ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Sunday, July 24, 2011

ಲೇಖನ- ಲಾಡೆನ್ ಅಂತ್ಯ: ಅಂತ್ಯ ಕಾಣದ ಆತಂಕ





ಮೇ ಮೆಲ್ಲಮೆಲ್ಲಗೆ ಮೈತೆರೆದುಕೊಳ್ಳುತ್ತಿದ್ದಂತೇ ಉತ್ತರ ಪಾಕಿಸ್ತಾನದ ಅಬ್ಬೊಟಾಬಾದ್ ಪಟ್ಟಣದಲ್ಲಿ ವಿಶ್ವದ "most wanted terrorist" ಒಸಾಮಾ ಬಿನ್ ಲಾಡೆನ್ ಅಂತ್ಯವಾದದ್ದು ಈಗ ಹಳೆಯ ಕಥೆ.  ಕಥೆಯ ಹಿಂದಿದ್ದ ತಮ್ಮ ದಶಕದ ವ್ಯಥೆಯೂ ಅಂದು ಅಂತ್ಯವಾಯಿತು ಎಂಬ ಅಮೆರಿಕನ್ನರ ಸಂಭ್ರಮಕ್ಕೆ ಸಕಾರಣಗಳಿದ್ದವು.
ದಶಕದ ಹಿಂದೆ ಸೆಪ್ಟೆಂಬರ್ ೧೧ರ ಮಂಗಳವಾರದ ನಿರ್ಣಾಯಕ ಬೆಳಗಿನಲ್ಲಿ ಕೇವಲ ಪ್ರಯಾಣಿಕರ ವಿಮಾನಗಳನ್ನೇ ಅಸ್ತ್ರಗಳನ್ನಾಗಿ ಬಳಸಿ ಹಿಂದಿನ ಯಾವುದೇ ಶತ್ರುಗಳಾದ ಜಪಾನ್, ಜರ್ಮನಿ, ಸೋವಿಯೆತ್ ಯೂನಿಯನ್ಗಳು ಎಸಗಲಾಗದಿದ್ದಷ್ಟು ಹಾನಿಯನ್ನು ಅಮೆರಿಕಾಗೆ ಎಸಗಿ ಅದರ ಅಧ್ಯಕ್ಷ ಹಲವಾರು ಗಂಟೆಗಳ ಕಾಲ ಅಡಗಿಕೊಳ್ಳುವಂತೆ ಮಾಡಿದ ಅಲ್ ಖಯೀದಾ ಅಮೆರಿಕನ್ನರಲ್ಲಿ ಬಿತ್ತಿದ್ದು ಅತೀವ ಭೀತಿ.  ಭೀತಿ ಆಕ್ರೋಶವಾಗಿ ಬದಲಾಗಿ ಸೇಡಿಗಾಗಿ ಹಾತೊರೆದ ಅಮೆರಿಕಾ ಒಂಬತ್ತೂವರೆ ವರ್ಷಗಳ ಸತತ ಕಾರ್ಯಾಚರಣೆಯ ನಂತರ ತನ್ನ ಮೇಲಾದ ಧಾಳಿಯ ರೂವಾರಿಯನ್ನು, ರಿಪಬ್ಲಿಕನ್ ನಾಯಕರೊಬ್ಬರ ಮಾತಿನಲ್ಲಿ ಹೇಳುವುದಾದರೆ, "...ಆತನ ಸೃಷ್ಟಿಕರ್ತನ ಬಳಿಗೆ ಕಳುಹಿಸಿತು."
ಅಮೆರಿಕಾ ಸೇಡಿಗಾಗಿ ಹಾತೊರೆದದ್ದು ಅರ್ಥಹೀನ ಎಂದು ವಾದಿಸಿ ಅಲ್ ಖಯೀದಾ ವಿಶ್ವ ಹಿಂದೆಂದೂ ಕಂಡರಿಯದ ಮಟ್ಟದ ವಿಧ್ವಂಸಕ ಸಂಘಟನೆಯಾಗಿ ಬೆಳೆಯುವುದಕ್ಕೆ ಅಮೆರಿಕಾದ ಸಂಕುಚಿತ ನೀತಿಯನ್ನೇ ದೂಷಿಸಬೇಕಾಗುತ್ತದೆ.  ಕಾಬೂಲ್ನಲ್ಲಿನ ತನ್ನ ಕೈಗೊಂಬೆ ಬಬ್ರಾಕ್ ಕರ್ಮಾಲ್ ಸರಕಾರವನ್ನು ಕಾಪಾಡಲು ೧೯೭೯ರ ಡಿಸೆಂಬರ್ನಲ್ಲಿ ಅಫಘಾನಿಸ್ತಾನವನ್ನು ಪ್ರವೇಶಿಸಿದ ಸೋವಿಯೆತ್ ಸೇನೆಯನ್ನು ಅಲ್ಲಿಂದ ಕಾಲ್ತೆಗೆಯುವಂತೆ ಮಾಡಲು ಅಮೆರಿಕಾ ಬಳಸಿಕೊಂಡದ್ದು ಇಸ್ಲಾಮನ್ನು.  ಧರ್ಮವೇ ಇಲ್ಲದ ಕಮ್ಯೂನಿಸ್ಟರನ್ನು ಅಫಘಾನಿಸ್ತಾನದಲ್ಲಿ ಇರಗೊಟ್ಟರೆ ಅವರು ದೇಶದಲ್ಲಿ ಇಸ್ಲಾಮನ್ನೇ ನಾಶ ಮಾಡಿಬಿಡುತ್ತಾರೆ, ಇಸ್ಲಾಂ ಉಳಿಯಬೇಕಾದರೆ ರಶಿಯನ್ನರು ಅಫಘಾನಿಸ್ತಾನದಿಂದ ಕಾಲ್ತೆಗೆಯುವಂತೆ ಮಾಡಲೇಬೇಕು ಎಂದು ಅಮೆರಿಕಾ ವಾದಿಸಿದಾಗ ಅದನ್ನು ಒಪ್ಪಿ ಇಸ್ಲಾಮನ್ನು ಉಳಿಸುತ್ತಿದ್ದೇವೆ ಎಂಬ ನಂಬಿಕೆಯಲ್ಲಿ ದೂರದೂರದ ದೇಶಗಳಿಂದ ಅಫಘಾನಿಸ್ತಾನಕ್ಕೆ ಬಂದವರಲ್ಲಿ ಒಸಾಮಾ ಬಿನ್ ಲಾಡೆನ್ ಸಹಾ ಒಬ್ಬ.  ಒಂಬತ್ತು ವರ್ಷಗಳ ಯುದ್ಧದ ನಂತರ ೧೯೮೮ರಲ್ಲಿ ಸೋವಿಯೆತ್ ಸೇನೆ ಕೊನೆಗೂ ಅಫಘಾನಿಸ್ತಾನದಿಂದ ಕಾಲ್ತೆಗೆದಾಗ ಯುದ್ಧದಿಂದ ಜರ್ಝರಿತವಾಗಿದ್ದ ನತದೃಷ್ಟ ದೇಶವನ್ನು ಹೇಗಿತ್ತೋ ಹಾಗೇ ಬಿಟ್ಟು ಅಮೆರಿಕನ್ನರು ಓಡಿಹೋದರು.  ಅಮೆರಿಕನ್ನರಿಗೆ ಇಸ್ಲಾಮಿನ ಮೇಲೆ ಯಾವ ಪ್ರೀತಿಯೂ ಇಲ್ಲ, ಅವರು ಅಫಘಾನಿಸ್ತಾನದಲ್ಲಿ ಕಾರ್ಯನಿರತರಾಗಿದ್ದದ್ದು ಇಸ್ಲಾಮನ್ನು ಉಳಿಸಲೆಂದಲ್ಲ, ಬದಲಾಗಿ ರಶಿಯನ್ನರು ಹಿಂದೂ ಮಹಾಸಾಗರದತ್ತ ಮುನ್ನುಗ್ಗದಂತೆ ತಡೆದು ತನ್ಮೂಲಕ ವಲಯದಲ್ಲಿ ತಮ್ಮ ಸೈನಿಕ ಪ್ರಭಾವಕ್ಕೆ ಯಾವ ಧಕ್ಕೆಯೂ ಆಗದಂತೆ ನೋಡಿಕೊಳ್ಳುವ ಸ್ವಾರ್ಥಪರ ಹುನ್ನಾರದಿಂದ ಎಂಬುದು ಆಗ ಲಾಡೆನ್ಗೆ ಅರಿವಾಯಿತು.  