ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Sunday, August 21, 2011

ಅಹ್! ಪಾಂಡಿ ಷೆರಿ!



ಬದುಕಿನ ಒಂದು ತಿರುವಿನಲ್ಲಿ ಇದ್ದಕ್ಕಿದ್ದಂತೆ ಎದುರಾಗಿ ನನ್ನನ್ನು ಬೆಚ್ಚಿಸಿದ ಊರು ಪಾಂಡಿಚೆರಿ.  ಏನೇನೋ ಆಗಬೇಕೆಂದುಕೊಂಡು ದಪ್ಪದಪ್ಪ ಪುಸ್ತಕಗಳನ್ನು ಓದಿ, ಭಾರಿಭಾರಿ ಪರೀಕ್ಷೆಗಳನ್ನು `ಪ್ಯಾಸು' ಮಾಡಿ, ಇಂಟರ್‌ವ್ಯೂ ಕಮಿಟಿಯಲ್ಲಿದ್ದವರನ್ನು ದಿಕ್ಕೆಡಿಸಿ, ಕೊನೆಗೆ ಮೆಡಿಕಲ್ ಟೆಸ್ಟ್‌ಗಳಲ್ಲಿ ಅನ್‌ಫಿಟ್ ಎಂದು ಷರಾ ಬರೆಸಿಕೊಂಡು ದಿಕ್ಕೆಟ್ಟು ಕೂತಿದ್ದಾಗ ನಿನಗೆ ಅಂತ ಯಾವ ಮೆಡಿಕಲ್ ಟೆಸ್ಟನ್ನೂ ನಾವು ಮಾಡುವುದಿಲ್ಲ, ನಿನಗೆಲ್ಲವೂ ಸರಿಯಾಗಿದೆ ಅಂತ ನೀನೇ ಯಾರಿಂದಲಾದರೂ ಸರ್ಟಿಫಿಕೇಟ್ ಮಾಡಿಸಿಕೊಂಡು ಆದಷ್ಟು ಬೇಗ ಬಂದುಬಿಡು ಮಾರಾಯಾ ಎಂದು ಪಾಂಡಿಚೆರಿ ಯೂನಿವರ್ಸಿಟಿ ಕರೆದಾಗ ನಂಬಲೂ ಆಗದೆ ನಂಬದಿರಲೂ ಆಗದೇ ಏನಾದರಾಗಲೀ ಎಂದುಕೊಂಡು ಒಂದು ಪುಟ್ಟ ಸೂಟ್‌ಕೇಸ್ ಹಿಡಿದು ಪಾಂಡಿಚೆರಿಗೆ ಹೊರಟುಬಿಟ್ಟೆ.
ಕೆಲವೇ ತಿಂಗಳ ಹಿಂದೆ ಕತ್ತಲಲ್ಲಿದ್ದಾಗ ಗೆಳೆಯ ಸಖಾರಾಮ ಸೋಮಯಾಜಿ ಒಂದು ಕೈ ನೋಡೋಣ, ಅದೃಷ್ಟ ಹೇಗಿದೆಯೋ ಅಂತ ಹೇಳಿ ಕರ್ನಾಟಕದ ಒಂದು ವಿಶ್ವವಿದ್ಯಾಲಯದಲ್ಲಿ ಟೆಂಪೊರರಿ ಲೆಕ್ಚರರ್ ಕೆಲಸಕ್ಕೆ ಅರ್ಜಿ ಹಾಕಿಸಿ, ತಾನೂ ಹಾಕಿ ಅಲ್ಲಿಗೆ ಕರೆದುಕೊಂಡು ಹೋಗಿದ್ದರು.  ಇಂಟರ್‌ವ್ಯೂ ಆದ ಹತ್ತು ನಿಮಿಷದಲ್ಲಿ ಅಲ್ಲಿ ಭೇಟಿಯಾದ ಹಳೆಯ ಗೆಳೆಯರೊಬ್ಬರು ಇದ್ಯಾತಕ್ಕೆ ಬಂದೆ?  ಅದೂ ಆಷ್ಟು ದೂರದಿಂದ!  ಇದು ಈಗಾಗಲೇ ಬೇರೊಬ್ಬರಿಗೆ ಮೀಸಲಾಗಿದೆ,  ಈ ಇಂಟರ್‌ವ್ಯೂ ಎಲ್ಲ ಬರೀ ನಾಟಕ ಎಂದು ಹೇಳಿದ ನೆನಪು ಹಸಿಯಾಗಿದ್ದಾಗಲೇ ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ರಾಯಭಾರಿಯಾಗಿದ್ದ, ಅಂತರರಾಷ್ಟ್ರೀಯ ಸಂಬಂಧಗಳ ಮೇಧಾವಿಯೊಬ್ಬರು ನೀವು ನಮಗೆ ಬೇಕೇಬೇಕು ಎಂದು ಹೇಳಿ ನನ್ನನ್ನು ಆಯ್ಕೆ ಮಾಡಿದಾಗ...  ಇಂಟರ್‌ವ್ಯೂ ಆದ ಒಂದೇ ವಾರದಲ್ಲಿ ಅಪಾಯಿಂಟ್‌ಮೆಂಟ್ ಆರ್ಡರನ್ನು ನಿಮ್ಮ ದೆಹಲಿಯ ವಿಳಾಸಕ್ಕೆ ಕಳುಹಿಸಿದ್ದೇವೆ.  ಅದನ್ನು ಕಾಯಬೇಡಿ.  ಆದಷ್ಟು ಬೇಗ ಇಲ್ಲಿಗೆ ಬಂದುಬಿಡಿ ಎಂದು ನೇಮಕಾತಿಗಳನ್ನು ನೋಡಿಕೊಳ್ಳುತ್ತಿದ್ದ ಯೂನಿವರ್ಸಿಟಿಯ ಡೆಪ್ಯುಟಿ ರಿಜಿಸ್ಟ್ರಾರ್ ಅವರು ಮೈಸೂರಿನಲ್ಲಿದ್ದ ನನಗೆ ಪೋನ್ ಮೂಲಕ ಹೇಳಿದಾಗ... ಪಾಂಡಿಚೆರಿಗೆ ಕಾಲಿಟ್ಟಾಗ ಹಳೆಯದೆಲ್ಲವನ್ನೂ ತೊಳೆದುಹಾಕಿಬಿಡುವಂತೆ ಅಗಾಧವಾಗಿ ಮಳೆ ಸುರಿಯುತ್ತಿತ್ತು.
