ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Friday, October 19, 2012

ಮಲಾಲಾ ಪ್ರಕರಣ: ತಾಲೀಬಾನೀಕರಣದತ್ತ ಮತ್ತೊಂದು ಅನಾಗರಿಕ ಹೆಜ್ಜೆ



ಅಕ್ಟೋಬರ್ ೯, ೨೦೧೨, ಮಂಗಳವಾರದ ಮಧ್ಯಾಹ್ನ ಹನ್ನೆರಡೂಮುಕ್ಕಾಲರ ಹೊತ್ತಿಗೆ ಪಾಕಿಸ್ತಾನದ ಖೈಬರ್-ಪಕ್ತೂನ್‌ಖ್ವಾ (ಹಿಂದಿನ ನಾರ್ತ್ ವೆಸ್ಟ್ ಫ್ರಾಂಟಿಯರ್ ಪ್ರಾವಿನ್ಸ್) ಪ್ರಾಂತ್ಯದ ಸ್ವಾತ್ ಕಣಿವೆಯ ಮಿಂಗೋರಾ ಪಟ್ಟಣದ ಶಾಲೆಯಲ್ಲಿ ಅರೆವಾರ್ಷಿಕ ಪರೀಕ್ಷೆ ಬರೆದು ಸಹಪಾಠಿಗಳ ಜತೆ ಶಾಲಾವಾಹನದಲ್ಲಿ ಹಿಂತಿರುಗುತ್ತಿದ್ದ ಹದಿನಾಲ್ಕರ ಕಿಶೋರಿ ಮಲಾಲಾ ಯೂಸುಫ್‌ಝಾಯ್‌ಳನ್ನು ಪಾಕಿಸ್ತಾನಿ ತಾಲಿಬಾನಿಗಳು ಗುಂಡುಹಾರಿಸಿ ಕೊಲ್ಲಲು ಪ್ರಯತ್ನಿಸಿದರು.  ಈ ದುಷ್ಕೃತ್ಯಕ್ಕೆ ಅವರು ಮುಂದಾದದ್ದು ಈಗ ಅಫ್ಘಾನಿಸ್ತಾನದಲ್ಲಿ ಅಡಗಿರುವ ಪಾಕ್ ತಾಲಿಬಾನ್ ನಾಯಕ ಮುಲ್ಲಾ ಫಲ್ಲುಲ್ಲಾನ ಆದೇಶದ ಮೇಲೆ.  ತಲೆಗೆ ಬಿದ್ದ ಗುಂಡಿನಿಂದಾಗಿ ಒಂದುವಾರದಿಂದಲೂ ಕೋಮಾದಲ್ಲಿರುವ ಮಲಾಲಾಳನ್ನು ಚಿಕಿತ್ಸೆಗಾಗಿ ಬ್ರಿಟನ್ನಿಗೆ ಕೊಂಡೊಯ್ದಿರುವ ಸುದ್ದಿ ಈ ಲೇಖನ ಬರೆಯುವ ಹೊತ್ತಿಗೆ (ಸೋಮವಾರ ಮಧ್ಯಾಹ್ನ) ಬಂದಿದೆ.  ಅವಳು ಬದುಕಿ ಉಳಿದರೆ ಅವಳ ಹತ್ಯೆಗೆ ಮತ್ತೆ ಪ್ರಯತ್ನಿಸುವುದಾಗಿ ತಾಲಿಬಾನಿ ನಾಯಕರು ಹೇಳಿದ್ದಾರೆ.  ಕಳೆದ ಒಂದುವಾರದಲ್ಲಿ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಪಡೆದು ಎಲ್ಲರಿಗೂ ಪರಿಚಿತವಾಗಿರುವ ಈ ಘಟನೆಯ ವಿವರಗಳನ್ನು ಇಲ್ಲಿ ಪುನರಾವರ್ತಿಸುವುದರ ಬದಲು ಪಾಕಿಸ್ತಾನದಲ್ಲಿ ತಾಲಿಬಾನ್ ತೀವ್ರವಾದದ ವಿವಿಧ ಆಯಾಮಗಳ ವಿಶ್ಲೇಷಣೆಯನ್ನು ಕೈಗೆತ್ತಿಕೊಳ್ಳುತ್ತೇನೆ.