ವಾಸ್ತವವಾಗಿ ಇಸ್ಲಾಮಿನ ಹೆಸರು ಹೇಳಿಕೊಂಡು ಅಮೆರಿಕಾ ತನ್ನ ಬೇಳೆ ಬೇಯಿಸಿಕೊಂಡಿತ್ತು, ಅದಕ್ಕೆ ಸಹಕರಿಸಿ ತಾನು ಮೂರ್ಖನಾದೆ ಎಂಬ ಜ್ಞಾನೋದಯವಾದದ್ದೇ ಆತ ಅಮೆರಿಕಾದ ವಿರುದ್ಧ ತಿರುಗಿಬಿದ್ದು ಅಲ್ ಖಯೀದಾ ಸಂಘಟನೆಯನ್ನು ಹುಟ್ಟುಹಾಕಿದ.  ಅವನ ಅಮೆರಿಕಾದ್ವೇಷ ಆರಂಭವಾದದ್ದು ಹೀಗೆ.  ೧೯೮೮ರ ನಂತರ ಅಫಘಾನಿಸ್ತಾನದ ಪುನರ್ನಿರ್ಮಾಣಕ್ಕೆ ಅಗತ್ಯವಾದ ತಂತ್ರಜ್ಞಾನ ಹಾಗೂ ಆರ್ಥಿಕ ಸಹಕಾರವನ್ನು ನೀಡಿ ದೇಶ ಚೇತರಿಸಿಕೊಳ್ಳುವಂತೆ ಅಮೆರಿಕಾ ನೋಡಿಕೊಂಡಿದ್ದರೆ ಅಲ್ ಖಯೀದಾವಾಗಲೀ ತಾಲಿಬಾನ್ ಆಗಲಿ ತಲೆಯೆತ್ತಲು ಸಾಧ್ಯವಿರಲಿಲ್ಲ.  ಇದನ್ನು ಅರಿಯಲಾರದಷ್ಟು ಸಂಕುಚಿತ ಮನೋಭಾವದವರಾಗಿದ್ದರೇ ವೈಟ್ ಹೌಸ್ ಪ್ರಭೃತಿಗಳು ಎಂಬು ಅಚ್ಚರಿಯಾಗುತ್ತದೆ.  ಒಟ್ಟಿನಲ್ಲಿ, ಒಂಬತ್ತು ವರ್ಷಗಳ ಅಂತರ್ಯುದ್ಧ ಬಳುವಳಿಯಾಗಿತ್ತ ಹಸಿವು, ಬಡತನ, ರೋಗರುಜಿನ, ಅನಕ್ಷರತೆ, ನಿರುದ್ಯೋಗಗಳಲ್ಲಿ ನರಳಲು ಅಫ್ಘನ್ ಜನತೆಯನ್ನು ಬಿಟ್ಟು, ದೇಶ ಮೂಲಭೂತವಾದಕ್ಕೆ ಫಲವತ್ತಾದ ನೆಲವಾಗುವುದನ್ನು ಮನಗಾಣದೇ ಮುಖ ತಿರುಗಿಸಿಕೊಂಡು ಓಡಿಹೋದ ಅಮೆರಿಕಾ  "ಜಗತ್ತಿನ ದೊಡ್ಡಣ್ಣ" ಎಂಬ ಉಪಾಧಿಗೆ ತಕ್ಕ ಜವಾಬ್ದಾರಿಯುತ ನಡವಳಿಕೆಯನ್ನು ಪ್ರದರ್ಶಿಸಲಿಲ್ಲ ಎನ್ನುವುದು ವಿಷಾದದ ಸಂಗತಿ.
ನಂತರವೂ ಸಹಾ ವಲಯದಲ್ಲಿನ ಬೆಳವಣಿಗೆಗಳ ಬಗ್ಗೆ, ಅವುಗಳಿಂದ ತನಗೂ, ವಿಶ್ವಕ್ಕೂ ತಗುಲಬಹುದಾದ ದುರಂತಗಳ ಬಗ್ಗೆ ಅಮೆರಿಕಾ ದಿವ್ಯ ನಿರ್ಲಕ್ಷ ತೋರಿತು.  ಕಮ್ಯೂನಿಸ್ಟೋತ್ತರ ಅಫಘಾನಿಸ್ತಾನದಲ್ಲಿ ಎರಡೇ ವರ್ಷಗಳಲ್ಲಿ ಪತನಗೊಂಡ ಶಿಬ್ಗತುಲ್ಲಾ ಮುಜಾದೀದಿ ಸರಕಾರ; ರಾಜಕೀಯ ಸ್ಥಿರತೆ ಸಾಧಿಸಲಾಗದ ಬಲಹೀನ ಬುರ್ಹಾನುದ್ದೀನ್ ರಬ್ಬಾನಿ ಸರಕಾರ; ಪಖ್ತೂನ್ ನಾಯಕ ಗುಲ್ಬುದ್ದೀನ್ ಹೆಕ್ಮತ್ಯಾರ್, ಉಝ್ಬೇಗ್ ನಾಯಕ ಜನರಲ್ ದೋಸ್ತುಂ ಮತ್ತು ತಾಜಿಕ್ ನಾಯಕ ಅಹ್ಮದ್ ಷಾ ಮಾಸೂದ್ ನಡುವೆ ಉಲ್ಬಣಗೊಂಡ ವೈಷಮ್ಯ; ಅದರಿಂದಾದ ಅರಾಜಕತೆ ಪಾಕಿಸ್ತಾನದ ಹಸ್ತಕ್ಷೇಪಕ್ಕೆ ಅವಕಾಶ ಮಾಡಿಕೊಟ್ಟದ್ದು; ಅದು ಪ್ರತಿಗಾಮಿ ತಾಲಿಬಾನನ್ನು ಹುಟ್ಟುಹಾಕಿ ತನ್ನ ಕೈಗೊಂಬೆಯಾಗಿರಿಸಿಕೊಂಡದ್ದು; ಬೆಳವಣಿಗೆಗಳಿಂದ ವಲಯದ ರಾಜಕೀಯ ಕುದಿಯತೊಡಗಿದ್ದು- ಇದ್ಯಾವುದನ್ನೂ ಅಮೆರಿಕಾ ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ.  ಕೊನೇಪಕ್ಷ, ೧೯೯೩ರಲ್ಲಿ ವಿಶ್ವ ವ್ಯಾಪಾರ ಕೇಂದ್ರದ ಬೇಸ್ಮೆಂಟ್ನಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಅಲ್ ಖಯೀದಾ ಕಾರಣವೆಂದು ಅರಿತಾಗಲಾದರೂ ಸಂಘಟನೆಗೆ ಸುಡಾನ್, ಅಫಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಸಿಗುತ್ತಿರುವ ಬೆಂಬಲವನ್ನು ಗಮನಿಸಿ ಅದನ್ನು ಹತ್ತಿಕ್ಕಲು ಪರಿಣಾಮಕಾರೀ ಕ್ರಮಗಳನ್ನು ಬಿಲ್ ಕ್ಲಿಂಟನ್ ಸರಕಾರ ಕೈಗೊಳ್ಳಬೇಕಾಗಿತ್ತು.  ಅಧ್ಯಕ್ಷ ಕ್ಲಿಂಟನ್ ತನ್ನ ಮೊದಲ ಆವಧಿಯಲ್ಲಿ (೧೯೯೩-೯೬) ವಿದೇಶ ನೀತಿಯನ್ನು ನಿರ್ಲಕ್ಷಿಸಿ ಕೇವಲ ಆರ್ಥಿಕ ಹಿಂಜರಿತವನ್ನು ತಡೆಗಟ್ಟುವುದರಲ್ಲೇ ಮಗ್ನರಾಗಿಬಿಟ್ಟರು.  