ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Wednesday, August 31, 2011

ನೈತಿಕತೆಯಿಂದ ಭಾರತ ಗಳಿಸಿದ್ದೇನು?


(ಈ ಲೇಖನ ನನ್ನ "ದೇಶ ಪರದೇಶ" ಸಂಕಲನದಲ್ಲಿದೆ)


ನೈತಿಕ ನೆಲೆಗಟ್ಟಿನಲ್ಲಿ ಮೂಡಿದ ಅಹಿಂಸೆಯ ಮಾರ್ಗದಿಂದಲೇ ಸ್ವಾತಂತ್ರ್ಯ ಗಳಿಸಿದ ಭಾರತ ಜವಹರ್‌ಲಾಲ್ ನೆಹರೂ ಅವರ ನಾಯಕತ್ವದಲ್ಲಿ ವಿದೇಶ ನೀತಿಯನ್ನು ರೂಪಿಸಿದಾಗ ವಾಸ್ತವವಾಗಿಯೇ ಅದರಲ್ಲಿ ನೈತಿಕತೆ ಪ್ರಧಾನ ಅಂಶವಾಗಿತ್ತು.  ನಲವತ್ತೇಳರ ಮಾರ್ಚ್‌ನಲ್ಲಿ ದೆಹಲಿಯಲ್ಲಿ ಆಯೋಜಿಸಲಾದ ಪ್ರಥಮ Asian Relations Conferenceನಲ್ಲಿ ಭಾರತದ Inteime Prime Minister ಸ್ಥಾನದಿಂದ ಮಾತನಾಡುತ್ತಾ ನೆಹರೂ ಅವರು ಭಾರತದ ವಿದೇಶನೀತಿಯ ಮೊಟ್ಟಮೊದಲ ಗುರಿ "Freedom of Policy" ಆಗಿರುತ್ತದೆ ಎಂದು ಘೋಷಿಸಿದರು.  ಅವರ ಮಾತಿನ ಅರ್ಥ ಭಾರತ ತನ್ನ ವಿದೇಶ ಹಾಗೂ ಆಂತರಿಕ ನೀತಿಗಳನ್ನು ರೂಪಿಸುವಲ್ಲಿ ಹಾಗೂ ಅನುಷ್ಠಾನಗೊಳಿಸುವಲ್ಲಿ ಸಂಪೂರ್ಣ ಸ್ವತಂತ್ರವಾಗಿರುತ್ತದೆ, ಬೇರೆ ಯಾವುದೇ ಹೊರಗಿನ ಶಕ್ತಿಗಳು ನಮ್ಮ ಮೇಲೆ ತಮ್ಮ ಅಭಿಪ್ರಾಯಗಳನ್ನು ಹೇರಲು ಅವಕಾಶವಿರುವುದಿಲ್ಲ ಎಂದು.  ಈ ನೀತಿಯ ಆಧಾರದ ಮೇಲೇ ನೆಹರೂ ಅವರು ಭಾರತವನ್ನು ಶೀತಲ ಸಮರದ ಆ ದಿನಗಳಲ್ಲಿ ಅಮೆರಿಕಾ ಅಥವಾ ಸೋವಿಯೆತ್ ಯೂನಿಯನ್ ನೇತೃತ್ವದ ಯಾವುದೇ ಗುಂಪಿನ ಸದಸ್ಯ ರಾಷ್ಟ್ರವನ್ನಾಗಿ ಮಾಡಲು ನಿರಾಕರಿಸಿದರು.  ಯಾವುದೇ ಗುಂಪಿನ ಸದಸ್ಯನಾದರೆ ಗುಂಪಿನ ನಾಯಕ ಅಥವಾ ಇತರ ಸದಸ್ಯರಾಷ್ಟ್ರಗಳ ಒತ್ತಡಕ್ಕೆ ಸಿಲುಕಿ ಅಷ್ಟರ ಮಟ್ಟಿಗೆ ನಾವು ನಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತೇವೆ, ನಮ್ಮ ನೀತಿಗಳನ್ನು ರೂಪಿಸುವಾಗ ಇತರರ ಒತ್ತಡಕ್ಕೆ ನಾವು ಸಿಕ್ಕಿಬೀಳುತ್ತೇವೆ ಎಂಬ ನಂಬಿಕೆ ಅಥವಾ ಶಂಕೆಯೇ ನೆಹರೂ ಅವರು ಯಾವ ಗುಂಪಿಗೂ ಸೇರದೇ ಅಲಿಪ್ತ ಮಾರ್ಗವನ್ನು ಅನುಸರಿಸಲು ಕಾರಣವಾಯಿತು.  ಭಾರತ ಸೈನಿಕ ಬಣಗಳಿಗೆ ಸೇರದೇ ವಸಾಹತುಶಾಹಿಯಿಂದ ಹೊರಬರುತ್ತಿದ್ದ ಇತರ ಅಫ್ರೋ-ಏಷಿಯನ್ ರಾಷ್ಟ್ರಗಳಿಗೆ ಮಾದರಿಯಾಗಬೇಕು, ವಿಶ್ವದ ಅಧಿಕ ರಾಷ್ಟ್ರಗಳು ಸೈನಿಕಬಣಗಳಿಂದ ಹೊರಗುಳಿದರೆ ಅಷ್ಟರ ಮಟ್ಟಿಗೆ ಮೂರನೆ ಮಹಾಯುದ್ಧವನ್ನು ದೂರ ತಳ್ಳಬಹುದು ಎಂದೂ ಅವರು ಬಯಸಿದ್ದರು.