ಮಲಾಲಾಳನ್ನು ತಾಲಿಬಾನ್ ತನ್ನ ಹಾದಿಯ ಮುಳ್ಳು ಎಂದು ಬಗೆಯಲಾರಂಭಿಸಿದ್ದರ ಹಿಂದೆ ಸ್ವಾತ್‌ನಲ್ಲಿ ಇಸ್ಲಾಮಿಕ್ ಮೂಲಭೂತವಾದದ ಅಸ್ತಿತ್ವದ ಪ್ರಶ್ನೆಯಿದೆ.  ಇದೆಲ್ಲವೂ ಆರಂಭವಾದದ್ದು ಫೆಬ್ರವರಿ ೨೦೦೯ರಲ್ಲಿ ಪಾಕಿಸ್ತಾನ್ ಸರ್ಕಾರ ತಾಲಿಬಾನಿಗಳ ಜತೆ ಒಪ್ಪಂದವೊಂದಕ್ಕೆ ಸಹಿ ಹಾಕಿದಾಗ.  ಪಾಕಿಸ್ತಾನದ ಚರಿತ್ರೆಯಲ್ಲಿ ಒಂದು ಗಮನಾರ್ಹ ಬೆಳವಣಿಗೆಯಾದ ಈ ಒಪ್ಪಂದ ೨೦೦೭ರ ಅಕ್ಟೋಬರ್‌ನಿಂದಲೂ ಸೇನೆ ಮತ್ತು ತಾಲಿಬಾನ್ ನಡುವೆ ನಡೆಯುತ್ತಿದ್ದ ಯುದ್ಧವನ್ನು ನಿಲುಗಡೆಗೆ ತಂದದ್ದಲ್ಲದೇ ಸ್ವಾತ್ ಕಣಿವೆಯಲ್ಲಿ ಇಸ್ಲಾಮಿಕ್ ಕಾನೂನುಗಳನ್ನು ಜಾರಿಗೆ ತರಲು (ಅಂದರೆ ತಾಲಿಬಾನೀಕರಣಕ್ಕೆ) ತಾಲಿಬಾನ್‌ಗೆ ಅನುವು ಮಾಡಿಕೊಡುವಂಥದ್ದಾಗಿತ್ತು.  ಒಪ್ಪಂದದ ನಂತರದ ಒಂದು ವಾರದಲ್ಲಿ ಪಾಕ್ ತಾಲಿಬಾನ್ ವಕ್ತಾರ ಮುಸ್ಲಿಂ ಖಾನ್ ಮತ್ತು ಇತರ ತಾಲಿಬಾನೀ ನಾಯಕರುಗಳು ಹಲವಾರು ಹೇಳಿಕೆಗಳ ಮೂಲಕ ಸ್ವಾತ್ ಕಣಿವೆಯಲ್ಲಿ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸದ ಹಕ್ಕಿರುವುದಿಲ್ಲ ಹಾಗೂ ಬುರ್ಖಾ ಧರಿಸದೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಯಾವುದೇ ಸ್ತ್ರೀಗೆ ಮರಣದಂಡನೆ ವಿಧಿಸಲಾಗುವುದು ಎಂದು ಸಾರಿದ್ದರು.
ಅಫ್ಘಾನಿಸ್ತಾನಕ್ಕೆ ಹೊಂದಿಕೊಂಡ ಸ್ವಾತ್ ಕಣಿವೆಯಲ್ಲಿ ಇಸ್ಲಾಮಿಕ್ ಕಾನೂನುಗಳ ಅನುಷ್ಠಾನದ ಪ್ರಯತ್ನ ಆರಂಭವಾದದ್ದು ೧೯೯೪ರಲ್ಲಿ ಬೆನಝಿರ್ ಭುಟ್ಟೋ ಪ್ರಧಾನಮಂತ್ರಿಯಾಗಿದ್ದಾಗ.  ಅಫ್ಘಾನಿಸ್ತಾನದಿಂದ ಸೋವಿಯತ್ ಸೇನೆಯ ನಿರ್ಗಮನದ ನಂತರ ಆ ದೇಶದಲ್ಲಿ ನಿರ್ಮಾಣವಾಗಿದ್ದ ಅರಾಜಕ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ಕಾಬೂಲ್‌ನಲ್ಲಿ ತನ್ನ ಕೈಗೊಂಬೆ ಸರಕಾರವನ್ನು ಸ್ಥಾಪಿಸುವ ಉದ್ದೇಶದಿಂದ ಕುಖ್ಯಾತ ಇಂಟರ್ ಸರ್ವಿಸಸ್ ಇಂಟಲಿಜೆನ್ಸ್‌ನ ಸಹಕಾರದಿಂದ ತಾಲಿಬಾನನ್ನು ಸೃಷ್ಟಿಸಿ ಅದನ್ನು ಎರಡು ವರ್ಷಗಳ ನಂತರ ೧೯೯೬ರಲ್ಲಿ ಅಫಘಾನಿಸ್ತಾನದಲ್ಲಿ ಪಟ್ಟಕ್ಕೇರಿಸಿದ್ದೇ ಬೆನಝಿರ್ ಸರಕಾರ.  