ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Thursday, December 29, 2011

ಲೇಖನ: ಮಿಥ್ಯ, ಸತ್ಯಗಳ ನಡುವೆ...



ಕಥೆ - ಒಂದು
ಮನುಷ್ಯನನ್ನು social animal, political animal ಹೀಗೆ ಎಂತೆಂಥದೋ animal' ಎಂದು ಹೆಸರಿಸಿದ ಕೀರ್ತಿ ಅರಿಸ್ಟಾಟಲ್‌ಗೆ ಸಲ್ಲುತ್ತದೆ.   ಈ ಬಗ್ಗೆ ಒಂದು ಕಥೆ ಇದೆ.  ಹದಿನೆಂಟು - ಇಪ್ಪತ್ತು ವರ್ಷಗಳ ಹಿಂದೆ ನಾನೊಂದು ಕಾರ್ಯಕಮ್ಮಟದಲ್ಲಿ ಭಾಗವಹಿಸುತ್ತಿದ್ದಾಗ ಅಲ್ಲಿಗೆ ಸಂಪನ್ಮೂಲ ವ್ಯಕ್ತಿಯಾಗಿ ಬಂದಿದ್ದ ವಿದ್ವಾಂಸರೊಬ್ಬರು ಹೇಳಿದ್ದು.
ಮನುಷ್ಯನನ್ನು ಏನೆಂದು ಹೆಸರಿಸುವುದು? ಎಂಬ ಬಗ್ಗೆ ಒಂದು ದಿನ ಅರಿಸ್ಟಾಟಲ್ ತನ್ನ ಲಿಸಿಯಂನಲ್ಲಿ ವಿದ್ಯಾರ್ಥಿಗಳೊಡನೆ ಚರ್ಚಿಸುತ್ತಿದ್ದನಂತೆ.  ಮನುಷ್ಯನನ್ನು ಮಿಗ ಎನ್ನುವುದಾಗಲೀ ಖಗ ಎನ್ನುವುದಾಗಲೀ ಸಾಧ್ಯವಿಲ್ಲ.  ಮೃಗಗಳು ನಾಲ್ಕು ಕಾಲಿನಲ್ಲಿ ನಡೆಯುತ್ತವೆಯಾದರೆ ಮನುಷ್ಯ ಎರಡೇ ಕಾಲಿನಲ್ಲಿ ನಡೆಯುತ್ತಾನೆ.  ಹೀಗಾಗಿ ಮನುಷ್ಯನನ್ನು ಮೃಗ ಎನ್ನಲಾಗದು.  ಹಾಗೆಯೇ ಪಕ್ಷಿಗಳಂತೆ ಎರಡೇ ಕಾಲುಗಳಲ್ಲಿ ನಡೆಯುವುದರಿಂದಷ್ಟೇ ಮನುಷ್ಯನನ್ನು ಪಕ್ಷಿ ಎನ್ನಲಾದೀತೇಇಲ್ಲ, ಅದೂ ಸಾಧ್ಯವಿಲ್ಲ.  ಯಾಕೆಂದರೆ ಮನುಷ್ಯನಿಗೆ ಪಕ್ಷಿಗಳಿಗಿರುವಂತೆ ರೆಕ್ಕೆ ಪುಕ್ಕಗಳಿಲ್ಲ.  ಹಾಗಿದ್ದರೆ ಮನುಷ್ಯನನ್ನು ಏನೆಂದು ಕರೆಯುವುದುದಿನಪೂರ್ತಿ ಚರ್ಚೆ ನಡೆಯಿತು.  ಸಂಜೆಯ ಹೊತ್ತಿಗೆ ಗುರು ಶಿಷ್ಯರುಗಳು ಒಂದು ತೀರ್ಮಾನಕ್ಕೆ ಬಂದರು.  ಮನುಷ್ಯ ಪಕ್ಷಿಗಳಂತೆ ಎರಡೇ ಕಾಲುಗಳಲ್ಲಿ ನಡೆಯುವುದರಿಂದ ಹಾಗೂ ಮೃಗಗಳಂತೆ ರೆಕ್ಕೆಪುಕ್ಕಗಳನ್ನು ಹೊಂದಿಲ್ಲದ ಕಾರಣ ಅವನನ್ನು "featherless biped" ಅಂದರೆ ರೆಕ್ಕೆಪುಕ್ಕಗಳಿಲ್ಲದ ದ್ವಿಪಾದಿ ಎಂದು ಕರೆಯುವುದು ಸೂಕ್ತ!  ಮನುಷ್ಯಜಾತಿಗೆ ಕೊನೆಗೂ ಒಂದು ಹಣೆಪಟ್ಟಿಯನ್ನು ಹಚ್ಚಿದ ಯಶಸ್ಸಿನಲ್ಲಿ ಗುರುಶಿಷ್ಯರು ಬೀಗಿದರು.
