ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Sunday, July 31, 2011

ಶ್ರೀ ದೇವೇಗೌಡರಿಗೊಂದು ಬಹಿರಂಗ ಪತ್ರ




ಪೂಜ್ಯ ಶ್ರೀ ದೇವೇಗೌಡರಿಗೆ ನಮಸ್ಕಾರಗಳು.



ಹೇಗಿದ್ದೀರಿ? ಮನೆಯಲ್ಲಿ ಎಲ್ಲರೂ ಕುಶಲವೇ?



ಮೂರು ವರ್ಷಗಳ ಹಿಂದೆ ಕಾವೇರಿ ಜಲವಿವಾದದ ಬಗ್ಗೆ ತಮಗೊಂದು ಬಹಿರಂಗ ಪತ್ರ ಬರೆದಿದ್ದೆ. ಈ ಪತ್ರ ಬರೆಯಲು ಬೇರೆಯದೇ ಆದ ಕಾರಣವಿದೆ. ಮುಖ್ಯವಿಷಯಕ್ಕೆ ಬರುವ ಮೊದಲು ಸ್ವಲ್ಪ ಪೀಠಿಕೆಯ ಅಗತ್ಯವಿದೆ.

ತಮ್ಮ ಪರಿಚಯ ನನಗೆ ಚಿಕ್ಕಂದಿನಿಂದಲೂ ಸಾಕಷ್ಟು ಉಂಟು. ನನ್ನ ಮನಸ್ಸಿನಲ್ಲಿ ತಮ್ಮ ಬಗ್ಗೆ ಬೇಸರ, ಇರಿಸುಮುರಿಸು, ಪ್ರೀತಿ, ಗೌರವ, ಹೆಮ್ಮೆ- ಎಲ್ಲವೂ ಇವೆ. ಎಲ್ಲಕ್ಕೂ ಕಾರಣಗಳೂ ಇವೆ.

ನನಗೆ ತಮ್ಮ ಹೆಸರಿನ ಪರಿಚಯ ದೊಡ್ಡರೀತಿಯಲ್ಲಿ ಆದದ್ದು ಸುಮಾರು ಮೂರು ದಶಕಗಳ ಹಿಂದೆ, ೧೯೭೭ರ ಐತಿಹಾಸಿಕ ಚುನಾವಣೆಗಳ ಸಂದರ್ಭದಲ್ಲಿ. ಆಗ ಉತ್ತರದಲ್ಲಿ ಜನತಾ ಪಕ್ಷ ಜಯಭೇರಿ ಬಾರಿಸಿದಾಗ ಕರ್ನಾಟಕದಲ್ಲಿ ಕಾಂಗ್ರೆಸ್ನ ಕೂದಲೂ ಕೊಂಕಲಿಲ್ಲ. ತಮ್ಮ ಪಕ್ಷಕ್ಕೆ ಸಿಕ್ಕಿದ್ದು ಕೇವಲ ಎರಡು ಸೀಟುಗಳು, ಎಡಗೈಗೊಂದು, ಬಲಗೈಗೊಂದು. ಈ ಬಗ್ಗೆ ತಮಗೆ ನಿರಾಶೆಯಾದದ್ದು ಸಹಜವೇ. ತಮ್ಮ ಮನಸ್ಸನ್ನು ಪ್ರಸನ್ನಗೊಳಿಸಲೆಂದೇ, ಅರಸು ಸರಕಾರವನ್ನು ಬರಖಾಸ್ತುಗೊಳಿಸಲು ರಾಜ್ಯಪಾಲ ಶ್ರೀ ಗೋವಿಂದ್ ನಾರಾಯಣ್ ಕೇಂದ್ರಕ್ಕೆ ಸುಳ್ಳುಸುಳ್ಳೇ ಪತ್ರ ಬರೆದು, ಕೇಂದ್ರ ಅದನ್ನು ಒಪ್ಪಿಕೊಂಡು ಅರಸರಿಗೆ ಗೇಟ್ಪಾಸ್ ಕೊಟ್ಟು ರಾಜ್ಯದಲ್ಲಿ ಚುನಾವಣೆಗಳನ್ನು ಘೋಷಿಸಿಬಿಟ್ಟಿತು. ಇದರ ಹಿಂದೆ ತಾವೇನೋ ಕಿತಾಪತಿ ನಡೆಸಿರಬಹುದೆಂದು ಅವರಿವರು ಮಾತಾಡುವುದನ್ನು ಕೇಳಿಸಿಕೊಂಡ ನೆನಪು ನನಗಿದೆ. ಅಂತೂ ತಾವು ಬಯಸಿದಂತೆ ಚುನಾವಣೆಗಳು ನಡೆದದ್ದು ಈಗ ಇತಿಹಾಸ. ಆಗ ಗೆದ್ದೇಬಿಡುತ್ತೇನೆ ಎಂದುಕೊಂಡು ತಾವು ಒಂದು ಹೊಸಾ ಕಾರನ್ನು ಕೊಂಡುಕೊಂಡು ರೆಡಿಯಾಗಿಟ್ಟುಕೊಂಡಿದ್ದಿರಂತೆ. ಹಾಗಂತ ಅವರಿವರು ಹೇಳುತ್ತಾರೆ. ನಾ ಕಂಡದ್ದಿಲ್ಲ. ಆದರೆ ತಮ್ಮ ನಿರೀಕ್ಷೆಗೆ ವಿರುದ್ಧವಾಗಿ ಕಾಂಗ್ರೆಸ್ ಜಯಭೇರಿ ಬಾರಿಸಿ ಅರಸರು ಮತ್ತೆ ಮುಖ್ಯಮಂತ್ರಿಯಾದರು. ಅವರು ಪ್ರಮಾಣವಚನ ಸ್ವೀಕರಿಸುವಾಗ ವಿಜಯೀ ಕಾಂಗ್ರೆಸ್ ಸದಸ್ಯರು "ಗೋವಿಂದಾ ಗೋ..........ವಿಂದಾ........" ಎಂದು ಕೂಗಿಕೊಂಡು ರಾಜ್ಯಪಾಲರನ್ನು ಲೇವಡಿ ಮಾಡಿದ್ದು ತಮಗೆ ನೆನಪಿದೆಯೇ? ಬಹುಷಃ ಇರಲಿಕ್ಕಿಲ್ಲ. ನನಗೆಲ್ಲವೂ ನೆನಪಿದೆ.

ಅರಸು ಅವರಿಗೆ ಬೆನ್ನಲ್ಲಿ ಚೂರಿ ಹಾಕಿದ `ಕುಕೋಬ್ರಾ' ಗುಂಡೂರಾವ್, `ಟೇಪ್' ಮೊಯ್ಲಿ ಮತ್ತು ಸ್ಟೈಲ್ ಕಿಂಗ್ ಬಂಗಾರಪ್ಪನವರ ಕಿಡಿಗೇಡಿತನಗಳಿಂದ ಬೇಸತ್ತ ನಾಡಿನ ಜನತೆ ಎಂಬತ್ತಮೂರರಲ್ಲಿ ಕಾಂಗ್ರೆಸ್ಸಿಗೆ ಮಣ್ಣುಮುಕ್ಕಿಸಿದಾಗ ಮುಖ್ಯಮಂತ್ರಿಯಾಗುತ್ತೀರೆಂದು ತಾವು ಅಂದುಕೊಂಡಂತೆ ನಾವೂ ಅಂದುಕೊಂಡಿದ್ದೆವು. ಆದರೆ ದೆಹಲಿಯಿಂದ ಹೆಗಡೆ ಸಾಹೇಬರು ವಕ್ಕರಿಸಿ ತಮ್ಮ ಆಸೆಗೆ ತಣ್ಣಿರೆಚಿಬಿಟ್ಟದ್ದು ತುಂಬಾ ದುರದೃಷ್ಟಕರ. "ಮೌಲ್ಯಾಧಾರಿತ ಆಡಳಿತ" ಎಂದೇನೋ ಹೇಳಿಕೊಂಡು ಅವರು ಪಟ್ಟಾಗಿ ಕೂತುಬಿಟ್ಟರು.