ತನ್ನ ಎರಡನೇ ಆವಧಿಯಲ್ಲಿ ಆತ ಎಚ್ಚತ್ತುಕೊಳ್ಳುವ ಹೊತ್ತಿಗೆ ಪರಿಸ್ಥಿತಿ ಕೈಮೀರಿ ಹೋಗಿತ್ತು.  ಅಲ್ ಖಯೀದಾ ಅಪಾಯಕಾರಿ ಮಟ್ಟಕ್ಕೆ ಬೆಳೆದಿತ್ತು ಮತ್ತು ಅದಕ್ಕೆ ತಾಲಿಬಾನಿ ಅಫಘಾನಿಸ್ತಾನದಲ್ಲಿ ಭದ್ರ ನೆಲೆ ಸಿಕ್ಕಿತ್ತು.  ೧೯೯೮ರ ಆಗಸ್ಟ್ನಲ್ಲಿ ಪೂರ್ವ ಆಫ್ರಿಕಾದ ದಾರ್ ಎಸ್ ಸಲಾಂ ಮತ್ತು ನೈರೋಬಿಗಳಲ್ಲಿನ ಅಮೆರಿಕನ್ ದೂತಾವಾಸಗಳ ಮೇಲೆ ಧಾಳಿಯೆಸಗಿದ ಅಲ್ Sಯೀದಾ ಎರಡು ವರ್ಷಗಳ ನಂತರ ಅಕ್ಟೋಬರ್ ೨೦೦೦ದಲ್ಲಿ ಯೆಮೆನ್ ಏಡನ್ ಬಂದರಿನಲ್ಲಿ ಲಂಗರು ಹಾಕಿದ್ದ ಅಮೆರಿಕನ್ ನೌಕೆ "ಯುಎಸ್ಎಸ್ ಕೋಲ್" ಮೇಲೆ ಧಾಳಿ ನಡೆಸಿ ಒಂದು ತಿಂಗಳಿಗೂ ಕಡಿಮೆ ದೂರದಲ್ಲಿದ್ದ ಅಮೆರಿಕನ್ ಅಧ್ಯಕ್ಷೀಯ ಚುನಾವಣೆಯನ್ನು ಕುದಿಯುವ ಮಟ್ಟಕ್ಕೆ ಬಿಸಿಯೇರಿಸಿತು.  ಒಂದು ಅರ್ಥದಲ್ಲಿ ಧಾಳಿ ಚುನಾವಣೆಗಳಲ್ಲಿ ಜಯದ ನಿರೀಕ್ಷೆ ಇಲ್ಲದ, ಅಧಿಕಾರ ತ್ಯಜಿಸಲು ಸಿದ್ಧರಾಗುತ್ತಿದ್ದ ಬಿಲ್ ಕ್ಲಿಂಟನ್ಗೆ ಅಲ್ ಖಯೀದಾ ನೀಡಿದ ಫೇರ್ವೆಲ್ ಗಿಫ್ಘ್.
ಅಲ್ ಖಯೀದಾ ಬೆಳೆದ ಬಗೆ ಒಂದು ತಲೆಮಾರಿನ ಬೇಜವಾಬ್ದಾರಿ ವರ್ತನೆಗೆ ಮುಂದಿನ ತಲೆಮಾರು ತೆರಬೇಕಾದ ಭೀಕರ ಬೆಲೆಗೆ ಒಂದು ಉದಾಹರಣೆ.
/೧೧ರ ಧಾಳಿಯ ನಂತರ ಎಚ್ಚತ್ತುಕೊಂಡ ಅಮೆರಿಕಾ, ಅಫಘಾನಿಸ್ತಾನ ಮತ್ತು ಇರಾಕಿನಲ್ಲಿ ಕೈಗೊಂಡ ಮಿಲಿಟರಿ ಕಾರ್ಯಾಚರ್ಣೆಗಳು ತನ್ನ ಹಿಂದಿನ ಎಲ್ಲಾ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ವಾಷಿಂಗ್ಟನ್ ಗಡಿಬಿಡಿಯಲ್ಲಿ ಕೈಗೊಂಡ ಕ್ರಮಗಳಂತೆ ಕಂಡವು.  ಗಡಿಬಿಡಿಯಲ್ಲಿ ಮಾಡುವ ಯಾವುದೇ ಕೆಲಸವೂ ಪರಿಣಾಮಕಾರಿಯಾಗಿರುವುದಿಲ್ಲ ಎನ್ನುವುದಕ್ಕೆ ಉದಾಹರಣೆಯಂತೆ ಕಾರ್ಯಚರಣೆಗಳು ವಿಶ್ವದ ಕಣ್ಣಿಗೆ ಕಾಣತೊಡಗಿ ಅವುಗಳಿಗೆ ಎಲ್ಲೆಡೆ ವಿರೋಧ ಹೊಗೆಯಾಡತೊಡಗುತ್ತಿದ್ದಂತೇ ಅಮೆರಿಕನ್ನರು ಲಾಡೆನ್ನನ್ನು ಪತ್ತೆಹಚ್ಚಿ ಮುಗಿಸಿಬಿಟ್ಟು ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ.
ಪರಿಣಾಮದ ದೃಷ್ಟಿಯಿಂದ ನೋಡುವುದಾದರೆ ಹತ್ಯೆ ಅಮೆರಿಕಾ ಹಾಗೂ ಅಲ್ ಖಯೀದಾ ಎರಡಕ್ಕೂ ಸಾಂಕೇತಿಕವಷ್ಟೇ.  ತನ್ನ ಪರಮ ವೈರಿಯನ್ನು ಹತ್ಯೆಗೈಯುವುದರಿಂದ ಅಮೆರಿಕಾಗೆ ದೊಡ್ಡ ಲಾಭವೇನೂ ಆಗಿಲ್ಲ.  ತಾನು ಅಮೆರಿಕಾಗೆ ಎಸಗಬಹುದಾದ ಹಾನಿಯನ್ನು ಲಾಡೆನ್ ಸೆಪ್ಟೆಂಬರ್ ೧೧, ೨೦೦೧ರಂದೇ ಮಾಡಿ ಮುಗಿಸಿದ್ದಾನೆ.  ಬೃಹತ್ ಸೈನಿಕ ಶಕ್ತಿಯನ್ನು ಹೊಂದಿದ್ದ ಅಮೆರಿಕಾದ ಹಿಂದಿನ ಯಾವ ಶತೃಗಳೂ ಎಸಗಲಾಗದ ಹಾನಿಯನ್ನು ಅವನು ಮಾಡಿದ್ದಾನೆ.  ಕಳೆದ ಒಂಬತ್ತೂವರೆ ವರ್ಷಗಳಲ್ಲಿ ಅಮೆರಿಕಾ ತನ್ನ ರಕ್ಷಣೆಗೆಗಾಗಿ ತೆಗೆದುಕೊಂಡ ಅಭೂತಪೂರ್ವ ಕ್ರಮಗಳು ಮತ್ತು ಅಲ್ ಖಯೀದಾ ಮತ್ತದರ ಸಹಯೋಗಿಗಳ ಮೇಲೆ ಹೇರಿದ ಒತ್ತಡಗಳಿಂದಾಗಿ ದೇಶದ ಮೇಲೆ ಮತ್ತೊಂದು ದೊಡ್ಡ ಧಾಳಿಯನ್ನೆಸಗುವುದು ಲಾಡೆನ್ಗೆ ಸಾಧ್ಯವೇ ಇರಲಿಲ್ಲ.  ಜತೆಗೇ ಮೂತ್ರಪಿಂಡದ ತೊಂದರೆಯಿಂದಾಗಿ ತೀವ್ರ ಅಸ್ವಸ್ತನಾಗಿದ್ದ ಅವನು ಇಂದೋ ನಾಳೆಯೋ ತಾನಾಗಿಯೇ ಇಹಲೋಕ ತ್ಯಜಿಸುವ ಸಿದ್ಧತೆಯಲ್ಲಿದ್ದ.  ಹೀಗಾಗಿ ಲಡಕಾಸಿ ಲಾಡೆನ್ನನ್ನು ಕೊಂದು ಅಮೆರಿಕಾ ಗಳಿಸಿದ್ದು ಪರಮಶತೃವನ್ನು ಭೌತಿಕವಾಗಿ ಇಲ್ಲವಾಗಿಸುವಲ್ಲಿ ಕೊನೆಗೂ ಯಶಸ್ವಿಯಾದ ಸಮಾಧಾನ ಅಷ್ಟೇ.