ನಮ್ಮ ಗಾಂಪರೊಡೆಯರು ಮತ್ತವರ ಶಿಷ್ಯರ ಕಥೆಯಂತಿದೆಯಲ್ಲವೇಇರಲಿ, ಮುಂದೆ ಕೇಳಿ.  ಕಥೆ ಬೇರೆಯೇ ದಾರಿ ಹಿಡಿಯುತ್ತದೆ.
ಮನುಷ್ಯನನ್ನು ಕೇವಲ ರೆಕ್ಕೆಪುಕ್ಕಗಳಿಲ್ಲದ ದ್ವಿಪಾದಿ ಎಂದು ಕರೆದು ತಿಪ್ಪೆ ಸಾರಿಸಿ ಕೈ ತೊಳೆದುಕೊಂಡುಬಿಡುವುದು ಒಬ್ಬ ಶಿಷ್ಯನಿಗೆ ಸರಿಕಾಣಲಿಲ್ಲ.  ಆದರೆ ಗುರುವಿಗೆ ಹೇಳುವುದು ಹೇಗೆನಿಮ್ಮ ನಿರ್ಣಯ ತಪ್ಪು ಎಂದು ಗುರುವಿಗೆ (ಬೇಸರವಾಗದಂತೆ) ಅರಿವು ಮಾಡಿಸುವುದು ಹೇಗೆ?
ರಾತ್ರಿಯೆಲ್ಲಾ ಯೋಚಿಸಿದ ಅವನು ಬೆಳಗಿನ ಹೊತ್ತಿಗೆ ಒಂದು ಯೋಜನೆ ರೂಪಿಸಿದ.  ಒಂದು (ಬಡಪಾಯಿ) ಕೋಳಿಹುಂಜವನ್ನು ಹಿಡಿದು ಅದರ ರೆಕ್ಕೆಪುಕ್ಕವನ್ನೆಲ್ಲಾ ಕಿತ್ತುಹಾಕಿದ.  ಅದನ್ನು ಕಂಕುಳಲ್ಲಿ ಇರುಕಿಕೊಂಡು ಗುರುವಿನ ಕೋಣೆಗೆ ಹೋಗಿ ಮೇಜಿನ ಮೇಲಿಟ್ಟ.  ಗುರುವಿಗೆ ಗಾಬರಿ.  ಬೋಳುಬೋಳು ಕೋಳಿಹುಂಜವನ್ನೇ ನೋಡುತ್ತ "ಇದೇನಯ್ಯ ಇದೂ?" ಎಂದು ಒದರಿದ.
"ನಿಮ್ಮ ಮನುಷ್ಯ."  ಶಿಷ್ಯ ತಣ್ಣಗೆ ಹೇಳಿದ.  ಗುರು ಕಣ್ಣುಕಣ್ಣು ಬಿಟ್ಟ.
"ಇದಕ್ಕೆ ರೆಕ್ಕೆಪುಕ್ಕಗಳಿಲ್ಲ.  ಎರಡು ಕಾಲುಗಳಲ್ಲಿ ನಡೆದಾಡುತ್ತದೆ.  This is a featherless biped, YOUR MAN". ಶಿಷ್ಯ ವಿವರಿಸಿದ.
ಗುರುವಿಗೆ ಜ್ಞಾನೋದಯವಾಯಿತು.
ಆನಂತರ ಯೋಚನೆಗೆ ಬಿದ್ದ ಅರಿಸ್ಟಾಟಿಲ್ ಕೊನೆಗೆ Man is a Thinking Animal ಎಂಬ ತೀರ್ಮಾನಕ್ಕೆ ಬಂದ(ನಂತೆ).

ವಾಸ್ತವ - ಒಂದು
ಅರಿಸ್ಟಾಟಿಲ್‌ನ ತೀರ್ಮಾನವನ್ನು ಎಲ್ಲರೂ ಒಪ್ಪಿಕೊಂಡಿದ್ದಾಗಿದೆ, ಕೆಲವು ಪ್ರಭುತ್ವಗಳ ಹೊರತಾಗಿ.  ಅವು ತಮ್ಮ ಪ್ರಜೆಗಳಷ್ಟೇ ಅಲ್ಲ, ವಿಶ್ವದ ಮನುಷ್ಯರೆಲ್ಲರೂ ಕೇವಲ ರೆಕ್ಕೆಪುಕ್ಕಗಳಿಲ್ಲದ ದ್ವಿಪಾದಿಗಳು ಎಂದು ಭಾವಿಸಿ ಕೋಳಿಗಳಿಗೆ ಹಾಕುವಂತೇ ಹುಳುಹುಪ್ಪಟೆಯಂತಹ ಕೊಳಕುಗಳನ್ನು ಹೊಟ್ಟೆತುಂಬಾ ತಿನ್ನಿಸುತ್ತವೆ.  ತಲೆಗೂ ತುಂಬುತ್ತವೆ.