ಪಕ್ತೂನಿ ಸಂಘಟನೆಯಾದ ತಾಲಿಬಾನ್ ಸ್ವಾತ್ ಮತ್ತು ಸುತ್ತುಮುತ್ತಲಿನ  ಗುಡ್ಡಗಾಡಿನಲ್ಲಿ ಮೊದಲು ನೆಲೆಯೂರಿ ಆ ಪ್ರದೇಶವನ್ನು ತನ್ನ ಅಫ್ಘನ್ ಕಾರ್ಯಾಚರಣೆಗೆ ಜಿಗಿಯುವ ಹಲಗೆಯನ್ನಾಗಿ ಉಪಯೋಗಿಸಿಕೊಂಡಿತು.  ಹೀಗಾಗಿ ದಕ್ಷಿಣ ಏಶಿಯಾದಲ್ಲಿ ಮೊಟ್ಟಮೊದಲು ತಾಲಿಬಾನೀಕರಣಗೊಂಡದ್ದೇ ಸ್ವಾತ್ ಕಣಿವೆ.  ಹೊಸ ಸಹಸ್ರಮಾನ ಆರಂಭವಾಗುತ್ತಿದ್ದಂತೇ ಸ್ವಾತ್ ಉಗ್ರ ಮೂಲಭೂತವಾದದ ಸುಳಿಯಲ್ಲಿ ಸಿಲುಕಿತು.  ೯/೧೧ ಘಟನೆಗಳ ಪರಿಣಾಮವಾಗಿ ಅಮೆರಿಕಾ ಅಫ್ಘಾನಿಸ್ತಾನದ ಮೇಲೆ ಧಾಳಿಯೆಸಗಿ ತಾಲಿಬಾನ್ ಸರಕಾರವನ್ನು ಕಿತ್ತೊಗೆದಾಗ ತಾಲಿಬಾನಿಗಳು ಆಶ್ರಯ ಪಡೆದದ್ದು ಖೈಬರ್-ಫಕ್ತೂನ್‌ಖ್ವಾ ಪ್ರಾಂತ್ಯದಲ್ಲಿ, ಮುಖ್ಯವಾಗಿ ಸ್ವಾತ್ ಕಣಿವೆಯಲ್ಲಿ.  ಅಫ್ಘಾನಿಸ್ತಾನದ ಜತೆ ತೆರೆದ ಗಡಿ ಹೊಂದಿರುವ ಸ್ವಾತ್‌ನಲ್ಲಿ ತಾಲಿಬಾನಿಗಳು ಸ್ಥಳೀಯ ಫಕ್ತೂನಿಗಳ ಜತೆ ಬೆರೆತುಹೋದರು.  ಅಲ್ಲಿ ಹುಟ್ಟಿಕೊಂಡ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಸ್ವಾತ್‌ನಲ್ಲಿ ಇಸ್ಲಾಮಿಕ್ ಕಾನೂನುಗಳ ಅನುಷ್ಟಾನವನ್ನು ಗುರಿಯಾಗಿಟ್ಟುಕೊಂಡು ೨೦೦೭ರ ಅಕ್ಟೋಬರ್‌ನಲ್ಲಿ ಪಾಕ್ ಸೇನೆಯ ಜತೆ ಸಂಘರ್ಷಕ್ಕಿಳಿಯಿತು.  ತಾಲಿಬಾನಿಗಳ ಬಳಿ ಪಾಕಿಸ್ತಾನೀ ಸೇನೆಯ ಬಳಿ ಇರುವಂತದೇ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿದ್ದುವು ಮತ್ತು ನೆರೆಯ ಅಫಘಾನಿಸ್ತಾನದಲ್ಲಿ ಉಗ್ರ ಕಾರ್ಯಾಚರಣೆಯಲ್ಲಿ ತೊಡಗಿದ್ದ ಅಫ್ಘನ್ ತಾಲಿಬಾನಿಗಳ ಸಹಕಾರದಿಂದಾಗಿ ಅವುಗಳ ಪೂರೈಕೆಗೆ ಯಾವ ಧಕ್ಕೆಯೂ ಇರಲಿಲ್ಲ.  