ಅಲ್ ಖಯೀದಾದ ಬಗ್ಗೆ ಹೇಳುವುದಾದರೆ, ತೀವ್ರ ಒತ್ತಡಕ್ಕೆ ಸಿಕ್ಕಿದ್ದ ಭಯೋತ್ಪಾದಕ ಗುಂಪಿನ ಮೇಲೆ ಲಾಡೆನ್ ಹತೋಟಿ ಎಷ್ಟು ಉಳಿದಿತ್ತು ಎಂದು ನಿಖರವಾಗಿ ಹೇಳಲಾಗದಿದ್ದರೂ ಅದು ಸಾಕಷ್ಟು ಕುಂದಿತ್ತು ಎಂಬುದು ನಿಜ.  ಅವನಿಲ್ಲದೆಯೂ ಸಂಘಟನೆ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ಸ್ಥಿತಿ ತಲುಪಿತ್ತು.  ಹೀಗಾಗಿ ಲಾಡೆನ್ ಹತ್ಯೆ ಅಲ್ ಖಯೀದಾಗೆತುಂಬಲಾಗದ ನಷ್ಟವೇನಲ್ಲ.  ಅಲ್ ಖಯೀದಾವನ್ನು ಭಾದಿಸುವುದು ವೈರಿಯ ಧಾಳಿಯಲ್ಲಿ ಸ್ಥಾಪಕ ನಾಯಕನನ್ನ್ನು ಕಳೆದುಕೊಂಡದ್ದರಿಂದಾದ ಸಾಂಕೇತಿಕ ಸೋಲಿನ ನೋವಷ್ಟೇ.
ಜೀವಂತ ಲಾಡೆನ್ಗಿಂತಲೂ ಮೃತ ಲಾಡೆನ್ ಹೆಚ್ಚು ಅಪಾಯಕಾರಿಯಾಗಬಹುದಾದ ಅಪಾಯವನ್ನು ಮನಗಂಡ ಅಮೆರಿಕಾ ಅವನ ಮೃತದೇಹದ ಅಂತ್ಯಸಂಸ್ಕಾರವನ್ನು ಸಾಗರದಲ್ಲಿ ಮಾಡಿ ಮುಗಿಸಿದೆ.  ಅವನ ಅಂತ್ಯಸಂಸ್ಕಾರಕ್ಕೆ ಯಾವ ದೇಶವೂ ನೆಲ ಕೊಡುವ ಸಾಧ್ಯತೆ ಇಲ್ಲದ್ದರಿಂದ ಹಾಗೆ ಮಾಡಬೇಕಾಯಿತೆಂದು ವಾಷಿಂಗ್ಟನ್ ವಕ್ತಾರರು ಹೇಳಿದರೂ ನೆಲದಲ್ಲಿ ಅವವ ದೇಹವನ್ನು ಹೂತರೆ ಮುಂದೊಂದು ದಿನ ಅಲ್ಲೊಂದು ಸ್ಮಾರಕ ತಲೆಯೆತ್ತಿ ಅದೊಂದು ಜನ ಸೇರುವ ಧಾರ್ಮಿಕ ಯಾತ್ರಾಸ್ಥಳವಾಗುವ, ಅಮೆರಿಕವಿರೋಧಿ ಚಟುವಟಿಕೆಗಳ ಕಾರಸ್ಥಾನವಾಗುವ ಅಪಾಯವನ್ನು ಒಬಾಮಾ ಸರಕಾರ ಮನಗಂಡಿತ್ತು.  ಯಾವ ಸಮುದ್ರದಲ್ಲಿ ಅವನ ದೇಹದ ಸಂಸ್ಕಾರ ನಡೆಯಿತೆನ್ನುವುದನ್ನೂ ಅಮೆರಿಕಾ ಗುಟ್ಟಾಗಿಟ್ಟಿದೆ.  ಸಮುದ್ರಕ್ಕೇ "ಒಸಾಮಾ ಸಮುದ್ರ" ಎಂಬ ಹೊಸ ಹೆಸರು ಬಂದುಬಿಡಬಹುದಾದ ಅಪಾಯವನ್ನು ಒಬಾಮಾ ಸರಕಾರಊಹಿಸಿ ಕ್ರಮ ಕೈಗೊಂಡಿರಬಹುದೆಂದುಊಹಿಸಲುನಮಗೆ ಸಾಕಷ್ಟು ಅವಕಾಶವಿದೆ.  ಮೃತ ಲಾಡೆನ್ ಅದೆಷ್ಟು ಅಪಾಯಕಾರಿಯಾಗಬಲ್ಲ ಎಂಬುದರ ಒಂದು ಪುಟ್ಟ ಸೂಚನೆ ಇದು.