 ಮೂರು ದಿನಗಳ ನಂತರ ಏಕಾಂಗಿಯಾಗಿ ಊರು ಸುತ್ತವ ಕಾರ್ಯಕ್ರಮ ಹಾಕಿಕೊಂಡು ಉಳಿದುಕೊಂಡಿದ್ದ ಅಜಂತಾ ಗೆಸ್ಟ್ ಹೌಸ್‌ನಿಂದ (ಅದೀಗ ಅರುಣಾ ಗೆಸ್ಟ್ ಹೌಸ್ ಆಗಿಬಿಟ್ಟಿದೆ) ಹೊರಟು ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಬೈಸಿಕಲ್, ಸೈಕಲ್ ರಿಕ್ಷಾಗಳ ನಡುವೆ ದಾರಿ ಮಾಡಿಕೊಂಡು ಕಾಲೆಳೆದು, ಮೀನಿನ ವಾಸನೆ ಮೂಗಿಗಡರಿದಾಗ ಓಡಿ ಒಂದುಗಂಟೆಗೂ ಕಡಿಮೆ ಅವಧಿಯಲ್ಲಿ ಊರಿನ ಮತ್ತೊಂದು ಅಂಚಿನ ರೈಲ್ವೇ ಸ್ಟೇಷನ್ ತಲುಪಿ ಇಷ್ಟೇನಾ ಈ ಊರು! ಎಂದು ಮೂಗು ಮುರಿದು ಎಡಕ್ಕೆ ಹೊರಳಿ ಬೀಚ್ ರಸ್ತೆ ತಲುಪಿದಾಗ...!  ಯಾವ ಜನ್ಮದಲ್ಲೋ ಎಂದೋ ಕಳೆದುಹೋಗಿದ್ದೇನೋ ಮತ್ತೆ ಸಿಕ್ಕಿಬಿಟ್ಟಿತ್ತು.  ಅಂದು ಶುರುವಾದ ನನ್ನ ಸಮುದ್ರಪ್ರೇಮ ಈಗ ಸಮುದ್ರದಷ್ಟೇ ಅಗಾಧ.
ವರ್ಷಗಳ ನಂತರ ಒಂದು ಬೆಳಿಗ್ಗೆ ನನ್ನ ಬೆಸ್ಟ್ ಫ್ರೆಂಡ್ ಆಗಿರುವ ಮಗ ಆದಿತ್ಯನೊಡನೆ ಅವನಿಗೆ ಬೇಕಾದ ಸಿಡಿಗಳನ್ನು ಕೊಳ್ಳಲು ಟಿಕ್‌ಟ್ಯಾಕ್ನತ್ತ ಹೆಚ್ಚೆ ಹಾಕುತ್ತಾ ಪಾಂಡಿಚೆರಿಗೆ ಬಂದ ಮೊದಲ ದಿನಗಳ ಅನುಭವ ಅನಿಸಿಕೆಗಳನ್ನು ಹೇಳಿಕೊಳ್ಳುತ್ತಾ ಅಂದು ಇಲ್ಲೆಲ್ಲಾ ನಾನೊಬ್ಬನೇ ನಡೆದಾಡಿದ್ದೆ... ಎಂದು ದನಿ ಎಳೆಯುತ್ತಿದ್ದಂತೇ ಅವನು ಈಗ ನಿನ್ನ ಜತೆ ನಿನ್ನ ಮಗನೂ ಇದ್ದಾನೆ, ಅದೂ ಐದನೆಯ ಕ್ಲಾಸು ಓದುವ ಮಗ ಎಂದು ಹೇಳಿ ತನ್ನ ಎಂದಿನ ತುಂಟನಗೆ ನಕ್ಕಾಗ ಕಣ್ಣಮುಂದೆ ಪಾಂಡಿಚೆರಿ ನನ್ನ ಬದುಕಿನ ಭಾಗವಾದ ನೆನಪುಗಳ ಮೆರವಣಿಗೆ.
ಮೊದಮೊದಲಿಗೆ ದೆಹಲಿಯ ಗೆಳತಿ, ಪಾಂಡಿಚೆರಿಯ ಮಹಿಳಾ ಕಾಲೇಜಿನಲ್ಲಿ ಫ್ರೆಂಚ್ ಅಧ್ಯಾಪಕಿ ಲಕ್ಷ್ಮಿ ಈ ಊರಿನ ಊಟದ, ಮುಖ್ಯವಾಗಿ ಬಗೆಬಗೆಯ ಮೀನಿನ, ರುಚಿ ಹತ್ತಿಸಿದಾಗ ಪಾಂಡಿಚೆರಿ ಹೊಟ್ಟೆಯ ಮೂಲಕ ನನ್ನ ಹೃದಯಕ್ಕೆ ಲಗ್ಗೆ ಇಟ್ಟಿತು.  ಅರವಿಂದಾಶ್ರಮದ ನಿವಾಸಿಗಳಾದ ಆಕೆಯ ತಂದೆತಾಯಿಯರ ಮೂಲಕ ಭಾರತದ ಮಹಾನ್ ಚೇತನಗಳಲ್ಲೊಂದಾದ ಶ್ರೀ ಅರವಿಂದರು ಬದುಕಿನ ನಾಲ್ಕು ದಶಕಗಳನ್ನು ಕಳೆದ ಆ ಆಶ್ರಮದ ಪರಿಚಯವೂ ಆಯಿತು.  ಊರ ಹೊರಗಿನ ಪ್ರಶಾಂತ ಪರಿಸರದಲ್ಲಿನ ಆಶ್ರಮದ ಕಲ್ಪನೆಯಿದ್ದ ನನಗೆ ಊರ ಮಧ್ಯೆಯೇ ಇರುವ ಈ ಆಶ್ರಮ, ಅಲ್ಲಿನ ಕೃತಕ ಮೌನದ ಕಟ್ಟಳೆ ನಿರಾಶೆಯನ್ನೇ ಉಂಟುಮಾಡಿತು.  ಕೆಲದಿನಗಳಲ್ಲಿ ಇಲ್ಲಿಗೆ ಬಂದ ಪುಟ್ಟಕ್ಕನನ್ನು ಕರೆದುಕೊಂಡು ಹೋಗಿ ಅರವಿಂದರ ಸಮಾಧಿಯ ಮುಂದೆ ನಿಲ್ಲಿಸಿ ನಾವಿರುವುದು ಅರವಿಂದಾಶ್ರಮದಲ್ಲಿ ಎಂದು ಹೇಳಿದಾಗ ಆಕೆಗೆ ನಂಬಿಕೆಯೇ ಆಗಲಿಲ್ಲ.  ನಂತರದ ದಿನಗಳಲ್ಲಿ ಊರ ಹೊರಗಿರುವ ಹಚ್ಚಹಸಿರಿನ ಆರೋವಿಲ್ ನನ್ನ ನಿರಾಶೆಯನ್ನು ಅದೆಷ್ಟೋ ಕಡಿಮೆ ಮಾಡಿತು.  ಅರವಿಂದಾಶ್ರಮದ ಮಾತೆಯವರ ಕನಸಿನ ಕೂಸಾದ, ವಿಶ್ವದ ಎಲ್ಲೆಡೆಯ ಜನ ನೆಲೆಸಿರುವ ಈ ಅiಣಥಿ oಜಿ ಆಚಿತಿಟಿ ತನ್ನ ವಿವಿಧ ಚಟುವಟಿಕೆಗಳಿಂದ ನನ್ನನ್ನು ಮತ್ತೆಮತ್ತೆ ತನ್ನತ್ತ ಸೆಳೆದಿದೆ.
