ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Monday, December 12, 2011

ದೆಹಲಿ: ರಾಜಧಾನಿಗೆ ಇಂದಿಗೆ ನೂರು ವರ್ಷ


"ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರ ಕೊಲೆಯಾದ ದಿನದಿಂದ ಮೂರು ದಿನಗಳವರೆಗೆ... ದೆಹಲಿಯಲ್ಲಿ ನಾಗರೀಕ ಸರಕಾರವೇ ಇರಲಿಲ್ಲ.  ಎಲ್ಲೆಲ್ಲೂ ಕೊಲೆ ಸುಲಿಗೆ ಬೆಂಕಿ...  ನಾಲ್ಕೇ ದಿನಗಳಲ್ಲಿ ದೆಹಲಿ ಮತ್ತೆ ಕಣ್ಣು ತೆರೆದು ನನ್ನತ್ತ ಮುಗುಳ್ನಗತೊಡಗಿತ್ತು.  ಆ ಮುಗುಳ್ನಗೆಗೂ, ಮೂವತ್ತೇಳು ವರ್ಷಗಳ ಹಿಂದೆ ಎಲ್ಲವನ್ನೂ ಎರಡು ಹೆಣ್ಣುಮಕ್ಕಳನ್ನೂ ಸಹಾ ಕಳೆದುಕೊಂಡು ಜೀವ ಮಾತ್ರ ಉಳಿಸಿಕೊಂಡು ಲಾಹೋರಿನಿಂದ ಓಡಿ ಅಮೃತಸರ ಸೇರಿದಾಗ ಮಾಜೀ ನನ್ನೆಡೆ ಬೀರಿದ ಮುಗುಳ್ನಗೆಗೂ ಅದೆಂತಹ ಸಾಮ್ಯತೆ ಇತ್ತು ಎಂದು ನನಗೆ ಈಗಲೂ ಅಚ್ಚರಿಯಾಗುತ್ತದೆ.  ನನ್ನ ತಾಯಿಯಂತೇ ದೆಹಲಿಯೂ ಸಹಾ ಎಂದು ನನಗೆ ಎಷ್ಟೋ ಸಲ ಅನಿಸುತ್ತದೆ.  ಅದೆಷ್ಟೇ ಹಾನಿಯಾಗಲೀ, ಇದ್ದುದೆಲ್ಲವೂ ಲೂಟಿಯಾಗಲಿ, ಜೀವವೊಂದು ಉಳಿದರೆ ಸಾಕು, ದೆಹಲಿ ಹಾಗೂ ಮಾಜೀ ಮತ್ತೆ ಮುಗುಳ್ನಗತೊಡಗುತ್ತಾರೆ.  ಆರು ಶತಮಾನಗಳ ಹಿಂದೆ ಆ ಕುಂಟ ಕಿರಾತಕ ತೈಮೂರ್ ಇದೇ ದೆಹಲಿಯನ್ನು ಲೂಟಿಮಾಡಿ ಬೆಂಕಿ ಹಚ್ಚಿದ್ದ.  ಅವನು ಅತ್ತ ಹೋದದ್ದೇ ದೆಹಲಿ ಕಣ್ಣು ತೆರೆದು ಮೇಲೆದ್ದಿತ್ತು.  ಮತ್ತೆ... ಮುನ್ನೂರು ವರ್ಷಗಳೂ ಆಗಿಲ್ಲ, ಆ ನಾದಿರ್ ಷಾ ಇಡೀ ಊರನ್ನು ಸ್ಮಶಾನವಾಗಿಸಿ ಕೊಹಿನೂರನ್ನೂ ಮಯೂರ ಸಿಂಹಾಸನವನ್ನೂ ಹೊತ್ತೊಯ್ದ.  ಮಾಸಿದ ಸೀರೆಯ ಕೆದರಿದ ತಲೆಯ ವಾಸನೆ ಬಾಯಿಯ ಹುಚ್ಚಿಯಿಂದ ದೂರ ಓಡುವಂತೆ ಆ ಬ್ರಿಟಿಷರು ದೆಹಲಿಯನ್ನು ಕಡೆಗಣಿಸಿ ಬಂಗಾಳಿ ಯುವಚೆಲುವೆ ಕಲಕತ್ತೆಯ ಮಡಿಲಲ್ಲಿ ಮಲಗಿದರು.  ಆದರೆ ನಾಕು ದಿನದಲ್ಲಿ ಕಲಕತ್ತೆಯ ಮೈಯೆಲ್ಲಾ ಕಜ್ಜಿಯೆದ್ದು ಗಬ್ಬೆದ್ದುಹೋಯಿತು.  ದೆಹಲಿ ದೆಹಲಿಯೇ, ಕಲಕತ್ತೆ ಕಲಕತ್ತೆಯೇ.  ನಿಧಾನವಾಗಿಯಾದರೂ ಚೇತರಿಸಿಕೊಂಡು ಮೇಲೆದ್ದು "ಬನ್ನೀ ಮಕ್ಕಳೇ" ಎಂದು ಮುಗುಳ್ನಕ್ಕ ದೆಹಲಿಯ ಕರೆಯನ್ನು ಮನ್ನಿಸದಿರುವುದು ಪರಂಗಿ ದೊರೆಗಳಿಗೂ ಸಾಧ್ಯವಾಗಲಿಲ್ಲ.  ದೆಹಲಿ ಮತ್ತೆ ರಾಜಧಾನಿ.  ಒಬ್ಬರಿಗೆ ಒಬ್ಬಳೇ ತಾಯಿ.  ಒಂದು ರಾಷ್ಟ್ರಕ್ಕೆ ಒಂದೇ ರಾಜಧಾನಿ.  ಅದು ದೆಹಲಿ, ನನ್ನ ದೆಹಲಿ, ತನ್ನೊಳಗೆ ಅದೆಷ್ಟೋ ಯಾತನೆಗಳನ್ನು ಅಡಗಿಸಿಕೊಂಡು ಮುಗುಳುನಗುವ ನನ್ನ ಮಹಾನ್ ಮಾತೆ..."
ನನ್ನ ಕಥೆ "ಕನ್ನಡಿ"ಯ ಭಾಗವಾಗಿ ಈ ಮಾತುಗಳನ್ನು ನಾನು ಬರೆಯುವ ಹೊತ್ತಿಗೆ ನನ್ನ - ದೆಹಲಿಯ ನಂಟು ಕಾಲು ಶತಮಾನವನ್ನು ದಾಟಿತ್ತು.
ದೆಹಲಿ ಭಾರತದ ರಾಜಧಾನಿಯಾಗಿ ನೂರು ವರ್ಷ ತುಂಬುತ್ತಿರುವ ಈ ದಿನ ಎಲ್ಲವೂ ನೆನಪಾಗುತ್ತಿದೆ...