ಜತೆಗೇ, ಪಾಕಿಸ್ತಾನೀ ಸೇನೆಯಲ್ಲಿದ್ದ ಸಾವಿರಾರು ಪಕ್ತೂನ್ ಸೈನಿಕರು ಸೈನ್ಯವನ್ನು ತೊರೆದು ಬಂಡುಕೊರರ ಪಾಳಯ ಸೇರಿದ್ದರಿಂದ ತಾಲಿಬಾನಿಗಳ ಶಕ್ತಿ ಇಮ್ಮಡಿಸಿ ಅವರನ್ನು ಸದೆಬಡಿಯುವುದು ಏಶಿಯಾದ ಅತ್ಯಂತ ಬಲಿಷ್ಟ ಸೇನೆಗಳಲ್ಲೊಂದಾದ ಪಾಕ್ ಸೇನೆಗೂ ಕಷ್ಟಕರವಾಯಿತು.  ಇದರ ಪರಿಣಾಮವೇ ಸ್ವಾತ್ ಕಣವೆಯಲ್ಲಿ ಇಸ್ಲಾಮಿಕ್ ಕಾನೂನುಗಳನ್ನು ಅನುಷ್ಟಾನಗೊಳಿಸಲು ತಾಲಿಬಾನಿಗಳಿಗೆ ಅವಕಾಶ ನೀಡುವ ಒಪ್ಪಂದಕ್ಕೆ ಜರ್ದಾರಿ ನೇತೃತ್ವದ ಸರಕಾರ ಸಹಿ ಹಾಕಿದ್ದು.  ಮಹಿಳಾಪ್ರಧಾನಿ ಬೇನಜ಼ಿರ್ ಭುಟ್ಟೋ ಆಳ್ವಿಕೆಯಲ್ಲೇ ಮಹಿಳಾಸ್ವಾತಂತ್ರ್ಯದ ಉಗ್ರವಿರೋಧಿಯಾದ ತಾಲಿಬಾನ್ ಸೃಷ್ಟಿಯಾದ ಕ್ರೂರ ವ್ಯಂಗ್ಯದ ಮುಂದುವರಿಕೆಯಾಗಿ ಅಕೆಯ ಪತಿಯ ಆಡಳಿತದಲ್ಲಿ ಪಾಕಿಸ್ತಾನದ ಒಂದು ಪ್ರದೇಶವೇ ತಾಲಿಬಾನೀಕರಣಕ್ಕೆ ಒಳಗಾಗಹೊರಟತ್ತು.
ಇಷ್ಟಕ್ಕೂ ಪಾಕಿಸ್ತಾನದ ಒಂದು ಮೂಲೆಯಲ್ಲಿ ಇಸ್ಲಾಮಿಕ್ ಕಾನೂನು ಜಾರಿಗೆ ಬಂದರೆ ಇಷ್ಟೇಕೆ ಗಲಾಟೆ ಎಂಬ ಪ್ರಶ್ನೆ ಸ್ವಾಭಾವಿಕವಾಗಿಯೇ ಮೂಡಬಹುದು.  ಹೇಳಿಕೇಳಿ ಪಾಕಿಸ್ತಾನ ಇಸ್ಲಾಮಿಕ್ ರಾಷ್ಟ್ರ.  ಹಿಂದೂಗಳು ಮತ್ತು ಮುಸ್ಲಿಮರು ಎರಡು ವಿಭಿನ್ನ ರಾಷ್ಟ್ರಗಳು, ಹೀಗಾಗಿ ಅವೆರಡೂ ರಾಷ್ಟ್ರಗಳಿಗೂ ಒಂದೇ ಸರಕಾರ ಇರಕೂಡದು ಎಂಬ ದ್ವಿರಾಷ್ಟ್ರ ಸಿದ್ಧಾಂತದ ಆಧಾರದ ಮೇಲೆ ಭಾರತದ ಮುಸ್ಲಿಮರಿಗಾಗಿ ಸೃಷ್ಟಿಸಲ್ಪಟ್ಟ ಪಾಕಿಸ್ತಾನದಲ್ಲಿ ಇಸ್ಲಾಮಿಕ್ ಕಾನೂನುಗಳಲ್ಲದೇ ಮತ್ಯಾವ ಕಾನೂನುಗಳಿರಬೇಕು ಎಂಬ ಪ್ರಶ್ನೆ ಸಹಜವೇ.  ಸರಿ, ಈ ಬಗ್ಗೆ ಯಾವುದೇ ತಕರಾರಿಲ್ಲ.  ಸೌದಿ ಅರೇಬಿಯಾದಲ್ಲಿನ ಕಟ್ಟಾ ಇಸ್ಲಾಮಿಕ್ ಆಡಳಿತದ ಬಗ್ಗೆ ಜಗತ್ತು ಚಕಾರವೆತ್ತಿಲ್ಲ.  ಹಾಗೆಯೇ ಇರಾನ್‌ನಲ್ಲಿ ಖೊಮೇನಿಯ ಹಾಗೂ ತೊಂಬತ್ತರ ದಶಕದಲ್ಲಿ ಅಫಘಾನಿಸ್ತಾನದಲ್ಲಿದ್ದ ತಾಲಿಬಾನ್ ಆಡಳಿತವನ್ನು ಜಗತ್ತು ಒಪ್ಪಿಕೊಂಡಿತ್ತು.  