನ ಸಹಜಾಭಿವ್ಯಕ್ತಿಗಳು.  ಇಡೀ ಕೃತಿಯನ್ನು ಓದಿ ಮುಗಿಸಿದ ನಂತರ ಓದುಗರು ಬೆರಗಿನಿಂದ ಕೇಳುವ ಪ್ರಶ್ನೆ:  ಹೀಗೂ ಬರೆಯಲು ಸಾಧ್ಯವೇ?
ಲೇಖಕರಿಗೆ ಅಭಿಮಾನದ ಅಭಿನಂದನೆಗಳು.
***     ***     ***
(ಸೌಜನ್ಯ: ಕುಂದಪ್ರಭಾ, ಜನವರಿ ೩ ಮತ್ತು ೧೭,  ೨೦೧೨)

No comments:

Post a Comment