ನಾನು ಅಕ್ಷರಗಳನ್ನು ಕಲಿಯುವ ಹೊತ್ತಿಗೆ ಸೋದರಮಾವನನ್ನು ಮದುವೆಯಾಗಿ ಪುಟ್ಟಕ್ಕ ದೆಹಲಿಯಲ್ಲಿ ಸಂಸಾರ ಹೂಡಿ ವರ್ಷ ಕಳೆದಿತ್ತು.  ಅಕ್ಷರಗಳನ್ನು ಗುರುತಿಸುವ ಸಾಮರ್ಥ್ಯ ಕೈಗೆಟುಕಿದ್ದೇ ಮನೆಯಲ್ಲಿದ್ದ ಆಕ್ಸ್‌ಫರ್ಡ್ ಸ್ಕೂಲ್ ಅಟ್ಲಾಸ್‌ನಿಂದ ಹಿಡಿದು ಸಿಕ್ಕಿದ ಎಲ್ಲ ಭೂಪಟಗಳಲ್ಲೂ DELHI ಎಂಬ ಹೆಸರನ್ನು ನನ್ನ ಪೆನ್ಸಿಲ್‌ನ ಮೊನೆಯ ವೃತ್ತಗಳಲ್ಲಿ ಬಂಧಿಸಿ ನನ್ನದಾಗಿಸಿಕೊಂಡುಬಿಟ್ಟೆ.  ದೆಹಲಿ ಅಂದರೆ ನನಗೆ ಅಕ್ಕನ ಊರು.  ನನ್ನ ಪುಟ್ಟಕ್ಕ ಇದ್ದ ಪುಟ್ಟ ಹೆಸರಿನ ದೊಡ್ಡ ಊರು.
ಅದಾದ ಎರಡು ವರ್ಷಗಳಿಗೆ ಪುಟ್ಟಕ್ಕ ಊರಿಗೆ ಬಂದಾಗ ತಂದದ್ದು ಅಗಲದ ತೆಳು ಲೋಹದ ಪೆಟ್ಟಿಗೆ.  ಅದರೊಳಗೆ ಅಲಂಕಾರಿಕವಾಗಿ ಜೋಡಿಸಿದ್ದ ಅದೆಷ್ಟೋ ಬಗೆಯ, ಆಕಾರದ, ಸುವಾಸನೆಯ, ರುಚಿಯ ಬಿಸ್ಕೆಟ್‌ಗಳ ಸಾಲುಸಾಲು.  ಪೆಟ್ಟಿಗೆ ಮುಚ್ಚಳದ ಉದ್ದಗಲಕ್ಕೂ ನೂರೊಂದು ಬಣ್ಣಗಳ ಕಣ್ಸೆಳೆಯುವ ಚಿತ್ತಾರ.  ಅಂಚಿನಿಂದ ಅಂಚಿನವರೆಗೆ ಹರಡಿಕೊಂಡ ನೀಲಿನೀಲಿ ನೀರು, ನೀರಲ್ಲಿ ದೋಣಿಗಳು, ದೋಣಿಗಳಲ್ಲಿ ಮನೆಗಳು, ಮನೆಗಳಲ್ಲಿ ಜನಗಳು, ಹಿನ್ನೆಲೆಯಲ್ಲಿ ಹಸಿರು ಗಿಡಮರಗಳು, ಅವುಗಳಾಚೆ ಹಿಮಾಚ್ಛಾದಿತ ಪರ್ವತಸಾಲು...  ನಾನು ನಡೆದಾಡುವ ನೆಲದ ಮತ್ತೊಂದೆಡೆಯಲ್ಲಿ ಅಷ್ಟೆಲ್ಲಾ ಬಣ್ಣಗಳಿವೆಯೆಂದು ನನಗೆ ಗೊತ್ತಾದದ್ದೇ ಅಂದು.  ಕಣ್ಣರಳಿಸಿ ನೋಡುತ್ತಾ ಕೂತುಬಿಟ್ಟೆ.  "ಅದು ಕಾಶ್ಮೀರ" ಅಂದಳು ಪುಟ್ಟಕ್ಕ.
ನನ್ನ ಜಗತ್ತಿನೊಳಗೆ ಮೊದಲೇ ಇದ್ದ ದೆಹಲಿಯ ಜತೆ ಅಂದು ಕಾಶ್ಮೀರವೂ ಸೇರಿಕೊಂಡಿತು.  ದಿನಗಳೆದಂತೆ ಅವೆರಡೂ ನನ್ನೊಳಗೆ ಅಗಾಧವಾಗಿ ಬೆಳೆಯತೊಡಗಿದವು.  ಆ ಬೆಳವಣಿಗೆ ಇಂದಿಗೂ ಅವಿಚ್ಛಿನ್ನವಾಗಿ ಸಾಗಿದೆ...
ವರ್ಷಗಳ ನಂತರ ಪುಟ್ಟಕ್ಕನೇ ಕಳುಹಿಸಿದ ಹಣದಲ್ಲಿ ಟಿಕೆಟ್ ಕೊಂಡು ಜಿ.ಟಿ. ಎಕ್ಸ್‌ಪ್ರೆಸ್ ಹತ್ತಿ ಇಡೀ ಎರಡು ದಿನ ಚುಗುಚುಗು ಸಾಗಿ ನ್ಯೂಡೆಲ್ಲಿ ರೈಲ್ವೇ ಸ್ಟೇಶನ್‌ನಲ್ಲಿಳಿದು ಆ ಜನಸಾಗರದಲ್ಲಿ ಕಾಡುಪಾಪದಂತೆ ಕಣ್ಣುಕಣ್ಣು ಬಿಡುತ್ತಾ ನಿಂತಾಗ ಕಣ್ಣೆದುರು ಕಾಣಿಸಿ ನೆಮ್ಮದಿ ಮೂಡಿಸಿದ್ದು ಸೋದರಮಾವ.  ಸ್ಟೇಶನ್‌ನಿಂದ ಹೊರ ಕರೆತಂದು ಇಲ್ಲೇ ನಿಂತುಕೋ, ಸ್ಕೂಟರ್ ತರುತ್ತೇನೆ ಎಂದು ಹೇಳಿ ಅತ್ತ ಹೋದರು.  ಎರಡು ಚಕ್ರಗಳ ಸ್ಕೂಟರ್ ನಿರೀಕ್ಷಿಸಿದ್ದ ನನ್ನ ಮುಂದೆ ಅವರು ತಂದು ನಿಲ್ಲಿಸಿದ್ದು ಮೂರು ಚಕ್ರಗಳ ಆಟೋರಿಕ್ಷಾ!  ದಟ್ಟ ಗಡ್ಡಮೀಸೆಗಳ ನಡುವೆ ಹಲ್ಲು ಕಿರಿದ ಪಗಡಿತಲೆಯ ಆಟೋ ಡ್ರೈವರ್.  ದೆಹಲಿಗರು ಆಟೋರಿಕ್ಷಾವನ್ನು ಸ್ಕೂಟರ್ ಎಂದು ಕರೆಯುತ್ತಾರೆಂದು ಅರಿತಾಗ ನಗು ಬಂತು.  ದೆಹಲಿಯಲ್ಲಿ ಕಾಲಿರಿಸಿದ ಅರೆಗಳಿಗೆಯಲ್ಲಿ ಕಲಿತ ಮೊದಲ ಭಾಷಾಪಾಠ.  ಆಮೇಲೆ ಸ್ಕೂಟರ್ ಅನ್ನು ಸಕೂಟರ್ ಎನ್ನುತ್ತಾರೆಂದು ತಿಳಿದಾಗ...!  ಆಮೇಲಾಮೇಲೆ ಸಟೂಲ್, ಸಪೂನ್, ಸಕೂಲ್, ಸಟೇಟ್ ಬ್ಯಾಂಕ್...
ನನ್ನ ಕಲಿಕೆ ಇನ್ನೂ ನಿಂತಿಲ್ಲ.