ಅಫ್ಘನ್ ತಾಲಿಬಾನಿಗಳು ಇಸ್ಲಾಮೀಕರಣದ ಹುಮ್ಮಸ್ಸಿನಲ್ಲಿ ಪುರಾತನ ಬಾಮಿಯನ್ ಬುದ್ಧ ಪ್ರತಿಮೆಗಳನ್ನು ಧ್ವಂಸಗೊಳಿಸಿದ್ದನ್ನೂ ಜಗತ್ತು ಹಲ್ಲುಕಚ್ಚಿ ಸಹಿಸಿಕೊಂಡ ಉದಾಹರಣೆ ನಮ್ಮೆದುರಿಗೇ ಇದೆ.  ಇಡೀ ಪಾಕಿಸ್ತಾನ ತಾಲೀಬಾನೀಕರಣವಾದರೂ ಜಗತ್ತು ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ.  ಪ್ರಶ್ನೆ ಅದಲ್ಲ.  ಸಾರ್ವಭೌಮ ಪಾಕಿಸ್ತಾನದ ಎಲ್ಲ ಪ್ರದೇಶಗಳಲ್ಲೂ ಒಂದು ಬಗೆಯ ಕಾನೂನು ಹಾಗೂ ಆಡಳಿತವಿದ್ದರೆ ಸ್ವಾತ್ ಪ್ರದೇಶದಲ್ಲಿ ಮಾತ್ರ ಬೇರೆಯ ಕಾನೂನುಗಳೂ, ಆಡಳಿತವೂ ಏರ್ಪಡುವುದು ಅಂದರೆ ಒಂದೇ ರಾಷ್ಟ್ರದಲ್ಲಿ ಎರಡು ವಿಭಿನ್ನ ರಾಜಕೀಯ ಹಾಗೂ ಕಾನೂನು ವ್ಯವಸ್ಥೆಗಳು ಏರ್ಪಡಹೊರಟಿದ್ದು ಆಧುನಿಕ ರಾಷ್ಟ್ರವ್ಯವಸ್ಥೆಯಲ್ಲಿ ಕಂಡು ಕೇಳರಿಯದ ವೈಚಿತ್ರ್ಯ. ಆ ದಿನಗಳಲ್ಲಿ ವಿಶ್ಲೇಷಕರನ್ನು ಕಾಡಿದ್ದು ಇದು.  (ಇದರ ಬಗ್ಗೆ ತಲೆಕೆಡಿಸಿಕೊಂಡ ನಾನೂ ಸಹಾ ಆಗ ಇಂಥದ್ದೊಂದು ವೈಚಿತ್ರ್ಯವನ್ನು ಭಾರತೀಯ ಸಂದರ್ಭಕ್ಕೆ ಹೊಂದಿಸಿ ಮುಖಾಮುಖಿ ಎಂಬ ಕಥೆ ಬರೆದೆ.)
ಆದರೆ ಮುಂದಿನ ಮೂರೇ ತಿಂಗಳಲ್ಲಿ ಪರಿಸ್ಥಿತಿ ಬದಲಾಗಿಹೋಯಿತು.  ತನ್ನ ಪ್ರಭಾವವನ್ನು ಸ್ವಾತ್‌ನಾಚೆಗೂ ವಿಸ್ತರಿಸಲು ತಾಲಿಬಾನ್ ಮುಂದಾಗಿ ಇಸ್ಲಾಮಾಬಾದ್‌ನ ಉತ್ತರಕ್ಕೆ ಕೇವಲ ನೂರು ಕಿಲೋಮೀಟರ್ ದೂರದಲ್ಲಿದ್ದ ಬುನೇರ್ ಪಟ್ಟಣದ ಮೇಲೆ ಆಕ್ರಮಣವೆಸಗಿದಾಗ ಪಾಕ್ ಸೇನೆ ತೀವ್ರಕ್ರಮಕ್ಕೆ ಮುಂದಾಯಿತು.  ಅವರನ್ನು ಬುನೇರ್‌ನಿಂದ ಹೊರಗಟ್ಟಿದ ಸೇನೆ ಮುಂದುವರೆದು ಸ್ವಾತ್‌ಗೇ ಪ್ರವೇಶಿಸಿ ಹಲವು ವಾರಗಳ ಭೀಷಣ ಕಾಳಗದ ನಂತರ ತಾಲಿಬಾನಿಗಳನ್ನು ಮಣಿಸಿತು.  ಸೇನೆಯ ವಿಜಯದ ಹಿಂದೆ ಅಮೆರಿಕಾದ ಸಕ್ರಿಯ ಸಹಕಾರವಿತ್ತು.