ಶೀತಲ ಸಮರ ಜಗತ್ತನ್ನು ಬಿಸಿಯಾಗಿಟ್ಟಿದ್ದ ಕಾಲದಲ್ಲಿ ನಾನು ವಿದ್ಯಾರ್ಥಿ.  ಎಪ್ಪತ್ತರ ದಶಕದ ಉತ್ತರಾರ್ಧ ಅದು.  ನಾನು ಪಿಯುಸಿಯಲ್ಲಿದ್ದೆ.  ಬಾಲ್ಯದಿಂದಲೂ ರೇಡಿಯೋವನ್ನು ಕಿವಿಗೆ ಹಚ್ಚಿ ಕೂರುವ ಹವ್ಯಾಸವಿದ್ದ ನನಗೆ ಶಾರ್ಟ್ ವೇವ್‌ನಲ್ಲಿ ಅಡಿಗಡಿಗೆ ಎದುರಾಗುತ್ತಿದ್ದ ಬಿಬಿಸಿ, ವಾಯ್ಸ್ ಆಫ್ ಅಮೆರಿಕಾ, ರೇಡಿಯೋ ಮಾಸ್ಕೋ, ರೇಡಿಯೋ ನೆದರ್ಲ್ಯಾಂಡ್‌ಗಳ ಸೆಳೆತ ಅಪರಿಮಿತ.  ಬಿಡುವಿನ ದಿನಗಳಲ್ಲಿ ಬೆಳಿಗ್ಗೆ ಆರು ಇಪ್ಪತ್ತಕ್ಕೆ ಬಿಬಿಸಿಯ ಹಿಂದಿ ಕಾರ್ಯಕ್ರಮ, ಅದರಲ್ಲಿನ ವಾರ್ತೆಗಳು, ವಾರ್ತಾ ವಿಶ್ಲೇಷಣೆಯ "ವಿಶ್ವಭಾರತಿ" ಅಂಕಣದೊಂದಿಗೆ ನನ್ನ ರೇಡಿಯೋ ಸಾಂಗತ್ಯ ಆರಂಭವಾದರೆ ಅದು ಮುಕ್ತಾಯವಾಗುತ್ತಿದ್ದುದು ರೇಡಿಯೋ ಪಾಕಿಸ್ತಾನ್‌ನ ರಾತ್ರಿ ಹತ್ತೂವರೆಯ "ಆಲಮಿ ಸ್ಪೋರ್ಟ್ಸ್ ರೌಂಡ್ ಅಪ್" ಉರ್ದು ಕಾರ್ಯಕ್ರಮದೊಂದಿಗೆ.  ರೇಡಿಯೋ ಮಾಸ್ಕೋದ ಕನ್ನಡ ಕಾರ್ಯಕ್ರಮಗಳ ಬಗ್ಗೆ ಅರಿತೊಡನೆ ಅದಕ್ಕೂ ಅಂಟಿಕೊಂಡೆ.  ಅವಕಾಶ ಸಿಕ್ಕಿದಾಗೆಲ್ಲಾ ಸಂಜೆ ನಾಲ್ಕೂವರೆಯಿಂದ ಐದು ಅಥವಾ ಆರೂವರೆಯಿಂದ ಏಳುಗಂಟೆಯವರೆಗೆ ದೂರದ ಮಾಸ್ಕೋದಿಂದ ತೇಲಿಬರುತ್ತಿದ್ದ ಇರೀನಾ ತ್ಯೂರಿನಾಳ ಮುದ್ದುಮುದ್ದಾದ ಕನ್ನಡ ಮಾತುಗಳು ಮತ್ತು ನಮ್ಮ ಕೊಳ್ಳೇಗಾಲದ ಹತ್ತಿರದ ಮುಳ್ಳೂರಿನವರೇ ಅದ ಶ್ರೀ ಮಹದೇವಯ್ಯನವರ ಆಕರ್ಷಕ ದನಿಯನ್ನು ಕೇಳುತ್ತಿದ್ದೆ.  ಅವರು ಬಿಂಬಿಸುತ್ತಿದ್ದ ಭೂಲೋಕದ ಸ್ವರ್ಗ ಸೋವಿಯೆತ್ ಯೂನಿಯನ್‌ನ ಚಿತ್ರಗಳನ್ನು ಮನದಲ್ಲಿ ಅಚ್ಚೊತ್ತಿಕೊಳ್ಳುತ್ತಿದ್ದೆ.  ನಮ್ಮ ದೇಶದ ಬಗ್ಗೆ ಸೋವಿಯೆತ್ ಆಳರಸರಿಗಿದ್ದ ಅಪರಿಮಿತ ಪ್ರೀತಿಗೆ ನನ್ನ ಕಣ್ಣುಗಳು ತೇವವಾಗುತ್ತಿದ್ದವು.  ಆ ಮಹಾನ್ ಸಮತಾವಾದಿ ನಾಡಿನ ಅದ್ಭುತ ಆರ್ಥಿಕ ಪ್ರಗತಿ, ನಿರುದ್ಯೋಗವೇ ಇಲ್ಲದ, ಎಲ್ಲರಿಗೂ ಎಲ್ಲವೂ ಸಿಗುತ್ತಿದ್ದ ಕನಸಿನ ರಾಜ್ಯದ ಬಗ್ಗೆ ದಿನವೂ ಕೇಳುತ್ತಾ ನಮ್ಮ ದೇಶದಲ್ಲಿ ಅಂತಹ ದಿನಗಳು ಯಾವಾಗ ಬರುತ್ತವೆ ಎಂದು ಕನಸು ಕಾಣುತ್ತಾ... ಕಾಣುತ್ತಾ... ಕಮ್ಯೂನಿಸ್ಟನೇ ಆಗಿಬಿಟ್ಟೆ...