ಈ ಎಲ್ಲ ಆದರ್ಶಗಳನ್ನು ಸ್ವತಃ ಆಚರಿಸಿ ತೋರಿಸಲೋಸುಗ ನೆಹರೂ ಭಾರತದ ವಿದೇಶಾಂಗ ನೀತಿಯನ್ನು ತಮ್ಮ ಆದರ್ಶಗಳಿಗನುಗುಣವಾಗಿ ರೂಪಿಸಿದರು.  ಅದರ ಪರಿಣಾಮವಾಗಿ ನೆರೆಹೊರೆಯ ದೇಶಗಳ ಬಗ್ಗೆ ಹಾಗೂ ಅಂತರರಾಷ್ಟ್ರೀಯ ರಾಜಕಾರಣದಲ್ಲಿ ಭಾರತ ಅನುಸರಿಸಿದ ಕೆಲವು ನೀತಿಗಳು ಹಾಗೂ ಅವುಗಳ ಪರಿಣಾಮಗಳನ್ನು ಪರಿಶೀಲಿಸೋಣ.
ಫೇಬಿಯನ್ ಸೋಶಿಯಲಿಸ್ಟ್ ಆಗಿದ್ದ ನೆಹರೂ ಅವರಿಗೆ ಚೀನಾ ಕಮ್ಯೂನಿಸ್ಟರ ಹಿಡಿತಕ್ಕೆ ಬಂದುದು ಸಮ್ಮತವೇ ಆಗಿತ್ತು.  ಏಷಿಯಾದಲ್ಲಿ ಶಾಶ್ವತ ಶಾಂತಿಗೆ ಭಾರತ ಮತ್ತು ಚೀನಾಗಳ ನಡುವೆ ಪರಸ್ಪರ ಮೈತ್ರಿಯಿರುವುದು ಅಗತ್ಯವೆಂದರಿತ ಅವರು ಚೀನೀ ಸೇನೆ ಟಿಬೆಟ್ ಅನ್ನು ಆಕ್ರಮಿಸಿಕೊಂಡದ್ದನ್ನು ಮತ್ತು ಆ ದುರ್ಬಲ ದೇಶದ ಮೇಲೆ ಚೀನಾ ತನ್ನ ಪರಮಾಧಿಕಾರವನ್ನು ಹೇರಿದ್ದನ್ನು ಒಪ್ಪಿಕೊಂಡರು.  ಎರಡೂ ದೇಶಗಳ ನಡುವೆ ಟಿಬೆಟ್ ಒಂದು ಪ್ರಶ್ನೆಯಾಗಬಾರದೆಂದು ಅವರು ಬಯಸಿದ್ದರು.  ಅಲ್ಲದೇ ೧೯೫೪ರಲ್ಲಿ ಚೀನಾದ ಪ್ರಧಾನಮಂತ್ರಿ ಚೌ ಎನ್ ಲೈ ಜತೆ ಶಾಂತಿಯುತ ಸಹಬಾಳ್ವೆಯ ಬಗೆಗಿನ ಪಂಚಶೀಲ ತತ್ವಗಳಿಗೆ ಸಹಿ ಹಾಕಿದರು.
ನೆಹರೂ ಅವರ ಈ `ನೈತಿಕ' ನಿಲುವುಗಳಿಗೆ ಚೀನಾದ ಪ್ರತಿಕ್ರಿಯಿಸಿದ್ದು ಮಾತ್ರ ಬೇರೆ ರೀತಿ.  ಅದು ನಿಮಗೆ ಗೊತ್ತೇ ಇದೆ.  ಆದರೂ ಇಲ್ಲಿ ಒಂದೆರಡು ಸಾಲುಗಳನ್ನು ಬರೆಯುವುದು ಅಗತ್ಯವೆನಿಸುತ್ತದೆ.  ಪೀಕಿಂಗ್‌ನಲ್ಲಿ ಚೌ ಎನ್ ಲೈ ಪಂಚಶೀಲ ಒಪ್ಪಂದಗಳಿಗೆ ಸಹಿಹಾಕುತ್ತಿದ್ದಾಗಲೇ ಚೀನೀ ಸೇನೆ ನಮ್ಮ ಸುಮಾರು ನಲವತ್ತು ಸಾವಿರ ಚದರ ಕಿಲೋಮೀಟರ್ ವಿಸ್ತೀರ್ಣದ ಅಕ್ಸಾಯ್ ಚಿನ್ ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತಿತ್ತು.  ಚೀನಾ ಪಂಚಶೀಲ ತತ್ವಗಳಿಗೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತದೆ ಎಂದು ನಂಬಿದ್ದ ನೆಹರೂ ಅಕ್ಸಾಯ್ ಚಿನ್ ಪ್ರದೇಶದ ರಕ್ಷಣೆಯ ಬಗ್ಗೆ ನಿರಾತಂಕದಿಂದಿದ್ದರು.  ಒಂದುವೇಳೆ ಅನೀತಿ ಎಂದಾದರೂ ಸರಿ, ನೆಹರೂ ಅವರು ಚೀನಾದ ಬಗ್ಗೆ ಸ್ವಲ್ಪವಾದರೂ ಶಂಕೆ ಪಟ್ಟು ಅಕ್ಸಾಯ್ ಚಿನ್ ಪ್ರದೇಶದ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರೆ...!
ಟಿಬೆಟ್ ಮೇಲೆ ಚೀನೀ ಅಧಿಕಾರವನ್ನು ನಾವು ತಕ್ಷಣ ಒಪ್ಪಿಕೊಂಡೆವು.  ಆದರೆ ಸಿಕ್ಕಿಂ ಮೇಲೆ ನಮ್ಮ ಅಧಿಕಾರವನ್ನು ಚೀನಾ ಮೂವತ್ತನಾಲ್ಕು ವರ್ಷಗಳಾದರೂ ಇನ್ನೂ ಬಹಿರಂಗವಾಗಿ ಒಪ್ಪಿಕೊಂಡಿಲ್ಲ.  ಕಳೆದ ವರ್ಷ ಬೀಜಿಂಗ್ ನೀಡಿದ ಕೆಲವು ಹೇಳಿಕೆಗಳು ನಮಗೆ ಅನುಕೂಲವೆಂಬಂತೆ ಕಂಡುಬಂದರೂ ಬಹಿರಂಗ ಹೇಳಿಕೆ ಇನ್ನೂ ಬರಬೇಕಾಗಿದೆ.