***

ದೆಹಲಿಯದು ಧೀರ್ಘ ಇತಿಹಾಸವಾದರೂ ಅದರ ಪ್ರಾಚೀನ ಚಿತ್ರ ಅಥೆನ್ಸ್, ರೋಮ್, ದಮಾಸ್ಕಸ್, ಜೆರುಸಲೇಂ ಮುಂತಾದ ವಿಶ್ವದ ಪ್ರಾಚೀನ ರಾಜಧಾನಿಗಳಷ್ಟು ರೋಚಕವಾಗಿಲ್ಲ.  ಆ ನಗರಗಳ ಇತಿಹಾಸದಂತೆ ದೆಹಲಿಯ ಇತಿಹಾಸ ನಿರಂತರವಾಗಿಲ್ಲ ಮತ್ತು ಲಿಖಿತವಾಗಿ ದಾಖಲಾಗಿಲ್ಲ.  ಹಾಗಿದ್ದರೂ ದೆಹಲಿ ವಿಶ್ವಾದ್ಯಂತ ಎಲ್ಲರ ಕುತೂಹಲವನ್ನು ನಿರಂತರವಾಗಿ ಕೆರಳಿಸುತ್ತಲೇ ಇದೆ.  ಇದಕ್ಕೆ ಕಾರಣ ಈ ನಗರ ಇತಿಹಾಸದಲ್ಲಿ ವಹಿಸಿದ ಪಾತ್ರ.  ಕನಿಷ್ಟ ಒಂದುಸಾವಿರ ವರ್ಷಗಳಲ್ಲಿ ಅದು ರಾಜಧಾನಿಯಾಗಿ ಮೆರೆದ ಮಹಾನ್ ಸಾಮ್ರಾಜ್ಯಗಳು, ಅವುಗಳ ವೈಭವ, ಉಚ್ಪ್ರಾಯ, ಪತನ, ಐಹಿಕವಾದದ್ದೆಲ್ಲವೂ ಒಂದಲ್ಲಾ ಒಂದು ದಿನ ಕುಸಿದು ನೆಲಸಮವಾಗುತ್ತದೆಂಬ ಐತಿಹಾಸಿಕ ಸತ್ಯವನ್ನು ಸಾರುತ್ತಿರುವ ಇಲ್ಲಿನ ಕೋಟೆಕೊತ್ತಲಗಳು, ಗೋಪುರ ಗುಂಬಜ್‌ಗಳು, ಸಮಾಧಿಗಳು...
ಪಾಂಡವರ ರಾಜಧಾನಿ ಇಂದ್ರಪ್ರಸ್ಥ ಇದೇ ದೆಹಲಿಯಾಗಿದ್ದಿರಬಹುದೆಂದು ಹೇಳಲು ನೇರ ಅಧಾರಗಳಿಲ್ಲವಾದರೂ ಸಾಂಧರ್ಭಿಕ ಸಾಕ್ಷ್ಯಗಳ ಮೂಲಕ ಹಾಗೆ ಹೇಳಬಹುದೆಂದು ಇತಿಹಾಸಕಾರ ಪರ್ಸೀವಲ್ ಸ್ಪಿಯರ್ ಹೇಳುತ್ತಾರೆ.  ಅವರ ಪ್ರಕಾರ ಕುರುಕ್ಷೇತ್ರ ಯುದ್ದ ನಡೆದದ್ದು ಐದು ಪತ್ ಅಥವಾ ವಿಸ್ತರಣ ನಗರಗಳಿಗಾಗಿ.  ಸೋನೆಪತ್, ಪಾನಿಪತ್, ಬಾಗ್‌ಪತ್ ಮತ್ತು ತಿಲ್‌ಪತ್ ಆ ಐದರಲ್ಲಿ ನಾಲ್ಕು ಎಂದು ಗುರುತಿಸಲ್ಪಟ್ಟಿವೆ.  ದೆಹಲಿ ಐದನೆಯದು ಎಂದು ಸಹಜವಾಗಿಯೆ ಭಾವಿಸಬಹುದಾಗಿದೆ ಎಂದು ಸ್ಪಿಯರ್ ಹೇಳುತ್ತಾರೆ.  ಪುರಾಣಕಾಲವನ್ನು ಕಡೆಗಣಿಸಿದರೂ ಇತಿಹಾಸದ ಆರಂಭದಿಂದಲೂ ಇಲ್ಲಿ ಜನವಸತಿ ಇತ್ತೆಂದು ಅಧಾರಸಹಿತವಾಗಿ ಹೇಳಬಹುದು.  ದೆಹಲಿ ಮತ್ತು ಸುತ್ತಮತ್ತಲ ಪ್ರದೇಶಗಳು ಸಿಂಧೂಕಣಿವೆಯ ನಾಗರೀಕತೆ ಬೆಳೆದು ಬೆಳಗಿದ ಭೌಗೋಳಿಕ ವಲಯದ ವ್ಯಾಪ್ತಿಯಲ್ಲಿ ಸೇರಿವೆ.  ದೆಹಲಿಯ ಪುರಾನಾ ಕಿಲಾ ಪ್ರದೇಶದಲ್ಲಿ ಅದರ ಕುರುಹುಗಳು ದೊರೆತಿವೆ.  ಆ ನಂತರ ಸಾವಿರ ವರ್ಷಗಳವರೆಗೆ ದೆಹಲಿಯ ಬಗ್ಗೆ ವಿವರಗಳು ದೊರೆಯುವುದಿಲ್ಲ.  ಮೌರ್ಯರ ಕಾಲದಲ್ಲಿ ದೆಹಲಿ ಮತ್ತೆ ಇತಿಹಾಸದ ನಕ್ಷೆಯಲ್ಲಿ ಕಾಣಿಸಿಕೊಂಡರೂ ಆಗ ಅದೊಂದು ನಿಕೃಷ್ಟ ಪ್ರಾಂತೀಯ ಪಟ್ಟಣವಾಗಿತ್ತಷ್ಟೇ.  ಅದೇ ಸ್ಥಿತಿ ಮುಂದಿನ ಒಂದು ಸಾವಿರ ವರ್ಷಗಳಷ್ಟು ಧೀರ್ಘ ಕಾಲದವರೆಗೆ ಅಂದರೆ ಕುಶಾನರು, ಗುಪ್ತರು ಮತ್ತು ವರ್ಧನರ ಆಳ್ವಿಕೆಯಲ್ಲೂ ಮುಂದುವರೆಯಿತು.