೨೦೦೯ರ ಮಧ್ಯಭಾಗದಿಂದಲೂ ಪಾಕ್ ಸೇನೆ ಸ್ವಾತ್‌ನಲ್ಲಿ ಬೀಡುಬಿಟ್ಟಿದ್ದರೂ ತಾಲಿಬಾನಿಗಳ ಚಟುವಟಿಕೆಗಳನ್ನು ಪೂರ್ಣವಾಗಿ ನಿಗ್ರಹಿಸಲು ಅದಕ್ಕೆ ಸಾಧ್ಯವಾಗಿಲ್ಲ.  ಸ್ತ್ರೀಶಿಕ್ಷಣದ ಕಟ್ಟಾವಿರೋಧಿಗಳಾಗಿರುವ ತಾಲಿಬಾನಿಗಳು ಹೆಣ್ಣುಮಕ್ಕಳ ಶಾಲೆಗಳ ಮೇಲೆ ಧಾಳಿಯೆಸಗುವ, ತಮ್ಮ ವಿರೋಧಿಗಳ ಹತ್ಯೆಗೈಯುವ ಚಟುವಟಿಕೆಗಳನ್ನು ಸೇನೆಯ ಮೂಗಿನ ಕೆಳಗೇ ಎಗ್ಗಿಲ್ಲದೇ ಸಾಗಿಸುತ್ತಿದ್ದಾರೆ.  ಇದನ್ನು ವಿರೋಧಿಸಿದ ಮಲಾಲಾ ತಾಲಿಬಾನಿಗಳ ವೈರಿಯಾಗಿದ್ದಾಳೆ.  ಸ್ವಾತ್‌ನಲ್ಲಿ ಪಾಶ್ಚಿಮಾತ್ಯ ಶಿಕ್ಷಣಕ್ರಮದ ಪರವಾಗಿದ್ದಾಳೆ ಎನ್ನುವುದು ಮಲಾಲಾ ವಿರುದ್ಧದ ತಾಲಿಬಾನ್ ಆರೋಪ.
ತನ್ನ ತಾಲಿಬಾನ್ ವಿರೋಧಿ ಚಟುವಟಿಕೆಗಳನ್ನ್ನು ಮಲಾಲಾ ಆರಂಭಿಸಿದ್ದು ಮೂರೂವರೆ ವರ್ಷಗಳ ಹಿಂದೆ, ಹನ್ನೊಂದರ ಬಾಲೆಯಾಗಿದ್ದಾಗ.  ಸ್ತ್ರೀಶಿಕ್ಷಣದ ಅಗತ್ಯವನ್ನು, ತಾಲಿಬಾನ್ ದುಷ್ಕೃತ್ಯಗಳ ಕರಾಳತೆಯನ್ನು ಗುಲ್ ಮಕಾಯ್ ಎಂಬ ಗುಪ್ತನಾಮದಲ್ಲಿ ಬಿಬಿಸಿ ಬ್ಲಾಗ್‌ನಲ್ಲಿ ಬರೆಯುತ್ತಿದ್ದ ಮಲಾಲಾ ಬಿಬಿಸಿ ಉರ್ದು ಕಾರ್ಯಕ್ರಮಗಳ ಶ್ರೋತೃಗಳಿಗೆ ಪರಿಚಿತೆ.  ಈ ಕಾರಣಕ್ಕಾಗಿಯೇ ತಾಲಿಬಾನಿಗಳಿಂದ ಅವಳಿಗೆ ಜೀವಬೆದರಿಕೆ ಇತ್ತು ಮತ್ತು ಅದರ ಅರಿವು ಅವಳಿಗೂ ಇತ್ತು.  ಈ ಬಗ್ಗೆ ತನ್ನ ಜತೆ ಮಲಾಲಾ ಮಾತಾಡಿದ್ದಾಗಿ ಅವಳ ಸಹಪಾಠಿ, ತಾಲಿಬಾನಿ ಧಾಳಿಯಿಂದ ಗಾಯಗೊಂಡಿರುವ ಶಾಜ಼ಿಯಾ ರಂಜಾನ್ ಹೇಳಿದ್ದಾಳೆ.