ಚೀನಾದ ಬಗ್ಗೆ ಎಚ್ಚರದಿಂದಿರುವಂತೆ ನೆಹರೂ ಅವರಿಗೆ ಮೊದಲು ಸರ್ದಾರ್ ಪಟೇಲ್, ಆನಂತರ ಅಮೆರಿಕಾದ ಇಬ್ಬರು ಅಧ್ಯಕ್ಷರು ಮತ್ತು ಇಬ್ಬರು ವಿದೇಶಾಂಗ ಕಾರ್ಯದರ್ಶಿಗಳು ಗಿಣಿಗೆ ಹೇಳುವ ಹಾಗೆ ಹೇಳಿದರು.  ಮಿತ್ರನನ್ನು ಶಂಕಿಸುವುದು ಪಾಪ ಎಂದು ನಂಬಿದ್ದ ನೆಹರೂ ಯಾರ ಎಚ್ಚರಿಕೆಯ ಮಾತುಗಳನ್ನೂ ಕಿವಿಗೆ ಹಾಕಿಕೊಳ್ಳಲಿಲ್ಲ.  ಕೊನೆಗೆ ಅಕ್ಟೋಬರ್ ೨೦, ೧೯೬೨ರಂದು ಚೀನಾ ನಮ್ಮ ಗಡಿಗಳ ಮೇಲೆ ಆಕ್ರಮಣವೆಸಗಿದಾಗ ನೆಹರೂ ನಾನು ಇಲ್ಲಿಯವರೆಗೆ ಭ್ರಮಾಲೋಕದಲ್ಲಿದ್ದೆ ಎಂದು ಪರಿತಪಿಸಿದರು.  ಚೀನಾದ ಜತೆ ಮೈತ್ರಿಯ ಚರ್ಚೆಗಳು ನಡೆಯುತ್ತಿದ್ದಾಗ ನೈತಿಕತೆಯನ್ನು ಬದಿಗಿಟ್ಟು ಡಿeಚಿಟಠಿoiiಞ (ಈ ಪದಕ್ಕೆ ಕನ್ನಡದ ಪರ್ಯಾಯ ಪದ ನನಗೆ ಹೊಳೆಯುತ್ತಿಲ್ಲವಾದ್ದರಿಂದ ಇಂಗ್ಲಿಷ್ ಪದವನ್ನೇ ಉಪಯೋಗಿಸುತ್ತಿದ್ದೇನೆ)  ಅನುಸರಿಸಿ ಎದುರಿಗೆ ಧಾರಾಳವಾಗಿ ನಗೆ ಹರಿಸುತ್ತಾ ತೆರೆಮರೆಯಲ್ಲಿ ನಮ್ಮ ಗಡಿಗಳ ಸುರಕ್ಷತೆಯ ಬಗ್ಗೆ ನೆಹರೂ ಕ್ರಮಗಳನ್ನು ತೆಗೆದುಕೊಂಡಿದ್ದರೆ...!
ಈ ಕೆಲಸವನ್ನು ಅವರ ಮೊಮ್ಮಗ ಮಾಡಿದ.  ೧೯೮೬-೮೭ರ ಚಳಿಗಾಲದಲ್ಲಿ ಆರುಣಾಚಲ ಪ್ರದೇಶದಲ್ಲಿ ನಮ್ಮ ಗಡಿಯೊಳಗೆ ನುಗ್ಗಲು ಯತ್ನಿಸಿದ ಚೀನೀ ಸೇನೆಯನ್ನು ನೇರವಾಗಿ ಎದುರಿಸಲು ರಾಜೀವ್ ಗಾಂಧಿ ನಮ್ಮ ಸೇನೆಗೆ  ಆದೇಶಿಸಿದರು.  ಪರಿಣಾಮ ಆ ಅಘೋಷಿತ ಯುದ್ಧದಲ್ಲಿ ಚೀನೀ ಸೇನೆ ಅಪಾರಪ್ರಮಾಣದ ಸಾವುನೋವುಗಳನ್ನು ಅನುಭವಿಸಿತು.  ಅದಕ್ಕೆ ಹೋಲಿಸಿದರೆ ನಮ್ಮ ಸೇನೆಯ ಸಾವುನೋವುಗಳು ಅತಿಕಡಿಮೆ ಪ್ರಮಾಣದಲ್ಲಿದ್ದವು.   ೬೨ರಂತೆ ೮೭ ಇಲ್ಲ ಎಂದು ರಾಜೀವ್ ಗಾಂಧಿ ಚೀನೀಯರಿಗೆ ಮನವರಿಕೆ ಮಾಡಿಕೊಟ್ಟರು.  ಪರಿಣಾಮವಾಗಿ ಅಂದಿನಿಂದ ಇಂದಿನವರೆಗೆ ಚೀನೀ ಸೇನೆ ಗಡಿಯನ್ನು ಅತಿಕ್ರಮಿಸಿಲ್ಲ.