            ಇತಿಹಾಸದಲ್ಲಿ ತನ್ನದೇ ನಿರ್ದಿಷ್ಟ ಹಾಗೂ ವಿಶಿಷ್ಟ ಸ್ಥಾನವನ್ನು ದೆಹಲಿ ಪಡೆದುಕೊಂಡದ್ದು ಹನ್ನೊಂದನೇ ಶತಮಾನದಲ್ಲಿ, ೧೦೨೦ರ ಸುಮಾರಿಗೆ ತೋಮರ್ ರಜಪೂತ್ ಅರಸ ಅನಂಗಪಾಲ ಈಗಿನ ಸೂರಜ್ ಕುಂಡ್ ಪ್ರದೇಶದಲ್ಲಿ ತನ್ನ ರಾಜಧಾನಿ ಅನಂಗ್‌ಪುರವನ್ನು ಸ್ಥಾಪಿಸಿದಾಗ.  ಉಳಿದೆಲ್ಲಾ ಸ್ಥಳಗಳನ್ನು ಬಿಟ್ಟು ಈ ಬರಡು ಕಲ್ಲುಗುಡ್ಡಗಳ ನೆಲದಲ್ಲಿ ಆತ ತನ್ನ ರಾಜಧಾನಿಯನ್ನು ಕಟ್ಟಿಕೊಂಡದ್ದಕ್ಕೆ ಇದ್ದ ಒಂದೇ ಕಾರರಣ- ಸುರಕ್ಷತೆ.  ಇದು ಅಂದಿನ ವಿವಿಧ ರಜಪೂತ್ ರಾಜವಂಶಗಳ ನಡುವಿನ ದಿನನಿತ್ಯದ ಕದನಗಳ ಪರಿಣಾಮ.  ನಂತರ ೧೦೫೦ರಲ್ಲಿ ಆನಂಗಪಾಲ ತನ್ನ ರಾಜಧಾನಿಯನ್ನು ಈಗಿನ ಕುತುತ್ ಪ್ರದೇಶದ ಕಿಲಾ ರಾಯ್ ಪಿಥೋರಾಗೆ ವರ್ಗಾಯಿಸಿದ.  ಅಲ್ಲಿ ಆತ ಕಟ್ಟಿಸಿದ ಕೋಟೆಯ ಕುರುಹುಗಳು ಕುತುಬ್ ಮಿನಾರ್‌ನ ಸುತ್ತಮುತ್ತ ಹರಡಿಕೊಂಡಿವೆ.  ಇತಿಹಾಸಕಾರರು ಗುರುತಿಸುವ ದೆಹಲಿಯ ಏಳು ನಗರಗಳಲ್ಲಿ ಮೊದಲನೆಯದು ಈ ಕಿಲಾ ರಾಯ್ ಪಿಥೋರಾ.  ೧೧೫೦ರಲ್ಲಿ ಅಜ್ಮೀರದ ಚೌಹಾನರು ದೆಹಲಿ ಪ್ರದೇಶವನ್ನು ತಮ್ಮ ವಶಕ್ಕೆ ತೆಗೆದುಕೊಂಡರು.  ನಾಲ್ಕು ದಶಕಗಳ ನಂತರ ೧೧೯೨ನಲ್ಲಿ ದೆಹಲಿ ಅಫ್ಘಾನಿಸ್ತಾನದಿಂದ ಬಂದ ತುರ್ಕಿ ದಾಳಿಕಾರ ಮಹಮದ್ ಘೋರಿಯ ವಶವಾಯಿತು.  ಆತ ಕಿಲಾ ರಾಯ್ ಪಿಥೋರಾವನ್ನು ತನ್ನ ಭಾರತ ಸಾಮ್ರಾಜ್ಯದ ರಾಜಧಾನಿಯನ್ನಾಗಿ ಆಯ್ಕೆ ಮಾಡಿ ತನ್ನ ನಂಬಿಕಸ್ಥ ಗುಲಾಮ ಮತ್ತು ನೆಚ್ಚಿನ ಅಳಿಯನಾದ ಕುತ್ಬುದ್ದೀನ್ ಐಬಕ್‌ಗೆ ಅದರ ಜವಾಬ್ಧಾರಿಯನ್ನು ವಹಿಸುವುದರೊಂದಿಗೆ ದೆಹಲಿ ಒಂದಾದ ಮೇಲೊಂದರಂತೆ ಬೃಹತ್ ಸಾಮ್ರಾಜ್ಯಗಳ ರಾಜಧಾನಿಯಾಗುವ ಯುಗ ಆರಂಭವಾಯಿತು.
            ೧೦೫೦ರಿಂದ ಮುಂದಿನ ಆರುನೂರು ವರ್ಷಗಳಲ್ಲಿ ದೆಹಲಿಯನ್ನಾಳಿದ ವಿವಿಧ ಅರಸರು ಏಳು ನಗರಗಳನ್ನು ಕಟ್ಟಿದರು.  ಅವು ಕಿಲಾ ರಾಯ್ ಪಿಥೋರಾ (೧೦೫೦), ಸಿರಿ (೧೩೦೩), ತುಘಲಖಾಬಾದ್ (೧೩೨೧), ಜಹಾಂಪನಾ (೧೩೩೪), ಫಿರೋಜಾಬಾದ್ (೧೩೫೪), ದಿನ್ ಪನಾ ಅಥವಾ ಶೇರ್‌ಶಹಾಬಾದ್ (೧೫೪೦), ಶಹಜಹಾನಾಬಾದ್ (೧೬೪೮).  ನಂತರ ೧೯೧೧ರಿಂದೀಚೆಗೆ ಬ್ರಿಟಿಷರು ಕಟ್ಟಿದ ನವದೆಹಲಿ ದೆಹಲಿಯಲ್ಲಿ ನಿರ್ಮಾಣವಾದ ಎಂಟನೆಯ ನಗರವಾಗಿ ಇಂದು ವಿಶ್ವದ ಸುಂದರ ರಾಜಧಾನಿಗಳಲ್ಲೊಂದಾಗಿ ಕಣ್ಮನ ಸೆಳೆಯುತ್ತಿದೆ.  (ಇವೆಲ್ಲವುಗಳ ಹಿಂದೆ ಪಾಂಡವರ ಇಂದ್ರಪ್ರಸ್ಥವೂ ಸೇರಿದಂತೆ ಆರು ನಗರಗಳಿದ್ದವು, ಅಂದರೆ ದೆಹಲಿಯಲ್ಲಿ ಇದುವರೆಗೆ ಹದಿನಾಲ್ಕು ನಗರಗಳ ನಿರ್ಮಾಣವಾಗಿದೆ ಎಂದು ಹೇಳುತ್ತಾರೆ.  ಇದು ಉತ್ಪ್ರೇಕ್ಷೆ ಇರಬಹುದು.  ಭಾರತೀಯ ಪುರಾಣಗಳು ಮತ್ತು ಸಂಸ್ಕೃತಿಯಲ್ಲಿ ಸಂಖ್ಯೆ ಹದಿನಾಲ್ಕು ಪಡೆದುಕೊಂಡಿರುವ ಮಹತ್ವದಿಂದಾಗಿ ಆ ಸಂಖ್ಯೆಯನ್ನು ದೆಹಲಿಗೂ ಅನ್ವಯಿಸುವ ಉತ್ಸಾಹೀ ಪ್ರಯತ್ನ ಇದು ಎಂದು ನನಗನಿಸುತ್ತದೆ.)
            ೧೦೫೦ರಿಂದೀಚಿಗಿನ ನಗರಗಳ ಅದ್ಭುತ ವಾಸ್ತುಶಿಲ್ಪದ ಕುರುಹುಗಳಲ್ಲಿ ಹಲವು ಇಂದಿಗೂ ದೆಹಲಿಯ ಹೆಗ್ಗುರುತುಗಳಾಗಿ ನಿಂತಿವೆ.  ವಯೊವೃಧ್ದ ಲೇಖಕ ಖುಶ್ವಂತ್ ಸಿಂಗ್ ಪ್ರಕಾರ ಜನ ದೆಹಲಿಯನ್ನು ನೋಡಲು ಬರುವುದು ಮೂರು ಹಳೆಯ ಅದ್ಭುತಗಳನ್ನು.  ಮೊದಲನೆಯದು ಕುತುಬ್ ಮಿನಾರ್, ಎರಡನೆಯದು ಲಾಲ್ ಕಿಲಾ, ಮೂರನೆಯದು ಸ್ವತಃ ಖುಶ್ವಂತ್ ಸಿಂಗ್!  ಈ ಮೂರರ ಜತೆ ಹುಮಾಯೂನ್ ಸಮಾಧಿ, ಜಾಮಾ ಮಸೀದಿ, ಜಂತರ್ ಮಂತರ್, ಜತೆಗೆ ಇತ್ತೀಚಿಗಿನ ಬಿರ್ಲಾ ಮಂದಿರ್, ಬಹಾಯಿಗಳ ಲೋಟಸ್ ಟೆಂಪಲ್, ವಿಶ್ವದ ಅತಿ ದೊಡ್ಡ ದೇವಾಲಯ ಅಕ್ಷರ್ ಧಾಮ್... ದೆಹಲಿಯಲ್ಲಿ ಏನುಂಟು ಏನಿಲ್ಲ?  ಇವುಗಳ ಜತೆಗೇ ಕುಸಿದು ಬಿದ್ದಿರುವ, ಅರೆಬರೆ ನಿಂತಿರುವ ಅದೆಷ್ಟೋ ಕಟ್ಟಡಗಳು ದೆಹಲಿಯ ಗತವೈಭವವಕ್ಕೆ, ಈ ಶ್ರೀಮಂತ ನಗರದ ಮೇಲಿನ ಪೈಶಾಚಿಕ ದಾಳಿಗಳಿಗೆ, ಈ ದುರ್ದೈವೀ ನಗರ ಅನುಭವಿಸಿದ ದುರಂತಗಳಿಗೆ ಸಾಕ್ಷಿಯಾಗಿ ನಿಂತಿವೆ.