ಲಾಡೆನ್ ಪಾಕಿಸ್ತಾನದಲ್ಲೇ, ಅದೂ ರಾಜಧಾನಿಗೆ ತೀರಾ ಹತ್ತಿರದಲ್ಲಿ ಪಾಕಿಸ್ತಾನ್ ಮಿಲಿಟರಿ ಅಕ್ಯಾಡೆಮಿಗೆ ಕೆಲವೇ ಗಜಗಳಷ್ಟು ಸನಿಹದಲ್ಲಿ ಅಡಗುದಾಣ ಹೊಂದಿದ್ದ ವಿಷಯದ ಬಗ್ಗೆ ನಾವೇನೂ ಆಶ್ಚರ್ಯ ಪಡಬೇಕಾಗಿಲ್ಲ.  ಭಯೋತ್ಪಾದನೆಯ ವಿರುದ್ಧದ ಯುದ್ಧದಲ್ಲಿ ತನ್ನ ಇಬ್ಬಂದಿ ನೀತಿಯನ್ನು ಮುಚ್ಚಿಕೊಳ್ಳಲು ದೇಶ ಅದೆಷ್ಟು ಹೆಣಗಾಡಿದರೂ ಅದು ಆಡುತ್ತಿರುವುದು ನಾಟಕ ಎಂದು ಇಡೀ ವಿಶ್ವಕ್ಕೇ ತಿಳಿದಿತ್ತು.  ಹಿನ್ನೆಲೆಯಲ್ಲಿ ಈಗ ನಾವು ಗಮನಾರ್ಹವೆಂದು ಪರಿಗಣಿಸಬಹುದಾದ ಒಂದೇ ಒಂದು ಸಂಗತಿಯೆಂದರೆ- ಅಮೆರಿಕಾವೂ ಪಾಕಿಸ್ತಾನವನ್ನು ನಂಬುತ್ತಿಲ್ಲ!  ಒಂದುಕಾಲದಲ್ಲಿ ಸಿಐಏ ಮತ್ತು ಐಎಸ್ ಸಯಾಮಿ ಅವಳಿಗಳಂತೆ ಬಿಡಿಸಲಾಗದಷ್ಟು ಅಂಟಿಕೊಂಡಿದ್ದವು.  ಆದರೀಗ ಪರಿಸ್ಥಿತಿ ಬದಲಾಗಿದೆ.  ಲಾಡೆನ್ ಹತ್ಯೆಯ ಪೂರ್ವಯೋಚನೆ ಮತ್ತು ಕಾರ್ಯಾಚರಣೆಯ ಬಗ್ಗೆ ಅಮೆರಿಕಾ ಪಾಕಿಸ್ತಾನಕ್ಕೆ ಯಾವುದೇ ಮುನ್ಸೂಚನೆ ನೀಡಿಲ್ಲ ಎಂಬ ವಾಷಿಂಗ್ಟನ್ ಹೇಳಿಕೆಗಳಲ್ಲಿ ಸತ್ಯವಿರುವುದೇ ಆದರೆ ಈಗ ಪಾಕಿಸ್ತಾನದ ಮೇಲೆ ಅಮೆರಿಕಾಗೆ ವಿಶ್ವಾಸ ಹಿಂದೆಂದಿಗಿಂತಲೂ ಕೆಳಮಟ್ಟದಲ್ಲಿದೆ ಎಂದು ತಿಳಿಯಬಹುದು.  ಇದನ್ನೇ ಇನ್ನೊಂದು ಕೋನದಿಂದ ನೋಡುವುದಾದರೆ, ಒಂದುವೇಳೆ ಪಾಕಿಸ್ತಾನಕ್ಕೆ ಸೂಚನೆ ನೀಡಿಯೇ ಅಮೆರಿಕಾ ಕಾರ್ಯಾಚರಣೆ ಕೈಗೊಂಡಿದ್ದರೆ ಅದು ಪಾಕಿಸ್ತಾನಿ ಸರಕಾರವನ್ನು ಅತೀವ ಗಂಡಾಂತರಕ್ಕೆ ತಳ್ಳಿಬಿಡುತ್ತಿತ್ತು.  ಲಾಡೆನ್ ಹತ್ಯೆಯಲ್ಲಿ ತಮ್ಮ ದೇಶವೂ ಸಹಕರಿಸಿದೆ ಎಂದು ಅಲ್ಲಿನ ಉಗ್ರಗಾಮಿ ಸಂಘಟನೆಗಳಿಗೆ ತಿಳಿದುಹೋದರೆರಾಜಾಶ್ರಯದಿಂದಾಗಿ ಅತೀವವಾಗಿ ಕೊಬ್ಬಿರುವ ಅವು ಧಾಂದಲೆಯೆಬ್ಬಿಸಿ ಇಡೀ ದೇಶವನ್ನು ಅರಾಜಕತೆಗೆ ನೂಕಿಬಿಡುವ ಅಪಾಯವಿತ್ತು.  ಸಂದರ್ಭದಲ್ಲಿ "ದಕ್ಷಿಣ ಏಶಿಯಾದ ರೋಗಿಷ್ಟ" ಪಾಕಿಸ್ತಾನದಲ್ಲಿ ಅರಾಜಕತೆ ಭುಗಿಲೆದ್ದರೆ ಅದು ಹಿಂಸಾತ್ಮಕವಾಗಿ ವಲಯದಲ್ಲಿ ಶಾಂತಿ ಮತ್ತು ಸುರಕ್ಷೆಗೆ ಭಾರಿ ಧಕ್ಕೆ ತರುತ್ತಿತ್ತು.  ಒಟ್ಟಿನಲ್ಲಿ ಲಾಡೆನ್ ಹತ್ಯೆಯ ಹಿಂದೆ ಹಲವು ವಾರಗಳಿಂದಲೂ ಅತ್ಯಂತ ಜಾಗರೂಕತೆಯಿಂದ ರೂಪಿಸಿದ ತಂತ್ರವಿದೆ.
ಪರಮವಿರೋಧಿಯನ್ನು ಕೊಂದದ್ದರ ಬಗ್ಗೆ ಸಂಭ್ರಮದಲ್ಲಿರುವ ಅಮೆರಿಕಾ ಅಜಾಗರೂಕತೆ ವಹಿಸಿದರೆ ಮುಂದಿನ ದಿನಗಳು ಮತ್ತಷ್ಟು ಅಪಾಯಕಾರಿಯಾಗಬಹುದೆಂದು ನನಗನಿಸುತ್ತದೆ.  ಈಗ ತಾತ್ವಿಕವಾಗಿ ಲಾಡೆನ್ಗಿಂತಲೂ ಕಠಿಣವಾಗಿರುವ ಅಯ್ಮೆನ್ ಅಲ್ ಜವಾಹಿರಿ ಅಲ್ ಖಯೀದಾ ನಾಯಕತ್ವ ವಹಿಸಲಿರುವುದರಿಂದ ಅಮೆರಿಕಾ ಮತ್ತು ಒಟ್ಟಾರೆ ಜಗತ್ತಿನ ಬಗ್ಗೆ ಸಂಘಟನೆಯ ದೃಷ್ಟಿಕೋನ ಉದಾರವಾಗುವುದಿಲ್ಲ.  ಇದರರ್ಥ ಅಮೆರಿಕಾವಿರೋಧಿ ಭಯೊತ್ಪಾದನೆ ಸಧ್ಯಕ್ಕೆ ತಗ್ಗಿದರೂ ಅನತಿಕಾಲದಲ್ಲೇ ಅದು ಉಗ್ರವಾಗಿ ಮರುಕಳಿಸುವ ಅಪಾಯವಿದೆ.
ಅಪಾಯವನ್ನು ಒಬಾಮಾ ಸರಕಾರ ಮನಗಂಡಿರುವ ಸಾಧ್ಯತೆ ಇದೆ.  ಹೀಗಾಗಿಯೇ ದಿನಗಳಲ್ಲಿ ಪಶ್ಚಿಮ ಮತ್ತು ಮಧ್ಯ ಏಶಿಯಾ ಬಗ್ಗೆ ಅಮೆರಿಕಾದ ವರ್ತನೆ ಹಿಂದಿನಂತೆ ಬೇಜವಾಬ್ದಾರಿ ಮತ್ತು ಸಂಪೂರ್ಣ ಸ್ವಾರ್ಥಪರವಾಗಿ ಕಾಣುತ್ತಿಲ್ಲ.  ೧೯೮೮ರಲ್ಲಿ ವರ್ತಿಸಿದಂತೆ ಅಮೆರಿಕಾ ದಿನಗಳಲ್ಲಿ ವರ್ತಿಸುತ್ತಿಲ್ಲ.  ತನ್ನ ಹಿಂದಿನ ತಪ್ಪುಗಳಿಂದ ಪಾಠ ಕಲಿತಿರುವ ಅದು ಕಳೆದ ಸೆಪ್ಟೆಂಬರಿನಲ್ಲಿ ಇರಾಕಿನಲ್ಲಿ ತನ್ನ ನೇರ ಸೈನಿಕ ಕಾರ್ಯಾಚರಣೆಯನ್ನು ನಿಲ್ಲಿಸಿದ್ದರೂ ದೇಶಕ್ಕೆ ಅಗತ್ಯವಾದ ಆರ್ಥಿಕ ಹಾಗೂ ರಾಜತಾಂತ್ರಿಕ ಸಹಕಾರವನ್ನು ನೀಡುತ್ತಲೇ ಇದೆ.  ಜತೆಗೇಇರಲಿ ಎಂದುಕೊಂಡು೫೦,೦೦೦ ಸೈನಿಕರನ್ನು ದೇಶದಲ್ಲಿಯೇ ಉಳಿಸಿದೆ.  ಇದೇ ಕೆಲಸವನ್ನು ಅದು ಅಫಘಾನಿಸ್ತಾನದಲ್ಲೂ ಮಾಡಬಹುದು.  ಹಾಗೆ ಮಾಡದೇಓಡಿಹೋದರೆ೧೯೮೮ರ ನಂತರ ಆದಂತೆ ಅಫಘಾನಿಸ್ತಾನದಲ್ಲಿ ತಾಲಿಬಾನ್ ಮತ್ತೊಮ್ಮೆ ಸಶಕ್ತವಾಗುತ್ತದೆ ಮತ್ತು ಅದರ ಜತೆ ಅಲ್ ಖಯೀದಾದ ಅದೃಷ್ಟವೂ ಖುಲಾಯಿಸುತ್ತದೆ.