ಇನ್ನು ಪಾಕಿಸ್ತಾನದತ್ತ ತಿರುಗೋಣ.  ಪಾಕಿಸ್ತಾನೀ ಆಕ್ರಮಣದ ವಿಷಮ ಪರಿಸ್ಥಿತಿಗೆ ಸಿಲುಕಿದ ಕಾಶ್ಮೀರ ಭಾರತದ ಭಾಗವಾಗಲು ಇಚ್ಚಿಸಿದಾಗ ನೆಹರೂ ನೈತಿಕತೆಯನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಯಾದ ನಂತರ ಅಲ್ಲಿ ಜನಮತಗಣನೆ ನಡೆಸಿ, ಕಾಶ್ಮೀರಿಗಳು ತಮ್ಮ ಭವಿಷ್ಯವನ್ನು ತಾವೇ ನಿರ್ಧರಿಸಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ನವೆಂಬರ್ ೪, ೧೯೪೭ರಂದು ಆಕಾಶವಾಣಿಯಲ್ಲಿ ಘೋಷಿಸಿದರು.  ಹಾಗೆ ಘೋಷಿಸಿ ಎಂದು ಯಾರೂ ಅವರನ್ನು ಕೇಳಿರಲಿಲ್ಲ.  ಆದರೂ ನೀತಿವಂತರಾದ ನೆಹರೂ ನೈತಿಕವಾಗಿ ನಡೆದುಕೊಳ್ಳಲು ಪ್ರಯತ್ನಿಸಿದರು.  ಆಮೇಲೆ ವಿಶ್ವಸಂಸ್ಥೆ, ಪಾಕಿಸ್ತಾನ, ಅದರ ಹಿತೈಷಿಗಳು ಅದನ್ನೇ ಪಟ್ಟಾಗಿ ಹಿಡಿದುಕೊಂಡವು.  ನೆಹರೂ Realpolitik ಅನುಸರಿಸಿದ್ದಿದ್ದರೆ...!
ಮತ್ತೆ, ವಿಶ್ವಕ್ಕೇ ಶಾಂತಿಯ ಪಾಠ ಹೇಳಿಕೊಡುವ ನಾವು ಪಾಕಿಸ್ತಾನದ ಜತೆಗಿನ ನಮ್ಮ ಸಮಸ್ಯೆಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಂಡು ಇತರ ದೇಶಗಳಿಗೆ ಮಾದರಿಯಾಗಬೇಕು ಎಂದು ನೆಹರೂ ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಯ ಮುಂದಿಟ್ಟರು.  ಅಲ್ಲಿ ಅದದ್ದೇನು?  ಅಮೆರಿಕಾ, ಬ್ರಿಟನ್ ಮುಂತಾದ ರಾಷ್ಟ್ರಗಳು ಪಾಕಿಸ್ತಾನದ ಪರ ನಿಂತು ಪರಿಸ್ಥಿತಿ ನಮಗೆ ಪ್ರತಿಕೂಲವಾಯಿತು.  ಕಾಶ್ಮೀರದ ಮೂರನೇ ಒಂದು ಭಾಗ ಪಾಕಿಸ್ತಾನದ ಕೈ ಸೇರಿತು.  ವಿಶ್ವಸಂಸ್ಥೆಯ ಮಧ್ಯಸ್ಥಿಕೆಯನ್ನು ಮರೆತು ಪಾಕಿಸ್ತಾನವನ್ನು ಯುದ್ಧದಲ್ಲಿ ಮಣಿಸುವುದೇ ಸರಿಯಾದ ದಾರಿ ಎಂದರಿತು ಅದರಂತೆ ನಡೆದುಕೊಂಡಿದ್ದರೆ...!  ವಾಸ್ತವವಾಗಿ ವಿಶ್ವಸಂಸ್ಥೆಯಲ್ಲಿ ರಾಜತಂತ್ರ ಕದನಕ್ಕಿಂತ ಕಾಶ್ಮೀರದಲ್ಲಿ ಸೈನಿಕ ಕದನ ನಮಗೆ ಅನುಕೂಲಕರವಾಗುತ್ತಿತ್ತು.  ಅದರೆ idealist ನೆಹರೂಗೆ realpolitik ಬೇಕಾಗಿರಲಿಲ್ಲ.