ಈ ನಗರದ ಮೇಲೆ ಅದೇಕೆ ಇಷ್ಟೋಂದು ದಾಳಿಗಳಾದವು?  ಉತ್ತರಕ್ಕೆ ಈ ನಗರದ ಭೌಗೋಳಿಕ ನೆಲೆ ಕಾರಣ.  ಮೂರು ಕಡೆ ಸಾಗರ, ಉತ್ತರ ಮತ್ತು ಪೂರ್ವದಲ್ಲಿ ಹಿಮಾಲಯ, ಪಶ್ಚಿಮೋತ್ತರದಲ್ಲಿ ಹಿಂದೂಕುಶ್ ಪರ್ವತಗಳಿಂದ ಸುತ್ತುವರೆದಿರುವ ಭರತವರ್ಷಕ್ಕೆ ಅರಬ್ಬರು ಮತ್ತು ಯೂರೋಪಿಯನ್ ಸಾಮ್ರಾಜ್ಯಶಾಹಿಗಳ ಹೊರತಾಗಿ ಇತಿಹಾಸದ ಆದಿಕಾಲದಿಂದಲೂ ವಲಸೆಗಾರರಾಗಲೀ,  ಧಾಳಿಕಾರರಾಗಲೀ ಪ್ರವೇಶಿಸಿದ್ದು ವಾಯುವ್ಯದ ಖೈಬರ್ ಕಣಿವೆಯ ಮೂಲಕ.  ಯಶಸ್ವಿಯಾಗಿ ಖೈಬರ್ ಕಣಿವೆಯನ್ನು ಪ್ರವೇಶಿಸಿದ ಸೇನೆಗೆ ಯಾವುದೇ ನೈಸರ್ಗಿಕ ತಡೆಗಳಿಲ್ಲದ ಪಂಜಾಬಿನ ಬಯಲು ಪ್ರದೇಶವನ್ನು ವಶಪಡಿಸಿಕೊಳ್ಳುವುದು ಸುಲಭ.  ಪಂಜಾಬ್ ಕೈಗೆ ಸಿಕ್ಕಿದ ಮೇಲೆ ಸಹಜವಾಗಿಯೇ ಎಲ್ಲರ ಕಣ್ಣು ಬೀಳುವುದು ವಿಶಾಲ ಗಂಗಾಬಯಲಿಗೆ ಹೆಬ್ಬಾಲಿನಂತಿರುವ ದೆಹಲಿಯ ಮೇಲೆ.  ಇದೇ ದೆಹಲಿಯ ದುರದೃಷ್ಟಕ್ಕೆ ಮೂಲ.
ಖೈಬರ್ ಕಣಿವೆಯನ್ನು ವಶಪಡಿಸಿಕೊಂಡವರು ಅನತೀ ಕಾಲದಲ್ಲೇ ಇಡೀ ಪಂಜಾಬನ್ನು ವಶಕ್ಕೆ ತೆಗೆದುಕೊಳ್ಳುವುದು, ನಂತರ ನೇರವಾಗಿ ದೆಹಲಿಯತ್ತ ಮುನ್ನುಗ್ಗಿ ಬರುವುದು, ಗಂಗಾ ಬಯಲಿಗೆ ನುಗ್ಗಲು ದೆಹಲಿಯನ್ನು ನೆಲೆಯನ್ನಾಗಿ ಬಳಸಿಕೊಳ್ಳುವುದು ಇತಿಹಾಸದ ಉದ್ದಕ್ಕೂ ನಡೆದುಕೊಂಡು ಬಂದಿದೆ.  ಹೀಗಾಗಿಯೇ ೧೯೬೫ರ ಯುದ್ದಕ್ಕೆ ಒಂದೆರಡು ದಿನಗಳ ಮುಂಚೆ ಪಾಕಿಸ್ತಾನೀ ನಾಯಕ ಜನರಲ್ ಅಯೂಬ್ ಖಾನ್ "ಇತಿಹಾಸ ನಮ್ಮ ಕಡೆ ಇದೆ.  ಪಂಜಾಬ್ (ಲಾಹೋರ್) ಯಾರ ಕೈಯಲ್ಲಿದೆಯೋ ಅವರು ಅನತಿ ಕಾಲದಲ್ಲೇ ದೆಹಲಿಯ ಅಧಿನಾಯಕರಾಗುತ್ತಾರೆ.  ಈಗ ಲಾಹೋರ್ ನಮ್ಮ ಕೈಯಲ್ಲಿದ.  ಇನ್ನು ಹದಿನೈದು ದಿನಗಳಲ್ಲಿ ನಾವು ದೆಹಲಿಯಲ್ಲಿರುತ್ತೇವೆ, ಕೆಂಪುಕೋಟೆಯ ಮೇಲೆ ಪಾಕಿಸ್ತಾನೀ ಧ್ವಜವನ್ನು ಹಾರಿಸುತ್ತೇವೆ" ಎಂದು ಘೋಷಿಸಿದ್ದು.  ಇತಿಹಾಸ ಅವರ ಕಡೆಗಿದ್ದರೂ ವರ್ತಮಾನ ಅವರ ಕಡೆಗಿರಲಿಲ್ಲ.  ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿಯವರ ಬುದ್ಧಿವಂತಿಕೆಯಿಂದಾಗಿ ಅಯೂಬ್ ಖಾನರ ಆಸೆ ನೆರವೇರಲಿಲ್ಲ ಮತ್ತು ಇತಿಹಾಸದಲ್ಲಿ ಮೊತ್ತಮೊದಲಿಗೆ ಲಾಹೋರ್‌ನ ಅಧಿಪತಿಗಳು ದೆಹಲಿಯನ್ನು ಪದಾಕ್ರಾಂತಗೊಳಿಸಿಕೊಳ್ಳುವುದರಲ್ಲಿ ವಿಫಲರಾದರು.  ಪರಿಣಾಮವಾಗಿ ಪುಟ್ಟಕ್ಕ ದೆಹಲಿಯಲ್ಲಿ ನೆಮ್ಮದಿಯಾಗಿ ನೆಲೆನಿಂತು ನನ್ನನ್ನೂ ಇಲ್ಲಿಗೆ ಕರೆಸಿಕೊಳ್ಳುವಂತಾಯಿತು, ನಾನು ಈ ಮಹಾನ್ ನಗರವನ್ನು ನನ್ನೊಳಗೆ ತುಂಬಿಕೊಳ್ಳುವಂತಾಯಿತು.