ಕೊನೆಗೂ ಹೆಗಡೆ ಸಾಹೇಬರ ಮೌಲ್ಯದ ಬಂಡವಾಳ ಟೆಲಿಪೋನಿನ ತಂತಿಗಳಲ್ಲಿ ಹರಾಜಾಗಿ ಹೋಗಿ, "ಬೊಮ್ಮಾಯಿ ಎಫೆಕ್ಟ್" ರಾಷ್ಟ್ರದ ರಾಜಕೀಯ ಪರಿಭಾಷೆಗೆ ಸೇರಿಹೋಗಿ, ಮತ್ತೊಂದು ರೌಂಡ್ ಕಾಂಗ್ರೆಸ್ ರಾಜ್ಯಭಾರ ನಡೆದು ಮುಗಿಯುವ ಹೊತ್ತಿಗೆ ಹನ್ನೆರಡು ವರ್ಷಗಳೇ ಕಳೆದುಹೋದವು. ಅಲ್ಲಿಗೆ ತಮ್ಮ ವನವಾಸ ಮುಗಿದು ಕೊನೆಗೂ ತಾವು ಮುಖ್ಯಮಂತ್ರಿಯಾಗುವ ಘಳಿಗೆ ಬಂದೇಬಿಟ್ಟಿತು. ತಮ್ಮ ಪಟ್ಟಾಭಿಷೇಕದ ಆ ಸುಮೂರ್ತದಲ್ಲಿ ತಮ್ಮನ್ನು ಮುಖ್ಯಮಂತ್ರಿ ಮಾಡುತ್ತಿರುವವರು ತಾನೇ ಎಂದು ಹೆಗಡೆಯವರು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದರು. ಆದರೆ ತಾವು ಪ್ರಮಾಣವಚನ ಸ್ವೀಕರಿಸುತ್ತಿದ್ದಾಗಲೇ ತಮ್ಮ ಹಿಂ`ಬಾಲಕ'ರು ಹೆಗಡೆಯವರ ಹಮ್ಮನ್ನೆಲ್ಲಾ ಒಂದೇ ಬಾರಿಗೆ ಇಳಿಸಿಬಿಟ್ಟರು. "ಕರೆದುತಂದು ಮುಖ್ಯಮಂತ್ರಿ ಮಾಡಿದ್ದಕ್ಕೆ ಚಪ್ಪಲಿ ಏಟು ತಿನ್ನಬೇಕಾಯಿತು" ಎಂದು ಹೆಗಡೆಯವರು ಮೂಲೆಯಲ್ಲಿ ನಿಂತು ಅಳುತ್ತಿದ್ದುದನ್ನು ಕಂಡಾಗ ಅಯ್ಯೋ ಪಾಪ ಅನಿಸಿದ್ದೇನೋ ನಿಜ. ನನ್ನ ಸುತ್ತಲಿದ್ದವರು `ಮೌಲ್ಯ ಮೌಲ್ಯ ಎಂದು ಸುಳ್ಳುಸುಳ್ಳೇ ಬಾಯಿಬಡಿದುಕೊಳ್ಳುತ್ತಿದ್ದ ಗುಳ್ಳೆನರಿಗೆ ತಕ್ಕ ಶಾಸ್ತಿ ಆಯಿತು' ಎಂದು ಜೋರಾಗಿಯೇ ಹೇಳಿಕೊಂಡು ನಕ್ಕಿದ್ದೂ ಅಷ್ಟೇ ನಿಜ. ಇರಲಿ, ಅದು ಬೇರೆಯೇ ಕತೆ.

ಅಂತೂ ತಾವು ಕರ್ನಾಟಕದ ಮುಖ್ಯಮಂತ್ರಿಯಾಗಿಯೇಬಿಟ್ಟಿರಿ. ಆನಂತರದ್ದು ಮತ್ತೂ ರೋಚಕ. ಎಲ್ಲಾ ನಮ್ಮ ಬಾಲಿವುಡ್ ಸಿನಿಮಾಗಳಲ್ಲಿ ನಡೆಯುವಂತೆ. ಸಮಾರಂಭವೊಂದರಲ್ಲಿ ಪುಟ್ಟಪರ್ತಿ ಸಾಯಿಬಾಬಾ ಅವರು ತಮ್ಮನ್ನು "ಮುಖ್ಯಮಂತ್ರಿಗಳೇ" ಎನ್ನುವ ಬದಲು "ಪ್ರಧಾನಮಂತ್ರಿಗಳೇ" ಎಂದು ಒಂದಲ್ಲಾ ಮೂರು ಸಲ ಸಂಬೋಧಿಸಿ ಅನತಿ ಕಾಲದಲ್ಲೇ ಅದು ನಿಜವಾಗಿಬಿಟ್ಟು ತಾವು ದೆಹಲಿಯ ಗದ್ದುಗೆಯನ್ನೇರಿ ನಮ್ಮೂರ ರಾಗಿಮುದ್ದೆಯನ್ನು ದೇಶದಾದ್ಯಂತ ಫೇಮಸ್ ಮಾಡಿಬಿಟ್ಟಾಗ ನನಗೆ ನಿಜವಾಗಿಯೂ ತುಂಬಾ ಸಂತೋಷವಾಯಿತು. ತಮ್ಮ ಪಾರ್ಟಿಯ ಹಿರೀಕ ಮೊರಾರ್ಜಿ ದೇಸಾಯಿ ಮೂತ್ರವನ್ನು ಫೇಮಸ್ ಮಾಡಿದ್ದಕ್ಕೆ ಹೋಲಿಸಿದರೆ ತಾವು ಮಾಡಿದ್ದು ಕೋಟಿ ಕೋಟಿ ಪಾಲು ಉತ್ತಮ ಹಾಗೂ `ಸ್ವಚ್ಚ' ಕಾರ್ಯ. (ಸಧ್ಯ ಮೂತ್ರವನ್ನೂ, ಮುದ್ದೆಯನ್ನೂ ಒಟ್ಟಿಗೆ ಇಷ್ಟಪಡುವವವರೊಬ್ಬರು ಪ್ರಧಾನಿಯಾಗಿಬಿಟ್ಟು ಸಾರಿನ ಬದಲು ಮೂತ್ರದಲ್ಲೇ ಮುದ್ದೆಯನ್ನು ಉರುಳಾಡಿಸಿ ಗುಳುಂ ಮಾಡಿ ಎಂದು ಹೇಳದಿದ್ದರೆ ಸಾಕು!)

