ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Wednesday, December 3, 2014

ಕಥೆ "ಕ್ರೌರ್ಯ"



ಬೆಂಗಳೂರಿನ ಬಸ್ಸು ರಾತ್ರಿ ಹತ್ತೂವರೆಗೆ ಪಾಂಡಿಚೆರಿ ಬಸ್ ನಿಲ್ದಾಣದಿಂದ ಹೊರಟಾಗ ಎಲ್ಲವೂ ಸರಿಯಾಗಿಯೇ ಇತ್ತು.  ಭರ್ಜರಿ ಆರಾಮಾಸನ, ವಾತಾನುಕೂಲಿ ಮಜಬೂತು ಐರಾವತದ ಪ್ರಯಾಣ ಕೆಲವೇ ಗಂಟೆಗಳಲ್ಲಿ ದುಃಸ್ವಪ್ನವಾಗಿ ಬದಲಾಗಲಿದ್ದ ಯಾವ ಸೂಚನೆಯೂ ಆಗ ಇರಲಿಲ್ಲ.
ನನ್ನದು ಕಿಟಕಿ ಪಕ್ಕದ ಸೀಟು.  ಪಕ್ಕದಲ್ಲಿ ಕುಳಿತಿದ್ದ ಎತ್ತರದ ಮನುಷ್ಯ ಹೊಸೂರಿಗೆ ಹೋಗುತ್ತಿರುವುದಾಗಿ ಹೇಳಿದ.  ಅವನ ಜತೆ ಔಪಚಾರಿಕವಾಗಿ ಒಂದೆರಡು ಮಾತಾಡಿ ಕಿಟಕಿಯತ್ತ ತಿರುಗಿದೆ.  ಕಂಡಕ್ಟರ್ ಎಲ್ಲರ ಟಿಕೆಟ್ ಪರಿಶೀಲಿಸಿ ದೀಪಗಳನ್ನು ಆರಿಸುವ ಹೊತ್ತಿಗೆ ಮುಕ್ಕಾಲು ಗಂಟೆ ಕಳೆದುಹೋಗಿ ದಿಂಡಿವನಂ ಬಂದಾಗಿತ್ತು.  ಅಲ್ಲಿ ಎರಡು ನಿಮಿಷ ನಿಂತ ಶಾಸ್ತ್ರ ಮಾಡಿ ಹೊರಟ ಬಸ್ಸು ಮತ್ತೆ ಕತ್ತಲುಗಟ್ಟಿದಂತೆ ನಾನು ಸೀಟನ್ನು ಹಿಂದಕ್ಕೆ ವಾಲಿಸಿ ಕಣ್ಣುಮುಚ್ಚಿದೆ.  ಎಚ್ಚರವಾದದ್ದು ಊತಂಗರೈ ತಲುಪಿದಾಗಲೇ.  ಗಡಿಯಾರ ನೋಡಿದೆ.  ಒಂದೂಮುಕ್ಕಾಲಾಗಿತ್ತು.  ಕೆಳಗಿಳಿದು ಹೋಗಿ ಟೀ ಕುಡಿದು ಬಂದು ಮತ್ತೆ ಕಣ್ಣು ಮುಚ್ಚಿದೆ.  ಪಕ್ಕದ ಸೀಟಿನವನು ಅದ್ಯಾವಾಗ ಬಂದು ಕೂತನೋ ಗೊತ್ತಾಗಲಿಲ್ಲ.  ನನಗೆ ಮತ್ತೆ ನಿದ್ದೆ ಆವರಿಸಿತ್ತು.
ಇದ್ದಕ್ಕಿದ್ದಂತೆ ಮುಖಕ್ಕೆ ಬಿಸಿಗಾಳಿ ರಾಚಿದಂತಾಗಿ ಗಕ್ಕನೆ ಕಣ್ಣುಬಿಟ್ಟೆ.  ಬಸ್ಸು ನಿಂತಿತ್ತು.  ದೀಪಗಳಿಲ್ಲದ ಕತ್ತಲು.  ಜತೆಗೇ ಬಸ್ಸಿಡೀ ಮಂಜು ಮುಸುಕಿದಂತಿದ್ದು ಏನೂ ಸರಿಯಾಗಿ ಕಾಣುತ್ತಿರಲಿಲ್ಲ.  ಬಸ್ಸಿನ ಮುಂಭಾಗದಿಂದ ಕ್ಷೀಣವಾಗಿ "ಭೊಸ್" ಎಂಬ ಶಬ್ಧ ಕೇಳಿಬರುತ್ತಿತ್ತು.
ಏನಾಗಿದೆಯೆಂದು ಗೊತ್ತಾಗದೇ ಗಾಬರಿಯಾಯಿತು.  ಪಕ್ಕ ತಿರುಗಿದರೆ ಸೀಟು ಖಾಲಿ.  ಏಳಲು ಹೋದರೆ ಮುಂದುಗಡೆಯ ಸೀಟು ನನ್ನ ಎದೆಯ ಮೇಲೆ ಇದ್ದಂತೆನಿಸಿ ಮತ್ತೆ ಹಿಂದಕ್ಕೆ ಕುಸಿದೆ.  "ಸೀಟನ್ನ ಸ್ವಲ್ಪ ಮುಂದಕ್ಕೆ ಮಾಡ್ಕೊಳ್ರೀ" ಎಂದು ಮುಂದಿದ್ದವರಿಗೆ ಹೇಳಿದೆ.  ಯಾವ ಉತ್ತರವೂ ಬರಲಿಲ್ಲ.  ಸೀಟೂ ಅಲುಗಲಿಲ್ಲ.  ಅವಯಾರೋ ಇನ್ನೂ ಮಲಗಿಯೇ ಇದ್ದಾರೇನೋ, ಎಬ್ಬಿಸೋಣ ಎಂದುಕೊಂಡು ಮುಂದೆ ಕೈಚಾಚಿದೆ.
ಸೀಟು ಖಾಲಿಯಾಗಿತ್ತು.  ಅಲ್ಲಿದ್ದ ಮಹಾಶಯ ಸೀಟನ್ನು ಹಾಗೇ ಬಿಟ್ಟು ಎದ್ದು ಓಡಿಹೋಗಿದ್ದ.
ನನ್ನ ಸೀಟಿಗೆ ಅಂಟಿದಂತೇ ಮೆಲ್ಲಮೆಲ್ಲಗೆ ಪಕ್ಕಕ್ಕೆ ಜರುಗಿ ಕಷ್ಟಪಟ್ಟು ಹೊರಬಂದೆ.  "ದಾರಿ ಬಿಡಪ್ಪ.  ಎಲ್ಲಾ ಇಳಿದಾಯ್ತು" ಎಂಬ ಹೆಣ್ಣುದನಿ ಕೇಳಿ ಹಿಂದೆ ತಿರುಗಿದರೆ ಒಬ್ಬಳು ದಪ್ಪ ದೇಹದ ಹೆಂಗಸು ನನ್ನ ಹಿಂದೆ ನಿಂತಿದ್ದಳು.  "ಏನಾಗಿದೆಯಮ್ಮ?" ಎಂದು ಕೇಳುತ್ತಲೇ ಬಾಗಿಲತ್ತ ನಡೆದೆ.  "ಅದೇನೋ ಗೊತ್ತಿಲ್ಲ ಕಣಪ್ಪ.  ಇದ್ದಕ್ಕಿದ್ದ ಹಾಗೆ ಮುಂದುಗಡೆಯಿಂದ `ಬೊಸ್ಸೋ' ಅನ್ನೋ ಸದ್ದು ಬಂದು ಬಸ್ಸು ನಿಂತುಬಿಡ್ತು.  ಮುಖದ ಮೇಲೆಲ್ಲಾ ಯಾರೋ ಬಿಸಿ ಹಬೆ ಊದಿದ ಹಾಗಾಯ್ತು.  ಬಸ್ ನಿಂತದ್ದೇ ಎಲ್ಲರೂ ಧಡಧಡನೆ ಇಳಿದುಟ್ರು.  ಈ ಸೀಟುಗಳ ಮಧ್ಯೆ ಸಿಕ್ಕು ತಕ್ಷಣ ಹೊರಕ್ಕೆ ಬರೋದಿಕ್ಕೆ ಆಗ್ಲಿಲ್ಲ" ಅಂದರು ಆಕೆ.  ಎಂಜಿನ್ ಪಕ್ಕದಲ್ಲಿದ್ದ ಬಾಗಿಲು ಸಮೀಪಿಸಿದಂತೇ ಅಲ್ಲಿ ಬಿಸಿಹಬೆ ದಟ್ಟವಾಗಿದ್ದಂತೆ ಕಂಡಿತು.  ಕೆಳಗಿಳಿದೆ.  ನನ್ನ ಹಿಂದೆ ಆಕೆಯೂ "ಉಸ್ಸಪ್ಪಾ" ಎನ್ನುತ್ತಾ ಇಳಿದರು.  ಹಿಂದೆ ಇನ್ನೂ ಒಂದಿಬ್ಬರು ಗೊಣಗಾಡುತ್ತಾ ಇಳಿದರು.
ಸಹಪ್ರಯಾಣಿಕರೆಲ್ಲರೂ ಗುಂಪುಗಟ್ಟಿ ನಿಂತು ಮಾತಾಡಿಕೊಳ್ಳುತ್ತಿದ್ದರು.  ಕನ್ನಡ ತಮಿಳು ಇಂಗ್ಲೀಷ್ ಮೂರೂ ಬೆರೆತು ಗೊಂದಲವೋ ಗೊಂದಲ.  ನನ್ನ ಪಕ್ಕದ ಸೀಟಿನವ ಗುಂಪಿನಂಚಿನಲ್ಲಿ ಸೈಂಧವನಂತೆ ಎತ್ತರಕ್ಕೆ ನಿಂತಿದ್ದ.  ನನ್ನನ್ನು ನೋಡಿದವನೇ "ಎದ್ ಬಂದ್ರಾ?  ಅದೇನೋ ರೇಡಿಯೇಟರ್ ಹಾಳಾಗಿದೆಯಂತೆ.  ಏನೋ ಲೀಕೇಜ್ ಅಂತೆ.  ಮುಂದುಗಡೆಯಿಂದ `ಡಬ್' ಅನ್ನೋ ಸದ್ದು ಬಂತು.  ತಕ್ಷಣ ಯಾರೋ ಮುಖದ ಮೇಲೇ ಬಿಸಿನೀರು ಎರಚಿದ ಹಾಗೆ ಆಗಿಬಿಡ್ತು" ಅಂದ.  "ನಿಮ್ಮನ್ನ ಎಬ್ಬಿಸ್ದೆ.  ನೀವು ಏಳಲೇ ಇಲ್ಲ" ಎಂದೂ ಸೇರಿಸಿದ.
ಗಡಿಯಾರ ನೋಡಿದೆ.  ಎರಡೂಮುಕ್ಕಾಲಾಗುತ್ತಿತ್ತು.