ಪುಟ್ಟಕ್ಕನ ಮಾತಿನಲ್ಲಿ ಒಬ್ಬ ಮಾಸೂಮ್ ಲಡ್ಕಾ ಆಗಿ ದೆಹಲಿಗೆ ಕಾಲಿಟ್ಟ ನಾನು ಈ ನಗರದಲ್ಲಿ ಏನೆಲ್ಲಾ ಕಂಡೆ!  ಎಷ್ಟೆಲ್ಲಾ ಕಲಿತೆ?  ಬೇಸಗೆಯಲ್ಲಿ ಬನಿಯನ್ ಅನ್ನೂ ಕಿತ್ತೆಸೆದು, ಛಳಿಗಾಲದಲ್ಲಿ ಅಕ್ಕ ಹೆಣೆದ ಸ್ವೆಟರನ್ನು ಅಹಹ ಅಹಹ ಎನ್ನುತ್ತಾ ಮೈಗೇರಿಸಿಕೊಂಡು, ಗಳಿಗೆಗೊಮ್ಮೆ ಗರಂ ಚಾಯ್ ಗುಟುಕರಿಸುತ್ತಾ, ರಜಾಯ್‌ನೊಳಗೆ ಹುದುಗುವ ಮಜವನ್ನು ಅನುಭವಿಸುತ್ತಾ... ತ್ತಾ... ತ್ತಾ... ನಾನು ನಾನಾಗಿ ಬೆಳೆದದ್ದು ದೆಹಲಿಯಲ್ಲಿ, ಈ ನಗರದ ಲೈಬ್ರರಿಗಳಲ್ಲಿ, ಅರ್ಟ್ ಗ್ಯಾಲರಿಗಳಲ್ಲಿ.
ಬಂದ ಮಾರನೇ ದಿನಕ್ಕೆ ಸಾಮಾನು ತರಲು ಅಕ್ಕನ ಜತೆ ಹೊರಗೆ ಹೋದಾಗ ಎಲ್ಲೆಲ್ಲೂ ಕಂಡದ್ದು ಸಲ್ವಾರ್ ಕಮೀಜ್ ತೊಟ್ಟ ಹುಡುಗಿಯರು, ಹೆಂಗಸರು.  ಸೀರೆಗಳು ಅಲ್ಲೊಂದು ಇಲ್ಲೊಂದು.  ಕರ್ನಾಟಕದಲ್ಲಿ ಕಾಣುತ್ತಿದ್ದ ನೋಟಕ್ಕೆ ತದ್ವಿರುದ್ಧ.  ಇಲ್ಲಿ ಮುಸ್ಲಿಮರು ಜಾಸ್ತಿ ಅಲ್ಲವಾ? ಅಂದೆ ಮೆಲ್ಲಗೆ.  ಹಾಗೇನಿಲ್ಲ, ಈ ಕಡೆಯ ಹೆಂಗಸರ ಉಡುಪೇ ಇದು.  ಈ ಉಡುಪಿಗೆ ಧರ್ಮದ ಸೋಂಕಿಲ್ಲ ಎಂದು ಹೇಳಿ ಅಕ್ಕ ಭಾರತದ ಒಂದು ಚಂದದ ಮುಖವನ್ನು ನನಗೆ ತೋರಿಸಿದಳು.  ಅದೇ ದಿನಗಳಲ್ಲಿ ನೆರೆಯ ಪಾಕಿಸ್ತಾನದಲ್ಲಿ ಜಿಯಾ ಉಲ್ ಹಕ್ ಸೀರೆಯನ್ನು ಇಸ್ಲಾಮಿಗೆ ವಿರುದ್ಧ ಎಂದು ಘೋಷಿಸಿ ಬಹಿಷ್ಕರಿಸಿದ್ದರ ಹಿನ್ನೆಲೆಯಲ್ಲಿ ಅಕ್ಕನ ಮಾತುಗಳು ವಿಶೇಷ ಅರ್ಥ ಪಡೆದುಕೊಂಡವು.  ಅಂದು ನಾನು ದೆಹಲಿಯಲ್ಲಿ ಎಲ್ಲೆಲ್ಲೂ ಕಂಡ 'ಜಾತ್ಯಾತೀತ' ಉಡುಪು ಈಗ ಭಾರತದ ಉದ್ದಗಲಕ್ಕೂ ಹರಡಿಹೋಗಿದೆ.
ಕೆಲವೇ ದಿನಗಳಲ್ಲಿ ಗೆಳೆಯ ರಾಜೇಶ್ವರನ ತಂದೆ ಮತ್ತೊಂದು ಮುಖವನ್ನು ನನಗೆ ತೋರಿಸಿದರು.  ದೆಹಲಿಗೆ ಅನತೀ ದೂರದ ಹರಿಯಾನಾದ ಪಲ್‌ವಲ್ ಪಟ್ಟಣದಲ್ಲಿನ ತನ್ನ ಮನೆಗೆ ನನ್ನನ್ನಾತ ಕರೆದೊಯ್ದ.  ಜವಾಹರ್ ನಗರ್ ಎಂಬ ಹೆಸರಿನ ಆ ವಿಸ್ತರಣದ ಎಲ್ಲ ನಾಲ್ಕು ಸಾವಿರ ಕುಟುಂಬಗಳೂ ನಲವತ್ತೇಳರಲ್ಲಿ ಎಲ್ಲವನ್ನೂ ಕಳೆದುಕೊಂಡು ಪಾಕಿಸ್ತಾನದ ಮುಲ್ತಾನ್ ಪಟ್ಟಣದಿಂದ ನಿರಾಶ್ರಿತರಾಗಿ ಓಡಿಬಂದಂಥವು.  ರಾಜೇಶ್ವರನ ತಂದೆ ಅಲ್ಲಿನ ಆರ್‌ಎಸ್‌ಎಸ್ ಶಾಖೆಯ ಕಾರ್ಯದರ್ಶಿ.  ದೇಶವಿಭಜನೆಯ ದುರಂತವನ್ನು ನೆನಪಿಸಿಕೊಳ್ಳುತ್ತಾ "ಮತ್ತೆ ಅವಕಾಶ ಸಿಕ್ಕಿದರೆ ಕಳೆಹೋದದ್ದೆಲ್ಲವನ್ನೂ ಮರಳಿಪಡೆಯುವ ಬಯಕೆ ನಮಗೆಲ್ಲರಿಗೂ ಇದೆ" ಎಂದವರು ಹೇಳಿದರು.  ಕಾಲು ಶತಮಾನದ ಹಿಂದೆ ಜನವರಿಯ ಒಂದು ಛಳಿರಾತ್ರಿಯಲ್ಲಿ ಅವರಿಂದ ಕೇಳಿದ ಆ ಮಾತುಗಳು ನನ್ನ ಕಿವಿಗಳಲ್ಲಿ ಇನ್ನೂ ರಿಂಗಣಿಸುತ್ತಿವೆ.  ನನ್ನಲ್ಲಿ ನೂರೊಂದು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ.  ತೀನ್ ಮೂರ್ತಿ ಲೈಬ್ರರಿಯಲ್ಲಿ ಬೈಂಡ್ ಮಾಡಿಸಿಟ್ಟಿರುವ ಉದ್ದೋಉದ್ದದ ಹಳೆಯ `ನಮ್ಮ' ಹಾಗೂ `ಅವರ' ವರ್ತಮಾನ ಪತ್ರಿಕೆಗಳಲ್ಲಿ ೬೫ರ, ೭೧ರ ಯುದ್ಧಗಳ ದಿನಗಳ ಸಂಚಿಕೆಗಳನ್ನು ಹುಡುಕಿ ತೆಗೆದು ಮೇಜಿನ ಮೇಲೆ ಅಗಲಕ್ಕೆ ಹರಡಿ ನಡುಬಾಗಿಸಿ ನಿಂತು ತಿಂಗಳುಗಟ್ಟಲೆ ಓದಿ, ಜೆಎನ್‌ಯು, ICWA ಮತ್ತು IDSA ಲೈಬ್ರರಿಗಳಲ್ಲಿ ಸಿಕ್ಕಿದ ಪಾಕಿಸ್ತಾನೀ ಪುಸ್ತಕಗಳನ್ನು ವರ್ಷಗಟ್ಟಲೆ ಗಮನವಿಟ್ಟು ಓದಿ ನನ್ನ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಹೆಣಗುತ್ತಿದ್ದೇನೆ.  ೧೯೪೭ನ್ನು ಸ್ವಾತಂತ್ರದ ವರ್ಷ ಎನ್ನುವುದಕ್ಕಿಂತಲೂ "ದೇಶವಿಭಜನೆಯ ವರ್ಷ" ಎಂದು ಕರೆದು ಅದರಾಚೆಯ ಕಾಲವನ್ನು "ವಿಭಜನಾಪೂರ್ವ ಕಾಲ", ಅದರೀಚೆಯ ಕಾಲವನ್ನು "ವಿಭಜನೋತ್ತರ ಕಾಲ" ಎಂದು ಪರಿಗಣಿಸಿದರೆ ದಕ್ಷಿಣ ಏಶಿಯಾವನ್ನು ಈ ದಿನಗಳಲ್ಲಿ ಕಾಡುತ್ತಿರುವ ಅನೇಕ ಪ್ರಶ್ನೆಗಳಿಗೆ ಉತ್ತರಗಳು ಸಿಗಬಹುದೇನೋ ಅನಿಸುತ್ತದೆ.