ಈ ಪುಟ್ಟ ಊರನ್ನು ಕಾಲ್ನಡಿಯಲ್ಲೇ ಸುತ್ತಿದಾದ ಕಂಡ ಹಲವು ಚರ್ಚ್‌ಗಳು ಕಣ್ಮನ ಸೆಳೆದವು.  ಮಿಷನ್ ಸ್ಟ್ರೀಟ್‌ನಲ್ಲಿರುವ ಮುನ್ನೂರು ವರ್ಷಗಳ ಹಿಂದೆ ನಿರ್ಮಾಣವಾದ ಲೆ ಗ್ಲಿಸ್ ದ ನೋತ್ರ್ ದಾಮ್ ದ ಲ ಕೊನ್ಸೆಪ್ಸಿಯೋ ಅಥವಾ ಅವರ್ ಲೇಡಿ ಆಫ್ ಇಮ್ಯಾಕ್ಯುಲೇಟ್ ಕನ್ಸೆಪ್ಷನ್‌ನ ಭವ್ಯತೆ, ಮತ್ತು ಸೌತ್ ಬುಲ್‌ವಾರ್ ಅಥವಾ ಸುಬ್ಬಯ್ಯ ಸಾಲೈನಲ್ಲಿ ರೈಲ್ವೇ ಸ್ಟೇಷನ್‌ನ ಎದುರಿಗಿರುವ ಲೆ ಗ್ಲಿಸ್ ದ ಸ್ಯಾಕ್ರ್ ಕ್ಯುರ್ ದ ಜೀಸಸ್ ಅಥವಾ ಚರ್ಚ್ ಆಫ್ ದ ಸೇಕ್ರೆಡ್ ಹಾರ್ಟ್ ಆಫ್ ಜೀಸಸ್‌ನಲ್ಲಿರುವ ಗಾಜಿನ ಫಲಕಗಳ ಮೇಲೆ ಚಿತ್ರಿಸಿರುವ ಕ್ರಿಸ್ತನ ಬದುಕಿನ ವಿವಿಧ ಘಟನಾವಳಿಗಳನ್ನು ಬಿಂಬಿಸುವ ಚಿತ್ರಗಳು ನನಗೆ ತುಂಬಾ ಇಷ್ಟವಾದವು.  ದೂಮಾ ಸ್ಟ್ರೀಟ್‌ನಲ್ಲಿರುವ ಲೆ ಗ್ಲಿಸ್ ದ ನೋತ್ರ ದಾಮ್ ದ ಆಂಜ್ ಅಥವಾ ಚರ್ಚ್ ಆಫ್ ಅವರ್ ಲೇಡಿ ಆಫ್ ಆಂಜೆಸ್ ಬೆಳ್ಳಗೆ ಹೊಳೆಯುವುದನ್ನು ಕಂಡು ಅದು ಅಮೃತಶಿಲೆಯದಿರಬಹುದೆಂದುಕೊಂಡೇ.  ಆಮೇಲೆ ಗೊತ್ತಾಯಿತು ಅದರ ಗೋಡೆಗಳಿಗೆ ಅತ್ಯುತ್ತಮ ಗುಣಮಟ್ಟದ ಸುಣ್ಣದ ಕಲ್ಲಿಗೆ ಮೊಟ್ಟೆಯ ಬಿಳಿಯ ಭಾಗವನ್ನು ಮಿಶ್ರಣ ಮಾಡಿದ ಗಾರೆಯನ್ನು ಲೇಪಿಸಿದ್ದಾರೆ ಅಂತ.
ಆಮೇಲೆ ಒಂದು ಮದುವೆ ಅಂತ ಮಾಡಿಕೊಂಡು ಇಲ್ಲೇ ಸಂಸಾರ ಹೂಡಿದ ಮೇಲೆ ಅರುಂಧತಿಯ ಜತೆ ದೇವಸ್ಥಾನಗಳಿಗೆ ಪ್ರದಕ್ಷಿಣೆ ಬರುವುದು ಶುರುವಾಯಿತು.  ಅರವಿಂದಾಶ್ರಮಕ್ಕೆ ಹತ್ತಿರದಲ್ಲೇ ಇರುವ ಮನಕುಲ ವಿನಾಯಕರ್ ದೇವಸ್ಥಾನ, ಅಲ್ಲಿ ಹೊರಗಿರುವ (ನಿಜವಾದ) ಆನೆ, ಒಳಗಿರುವ ವೆಳ್ಳಕ್ಕಾರನ್ ಪಿಳ್ಳೈಯಾರ್, ವಿಲ್ಲಿಯನೂರಿನ ಭವ್ಯ ಕೋಕಿಲಾಂಬಾಳ್ ತಿರುಕಾಮೇಶ್ವರ ದೇವಸ್ಥಾನ, ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ಶಿವ ದೇವಾಲಂii  ಮತ್ತು ಪೆರುಮಾಳ್ ಕೋಯಿಲ್‌ಗಳು ಲಿಸ್ಟಿನಲ್ಲಿ ಕೆಲವು.  ಪಾಂಡಿಚೆರಿಗೆ ಐದು ಕಿಲೋಮೀಟರ್ ದೂರದಲ್ಲಿ ದಿಂಡಿವನಂ ರಸ್ತೆಯಲ್ಲಿನ ಪಂಚವಟಿಯಲ್ಲಿರುವ ಮೂವತ್ತಾರು ಅಡಿ ಎತ್ತರದ ಪಂಚಮುಖಿ ಹನುಮಂತನನ್ನು ಎಷ್ಟು ಸಲ ನೋಡಿದ್ದೇವೆ ಎಂದು ಲೆಕ್ಕಕ್ಕೆ ಸಿಕ್ಕಿಲ್ಲ.