ಬಸ್ಸು ಮುಂದೆ ಹೋಗುವುದಿಲ್ಲವೆಂದು ಮುಂದಿನ ಐದು ನಿಮಿಷಗಳಲ್ಲಿ ತಿಳಿದುಬಂತು.  "ಬೆಂಗಳೂರು ಡಿಪೋದಿಂದ ಸ್ಪೇರ್ ಬಸ್ ತರಿಸೋಕೆ ಆಗೋಲ್ಲ.  ಎಲ್ಲರೂ ಸಿಕ್ಕಿದ ಬಸ್ಸುಗಳಲ್ಲಿ ಹತ್ತಿ ಹೊರಟುಬಿಡಿ.  ಸ್ವಲ್ಪ ಹಣ ರಿಫಂಡ್ ಸಿಗುತ್ತೆ.  ಅದನ್ನ ಅಲ್ಲೇ ಬೆಂಗ್ಳೂರಲ್ಲೇ ತಗೋಬೋದು.  ನಿಮ್ ನಿಮ್ಮ ಟಿಕೇಟ್‌ಗಳನ್ನ ಭದ್ರವಾಗಿ ಇಟ್ಕೊಳ್ಳಿ.  ಅಲ್ಲಿ ಬೆಂಗ್ಳೂಲಿ ತೋರಿಸ್ಬೇಕಾಗುತ್ತೆ.  ಇಲ್ಲಾಂದ್ರೆ ರಿಫಂಡ್ ಕಷ್ಟ" ಅಂದ ಕಂಡಕ್ಟರ್ ರಸ್ತೆ ದಾಟಿ ಪೊದೆಗಳತ್ತ ಸರಿದುಹೋದ.  ಒಂದಷ್ಟು ಜನ ಅವನಿಗೂ, ಸಾರಿಗೆ ಸಂಸ್ಥೆಗೂ ಶಾಪ ಹಾಕಿದರು.  ಒಬ್ಬ "ಕರಾರಸಾನಿ ಅಂದರೆ ಕಡೇವರೆಗೂ ರಾದ್ಧಾಂತ ರಗಳೆಗಳೊಡನೆ ಸಾಗಿಸೋ ನಿಗಮ" ಅಂದ.  ಇನ್ನೊಬ್ಬ ಪೈಪೋಟಿಯಲ್ಲಿ "ಸುವರ್ಣ ಕರ್ನಾಟಕ ಸಾರಿಗೆ!  ಸಾರಿಗೆ ಉಪ್ಪೇ ಇಲ್ಲ!" ಎಂದು ಹೇಳಿ ನಕ್ಕ.  ಮತ್ತಾರೂ ನಗಲಿಲ್ಲ.  "ಈ ನನ್ ಮಕ್ಳನ್ನ ಹಿಡಕೊಂಡು ಬಡಿಬೇಕು, ಇವರ್ ಹೆಂಡ್ರನ್ನ.  ಥೂ!"  ಮತ್ತೊಬ್ಬ ಕ್ಯಾಕರಿಸಿ ಉಗಿದ.  ವಾಹನವೊಂದರ ಪ್ರಖರ ಬೆಳಕು ಹತ್ತಿರಾಯಿತು.  ಒಂದು ಪಕ್ಕದಲ್ಲಿ ಕೈಕಟ್ಟಿಕೊಂಡು ನಿಂತಿದ್ದ ನಮ್ಮ ಡ್ರೈವರ್ ರಸ್ತೆಯ ಮಧ್ಯಕ್ಕೆ ಓಡಿಹೋಗಿ ಬಸ್ಸನ್ನು ನಿಲ್ಲಿಸಿದ.  ಅಷ್ಟರಲ್ಲಾಗಲೇ ಏಳೆಂಟು ಜನ ಧಡಬಡನೆ ನಮ್ಮ ಬಸ್ಸಿನೊಳಗೆ ನುಗ್ಗಿ ತಮ್ಮ ಸಾಮಾನುಗಳನ್ನೆತ್ತಿಕೊಂಡು ಅತ್ತ ದೌಡಾಯಿಸಿದರು.  ಗುಂಪು ಕಾಲುಭಾಗದಷ್ಟು ಕರಗಿತು.  ನಾನೂ ಒಳಗೆ ಹೋಗಿ ನನ್ನ ಚೀಲವನ್ನೆತ್ತಿಕೊಂಡು ಬಂದೆ.  ನಂತರ ಬಂದ ಎರಡು ಬಸ್ಸುಗಳಲ್ಲೂ ನಿಲ್ಲಲು ಮಾತ್ರ ಸ್ಥಳವಿತ್ತು.  ಆದರೂ ಒಂದಿಬ್ಬರು ಹತ್ತಿಕೊಂಡರು.  ಹೊಸೂನಲ್ಲಿ ಸೀಟ್ ಸಿಗತ್ತೆ ಬನ್ನಿ ಎಂದು ಕಂಡಕ್ಟರ್ ಕರೆದಾಗ ಹತ್ತಿಬಿಡೋಣ ಎಂದು ಒಂದುಕ್ಷಣ ಅನಿಸಿದರೂ ಒಂದೂವರೆ ಗಂಟೆ ತೂಕಡಿಸುತ್ತಾ ನಿಲ್ಲುವುದು ಕಷ್ಟ ಎನಿಸಿ ಸುಮ್ಮನಾದೆ.  ವೇಗವಾಗಿ ತೂರಿಬರುತ್ತಿದ್ದ ಟಾಟಾ ಸುಮೋವೊಂದನ್ನು ನಾಕೈದು ಜನ ಅಡ್ಡಗಟ್ಟಿ ನಿಲ್ಲಿಸಿದರು.  ಡ್ರೈವರ್ ಜತೆ ದರದ ಚೌಕಾಶಿಯ ನಂತರ ಮೂರು ಜನ ಅದರೊಳಗೆ ಸೇರಿಕೊಂಡರು.  ಹಿಂದೆಯೇ ಬಸ್ಸೊಂದು ಬಂತು.  ಅದರಲ್ಲಿ ಕೂರಲು ಸ್ಥಳವೇನೋ ಇತ್ತು.  ಆದರೆ ಏಳೆಂಟು ಜನ ಯುವಕರು ನನ್ನನ್ನು ಅತ್ತ ನೂಕಿ ಒಳತೂರಿಕೊಂಡರು.  ಬೇಸರದಲ್ಲಿ ಹಿಂದಕ್ಕೆ ಬಂದು ನಿಂತೆ.
ನಿಟ್ಟುಸಿರೊಂದು ಕೇಳಿ ಪಕ್ಕಕ್ಕೆ ತಿರುಗಿದೆ.  ಹೆಗಲಲ್ಲಿ ತೆಳುವಾದ ಚೀಲ, ಬಲಗೈಯಲ್ಲಿ ಪುಟ್ಟ ಸೂಟ್‌ಕೇಸ್ ಹಿಡಿದುಕೊಂಡು ಒಬ್ಬಾಕೆ ನಿಂತಿದ್ದಳು.  "ಇದೇನ್ ಸಾರ್ ಹಿಂಗಾಯ್ತಲ್ಲಾ" ಅಂದಳು.  "ನೀವು ಬೆಂಗಳೂರಿಗೋ?" ಎಂದೂ ಕೇಳಿದಳು.  "ಹೌದು.  ನೀವು?" ಅಂದೆ.  "ನಾನಾ?  ನಾನೂ ಅಲ್ಲಿಗೇ ಹೋಗ್ತಾ ಇದೀನಿ.  ಕೊನೇತಂಗಿಗೆ ಮಗು ಹುಟ್ಟಿದೆ.  ನೋಡೋದಿಕ್ಕೆ ಹೋಗ್ತಿದೀನಿ" ಎಂದು ಹೇಳಿದಾಕೆ ಸರಳ ಸ್ನೇಹಪರಳಂತೆ ಕಂಡಳು.  ಅವಳತ್ತಲೇ ನೋಡಿದೆ.
ಚಂದ್ರನ ನಸುಬೆಳಕಿನಲ್ಲಿ ಕಂಡದ್ದು ನಲವತ್ತರ ಅಸುಪಾಸಿನ ದುಂಡನೆಯ ನಗುಮುಖ.  ತಲೆಗೆ ಒತ್ತಿದಂತೆ ಬಿಗಿದು ಬಾಚಿದ ಕೂದಲು.   ಹಸಿರು ರೇಶಿಮೆ ಸೀರೆ ರವಿಕೆ.  ಅಗಲ ಕಣ್ಣುಗಳು ನಿದ್ದೆಯಲ್ಲಿ ತೇಲುತ್ತಿದ್ದವು.
"ಏನೂ ಹೆದರೋದು ಬೇಡ.  ಸ್ವಲ್ಪ ಹೊತ್ತು ಕಾಯೋಣ.  ತಮಿಳುನಾಡಲ್ಲೇನು ರಾತ್ರಿಯೆಲ್ಲಾ ಬಸ್ಸುಗಳು ಸಿಗ್ತವೆ" ಅಂದೆ ಆಕೆಯಲ್ಲಿ ಧೈರ್ಯ ತುಂಬುವ ಉದ್ದೇಶದಿಂದ.  ಅದೇ ಗಳಿಗೆಗೆ ಸರಿಯಾಗಿ ಖಾಲಿ ಟ್ಯಾಕ್ಸಿಯೊಂದು ಬಂದು ಗಕ್ಕನೆ ನಿಂತಿತು.  "ಬೆಂಗ್ಳೂರ್?" ಕೇಳಿದ ಡ್ರೈವರ್.  ಹಸಿರು ರೇಶಿಮೆ ಸೀರೆಯ ಹೆಂಗಸು ನನ್ನತ್ತ ನೋಡಿದಳು.  ಹೆಗಲಲ್ಲೊಂದು ಸ್ಯಾಮ್‌ಸೊನೈಟ್ ಚೀಲ, ಕೈಯಲ್ಲಿ ಲ್ಯಾಪ್‌ಟಾಪ್ ಹಿಡಿದ ಜೀನ್ಸ್‌ಧಾರಿ ಯುವಕನೊಬ್ಬ ಅದೆಲ್ಲಿಂದಲೋ ಓಡಿಬಂದು "ಹೌದೂರೀ, ಎಷ್ಟು ತಗೋತೀರಿ?" ಅಂದ.  ದನಿಯಲ್ಲಿ ಆತುರವಿತ್ತು.  "ಎಷ್ಟು ಜನ ಇದ್ದೀರಿ?" ಡ್ರೈವನ ಪ್ರಶ್ನೆ.  ಯುವಕ ಈಗ ನನ್ನತ್ತ ತಿರುಗಿದ.  ನಾನು ಹೆಂಗಸಿನತ್ತ ತಿರುಗಿದೆ.  ಅವಳ ಮುಖದ ತುಂಬಾ ಅನುಮಾನದ ನೆರಳುಗಳು.  "ಸ್ವಲ್ಪ ಜಾಸ್ತಿ ಹಣ ತಗೋಬೋದು.  ಪರವಾಗಿಲ್ಲ, ನೆಮ್ಮದಿಯಾಗಿ ಊರು ಸೇಕೋಬೋದು ಆಂಟೀ" ಎಂದ ಯುವಕ.  ಅವನ ಪುಸಲಾಯಿಸುವಿಕೆ ವ್ಯರ್ಥವಾಗಲಿಲ್ಲ.  ಸಮ್ಮತಿಯಲ್ಲಿ ಆಕೆಯ ಮುಖದ ಗೆರೆಗಳು ಸಡಿಲಾದವು.  ನಾನೂ ಹ್ಞೂಂಗುಟ್ಟಿ ಡ್ರೈವನತ್ತ ತಿರುಗಿದೆ: "ನಾವು ಮೂರು ಜನ ಕಣಪ್ಪ.  ಎಷ್ಟು ತಗೋತೀಯ?"
"ತಲೆಗೆ ಒಂದ್ ನೂರೈವತ್ತು ಕೊಟ್ಬಿಡಿ."  ಮೆಲ್ಲಗೆ ಅಂದವನು "ಇನ್ನೊಂದಿಬ್ಬರು ಆಗಿದ್ರೆ ಚೆನ್ನಾಗಿತ್ತು" ಅಂದ ದನಿಯೆತ್ತರಿಸಿ.  ಕುಳ್ಳನೆಯ ಕಟ್ಟುಮಸ್ತಾದ ದೇಹದ ಮನುಷ್ಯನೊಬ್ಬ ಕೈಯಾಡಿಸುತ್ತಾ ಓಡಿಬಂದ.  "ಇನ್ನೊಂದಿಬ್ಬರಿಗೆ ಜಾಗ ಆಗುತ್ತೇನಪ್ಪ?" ಅಂದ.  "ಆಗುತ್ತೆ ಬನ್ನಿ ಸಾರ್" ಎಂಬ ಉತ್ತರ ಬಂದದ್ದೇ ಹಿಂದೆ ತಿರುಗಿ "ಸೀಟಿದೆ.  ಸೂಟ್‌ಕೇಸ್ ಎತ್ಕೊಂಡು ಬಾ" ಎಂದು ಕೂಗಿ ಹೇಳಿದ.  ನಾವು ಐದು ಜನರಾದೆವು.  ಇನ್ನೂ ಒಂದಿಬ್ಬರು ಹತ್ತಿರ ಬಂದರೂ ಮಾತಾಡದೇ ಹಿಂದೆ ಸರಿದರು.  ಒಬ್ಬರಿಗೆ ನೂರಾ ಇಪ್ಪತ್ತೈದರಂತೆ ಮಾತಾಯಿತು.  ಡ್ರೈವರ್ ನನಗೆ "ಅಮ್ಮಾವ್ರೂ ನೀವೂ ಮುಂದೆ ಬಂದ್ಬಿಡಿ ಸಾರ್" ಅಂದ.  ನಾನು ಸಂಕೋಚದಲ್ಲಿ ಸಣ್ಣಗೆ ನಗುತ್ತಾ "ಇಲ್ಲಪ್ಪ, ಮೇಡಂ ಜತೆ ಮುಂದುಗಡೆ ಈ ಹುಡುಗ ಕೂರಲಿ" ಅಂದೆ.  ಮುಖ ಪೆಚ್ಚಾಗಿಸಿಕೊಂಡ ಅವನು "ಗೊತ್ತಾಗ್ಲಿಲ್ಲ, ತಪ್ ತಿಳಕೋಬೇಡಿ" ಅಂದ ಆ ಹೆಂಗಸಿಗೆ.  ಆಕೆ ಉತ್ತರಿಸದೇ ಮುಂದೆ ಹತ್ತಿಕೊಂಡಳು.  ಅನುಮಾನಿಸುತ್ತಾ ನಿಂತ ಆ ಯುವಕನಿಗೆ "ಬಾಪ್ಪಾ ಬಾ ಕೂತ್ಕೋ.  ನಂಗೆ ನಿನ್ನ ವಯಸ್ಸಿನ ಮಗ ಇದ್ದಾನೆ" ಅಂದಳು.