ಆದರೆ ಅವರ ಮಗಳು ನೈತಿಕತೆಯನ್ನು ಬದಿಗೊತ್ತರಿಸಿ realpolitik ಅನುಸರಿಸಿದರು.  ೧೯೭೧ರಲ್ಲಿ ಪೂರ್ವ ಪಾಕಿಸ್ತಾನದಲ್ಲಿ ಅರಾಜಕತೆ ಉಂಟಾದಾಗ ಅದನ್ನು ನಮಗೆ ಅನುಕೂಲವಾಗುವಂತೆ ಉಪಯೋಗಿಸಿಕೊಳ್ಳಲು ಆಕೆ ಸಂಚು ಹೂಡಿದರು.  ಪರಿಣಾಮವಾಗಿ ನಮ್ಮ ಸೇನೆ ನವೆಂಬರ್ ೨೧, ೧೯೭೧ರಂದು ರಹಸ್ಯವಾಗಿ ಪೂರ್ವ ಪಾಕಿಸ್ತಾನದಲ್ಲಿನ ಪಾಕಿಸ್ತಾನೀ ಠಿಕಾಣೆಗಳ ಮೇಲೆ ಧಾಳಿ ನಡೆಸಿತು.  ಅದನ್ನು ನಾವು ವಿಶ್ವಕ್ಕೆ ಹೇಳಲೇ ಇಲ್ಲ.  ಹನ್ನೆರಡು ದಿನಗಳ ನಂತರ ಡಿಸೆಂಬರ್ ೩, ೧೯೭೧ರಂದು ಪಾಕಿಸ್ತಾನ ನಮ್ಮ ಹನ್ನೆರಡು ವಿಮಾನನೆಲೆಗಳ ಮೇಲೆ ಧಾಳಿ ನಡೆಸಿದಾಗ ಅದನ್ನೇ ನೆಪ ಮಾಡಿಕೊಂಡು ಬಹಿರಂಗವಾಗಿ ಯುದ್ದ ಸಾರಿದರು ಇಂದಿರಾಗಾಂಧಿ.  ಮುಂದಾದದ್ದು ನಿಮಗೆ ಗೊತ್ತೇ ಇದೆ.  ಪಾಕಿಸ್ತಾನವನ್ನು ತುಂಡರಿಸಿ ಪೂರ್ವ ಪಾಕಿಸ್ತಾನವನ್ನು ಇಸ್ಲಾಮಾಬಾದ್‌ನ ಹಿಡಿತದಿಂದ ತಪ್ಪಿಸಿದ್ದು ಸೈನಿಕ ದೃಷ್ಟಿಯಿಂದ ನಮಗೆ ಅಗಾಧ ಅನುಕೂಲವನ್ನೊದಗಿಸಿದೆ.  ಹಿಂದೆ ಪೂರ್ವ ಪಾಕಿಸ್ತಾನದಿಂದ ಉತ್ತರಕ್ಕೇ ಕೇವಲ ನೂರೈವತ್ತು ಕಿ. ಮೀ. ದೂರದಲ್ಲಿ ಚೀನೀ ಹಿಡಿತದ ಚುಂಬಿ ಕಣಿವೆ.  ಚೀನಾ ಮತ್ತು ಪಾಕಿಸ್ತಾನಗಳು ಬಯಸಿದರೆ ಒಟ್ಟಿಗೆ ಸೇರಿ ಇಡೀ ಪೂರ್ವೋತ್ತರ ಭಾರತವನ್ನು ದೇಶದ ಇತರ ಭಾಗದಿಂದ ಕತ್ತರಿಸಿಬಿಡಬಹುದಾಗಿತ್ತು.  ಈಗ ಆ ಭಯ ಇಲ್ಲ.  ಬಾಂಗ್ಲಾದೇಶ ನಮಗೆ ಅದೆಷ್ಟೇ ತಿಗಣೆಕಾಟ ಕೊಟ್ಟರೂ ಅದು ಚೀನಾದ ಜತೆ ಸೇರಿ ನಮ್ಮನ್ನು ಇಕ್ಕಟ್ಟಿಗೆ ಸಿಕ್ಕಿಸುವ ಸಾಧ್ಯತೆಯೇ ಇಲ್ಲ.  ಇದನ್ನು ಸಾಧ್ಯವಾಗಿಸಿದ್ದು ಇಂದಿರಾಗಾಂಧಿಯವರ realpolitik, ನೆಹರೂ ಅವರ idealism ಅಲ್ಲ.
೭೧ರ ಯುದ್ಧದ ತನಕ ವಿಶ್ವದ ರಾಷ್ಟ್ರಗಳು ಭಾರತ ಹಾಗೂ ಪಾಕಿಸ್ತಾನಗಳನ್ನು ಸರಿಸಮ ಎಂದು ಭಾವಿಸುತ್ತಿದ್ದವು.  ಅದೇ ೬೨ರಲ್ಲಿ ಚೀನಾಗೆ ಸೋತುಹೋದ, ೬೫ರಲ್ಲಿ ಪಾಕಿಸ್ತಾನದ ವಿರುದ್ಧ ನಿರ್ಣಾಯಕವಾಗಿ ಗೆಲುವು ಸಾಧಿಸಲಾಗದ ಭಾರತಕ್ಕೆ ಶಕ್ತಿಯನ್ನು ಗೌರವಿಸುವ ಪ್ರಪಂಚದ ರಾಷ್ಟ್ರಗಳು ಯಾವ ಬೆಲೆಯನ್ನೂ ಕೊಡುತ್ತಿರಲಿಲ್ಲ.  ಅದನ್ನೆಲ್ಲಾ ಒಂದೇ ಏಟಿಗೆ ಬದಲಾಯಿಸಿದ್ದು ಶ್ರೀಮತಿ ಇಂದಿರಾಗಾಂಧಿ.  ಆಕೆ ತನ್ನ ತಂದೆ ಹಾಕಿಕೊಟ್ಟ ಮಾರ್ಗದಿಂದ ದೂರ ಸರಿದರು ಮತ್ತು ಅದು ಈ ದೇಶ ವಿಶ್ವದಲ್ಲಿ ತಲೆಯೆತ್ತಿ ನಿಲ್ಲುವಂತೆ ಮಾಡಿತು.