ಪಾಂಡಿಚೆರಿಯ ಮೂಲ ತಮಿಳು ಹೆಸರು ಪುದುಚೇರಿ ಅಂತ.  ಇದು ಫ್ರೆಂಚರ ನಾಲಿಗೆಯಲ್ಲಿ ಪಾಂಡಿಚೆರಿ ಅಂತಾಯಿತು.  ೨೦೦೬ರ ನವೆಂಬರ್ ೧ರಿಂದ ಈ ಊರು ಅಧಿಕೃತವಾಗಿ ಪುದುಚೇರಿಯೇ ಆಗಿಬಿಟ್ಟಿದೆ.  ಆಗೊಮ್ಮೆ ಆಗಿನ ಉಪರಾಜ್ಯಪಾಲ ಮುಕುಟ್ ಮಿಥಿ ಅವರು ಇಲ್ಲಿನ ಶಾಸನಸಭೆಯಲ್ಲಿ ಪುಡುಚೆರಿ ಎಂದು ಉಚ್ಚರಿಸಿ ಪುದುಚೇರಿಗರಿಗೆ ಇರಿಸುಮುರಿಸುಂಟುಮಾಡಿ, ನನ್ನಂಥವರನ್ನು ರಂಜಿಸಿದ್ದುಂಟು.  ಇಲ್ಲಿನ ಜನ ತಮ್ಮ ಊರನ್ನು ಪ್ರೀತಿಯಿಂದ ಪುದುವೈ ಎಂದು ಕರೆಯುತ್ತಾರೆ.  ಹಿಂದೆ ಇತಿಹಾಸಪೂರ್ವಕಾಲದಲ್ಲಿ ಈ ಊರಿಗೆ ವೇದಪುರಿ ಎಂಬ ಹೆಸರಿತ್ತಂತೆ.  ಈಗಲೂ ಈ ಊರಿನ ಪ್ರಮುಖ ಆರಾಧ್ಯದೈವ ವೇದಪುರೀಶ್ವರನ್ ಎಂಬ ಶಿವನ ಒಂದು ರೂಪ.  ಎರಡುಸಾವಿರ ವರ್ಷಗಳ ಹಿಂದೆಯೇ ಈ ಊರು ರೋಮನ್ ಸಾಮ್ರಾಜ್ಯದ ಜತೆ ವ್ಯಾಪಾರಸಂಪರ್ಕ ಹೊಂದಿತ್ತು.  ಅದರ ಕುರುಹುಗಳು ಇಲ್ಲಿನ ಅರಿಕಮೇಡುವಿನಲ್ಲಿ ದೊರೆತಿವೆ.  ಒಂದನೇ ಶತಮಾನದಲ್ಲಿ ರಚಿತವಾದ ಪೆರಿಪ್ಲಸ್ ಮಾರಿಸ್ ಎರಿತ್ರೇ ಅಥವಾ ಹಿಂದೂಮುಹಾಸಾಗರದಲ್ಲಿ ವ್ಯಾಪಾರ ಮತ್ತು ನೌಕಾಯಾನ ಎಂಬ ಕೃತಿಯೂ ಸೇರಿದಂತೆ ಹಲವು ರೋಮನ್ ಬರಹಗಳಲ್ಲಿ ಈ ಊರು ಪುದುಕೆ ಎಂದು ಕರೆಸಿಕೊಂಡಿದೆ.
 ಪುದುಚೇರಿ ಫ್ರೆಂಚರ ನಾಲಿಗೆಯಲ್ಲಿ ಪಾಂಡಿಚೆರಿ ಅಂತಾದದ್ದು ಹೇಗೆ ಎಂದು ನಾವು ತಲೆ ಕೆಡಿಸಿಕೊಂಡರೆ ರಸಿಕ ಫ್ರೆಂಚರು ತಮ್ಮದೇ ಮಾಮೂಲೀ ವರಸೆಯಲ್ಲಿ ರೊಮ್ಯಾಂಟಿಕ್ ಕಥೆಯೊಂದನ್ನು ಹೇಳುತ್ತಾರೆ.  ಕೋರಮಂಡಲ ತೀರದಲ್ಲಿ ನೌಕಾಘಾತವಾಗಿ ಬದುಕುಳಿದ ಒಬ್ಬನೇ ಒಬ್ಬ ಫ್ರೆಂಚ್ ಯುವಕ ಹೇಗೋ ಕಷ್ಟಪಟ್ಟು ತೀರ ತಲುಪಿದನಂತೆ.  ಆಯಾಸ, ಹಸಿವಿನಿಂದ ಸತ್ತೇಹೋಗುತ್ತಿದ್ದ ಅವನಿಗೆ ಸ್ಥಳೀಯ ಸುಂದರ ಯುವತಿಯೊಬ್ಬಳು (ಅವಳು ಸುಂದರಿಯಾಗಿರಲೇಬೇಕು, ಇದು ಕಥೆಯಲ್ಲವೇ!) ಅನ್ನನೀರು ಕೊಟ್ಟು ಕಾಪಾಡಿದಳಂತೆ.  ತನ್ನ ಜೀವ ಉಳಿಸಿದ ಆ ಸುಂದರಿಯ ಬಗ್ಗೆ ಅವನಿಗೆ ಅಪಾರ ಪ್ರೇಮವುಕ್ಕಿ ನಿನ್ನ ಹೆಸರೇನೆಂದು ಕೇಳಿದನಂತೆ.  ಅವಳು ಪಾಂಡಿ ಎಂದು ಉತ್ತರಿಸಿದಳಂತೆ.  ಆಗವನು ಫ್ರೆಂಚ್‌ನಲ್ಲಿ ಅಹ್! ಪಾಂಡಿ ಷೆರಿ! ಅಂದರೆ ಪಾಂಡಿ ಡಾರ್ಲಿಂಗ್ ಎಂದು ಪ್ರೇಮೋನ್ಮಾದದಿಂದ ಉದ್ಗರಿಸಿದನಂತೆ.  ಆಮೇಲೆ ಅಲ್ಲೊಂದು ಊರು ಕಟ್ಟಿ ತನ್ನ ಪ್ರಿಯತಮೆಯ ಹೆಸರಿನಲ್ಲಿ ಪಾಂಡಿಚೆರಿ ಎಂದು ಹೆಸರಿಟ್ಟನಂತೆ.  ಪರವಾಗಿಲ್ಲ, ನಮ್ಮಜ್ಜಿ ಹೇಳುತ್ತಿದ್ದ ಕಥೆಗಳನ್ನು ಫ್ರೆಂಚರೂ ಹೇಳುತ್ತಾರೆ!  ಆದರೆ ನನಗೊಂದು ಗುಮಾನಿ.  ನೌಕಾಘಾತದಿಂದ ಬದುಕುಳಿದು ಬಂದ ಆ ಫ್ರೆಂಚ್ ಬಹುಷಃ ಹೆಣ್ಣಾಗಿರಬೇಕು, ಮತ್ತು ಅವಳಿಗೆ ಊಟ (ಬಟ್ಟೆ?) ಕೊಟ್ಟು ಕಾಪಾಡಿದ್ದು ಸ್ಥಳೀಯ ಯುವಕನಿರಬೇಕು.  ಯಾಕೆಂದರೆ ಪಾಂಡಿ ಎಂದು ಹೆಸರಿಟ್ಟುಕೊಂಡಿರುವ ಹಲವು ಗಂಡಸರು ನನಗೆ ಪರಿಚಯ.  ಅಂಥಾ ಹೆಸರಿನ ಹೆಂಗಸರನ್ನು ನಾನು ಕಂಡಿಲ್ಲ.  ನನ್ನ ಗುಮಾನಿಯನ್ನು ನನ್ನ ಇಬ್ಬರು ಫ್ರೆಂಚ್ ವಿದ್ಯಾರ್ಥಿನಿಯರಿಗೆ ಹೇಳಿದಾಗ ಅವರು ಥೇಟ್ ಫ್ರೆಂಚ್ ಶೈಲಿಯಲ್ಲೇ ನಾಚಿ ನಕ್ಕರು.