ಕುಳ್ಳನೆಯ ಮನುಷ್ಯ ಮೊದಲು ಹತ್ತಿದ.  ಆಕಡೆಯಿಂದ ಅವನ ಗೆಳೆಯ, ಈಕಡೆಯಿಂದ ನಾನು ಒಳಸೇರಿಕೊಂಡೆವು.  "ಇನ್ನೊಂದು ಹತ್ತು ಕಿಲೋಮೀಟರಿಗೆ ಕೃಷ್ಣಗಿರಿ ಬರುತ್ತೆ.  ಅಲ್ಲಿಂದಾಚೆಗೆ ಭರ್ಜರಿ ರೋಡು.  ಐದಕ್ಕೆಲ್ಲಾ ಊರು ತಲುಪಿಸಿಬಿಡ್ತೀನಿ" ಎನ್ನುತ್ತಾ ಎಂಜಿನ್ ಗೊರಗುಟ್ಟಿಸಿದ ಡ್ರೈವರ್.  "ಎಲ್ಲಿಂದ ಬರ್ತಿದೀಯಪ್ಪಾ?" ಎಂದು ನನ್ನ ಪಕ್ಕದಲ್ಲಿದ್ದ ಕುಳ್ಳಮನುಷ್ಯನ ಪ್ರಶ್ನೆಗೆ "ತಿರುವಣ್ಣಾಮಲೈಲಿ ಒಂದ್ ಫ್ಯಾಮಿಲೀನ ಬಿಟ್ಟು ಬರ್ತಾ ಇದೀನಿ ಸಾರ್" ಎಂದು ಉತ್ತರಿಸಿದ.  "ನೀವು ಸಿಕ್ಕಿದ್ದು ಒಳ್ಳೇದಾಯ್ತು.  ಕಾಫಿಗೆ ಕಾಸಾಯ್ತು" ಎಂದೂ ಸೇರಿಸಿದ.  "ಅಂದರೆ ನೀನು ಕಾಫಿ ಕುಡಿಯೋದು ಬರೀ ತಾಜ್ ಕಾಂಟಿನೆಂಟಲ್, ಲೀಲಾ ಪೆಂಟಾ, ಒಬೆರಾಯ್ ಶೆರೆಟಾನ್‌ಗಳಲ್ಲೇ ಅನ್ನು" ಅಂದ ಕುಳ್ಳ.  ಅವನ ಮಾತಿನ ಅರ್ಥ ಹೊಳೆದು ನಾನು ನಕ್ಕರೆ ಡ್ರೈವರ್ ನಾಚಿದಂತೆ ದನಿ ಮಾಡಿ "ಅಯ್ ಬಿಡಿ ಸಾರ್, ನೀವೊಬ್ರು" ಅನ್ನುತ್ತಾ ಎಂಜಿನ್ ಅನ್ನು ಕಿವಿ ಕಿತ್ತುಹೋಗುವಂತೆ ರೊಂಯ್ಯೋ ಅನ್ನಿಸಿದ.  ಮುಂದೆ ಕುಳಿತಿದ್ದ ಹೆಂಗಸಿಗೂ ಯುವಕನಿಗೂ ಇದಾವುದರ ಕಡೆಗೂ ಗಮನವಿರಲಿಲ್ಲ.  ಹೆಂಗಸು ಪ್ರಶ್ನೆ ಕೇಳುವುದು, ಅವನು ಉತ್ತರಿಸುವುದು ನಡೆದಿತ್ತು.  ಅವರ ಸಂಭಾಷಣೆಯತ್ತ ಗಮನ ಹರಿಸಿದ ನನಗೆ ತಿಳಿದದ್ದು ಆ ಯುವಕ ಪಾಂಡಿಚೆರಿಯವನೇ.  ಇಪ್ಪತ್ತೆರಡರ ಅವನು ಐದಾರು ತಿಂಗಳಿಂದ ಬೆಂಗಳೂರಿನ ಸಾಫ್ಟ್‌ವೇರ್ ಸಂಸ್ಥೆಯೊಂದರ ಉದ್ಯೋಗಿ.  ಅಪ್ಪ ಅಮ್ಮ ಇರುವುದು ಪಾಂಡಿಚೆರಿಯಲ್ಲೇ.  ಇಬ್ಬರು ಅಕ್ಕಂದಿರಿಗೂ ಮದುವೆಯಾಗಿದೆ, ತಮ್ಮ ಪ್ಲಸ್ ಟೂನಲ್ಲಿದ್ದಾನೆ.
ಹಾಗೇ ಪಕ್ಕದವರ ಪರಿಚಯವೂ ಆಯಿತು.  ಅವರಿಬ್ಬರೂ ಸಣ್ಣಪುಟ್ಟ ಯಂತ್ರಗಳ ಬಿಡಿಭಾಗಗಳ ಮಾರಾಟಗಾರರು.  ಕಡಲೂರಿನಲ್ಲಿ ಅಂಗಡಿಯಿದೆ.  ವಹಿವಾಟು ಚೆನ್ನಾಗಿಯೇ ನಡೆಯುತ್ತಿದೆ.  ಈಗ ಬೆಂಗಳೂರಿಗೆ ಹೋಗುತ್ತಿರುವುದೂ ವ್ಯವಹಾರದ ಮೇಲೇ.  ನನ್ನ ಬಗ್ಗೆ ಕೇಳಿದಾಗ "ನಾನೊಬ್ಬ ಮೇಷ್ಟ್ರು" ಅಂದೆ.  "ಎಲ್ಲಿ?  ಪಾಂಡೀನಲ್ಲೇನಾ?  ಪೆಟಿಟ್ ಸೆಮಿನಾನಲ್ಲೋ, ಪ್ಯಾಟ್ರಿಕ್ಸ್‌ನಲ್ಲೋ" ಅಂದ.  "ಪಾಂಡಿಚೆರಿ ಯೂನಿವರ್ಸಿಟೀನಲ್ಲಿ" ಎಂದುತ್ತರಿಸಿದೆ.  ನಿಮಿಷದವರೆಗೆ ಮೌನವಾದ ಅವನು ಒಮ್ಮೆ ಕೆಮ್ಮಿ ಕೇಕರಿಸಿ ದನಿ ತೆಗೆದ: "ನನ್ನ ಮೊದಲ ಮಗಳೂ ಅಲ್ಲೇ ಓದ್ತಾ ಇದಾಳೆ.  ಗಾಂದಿಮದಿ ಅಂತ.  ಎಮ್ಮೆಸ್ಸೀ ಬಯೋಕೆಮಿಸ್ಟ್ರಿ.  ನೀವು ನೋಡಿರಬೇಕು.  ಬೆಳ್ಳಗಿದ್ದಾಳೆ, ಅವರಮ್ಮನ ಹಾಗೇ.  ಆದ್ರೆ ಸ್ವಲ್ಪ ಕುಳ್ಳಿ.  ಇನ್ನೂ ಹೈಸ್ಕೂರ್ ಹುಡುಗಿ ಥರಾ ಕಾಣಿಸ್ತಾಳೆ.  ನೋಡಿದ್ದೀರಾ?"
"ಇಲ್ಲ ನೋಡಿಲ್ಲ.  ಅದು ಬೇರೇ ಡಿಪಾರ್ಟ್‌ಮೆಂಟು.  ನಾನು ಆ ಕಡೆ ಹೋಗೋದಿಲ್ಲ" ಅಂದೆ.
"ನಿಮ್ಮದು ಯಾವ ಡಿಪಾರ್ಟ್‌ಮೆಂಟೂ?"
"ಇಂಟನ್ಯಾಷನಲ್ ಸ್ಟಡೀಸ್."
"ಹಂಗಂದ್ರೆ?"
ವಿವರಿಸುವುದಕ್ಕೆ ನನಗೆ ಮನಸ್ಸಿರಲಿಲ್ಲ.  "ಅದೇ... ಬೇರೆ ಬೇರೆ ದೇಶಗಳ ಬಗ್ಗೆ."  ಚುಟುಕಾಗಿ ಹೇಳಿದೆ.
ಅವನು ಅರ್ಥವಾದಂತೆ ತಲೆದೂಗಿದ.  "ಅಂದ್ರೆ ಈ ಅಮೆರಿಕಾ, ಬುಶ್ಶೂ, ಇರಾಕೂ, ಸತ್ತೋದ್ಲಲ್ಲ ಆಯಮ್ಮ... ಬೆನಜಿರ್!  ಅಂಥಾದ್ದು ತಾನೆ?"
"ಹ್ಞೂ."
"ಅಲ್ಲಾ ಸಾರ್, ಆಯಮ್ಮನ್ನ ಆ ಥರಾ ಹೊಡೆದು ಹಾಕಿಬಿಟ್ರಲ್ಲಾ... ಹೆಣ್ ಹೆಂಗ್ಸನ್ನ...  ಚುಚುಚು.  ತಪ್ಪು ಸಾರ್.  ಅವಳ ಗಂಡ ಬಲೇ ಕೊರಮ ಅಂತೆ ಸಾರ್.  ಅವಳನ್ನ ಹಿಡಕಂಡು ಹೊಡೀತಿದ್ನಂತೆ.  ಅವನೇ ಮಾಡಿಸಿರಬೋದಲ್ವಾ ಸಾರ್ ಈ ಕೊಲೇನ?" ಅಂದವನು ನಾನು ಬಾಯಿ ತೆರೆಯುವ ಮೊದಲೇ "ಹ್ಞೂ ಇಲಿ ಬಿಡಿ, ನಮಗ್ಯಾಕೆ ಅವರ ರಗಳೆ.  ಅಂದಹಾಗೆ ನಿಮಗೆ ತಿಂಗಳಿಗೆ ಎಷ್ಟು ಸಾರ್ ಸಂಬಳ?" ಅಂದ.  ಹೇಳಿದೆ.  ಅವನ ಮುಖದಲ್ಲಿ ತೆಳುವಾಗಿ ನಗೆ ಹರಡಿಕೊಂಡಂತೆ ಕಂಡಿತು.  "ಯೂನಿವರ್ಸಿಟೀಲಿ ಪ್ರೊಫೆಸರ್ ಆಗಬೇಕು ಅಂದ್ರೆ ತುಂಬಾ ಓದಿರಬೇಕು ಅಲ್ವಾ ಸಾರ್?  ಅದೇನೋ ಎಂಫಿಲ್ಲು, ಪಿಹೆಚ್‌ಡಿ ಅಂತೆಲ್ಲಾ ಭಾಳಾ ವರ್ಷ ಓದಬೇಕು ಅಲ್ವಾ?  ಅದನ್ನೆಲ್ಲಾ ಓದಿ ಕೆಲಸಕ್ಕೆ ಸೇರಬೇಕು ಅಂದ್ರೆ ತುಂಬಾನೇ ವಯಸ್ಸಾಗಿಹೋಗಿರ್ತದೆ ಅನ್ನೀ.  ಅಂದಹಾಗೆ ಕೆಲಸಕ್ಕೆ ಸೇರಿದಾಗ ಎಷ್ಟಾಗಿತ್ತು ಸಾರ್ ನಿಮಗೆ ವಯಸ್ಸು?"
"ಮೂವತ್ತು."  ಹಿಂದಕ್ಕೆ ಒರಗಿದೆ.  ನಿಮಿಷಗಳ ಲೆಕ್ಕಾಚಾರ ನಡೆಸಿ ಅವನು ಬಾಯಿ ತೆರೆದ: "ನಾ ಓದಿದ್ದು ಎಸೆಸೆಲ್ಸಿ ಅಷ್ಟೇ.  ಅದೂ ಫೇಲು.  ಮತ್ತೆ ಕಟ್ಲೇ ಇಲ್ಲ.  ಬಿಸಿನೆಸ್ ಶುರು ಮಾಡ್ದೆ.  ನೀವು ಈಗ ತಗೋತಾ ಇರೋವಷ್ಟು ಸಂಬಳವನ್ನ ನಾನು ಇಪ್ಪತ್ತೈದನೇ ವಯಸ್ನಲ್ಲೇ ಅಂದ್ರೆ ನಿಮಗೆ ಕೆಲಸ ಸಿಗೋದಕ್ಕೂ ಐದ್ ವರ್ಷ ಮೊದ್ಲೇ ಸಂಪಾದಿಸ್ತಿದ್ದೆ."
ಇದೇ ಅರ್ಥದ ಮಾತನ್ನು ನನ್ನ ಹೆಂಡತಿಯ ಸೋದರಮಾವ ಮದುವೆಯೊಂದರಲ್ಲಿ ಹತ್ತಾರು ಜನರೆದುರಿಗೇ ಹೇಳಿದ್ದ.
ಉತ್ತರಿಸದೇ ಕಣ್ಣುಮುಚ್ಚಿದೆ.  ಅವನು ನನ್ನ ಪಾಡಿಗೆ ನನ್ನನ್ನು ಬಿಟ್ಟ.  ಅವನ ಗೆಳೆಯನಂತೂ ಬಾಯಿ ತೆರೆದಿರಲೇ ಇಲ್ಲ.  ಐದಾರು ನಿಮಿಷಗಳಲ್ಲಿ ಕೃಷ್ಣಗಿರಿ ಬಂತು.  ರಸ್ತೆ ಬದಿಯ ಟೀ ಅಂಗಡಿಯೊಂದರ ಮುಂದೆ ಕಾರ್ ನಿಲ್ಲಿಸಲು ಡ್ರೈವಗೆ ಹೇಳಿದ ಕುಳ್ಳ ವಾಹನ ನಿಲುಗಡೆಗೆ ಬರುವ ಮೊದಲೇ ಅಂಗಡಿಯನಿಗೆ "ಆರು ಟೀ" ಎಂದು ಕೂಗಿ ಹೇಳಿದ.  ಯುವಕ ತನಗೆ ಬೇಡ ಅಂದ.  ಹೆಂಗಸು ಹೆಗಲಚೀಲದಿಂದ ನೀರಿನ ಬಾಟಲ್ ಹೊರತೆಗೆದು ಬಾಯಿ ಮುಕ್ಕಳಿಸಿ ರಸ್ತೆಬದಿಯ ಮೋರಿಯಂಚಿಗೆ ಉಗಿದು ಟೀ ಲೋಟಕ್ಕೆ ಕೈಯೊಡ್ಡಿದಳು.  ಟೀ ಅಂಗಡಿಯವನಿಂದ ನೀರಿನ ಲೋಟ ತೆಗೆದುಕೊಳ್ಳುತ್ತಿದ್ದ ಕುಳ್ಳ ಥಟಕ್ಕನೆ ಕೈ ಹಿಂತೆಗೆದು ಹೆಂಗಸಿನ ವಾಟರ್ ಬಾಟಲಿನತ್ತ ಚಾಚಿದ.  ಒಂದೇ ಗುಟುಕಿಗೆ ನೀರನ್ನು ತಳ ಕಾಣಿಸಿದ.  "ಆಕ್ವಾಫಿನಾ ನೀರು!  ಟೇಸ್ಟ್ ಒಂಥರಾ ಚಂದ.  ನೀನೂ ಕುಡಿತೀಯ ರಾಜಪ್ಪಾ?" ಎಂದು ಗೆಳೆಯನನ್ನು ಕೇಳಿದ.  ಆ ಮಹರಾಯ ಬಾಟಲನ್ನು ಸೆಳೆದುಕೊಂಡು ಇದ್ದ ನಾಕು ಗುಟುಕನ್ನೂ ಬಾಯಿಗೆ ಸುರಿದುಕೊಂಡ.  ಖಾಲಿ ಬಾಟಲನ್ನು ಬೆರಳಿನಿಂದ ಬಡಿಯುತ್ತಾ "ನಿಮ್ ನೀರನ್ನೆಲ್ಲಾ ಖಾಲಿ ಮಾಡಿಬಿಟ್ವಿ ಕಣಮ್ಮ!  ಬೇಕು ಅಂದ್ರೆ ಹೇಳಿ.  ತುಂಬಿದ ಬಾಟಲ್ ತೆಗೆದುಕೊಡ್ತೀನಿ" ಅಂದ.  ಅವನ ಬಾಯಿಂದ ಹೊರಟ ಮೊತ್ತಮೊದಲ ಮಾತು ಅದು.  ಹೆಂಗಸು ನಗಾಡುತ್ತಾ "ಹೋಗ್ಲಿ ಬಿಡಿ ಇವರೇ.  ಎರಡುಮೂರು ಗಂಟೇನಲ್ಲಿ ತಂಗೀ ಮನೇಲಿರ್ತೀನಿ.  ಅಲ್ಲೇ ಕುಡಿದರಾಯ್ತು" ಅಂದಳು.