ನಿಮಗೆ ಗೊತ್ತೇ ನೆಹರೂ ಅವರು ನಮ್ಮ ಎರಡು ದ್ವೀಪಗಳನ್ನು ಬರ್ಮಾಗೆ ದಾನ ಮಾಡಿದರು ಅಂತ?  ಅಂಡಮಾನಿನ ಉತ್ತರದಲ್ಲಿರುವ ಕೋಕೋ ದ್ವೀಪಗಳನ್ನು ಐವತ್ತರ ದಶಕದ  ಆದಿಭಾಗದಲ್ಲಿ ಬರ್ಮಾ ತನ್ನದೆಂದು ಬೇಡಿಕೆ ಮುಂದಿಟ್ಟಿತು.  ಆಧಾರವೇನು ಎಂದು ನೆಹರೂ ಕೇಳಿದಾಗ ಬರ್ಮಾ ಸರಕಾರ ತೋರಿಸಿದ್ದು ಎರಡು ಶತಮಾನಗಳ ಹಿಂದೆ ಕೆಲಕಾಲ ದಕ್ಷಿಣ ಬರ್ಮಾದ ಹಂಪಾವದಿ ಜಿಲ್ಲೆಯ ರೆವಿನ್ಯೂ ಅಧಿಕಾರಿಗಳು ಈ ದ್ವೀಪಗಳಲ್ಲಿ ತೆರಿಗೆ ಸಂಗ್ರಹಿಸಿದ್ದ ವಿವರಗಳು.  ಅದನ್ನು ಮಾನ್ಯ ಮಾಡಿದ ನೆಹರೂ ಆ ದ್ವೀಪಗಳನ್ನು ಬರ್ಮಾಗೆ ಒಪ್ಪಿಸಿದರು.  ನೆರೆಹೊರೆಯೊಂದಿಗೆ ಶಾಂತಿಯುತ ಸಹಬಾಳ್ವೆಗೆ ದೊಡ್ಡ ದೇಶವಾದ ನಾವು ಇಂತಹ ಸಣ್ಣಪುಟ್ಟ ತ್ಯಾಗಗಳನ್ನು ಮಾಡಬೇಕು ಎಂದು ಹೇಳಿದರು.  ಈಗೇನಾಗಿದೆ ಗೊತ್ತೇ?  ಆ ದ್ವೀಪಗಳನ್ನು ಬರ್ಮಾ ಚೀನಾಗೆ ಗುತ್ತಿಗೆಗೆ ಕೊಟ್ಟಿದೆ.  ಚೀನೀಯರು ಅಲ್ಲಿ ನೌಕಾ ಮತ್ತು ವಿಮಾನನೆಲೆಗಳನ್ನು ನಿರ್ಮಿಸುತ್ತಿದ್ದಾರೆ.  ಅದು ಯಾರ ವಿರುದ್ಧ ಎಂದು ನಾನು ನಿಮಗೆ ಹೇಳಬೇಕಾಗಿಲ್ಲ ಅಲ್ಲವೇ?  ಪಾಕಿಸ್ತಾನದ ಗ್ವಾಡಾರ್‌ನಲ್ಲೂ ಚೀನೀ ನೆಲೆಗಳಿವೆ.  ಇದರರ್ಥ ಚೀನೀ ಸೇನೆ ಹಿಮಾಲಯದ ಗಡಿಯಲ್ಲಷ್ಟೇ ಅಲ್ಲ, ಅರಬ್ಬೀ ಸಮುದ್ರದಲ್ಲೂ, ಬಂಗಾಳ ಕೊಲ್ಲಿಯಲ್ಲೂ ನಮಗೆದುರಾಗಿ ನಿಂತಿವೆ.  ನೆಹರೂ ಮಾಡಿದ ಒಂದು `ಪುಟ್ಟ' ತ್ಯಾಗಕ್ಕೆ ನಾವೀಗ ಎಷ್ಟು ದೊಡ್ಡ ಬೆಲೆ ತೆರಬೇಕಾಗಿದೆ ಎಂಬುದು ನೈತಿಕತೆಯ ವ್ಯಸನಿಗಳಿಗೆ ಅರಿವಾಗುತ್ತದೆ ಎಂದು ತಿಳಿಯಲೇ?
ಇನ್ನೂ ಒಂದು ಮಾತು: ಬರ್ಮಾದ ಜತೆಗಿನ ತನ್ನ ಗಡಿವಿವಾದವನ್ನು ಚೀನಾ ಬಗೆಹರಿಸಿಕೊಂಡದ್ದು ಹೇಗೆ ಗೊತ್ತೇ?  ಅನೇಕ ಸುತ್ತುಗಳ ಮಾತುಕತೆಗಳು ಯಾವುದೇ ನಿರ್ಣಯಕ್ಕೆ ದಾರಿಯಾಗದಾಗ ಚೀನೀ ತಂಡದ ನಾಯಕ ಬರ್ಮೀಯರನ್ನು ಕೇಳಿದ್ದು ಬರ್ಮಾದ ಜನಸಂಖ್ಯೆ ಎಷ್ಟು? ಅಂತ.  ಇಷ್ಟು ಅಂತ ಬರ್ಮಾ ತಂಡದ ನಾಯಕ ಹೇಳಿದಾಗ ಚೀನೀಯ ತಣ್ಣಗೆ ಹೇಳಿದ: ನಾವು ಪ್ರತೀವರ್ಷ ನಮ್ಮ ದೇಶಕ್ಕೆ ಒಂದು ಬರ್ಮಾವನ್ನು ಸೇರಿಸುತ್ತಿದ್ದೇವೆ ಎಂದು ನಿನಗೆ ತಿಳಿದಿದೆಯೇ?  ಬರ್ಮೀಯರು ಅವನ ಮಾತಿನ ಗೂಢಾರ್ಥವನ್ನು ಅರಿಯುವಷ್ಟು `ಜಾಣ'ತನ ತೋರಿಸಿದರು.  ಅವನು ಹೇಳಿದ ಕಡೆ ಸಹಿಹಾಕಿದರು.  ಗಡಿ ಸಮಸ್ಯೆ ಬಗೆಹರಿಯಿತು!  ಈಗ ಬರ್ಮಾಗೆ (ಈಗ ಮಿಯಾನ್‌ಮಾರ್) ಚೀನಾ ಮಿತ್ರ.  ಅವರಿಗೆ ಕೋಕೋ ದ್ವೀಪಗಳನ್ನು ತಟ್ಟೆಯಲ್ಲಿಟ್ಟು ಕೊಟ್ಟ ನಾವು...?