ದೆಹಲಿಶೋಧದ ಹುಚ್ಚು ಹತ್ತಿ ಮೊತ್ತಮೊದಲು ಕುತುಬ್ ಮಿನಾರ್ ಸುತ್ತಲೂ ಹೆಜ್ಜೆ ಸರಿಸಿದಾಗ ಕಿವಿಗೆ ಕೇಳಿದ್ದು ಮಹಮದ್ ಘೋರಿಯ ಸೇನೆಯ ಕುದುರೆಗಳ ಖುರಪುಟಗಳು, ರಜಿಯಾ ಸುಲ್ತಾನಾಳಾ ಸಂಪ್ರದಾಯವಿರೋಧೀ ರಣಕಹಳೆ, ದಖನ್ ಅನ್ನು ಪದಾಕ್ರಾಂತಗೊಳಿಸಿಕೊಂಡ ಅಲ್ಲಾವುದ್ದೀನ್ ಖಾಲ್ಜಿಯ ಹೆಮ್ಮೆಯ ಠೇಂಕಾರ.  ಕೆಂಪುಕೋಟೆಯ ದಿವಾನ್ ಎ ಆಮ್‌ನಲ್ಲಿ ಕೇಳಿಬಂದದ್ದು ಅಕ್ಬರನ ದಿನ್ ಎ ಇಲಾಹೀ ಧರ್ಮೋಪದೇಶದ ಹಿಂದೆಯೇ ಅನಾರ್ಕಲಿಯ ಕರುಳುಹಿಂಡುವ ರೋಧನ, ದಿವಾನ್ ಎ ಖಾಸ್‌ನಲ್ಲಿ ಮುಮ್ತಾಜಳ ಮೆಲುಮಾತು, ಜಹನಾರಾಳಾ ಬರಡು ಬದುಕಿನ ಕಥೆ ವ್ಯಥೆ...  ದೆಹಲಿ ಬಲಿಷ್ಟರ ಕೇಕೆಗಳ, ಬಲಿಗಳ ಆಕ್ರಂದನಗಳ, ಅವೆರಡೂ ಅಲ್ಲದವರ ಗೊಣಗೊಣಗಳ ನಗರ...
ಕೆಲವು ಪ್ರಶ್ನೆಗಳಿಗೆ ಉತ್ತರಗಳು ದೆಹಲಿಯ ಮಾರುಕಟ್ಟೆಗಳಲ್ಲಿ ಸಿಕ್ಕಿವೆ.  ಬಟ್ಟೆಗಳ ಸಾಗರ ಸರೋಜಿನಿ ನಗರ್ ಮಾರ್ಕೆಟ್ ಮತ್ತು ಶಂಕರ್ ಮಾರ್ಕೆಟ್, ಸೂರ್ಯನ ಕೆಳಗಿಗಿರುವ ಎಲ್ಲವೂ ಸಿಗುವ ಚಾಂದನೀ ಚೌಕ್, ಕನಾಟ್ ಪ್ಲೇಸ್, ಜನಪಥ್, ಲಜ್‌ಪತ್ ನಗರ್ ಮಾರ್ಕೆಟ್- ಎಲ್ಲೆಲ್ಲಿಯೂ ಕಾಣಸಿಗುವ ಮುಗುಳುನಗೆಯ ಸಿಂಧಿ, ಪಂಜಾಬೀ ವ್ಯಾಪಾರಿಗಳು.  ಇದ್ದುದೆಲ್ಲವನ್ನೂ, ಕುಟುಂಬದಲ್ಲಿ ಕನಿಷ್ಟ ಒಂದು ಆತ್ಮೀಯ ಜೀವವನ್ನಾದರೂ ಕಳೆದುಕೊಂಡು ನಿರಾಶ್ರಿತರಾಗಿ ದೆಹಲಿಗೆ ಓಡಿಬಂದು ಎಲ್ಲರನ್ನೂ ಎದೆಗವಚಿಕೊಳ್ಳುವ ಈ ಮಹಾ(ನ್) ನಗರದಲ್ಲಿ ಫೀನಿಕ್ಸ್‌ನಂತೆ ಮತ್ತೆ ಬದುಕು ಕಟ್ಟಿಕೊಂಡು ಎದೆಯೆತ್ತಿ ನಿಂತಿರುವ ಈ ಜನರ ಸ್ನೇಹಪರ ನಡೆನುಡಿ, ತಾಳ್ಮೆ ಅಸಾದೃಶ.  ಡಜನ್‌ಗಟ್ಟಲೆ ಸಾಮಾನು ಹೊರತೆಗೆಸಿ ಏನೂ ಇಷ್ಟವಾಗದೇ ಹಿಂದೆ ತಿರುಗಿದರೆ ಇನಿತೂ ಬೇಸರಗೊಳ್ಳದೇ ನಿಮಗಿಷ್ಟವಾದದ್ದು ಬೇರೆಲ್ಲೂ ಸಿಗದಿದ್ದರೆ ಇಲ್ಲಿಗೇ ಬನ್ನಿ, ನಿಮಗೆಂದೇ ತೆಗೆದಿಟ್ಟಿರುತ್ತೇನೆ ಎನ್ನುವ ಬಗೆ.  ಇಂತಹ ತಾಳ್ಮೆಯನ್ನು ಆ ಕ್ರೂರ ಬದುಕೇ ಕಲಿಸಿರಬೇಕು.  ದೆಹಲಿ ನೊಂದ, ನೋವನ್ನು ಅರ್ಥ ಮಾಡಿಕೊಂಡು ಸಂತೈಸುವ ನಗರ.