ರೇಡಿಯೋ ಮಾಸ್ಕೋಗೆ ಪತ್ರ ಬರೆದೆ.  ಅಲ್ಲಿಂದ ಅತ್ಯಾಕರ್ಷಕ ಅಂಚೆಚೀಟಿ ಅಂಟಿಸಿದ್ದ ಲಕೋಟೆಯಲ್ಲಿ ಉತ್ತರ ಬಂದಾಗ ನಾನು ಅಕ್ಷರಶಃ ಕುಣಿದಾಡಿಬಿಟ್ಟೆ.  ಪತ್ರಸರಣಿ ಆರಂಭವಾಯಿತು.  ಸುಂದರ ವ್ಯೂ ಕಾರ್ಡ್‌ಗಳು, ಪುಸ್ತಕಗಳು, ಕ್ಯಾಲೆಂಡರ್‌ಗಳು, ಹೊಚ್ಚಹೊಸ ಅಂಚೆಚೀಟಿಗಳು ಒಂದಾದ ಮೇಲೊಂದು ಬರತೊಡಗಿ ನನ್ನನ್ನು ಸಮೃದ್ದಗೊಳಿಸತೊಡಗಿದವು.
ಎಲ್ಲ ಕನಸುಗಳೂ ಕೊನೆಯಾಗುವಂತೆ ನನ್ನೀ ಯುಟೋಪಿಯಾವೂ ಒಂದು ದಿನ ಕೊನೆಯಾಯಿತು.
೧೯೭೯ರ ಉತ್ತರಾರ್ಧದ ಒಂದು ಸಂಜೆ.  ಆಗ ನಾನು ದ್ವಿತೀಯ ಕಲಾಸ್ನಾತಕ.  ಆ ದಿನಗಳಲ್ಲಿ ಹುಬ್ಬಳ್ಳಿಯ ಲೋಕಶಿಕ್ಷಣ ಟ್ರಸ್ಟ್‌ನಿಂದ ಪ್ರಕಟವಾಗುತ್ತಿದ್ದ "ಪ್ರಜಾಪ್ರಭುತ್ವ" ವಾರಪತ್ರಿಕೆಯಲ್ಲಿ ಒಂದು ಲೇಖನ ನನ್ನನ್ನು ಕಂಗೆಡಿಸಿಬಿಟ್ಟಿತು.  ಮಾಸ್ಕೋದಲ್ಲಿ ವಿದ್ಯಾರ್ಥಿಯಾಗಿದ್ದ ಬಾಬು ಕೊಪ್ಲೆ ಎಂಬ ಭಾರತೀಯ ಯುವಕನನ್ನು ಸೋವಿಯೆತ್ ಗುಪ್ತಚರ ಸಂಸ್ಥೆ ಕೆಜಿಬಿ ಅಪಹರಿಸಿ ಕೊಂದ ಸುದ್ದಿ ಅದಾಗಿತ್ತು.  ನನ್ನ ಭಾರತವನ್ನು ಅಪರಿಮಿತವಾಗಿ ಪ್ರೀತಿಸುವ ರಶಿಯನ್ನರು ಹೀಗೇಕೆ ಮಾಡಿದರು ಎಂದು ಚಿಂತಿಸಿದೆ.  ಈ ಸುದ್ದಿ ನಿಜವೇ ಎಂದು ನನ್ನ ರೇಡಿಯೋ ಮಾಸ್ಕೋದ ಗೆಳೆಯರಿಗೆ ಪತ್ರ ಬರೆದೆ.  ದಿನಗಳು, ವಾರಗಳು, ತಿಂಗಳುಗಳು ಗತಿಸಿದವು.  ಉತ್ತರ ಬರಲಿಲ್ಲ.  ಹಿಂದೆಲ್ಲಾ ಸೋವಿಯೆತ್ ಸ್ವರ್ಗದ ಬಗ್ಗೆ ನನ್ನೆಲ್ಲಾ ಪ್ರಶ್ನೆಗಳಿಗೆ ತಮ್ಮ ಕಾರ್ಯಕ್ರಮಗಳಲ್ಲಿ, ಪತ್ರಗಳಲ್ಲಿ ತಪ್ಪದೇ ಉತ್ತರಿಸುತ್ತಿದ್ದ ನನ್ನ ರೇಡಿಯೋ ಮಾಸ್ಕೋ ಗೆಳೆಯರು ಈಗ ಮೌನವಾಗಿದ್ದರು.  ಅದೇ ಸಮಯದಲ್ಲಿ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಕೆಜಿಬಿಯ ತರಬೇತಿ ಸಂಸ್ಥೆ ಗೈಜಾಯಿನಾ ಬಗ್ಗೆ ಓದಿ ಅದರ ಬಗ್ಗೆ ನನ್ನ ಮಾಸ್ಕೋ ಗೆಳೆಯರಿಗೆ ಮತ್ತೊಂದು ಪತ್ರ ಬರೆದೆ.  ಉತ್ತರ ಬರಲಿಲ್ಲ.