ನೇಪಾಲದ ಬಗ್ಗೇ ಹೇಳುವುದಾದರೆ ಅಲ್ಲಿನ ಅರಸ ತ್ರಿಭುವನ್ ೧೯೫೮ರಲ್ಲಿ ರಾಣಾಗಳ ದಂಗೆಯಿಂದಾಗಿ ಸಿಂಹಾಸನ ಕಳೆದುಕೊಂಡು ಭಾರತಕ್ಕೆ ಓಡಿಬಂದಾಗ ಭಾರತದ ಸೇನೆ ನೇಪಾಲಕ್ಕೆ ಹೋಗಿ ರಾಣಾಗಳನ್ನು ಹತ್ತಿಕ್ಕಿ ತ್ರಿಭುವನ್ ಅವರನ್ನು ೧೯೫೯ರಲ್ಲಿ ಮತ್ತೆ ಸಿಂಹಾಸನದ ಮೇಲೆ ಕೂರಿಸಿತು.  ಆಗ ನೇಪಾಲವನ್ನು ಭಾರತಕ್ಕೆ ಸೇರಿಸಿಕೊಳ್ಳಿ ಎಂದು ತ್ರಿಭುವನ್ ನೆಹರೂ ಅವರಿಗೆ ಹೇಳಿದರು.  ಅದನ್ನು ತಿರಸ್ಕರಿಸಿದ ನೆಹರೂ ನೇಪಾಲ ಸ್ವತಂತ್ರವಾಗಿಯೇ ಇರಲಿ ಎಂದು ಹೇಳಿದರು.  ಅದಾದ ನಾಲ್ಕು ವರ್ಷಕ್ಕೆ ತ್ರಿಭುವನ್ ನಿಧನರಾಗಿ ಅವರ ಮಗ ಮಹೇಂದ್ರ ರಾಜನಾದ.  ಆತ ನೇಪಾಲವನ್ನು ಚೀನಾಗೆ ಹತ್ತಿರವಾಗಿಸಿದ.  ಚೀನಾ ಮತ್ತು ನೇಪಾಲಗಳ ನಡುವಿನ ಹೊಕ್ಕುಬಳಕೆ ಅದೆಷ್ಟು ಗಾಢವಾಯಿತೆಂದರೆ ಭಾರತ ಮತ್ತು ಚೀನಾಗಳ ನಡುವೆ ಯುದ್ಧವಾದರೆ ನೇಪಾಲ ಚೀನಾದ ಪರ ನಿಲ್ಲುವ ಹಾಗೂ ಚೀನೀ ಸೇನೆ ನೇಪಾಲದ ಮೂಲಕ ಸಲೀಸಾಗಿ ಗಂಗಾ ಬಯಲಿಗೆ ನುಗ್ಗುವ ಅಪಾಯವಿತ್ತು.  ಸಿಕ್ಕಿಂ ಮತ್ತು ಭೂತಾನಗಳು ನೇಪಾಲದ ದಾರಿ ಹಿಡಿಯಕೂಡದು ಎಂದು ನಿರ್ಧರಿಸಿದ ಇಂದಿರಾಗಾಂಧಿ, ಸಿಕ್ಕಿಂ ಅನ್ನು ಭಾರತಕ್ಕೆ ಸೇರಿಸಿಕೊಂಡರು ಮತ್ತು ಭೂತಾನದ ಮೇಲೆ ಹಿಡಿತವನ್ನು ಬಿಗಿಗೊಳಿಸಿದರು.  ಹೀಗಾಗಿ ಅಲ್ಲಿ ಮೊದಲಿದ್ದಂತೆ ಚೀನಾದ ಭಯ ಈಗಿಲ್ಲ.  ಆಕೆ ಹಾಗೆ ಮಾಡದೇ ಇದ್ದಿದ್ದರೆ strategic ಆಗಿ ಚೀನಾ ನಮಗಿಂತ ಹೆಚ್ಚು ಅನುಕೂಲ ಸ್ಥಿತಿಯಲ್ಲಿರುತ್ತಿತ್ತು.  ಇದು ಸಾಧ್ಯವಾದದ್ದು realpolitikನಿಂದ, moralityಯಿಂದ ಅಲ್ಲ.
ವಿದೇಶ ವ್ಯವಹಾರಗಳಲ್ಲಿ ನೈತಿಕತೆಗೆ ಪ್ರಾಧಾನ್ಯತೆ ನೀಡಿದ್ದರಿಂದ ನೆಹರೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಶಾಂತಿದೂತ, ಆದರ್ಶವಾದಿ ಎಂದು ಹೆಸರು ಗಳಿಸಿದರು.  ಅದಕ್ಕಾಗಿ ಭಾರತ ತೆರೆಬೇಕಾದ ಬೆಲೆ?  ನಾವೀಗ ಅದನ್ನು ತೆರುತ್ತಿದ್ದೇವೆ.
ವಿದೇಶ ವ್ಯವಹಾರಗಳಲ್ಲಿ ನೈತಿಕತೆಯಿಂದಾಗುವ ಅನಾನುಕೂಲಗಳ ಬಗ್ಗೆ ಇವು ಕೆಲವು ಉದಾಹರಣೆಗಳಷ್ಟೇ.  ನೈತಿಕತೆ ಯಾವಾಗ ಉಪಯುಕ್ತವಾಗುತ್ತದೆ ಎಂದರೆ ಎಲ್ಲ ರಾಷ್ಟ್ರಗಳೂ ಅದನ್ನು ಪಾಲಿಸಿದಾಗ ಮಾತ್ರ.  ನಮ್ಮ ವಿರೋಧಿಗಳು realpolitik ಅನುಸರಿಸುತ್ತಿರುವಾಗ ನಾವು ಅದನ್ನು ಬಿಟ್ಟು ನೀತಿ ನಿಯಮ ಅಂದುಕೊಂಡರೆ ಕೊನೆಗೆ ಜೋಲುಮೋರೆ ಹಾಕಿಕೊಂಡು ಕೂರಬೇಕಾಗುತ್ತದೆ ಅಷ್ಟೇ.  Realpolitik ಅನ್ನೂ ಸರಿಯಾಗಿ ಪಾಲಿಸದೇ ಬರೀ ಶಕ್ತಿಯ ಪ್ರದರ್ಶನವನ್ನೇ ಮುಖ್ಯವಾಗಿರಿಸಿಕೊಂಡರೆ ಕೆಸರಿನಲ್ಲಿ ಸಿಕ್ಕಿಬೀಳಬೇಕಾಗುತ್ತದೆ ಎನ್ನುವುದು ಈಗಿನ ಅಮೆರಿಕಾದ ಪರಿಸ್ಥಿತಿಯಿಂದ ವೇದ್ಯವಾಗುತ್ತದೆ.  ಒಟ್ಟಿನಲ್ಲಿ ಯಾವುದೇ ರಾಷ್ಟ್ರ ವಿದೇಶ ವ್ಯವಹಾರಗಳಲ್ಲಿ ಯಶಸ್ವಿಯಾಗಲು, ತನ್ನ ಮಿತ್ರರು ಹಾಗೂ ಶತ್ರುಗಳ ನಡವಳಿಕೆಗಳ ಆಧಾರದ ಮೇಲೆ realpolitik ಅಥವಾ morality ಅನ್ನು ಅನುಸರಿಸುವುದು ಶ್ರೇಯಸ್ಕರ.  ಯಾವ ಸಂದರ್ಭದಲ್ಲಿ ಯಾವ ಮಾರ್ಗ ಹಿಡಿಯಬೇಕು ಎನ್ನುವ ಪರಿಜ್ಞಾನ ರಾಷ್ಟ್ರ ನಾಯಕರಿಗಿರಬೇಕು.  ಅವರ ಅನುಕೂಲಕ್ಕಾಗಿಯೇ ಐದು ಶತಮಾನಗಳ ಹಿಂದೇಯೇ ಮೆಕಿಯಾವೆಲ್ಲಿ ಈ ಮಾತುಗಳನ್ನು ಹೇಳಿದ್ದಾನೆ: "When the safety of our country is absolutely at stake, there need be no question of what is just or unjust, merciful or cruel, praiseworthy or disgraceful but all other considerations set aside, that course alone is to be taken which may save our country and maintain its liberty."