ಈ ಪ್ರಶ್ನೆಗಳ ಸಹವಾಸವೇ ಸಾಕು ಎಂದುಕೊಂಡು ಲಗಾಮಿಲ್ಲದ ಕುದುರೆಯಂತೆ ಈ ನಗರದ ಬೀದಿಬೀದಿಗಳಲ್ಲಿ ಅಲೆದಾಗ...  ಮಾಂಸ ಮೊಟ್ಟೆ ಇರಲಿ, ಹಾಲಿನ ವಾಸನೆಗೂ ಮುಖ ಕಿವಿಚುವ ಅಕ್ಕನ ಜತೆ ಮುನಿರ್ಕಾದ ಉಡುಪಿ ಹೋಟೆಲ್, ಯೂಸುಫ್ ಸರಾಯ್‌ನ ಕರ್ನಾಟಕ ರೆಸ್ಟೋರೆಂಟ್, ಮೋತಿಬಾಗ್‌ನ ಕರ್ನಾಟಕ ಸಂಘದ ಹೋಟೆಲ್, ಕರೋಲ್ ಬಾಗ್, ಕನಾಟ್ ಪ್ಲೇಸ್‌ಗಳ ಮದ್ರಾಸ್ ಹೋಟೆಲ್‌ಗಳಲ್ಲಿ ಅಪ್ಪಟ ಸಸ್ಯಾಹಾರಿ ಮೇವು ಮೇಯ್ದು ಸಾಕೆನಿಸಿ ಕೈಬೀಸಿ ಕರೆದ ಗೆಳೆಯರ ಜತೆಗೂಡಿ ಯೂಸುಫ್ ಸರಾಯ್‌ನ ಸೋನಾ, ಕನಾಟ್ ಪ್ಲೇಸ್‌ನ ಹ್ಯಾರುವೊ (ಈವು ಮಾಯವಾಗಿವೆ), ಕರೀಮ್ಸ್ ಮುಂತಾದೆಡೆ ಬಿರಿಯಾನಿ, ತಂದೂರಿ ಚಿಕನ್‌ಗೆ ಕೈ ಹಾಕಿದೆ.  ಜತೆಗೇ ಎಲ್ಲೆಲ್ಲೂ ಸಿಗುವ ಧಾಬಾಗಳಲ್ಲಿ ಬ್ರೆಡ್ ಪಕೋಡ, ಸಮೋಸಾ, ಮಟರಿ ತಿಂದು ಚಾಯ್ ಕುಡಿಯುವುದರಲ್ಲಿನ ಮಜಾ...  ಪ್ರಪಂಚದ ಅತ್ಯಂತ ರುಚಿಯಾದ ಊಟ ಲಾಹೋರ್ ನಗರದ ರಸ್ತೆ ಬದಿಯಲ್ಲಿ ಸಿಗುತ್ತದೆ ಎಂದು ಇಮ್ರಾನ್ ಖಾನ್ ಹೇಳುತ್ತಾನೆ.  ಅದು ದೆಹಲಿಯಲ್ಲೂ ಸಿಗುತ್ತದೆ ಎಂದು ನಾನು ಹೇಳುತ್ತೇನೆ.  (ಕರೀಮ್ಸ್ ಬಂದದ್ದು ಲಾಹೋರ್‌ನಿಂದ ಎಂದು ನೆನಪಿಸಿಕೊಳ್ಳುತ್ತೇನೆ.)  ಏನೇ ಆಗಲಿ ದೆಹಲಿ ನಾಲಿಗೆ ಚಪಲದವರ ನಗರ.
ಕಮಾನಿ ಆಡಿಟೋರಿಯಂನಲ್ಲಿ ಚಂದ್ರಶೇಖರ ಕಂಬಾರರ ಜೋಕುಮಾರ ಸ್ವಾಮಿಯಿಂದ ಹಿಡಿದು, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಕನ್ನಡತಿ ಭಾಗೀರಥಿ ಬಾಯಿ ನಾಯಕಿಯಾಗಿದ್ದ ಶೇಕ್ಸ್‌ಪಿಯರನ ಟ್ವೆಲ್ಫ್ತ್ ನೈಟ್ನ ಹಿಂದಿ ರೂಪಾಂತರದವರೆಗೆ ನೂರೊಂದು ಹಿಂದಿ, ಕನ್ನಡ, ಇಂಗ್ಲಿಷ್ ನಾಟಕಗಳನ್ನು ನೋಡಿ ಆನಂದಿಸಿದ್ದು ಇಲ್ಲಿನ ಮಾವಲಂಕಾರ್ ಹಾಲ್, AIFACS ಗ್ಯಾಲರಿ ಮುಂತಾದ ಹಲವು ಹತ್ತು ರಂಗಮಂದಿರಗಳಲ್ಲಿ.  ದೆಹಲಿ ನಾಟಕ ಪ್ರಿಯರ ನಗರ.
ಯಾತಕ್ಕೂ ಮನಸ್ಸಿಲ್ಲದೇ ಸುಮ್ಮನೇ ಮನೆಯಲ್ಲೇ ಕುಳಿತಾಗಲೂ ದೆಹಲಿ ಚೇತೋಹಾರಿ.  ಅಂತಹ ಒಂದು ಮಧ್ಯಾಹ್ನ ಅಕ್ಕನ ಹೊಸ ಗೆಳತಿಯೊಬ್ಬಳು ಮನೆಗೆ ಬಂದು ಮಾತಿನ ಮಧ್ಯೆ ಕೇಳಿದಳು: "ನನ್ನನ್ನ ಏನಂತ ಕರೀತೀಯ?"  ಅಕ್ಕನ ಗೆಳತಿಯರೆಲ್ಲಾ ನನಗೆ ಅಕ್ಕಂದಿರೇ.  ಈ ಹೊಸಬಿಗೆ ಯಾವ ವಿನಾಯಿತಿಯೂ ಇಲ್ಲ.  ಈಕೆಯೂ ನನಗೆ ದೀದಿಯೇ.  ಅದೇ ಹೇಳಿದೆ.  "ಇಲ್ಲ", ಆಕೆ ತಲೆ ಅಲುಗಿಸಿದಳು: "ನಾವು ಗೆಳೆಯರು.  ನಾನು ನಿನ್ನ ಗೆಳತಿ, ದೀದಿ ಅಲ್ಲ..."
ಸ್ನೇಹಪರ ದೆಹಲಿ!
ಇಂಥಾ ದೆಹಲಿ ಸುಮಾರು ಒಂದೂವರೆ ಶತಮಾನಗಳವರೆಗೆ ಬ್ರಿಟಿಷ್ ಭಾರತ ಸಾಮ್ರಾಜ್ಯದ ರಾಜಧಾನಿಯಾಗಿ ಮೆರೆದಿದ್ದ ಕಲ್ಕತ್ತಾವನ್ನು ಹಿಂದಕ್ಕೆ ಹಾಕಿ ದೇಶದ ರಾಜಧಾನಿಯಾಗಿ ಘೋಷಿಸಲ್ಪಟ್ಟು ಇಂದಿಗೆ, ಅಂದರೆ ಡಿಸೆಂಬರ್ ೧೨, ೨೦೧೧ಕ್ಕೆ, ಸರಿಯಾಗಿ ನೂರುವರ್ಷ.

No comments:

Post a Comment