ಕಳೆದ ಎರಡುಸಾವಿರ ವರ್ಷಗಳ ಇತಿಹಾಸದ ವಿವಿಧ ಘಟ್ಟಗಳಲ್ಲಿ ತಮಿಳು ಪಲ್ಲವರು, ಚೋಳರು, ಪಾಂಡ್ಯರು; ದೆಹಲಿಯ ಖಾಲ್ಜಿ, ತುಘಲಖರು; ಕರ್ನಾಟಕದ ವಿಜಯನಗರ, ಬಿಜಾಪುರಗಳ ಅರಸರು; ಮರಾಠರು; ನಂತರ ಸ್ಥಳೀಯ ಪಾಳೇಗಾರರುಗಳ ಆಳ್ವಿಕೆ ಕಂಡ ಪಾಂಡಿಚೆರಿ ಹದಿನೇಳನೇ ಶತಮಾನದ ಉತ್ತರಾರ್ಧದಲ್ಲಿ ಫ್ರೆಂಚರ ಅಧೀನವಾಯಿತು.  ಪಾಂಡಿಚೆರಿಯಲ್ಲಿ ಫ್ರೆಂಚ್ ಸಾಮ್ರಾಜ್ಯದ ಅಸ್ತಿಭಾರವನ್ನು ಹಾಕಿದ ಶ್ರೇಯಸ್ಸು ಫ್ರಾನ್ಸ್‌ವಾ ಮಾರ್ತೆ ಎನ್ನುವವನಿಗೆ ಸಲ್ಲುತ್ತದೆ.  ೧೬೭೪ರಲ್ಲಿ ಇಲ್ಲಿಗೆ ಬಂದ ಆತ ಫ್ರೆಂಚ್ ಗೋದಾಮುಗಳ ರಕ್ಷಣೆಗಾಗಿ ಇಲ್ಲೊಂದು ಕೋಟೆ ಕಟ್ಟಿ ಸೇನೆಯನ್ನಿರಿಸಿದ.  ಇಲ್ಲಿನ ನೆಲವನ್ನು ಕಬಳಿಸಲು ಅವನು ಒಂದು ಚಾಲಾಕೀ ಯೋಜನೆಯನ್ನು ರೂಪಿಸಿದ.  ಮೊದಲಿಗೆ ದೇಶೀಯ ರಾಜರುಗಳ ಒಳಜಗಳಗಳಲ್ಲಿ ಪರ-ವಿರೋಧ ಪಾತ್ರ ವಹಿಸಿ ಪ್ರೆಂಚ್ ವರ್ಚಸ್ಸನ್ನು ಹೆಚ್ಚಿಸಿದ ಇವನು ಮರಾಠರು ಮತ್ತು ಜಿಂಜಿಯ ನಾಯಕರುಗಳು ತಮ್ಮ ನೆರೆಯವರೊಡನೆ ನಡೆಸುತ್ತಿದ್ದ ಕಾದಾಟಗಳ ಖರ್ಚಿಗಾಗಿ ಫ್ರೆಂಚ್ ಈಸ್ಟ್ ಇಂಡಿಯಾ ಕಂಪೆನಿಯಿಂದ ಪಡೆದ ಸಾಲಕ್ಕೆ ಬದಲಾಗಿ ಪಾಂಡಿಚೆರಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ತೆರಿಗೆ ಸಂಗ್ರಹಿಸುವ ಅಧಿಕಾರವನ್ನು ಪಡೆದುಕೊಂಡ.  ಆನಂತರ ಪಾಂಡಿಚೆರಿ ಫ್ರೆಂಚ್ ವಸಾಹತಾಗಲು ಹೆಚ್ಚು ಸಮಯ ಹಿಡಿಯಲಿಲ್ಲ.  ಈ ಮಾರ್ತೆ ಸುತ್ತಲಿನ ಕೆಲವು ಹಳ್ಳಿಗಳನ್ನು ಹಣ ಕೊಟ್ಟು ಕೊಂಡು ಪಾಂಡಿಚೆರಿಗೆ ಸೇರಿಸಿಕೊಂಡ.  ಹೀಗಾಗಿಯೇ ಪಾಂಡಿಚೆರಿಯ ಹತ್ತು ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳು ತಮಿಳುನಾಡಿನಿಂದ ಸುತ್ತುವರೆದು ಮುಖ್ಯ ಪಟ್ಟಣದಿಂದ ಭೌಗೋಳಿಕವಾಗಿ ಪ್ರತ್ಯೇಕವಾಗಿವೆ.  ನಾವು ಭೂಪಟದಲ್ಲಿ ಚೆನ್ನೈನ ಕೆಳಗೆ ಪಾಂಡಿಚೆರಿ ಎಂದು ಗುರುತಿಸುವ ಊರು ವಾಸ್ತವವಾಗಿ ಒಂದಕ್ಕೊಂದು ಅಂಟಿಕೊಂಡಿಲ್ಲದ ಹನ್ನೊಂದು ಸಣ್ಣಪುಟ್ಟ ಪ್ರದೇಶಗಳ ಗುಚ್ಚ.  ಇದನ್ನು ನನ್ನ ಚಂಡಮಾರುತ ಕಾದಂಬರಿಯ ಪಾತ್ರವೊಂದು ವರ್ಣಿಸುವುದು ಹೀಗೆ: ಬನಿಯನ್ ಸ್ವಲ್ಪ ಹಳೆಯದಾದ ಮೇಲೆ ಅದರಲ್ಲಿ ತೂತುಗಳು ಬೀಳ್ತವಲ್ಲಾ, ಒಂದು ದೊಡ್ಡ ರಂಧ್ರ, ಅದರ ಪಕ್ಕದಲ್ಲಿ ಹಲವಾರು ಸಣ್ಣಸಣ್ಣ ರಂಧ್ರಗಳು.  ಹೀಗಿದೆ ಪಾಂಡಿಚೆರಿ.  ಈ ಬನಿಯನ್ ತೂತುಗಳಲ್ಲದೇ ಇನ್ನೂ ಮೂರು ಪುಟ್ಟಪುಟ್ಟ ಪ್ರದೇಶಗಳು ಪಾಂಡಿಚೆರಿ ಕೇಂದ್ರಾಡಳಿತ ಪ್ರದೇಶಕ್ಕೆ ಸೇರಿವೆ.  ದಕ್ಷಿಣಕ್ಕೆ ತಮಿಳುನಾಡಿನಲ್ಲೇ ಕಾರೈಕಲ್ ಇದೆ.  ಪಶ್ಚಿಮದ ಕೇರಳದಲ್ಲಿ ಅರಬ್ಬಿ ಸಮುದ್ರ ತೀರದಲ್ಲಿ ಮಾಹೆ ಇದೆ.  ಇನ್ನೊಂದು ಚುಕ್ಕೆ ಯಾನಾಂ ಸುಮಾರು ಎಂಟುನೂರು ಕಿಲೋಮೀಟರ್ ದೂರದಲ್ಲಿ ಆಂಧ್ರದಲ್ಲಿದೆ.  ಇವುಗಳ ಜತೆ ಕಲ್ಕತ್ತಾದ ಬಳಿ ಇರುವ ಚಂದ್ರನಗರ ಎಂಬ ಮತ್ತೊಂದು ಚುಕ್ಕೆ ಫ್ರೆಂಚರ ಅಧೀನದಲ್ಲಿದ್ದು ಪಾಂಡಿಚೆರಿಯ ಭಾಗವಾಗಿತ್ತು.  ಆದರೆ ಅಲ್ಲಿಯ ಜನ ೧೯೪೯ರಲ್ಲಿನ ಒಂದು ಜನಮತಗಣನೆಯ ಮೂಲಕ ತಾವು ಪಶ್ಚಿಮ ಬಂಗಾಳದ ಭಾಗವಾಗಲು ತೀರ್ಮಾನಿಸಿದಾಗ ಪಾಂಡಿಚೆರಿ ಆ ಊರನ್ನು ಕಳೆದುಕೊಂಡಿತು.