3 comments:

 1. ಉತ್ತಮ ಲೇಖನ.

  ಮುಂದಿನ ಪೀಳಿಗೆಗಳ ನೆಹರೂಗಳ ತಿಳುವಳಿಕೆಗಾಗಿ ನಿಜವಾದ ನೈತಿಕತೆ ಏನು ಎಂಬುದನ್ನು ಚೆನ್ನಾಗಿ define ಮಾಡುವ ಅಗತ್ಯವಿದೆ.

  - ಶ್ರೀ ಕರ್

  ReplyDelete
 2. ನೈತಿಕತೆಯ ಬಗ್ಗೆ ತಪ್ಪು ಕಲ್ಪನೆ ಹೊಂದಿದ್ದ "ಫೇಬಿಯನ್ ಸೋಶಿಯಲಿಸ್ಟ್" ನೆಹರೂರ ವಿದ್ಯಾಭ್ಯಾಸ ಹ್ಯಾರೋ, ಕ್ಯಾಂಬ್ರಿಜ್ ಗಳಲ್ಲಾಯಿತು. This education probably ruined his perspective of true morality. :-)

  ಅದೇ, ಸರ್ದಾರ್ ಪಟೇಲರು ಕಾಲೇಜು ಫೀಸು ಕೂಡ ಕೊಡಲಾಗದ ಬಡತನದಿಂದಾಗಿ ಮನೆಯಲ್ಲೇ ಕೂತು ಎರವಲು ತಂದ ಕಾನೂನು ಪಟ್ಯಪುಸ್ತಕಗಳನ್ನು ಓದಿ ಪದವಿ ಪಡೆದು ನೆಹರೂರವರಿಗಿಂತ ಜಾಣರಾದರು.

  ReplyDelete
 3. ಇಲ್ಲಿ ನನಗೆ ನೆಹರು ಅವರ ನೈತಿಕತೆ ಕಾಣಲ್ಲ. ನಮ್ಮಲ್ಲಿ ಒಂದು ಮಾತಿದೆ. ಸ್ವಂತ ಬುದ್ದಿ ಇಲ್ಲ, ಹೇಳಿದ ಮಾತು ಕೇಳೋಲ್ಲ ಅಂತ. ಇಂತವರಿಗಾಗಿಯೇ ಆ ಗಾದೆ ಮಾತೇನೋ ಅನ್ನಿಸತ್ತೆ. ರಾಷ್ಟ್ರದ ಮುಖ್ಯಸ್ಥ, ಯಾವುದೇ ವ್ಯಕ್ತಿ ತನ್ನ ವಿರೋಧಿ ಪಾಳಯದಲ್ಲಿದ್ದರು ರಾಷ್ಟ್ರವಾದಿಯಾಗಿದ್ದರೆ ಆತನ ಮಾತನ್ನು ಗೌರವಿಸುವ ಗುಣ ಹೊಂದಿರಬೇಕು. ಅದಿಲ್ಲದೆ ನಾನು ಯಾರನ್ನು ಬೇಕಾದರೂ ಕೀಳಾಗಿ ತೋರಿಸಲು ಯಾವುದೇ ನಿರ್ಣಯವನ್ನು (ರಾಷ್ಟ್ರವಿರೋದವಾದರೂ ಸರಿ ) ತಗೋಬಹುದು ಅನ್ನೋ ಅಹಮ್ಮಿನಿಂದ ವರ್ತಿಸಿದರೆ, ಮುಂದಿನ ಪೀಳಿಗೆಗೆ ಎಷ್ಟು ಕಷ್ಟವಾಗತ್ತೆ ಅನ್ನೋದಕ್ಕೆ ಒಂದು ಒಳ್ಳೆ ಉದಾಹರಣೆ. ಸಮಾಧಾನದ ವಿಷಯವೆಂದರೆ ನೆಹರು ಮಗಳು ಹಾಗೂ ಮೊಮ್ಮಗ ಅವರು ಹಾಕಿದ ಹಾದಿಯಲ್ಲಿ ಹೆಜ್ಜೆ ಹಾಕಲಿಲ್ಲ.

  ReplyDelete