ಟೀ ಚೆನ್ನಾಗಿತ್ತು.  "ಟೀ ಜೊತೆ ನೆಂಜ್ಕೊಳ್ಳಿ, ಚೆನ್ನಾಗಿರುತ್ತೆ" ಎನ್ನುತ್ತಾ ಕುಳ್ಳನ ಗೆಳೆಯ ಅಲ್ಲೇ ಪಾತ್ರೆಯಿಂದ ಒಂದೊಂದು ತಣ್ಣಗಿನ ವಡೆ ತೆಗೆದು ಎಲ್ಲರಿಗೂ ಕೊಟ್ಟ.  ನನ್ನನ್ನು ತಡೆದು ಅವನೇ ಅಂಗಡಿಯವನಿಗೆ ಹಣ ತೆತ್ತ.  ಈಗ ಬೆಳಕಿನಲ್ಲಿ ಅವನನ್ನು ಸರಿಯಾಗಿ ನೋಡಿದೆ.  ಅವನ ಹೆಸರು ಅದೇನೇ ಇರಲಿ, ಕರಿಯ ಎಂದು ಧಾರಾಳವಾಗಿ ಕರೆಯಬಹುದಾದಷ್ಟು ಕಡುಗಪ್ಪನೆಯ ದೇಹ, ಕೋಲುಮುಖ, ಕಡುಗಪ್ಪು ತುಂಡುಗೂದಲು.  ಕೈಕಾಲುಗಳು ಕರೀಗೊಬ್ಬಳಿಮರದಲ್ಲಿ ಅಳತೆ ನೋಡಿಕೊಂಡು ಅಚ್ಚುಕಟ್ಟಾಗಿ ಕೆತ್ತಿದಂತಿದ್ದವು.
ಟೀ ಕುಡಿದು ಮತ್ತೆ ಹೊರಟೆವು.  ಎರಡುನಿಮಿಷದಲ್ಲಿ ರಸ್ತೆ ಎರಡೂ ಬದಿಗೆ ವಿಶಾಲವಾಗಿ ಹರಡಿಕೊಂಡು ಬೆಳಕಿನಲ್ಲಿ ಮೀಯುತ್ತಿದ್ದ ಟೋಲ್‌ಗೇಟ್ ಎದುರಾಯಿತು.  ಸಂಜೆ ಇತ್ತ ಬರುವಾಗಲೇ ಪಾವತಿಸಿದ್ದ ರಶೀದಿಯನ್ನು ಕಿಟಕಿಯಲ್ಲಿ ಕೂತು ಕೈಚಾಚಿದ ಹದ್ದುಗಣ್ಣಿನವನ ಮುಖಕ್ಕೆ ಹಿಡಿದು ಡ್ರೈವರ್ ಸುಂಯ್ಯನೆ ವಾಹನ ಚಲಾಯಿಸಿದ.  ಬೆಟ್ಟದ ಸೀಮೆಯಲ್ಲಿ ಮೇಲೇರಿ ಕೆಳಗಿಳಿದು ಸಾಗುವ ಸುವಿಶಾಲ ಹೆದ್ದಾರಿ.  ಗಾಡಿ ತೂಗಿದಂತಾಗಿ ಮಂಪರುಗಟ್ಟಿತು.  ಹೆಂಗಸೂ ಹುಡುಗನೂ ಮಾತಾಡುತ್ತಲೇ ಇದ್ದರು.
ಬಡಿದು ಎಬ್ಬಿಸಿದಂತೆ ಗಕ್ಕನೆ ಎಚ್ಚರವಾಯಿತು.  ಕಣ್ಣುಬಿಟ್ಟರೆ ಏನೊಂದೂ ತಿಳಿಯಲಿಲ್ಲ.  ಗಾಡಿ ನಿಂತಿತ್ತು.  ಒಳಗೆ ಹೊರಗೆ ಪೂರ್ತಿ ಕತ್ತಲೆ.  ಏನಾಯಿತೆಂದು ಪಕ್ಕದ ಕುಳ್ಳನನ್ನು ಕೇಳಲು ಬಾಯಿ ತೆರೆಯುವಷ್ಟರಲ್ಲಿ ಕತ್ತಲೇ ನರಳಿದಂತೆ ಡ್ರೈವರನ ಗೋಗರೆಯುವ ದನಿ ಕಿವಿಗೆ ಬಿತ್ತು: ""ಸಾರ್, ಗಾಡಿ ನಂದಲ್ಲಾ ಸಾರ್.  ನಮ್ ಸಾವ್ಕಾರಿ ಶ್ಯಾನೇ ಖಡಕ್ಕು.  ನನ್ ಹೊಟ್ಟೆ ಮೇಲೆ ಹೊಡೀಬೇಡಿ ಸಾರ್.  ನಾನು ಮಕ್ಕಳೊಂದಿಗ."  ಹಿಂದೆಯೇ ಕರಿಯನ ದನಿ ಕತ್ತಲನ್ನು ಸೀಳಿಕೊಂಡು ಬಂತು: "ಹಾಗೇ ಮುಂದೆ ಹೋಗಿ ಎಡಕ್ಕೆ ತಗೋ.  ಹೆಚ್ಚು ಮಾತಾಡಬೇಡ."
ಸರಕ್ಕನೆ ಅತ್ತ ತಿರುಗಿದೆ.  ಅವನು ಸೀಟಿನಂಚಿನಲ್ಲಿ ಅರ್ಧ ಎದ್ದವನಂತೆ ಮುಂದಕ್ಕೆ ನಿಗುರಿಕೊಂಡಿದ್ದ.  ಅವನ ಕೈ ಡ್ರೈವ ಸೀಟಿನ ಮೇಲಿತ್ತು.  ಅಲ್ಲೇನೋ ಬೆಳ್ಳಗೆ ಮಿಂಚಿದಂತಾಯಿತು.  ಕಣ್ಣರಳಿಸಿ ನೋಡಿದರೆ ಕಂಡದ್ದು ಕತ್ತಲಿನಲ್ಲೂ ಹೊಳೆಯುತ್ತಿದ್ದ ಚಾಕು.
ಗಾಬರಿಯಲ್ಲಿ "ಇದೇನ್ರೀ ಇದೂ?  ಇದೇನು ಮಾಡ್ತಿದೀರಿ ನೀವು?" ಎಂದರಚಿದೆ.  ಕುಳ್ಳ ನನ್ನ ಪಕ್ಕೆಗೆ ತಿವಿದ.  "ತೆಪ್ಪಗೆ ಕೂರು ಮುದಿಯ."  ನನ್ನ ಕಣ್ಣ ಮುಂದೆ ಚಾಕು ಆಡಿಸಿದ.  ಅವನ ಕೈಯಲ್ಲೂ ಚಾಕು ಕಂಡು ನನಗೆ ಉಸಿರು ಸಿಕ್ಕಿಕೊಂಡಿತು.  ಮುಂದೆ ಹೆಂಗಸು ಕುಸುಕಿದಳು.  "ಯಾಕ್ರಣ್ಣಾ ಹೀಗೆ ಮಾಡ್ತಿದಿರೀ?  ಒಳ್ಳೇವ್ರು ಅಂತ ಜತೆಲಿ ಬಂದ್ರೆ ನೀವು..."  ಕುಳ್ಳ ಅವಳ ಮಾತನ್ನು ಅಲ್ಲಿಗೇ ಕತ್ತರಿಸಿದ: "ನಾವು ಒಳ್ಳೇವ್ರೇ ಕಣಮ್ಮ.  ನಮಗಿಲ್ಲಿ ಒಂದೆರಡು ನಿಮಿಷದ ಕೆಲಸ ಇದೆ ಅಷ್ಟೇ.  ಅದಾದ ಕೂಡ್ಲೇ ನಿಮ್ಮ ದಾರಿ ನಿಮಗೆ, ನಮ್ಮ ದಾರಿ ನಮಗೆ."
ಕರಿಯ ಡ್ರೈವನ ಕುತ್ತಿಗೆಯ ಮೇಲೆ ಚಾಕು ಒತ್ತಿದ.  "ನಡಿ ಮುಂದಕ್ಕೆ.  ಹ್ಞೂ."  ಅಬ್ಬರಿಸಿದ.  ಮೋಡಗಳ ಮರೆಯಿಂದ ಹೊರಬರುತ್ತಿದ್ದ ಚಂದ್ರನ ಮಾಸಲು ಬೆಳಕಿನಲ್ಲಿ ಚಾಕು ಹಿಡಿದ ಬೆರಳುಗಳು ಬೆಳ್ಳಗೆ ಬಿಳಿಚಿಕೊಂಡಿದ್ದವು.  ಡ್ರೈವರ್ ಸಣ್ಣಗೆ ನರಳಿದ.  ಮತ್ತೊಮ್ಮೆ "ಹ್ಞೂಂ" ಎಂಬ ಅಬ್ಬರದ ಆಣತಿ ಕಿವಿಗೆ ಬೀಳುತ್ತಿದ್ದಂತೇ ಕಾರು ನಿಧಾನವಾಗಿ ಮುಂದೆ ಸರಿಯಿತು.
ನಾನು ದಿಗ್ಭ್ರಮೆಯಲ್ಲಿ ಕುಸಿಯುತ್ತಿದ್ದಂತೇ ಮತ್ತೊಂದು ಆಜ್ಞೆ: "ಇಲ್ಲಿ ಎಡಕ್ಕೆ ತಿರುಗಿಸು.  ಹೆಡ್‌ಲೈಟ್ ಆಫ್ ಮಾಡು."
ವಾಹನ ಮುಖ್ಯರಸ್ತೆ ಬಿಟ್ಟು ಎಡಕ್ಕೆ ಹೊರಳಿತು.  ಭಾರಿಭಾರಿ ಹೆಬ್ಬಂಡೆಗಳು ಗಿಡಿದು ಕೂತಿದ್ದ ಕಲ್ಲುಬೆಟ್ಟಗಳೆರಡರ ನಡುವಿನ ಇರುಕಿನಂತಹ ಏರುಹಾದಿಯಲ್ಲಿ ಚಲಿಸಿತು.
"ನಿಮಗೆ ಹಣ ಬೇಕಿದ್ರೆ ತಗೊಳ್ಳಿ.  ಅದಕ್ಕಾಗಿ ನೀವು ನಮಗ್ಯಾರಿಗೂ ತೊಂದರೆ ಕೊಡೋದು ಬೇಡ."  ಸಾವರಿಸಿಕೊಂಡು ಮತ್ತೆ ಬಾಯಿ ತೆರೆದೆ.  ಮರುಕ್ಷಣ ಕುಳ್ಳನ ಎಡಗೈ ನನ್ನ ಹಣೆಗೆ ಛಟ್ಟನೆ ಬಾರಿಸಿತು.  "ಬಾಯಿ ಮುಚ್ಚೋ ಮುದುಕಾ.  ಹೇಳಿದ್ದು ಅರ್ಥ ಆಗ್ಲಿಲ್ವಾ?  ಬೀಜ ಚಚ್‌ಹಾಕಿಬಿಡ್ತೀನಿ ನೋಡು."  ಅರಚಿದ.  "ಅವರನ್ಯಾಕ್ರಣ್ಣಾ ಹೊಡಿತಿದ್ದೀರಾ?  ಅಯ್ಯೋ ದೇವ್ರೇ ಎಂಥಾ ಕಷ್ಟಕ್ಕೆ ಸಿಕ್ಕೊಂಡ್ವಪ್ಪಾ."  ಹೆಂಗಸು ದನಿಯೆತ್ತಿ ಅಳತೊಡಗಿದಳು.
ಕುಳ್ಳನ ದನಿ ತಕ್ಷಣ ಮೃದುವಾಯಿತು: "ನಿಮಗೇನೋ ಆಗೋದಿಲ್ಲ ಸುಮ್ನಿರಮ್ಮ.  ಈ ತರಲೆ ಮೇಷ್ಟ್ರು ಮತ್ತೆ ಮತ್ತೆ ಬಾಲ ಬಿಚ್ತಾ ಇದಾನೆ.  ಅದಕ್ಕೇ ಒಂದು ಬಾರಿಸಬೇಕಾಯ್ತು."