ಆಗದವರು ತಮ್ಮನ್ನು "ನಿದ್ದೆಗೌಡ" ಎಂದು ಕರೆಯತೊಡಗಿ, ನಮ್ಮೂರ ಬಾಂಧವರೆಲ್ಲಾ ಬಾಯಿ ತುಂಬಾ "ಮುದ್ದೇಗೌಡ" ಎಂದು ಮುದ್ದುಮುದ್ದಾಗಿ ಕರೆಯತೊಡಗಿ ನಾಕು ದಿನ ಕಳೆಯುವುದರಲ್ಲಿ ಎಷ್ಟು ಜನರ ಕಣ್ಣು ಕಿಸುರಾಗಿಬಿಟ್ಟಿತು! ಆ ಹಾಳು ಸೀತಾರಾಮ ಕೇಸರಿ ತಮ್ಮನ್ನು ಪೂರ್ತಿ ಒಂದು ವರ್ಷದವರೆಗಾದರೂ ಪ್ರಧಾನಮಂತ್ರಿಯಾಗಿರಲು ಬಿಡಲಿಲ್ಲ. ಅನ್ಯಾಯಕಾರ. ಅವನ ಮನೆ ಎಕ್ಕುಟ್ಟೋಗಾ. ಆವರು ತಮ್ಮ ಮೇಲೆ ಹೊರಿಸಿದ ಸುಳ್ಳು ಅಪವಾದ ಏನದು? ತಾವು ಅವರನ್ನು "ನಿಕಮ್ಮಾ", ಅಂದರೆ "ಮೂರು ಕಾಸಿಗೂ ಪ್ರಯೋಜನವಿಲ್ಲದವ, ರಿಪೇರಿಯಾಗದಷ್ಟು ಲಾಚಾರೆದ್ದುಹೋದವ" ಅಂತೇನೋ ಹೀಗಳೆದರಂತೆ. ಅದು ಅವರ ಮರ್ಮಕ್ಕೇ ಚುಚ್ಚಿಬಿಟ್ಟಿತಂತೆ. ತನ್ನ ಹಾಗೂ ತನ್ನ ಪಕ್ಷದ ಗೌರವದ ದೃಷ್ಟಿಯಿಂದ ತಮಗೆ ಬೆಂಬಲ ನೀಡುವುದನ್ನು ವಾಪಸ್ ಪಡೆಯದೇ ಆ ಕಾಂಗ್ರೆಸ್ ಮಹಾ ನೇತಾರನಿಗೆ ಬೇರೆ ದಾರಿಯೇ ಇರಲಿಲ್ಲವಂತೆ. ನೀವೂ ಅವರಿಗೆ ಸರಿಯಾಗೇ ಮಾಡಿದಿರಿ ಬಿಡಿ. ತಮ್ಮ ವಿಶ್ವಾಸಮತಯಾಚನೆಯ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ಉಂಡು ಮಲಗುವ ಹೊತ್ತಾದರೂ ನಿಲ್ಲದೇ ಮುಂದುವರೆಯುತ್ತಿದ್ದಾಗ ತಾವು ಅಂದದ್ದೇನು? "ನಾನೇನೂ ಹಾಗೆ ಅನ್ನಲಿಲ್ಲ. ಆ ಪದವೇ ನಂಗೆ ಗೊತ್ತಿಲ್ಲ. ಅದೇನದು, ನಿಕಮ್ಮಾ, ಅಕ್ಕಮ್ಮಾ..." ತಾವು ನಗುತ್ತಾ ಹೇಳಿದಾಗ ಇಡೀ ಲೋಕಸಭೆಯೇ ನಗೆಗಡಲಲ್ಲಿ ಮುಳುಗಿಹೋಯಿತು. ತಮ್ಮ ಮಾತನ್ನು ಆಸಕ್ತಿಯಿಂದ ಕೇಳುತ್ತಿದ್ದ ನಾನೂ ನನ್ನ ಹೆಂಡತಿಯೂ ಎಬ್ಬಿಸಿದ ನಗೆಯ ಅಬ್ಬರಕ್ಕೆ ಮಲಗಿದ್ದ ಎರಡು ವರ್ಷದ ಪುಟಾಣಿ ಆದಿತ್ಯ ಎದ್ದು ಪಿಳಿಪಿಳಿ ಕಣ್ಣುಬಿಟ್ಟದ್ದನ್ನು ಮರೆಯುವಂತೆಯೇ ಇಲ್ಲ. ತಮ್ಮ ಮಾತನ್ನು ಕೇಳಿದ ಕೇಸರಿ ಸಾಹೇಬರು ತಲೆ ಮೇಲೆತ್ತಲೇ ಇಲ್ಲ. ಅದಾಗಿ ಅಮಾವಾಸ್ಯೆ ಕಳೆಯುವುದರೊಳಗೆ ಸೋನಿಯಾ ಮೇಡಂ ಕೇಸರಿಯವರನ್ನು ನಿಜವಾಗಿಯೇ "ನಿಕಮ್ಮಾ" ಮಾಡಿ ಮನೆಗೆ ಕಳಿಸಿಬಿಟ್ಟಾಗ ಆವಯ್ಯನಿಗೆ ತಕ್ಕ ಶಾಸ್ತಿಯಾಯಿತು ಅಂತ ನಾವೆಲ್ಲಾ ಅಂದುಕೊಂಡೆವು. (ಅಷ್ಟೆ ಅಲ್ಲ, ಆ ಗಂಡುಗಲಿ ಸೋನಿಯಾ ಕಾಂಗ್ರೆಸ್ನಲ್ಲಿರುವ ಮೀಸೆ ಹೊತ್ತ ಗಂಡಸರನ್ನೆಲ್ಲಾ "ನಿಕಮ್ಮಾ" ಮಾಡಿ ಕೂರಿಸಿಬಿಟ್ಟಿದ್ದಾರೆ ಬಿಡಿ.)

ಹೀಗೆ ತಮ್ಮ ಹಲವಾರು ಆಸಕ್ತಿದಾಯಕ ಚಿತ್ರಗಳು ನನ್ನ ಚಿತ್ತಭಿತ್ತಿಯಲ್ಲಿ ಅಚ್ಚೊತ್ತಿವೆ. ತಮ್ಮ ಬಗ್ಗೆ ಅಭಿಮಾನ, ಹೆಮ್ಮೆ ಮೂಡಿಸುವ ಒಂದು ಚಿತ್ರವೂ ಅದರಲ್ಲಿದೆ. ಈ ಬಗ್ಗೆ ಹಿಂದಿನ ಪತ್ರದಲ್ಲೂ ಬರೆದಿದ್ದೇನೆ. ಇಲ್ಲಿ ಮತ್ತೊಮ್ಮೆ ಹೇಳುವುದೇನೂ ಅನುಚಿತವೆನಿಸುವುದಿಲ್ಲ. ಹಳೆಯ ಸಂತಸದ ಘಟನೆಗಳನ್ನು ಮತ್ತೆ ಮತ್ತೆ ನೆನಸಿಕೊಳ್ಳುವುದು ಮನಸ್ಸನ್ನು ಹಗುರಾಗಿಸುತ್ತದೆ, ಉಲ್ಲಾಸಗೊಳಿಸುತ್ತದೆ.

ಕಾವೇರಿ ವಿವಾದದಲ್ಲಿ ಬುದ್ಧಿವಂತಿಕೆಯಿಂದ ವರ್ತಿಸಿದ ಒಬ್ಬರೇ ಒಬ್ಬ ಮುಖ್ಯಮಂತ್ರಿ ನೀವು. ೧೯೯೧ರಲ್ಲಿ ಬಂಗಾರಪ್ಪ ಹಿಂದೆಮುಂದೆ ನೋಡದೇ ಸಂವಿಧಾನವನ್ನು ಧಿಕ್ಕರಿಸುವ ಬಗೆಯಲ್ಲಿ "ಕಾವೇರಿ ಕಣಿವೆ ಪ್ರಾಧಿಕಾರ" ಅಂತಲೋ ಎನನ್ನೋ ಹುಟ್ಟುಹಾಕಿ, ಸುಪ್ರೀಂ ಕೋರ್ಟ್ ಅದನ್ನು ಸಂವಿಧಾನಬಾಹಿರವೆಂದು ರದ್ದುಪಡಿಸಿ ಛೀಮಾರಿ ಹಾಕಿದ ಕಥೆ ತಮಗೆ ನೆನಪಿರಲೇಬೇಕು. ವಿವೇಕಿಗಳಾರೂ ಮಾಡದ ಕೆಲಸವನ್ನು ಬಂಗಾರಪ್ಪ ಮಾಡಿದರು. ಪರಿಣಾಮ- ರಾಜ್ಯಕ್ಕೆ ಅವಮಾನವಾಗಿ ಕನ್ನಡಿಗರು ರಾಷ್ಟ್ರಮಟ್ಟದಲ್ಲಿ ತಲೆತಗ್ಗಿಸುವಂತಾಯಿತು. ಆಮೇಲೆ ತೀರಾ ಇತ್ತೀಚೆಗೆ ಎಸ್ ಎಂ ಕೃಷ್ಣ ಅವರು ನೀರು ಬಿಡುವುದಿಲ್ಲ ಬಿಡುವುದಿಲ್ಲ ಬಿಡುವುದಿಲ್ಲಾ ಅನ್ನುತ್ತಲೇ ಒಳಗೊಳಗೇ ನೀರು ಬಿಟ್ಟರು. ಅದನ್ನು ವಿರೋಧಿಸಿ ರೈತ ಗುರುಸ್ವಾಮಿ ಕಬಿನಿ ಜಲಾಶಯಕ್ಕೆ ಬಿದ್ದು ಪ್ರಾಣತ್ಯಾಗ ಮಾಡಿದನ್ನು ನೆನಸಿಕೊಂಡರೆ ಮನ ಮರುಗುತ್ತದೆ.

ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ವರ್ತನೆ ತೀರಾ ಭಿನ್ನ ಹಾಗೂ ವಿವೇಕಯುತ. ೧೯೯೫ರಲ್ಲಿ ತನ್ನ ಭತ್ತದ ಗದ್ದೆಗಳಿಗೆ ನೀರಿಲ್ಲಾ ಎಂದು ತಮಿಳುನಾಡು ಆಯೋಗದ ಮುಂದೆ ಸುಳ್ಳುಸುಳ್ಳೇ ಅತ್ತಾಗ ನಿಜವನ್ನು ಅರಿಯಲು ವೈ ಕೆ ಅಲಘ್ ಸಮಿತಿ ತಂಜಾವೂರಿಗೆ ಹೋಯಿತು. ಅಲ್ಲಲ್ಲಿ ಬಾಡಿದ್ದ ಬತ್ತದ ಗದ್ದೆಗಳನ್ನು ತೋರಿಸಿ ತಮಿಳುನಾಡು ಸಮಿತಿಯನ್ನು ಅಡ್ಡದಾರಿಗೆಳೆಯುವ ಕುತಂತ್ರ ತೋರಿತು. ಆಗ ತಾವು ಮಾಡಿದ್ದೇನು? ಹೆಚ್ಚಿನವರು ಮರೆತಿರಬಹುದು. ನಾನು ಮರೆತಿಲ್ಲ. ನೀರಾವರಿ ಇಲಾಖೆಯ ಇಂಜಿನೀಯರುಗಳನ್ನು ತಾವು ಗುಟ್ಟಾಗಿ ತಂಜಾವೂರಿಗೆ ಕಳಿಸಿದಿರಿ. ಅವರು ಅಯ್ಯಪ್ಪನ ಭಕ್ತರಂತೆ ವೇಷ ಧರಿಸಿ ತಮಿಳುನಾಡು ಎಲ್ಲೆಲ್ಲಿ ನೀರಿಲ್ಲ ಎಂದು ಗೋಳಿಡುತ್ತಿತ್ತೋ ಅಲ್ಲೆಲ್ಲಾ ಹೋಗಿ ಅಲ್ಲಿ ಸಾಕಷ್ಟು ನೀರಿರುವುದನ್ನು ಪತ್ತೆ ಹಚ್ಚಿದರು. ಅಷ್ಟೇ ಅಲ್ಲ, ಬತ್ತದ ಸಸಿಗಳು ಸೊಂಪಾಗಿ ನಳನಳಿಸುತ್ತಿರುವ ದೃಶ್ಯವನ್ನು ಚಿತ್ರೀಕರಿಸಿ ತಮಗೆ ತಂದೊಪ್ಪಿಸಿದರು. ತಾವು ಅವನ್ನು ಆಯೋಗದ ಮುಂದಿರಿಸಿದಾಗ ಇಡೀ ದೇಶ ಬೆರಗಾಯಿತು. ಮುಖ್ಯಮಂತ್ರಿ ಜಯಲಲಿತಮ್ಮನಿಂದ ಹಿಡಿದು ನನ್ನ ತಮಿಳು ಗೆಳೆಯರವರೆಗೆ ಎಲ್ಲರೂ ಗಪ್ಚಿಪ್! ಏನು ಮಾಡಿದರೂ ಕಾವೇರಿ ಸುದ್ದಿ ಎತ್ತಲೇ ಒಲ್ಲರು! ನನಗಾಗ ಅದೆಷ್ಟು ನೆಮ್ಮದಿಯೆನಿಸಿತ್ತು ಗೊತ್ತೇ ಗೌಡರೇ?

ಹೀಗೆ ತಮಿಳುನಾಡಿನ ಕಳ್ಳಾಟಗಳನ್ನು ಚಾಕಚಕ್ಯತೆಯಿಂದ ಬಯಲುಗೊಳಿಸಿದ ಕರ್ನಾಟಕದ ಏಕೈಕ ಮುಖ್ಯಮಂತ್ರಿ ತಾವು. ಬಂಗಾರಪ್ಪನವರು ಹೆಂಡ ಕುಡಿದಂತೆ ತಿಕ್ಕಲುತಿಕ್ಕಲಾಗಿ ವರ್ತಿಸಿ, ಕೃಷ್ಣ ಅವರು ಹೊರಗೇನೋ ಹೇಳಿಕೊಂಡು ಒಳಗೊಳಗೇ ನೀರು ಬಿಟ್ಟು ನನ್ನನ್ನು ನಗೆಪಾಟಲಿಗೀಡು ಮಾಡಿದರೆ ತಾವು ಸದ್ದಿಲ್ಲದೇ ಕೆಲಸ ಸಾಧಿಸಿಬಿಟ್ಟಿರಿ ಹಾಗೂ ತಮಿಳು ಗೆಳೆಯರ ನಡುವೆ ಎದೆಯೆತ್ತಿ ನಡೆಯುವ ಒಂದು ಅವಕಾಶವನ್ನು ನನಗೆ ಒದಗಿಸಿಕೊಟ್ಟಿರಿ. ಇದಕ್ಕಾಗಿ ನಾನು ತಮ್ಮ ಬಗ್ಗೆ ಹೆಮ್ಮೆ ಪಡುತ್ತೇನೆ. ಅಷ್ಟೇ ಅಲ್ಲ, ತಾವು ಕರ್ನಾಟಕದ ಮುಖ್ಯಮಂತ್ರಿಯಾಗಿಯೇ ಇನ್ನಷ್ಟು ವರ್ಷ ಮುಂದುವರೆಯಬಾರದಿತ್ತಾ, ತಮ್ಮ ಅಧಿಕಾರಾವಧಿಯಲ್ಲೇ ಆಯೋಗದ ಅಂತಿಮ ತೀರ್ಪು ಬರಬಾರದಿತ್ತಾ ಎಂದು ನಾನು ಆಗಾಗ ಅಂದುಕೊಳ್ಳುತ್ತೇನೆ.

ಪೀಠಿಕೆ ಧೀರ್ಘವಾಯಿತು. ಇನ್ನು ವಿಷಯಕ್ಕೆ ಬರುತ್ತೇನೆ.