ಅದೆಷ್ಟೋ ಕಾಲದ ನಂತರ ಪತ್ರ ಬಂದಾಗ ಅದರಲ್ಲಿದ್ದದ್ದು ಯಾವ ವಿಶೇಷವೂ ಇಲ್ಲದ ಮೂರುನಾಲ್ಕು ಸಾಲುಗಳು, ಜತೆಗೆ ನನಗೆ ಇಷ್ಟವಾದ ಅಂಚೆಚೀಟಿಗಳು ಮತ್ತು ವ್ಯೂ ಕಾರ್ಡ್‌ಗಳು.  ನನ್ನ ಪ್ರಶ್ನೆಗಳಿಗೆ ಉತ್ತರವಿರಲಿಲ್ಲ...
ನನಗೆ ಬೇಕಾದ ಉತ್ತರಗಳಿಗಾಗಿ ನಾನು ಬೇರೆಡೆ ಹುಡುಕಾಡತೊಡಗಿದೆ.  ಆಗ ಸಿಕ್ಕಿದ ಉತ್ತರಗಳು ನನ್ನನ್ನು ದಿಗ್ಘ್ರಮೆಗೊಳಿಸಿದವು...
ಅದಾದ ಕೆಲವೇ ವರ್ಷಗಳಲ್ಲಿ, ತನ್ನ ಮಾಧ್ಯಮಗಳ ಮೂಲಕ ಮಾಸ್ಕೋ ಹೊರಜಗತ್ತಿಗೆ ನೀಡುತ್ತಿರುವ ಸುದ್ದಿಗಳೆಲ್ಲಾ ಬೊಗಳೆ, ತನ್ನ ಆರ್ಥಿಕ ಪ್ರಗತಿಯ ಬಗ್ಗೆ ನೀಡುತ್ತಿರುವ ಅಂಕಿಅಂಶಗಳೆಲ್ಲಾ ಸುಳ್ಳಿನ ಕಂತೆ, ಇಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ, ಆಹಾರದ ಕೊರತೆ ದಿಕ್ಕೆಡಿಸುವ ಮಟ್ಟದಲ್ಲಿದೆ ಎಂದು ರಶಿಯನ್ನನೇ ಅದ ಅರ್ಥಶಾಸ್ತ್ರಜ್ಞ ಅನತೋಲಿ ಶತಾಲಿನ್ ಆಧಾರಸಮೇತ ಸಾರಿದ.  ಅವನ ಲೇಖನಗಳನ್ನು ಗೋರ್ಬಚೆವ್‌ರ ಕ್ರೆಮ್ಲಿನ್ ನಿರಾಕರಿಸಲಿಲ್ಲ.  ಆಗ ನನ್ನ ಅರಿವು ವಿಸ್ತಾರವಾದಂತೆನಿಸಿತು...  "ಹೊರಜಗತ್ತಿಗೆ ಸುಳ್ಳು ಹೇಳುವುದರಿಂದ ನಮ್ಮ ನೋವುಗಳೇನೂ ನಿವಾರಣೆಯಾಗುವುದಿಲ್ಲ.  ನಮ್ಮ ಬದುಕು ಸುಧಾರಿಸಬೇಕಾದರೆ ನಾವು ವಾಸ್ತವಗಳನ್ನು ಒಪ್ಪಿಕೊಂಡು ಅವುಗಳನ್ನು ಸರಿಪಡಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದೊಂದೇ ಮಾರ್ಗ" ಎಂದು ಆ ಮಹಾನ್ ನಾಯಕ ಘೋಷಿಸಿದಾಗ ನನ್ನ ಜಗತ್ತು ವಿಶಾಲವಾಯಿತು.