ಲಾಡೆನ್ ಹತ್ಯೆ, ತದನಂತರದ ಬೆಳವಣಿಗೆಗಳ ಬಗ್ಗೆ ಭಾರತ ಎಚ್ಚರಿಕೆಯಿಂದಿರಬೇಕಾದ ಅಗತ್ಯವಿದೆ.  ಇತ್ತೀಚೆಗೆ ವಾಷಿಂಗ್ಟನ್ನಿಂದ ಹೊರಬಂದ ಒಂದು ಹೇಳಿಕೆಯ ಪ್ರಕಾರ ಭಯೋತ್ಪಾದನೆಯ ವಿಷಯದಲ್ಲಿ ಈಗ ಅಲ್ ಖಯೀದಾಗಿಂತಲೂ ಲಷ್ಕರ್ ತೋಯ್ಬಾ ಹೆಚ್ಚು ಅಪಾಯಕಾರಿ ಎಂದು ಒಬಾಮಾ ಸರಕಾರ ನಂಬುತ್ತದೆ.  ಭಾರತ ತೀವ್ರವಾಗಿ ಪರಿಗಣಿಸಬೇಕಾದ ವಿಷಯ ಇದು.  ಲಷ್ಕರ್ ಶತೃ ಅಮೆರಿಕಾ ಅಲ್ಲ.  ಅದು ಭಾರತ.  ಕಾರಣದಿಂದಾಗಿಯೇ ಪಾಕಿಸ್ತಾನ ಲಷ್ಕರ್ ಅನ್ನು ನಿರ್ಬಂಧಿಸುವ ಕೆಲಸವನ್ನು ಮಾಡುವುದಿಲ್ಲ.  ಬದಲಾಗಿ ಅದರ ಚಟುವಟಿಕೆಗಳಿಗೆ ಬೆಂಬಲ ನೀಡುತ್ತದೆ ಮತ್ತು ಅದನ್ನು ಭಾರತದ ವಿರುದ್ಧ ಒಂದು ಅಸ್ತ್ರವಾಗಿ ಬಳಸಿಕೊಳ್ಳುತ್ತದೆ.  ಅಫಘಾನಿಸ್ತಾನದಲ್ಲಿ ಅಮೆರಿಕಾದ ನೇರ ಸೈನಿಕ ಕಾರ್ಯಾಚರಣೆ ನಿಲುಗಡೆಗೆ ಬರುತ್ತಿದ್ದಂತೇ ಪಾಕಿಸ್ತಾನದ ಮೇಲಿನ ಒತ್ತಡ ಗಮನಾರ್ಹವಾಗಿ ಇಳಿದುಹೋಗುತ್ತದೆ.  ಪರಿಣಾಮವಾಗಿ ಪಾಕಿಸ್ತಾನ ತನ್ನೆಲ್ಲಾ ಗಮನವನ್ನೂ ಭಾರತದತ್ತ ತಿರುಗಿಸಲು ಅವಕಾಶವಾಗುತ್ತದೆ.
ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಒಂದು ಬಗೆಯ ಅಪಾಯಕಾರಿ ಉತ್ಸಾಹ ಭಾರತದಲ್ಲಿ ಕಾಣಬರುತ್ತಿದೆ.  ಅಮೆರಿಕನ್ ಮೇಲ್ಪಂಕ್ತಿಯನ್ನು ಅನುಸರಿಸಿ ನಾವೂ ಸಹಾ ಲಷ್ಕರ್ ಮತ್ತಿತರ ಭಾರತವಿರೋಧಿ ಉಗ್ರಗಾಮಿ ಸಂಘಟನೆಗಳ ವಿರುದ್ಧ ಕಾರ್ಯಾಚರಣೆ ಕೈಗೊಳ್ಳಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.  ಮಾತುಗಳನ್ನು ಆಡುತ್ತಿರುವವರಲ್ಲಿ ಭೂಸೇನಾ ದಂಡನಾಯಕ ಜನರಲ್ ಎಸ್. ಕೆ. ಸಿಂಗ್ರಿಂದ ಹಿಡಿದು ಮಾಜೀ ವಿದೇಶ ಸಚಿವ ಯಶ್ವಂತ್ ಸಿನ್ಹಾವರೆಗೆ ಹಲವು ಪ್ರಮುಖರಿದ್ದಾರೆ.  ಮಾಧ್ಯಮಗಳೂ ಇಂತಹ ಆಲೋಚನೆಗಳಿಗೆ ಕುಮ್ಮಕ್ಕು ನೀಡುತ್ತಿವೆ.  ಇದೊಂದು ತೀರಾ ಬೇಜವಾಬ್ದಾರಿಯ ಆಲೋಚನೆಯೆಂದು ಹೇಳದೇ ವಿಧಿಯಿಲ್ಲ.  ಇಂತಹ ಕಾರ್ಯಾಚರಣೆಗಳ ಪರಿಣಾಮಗಳ ಬಗ್ಗೆ ನಾವು ಗಂಭೀರವಾಗಿ ಯೋಚಿಸಬೇಕು.  ಅಮೆರಿಕಾದಂತೆ ಭಾರತ ಅಲ್ಲ ಮತ್ತು ವಾಸ್ತವವನ್ನು ಪಾಕಿಸ್ತಾನ ಚೆನ್ನಾಗಿ ಅರಿತಿದೆ.  ಭಾರತದಿಂದ ಹೊರಟ ಹುಮ್ಮಸ್ಸಿನ ಹೇಳಿಕೆಗಳಿಗೆ ಪಾಕಿಸ್ತಾನ ಉಗ್ರವಾಗಿ ಪ್ರತಿಕ್ರಿಯಿಸಿದೆ.  ಭಾರತವೇನಾದರೂ ಧಾಳಿ ನಡೆಸಿದರೆ ಅದರ ಪರಿಣಾಮ ಭೀಕರವಾಗಿರುತ್ತದೆ ಎಂದು ಅಲ್ಲಿನ ಸೇನಾ ನಾಯಕ ಜನರಲ್ ಆಷ್ಪಾಕ್ ಪರ್ವೆಜ್ ಕಯಾನಿ ಮತ್ತು ವಿದೇಶಸಚಿವ ಸಲ್ಮಾನ್ ಬಶೀರ್ ಹೇಳಿಕೆ ನೀಡಿದ್ದಾರೆ.  ಇತ್ತೀಚಿನ ಇತಿಹಾಸದಿಂದ ನಾವೇನಾದರೂ ಪಾಠ ಕಲಿತಿದ್ದರೆ ಹೇಳಿಕೆಗಳನ್ನು ನಾವು ನಿಕ್ಷಿಸಕೂಡದು.