ಕಳೆದ ಎರಡು ವಾರಗಳಲ್ಲಿ ಕರ್ನಾಟಕದಲ್ಲಿನ ಬೆಳವಣಿಗೆಗಳ ಹಿನ್ನೆಯಲ್ಲಿ ನಾನೀಗ Poಟiಣiಛಿs ಮತ್ತು Poಟiಣiಛಿಚಿಟ ಎಂಬ ಎರಡೂ ಪದಗಳ ವ್ಯುತ್ಪತ್ತಿಯ ಬಗ್ಗೆ ತಲೆಕೆಡಿಸಿಕೊಂಡು ಕೂತಿದ್ದೇನೆ. ಮೊದಲಿಗೆ ಪಾಲಿಟಿಕ್ಸ್ ಎಂಬ ಪದ "ಠಿoಟಥಿ" ಅಂದರೆ "ಹಲವು" ಮತ್ತು "ಣiಛಿಞs" ಅಂದರೆ "ಹೇನುಗಳು" ಎಂಬ ಎರಡು ಇಂಗ್ಲಿಷ್ ಪದಗಳ ಸಂಗಮದಿಂದಾಗಿದೆಯಂತೆ. ಇನ್ನು "ಪೊಲಿಟಿಕಲ್" ಎಂಬ ಪದವಂತೂ ಅಪ್ಪಟ ಕನ್ನಡದ್ದು. "ಪೋಲಿ" ಮತ್ತು "ತಿಕ್ಕಲು" ಎಂಬ ಎರಡು ಶುದ್ಧಾಂಗ ಶುದ್ಧ ಕನ್ನಡ ಪದರತ್ನಗಳ ಸಂಗಮದಿಂದ ಈ ಪೊಲಿಟಿಕಲ್ ಪದ ಜನ್ಮ ತಾಳಿದೆಯಂತೆ. ನಮ್ಮ ರಾಜಕೀಯ ನಾಯಕರ ಮನೋಧರ್ಮ, ಸ್ವಭಾವ, ವರ್ತನೆ, ನಡತೆ, ನಡವಳಿಕೆಗಳನ್ನು ಈ ಎರಡು ಪದಗಳು ಅದೆಷ್ಟು ಢಾಳಾಗಿ ತೋರಿಸುತ್ತಿವೆ ನೋಡಿ.

ಹಲವು ಹೇನುಗಳ ಈ ಪೋಲಿ ಮತ್ತು ತಿಕ್ಕಲು ನಡತೆಗಳನ್ನು ನೀವು ನೋಡುತ್ತಲೇ ಇದ್ದೀರಿ. ಅದರ ಬಗ್ಗೆ ಮತ್ತೆ ಇಲ್ಲಿ ಕೊರೆಯುವ ಅಗತ್ಯ ನನಗೆ ಕಾಣುತ್ತಿಲ್ಲ. ಆದರೆ, ಈ ಎಲ್ಲಾ ತಿಕ್ಕಲು ಬೆಳವಣಿಗೆಗಳಿಗೆ ಕಾರಣವಾಗಿ ಜನ "ಛೆ ಛೆ" ಎಂದು ಅಸಹ್ಯಪಟ್ಟುಕೊಳ್ಳುತ್ತಿರುವ ಹೇನುಗಳಲ್ಲೊಂದು ತಮ್ಮ ಸಂತಾನ ಎಂಬ ಬಗ್ಗೆ ಮಾತಾಡೋಣ. ಸದ್ಯಕ್ಕೆ ಅಷ್ಟು ಸಾಕು.

೨೦೦೬ರಲ್ಲಿ ಏನೇನೋ ಒಳಸಂಚು ಮಾಡಿ ತಾವು ತಮ್ಮ ಸುಪುತ್ರ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಿದಿರಿ ಎಂದು ಜನ ಹೇಳುತ್ತಾರೆ. ಅದರಲ್ಲಿ ತಮ್ಮ ಪಾತ್ರವೇನೂ ಇಲ್ಲ, ಇಡೀ ಬೆಳವಣಿಗೆ ತಮಗೆ ಅನಿರೀಕ್ಷಿತ, ಕುಮಾರಸ್ವಾಮಿಯವರು ಧರಂ ಸಿಂಗ್ರನ್ನು ಅಚಾನಕ್ಕಾಗಿ ಚಿತ್ ಮಾಡಿದ ಪರಿಗೆ ತಾವು ಬೆಚ್ಚಿಬಿದ್ದಿರಿ ಎಂದು ಮೊನ್ನೆ ಯಾರೋ ಬರೆದದ್ದು ಓದಿದೆ. ಆ ಬಗ್ಗೆ ನನಗೆ ಗೊಂದಲ. ಮೂರು ವರ್ಷಗಳ ಹಿಂದೆ ಬಿಜೆಪಿಯ ಬೆಂಬಲದೊಂದಿಗೆ ಇಪ್ಪತ್ತು ತಿಂಗಳು ರಾಜ್ಯಭಾರ ಮಾಡಿದ ಕುಮಾರಸ್ವಾಮಿಯವರು ಕೊಟ್ಟ ಮಾತಿನಂತೆ ಯೆಡಿಯೂರಪ್ಪನವರಿಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡದೇ ಹೋದದ್ದರ ಹಿಂದೆ ತಾವಿದ್ದಿರಿ ಎಂಬ ಸುದ್ಧಿಯ ಬಗ್ಗೆ ನನಗೆ ಇನ್ನೂ ಅಧಿಕ ಗೊಂದಲ. ಕೊಟ್ಟ ಮಾತಿಗೆ ತಪ್ಪುವುದು ತಪ್ಪು ಎಂದು ನಂಬಿ `ಮೈತ್ರಿ'ಯ ನಿಯಮವನ್ನು ಪಾಲಿಸಲು ಮುಂದಾಗಿದ್ದ ಕುಮಾರಸ್ವಾಮಿಯವರನ್ನು ತಾವು "ಅತ್ತೂ ಕರೆದೂ" ಮಾತಿಗೆ ತಪ್ಪುವಂತೆ ಮಾಡಿಬಿಟ್ಟಿರಿ ಎಂದು ಕೇಳಿದ್ದೇನೆ.

ಈಗಿನ ಬೆಳವಣಿಗೆಗಳಲ್ಲಿ ತಮ್ಮ ಹೆಸರು "ಬಹಿರಂಗ"ವಾಗಿ ಕೇಳಿಸುತ್ತಿಲ್ಲ. ಆದರೆ ಬಿಜೆಪಿ ಬಗ್ಗಡದಲ್ಲಿ ಕುಮಾರಸ್ವಾಮಿಯವರು ಮೀನು ಹಿಡಿಯಹೊರಟಿದ್ದೇ ಎಲ್ಲ ಅವಾಂತರಕ್ಕೂ ಮೂಲ ಎಂದು ಸರಿಸುಮಾರು ಎಲ್ಲರೂ ಹೇಳುತ್ತಿದ್ದಾರೆ. ಅದು ತಮಗೂ ಗೊತ್ತೇ ಇದೆ ಅಂದುಕೊಳ್ಳುತ್ತೇನೆ. ಬಿಜೆಪಿ ಭಿನ್ನಮತೀಯರನ್ನು ಬುಟ್ಟಿಗೆ ಹಾಕಿಕೊಂಡು ಯೆಡಿಯೂರಪ್ಪನವರನ್ನು ಉರುಳಿಸಿಬಿಟ್ಟೆ ಎಂದು ಕುಮಾರಸ್ವಾಮಿಯವರು ಬೀಗುತ್ತಿದ್ದಂತೇ ಪರಿಸ್ಥಿತಿ ಅದೆಂತಹ ತಿರುವು ಪಡೆದುಬಿಟ್ಟಿತು! ಕೇಂದ್ರ ಸರಕಾರ ರಾಜ್ಯಪಾಲರ ವರದಿಯನ್ನು ಒಪ್ಪಿಕೊಂಡು ಯೆಡಿಯೂರಪ್ಪನವರನ್ನು "ನಡಿಯೂರಪ್ಪ" ಮಾಡಿಬಿಡಬಹುದೆಂದು ಅಂದುಕೊಳ್ಳುತ್ತಿದ್ದಂತೇ ಕಾಂಗ್ರೆಸ್ ಹೈಕಮ್ಯಾಂಡ್ ಬೇರೆಯೇ ದಿಕ್ಕಿನಲ್ಲಿ ಯೋಚಿಸಿತು.