ಮಲಾಲಾಳ ಮೇಲಿನ ಧಾಳಿ ಇಡೀ ಪಾಕಿಸ್ತಾನ ಹಾಗೂ ನೆರೆಯ ಅಫ್ಘಾನಿಸ್ತಾನದಲ್ಲಿ ತೀವ್ರ ಜನಾಕ್ರೋಶವನ್ನುಂಟುಮಾಡಿದೆ.  ಮಲಾಲಾಳಿಗಾಗಿ ಪ್ರಾರ್ಥನೆ, ತಾಲಿಬಾನ್ ವಿರೋಧೀ ಜಾಥಾಗಳು ಸಾಮಾನ್ಯವಾಗುತ್ತಿವೆ.  ಜಿಯಾ ಸರಕಾರ ಭುಟ್ಟೋರನ್ನು ಗಲ್ಲಿಗೇರಿಸಿದಾಗಲೂ ಸುಮ್ಮನಿದ್ದ ಪಾಕಿಸ್ತಾನಿ ಜನತೆ ಈಗ ಮೈಕೊಡವಿ ಮೇಲೇಳುತ್ತಿರುವುದು ಆಶಾಭಾವನೆಯ ಜತೆ ಅಚ್ಚರಿಯನ್ನೂ ಉಂಟುಮಾಡುತ್ತಿದೆ.  ಪಾಕಿಸ್ತಾನೀ ಸರಕಾರ, ವಿರೋಧಪಕ್ಷಗಳು ಮಲಾಲಾಳ ಮೇಲಿನ ಹತ್ಯೆಯ ಪ್ರಯತ್ನವನ್ನು ತೀವ್ರವಾಗಿ ಖಂಡಿಸಿವೆ.  ಹೀಗೇ ಖಂಡಿಸುತ್ತಲೇ ಇಡೀ ಪ್ರಕರಣವನ್ನು ಅಮೆರಿಕಾದ ವಿರುದ್ಧ ಒಂದು ಅಸ್ತ್ರವಾಗಿ ಬಳಸಿಕೊಳ್ಳಲು ಅವು ಯೋಜಿಸುತ್ತಿವೆ!
ಸ್ವಾತ್‌ನಲ್ಲಿ ಪಾಕ್ ತಾಲಿಬಾನಿಗಳನ್ನು ಅಡಗಿಸದೇ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರುದ್ಧ ಜಯ ಸಾಧಿಸುವುದು ಅಸಾಧ್ಯವೆಂದರಿತಿದ್ದ ಅಮೆರಿಕಾ ೨೦೦೩-೦೪ರಿಂದಲೂ ತನ್ನ ಚಾಲಕರಹಿತ ವಿಮಾನಗಳ ಮೂಲಕ ತಾಲಿಬಾನಿಗಳ ಬೇಟೆಯಾಡುತ್ತಿದೆ.  ಪರಿಣಾಮವಾಗಿ ಬೇನಝಿರ್ ಭುಟ್ಟೋರ ಹತ್ಯೆಯ ಹಿಂದಿದ್ದ ಎನ್ನಲಾದ ಬೈತುಲ್ಲಾ ಮೆಹ್ಸೂದ್, ಸ್ವಾತ್‌ನ ಕಟುಕ ಎಂದು ಕುಖ್ಯಾತನಾಗಿದ್ದ ಇಬ್ನ್ ಅಮೀನ್ ಸೇರಿದಂತೆ ಸಾವಿರಾರು ತಾಲಿಬಾನಿಗಳು ಹತರಾಗಿದ್ದಾರೆ.