ಡಿಸೆಂಬರ್ ೨೦೦೧ರಲ್ಲಿ ಸಂಸತ್ ಭವನದ ಮೇಲಾದ ಧಾಳಿಯ ನಂತರ ಹತ್ತು ತಿಂಗಳವರೆಗೆ ನಡೆದ "ಆಪರೇಷನ್ ಪರಾಕ್ರಮ್" ಎಂಬ ಸೇನಾಜಮಾವಣೆಯ ಸಂದರ್ಭದಲ್ಲಿ ಮೂರು ಬಾರಿ ಭಾರತೀಯ ರಕ್ಷಣಾಪಡೆಗಳು ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳ ಮೇಲೆ ಧಾಳಿ ನಡೆಸಲು ಮುಂದಾಗಿದ್ದವು.  ಆದರೆ ಮೂರೂ ಸಲ ಪಾಕಿಸ್ತಾನ ಅಣ್ವಸ್ತ್ರಗಳನ್ನು ಝಳಪಿಸಿದ್ದರಿಂದ ಕೊನೇಗಳಿಗೆಗಳಲ್ಲಿ ಯೋಜನೆಗಳನ್ನು ಕೈಬಿಡಬೇಕಾಯಿತು.  ಇದನ್ನು ಮರೆಯುವುದು ಹೇಗೆ?
ನನಗನ್ನಿಸುವ ಪ್ರಕಾರ ಅಣ್ವಸ್ತ್ರಗಳನ್ನು ಗಳಿಸಿಕೊಳ್ಳಲು ಪಾಕಿಸ್ತಾನಕ್ಕೆ ಅವಕಾಶ ನೀಡಿದ್ದು ಭಾರತ ಎಸಗಿದ ತಪ್ಪಾಗಿದೆ.  ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳಲ್ಲಿ ಹಾಗೂ ಸೇನಾ ಸಂಖ್ಯೆಯಲ್ಲಿ ಪಾಕಿಸ್ತಾನಕ್ಕಿಂತ ಭಾರತ ಎಷ್ಟೋ ಪಟ್ಟು ಮುಂದಿದೆ.  ಯಾವುದೇ ಸಾಂಪ್ರದಾಯಿಕ ಯುದ್ಧವನ್ನು ಭಾರತ ಲೀಲಾಜಾಲವಾಗಿ ಗೆಲ್ಲಬಹುದು.  ತನ್ನ ಕೊರತೆಯನ್ನು ನೀಗಿಸಿಕೊಳ್ಳಲೆಂದೇ ಪಾಕಿಸ್ತಾನ ಅಣ್ವಸ್ತ್ರಗಳನ್ನು ಗಳಿಸಿಕೊಳ್ಳುವ ಯೋಜನೆ ರೂಪಿಸಿತು.  ಮುಂದಾಗಬಹುದಾದ ಅನಾಹುತವನ್ನು ಮೊದಲೇ ಮನಗಂಡು ಭಾರತ ತಕ್ಕ ಕ್ರಮಗಳನ್ನು ಕೈಗೊಳ್ಳಬೇಕಾಗಿತ್ತು.  ಇರಾಕಿನ ಅಣುಸ್ಥಾವರಗಳನ್ನು ಇಸ್ರೇಲ್ ಧ್ವಂಸಗೊಳಿಸಿದಂತೆ ಪಾಕಿಸ್ತಾನದ ಅಣುಸ್ಥಾವರಗಳನ್ನು ನಾವು ಧ್ವಂಸಗೊಳಿಸಬೇಕಾಗಿತ್ತು.  ನಮ್ಮ ಕ್ರಮಕ್ಕೆ ಪ್ರತಿಯಾಗಿ ಪಾಕಿಸ್ತಾನ ಯುದ್ಧ ಸಾರಿದರೂ ಅದನ್ನು ರಣಾಂಗಣದಲ್ಲಿ ಬಗ್ಗುಬಡಿಯುವ ಸಾಮರ್ಥ್ಯ ನಮ್ಮ ರಕ್ಷಣಾಪಡೆಗಳಿಗಿತ್ತು.  ನಮ್ಮ ಸರಕಾರಗಳು ಯಾಕೋ ಹಿಂತೆಗೆದವು.  ಕೊನೇಪಕ್ಷ, ಕೆಲಸವನ್ನು ತಾನು ಮಾಡುವುದಾಗಿ ಇಸ್ರೇಲ್ ಮುಂದೆ ಬಂದಾಗಲಾದರೂ ನಾವು ಅವಕಾಶವನ್ನು ಉಪಯೋಗಿಸಿಕೊಂಡು ಇಸ್ರೇಲಿಗೆ ಅಗತ್ಯವಿದ್ದ ಸಹಕಾರವನ್ನು ನೀಡಬೇಕಾಗಿತ್ತು.  ಇಷ್ಟಕ್ಕೂ ಇಸ್ರೇಲ್ ಕೇಳಿದ್ದೇನು?  ಯಶಸ್ವಿಯಾಗಿ ಧಾಳಿ ನಡೆಸಿದ ನಂತರ ಅವರ ವಿಮಾನಗಳಿಗೆ ನಮ್ಮ ಜಾಮ್ ನಗರ್ನಲ್ಲಿನ ವಾಯುನೆಲೆಯಲ್ಲಿ ಇಂಧನ ಪೂರೈಕೆ ಮಾಡಬೇಕಾಗಿತ್ತು ಅಷ್ಟೇ.  ಆದರೆ ಇಂದಿರಾಗಾಂಧಿ ಸರಕಾರ ಯಾಕೋ ಇದಕ್ಕೆ ಮುಂದಾಗಲಿಲ್ಲ.  ಪರಿಣಾಮವಾಗಿ ೧೯೮೭ರಲ್ಲಿ ಪಾಕಿಸ್ತಾನ ತನ್ನ ಯೋಜನೆಯಲ್ಲಿ ಯಶಸ್ವಿಯಾಗಿ ಚೀನೀ ನೆಲದಲ್ಲಿ ರಹಸ್ಯವಾಗಿ ಅಣ್ವಸ್ತ್ರಪರೀಕ್ಷೆ ನಡೆಸಿ ಕಳ್ಳತನದಲ್ಲಿ ಅಣ್ವಸ್ತ್ರ ರಾಷ್ಟ್ರವಾಯಿತು.  ಅದಾದ ಎರಡೇ ವರ್ಷಗಳಲ್ಲಿ ಭಯೋತ್ಪಾದನೆಯನ್ನು ಉಗ್ರ ಮಟ್ಟಕ್ಕೆ ಕೊಂಡೊಯ್ಯುವ ಮೂಲಕ ಕಾಶ್ಮೀರದಲ್ಲಿನ ಪರಿಸ್ಥಿತಿಯನ್ನು ಹದಗೆಡಿಸಿತು.