  ದಕ್ಷಿಣ ಫ್ರಾನ್ಸ್‌ನಲ್ಲಿರುವುವ ತುಲೋ ಎಂಬ ನಗರದ ಮಾದರಿಯಲ್ಲಿ ಫ್ರೆಂಚರು ಪಾಂಡಿಚೆರಿಯನ್ನು ಕಟ್ಟಿದ್ದಾರೆ.  ಬುಲ್‌ವಾರ್ ಎಂದು ಕರೆಯಲಾಗುವ ವೃತ್ತಾಕಾರದ ರಸ್ತೆಯ ಒಳಗಿರುವ ಫ್ರೆಂಚ್ ನಿರ್ಮಿತ ನಗರದಲ್ಲಿ ಎಲ್ಲ ರಸ್ತೆಗಳೂ ಪೂರ್ವದಿಂದ ಪಶ್ಚಿಮಕ್ಕೆ, ಉತ್ತರದಿಂದ ದಕ್ಷಿಣಕ್ಕೆ ಸಾಗುತ್ತವೆ.  ನಲವತ್ತೇಳರಲ್ಲಿ ಭಾರತಕ್ಕೆ ಬ್ರಿಟಿಷರು ಸ್ವಾತಂತ್ರ್ಯ ಕೊಟ್ಟು ಹೊರನಡೆದಾಗ ಪಾಂಡಿಚೆರಿಗೆ ಆ ಭಾಗ್ಯ ಲಭಿಸಲಿಲ್ಲ.  ನಮಗೆ ವಸಾಹತುಗಳೇನೂ ಇಲ್ಲ,  ಇರುವುದೆಲ್ಲವೂ ಫ್ರಾನ್ಸಿನ ಸಾಗರೋತ್ತರ ಪ್ರದೇಶಗಳು ಮಾತ್ರ.  ಯೂರೋಪಿನಲ್ಲಿರುವುದು ಮೆಟ್ರೋಪಾಲಿಟನ್ ಫ್ರಾನ್ಸ್, ಪ್ರಪಂಚದ ಉಳಿದೆಡೆ ಇರುವುದೆಲ್ಲವೂ ನಮ್ಮ ಫ್ರಾನ್ಸಿನದೇ ಭಾಗಗಳು, ಅಲ್ಲಿನ ಜನರೆಲ್ಲರೂ ಫ್ರೆಂಚರು.  ದುರದೃಷ್ಟವಶಾತ್ ಆ ಪ್ರದೇಶಗಳು ಭೌಗೋಳಿಕವಾಗಿ ದೂರದಲ್ಲಿವೆ ಅಷ್ಟೇ ಎಂದು ಬೇರೆ ರಾಗ ಹಾಡುವ ಮೂಲಕ ಫ್ರೆಂಚರು ಪಾಂಡಿಚೆರಿಗೆ ಸ್ವಾತಂತ್ರ್ಯವನ್ನು ನಿರಾಕರಿಸಿದರು.  ಆದರೆ ಈ ವಾದವನ್ನು ತಿರಸ್ಕರಿಸಿದ ಪಾಂಡಿಚೆರಿಗರು ಸ್ವಾತಂತ್ರಕ್ಕಾಗ್ಗಿ ಹೋರಾಟ ಆರಂಭಿಸಿದರು.  ಅವರ ಹೋರಾಟದ ಬೆನ್ನಿಗೆ ಭಾರತ ಸರಕಾರವೂ ನಿಂತು ಫ್ರೆಂಚರು ಅಂತಿಮವಾಗಿ ನವೆಂಬರ್ ೧, ೧೯೫೪ರಲ್ಲಿ ಇಲ್ಲಿಂದ ಕಾಲುತೆಗೆದರು.  ಹೋಗುವ ಮೊದಲು ಪಾಂಡಿಚೆರಿಯ ವಿಶಿಷ್ಟ ಸಂಸ್ಕೃತಿಯನ್ನು ಹಾಗೇ ಉಳಿಸಿಕೊಳ್ಳಿ, ನಿಮ್ಮ ದಮ್ಮಯ್ಯಾ ಅಂತೀವಿ, ಇಲ್ಲಿರೋ ಫ್ರೆಂಚ್ ಕುರುಹುಗಳನ್ನ ಅಳಿಸಿಹಾಕಬೇಡಿ ಎಂದೆಲ್ಲಾ ಗೋಗರೆದುಕೊಂಡರು.  ಅಷ್ಟಾಗಿಯೂ ಪಾಂಡಿಚೆರಿಯನ್ನು ಭಾರತಕ್ಕೆ ಒಪ್ಪಿಸಿದ ಒಪ್ಪಂದವನ್ನು ಫ್ರೆಂಚ್ ಪಾರ್ಲಿಮೆಂಟ್ ಅಧಿಕೃತವಾಗಿ ಅನುಮೋದಿಸಿದ್ದು ಆಗಸ್ಟ್ ೧೬, ೧೯೬೨ರಂದು.  ಆ ದಿನವನ್ನು ಪಾಂಡಿಚೆರಿಯ ಸ್ವಾತಂತ್ರದಿನ ಎಂದು ಆಚರಿಸುತ್ತಾರೆ.  ಪರಿಣಾಮವಾಗಿ ಪಾಂಡಿಚೆರಿಗರಿಗೆ ಭಾರತದ್ದೂ ತಮ್ಮದೂ ಸೇರಿ ಎರಡು ಸ್ವಾತಂತ್ರದ ದಿನಗಳು, ಅಂದರೆ ಎರಡು ರಜಾಗಳು!  ಆ ಎರಡು ದಿನಗಳು ಶನಿವಾರ ಭಾನುವಾರಗಳ ಹಿಂದೆಯೋ ಮುಂದೆಯೋ ಬಂದುಬಿಟ್ಟರಂತೂ ನಾಲ್ಕು ದಿನಗಳ ರಜಾದ ಮಜಾ.