ಮತ್ತೆ ಉಸಿರೆತ್ತಿದರೆ ಅದು ಅರ್ಥಹೀನ ಹುಚ್ಚುಸಾಹಸವಾಗುತ್ತದೆ ಎಂದರಿವಾಯಿತು.  ಇವರ ಉದ್ದೇಶವೇನೆಂದು ಸ್ಪಷ್ಟವಾಗದೇ ಆತಂಕ ನೆರೆಯ ನೀರಿನಂತೆ ಏರತೊಡಗಿತು.  ಹೆದ್ದಾರಿಯಲ್ಲಿ ಸುಳಿದಾಡುವ ವಾಹನಗಳಿಗೆ ಹೆದರಿ ಅಲ್ಲಿ ನಮ್ಮನ್ನು ದರೋಡೆ ಮಾಡದೇ ಗುಡ್ಡಗಳಿಂದ ಮರೆಯಾದ ನಿರ್ಜನ ಸ್ಥಳಕ್ಕೆ ಕರೆದೊಯ್ಯುತ್ತಿರಬಹುದೆಂಬ ಊಹೆಯೊಂದನ್ನು ಬಿಟ್ಟರೆ ಮತ್ತೇನೂ ಹೊಳೆಯಲಿಲ್ಲ.  ಯಾವುದನ್ನೂ ಕಾದು ನೋಡುವಾ ಎಂದುಕೊಂಡು ಸುಮ್ಮನೆ ಕುಳಿತೆ.  ನಾನು ಮತ್ತೆ ಬಾಯಿ ತೆರೆಯದಂತೆ ಕುಳ್ಳನ ಚಾಕು ನನ್ನ ಭುಜದ ಮೇಲಿತ್ತು.  ಕರಿಯ ಡ್ರೈವನ ಕುತ್ತಿಗೆಗೆ ಚಾಕು ಹಿಡಿದೇ ಇದ್ದ.  ಹೆಂಗಸಿನ ಅಳು ನಿಂತಿತ್ತು.  ಯುವಕನ ಒಂದು ಮಾತೂ ಇದುವರೆಗೆ ನನ್ನ ಕಿವಿಗೆ ಬಿದ್ದಿರಲಿಲ್ಲ.
ಎಡಬಲಕ್ಕೆ ಕುಲುಕುತ್ತಾ ಹಿಂದುಮುಂದಕ್ಕೆ ಮುಗ್ಗರಿಸುತ್ತಾ ಐದಾರು ನಿಮಿಷ ಸಾಗಿದ ನಂತರ ದಾರಿ ಇಳಿಜಾರಾಗಿ ಎಡಕ್ಕೆ ಹೊರಳಿದಂತೆ ಕಂಡಿತು.  ವಾಹನದ ಕುಲುಕಾಟ ಮತ್ತೂ ಹೆಚ್ಚಿತು.  ತಲೆಯನ್ನು ಅಲುಗಿಸದೇ ಕಣ್ಣುಗಳನ್ನು ಓರೆಯಾಗಿಸಿ ಎಡಕ್ಕೆ ಕಿಟಕಿಯಾಚೆ ನೋಡಿದೆ.  ಕಿಟಕಿಗೆ ಅಂಟಿದಂತೇ ಇದ್ದ ಬೆಟ್ಟದ ಕಪ್ಪು ಗೋಡೆಯ ಹೊರತಾಗಿ ಬೇರೇನೂ ಕಾಣಲಿಲ್ಲ.  ವಾಹನ ಒಮ್ಮೆ ಧಡ್ಡನೆ ಎಗರಿ ಬಲಕ್ಕೆ ವಾಲಿಕೊಂಡಿತು.  ನಾನು ಕುಳ್ಳನ ಮೈಮೇಲೆ ಬಿದ್ದೆ.  ಅವನ ಕೈಯಲ್ಲಿದ್ದ ಚಾಕು ನನ್ನ ಕತ್ತಿನಲ್ಲಿ ಸರಕ್ಕನೆ ಇಳಿಯಿತು.  "ಹ್ಞಾ" ಎಂಬ ಚೀತ್ಕಾರ ನನ್ನ ನಿಯಂತ್ರಣವನ್ನೂ ಮೀರಿ ಹೊರಬಂತು.  ಹೆಂಗಸು ಛಕ್ಕನೆ ಹಿಂದೆ ತಿರುಗಿದಳು.  ಕುಳ್ಳ ನನ್ನನ್ನು ಅಸಡ್ಡೆಯಿಂದ ನೂಕಿ ಕಾರ್ ನಿಲ್ಲಿಸಲು ಡ್ರೈವಗೆ ಹೇಳಿದ.  ಕಾರು ಗಕ್ಕನೆ ನಿಲುಗಡೆಗೆ ಬಂತು.
ಎಡಗೈಯನ್ನು ಬಲ ಕತ್ತಿನ ಮೇಲೆ ಆಡಿಸಿದೆ.  ರಕ್ತ ಬೆರಳುಗಳಿಗೆ ಅಂಟಿಕೊಂಡಿತು.  ಗಾಯವೇನೂ ಆಳವಾಗಿದ್ದಂತೆ ಕಾಣಲಿಲ್ಲ.  ಆದರೆ ಉರಿಯುತ್ತಿತ್ತು.  ಕುಳ್ಳ ನನ್ನ ಭುಜ ಒತ್ತಿ ಬಾಗಿಲು ತೆರೆಯುವಂತೆ ಸೂಚಿಸಿದ.  ಕರಿಯ ಛಟ್ಟನೆ ತನ್ನ ಕಡೆಯ ಬಾಗಿಲು ತೆರೆದು ಹೊರಗೆ ಹಾರಿ ಡ್ರೈವರ್ ಕಡೆಯ ಬಾಗಿಲನ್ನು ತೆರೆದ.  ಎಡಗೈಯನ್ನು ಕುತ್ತಿಗೆಯ ಗಾಯದ ಮೇಲೆ ಒತ್ತಿಕೊಂಡೇ ಬಲಗೈಯಿಂದ ಬಾಗಿಲ ಹಿಡಿಕೆಗಾಗಿ ತಡಕಾಡಿದೆ.  ಮುಂದಿನ ಸೀಟಿನಲ್ಲಿ ಆತುರದ ಚಲನೆಗಳು ಕಂಡುಬಂದವು.  ಆ ಯುವಕ ಛಕ್ಕನೆ ಬಾಗಿಲು ತೆರೆದು ಮಿಂಚಿನಂತೆ ಹೊರಗೆ ಹಾರಿದ.  "ರಾಜಪ್ಪಾ, ಹಿಡೀ ಅವನನ್ನ" ಎಂದು ಕುಳ್ಳ ಚೀರುತ್ತಿದ್ದಂತೆ ಯುವಕ ಕಲ್ಲುಬಂಡೆಗಳ ನಡುವೆ ಜಿಗಿಜಿಗಿದು ಓಡಿಬಿಟ್ಟ.  ನಾನು ಕೆಳಗಿಳಿದು ನಿಲ್ಲುವ ಹೊತ್ತಿಗೆ ಅವನು ತನ್ನ ಜಾಡಿನ ಗುರುತೂ ಇಲ್ಲದಂತೆ ಅದೆಲ್ಲೋ ಮಾಯವಾಗಿಹೋಗಿದ್ದ.  ಒಂದು ಕೈಯಲ್ಲಿ ಚಾಕು, ಮತ್ತೊಂದರಲ್ಲಿ ಡ್ರೈವನ ಕೊರಳಪಟ್ಟಿ ಹಿಡಿದಂತೇ ಯುವಕ ಓಡಿದ ದಿಕ್ಕಿಗೆ ನಾಕು ಹೆಜ್ಜೆ ಹಾಕಿದ ಕರಿಯ ಅಸಹನೆಯಲ್ಲಿ ಗೊಣಗುತ್ತಾ ನಿಂತ.  ಡ್ರೈವನ ಕೊರಳಪಟ್ಟಿಯಿಂದ ಕೈ ತೆಗೆದು ತನ್ನ ಹಣೆಯ ಮೇಲಿಟ್ಟುಕೊಂಡ.  ಆ ಗಳಿಗೆಗೆ ಸರಿಯಾಗಿ "ಅಲ್ಲಿದ್ದಾನೆ ಕಣ್ರೀ.  ನಿಮಗೆ ಕಾಣ್ತಾ ಇಲ್ವಾ?  ಇರಿ ನಾ ಹಿಡಕಂಡು ಬರ್ತೀನಿ ಬೋಳಿಮಗನ್ನ" ಎಂದರಚಿದ ಡ್ರೈವರ್ ಯುವಕ ಓಡಿದ ದಿಕ್ಕಿನಲ್ಲಿ ಬೀಳುವುದನ್ನೂ ಲೆಕ್ಕಿಸದೇ ಎಗರಿ ಎಗರಿ ಓಡಿದ.  "ಅರೆ ಮಾದರಚೋತ್!  ಚಾಲಾಕಿ ಸೂಳೆಮಗ."  ಇದುವರೆಗೂ ಡ್ರೈವನನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ ಕೇಡಿ ಬೈದುಕೊಂಡ.  ನನ್ನನ್ನು ಒಂದು ಪಕ್ಕಕ್ಕೆ ನೂಕಿ ಅವನತ್ತ ನಡೆದ ಕುಳ್ಳ ಏನೋ ಗೊಣಗಿ "ಹೋದ್ರೆ ಹೋಗ್ಲಿ ನಾಯಿಕುನ್ನಿಗಳು.  ಒಳ್ಳೇದೇ ಆಯ್ತು ಬಿಡು.  ನಮ್ಮ ಕೆಲಸ ಬೇಗ ಮುಗಿಸಿ ಜಾಗ ಖಾಲಿಮಾಡೋಣ" ಎನ್ನುತ್ತಾ ಕಾರಿನ ಮುಂದಿನ ಸೀಟಿನತ್ತ ತಿರುಗಿದ.
ಯುವಕನ ಲ್ಯಾಪ್‌ಟಾಪ್ ಸೀಟಿನ ಮೇಲೇ ಬಿದ್ದುಕೊಂಡಿತ್ತು.  ಅವನದನ್ನು ಅಲ್ಲೇ ಬಿಟ್ಟು ಓಡಿಹೋಗಿದ್ದ.  ಅವನ ಚೀಲವೂ ಅಲ್ಲೇ ಇರಬೇಕು.  ಓಡುವ ಆತುರದಲ್ಲಿ ಅವನು ಏನನ್ನಾದರೂ ತೆಗೆದುಕೊಂಡು ಹೋದಂತೆ ಕಂಡಿರಲಿಲ್ಲ.  ನಾನು ಗಮನಿಸಿದ ಹಾಗೆ ಡ್ರೈವರ್ ಸಹಾ ಬರಿಗೈಯಲ್ಲೇ ಓಟ ಕಿತ್ತಿದ್ದ.  ಅವರಿಬ್ಬರ ಸಾಮಾನುಗಳೆಲ್ಲವೂ ಈಗ ಈ ಕೇಡಿಗಳ ವಶ.  ನನ್ನ ಹಾಗೂ ಆ ಹೆಂಗಸಿನ ಸಾಮಾನುಗಳೂ ಈ ಗಳಿಗೆಯಲ್ಲಿ ಅವರವೇ ಆಗಿದ್ದವು.  ಕೈಯಲ್ಲಿದ್ದ ವಾಚು, ಉಂಗುರಗಳನ್ನು ತೆಗೆದು ನನ್ನನ್ನು ಸಮೀಪಿಸಿದ ಕರಿಯನತ್ತ ಹಿಡಿದೆ.  ಅವನು ಪಕಪಕನೆ ನಕ್ಕುಬಿಟ್ಟ.  "ಇಲ್ನೋಡೋ ಕುಪ್ಪಣ್ಣಾ, ಈವಯ್ಯ ಹೆದಕೊಂಡು ವಾಚು ಉಂಗ್ರ ಬಿಚ್ಚಿ ಕೊಡ್ತಿದಾನೆ."  ಕುಳ್ಳನತ್ತ ತಿರುಗಿ ಹೇಳಿ ಮತ್ತೊಮ್ಮೆ ನಕ್ಕ.  "ಅದನ್ನೆಲ್ಲ ಅವನ ಮೂತಿಗೇ ಎಸೆದು ಕಾನೊಳಕ್ಕೆ ದಬ್ಬು.  ಅವನಿಗೇನ್ ಕೆಲ್ಸ ಇದೆ ಇಲ್ಲಿ?"  ಕುಳ್ಳನ ಉತ್ತರ ಬಂತು.  ತಿಳಿಯಾಗುತ್ತಿದ್ದ ಗೊಂದಲ ಒಮ್ಮೆಲೆ ಅಧಿಕವಾಯಿತು.  ನಕ್ಕು ಅಪಹಾಸ್ಯ ಮಾಡುತ್ತಿದ್ದ ಕರಿಯನನ್ನೇ ಮಿಕಿಮಿಕಿ ನೋಡಿದೆ.  "ನಿನಗೇನೂ ಕೆಲಸ ಇಲ್ಲ.  ಒಳಗೆ ತೆಪ್ಪಗೆ ಕೂರು" ಎನ್ನುತ್ತಾ ತೆರೆದಿದ್ದ ಬಾಗಿಲತ್ತ ನನ್ನನ್ನು ನೂಕಿದ ಅವನು.  ನೂಕಿದ ರಭಸಕ್ಕೆ ಸೀಟಿನಲ್ಲಿ ಕುಸಿದೆ.  "ಕಾಲು ಒಳಗೆ ತಗೋ."  ಹೇಳುತ್ತಾ ನನ್ನ ಮಂಡಿಯ ಮೇಲೆ ಬಲವಾಗಿ ಒದ್ದ.  ನನ್ನ ಪ್ರಯತ್ನವನ್ನೂ ಮೀರಿ ನರಳಿಕೆ ಗಂಟಲಿನಿಂದ ಹೊರಬಂತು.  ಹಿಂದೆಯೇ ಅವನು ಧಡ್ಡನೆ ಬಾಗಿಲು ಮುಚ್ಚಿದ.  ಅರೆತೆರೆದಿದ್ದ ಕಿಟಕಿಯ ಮೂಲಕ ಎಚ್ಚರಿಸಿದ: "ತಿಕ ಬಾಯಿ ಎರಡನ್ನೂ ಮುಚ್ಕೊಂಡು ಕೂರು.  ಬಾಲ ಬಿಚ್ಚಿದ್ರೆ ಹೆಣ ಆಗ್ತಿಯ."