ನನ್ನ ಟ್ರ್ಯಾನ್ಸಿಸ್ಟರ್‌ನ ಶಾರ್ಟ್ ವೇವ್‌ನ ಎಲ್ಲ ಮೀಟರ್ ಬ್ಯಾಂಡ್‌ಗಳಲ್ಲೂ ಕಿವಿ ಕಿತ್ತುಹೋಗುವಂತೆ ಅರಚುತ್ತಿದ್ದ ರೇಡಿಯೋ ಮಾಸ್ಕೋ, ರೇಡಿಯೋ ತಾಷ್ಕೆಂಟ್‌ಗಳು ನಂತರದ ದಿನಗಳಲ್ಲಿ ಗಪ್ಪನೆ ಬಾಯಿ ಮುಚ್ಚಿಕೊಂಡವು.  ಕನ್ನಡ ಕಾರ್ಯಕ್ರಮಗಳು ಇತಿಹಾಸವಾದವು.  ಮಹದೇವಯ್ಯ ಭಾರತಕ್ಕೆ ಹಿಂತಿರುಗಿದರು ಅನಿಸುತ್ತದೆ.  ಇರೀನಾ ತ್ಯೂರಿನಾಳ ಮುದ್ದುಕೊರಳು ಮತ್ತೆ ನನ್ನ ಕಿವಿಗೆ ಬೀಳಲಿಲ್ಲ...
ಸುಳ್ಳಿನ ಮೇಲೆ ಕಟ್ಟಿದ್ದ ಸೋವಿಯೆತ್ ಗೋಪುರ ಕೆಲವೇ ವರ್ಷಗಳಲ್ಲಿ ಕುಸಿದು ಬಿತ್ತು.

ವಾಸ್ತವ - ಎರಡು
ಶೀತಲ ಸಮರ ಮುಕ್ತಾಯವಾದ ಮೇಲೆ propaganda ಅರ್ಥಹೀನಗೊಂಡು ಮಹತ್ವ ಕಳೆದುಕೊಳ್ಳುತ್ತಿದ್ದಂತೇ ವಾಯ್ಸ್ ಆಫ್ ಅಮೆರಿಕಾ ಸಹಾ ತನ್ನ ದನಿಯನ್ನು ಗಣನೀಯವಾಗಿ ತಗ್ಗಿಸಿಬಿಟ್ಟಿತು.  ಈ ದಿನಗಳಲ್ಲಿ ಬಿಬಿಸಿ ಸಹಾ ಮೊದಲಿನಷ್ಟು ಜೋರಾಗಿ' ಕೇಳಿಸುವುದಿಲ್ಲ.  ರೇಡಿಯೋ ಮಾಸ್ಕೋ ಅಡ್ರೆಸ್ಸೇ ಇಲ್ಲ.
          ಇವೆಲ್ಲವುಗಳಿಗೆ ಬದಲಾಗಿ ಶಾರ್ಟ್ ವೇವ್‌ನ ಎಲ್ಲ ಮೀಟರ್ ಬ್ಯಾಂಡ್‌ಗಳಲ್ಲೂ ಬೇರೊಂದು ದನಿ ದಿನದ ಇಪ್ಪತ್ತನಾಲ್ಕು ಗಂಟೆಗಳೂ ಕರ್ಕಶವಾಗಿ ಮೊಳಗತೊಡಗಿದೆ.  ಇಂಗ್ಲಿಷ್ ಜತೆ ಹಿಂದಿ ತಮಿಳು ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಅದು ಬಾಯಿ ಬಡಿದುಕೊಳ್ಳುತ್ತಿದೆ.  ಅದು ಚೈನಾ ರೇಡಿಯೋ ಇಂಟರ್‌ನ್ಯಾಷನಲ್.