ಈ ಧಾಳಿಗಳನ್ನು ನಿಲ್ಲಿಸುವಂತೆ ಪಾಕ್ ಸರಕಾರ ಮಾಡಿಕೊಂಡ ಲೆಕ್ಕವಿಲ್ಲದಷ್ಟು ಮನವಿಗಳಿಗೆ, ಒಡ್ಡಿದ ಬೆದರಿಕೆಗಳಿಗೆ ಅಮೆರಿಕಾ ಸೊಪ್ಪು ಹಾಕಿಲ್ಲ.  ಅಮೆರಿಕಾದ ಈ ನೀತಿಗಳಿಂದಲೇ ತಾಲಿಬಾನಿಗಳು ಪ್ರಚೋದನೆಗೊಂಡು ಮಲಾಲಳ ಮೇಲಿನ ಧಾಳಿಯಂತಹ ಕ್ರಮಕ್ಕೆ ಮುಂದಾಗಿದ್ದಾರೆ ಎಂಬ ಭಾವನೆಯನ್ನು ಪಾಕಿಸ್ತಾನೀಯರಲ್ಲಿ ಹುಟ್ಟುಹಾಕಲು ಜಮಾತ್-ಇ-ಇಸ್ಲಾಮಿ ನೇತಾರ ಫಜ್ಲುರ್ ರೆಹಮಾನ್, ತೆಹ್ರೀಕ್-ಎ-ಇನ್ಸಾಫ್ ನಾಯಕ, ಮಾಜಿ ಕ್ರಿಕೆಟರ್ ಇಮ್ರಾನ್ ಖಾನ್‌ರಿಂದ ಹಿಡಿದು ಪಾಕಿಸ್ತಾನಿ ಸರಕಾರವೂ ಪ್ರಯತ್ನಿಸುತ್ತಿದೆ.  ಆದರೆ ಇದಾವುದನ್ನೂ ಒಪ್ಪಲು ಪಾಕ್ ಸೇನೆ ತಯಾರಿಲ್ಲ.  ತಾಲಿಬಾನಿಗಳು ಸೇನೆಯ ಬದ್ಧವರಿಗಳೆಂದು ನಂಬಿರುವ, ಜನರಲ್ ಆಷ್ಪಾಕ್ ಪರ್ವೇಜ್ ಕಯಾನಿ ಸ್ವಾತ್‌ನಲ್ಲಿ ಮತ್ತೆ ಸೇನಾಕಾರ್ಯಾಚರಣೆಯನ್ನು ಆರಂಭಿಸುವ ಸೂಚನೆಯನ್ನು ಕಳೆದ ಒಂದುವಾರದಲ್ಲಿ ಮೂರುಬಾರಿ ನೀಡಿದ್ದಾರೆ.  ಗೊಂದಲಮಯ ಪಾಕಿಸ್ತಾನದಲ್ಲಿ ಸಧ್ಯಕ್ಕೆ ಇದೊಂದು ಬೆಳ್ಳಿರೇಖೆ.
ಈ ಸಂದರ್ಭದಲ್ಲಿ ಮತ್ತೊಂದು ಮುಖ್ಯ ವಿಷಯವನ್ನೂ ಪ್ರಸ್ತಾಪಿಸಬೇಕು.  ಮಲಾಲಾ ಮೇಲಿನ ಧಾಳಿಯನ್ನು ಖಂಡಿಸಿದ ಇಮ್ರಾನ್ ಖಾನ್ ತಾಲಿಬಾನ್ ಅನ್ನು ಖಂಡಿಸಲು ನಿರಾಕರಿಸಿದರು.  ಈ ಬಗ್ಗೆ ಟೀವಿ ಚಾನಲ್ ಒಂದರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಹೇಳಿದ್ದು ಹೀಗೆ: ನಾನಿಲ್ಲಿ ಕೂತು ತಾಲಿಬಾನ್ ವಿರುದ್ಧ ಭಾರಿಭಾರಿ ಹೇಳಿಕೆಗಳನ್ನು ಕೊಟ್ಟರೆ ಅಲ್ಲಿ ನನ್ನ ಪಕ್ಷದ ಕಾರ್ಯಕರ್ತರನ್ನು ಕಾಪಾಡುವವರಾರು?
ಬಂದೂಕುಧಾರಿಗಳ ಹುಮ್ಮಸ್ಸು ಏರುವುದೇ ನಾಗರೀಕ ಸಮಾಜದ ಇಂತಹ ಹೇಡಿತನದಿಂದ ಎಂದು ನಾವು ಖಾನ್‌ರ ಹೇಳಿಕೆಯನ್ನು ಖಂಡಿಸಬೇಕಾಗಿಲ್ಲ.  ಸ್ವಾರ್ಥಸಾಧನೆಗಾಗಿ ಇಂತಹ ಆಟಗಳನ್ನು ಆಡುವವರು ನಮ್ಮಲ್ಲೇ ಸಾಕಷ್ಟಿರುವಾಗ ತನ್ನ ಹಿಂಬಾಲಕರ ಹಿತವನ್ನು ಪರಿಗಣಿಸುವ, ಅದನ್ನು ಮುಚ್ಚುಮರೆಯಿಲ್ಲದೇ ಹೇಳುವ ಇಮ್ರಾನ್ ಖಾನ್ ಅದೆಷ್ಟೋ ಪಟ್ಟು ಪ್ರಾಮಾಣಿಕ.
ಅಕ್ಟೋಬರ್ ೧೭, ೨೦೧೨, ಬುಧವಾರ "ವಿಜಯವಾಣಿ" ದೈನಿಕದ "ಜಗದಗಲ" ಅಂಕಣದಲ್ಲಿ ಪ್ರಕಟವಾದ ಲೇಖನ

No comments:

Post a Comment