ಒಂದು ವರದಿಯ ಪ್ರಕಾರ ದಕ್ಷಿಣದ ಮೊಟ್ಟಮೊದಲ ಬಿಜೆಪಿ ಸರಕಾರವನ್ನು ಚಿವುಟಿಹಾಕಲು ಒದಗಿದ ಸುವರ್ಣಾವಕಾಶವನ್ನು ಕಾಂಗ್ರೆಸ್ ಪಕ್ಕಕ್ಕಿಟ್ಟು ಸುಮ್ಮನೆ ಕುಳಿತುಕೊಳ್ಳುವುದರ ಹಿಂದೆ ಇದ್ದದ್ದು ತಮ್ಮ ಹಾಗೂ ತಮ್ಮ ಕುಟುಂಬದ ಟ್ರ್ಯಾಕ್ ರೆಕಾರ್ಡ್. ಕುಮಾರಸ್ವಾಮಿಯವರು ಧರಂ ಸಿಂಗ್ ಸರಕಾರಕ್ಕೆ ಕಾಣಿಸಿದ ಗತಿಯನ್ನು ನೆನಪಿಸಿಕೊಂಡು ಅದು "ದೇವೇಗೌಡ ಮತ್ತು ಅವರ ಪರಿವಾರದ ಜತೆ ಯಾವುದೇ ರಾಜಕೀಯ ಮೈತ್ರಿಗೆ ಮುಂದಾಗಕೂಡದು" ಎಂದು ತನ್ನ ರಾಜ್ಯಶಾಖೆಗೆ ಸೂಚನೆ ಕೊಟ್ಟಿದೆಯಂತೆ. ಕಾಂಗ್ರೆಸ್ ಹೈಕಮ್ಯಾಂಡ್ನ ಅಭಿಪ್ರಾಯದಲ್ಲಿ ತಾವು ಮತ್ತು ತಮ್ಮ ಪರಿವಾರ ನಂಬಿಕೆಗೆ ಅನರ್ಹ! ಸುಮಾರು ಐದು ದಶಕಗಳ ಸಕ್ರಿಯ ರಾಜಕಾರಣ, ಒಮ್ಮೆ ಕರ್ನಾಟಕದ ಮುಖ್ಯಮಂತ್ರಿಯ ಪದವಿ, ಒಮ್ಮೆ ರಾಷ್ಟ್ರದ ಪ್ರಧಾನಮಂತ್ರಿಯ ಪದವಿ- ಇದೆಲ್ಲವೂ ಆದನಂತರ ತಾವು ಗಳಿಸಿದ್ದು ಇಷ್ಟೇ.

ತೊಂಬತ್ತರ ದಶಕದ ಆದಿಯಲ್ಲಿ, ಕರ್ನಾಟಕದ ಮುಖ್ಯಮಂತ್ರಿಯಾಗುವುದಕ್ಕೆ ತುಸು ಮೊದಲು, ಹೆಗಡೆಯವರ ಜತೆಗಿನ ಭಿನ್ನಾಭಿಪ್ರಾಯಕ್ಕೆ ಸಂಬಂಧಿಸಿದಂತೆ ತಾವೊಂದು ಮಾತು ಹೇಳಿದ್ದಿರಿ- "ನಮ್ಮ ಬದುಕಿನ ಈ ಸಂಜೆಕಾಲದಲ್ಲಿ ನಾವು ಹೀಗೆ ಚಿಕ್ಕಮಕ್ಕಳಂತೆ ಆಡುವುದು ಬೇಡ." (ಚಿಕ್ಕಮಕ್ಕಳು ಅಬ್ಜೆಕ್ಟ್ ಮಾಡದಿದ್ದರೆ) ಇದು ಮುತ್ತಿನಂಥ ಮಾತು. ಆನಂತರ ತಾವು ಮುಖ್ಯಮಂತ್ರಿಯಾಗಿ ನಾನು ಮೇಲೆ ಉಲ್ಲೇಖಿರುವಂತೆ ಕಾವೇರಿಯ ವಿಷಯದಲ್ಲಿ ರಾಜ್ಯದ ಹಿತ ಕಾಪಾಡಲು ಶ್ರಮಿಸಿದಿರಿ, ಪ್ರಧಾನಮಂತ್ರಿಯಾಗಿ ಬಾಂಗ್ಲಾದೇಶದೊಡನೆ ಒಪ್ಪಂದ ಮಾಡಿಕೊಂಡು ಎರಡು ದಶಕಗಳ ಫರಕ್ಕಾ ವಿವಾದಕ್ಕೆ ಯಶಸ್ವಿಯಾಗಿ ಮಂಗಳ ಹಾಡಿ ರಾಷ್ಟ್ರದ ಹಿತ ಕಾಪಾಡಲು ಹೆಣಗಿದಿರಿ.

ಅದೆಲ್ಲವೂ ಆಗಿ ದಶಕವೇ ಕಳೆದು ತಾವು ಮತ್ತಷ್ಟು ಮಾಗಿದ ಮೇಲೆ ಹೀಗೆ ಚಿಕ್ಕಮಕ್ಕಳಿಗಿಂತಲೂ ಅತ್ತತ್ತಲೇ ಆಗಿಬಿಟ್ಟಿದ್ದೀರಲ್ಲ ಗೌಡರೇ?

ಪುರಿಗೆ ಸ್ವಲ್ಪ ಜಾಸ್ತಿ ಕಡಲೆ ಮತ್ತು ಇನ್ನೂ ಜಾಸ್ತಿ ಕಾರಾಸೇವೆಯನ್ನು ಬೆರೆಸಿಕೊಂಡು ತಿನ್ನುವುದು ನನಗೆ ತುಂಬಾ ಇಷ್ಟ. ಅದರಲ್ಲೂ ಈ ತಿಂಡಿಗಳು ಕೊಳ್ಳೇಗಾಲದವಾಗಿದ್ದರೆ ನನಗೆ ಸ್ವರ್ಗವೇ ಸಿಕ್ಕಿದಷ್ಟು ಖುಷಿ. ನನ್ನ ಈ ಚಪಲವನ್ನು ಅರಿತಿರುವ ನನ್ನ ಕೊಳ್ಳೇಗಾಲದ ನೆಂಟರಿಷ್ಟರು ನಾನು ಅವರ ಮನೆಗಳಿಗೆ ಹೊದಾಗಲೆಲ್ಲಾ "ಕಡಲೆಪುರಿ ಕಾರಾಸೇವೆ ಸತ್ಕಾರ"ವನ್ನು ಒಂದು ವ್ರತದಂತೆ ಪಾಲಿಸುತ್ತಾರೆ. ಒಮ್ಮೆ ಹೀಗಾಯಿತು. ಅಗಲದ ತಟ್ಟೆಯೊಂದರಲ್ಲಿ ಕಡಲೆಪುರಿ ಕಾರಾಸೇವೆಯ ಗುಡ್ಡವನ್ನು ನಿರ್ಮಿಸಿ ಮನೆಯಾಕೆ ನನ್ನ ಮುಂದಿಟ್ಟರು. ಗುಡ್ಡ ಕರಗಿಸುವ ನನ್ನ ಕಾಯಕಕ್ಕೆ ಅವರ ಇಬ್ಬರು ಪುಟ್ಟ ಮಕ್ಕಳೂ ಕೈಜೋಡಿಸಿದರು. ಹುಡುಗ ನನ್ನ ಜತೆ ಮಾತಾಡುತ್ತಾ ನಿಧಾನವಾಗಿ ತಿನ್ನುತ್ತಿದ್ದರೆ ಹುಡುಗಿ ಕಡಲೆಪುರಿಯನ್ನು ಅವೇಶದಿಂದ ಗೋರಿಗೋರಿ ಮುಕ್ಕುತ್ತಿತ್ತು. ಮಧ್ಯೆ ಮಧ್ಯೆ ನೆತ್ತಿ ಹತ್ತಿ ಜೋರಾಗಿ ಕೆಮ್ಮತೊಡಗುತ್ತಿತ್ತು. ಆಗ ಅವರಮ್ಮ ಹೇಳಿದ್ದು: "ನೀವಿಬ್ಬರೂ ತಟ್ಟೆ ಖಾಲಿ ಮಾಡುವ ಮೊದಲು ತಾನೇ ಸಾಕಷ್ಟು ತಿಂದುಬಿಡಬೇಕೆಂಬ ಆತುರ ಅವಳಿಗೆ."