ಇವರಿಗೆ ಬೇಕಾಗಿರುವುದೇನು?
"ಅದೇನೋ ಅವರು ಹೇಳಿದ ಹಾಗೇ ಕೇಳಿಬಿಡಿ ಸಾರ್.  ಸುಮ್ನೆ ಯಾಕೆ ನೋವು ಅನುಭವಿಸ್ತೀರಾ."  ಹೆಂಗಸು ಹಿಂದೆ ತಿರುಗಿ ಮರುಕದ ದನಿಯಲ್ಲಿ ಹೇಳಿದಳು.
ಕುಳ್ಳ ಗಹಗಹಿಸಿದ.  "ಸರಿಯಾಗಿ ಹೇಳಿದೆ ಕಣಮ್ಮ.  ಜಾಣರು ಮಾಡೋ ಕೆಲಸ ಇದು.  ಈಗ ಸ್ವಲ್ಪ ನಾವು ಹೇಳಿದ ಹಾಗೆ ಕೇಳಿಬಿಡಮ್ಮ.  ಜಾಣೆ ನೀನು."  ದನಿಯಲ್ಲಿ ಅಣಕವಿತ್ತು.
"ಹಂಗಂದ್ರೇನ್ರಿ?"  ಹೆಂಗಸಿನ ದನಿಯಲ್ಲಿ ಗಾಬರಿ.  ನನಗೂ ಗಾಬರಿಯಾಯಿತು.  ಇದುವರೆಗೂ ಇವರು ನನ್ನನ್ನಷ್ಟೇ ಗುರಿಯಾಗಿಸಿಕೊಂಡಿದ್ದರು.  ಹೆಂಗಸಿಗೆ ಹಾನಿಯೆಸಗುವಂಥ ಯಾವ ಸೂಚನೆಯನ್ನೂ ಅವರು ನೀಡಿರಲಿಲ್ಲ.  ಈಗೇಕೋ ನನಗೆ ಅನುಮಾನವಾಗತೊಡಗಿತು.  ಕುಳ್ಳನತ್ತ ತಿರುಗಿದೆ.
ಅವನು ಹೆಂಗಸಿನ ಪಕ್ಕದಲ್ಲಿದ್ದ ಸಾಫ್ಟ್‌ವೇರ್ ಹುಡುಗನ ಲ್ಯಾಪ್‌ಟಾಪನ್ನು ಎಡಗೈಯಿಂದ ಎತ್ತಿ ಹಿಂದಿನ ಸೀಟಿನತ್ತ ಅಸಡ್ಡೆಯಿಂದ ಎಸೆದ.  ಅದು ನನ್ನ ಭುಜಕ್ಕೆ ಬಡಿದು ನನ್ನ ಕಾಲಬಳಿ ಉರುಳಿಬಿತ್ತು.  ನನ್ನ ಆತಂಕ ಎಲ್ಲೆ ಮೀರುತ್ತಿದ್ದಂತೇ ಕುಳ್ಳ ಹೆಂಗಸಿನ ಭುಜಕ್ಕೆ ಕೈ ಹಾಕಿದ.  "ಜಾಣಮರೀ, ಸ್ವಲ್ಪ ಕೆಳಗೆ ಇಳಿಯಮ್ಮ.  ಒಂಚೂರು ಕೆಲ್ಸಾ ಇದೆ."
"ಇದೇನಪ್ಪ ಇದೂ.  ತೆಗೀ ಕೈನ."  ಹೆಂಗಸು ಗಾಬರಿ ಅಸಹನೆಯಲ್ಲಿ ಅರಚಿದಂತೇ ಕುಳ್ಳ "ಅಯ್ ಇಳಿಯೇ ಕೆಳಗೇ" ಎನ್ನುತ್ತಾ ಅವಳ ರಟ್ಟೆಗೆ ಕೈಹಾಕಿ ಹೊರಗೆಳೆದ.  ಹೆಂಗಸು "ಅಯ್ಯಮ್ಮಾ" ಎಂದು ಚೀರುತ್ತಿದ್ದಂತೇ ನನ್ನ ತಲೆಗೆ ಹೊಡೆತ ಬಿತ್ತು.  "ಮುಂದುಗಡೆ ಸೀಟಿಗೆ ಹಣೆ ಅಂಟಿಸ್ಕೊಂಡು ಕೂರು."  ಕರಿಯ ಗದರಿದ.  ಸೀಟಿಗೆ ನನ್ನ ತಲೆಯನ್ನು ಒತ್ತಿಹಿಡಿದ.  ಕುತ್ತಿಗೆಯ ಮೇಲೇನೋ ತಣ್ಣಗೆ ಹರಿಯಿತು.  "ಕತ್ತು ಮೇಲೆತ್ತಿದರೆ ಕತ್ತರಿಸಿಬಿಡ್ತೀನಿ."  ಸೀಳುಕಂಠದಲ್ಲಿ ಅರಚಿದ.  ಬಾಗಿಲು ತೆರೆದು ಕಿಟಕಿಯ ಗಾಜನ್ನು ಸರ್ರನೆ ಮೇಲೆತ್ತಿದ.  ಧಡ್ಡನೆ ಬಾಗಿಲು ಮುಚ್ಚಿದ.
ದೈಹಿಕವಾಗಿ ನಾನು ಅವನಿಗೇನೂ ಕಡಿಮೆ ಇರಲಿಲ್ಲ.  ಆದರೆ ಅವನಲ್ಲಿದ್ದ ಚಾಕು ನಮ್ಮಿಬ್ಬರ ಶಕ್ತಿಯ ಸಮತೋಲನವನ್ನು ಏರುಪೇರಾಗಿಸಿ ನನ್ನನ್ನು ನಿಸ್ಸಹಾಯಕಗೊಳಿಸಿತ್ತು.
ಮುಂದಿನ ಸೀಟಿನಲ್ಲಿ ಧಡಭಡ ಸದ್ದುಗಳು.  ಹೆಂಗಸಿನ ಅಳು ಚೀರಾಟ... ಎರಡು ಕ್ಷಣದಲ್ಲಿ ಅವಳು ಕಾರಿಂದ ಹೊರಗೆ ನೆಲದ ಮೇಲೆ ಧೊಪ್ಪನೆ ಬಿದ್ದ ಶಬ್ಧ.  ಮರುಕ್ಷಣ ಧಡ್ಡನೆ ಮುಚ್ಚಿಕೊಂಡ ಬಾಗಿಲು.  ಕ್ಷೀಣಗೊಂಡ ಆಕ್ರಂದನ...
ತಲೆ ಮೇಲೆತ್ತಿದೆ.  ಕರಿಯ ಕಿಟಕಿಗೆ ಚಾಕು ಒತ್ತಿದ.  ಮುಖದ ಸ್ನಾಯುಗಳನ್ನು ಪೈಶಾಚಿಕವಾಗಿ ವಕ್ರಗೊಳಿಸಿದ...
ಕೇವಲ ಒಂದೆರಡು ನೂರು ಗ್ರಾಂಗಳ ಕಬ್ಬಿಣ ಕೇಡಿಗಳಲ್ಲಿ ತುಂಬಿದ ಪಾಶವೀ ಆತ್ಮವಿಶ್ವಾಸ...  ನನ್ನ ನಿಸ್ಸಹಾಯಕತೆ...  ಆ ಹೆಂಗಸಿನ ದುರ್ದೆಶೆ...
ಇಡೀ ಬದುಕು ಅರ್ಥ ಕಳೆದುಕೊಂಡಿತ್ತು.

*     *    *

ಅತ್ಯಾಚಾರ ಉಂಟುಮಾಡುವ ದೈಹಿಕ ಯಾತನೆ ಹಾಗೂ ಮಾನಸಿಕ ಆಘಾತ, ನಿಸ್ಸಹಾಯಕನಾಗಿ ಅತ್ಯಾಚಾರಕ್ಕೆ ಮೂಕ ಪ್ರೇಕ್ಷಕನಾಗುವ ಪಾಪಪ್ರಜ್ಞೆ- ಎರಡರಲ್ಲಿ ಯಾವುದು ಹೆಚ್ಚು ಕ್ಲೇಶಕರ?
ನನ್ನಲ್ಲಿ ಈಗಲೂ ಉತ್ತರವಿಲ್ಲ.

*     *     *

ಮತ್ತೆ ಬಾಗಿಲ ಹಿಡಿಕೆಗೆ ಕೈಹಾಕಿದೆ.  ಹತ್ತುಮಾರು ದೂರದ ಪುಟ್ಟಮರವೊಂದರ ಕೆಳಗಿನ ಕತ್ತಲ ನೆಲದ ಮೇಲೆ ನಿಶ್ಶಬ್ದ ಚಲನೆಗಳು ಕಂಡುಬಂದವು.  ಮುಂದಿನ ಕ್ಷಣದಲ್ಲಿ ಕಿಟಕಿಯ ಗಾಜಿನ ಮೇಲೆ ನೀಳ ಚಾಕು ಹರಿದಾಡಿತು.  ಈಗ ಅದರ ಹಿಂದಿದ್ದ ಮುಖ ಕುಳ್ಳನದು... ಮತ್ತೆರಡು ಭಯಾನಕ ನಿಮಿಷಗಳು... ಧಡಾರನೆ ತೆರೆದುಕೊಂಡ ಬಲಪಕ್ಕದ ಬಾಗಿಲು.  ಕುಳ್ಳನ ದನಿ ಕಿವಿಗೆ ಅಪ್ಪಳಿಸಿತು: "ನಮ್ಮ ಭೋಜನ ಆಯ್ತು.  ಎಲೇಲಿ ನಿಂಗೂ ಒಂಚೂರು ಉಳಿಸಿದ್ದೀವಿ.  ಹೋಗಿ ನೆಕ್ಕು."
ಸೀಟಿನ ಮೇಲಿದ್ದ ತನ್ನ ಹಾಗು ಕರಿಯನ ಚೀಲಗಳನ್ನು ಹೊರಗೆಳೆದುಕೊಂಡ.  ತೆರೆದ ಬಾಗಿಲನ್ನು ಹಾಗೇ ಬಿಟ್ಟು ಪಕ್ಕಕ್ಕೆ ಸರಿದುಹೋದ.  ಕರಿಯ ಡಿಕ್ಕಿ ತೆರೆದು ಸೂಟ್‌ಕೇಸ್ ಎತ್ತಿಕೊಂಡ.  ಡಿಕ್ಕಿಯನ್ನು ಮುಚ್ಚದೇ ತಗ್ಗಿನತ್ತ ಹೆಜ್ಜೆ ಹಾಕಿದ.
ಮರಗಟ್ಟಿದ್ದ ಬೆರಳುಗಳನ್ನು ಬಾಗಿಲ ಮೇಲೆ ಪರಪರ ಹರಿದಾಡಿಸಿ ಪಿಡಿ ಹಿಡಿದು ತಿರುವಿದೆ.  ಕಾಲುಗಳನ್ನು ಎಳೆದುಹಾಕಿ ಹೊರಗಿಳಿದೆ.  ಎಡಮಂಡಿ ಚಳಕ್ ಎಂದಿತು.  ಕಾರಿನ ಆ ಬದಿಯಲ್ಲಿ ಅವರಿಬ್ಬರ ಬೆನ್ನುಗಳು ಕಂಡವು.  ನಿಶ್ಶಬ್ಧವಾಗಿ, ನಿರ್ವಿಕಾರವಾಗಿ, ನಿರ್ದಾಕ್ಷಿಣ್ಯವಾಗಿ ಅವು ನಡೆದುಹೋಗುತ್ತಿದ್ದವು.
ಮರದ ಕೆಳಗಿನ ಕತ್ತಲಿನತ್ತ ತಿರುಗಿದೆ.  ಹೆಂಗಸಿನ ಅಸ್ಪಷ್ಟ ವಿನ್ಯಾಸ ಕಣ್ಣಿಗೆ ಬಿತ್ತು.  ಅತ್ತ ನಡೆಯಲು ಹೆಜ್ಜೆ ಕಿತ್ತೆ.  ಯಾರೋ ಎದೆಗೆ ಗುದ್ದಿದಂತಾಯಿತು.  ಗಕ್ಕನೆ ನಿಂತೆ.  ಆಗಬಾರದ್ದು ಆಗಿಹೋದ ಮೇಲೆ ಹೋಗಿ ಮಾಡುವುದಾದರೂ ಏನನ್ನು?  ಈಗ ಮುಖ ತೋರಿಸುವ ನನ್ನ ಬಗ್ಗೆ ಅವಳಲ್ಲಿ ಅದೆಷ್ಟು ಅಸಹ್ಯ ಉಕ್ಕಬಹುದು!
ಕಾಲುಗಳು ಹೂತ ಕಂಬದಂತೆ ನಿಂತುಬಿಟ್ಟವು.  ಕತ್ತು ಅಯಾಚಿತವಾಗಿ ಸುತ್ತಲೂ ಹೊರಳಾಡಿತು.