          ಇಪ್ಪತ್ತೈದು ಮೂವತ್ತು ವರ್ಷಗಳ ಹಿಂದೆ ರೇಡಿಯೋ ಮಾಸ್ಕೋಗಿದ್ದ ಬಾಯಿಗಿಂತಲೂ ಈ ಚೈನಾ ರೇಡಿಯೋದ ಬಾಯಿ ಅಗಲವಾಗಿದೆ, ದನಿ ಜೋರಾಗಿದೆ.  ಚೈನಾದ ಸಮತಾವಾದಿ ಸ್ವರ್ಗದ ಸುಂದರ ಚಿತ್ರಣಗಳು ಅಲ್ಲಿ ಮಣಗಟ್ಟಲೆ ದೊರೆಯುತ್ತವೆ.  ಚೀನೀಯರು ಟಿಬೆಟ್‌ನಲ್ಲಿ ಮಾಡುತ್ತಿರುವ ಒಳ್ಳೆಯ ಕಾರ್ಯಗಳು, ಅದನ್ನು ವಿರೋಧಿಸಿ ಕೆಲವು ದೇಶದ್ರೋಹಿ ಟಿಬೆಟಿಯನ್ ಪುಂಡರು ಚೀನೀ ಪೋಲೀಸರ ಮೇಲೆ ಹಲ್ಲೆ ಮಾಡಿ ಅವರನ್ನು ಕೊಂದದ್ದು, ಶಾಂತ ಟಿಬೆಟ್‌ನಲ್ಲಿ ಅಶಾಂತಿ ಉಂಟುಮಾಡಿದ್ದು- ಇವೆಲ್ಲವನ್ನೂ ಅಲ್ಲಿ ಕೇಳಿ ತಿಳಿದುಕೊಳ್ಳಬಹುದು.  ನಮ್ಮ ಇಂಗ್ಲಿಷ್ ದೈನಿಕವೊಂದು ಈ ಸುದ್ದಿಗಳಿಗೆ ತುಂಬಾ ಗೌರವ ಕೊಟ್ಟು ಪ್ರಕಟಿಸುತ್ತದೆ.  ಅದರ ಸಂಪಾದಕರು ಆಗಾಗ ಚೈನಾಗೆ ಹೋಗಿ ಬರುತ್ತಾರೆ.  ಅಲ್ಲಿಂದ ಬಂದ ಮೇಲೆ ಅಲ್ಲಿ ತಾವು ಕಂಡ ಸತ್ಯಗಳನ್ನು ತಮ್ಮ ಪತ್ರಿಕೆಯಲ್ಲಿ ಮರೆಯದೇ ಬರೆಯುತ್ತಾರೆ.  ತಮ್ಮ ಚೀನೀ ಭೇಟಿಗಳಿಗೆ ಅವರು ತಮ್ಮ ಸ್ವಂತ ಹಣವನ್ನೇನೂ ಖರ್ಚು ಮಾಡುವುದಿಲ್ಲ ಎಂಬ ಗುಸುಗುಸು, ಪಿಸುಪಿಸು.  ಏನೋಪ್ಪ, ನನಗೆ ಅದೇನೂ ಅರ್ಥವಾಗುವುದಿಲ್ಲ.
ಆದರೆ ಈ ಚೈನೀಸ್ ರೇಡಿಯೋ ಕೇಳಲು ಯಾಕೋ ನನಗೆ ಉತ್ಸಾಹವೆನಿಸುತ್ತಿಲ್ಲ.  ಹಿಂದೆ ಬಾಲ್ಯದಲ್ಲಿ ರಾತ್ರಿಯ ನೀರವತೆಯಲ್ಲಿ ನಾನು ಮೈಮರೆತು ಆಲಿಸುತ್ತಿದ್ದ ಇದೇ ಚೀನೀ ರೇಡಿಯೋ ಕೇಂದ್ರಗಳಿಂದ ತೇಲಿಬರುತ್ತಿದ್ದ ಸುಶ್ರಾವ್ಯ ವಾದ್ಯಸಂಗೀತಗಳಷ್ಟು ಈ ವಾರ್ತೆಗಳು ಆಕರ್ಷಕವೆನಿಸುತ್ತಿಲ್ಲ...  ನನ್ನ ಟ್ರ್ಯಾನ್ಸಿಸ್ಟರ್‌ನಲ್ಲಿ ಬೇಕಾದ ಕೇಂದ್ರಕ್ಕೆ ಟ್ಯೂನ್ ಮಾಡುವಾಗ ಮತ್ತೆಮತ್ತೆ ಅಡ್ಡ ಬರುವ ಈ ಚೀನೀ ರೇಡಿಯೋ ಬೇಡಬೇಡವೆಂದರೂ ನನಗೆ ರೇಡಿಯೋ ಮಾಸ್ಕೋವನ್ನು ನೆನಪಿಸಿಬಿಡುತ್ತದೆ...