ಪಾಂಡಿಚೆರಿಗೆ ಸ್ವಾತಂತ್ರ್ಯ ಕೊಡುವಾಗ ಇಲ್ಲಿಯ ಜನ ಫ್ರೆಂಚ್ ನಾಗರೀಕರಾಗಿಯೇ ಉಳಿಯಲು ಬಯಸಿದರೆ ಅದಕ್ಕೆ ಅವಕಾಶ ಕೊಡಬೇಕೆಂಬ ಫ್ರೆಂಚ್ ಸರಕಾರದ ಬೇಡಿಕೆಯನ್ನು ಭಾರತ ಸರಕಾರ ಮನ್ನಿಸಿದ್ದರಿಂದಾಗಿ ಇಲ್ಲಿನ ಸುಮಾರು ಏಂಟುಸಾವಿರ ತಮಿಳು ಕುಟುಂಬಗಳು ಫ್ರೆಂಚ್ ಪೌರತ್ವವನ್ನು ಉಳಿಸಿಕೊಂಡಿವೆ.  ಫ್ರೆಂಚ್ ಸೇನೆಯಲ್ಲಿದ್ದವರು ಮತ್ತವರ ಮಕ್ಕಳೇ ಹೆಚ್ಚಾಗಿರುವ ಈ ಜನರನ್ನು ಸೋಲ್ದಾ (Soಟಜಚಿಣ) ಎಂದು ಕರೆಯುತ್ತಾರೆ.  ಫ್ರಾನ್ಸಿನಲ್ಲಿ ಚುನಾವಣೆಗಳು ನಡೆಯುವಾಗ ಈ ಜನ ಇಲ್ಲಿ ಓಟು ಹಾಕುತ್ತಾರೆ.  ಪ್ಯಾರಿಸ್‌ನಲ್ಲಿರುವ ಫ್ರೆಂಚ್ ಶಾಸನಸಭೆಗೆ ತಮ್ಮ ಇಬ್ಬರು ಪ್ರತಿನಿಧಿಗಳನ್ನು ಆರಿಸಿ ಕಳುಹಿಸುತ್ತಾರೆ.  ಇವರ ಮಕ್ಕಳು ಫ್ರಾನ್ಸ್‌ನಲ್ಲಿ ಓದಲು ಹೋಗುವುದರ ಜತೆಗೇ ಅಲ್ಲೇ ನೌಕರಿ ಹಿಡಿಯುತ್ತಾರೆ.  ಅಲ್ಲಿ ಕೆಲವರ್ಷಗಳು ಕೆಲಸ ಮಾಡಿಬಂದು ಇಲ್ಲಿ ನೆಮ್ಮದಿಯ ನಿವೃತ್ತಿ ಜೀವನ ನಡೆಸುತ್ತಾರೆ.  ಇವರಿಗೆ ಸಿಗುವ ಪೆನ್ಷನ್ ನಮ್ಮ ಐಏಎಸ್ ಅಧಿಕಾರಿಗಳ ಮಾಸಿಕ ವೇತನಕ್ಕಿಂತಲೂ ಅಧಿಕ.  ಈ ಹಣದಲ್ಲಿಐಷಾರಾಮದ ಬದುಕು ನಡೆಸುತ್ತಾ ಇತರರಲ್ಲಿ ಹೊಟ್ಟೆಕಿಚ್ಚು ಮೂಡಿಸುತ್ತಾರೆ.
 ಸುಮಾರು ಮುನ್ನೂರು ವರ್ಷಗಳವರೆಗೆ ಭಾರತದಲ್ಲಿ ಫ್ರೆಂಚ್ ಸಾಮ್ರಾಜ್ಯದ ರಾಜಧಾನಿಯಾಗಿ ಮೆರೆದ ಪಾಂಡಿಚೆರಿಯನ್ನು ಸ್ಥೂಲವಾಗಿ ಎರಡು ಭಾಗಗಳಾಗಿ ವಿಂಗಡಿಸಬಹುದು.  ಬಂಗಾಳ ಕೊಲ್ಲಿಯಿಂದ ಗ್ರ್ಯಾಂಡ್ ಕೆನಾಲ್‌ವರೆಗಿನ ಪುಟ್ಟ ಪ್ರದೇಶ ಸ್ವಾತಂತ್ರಪೂರ್ವದಲ್ಲಿ ಯೂರೋಪಿಯನ್ನರ ನೆಲೆಯಾಗಿತ್ತು.  ಇದನ್ನು ವೈಟ್ ಟೌನ್ (ಗಿiಟಟe ಃಟಚಿಟಿಛಿhe) ಎಂದು ಕರೆಯುತ್ತಿದ್ದರಂತೆ.  ಸ್ಥಳೀಯ ತಮಿಳುಜನರಿಂದ ತಮ್ಮನ್ನು ಪ್ರತ್ಯೇಕಿಸಿಕೊಂಡು ಬಾಳಿದ ಫ್ರೆಂಚ್ ವಸಾಹತುಗಾರರ ನಿವಾಸಗಳು, ಸರಕಾರೀ ಕಟ್ಟಡಗಳು ಇಲ್ಲಿವೆ.  ಎತ್ತರದ ಕಾಂಪೌಂಡ್‌ಗಳಿಂದ ಆವೃತವಾಗಿರುವ ಇಲ್ಲಿನ ವಸಾಹತುಶಾಹೀ ಕಟ್ಟಡಗಳು ವಿಶಾಲವಾಗಿವೆ.  ಕಿಟಕಿಗಳು ಅಗಲವಾಗಿದ್ದು ಬಾಗಿಲುಗಳು ಕಿರಿದಾಗಿರುವುದು ಇಲ್ಲಿನ ಮನೆಗಳ ವೈಶಿಷ್ಟ್ಯ.  ಒಂದೂವರೆ ಕಿಲೋಮೀಟರ್ ಉದ್ದ, ಕಾಲು ಕಿಲೋಮೀಟರ್ ಅಗಲದ ಈ ಪುಟ್ಟ ಸ್ಥಳದಲ್ಲಿ ಐವತ್ತೈದು ಭಾಷೆಗಳನ್ನು ಮಾತೃಭಾಷೆಯಾಗಿ ಹೊಂದಿರುವ ಜನ ನೆಲೆಸಿದ್ದಾರೆ!  ಇಲ್ಲಿನ ರಸ್ತೆಗಳು ಸ್ವಚ್ಚವಾಗಿವೆ ಮತ್ತು ದಿನದ ಯಾವುದೇ ಸಮಯದಲ್ಲೂ ಪ್ರಶಾಂತವಾಗಿರುತ್ತವೆ.  ಇಲ್ಲಿ ನಡೆದಾಡುವುದೇ ಒಂದು ವಿಶಿಷ್ಟ ಅನುಭವ.