ಕಳೆದ ನಾಲ್ಕು ವರ್ಷಗಳಿಗೂ ಕಡಿಮೆ ಆವಧಿಯಲ್ಲಿ ಅಧಿಕಾರದ ಆಸೆಯಿಂದ ಎರಡು ಸರಕಾರಗಳನ್ನು ಉರುಳಿಸಿ ಮೂರನೆಯದನ್ನು ಉರುಳಿಸಲು ಮುನ್ನುಗ್ಗುತ್ತಿರುವ ತಮ್ಮ ಪರಿವಾರವನ್ನು ನೋಡಿದಾಗ ನನಗೆ ಆ ಹುಡುಗಿ ಗಾಢವಾಗಿ ನೆನಪಾಗುತ್ತಾಳೆ.

ತಮ್ಮ ಸುಪುತ್ರರುಗಳನ್ನು ಒಬ್ಬೊಬ್ಬರಾಗಿ ಮುಖ್ಯಮಂತ್ರಿ ಮಾಡುವುದು ತಮ್ಮ ಕುಟುಂಬದ ಯೋಜನೆ ಎಂದು ಮೊನ್ನೆ ಒಂದುಕಡೆ ಓದಿದೆ. ಕುಮಾರಸ್ವಾಮಿಯವರ ಪಾಳಿ ಒಂದು ಸಲ ಆಗಿಹೋಗಿರುವುದರಿಂದ ಮುಂದಿನ ಸರದಿ ರೇವಣ್ಣನವರದು ಎಂದೂ ಓದಿದೆ. ಸಧ್ಯ, ಧೃತರಾಷ್ಟ್ರನಂತೆ ತಮಗೆ ನೂರು ಗಂಡುಮಕ್ಕಳಿಲ್ಲವಲ್ಲ ಅನ್ನುವುದೇ ಸಮಾಧಾನದ ವಿಷಯ.

ಇರಲಿ, ತಮ್ಮ ಮಕ್ಕಳನ್ನು ಮುಖ್ಯಮಂತ್ರಿಯಾಗಿಸಲು ತಾವು ಪ್ರಯತ್ನಿಸುವುದರಲ್ಲಿ ತಪ್ಪಿಲ್ಲ ಅಂದುಕೊಳ್ಳೋಣ. ತನ್ನ ಮಕ್ಕಳ ಅಭ್ಯುದಯಕ್ಕಾಗಿ, ಸುಖಸಂತೋಷಕ್ಕಾಗಿ ತಂದೆಯಾದವನು ಪ್ರಯತ್ನಿಸಲೇಬೇಕು. ನಮ್ಮ ಭಾರತೀಯ ಕುಟುಂಬ ವ್ಯವಸ್ಥೆಯ ಒಂದು ಬಹುಮುಖ್ಯ ಲಕ್ಷಣ ಅದು. ನೆಹರೂ, ಶೇಖ್ ಅಬ್ದುಲ್ಲಾ ಮಾಡಿದ್ದು, ಕರುಣಾನಿಧಿ, ಫರೂಕ್ ಅಬ್ದುಲ್ಲಾ ಮಾಡುತ್ತಿರುವುದೂ ಅದೇ. ಆದರೆ ಹಾಗೆ ಮಾಡುವುದರಲ್ಲಿ ಒಂದು ನೀತಿ ನಿಯಮ ಬೇಡವೇ? ಸ್ವಲ್ಪ ತಾಳ್ಮೆ ಬೇಡವೇ?

ಯೆಡಿಯೂರಪ್ಪ ಸರಕಾರವೇನೂ ಸ್ವರ್ಗದಿಂದ ಇಳಿದುಬಂದಿಲ್ಲ. ಅದೂ ನಶ್ವರವೇ. ಈಗಾಗಲೇ ಭ್ರಷ್ಟಾಚಾರದಲ್ಲಿ ಹೂತುಹೋಗಿರುವ ಅದು ತನ್ನ ಭಾರಕ್ಕೆ ತಾನೇ ಕುಸಿಯುವುದು ಖಂಡಿತ. ನಾಳೆಯೋ ಅಥವಾ ಇನ್ನೊಂದು ವರ್ಷವೋ, ಚುನಾವಣೆಗಳು ಯಾವಾಗ ನಡೆದರೂ ಬಿಜೆಪಿಗೆ ಅದು ವಾಟರ್ಲೂ ಆಗುವುದರಲ್ಲಿ ಸಂದೇಹವಿಲ್ಲ. ಗೋಹತ್ಯೆ ನಿಷೇಧದ ಬಗೆಗಿನ ಮಸೂದೆಯೊಂದೇ ಸಮಾಜದ ಒಂದು ಬಹುದೊಡ್ಡ ಭಾಗವನ್ನು ಬಿಜೆಪಿಯಿಂದ ವಿಮುಖಗೊಳಿಸಿರುವುದು ಅಂಗೈ ಹುಣ್ಣಿನಷ್ಟೇ ಸ್ಪಷ್ಟ. ಅದರ ಜತೆ ನೂರೊಂದು ಭ್ರಷ್ಟಾಚಾರ ಪ್ರಕರಣಗಳೂ ಸೇರಿಕೊಂಡು ಯೆಡಿಯೂರಪ್ಪ ಸರಕಾರವನ್ನು `ಸಹಸ್ರಾಕ್ಷ'ನನ್ನಾಗಿ ಮಾಡಿರುವುದು ಎಲ್ಲರಿಗೂ ಕಾಣುತ್ತಲೇ ಇದೆ. ಗಣಿಧಣಿಗಳ ನೋಟಿನ ಕಂತೆಗಳು ಅದೆಷ್ಟು ಗಾಯಗಳಿಗೆ ಮುಲಾಮು ಹಚ್ಚಲು ಸಾಧ್ಯ? ಅವರಾದರೂ ಎಷ್ಟು ದಿನದವರೆಗೆ ಹಚ್ಚುತ್ತಾ ಕೂರುತ್ತಾರೆ?

ಅಲ್ಲಿಯವರೆಗೆ ತಾಳ್ಮೆಯಿಂದ ಕಾದಿದ್ದರೆ ತಮಗೆ, ತಮ್ಮ ಸುಪುತ್ರರುಗಳಿಗೆ ಒಳ್ಳೆಯ ದಿನಗಳು ಬರುತ್ತಿದ್ದುವೇನೋ. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ತಮ್ಮ ಸುಪುತ್ರರುಗಳ ಚಟುವಟಿಕೆಗಳು ಮತ್ತು ಅದಕ್ಕೆ ತಮ್ಮ `ಪ್ರೋತ್ಸಾಹ'ಗಳಿಂದಾಗಿ ತಮ್ಮ ಪಕ್ಷದ ಗತಿ ಅಧೋಗತಿಯಾಗಿರುವುದಂತೂ ನಿಜ. ಬಿಜೆಪಿಯಿಂದ ದೂರವಾದ ಜನ ಕಾಂಗ್ರೆಸ್ನತ್ತ ಮುಖ ಮಾಡುತ್ತಿದ್ದಾರೆಯೇ ಹೊರತು ಜೆಡಿಎಸ್ ಕಡೆಗಲ್ಲ.