ಕೇಡಿಗಳು ಹೋದೆಡೆ ಕಲ್ಲುಗಳು ತುಂಬಿದ ಇಳಿಜಾರು ಹಾದಿ ಮಸುಕುಬೆಳದಿಂಗಳಲ್ಲಿ ಅಸ್ಪಷ್ಟವಾಗಿ ಕಂಡಿತು.  ಎಡಕ್ಕೆ ತಗ್ಗಿನಲ್ಲಿ ಬೆಳ್ಳಿಯ ತಗಡಿನಂತೆ ಹೊಳೆಯುತ್ತಿರುವುದು ಕೊಳವಿರಬೇಕು.  ಅದರಾಚೆ ಕಡುಗಪ್ಪನೆಯ ಮರಗಳ ಗುಂಪು.  ಬಲಕ್ಕೆ ಗೋಡೆಯಂತೆ ಎತ್ತರಕ್ಕೆ ಏರಿನಿಂತ ಕಲ್ಲುಗುಡ್ಡ.  ಬೆನ್ನ ಹಿಂದೆ ದೂರದಲ್ಲಿ ಯಾವುದೋ ವಾಹನದ ಕ್ಷೀಣ ಮೊರೆತ...
ಮರದ ಕೆಳಗೆ ಮಡುಗಟ್ಟಿದ್ದ ಕತ್ತಲೆ ಒಮ್ಮೆ ನರಳಿ ಬಿಕ್ಕಿತು.  ನನ್ನ ಮೈಯಿಡೀ ನಡುಗಿಹೋಯಿತು.  ಅತ್ತ ಕಾಲೆಳೆದೆ.
ಅವಳು ಎದ್ದು ಕುಳಿತಿದ್ದಳು.  ಬಾಯಿಯೊಳಗೆ ಕೈಹಾಕಿ ಏನನ್ನೋ ಹೊರಗೆಳೆಯುತ್ತಿದ್ದಳು.  ಮೂರು ನಾಲ್ಕು ಕರವಸ್ತ್ರಗಳು ಒಂದೊಂದಾಗಿ ಹೊರಬಂದವು.  ಕೊನೆಯದರ ಹಿಂದೆಯೇ "ವ್ಯಾಕ್" ಎಂಬ ಶಬ್ಧವೂ ಹೊರಬಂತು.  ಶರೀರವನ್ನು ಹಿಂದಕ್ಕೆ ಮುಂದಕ್ಕೆ ತೂಗಾಡಿಸುತ್ತಾ ಮಡಿಲಿಗೇ ವಾಂತಿ ಮಾಡಿಕೊಂಡಳು.
ಮಾತಿಲ್ಲದೇ ಹಿಂತಿರುಗಿದೆ.  ಕಾರಿನ ಬಾಗಿಲು ತೆರೆದೇ ಇತ್ತು.  ನನ್ನ ಬ್ಯಾಗ್ ತೆರೆದು ನೀರಿನ ಬಾಟಲಿ ಹೊರಗೆಳೆದೆ.  ತೆಗೆದುಕೊಂಡು ಹೋಗಿ ಅವಳ ಮುಂದೆ ಹಿಡಿದೆ.
ಅವಳು ನನ್ನನ್ನೊಮ್ಮೆ ನೇರವಾಗಿ ನೋಡಿದಳು.  ಮರುಕ್ಷಣ ಕೈಗಳಲ್ಲಿ ಮುಖ ಮುಚ್ಚಿಕೊಂಡಳು.  ತಲೆಯನ್ನು ಮುಂದಕ್ಕೆ ಬಾಗಿಸಿ ತೊಡೆಗಳ ಮೇಲಿಟ್ಟು ಬಿಕ್ಕಿದಳು.  ಅತ್ತ ನೋಡಿದ ನನಗೆ ಕಂಡದ್ದು ಪೂರ್ಣವಾಗಿ ಬತ್ತಲಾಗಿದ್ದ ತೊಡೆಗಳು.
ಅವಳ ಸೀರೆ ಮೈಮೇಲಿರಲಿಲ್ಲ.  ಲಂಗ ಕತ್ತರಿಯಲ್ಲಿ ಕತ್ತರಿಸಿದಂತ ನಡುಮಧ್ಯಕ್ಕೆ ಸೀಳಿಹೋಗಿ ತೊಡೆಗಳ ಕೆಳಗೆ ನೆಲದ ಮೇಲೆ ಮುದುರಿಬಿದ್ದಿತ್ತು.  ಅದನ್ನು ಇನ್ನೂ ಅವಳ ಮೈಗೆ ಕಟ್ಟಿಹಾಕಿದ್ದ ಲಾಡಿ ಹೊಟ್ಟೆಯ ನಡುಮಧ್ಯದಲ್ಲಿ ಆಳವಾಗಿ ಒಳಗಿಳಿದಿತ್ತು.  ಇಡಿಯಾಗಿ ಮೈಮೇಲಿದ್ದುದು ರವಿಕೆ ಮಾತ್ರ.  ಅದರ ಒಂದು ಹುಕ್ಕೂ ಅಲುಗಿರಲಿಲ್ಲ.
ಅವಳ ಸೀರೆಗಾಗಿ ಸುತ್ತಲೂ ಕಣ್ಣಾಡಿಸಿದೆ.  ಅದೆಲ್ಲೂ ಕಾಣಲಿಲ್ಲ.  ಅವಳ ಇಡೀ ಮೈ ಮುಚ್ಚುವಂತಹ ದೊಡ್ಡ ಬಟ್ಟೆ ಯಾವುದೂ ನನ್ನಲ್ಲಿರಲಿಲ್ಲ.  ಟವಲ್ ಸಹಾ ಇರಲಿಲ್ಲ.  ನನ್ನ ಕೆಲವು ಬಟ್ಟೆಗಳು, ಒಂದು ಬಾತ್ ಟವಲ್ ಬೆಂಗಳೂರಿನ ಅಕ್ಕನ ಮನೆಯಲ್ಲಿ ಯಾವಾಗಲೂ ಇರುತ್ತಿದ್ದುದರಿಂದ ಪ್ರತೀ ಪ್ರಯಾಣದಲ್ಲೂ ಅವನ್ನು ತೆಗೆದುಕೊಂಡು ಹೋಗುವ ಅಗತ್ಯ ನನಗಿರಲಿಲ್ಲ.  ನನ್ನ ಬ್ಯಾಗಿನಲ್ಲಿದ್ದದ್ದು ಮಾಮೂಲಿನಂತೆ ಒಂದೆರಡು ಪುಸ್ತಕಗಳು, ನೋಟುಬುಕ್ಕುಗಳು ಮತ್ತು ಟ್ರ್ಯಾನ್ಸಿಸ್ಟರ್ ಮಾತ್ರ.
ನಾನು ಮತ್ತೊಮ್ಮೆ ನಿಸ್ಸಹಾಯಕನಾಗಿದ್ದೆ.
"ಬಾಯಿ ತೊಳಕೊಂಡು ನೀರು ಕುಡೀರಿ."  ನನ್ನ ದನಿ ನನಗೇ ಅಪರಿಚಿತವಾಗಿತ್ತು.  ನೀರಿನ ಬಾಟಲನ್ನು ಬಲವಂತವಾಗಿ ಅವಳ ಕೈಗೆ ಹಿಡಿಸಿದೆ.  ಅವಳ ಬಿಕ್ಕುವಿಕೆ ಅಧಿಕವಾಯಿತು.  "ನನ್ ಜೊತೆ ಬನ್ನೀ ಅಂತ ಇವರನ್ನ ಗೋಗರೆದೆ.  ರಜಾ ಇಲ್ಲಾ, ನೀನೊಬ್ಳೇ ಹೋಗು ಅಂದ್ಬಿಟ್ರೂ" ಎನ್ನುತ್ತಾ ಗಟ್ಟಿಯಾಗಿ ಅಳತೊಡಗಿದಳು.  ನೀರಿನ ಬಾಟಲ್ ಅವಳ ಕೈಯಿಂದ ಜಾರಿ ಕೆಳಗೆ ಬಿತ್ತು.
ಅಲ್ಲಿ ನನ್ನ ಉಪಸ್ಥಿತಿಯ ನಿರುಪಯುಕ್ತತೆ ಮೇಲೆಗರಿ ಎದೆಗೆ ಜಾಡಿಸಿ ಒದೆಯಿತು.
ಅವಳು ಮತ್ತೆ ಬಿಕ್ಕಿದಳು.  "ನೀನು ಒಬ್ಳೇ ಬರೋಕೆ ಹೋಗಬೇಡಾ.  ಕಾಲ ಒಳ್ಳೇದಲ್ಲಾ.  ಭಾವಂಗೆ ರಜಾ ಆದಾಗಲೇ ಬಾ, ನಿಧಾನವಾದ್ರೂ ಪರವಾಗಿಲ್ಲ ಅಂತ ರಾಜಿ ಹತ್ತು ಸಲವಾದ್ರೂ ಹೇಳಿದ್ಲು.  ಅವಳ ಮಾತನ್ನ ನಾನೇ ಕೇಳ್ಲಿಲ್ಲಾ."  ಕಟ್ಟೆಯೊಡೆದಂತೆ ಮತ್ತೆ ಭೋರ್ಗರೆದ ಅಳು.  ನಾನು ಮಾತಿಲ್ಲದೇ ನಿಂತೆ.
ನಿಮಿಷದ ನಂತರ ಅವಳು ಚಕ್ಕನೆ ಅಳು ನಿಲ್ಲಿಸಿದಳು.  ತಲೆಯೆತ್ತಿ ನನ್ನನ್ನೇ ದಿಟ್ಟಿಸಿದಳು.  ಸರ್ರನೆ ಮುಂದೆ ಬಾಗಿ ನನ್ನ ಕಾಲುಗಳನ್ನು ತಬ್ಬಿಕೊಂಡಳು.  "ಸಾರ್ ಸಾರ್... ಇದನ್ನ ಯಾರಿಗೂ ಹೇಳಬೇಡಿ ಸಾರ್... ನಿಮ್ ದಮ್ಮಯ್ಯಾ ಅಂತೀನಿ..."
ನಾನು ಬೆಚ್ಚಿದೆ.  "ಇಲ್ಲಾ ಇಲ್ಲಾ ಹೇಳೋದಿಲ್ಲಾ..." ಎನ್ನುತ್ತಾ ಗಕ್ಕನೆ ಬಾಗಿ ಅವಳ ಭುಜ ಹಿಡಿದೆ.  "ಕಾಲು ಹಿಡೀಬೇಡಿ..."
ಎಡಗಡೆ ಸದ್ದಾಯಿತು.  ಬಾಗಿದಂತೇ ಅತ್ತ ಹೊರಳಿದೆ.  ಆ ಯುವಕ ನಿಂತಿದ್ದ.  ಅಚ್ಚರಿಯಲ್ಲಿ ನೆಟ್ಟಗೆ ನಿಂತೆ.  ಅವನು ಸಣ್ಣಗೆ ತುಟಿಯರಳಿಸಿದ.
"ನಾನು ಓಡಿಹೋದೆ ಅಂದ್ಕೊಂಡ್ರಾ?  ಇಲ್ಲಾ ಸರ್.  ನನ್ನ ಕರ್ತವ್ಯಾನ ನಾನು ಮರೆತು ಓಡಿಹೋಗೋದು!  ಹೌ ಕ್ಯಾನ್ ಐ ಎವರ್ ಡೂ ದಟ್?  ಇಲ್ಲೇ ಆ ಬಂಡೆ ಹಿಂದೆ ಅವಿತಿದ್ದೆ."
ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೇ ಅವನ ಮುಖವನ್ನೇ ಶೂನ್ಯವಾಗಿ ದಿಟ್ಟಿಸಿದೆ.  ಹೆಂಗಸು ನನ್ನ ಕಾಲು ಬಿಟ್ಟು ಹಿಂದೆ ಸರಿದಳು.  ಹರಿದ ಲಂಗವನ್ನು ಹಿಡಿದೆಳೆದು ತೊಡೆಗಳನ್ನು ಮುಚ್ಚಿಕೊಂಡು ಮುದುರಿ ಕೂತು ಅವನ ಮುಖವನ್ನೇ ನೇರವಾಗಿ ನೋಡಿದಳು.
"ನನ್ನ ಸಾಮಾಜಿಕ ಜವಾಬ್ದಾರಿಯ ಅರಿವು ನಂಗೂ ಇದೆ ಸರ್.  ಇಂಥಾ ಒಂದು ಕ್ರೈಮ್, ದಟ್ ಟೂ ಎಗೈನ್‌ಸ್ಟ್ ಎ ವುಮನ್, ನಡೀತಿರೋವಾಗ ನಾನು ಸುಮ್ನಿರೋಕೆ ಹ್ಯಾಗೆ ಸಾಧ್ಯ?"
ನನಗೆ ಏನೊಂದೂ ಅರ್ಥವಾಗಲಿಲ್ಲ.  ಅವನ ಮಾತುಗಳು ತೀರಾ ಅಪರಿಚಿತವೆನಿಸಿದವು.  "ಕೇಡಿಗಳಿಗೆ ಏನಾದ್ರೂ ಮಾಡಿದೆಯಾ?"  ನಾಲಿಗೆಗೆ ಬಂದ ಪ್ರಶ್ನೆ ಅಯಾಚಿತವಾಗಿ ಹೊರಹಾರಿತು.