ಕಥೆ - ಎರಡು
ಮೂರು-ನಾಲ್ಕು ವರ್ಷಗಳ ಹಿಂದೆ ರಾಮಕೃಷ್ಣ ಮಠದ ಸಂನ್ಯಾಸಿಯೊಬ್ಬರು ಹೇಳಿದ ಕಥೆ ಇದು.  ಈ ಕಥೆಯಲ್ಲೂ ಒಂದು ಕೋಳಿ ಇದೆ.  ಹುಂಜವೋ ಹೇಂಟೆಯೋ ನೆನಪಾಗುತ್ತಿಲ್ಲ.  ಸಧ್ಯಕ್ಕೆ ಕೋಳಿ ಎಂದು ನ್ಯೂಟ್ರಲ್ ಜೆಂಡರ್‌ನಲ್ಲೇ ಕರೆಯೋಣ ಬಿಡಿ.  ತೊಂದರೆಯೇನಿಲ್ಲ.  ಆ ಮೆಲುಮಾತಿನ ಸಂನ್ಯಾಸಿ ಚಂದದ ಇಂಗ್ಲಿಷ್‌ನಲ್ಲಿ ಕಥೆ ಹೇಳಿ ಮುಗಿಸುತ್ತಿದ್ದಂತೇ ನನಗೆ ತಡೆಯಲಾರದಷ್ಟು ನಗು ಬಂದುಬಿಟ್ಟಿತ್ತು.
ಕೋಳಿಗೆ ಹಾರುವ ಇಚ್ಚೆ.  ಒಂದು ದಿನ ನವಿಲೊಂದು ಹಾರಿದ್ದನ್ನು ಕಂಡ ಮೇಲಂತೋ ಅದಕ್ಕೆ ತಡೇಯಲಾಗಲಿಲ್ಲ.  "ನೀನು ನನಗಿಂತಲೂ ದಢೂತಿ.  ಅದು ಹೇಗೆ ಹಾರಾಡುತ್ತಿ?" ಎಂದು ಕೇಳಿಯೇ ಬಿಟ್ಟಿತು.  "ಒಂಚೂರು ದನದ ಸಗಣಿ ತಿಂದೆ ಅಷ್ಟೇ.  ಹಾರುವ ಸಾಮರ್ಥ್ಯ ಬಂದುಬಿಟ್ಟಿತು."  ನವಿಲು ನಗುತ್ತಾ ಉತ್ತರಿಸಿ ವೈಯಾರದಿಂದ ಹಾರಿಹೋಯಿತು.
ಹಾರುವ ಮರ್ಮ ತಿಳಿದದ್ದೇ ಕೋಳಿ ಹತ್ತಿರದಲ್ಲೇ ಕಂಡ ಸಗಣಿ ಗುಪ್ಪೆಯತ್ತ ಓಡಿತುಆತುರಾತುರವಾಗಿ ಹಿಡಿ ಸಗಣಿ ಮುಕ್ಕಿತು, ರೆಕ್ಕೆ ಬಿಚ್ಚಿತು.  ಆಶ್ಚರ್ಯ!  ನವಿಲು ಹೇಳಿದ್ದು ನಿಜ.  ಕೋಳಿಗೆ ಹಾರುವ ಸಾಮರ್ಥ್ಯ ಬಂದುಬಿಟ್ಟಿತ್ತು.  ಖುಷಿಯಾಗಿ ಹಾರಿದ ಕೋಳಿ ಮರದ ರೆಂಬೆಯೊಂದರ ಮೇಲೆ ಕೂತು ದಿಕ್ಕುದಿಕ್ಕಿಗೆ ಕೇಳುವಂತೆ ವಿಜಯದ ಕೇಕೆ ಹಾಕಿತು.
ಬಂದೂಕು ಹಿಡಿದು ಹೋಗುತ್ತಿದ್ದ ಬೇಟೆಗಾರನೊಬ್ಬನಿಗೆ ನಮ್ಮ ಈ ಕೋಳಿಯ ವಿಜಯದ ಅಟ್ಟಹಾಸ ಕಿವಿಗೆ ಬಿದ್ದು ಅವನ ಕಣ್ಣು ಮರದ ಮೇಲೆ ಕುಳಿತಿದ್ದ ಅದರ ಮೇಲೆ ಬಿತ್ತು.  ಅರೆ!  ಗುಂಡುಗುಂಡು ಪೊಗದಸ್ತು ರೋಲಿ-ಪೋಲಿ ಕೋಳಿ!  ಬಾಯಲ್ಲಿ ನೀರೂರಿತು.  ಬಂದೂಕನ್ನೆತ್ತಿ ಗುರಿಯಿಟ್ಟ.  ಕೋಳಿಗೆ ಗಾಬರಿ.  ಏನು ಮಾಡಲೂ ತೋಚಲಿಲ್ಲ.  ಅಭ್ಯಾಸವಿಲ್ಲದ್ದರಿಂದ ಹಾರಬೇಕೆಂದೂ ಹೊಳೆಯಲಿಲ್ಲ...
ಬಂದೂಕಿನಿಂದ ಗುಂಡು ಹಾರಿತು.  ಕೋಳಿ ಧೊಪ್ಪನೆ ಕೆಳಗೆ ಬಿತ್ತು.  ಸಗಣಿಯನ್ನು ನಂಬಿದ್ದಕ್ಕೆ...
Moral of the story: You can not stay on top for long by just bullshitting!

No comments:

Post a Comment