ಅತಿಬುದ್ಧಿವಂತಿಕೆಯಿಂದಾಗಿ ತಮ್ಮ ಪರಿವಾರ ಸಾಧಿಸಿದ್ದು ಇಷ್ಟು, ಅದೂ "ನಮ್ಮ ಬದುಕಿನ ಈ ಸಂಜೆಕಾಲದಲ್ಲಿ..." ಎಂಬ ಜ್ಞಾನೋದಯವಾಗಿ ಒಂದೂವರೆ ದಶಕಗಳು ಸರಿದ ನಂತರ!

ಇದನ್ನು "ಬೆಳವಣಿಗೆ" ಎಂದು ಕರೆಯಲಾಗುತ್ತದೆಯೇ ಗೌಡರೇ?

ಸಧ್ಯಕ್ಕೆ ತಾವೂ ತಮ್ಮ ಪರಿವಾರ ಏನೂ ಮಾಡದೇ `ಒಳ್ಳೆಯ ಹುಡುಗ'ರಂತೆ ಕೈಕಟ್ಟಿಕೊಂಡು ಬಾಯಿ ಮೇಲೆ ಬೆರೆಳಿಟ್ಟುಕೊಂಡು ಕೂರುವುದೇ ಆಗಿರುವ ಅನಾಹುತವನ್ನು ತಡೆಯುವ ಅತ್ಯುತ್ತಮ ಮಾರ್ಗ ಎಂದು ನನ್ನ ಪ್ರಾಮಾಣಿಕ ಅಭಿಪ್ರಾಯ. ಕುಮಾರಸ್ವಾಮಿಯವರು ಬಿಡದಿಯಲ್ಲಿನ ರೆಸಾರ್ಟ್ ಒಂದರಲ್ಲಿ ಕೂತುಕೊಂಡು ಏನೇನೋ ಮಾಡುತ್ತಿದ್ದಾರಂತೆ. ಅಲ್ಲಾ ಗೌಡರೇ, ಬಿಡದಿಯ ಸ್ಥಳಮಹಿಮೆ ಅಷ್ಟೇನೂ ಒಳ್ಳೆಯದಲ್ಲ ಎನ್ನುವುದು ತಮಗೆ ತಿಳಿಯದೇ? ಅದ್ಯಾರೋ ಸ್ವಾಮಿ ಇರುವುದೂ ಆ ಬಿಡದಿಯಲ್ಲೇ ಅಲ್ಲವಾ? ಅವರ ಜತೆ ಒಬ್ಬಳು ತಮಿಳು ನಟಿಯೂ ಇದ್ದಳೆಂದು ಸುದ್ದಿ ಕೇಳಿದ್ದು ಸುಳ್ಳೇ ಗೌಡರೇ? ಹೀಗಿರುವಾಗ ತಮ್ಮ ಸುಪುತ್ರರನ್ನು ಅಲ್ಲಿರಲು ಬಿಟ್ಟು ತಾವು ತಪ್ಪು ಮಾಡುತ್ತಿದ್ದೀರಿ ಎಂದು ನನಗನಿಸುತ್ತದೆ. ಕುಮಾರಸ್ವಾಮಿಯವರನ್ನು ಆದಷ್ಟು ಬೇಗನೆ ಅಲ್ಲಿಂದ ಕರೆಸಿಕೊಳ್ಳಿ. ಮನೆಯಲ್ಲಿ ಹರಿವಾಣದ ತುಂಬಾ ಮಟನ್ ಸಾರಿನ ಜತೆ ಗಡದ್ದಾಗಿ ನಾಕೈದು ರಾಗಿಮುದ್ದೆ ಬಾರಿಸಿ ಕಂಬಳಿ ಹೊದ್ದುಕೊಂಡು ನಾಕು ದಿನ ಪಟ್ಟಾಗಿ ನಿದ್ದೆ ಹೊಡೆ ಕುಮಾರ ಎಂದು ಹೇಳಿ. ನನ್ನ ಮಾತನ್ನು ನಿರ್ಲಕ್ಷಿಸಬೇಡಿ.



ಸಧ್ಯಕ್ಕೆ ಇಷ್ಟು ಸಾಕು. ಅಥವಾ, ತಿಳಿದವರಿಗೆ ಹೆಚ್ಚು ಹೇಳಲು ನಾನು ಶಕ್ತನಲ್ಲ.



ಇಂತಿ



ಪ್ರೇಮಶೇಖರ



೨೧ - ೧೦ - ೨೦೧೦

2 comments:

  1. ದೇವೇಗೌಡರು ಕಾವೇರಿ ಪ್ರಸಂಗ ನಿಭಾಯಿಸಿದ ರೀತಿ ತುಂಬ ಹಿಡಿಸಿತು.
    ಮಣ್ಣಿನ ಮಗ ಮಾತ್ರ ಇಂಥ ಜಾಣ್ಮೆ ತೋರಬಲ್ಲ.

    ತಮ್ಮ ಕುಟುಂಬಪ್ರೇಮದಷ್ಟೇ ಪ್ರೀತಿಯನ್ನು ನಾಡು ದೇಶಗಳ ಬಗ್ಗೆಯೂ ಇಟ್ಟು, ಭ್ರಷ್ಟತೆಯನ್ನು ಸ್ವಲ್ಪ ಕಡಿಮೆ ( ರಾಜಕೀಯಕ್ಕೆಷ್ಟು ಬೇಕೋ ಅಷ್ಟೇ) ಮಾಡಿದ್ದಿದ್ದರೆ ಇವತ್ತಿಗೂ ಅಧಿಕಾರದಲ್ಲಿರಬಹುದಾಗಿತ್ತೋ ಏನೋ.

    ಅತಿ ಆಸೆ ಗತಿಗೇಡು.

    - ಶ್ರೀ ಕರ್

    ReplyDelete
  2. >>>>>
    ನೀವು ಸಂಪದದ ಶ್ರೀಕರ್ ಅವರ ಎಂದುಕೊಂಡಿರುವೆ...!!

    ಚೆರ್ರಿ ಪ್ರೇಂ ಅವರೇ
    ದೇವೇಗೌಡ ಅವರು ಕಾವೇರಿ ಸಮಸ್ಯೆ ಹಿಂದೊಮ್ಮೆ ನಿವಾರಿಸಿದ ರೀತಿ ಏಳೂ ಓದಿರಲಿಲ್ಲ ಕೇಳಿರಲೂ ಇಲ್ಲ... ಅವರ ಬಗ್ಗೆ ಒಳ್ಳೆ ಬರಹ...
    ಕೆಲವು ಸಾಲುಗಳು ಓದಿ ಬಿದ್ದು ಬಿದ್ದು ನಕ್ಕೆ.ನನ್ನ ಊಹೆ ನಿಜವಾದ್ರೆ ಅದು ಬರೆಯುವಾಗ ನೀವೂ ಬಿದ್ದು ಬಿದ್ದು ನಕ್ಕಿರಬಹ್ದು..!!
    ನೀವು ಕಥೆ ಕಾದಂಬರಿ -ಕವನ ಬರೆಯುವಲ್ಲಿ ಸೂಪರ್ ಎಂದು ಗೊತ್ತಿತ್ತು ಆದ್ರೆ ಈ ತರಹದ ಬರಹಗಳಲ್ಲೂ ಎಂದು ತಿಳಿದು ಖುಷಿ...ಆಯ್ತು..ಈ ತರಹದ ಬರಹಗಳನ್ನು ಎದುರು ನೋಡುವೆ..
    ದೇವೇಗೌಡರು ಇದನ್ನು ಓದಿರಲಿಕ್ಕಿಲ್ಲ ನಿಮಗೆ ರಿಪ್ಲೆ ಮಾಡಿರಲಿಕ್ಕಿಲ್ಲ...!

    ಶುಭವಾಗಲಿ..

    \|/

    ReplyDelete