 ಗ್ರ್ಯಾಂಡ್ ಕೆನಾಲ್‌ನ ಪಶ್ಚಿಮಕ್ಕಿರುವ ಭಾಗ ಮೊದಲಿನಿಂದಲೂ ದೇಶೀಯರ ನೆಲೆ.  ಈ ಭಾಗವನ್ನು ಫ್ರೆಂಚರು ಬ್ಲ್ಯಾಕ್ ಟೌನ್ (ಗಿiಟಟe oiಡಿe) ಎಂದು ಹೆಸರಿಸಿದ್ದರು.  ಈ ಭಾಗ ಪಕ್ಕದ ತಮಿಳುನಾಡಿನ ಯಾವುದೋ ಒಂದು ಊರಿನಂತಿದೆ.  ಗಿಜಿಗಿಜಿ ಜನ, ಗದ್ದಲ, ಅಂಗಡಿಮುಂಗಟ್ಟುಗಳು, ಹೂವು ಹಣ್ಣು ವಡೆ ಬೋಂಡ ಮಾರುವವರು, ಅಲ್ಲಲ್ಲಿ ರಸ್ತೆಯಂಚಿನಲ್ಲಿ ಕುಡಿದು ಬಿದ್ದಿರುವ ಕುಡುಕರು, ರಸ್ತೆಯ ನಿಯಮಗಳನ್ನು ಗಾಳಿಗೆ ತೂರಿ ಅಡ್ಡಾದಿಡ್ಡಿ ಓಡುವ ವಾಹನಗಳು... ಇಲ್ಲಿ ನಡೆದಾಡುವಾಗ ಮೈಯೆಲ್ಲಾ ಕಣ್ಣಾಗಿರಬೇಕು.
 ಪಾಂಡಿಚೆರಿ ದಕ್ಷಿಣ ಭಾರತದ ಒಂದು ಪ್ರಮುಖ ಪ್ರವಾಸೀ ತಾಣ.  ಶಾಂತಿ, ನೆಮ್ಮದಿಯನ್ನು ಅರಸಿ ಬರುವವರಿಗೆ ಈ ಊರು ನಿರಾಶೆಯುಂಟುಮಾಡುವುದಿಲ್ಲ.  ಇಲ್ಲಿ ಕಡಿಮೆ ಖರ್ಚಿನಲ್ಲಿ ಮಜವಾಗಿ ಕಾಲ ಕಳೆಯಬಹುದು.  ಇಲ್ಲಿ ಯಾವುದಕ್ಕೂ ಕೊರತೆ ಇಲ್ಲ, ಎಲ್ಲವೂ ಅಗ್ಗ.  ಬಾಟಲು ಪ್ರಿಯರಿಗಂತೂ ಈ ಊರು ಸ್ವರ್ಗ.  ಪಾಂಡಿಚೆರಿಯಲ್ಲಿರುವುದು ಮೂರೇ ಸೀಸನ್- ಬೇಸಗೆ, ಉರಿಬೇಸಗೆ, ಕಡುಬೇಸಗೆ ಎಂದು ನಾವು ತಮಾಷೆಗೆ ಹೇಳುವುದುಂಟು.  ನಿಜ ಸಂಗತಿಯೆಂದರೆ ಚೆನ್ನೈನಂತೆ ಇಲ್ಲಿ ಸೆಖೆ ಇಲ್ಲ.  ಸಂಜೆ ನಾಲ್ಕುಗಂಟೆಯ ನಂತರ ಬೀಸಲಾರಂಭಿಸುವ ಸಮುದ್ರದ ಗಾಳಿ ಊರನ್ನು ತಂಪಾಗಿಸಿಬಿಡುತ್ತದೆ.  ಜನರೂ ಅಷ್ಟೇ, ಕೂಲ್ ಕೂಲ್.  ಇಲ್ಲಿಗೆ ಬರುವ ಮೊದಲು ತಮಿಳರು ಮಹಾ ಭಾಷಾದುರಭಿಮಾನಿಗಳು, ಅಲ್ಲೆಲ್ಲಾ ತಮಿಳಿನಲ್ಲೇ ಮಾತಾಡಬೇಕು ಎಂದೆಲ್ಲಾ ಕೇಳಿದ್ದೆ.  ಇಲ್ಲಿಗೆ ಬಂದಮೇಲೆ ಅದೆಲ್ಲಾ ಕಟ್ಟುಕಥೆಗಳು ಎಂದು ಗೊತ್ತಾಯಿತು.  ತಮಿಳನ್ನು ಸರಿಯಾಗಿ ಕಲಿಯದೇ ನಾನಿಲ್ಲಿ ಆರಾಮವಾಗಿದ್ದೇನೆ.  ಆರಂಭದಲ್ಲಿ ಕೆಲಸದವಳೊಡನೆ ಇದು ಇಂಪಾರ್ಟೆಂಟು ಅಂತ ನಾ ಶೊಲ್ಲಿದ್ದೆ, ನೀ ಮಾಡೇ ಇಲ್ಲೈ, ನಾನೇನು ಪೋಯಿ ಶೊಲ್ತೀನೀ ಅಂದ್ಕೊಂಡ್ಯಾ? ಎಂದು ಕೂಗಾಡುತ್ತಿದ್ದ ಅರುಂಧತಿ ಬೇಗನೆ ತಮಿಳು ಕಲಿತುಬಿಟ್ಟಳು.  ಈ ಭಾಷಾಕಲಿಕೆಯಲ್ಲಿ ಮಗ ಆದಿತ್ಯನಂತೂ ನಮ್ಮಿಬ್ಬರಿಗೂ ಮುಂದು.  ಆದರೆ ದೆಹಲಿಗೆ ಹಿಂತಿರುಗಿದ ಮೇಲೆ ಇಬ್ಬರ ತಮಿಳೂ ಮಸುಕಾಗುತ್ತಿದೆ.  ಊರು ದೂರವಾದಂತೆ ಭಾಷೆಯೂ ದೂರವಾಗುತ್ತಿದೆ.

3 comments:

  1. ಬಾಳಿದೂರಿನ ಮೋಹ ಯಾವಾಗಲೂ ಹೀಗೇ, ಸೊಗಸೇ ಸೊಗಸು. ನಿಮ್ಮ ಬರಹ ಆಪ್ತವಾಗಿದೆ; ನನಗೂ ಚೆನ್ನೈ ಪುಣೆ ಬಿಟ್ಟಾಗ ಹೀಗೇ ಅನ್ನಿಸಿತ್ತು.

    ReplyDelete
  2. chennagide baraha kushiyaythu - bharathi

    ReplyDelete
  3. Dear Manjunath and Bharathi, thank you very much for your kind words

    ReplyDelete