೧೯೬೫ರಲ್ಲಿ ಕಾಶ್ಮೀರ ಕಣಿವೆಯೊಡನೆ ಭಾರತಕ್ಕಿದ್ದ ಒಂದೇ ಒಂದು ಮಾರ್ಗವಾದ ಜಮ್ಮು - ಅಖ್ನೂರ್ ರಸ್ತೆಯನ್ನು ನಾಶಪಡಿಸಿ ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸುವ ಹುನ್ನಾರವನ್ನು ಜನರಲ್ ಅಯೂಬ್ ಖಾನ್ ಹಾಕಿದಾಗ ನಮ್ಮ ಲಾಲ್ ಬಹಾದುರ್ ಶಾಸ್ತ್ರಿ ಸರಕಾರ ಲಾಹೋರ್ ಮೇಲೆ ಧಾಳಿಯೆಸಗುವ ನಿರ್ಧಾರ ತೆಗೆದುಕೊಂಡಿತು.  ಪಾಕಿಸ್ತಾನಕ್ಕೆನೋವಾಗುವ ಸ್ಥಳದಲ್ಲಿ ಪೆಟ್ಟುಕೊಟ್ಟು ಅದು ಕಾಶ್ಮೀರದ ಮೇಲಿನ ಹಿಡಿತವನ್ನು ಕಡಿಮೆ ಮಾಡುವಂತೆ ಮಾಡುವುದು ಲಾಹೋರ್ ಮೇಲಿನ ನಮ್ಮ ಧಾಳಿಯ ಹಿಂದಿನ ರಣತಂತ್ರ.  ಆನಂತರ ನಡೆದದ್ದು ಇತಿಹಾಸ.  ಸೆಪ್ಟೆಂಬರ್ ೬ರಂದು ಬೆಳಿಗ್ಗೆ ಆರುಗಂಟೆಗೆ ವಾಘಾ ಗಡಿಯನ್ನು ದಾಟಿದ ನಮ್ಮ ಸೇನೆ ಹತ್ತೂವರೆಯ ಹೊತ್ತಿಗೆ ಲಾಹೋರ್ ಹೊರವಲಯ ತಲುಪಿತು.  ಕಂಗೆಟ್ಟ ಪಾಕಿಸ್ತಾನೀಯರು ಉತ್ತರದ ಚಿಕನ್ಸ್ ನೆಕ್ - ಛಾಂಬ್ ಝಾರಿಯನ್ ರಣಾಂಗಣದಿಂದ ತಮ್ಮ ಸೇನೆಯನ್ನು ಕರೆಸಿಕೊಂಡು ಲಾಹೋರ್ ರಕ್ಷಣೆಗೆ ನಿಂತರು.  ಪರಿಣಾಮವಾಗಿ ನಮ್ಮ ಉದ್ದೇಶ ಸಾರ್ಥಕವಾಗಿ ಜಮ್ಮು - ಅಖ್ನೂರ್ ರಸ್ತೆ ಸುರಕ್ಷಿತವಾಗುಳಿಯಿತು.  ಹೀಗೆ ಹಿಂದೆ ಪಾಕಿಸ್ತಾನಿಯರು ಕಾಶ್ಮೀರದಲ್ಲಿ ಏನಾದರೂ ಹರಕತ್ ಶುರು ಮಾಡಿದರೆ ಅವರನ್ನು ಬೇರೆಡೆ (ಅವರ ಶಕ್ತಿ ಕಡಿಮೆಯಿರುವಲ್ಲಿ) ಯುದ್ಧಕ್ಕೆಳೆದು ಅವರು ಕಾಶ್ಮೀರದಿಂದ ಕಾಲ್ತೆಗೆಯುವಂತೆ ಮಾಡುವುದು ನಮಗೆ ಸಾಧ್ಯವಾಗಿತ್ತು.  ಆದರೆ ಯಾವಾಗ ಪಾಕಿಸ್ತಾನ ಅಣ್ವಸ್ತ್ರಗಳನ್ನು ಗಳಿಸಿಕೊಂಡಿತೋ ಆವಾಗಿನಿಂದ ಕಾಶ್ಮೀರ ಮತ್ತು ದೇಶದ ಇತರೆಡೆಗಳಲ್ಲಿ ಅವರ ಭಯೋತ್ಪಾದಕ ಕೃತ್ಯಗಳನ್ನೆಲ್ಲಾ ನಾವು ಸಹಿಸಿಕೊಳ್ಳಬೇಕಾಗಿದೆ.  ಅವರ ವಿರುದ್ಧ ಉಗ್ರ ಕ್ರಮಗಳನ್ನು ಕೈಗೊಳ್ಳಲು ನಾವು ಯಾವಾಗ ಯೋಜಿಸಿದರೂ ಅವರು ತಮ್ಮ ಅಣ್ವಸ್ತ್ರಗಳನ್ನು ಝಳಪಿಸಿ ನಮ್ಮನ್ನು ಹಿಮ್ಮೆಟ್ಟಿಸುತ್ತಿದ್ದಾರೆ.  ಅವರ ಅಣ್ವಸ್ತ್ರ ಬೆದರಿಕೆ ಅದೆಷ್ಟು ಉಗ್ರವಾಗಿದೆಯೆಂದರೆ ೧೯೯೯ರ ಬೇಸಗೆಯಲ್ಲಿ ನಡೆದ ಯುದ್ಧವನ್ನು ನಾವು ಕಾರ್ಗಿಲ್ ಕ್ಷೇತ್ರಕ್ಕಷ್ಟೇ ಸೀಮಿತಗೊಳಿಸಬೇಕಾಯಿತು.  ಇಸ್ಲಾಮಾಬಾದ್ "ನ್ಯೂಕ್ಲಿಯರ್ ಬ್ಲ್ಯಾಕ್ಮೇಲ್" ನಮ್ಮನ್ನು ಅದೆಷ್ಟು ಕಂಗೆಡಿಸಿತೆಂದರೆ ಯುದ್ದವನ್ನು ಭಾರತ - ಪಾಕಿಸ್ತಾನ್ ಗಡಿಗಿರಲಿ, ಕಾಶ್ಮೀರದಲ್ಲಿನ ನಿಯಂತ್ರಣ ರೇಖೆಯ ಬೇರೇ ಭಾಗಗಳಿಗಾದರೂ ವಿಸ್ತರಿಸಲಾಗದಷ್ಟು ನಾವು ಅಶಕ್ತರಾಗಿದೆವು.  ಹೀಗಾಗಿ ಅಣ್ವಸ್ತ್ರಗಳನ್ನು ಗಳಿಸಿಕೊಳ್ಳಲು ಪಾಕಿಸ್ತಾನಕ್ಕೆ ಅವಕಾಶ ಕೊಟ್ಟು ನಾವು ನಮ್ಮ ಕೈಗಳನ್ನೇ ಕಟ್ಟಿಸಿಕೊಂಡು ಕೂತಿದ್ದೇವೆ.  ೧೯೯೦ರ ಜುಲೈನಿಂದ ಇಂದಿನವರೆಗೆ ಹೀಗೇ ನಡೆದುಕೊಂಡು ಬಂದಿದೆ.  ಇದು ಈಗಿನ ಸಂದರ್ಭದಲ್ಲೂ ನಿಜ.
ಪಾಕಿಸ್ತಾನ ಅಣ್ವಸ್ತ್ರ ಧಾಳಿ ನಡೆಸಿದರೆ ಪ್ರತಿಧಾಳಿ ನಡೆಸುವ ಸಾಮರ್ಥ್ಯ ನಮಗಿದೆ ಎಂದು ಕೆಲವರು ಉತ್ಸಾಹಿಗಳು ವಾದಿಸುತ್ತಾರೆ.  ನಿಜ, ಪಾಕಿಸ್ತಾನವನ್ನು ಇಡಿಯಾಗಿ ಧ್ವಂಸಗೊಳಿಸುವ ಸಾಮರ್ಥ್ಯ ನಮಗಿದೆ.  ಆದರೆ ಅದಕ್ಕಾಗಿ ನಾವು ತೆರಬೇಕಾದ ಬೆಲೆಯೇನು?  ಅಣುಯುದ್ಧದಲ್ಲಿ ಯಾರೂ ಜಯಶಾಲಿಗಳಿರುವುದಿಲ್ಲ ಎಂಬ ಸತ್ಯವನ್ನು ಯುದ್ಧೋತ್ಸಾಹಿಗಳು ಅರಿಯಬೇಕು.

No comments:

Post a Comment