"ನಾಟ್ ದಟ್ ಸರ್.  ಇಡೀ ಘಟನೇನ ನಾನು ಫ್ರೇಂ ಟು ಫ್ರೇಂ ಗಮನಿಸಿದ್ದೀನಿ.  ಒಂದು ಡೀಟೇಲ್ಡ್ ರಿಪೋರ್ಟ್ ತಯಾರಿಸೋದಿಕ್ಕೆ ಅರ್ಧ ಗಂಟೆ ಸಾಕು.  ನನ್ನ ಲ್ಯಾಪ್‌ಟಾಪ್ ಇಲ್ಲೇ ಇದೆಯಲ್ಲ.  ಕೇಡಿಗಳು ಅದನ್ನ ಎತ್ಕೊಂಡು ಹೋಗ್ಲಿಲ್ಲ ಅನ್ನೋದನ್ನ ಗಮನಿಸಿದ್ದೀನಿ.  ಅದನ್ನ ಇಲ್ಲೇ ಬಿಟ್ಟು ಅವರು ಒಳ್ಳೇ ಕೆಲಸ ಮಾಡಿದ್ದಾರೆ.  ~ಆಮ್ ಥ್ಯಾಂಕ್‌ಫುಲ್ ಟು ದೆಮ್."  ನನ್ನ ದಿಗಿಲು ಹತ್ತಿದ ನೋಟವನ್ನು ನಿರ್ಲಕ್ಷಿಸಿ ಮುಂದುವರೆಸಿದ: "ರಿಪೋರ್ಟ್ ತಯಾರಾದ ಕೂಡ್ಲೆ ಅದನ್ನ ನ್ಯೂಸ್ ಚಾನಲ್‌ಗಳಲ್ಲಿರೋ ನನ್ ಫ್ರೆಂಡ್ಸ್‌ಗೆಲ್ಲಾ ಇ ಮೇಲ್ ಮಾಡ್ತೀನಿ.  ಬ್ರೇಕ್‌ಫಾಸ್ಟ್ ನ್ಯೂಸ್‌ನಲ್ಲಿ ಮೆಯಿನ್ ಐಟೆಂ ಮಾಡಿ ಅಂತ ಹೇಳ್ತೀನಿ.  ಈ ರೋಗ್ಸ್ ಮಾಡಿರೋ ಅತ್ಯಾಚಾರ ಇಡೀ ದೇಶಕ್ಕೆ ತಿಳಿದುಹೋಗುತ್ತೆ.  ರಾಷ್ಟ್ರದ ಅಂತಃಸಾಕ್ಷಿಯನ್ನೇ ಕಲಕಿಬಿಡತ್ತೆ."
ನಾನು ಪ್ರತಿಕ್ರಿಯಿಸಲಾರದಷ್ಟು ದಿಗ್ಭ್ರಮೆಗೊಳಗಾಗಿದ್ದೆ.  ನನ್ನ ಸೋತ ಕಣ್ಣುಗಳು ಹೆಂಗಸಿನತ್ತ ಇಳಿದವು.  ಅವಳು ಮತ್ತಷ್ಟು ಮುದುರಿಕೊಂಡಳು.  ಹರಿದ ಲಂಗದ ಒಂದಂಚು ಕೈಜಾರಿ ಒಂದು ತೊಡೆ ಬತ್ತಲಾಯಿತು.  ಆತುರಾತುರವಾಗಿ ಅದನ್ನೆಳೆದು ಬಿಗಿಯಾಗಿ ಹಿಡಿದುಕೊಂಡಳು.
"ನಿಮ್ಮ ಸೂಟ್‌ಕೇಸಿನಲ್ಲಿ ಬೇರೆ ಬಟ್ಟೆಗಳಿವೆಯೇ?  ಇರಿ, ಅದನ್ನೇ ಇಲ್ಲಿಗೆ ತರ್ತೀನಿ.  ಎದ್ದು ಬೇರೆ ಸೀರೆ ಉಟ್ಕೊಳ್ಳಿ."  ಆಕೆಗೆ ಹೇಳಿ ಕಾನತ್ತ ಎರಡು ಹೆಜ್ಜೆ ಹಾಕಿದೆ.  ಹಿಂದೆ ತಿರುಗಿ ಆ ಯುವಕನಿಗೆ "ನೀನು ಈ ಕಡೆ ಬಾ" ಅಂದೆ.  ಅವನು ನನ್ನ ಹಿಂದೆಯೇ ಬಂದು ನನ್ನನ್ನು ದಾಟಿ ಧಾಪುಗಾಲಿಟ್ಟು ಮುಂದೆ ಹೋದ.  ನಾನು ಕಾರ್ ಸಮೀಪಿಸುವಷ್ಟರರಲ್ಲಿ ಅವನು ಮುಂದಿನ ಸೀಟಿನಲ್ಲಿದ್ದ ತನ್ನ ಬ್ಯಾಗನ್ನು ಹೊರಗೆಳೆದುಕೊಂಡಾಗಿತ್ತು.
ಅವಳು ಕುಳಿತಿದ್ದ ಸೀಟಿನಲ್ಲಿ ಅವಳ ಹೆಗಲ ಚೀಲ ಮಾತ್ರ ಸಿಕ್ಕಿತು.  ಕೇಡಿಗಳು ಎತ್ತಿ ನಿಲ್ಲಿಸಿಯೇ ಹೋಗಿದ್ದ ಡಿಕ್ಕಿಯಲ್ಲಿ ಬಗ್ಗಿ ನೋಡಿದಾಗ ಅಲ್ಲಿ ಸೂಟ್‌ಕೇಸ್ ಕಂಡಿತು.  ಎರಡನ್ನೂ ಎತ್ತಿಕೊಂಡು ನಾನು ಮರದತ್ತ ತಿರುಗಿದಾಗ ಅವನು ಅವಳ ಮುಂದೆ ಕುಕ್ಕರಗಾಲಿನಲ್ಲಿ ಕುಳಿತಿರುವುದು ಕಂಡಿತು.
"...ನಿಮಗೆ ನ್ಯಾಯ ಸಿಗುತ್ತೆ ಆಂಟೀ.  ಅದಕ್ಕಾಗಿ ನಾನು ಹೋರಾಡ್ತೀನಿ.  ನನ್ನ ಕರ್ತವ್ಯ ಅದು.  ನಾಳೆ ಬೆಳಿಗ್ಗೆ ಇಡೀ ದೇಶಕ್ಕೆ ಸುದ್ದಿ ಹರಡುತ್ತೆ.  ಇಡೀ ದೇಶ ಆ ರೇಪಿಸ್ಟ್‌ಗಳನ್ನ ಬೇಟೆಯಾಡುತ್ತೆ.  ಅವರಿಬ್ರಿಗೂ ಶಿಕ್ಷೆ ಗ್ಯಾರಂಟಿ.  ಇನ್ಯಾವತ್ತೂ ಇನ್ಯಾವ ಹೆಣ್ಣಿಗೂ ಈ ರೀತಿ ಅನ್ಯಾಯ ಆಗೋದಿಲ್ಲ.  ಇದೆಲ್ಲಾ ಆಗಬೇಕಾದ್ರೆ ನೀವು ಸ್ವಲ್ಪ ಕೋಆಪರೇಟ್ ಮಾಡ್ಬೇಕು.  ನನ್ನ ರಿಪೋರ್ಟ್ ಅಥೆಂಟಿಕ್ ಆಗಬೇಕಾದ್ರೆ, ಎಫೆಕ್ಟಿವ್ ಆಗಬೇಕಾದ್ರೆ ನಿಮ್ಮದು ಒಂದೆರಡು ಫೋಟೋ ಬೇಕು ನಂಗೆ.  ನೀವು ಬೇರೆ ಥರಾ ಪೋಸ್ ಕೊಡೋದೇನೂ ಬೇಡ.  ಈ ಪೋಸೇ ಇರಲಿ"
ಅವಳು ಮುಖವನ್ನು ಮಂಡಿಗಳ ನಡುವೆ ಹುದುಗಿಸಿ ಮತ್ತಷ್ಟು ಮದುರಿಕೊಂಡಳು.  ಎರಡೂ ಕೈಗಳಲ್ಲಿ ಬಿಗಿಯಾಗಿ ಹಿಡಿದಿದ್ದ ಹರಿದ ಲಂಗದ ಅಂಚುಗಳನ್ನು ಮತ್ತಷ್ಟು ಬಲವಾಗಿ ಎಳೆದು ತೊಡೆಗಳನ್ನು ಮುಚ್ಚಿಕೊಳ್ಳಲು ಹೆಣಗಿದಳು.
ಯುವಕನ ಕೈಯಲ್ಲಿದ್ದ ಡಿಜಿಟಲ್ ಕ್ಯಾಮೆರಾ ಒಂದೆರಡು ಸಲ ಮಿನುಗಾಡಿತು.
"ಅದೆಲ್ಲಾ ಏನೂ ಬೇಡಾ."  ನಾನು ಗಾಬರಿಯಲ್ಲಿ ಕೂಗಿದೆ.  ಅವನು ನನ್ನತ್ತ ಅಲಕ್ಷದಿಂದ ಕೈ ಒದರಿದ: "ನೀವು ಸುಮ್ಮನಿರಿ.  ನಿಮಗೆ ಗೊತ್ತಾಗೋದಿಲ್ಲ.  ನೀವು ಹಳೇಕಾಲದೋರು."  ಅವಳತ್ತ ತಿರುಗಿದ.  "ಥ್ಯಾಂಕ್ಸ್ ಆಂಟಿ.  ನಿಮ್ಮ ಮುಖದ್ದೊಂದು ಫೋಟೋ ತಗೋತೀನಿ.  ಎಲ್ಲೀ ಸ್ವಲ್ಪ ತಲೆಯೆತ್ತಿ."
ಅವಳು ತಲೆಯೆತ್ತಿದಳು.
ನಾನು ದಂಗುಬಡಿದುಹೋದೆ.  ನನ್ನ ಕೈಗಳಲ್ಲಿದ್ದ ಅವಳ ಸೂಟ್‌ಕೇಸ್ ಮತ್ತು ಹೆಗಲಚೀಲಗಳು ಧೊಪ್ಪನೆ ಕೆಳಗೆ ಬಿದ್ದವು.  ಅದರತ್ತ ಅವಳ ಗಮನವೇ ಇಲ್ಲ.  ತಲೆ ಮೇಲೆತ್ತಿ ಆ ಯುವಕನನ್ನೇ ನೇರವಾಗಿ ನೋಡಿದಳು.  ತೊಡೆಗಳನ್ನು ಮುಚ್ಚಿದ್ದ ಲಂಗದ ಅಂಚುಗಳನ್ನು ಕೆಳಗೆ ಬಿಟ್ಟಳು.  ಬತ್ತಲು ಕಾಲುಗಳನ್ನು ಮಡಿಚಿ ದೇಹವನ್ನು ಹಿಂದಕ್ಕೆ ವಾಲಿಸಿ ಕೈಗಳನ್ನೂ ಹಿಂದೆ ಕೊಂಡೊಯ್ದು ನೆಲದ ಮೇಲೆ ಊರಿದಳು.  ಅವಳ ಕಣ್ಣುಗಳು ಅವನ ಕ್ಯಾಮರಾದ ಮೇಲೇ ನೆಟ್ಟಿದ್ದವು.
"ಸೂಪರ್ ಆಂಟೀ!  ಹೀಗೆ ಇರಿ... ಫ್ಯಾಂಟಾಸ್ಟಿಕ್..."
ಕಣ್ಣಿಗೆ ಕ್ಯಾಮರಾ ಹೂಡಿದ ಯುವಕ ಪ್ರೋತ್ಸಾಹದ ಉದ್ಗಾರಗಳನ್ನು ತೆಗೆಯುತ್ತಿದ್ದಂತೇ ಅವಳು ಎರಡೂ ಕಾಲುಗಳಿಂದ ಅವನ ಮುಖಕ್ಕೇ ಜಾಡಿಸಿ ಒದ್ದಳು.
ಒದೆತದ ರಭಸ ಅದೆಷ್ಟು ಜೋರಾಗಿತ್ತೆಂದರೆ ಆ ಯುವಕ ಚೀತ್ಕರಿಸುವುದಕ್ಕೂ ಸಮಯ ಸಿಗದೇ ಎರಡು ಮಾರು ದೂರಕ್ಕೆ ಎಗರಿಬಿದ್ದ.  ಅವನ ಕೈಯಿಂದ ಹಾರಿದ ಕ್ಯಾಮರಾ "ಚಟ್ ಡಟ್ ಟಟ್‌ಡಟ್" ಎಂದು ಇಳಿಜಾರಿನ ಕಲ್ಲುಗಳಿಗೆ ಬಡಿಯುತ್ತಾ ಸಾಗಿತು.  ಕೊನೆಯಲ್ಲಿ ಕೇಳಿಬಂದದ್ದು "ಬುಳಕ್" ಎಂಬ ಶಬ್ದ.
ಅವಳು ಚಿರತೆಯಂತೆ ಮೇಲೆ ಹಾರಿದಳು.  ಒಂದೇ ನೆಗೆತಕ್ಕೆ ಅವನ ಬಳಿಸಾರಿ ಮೇಲೇಳುತ್ತಿದ್ದ ಅವನ ಎದೆಗೆ ಆವೇಶದಿಂದ ಒದ್ದಳು.  ಉರುಳಿದ ಅವನ ಪಕ್ಕೆಗೆ ಮತ್ತೊಂದು ಒದೆತ...  ಬತ್ತಲೆ ಕಾಲುಗಳು ಯುವಕನ ಮೈಮೇಲೆ ಸಿಕ್ಕಿದಲ್ಲಿ ಎರಗಿದವು...  "ಓ ಬೇಡಾ.  ಪ್ಲೀಸ್" ಎಂದು ಅರ್ತನಾಗಿ ಕೂಗಿದವನ ತಲೆಯ ಮೇಲೆ ಬೊಗಸೆಯಲ್ಲಿ ಮಣ್ಣು ಎತ್ತಿ ಎತ್ತಿ ಸುರಿದಳು...  ಸುಸ್ತಾಗಿ ನಿಂತಳು.
ಅವನು ಎದ್ದ.  ಅವಳತ್ತ ಭೀತಿಯ ನೋಟ ಹೂಡಿದ.  ಬುಸುಗುಟ್ಟಿದ ಅವಳು ಕಲ್ಲೊಂದನ್ನೆತ್ತಿ ಅವನತ್ತ ನುಗ್ಗಿದಳು.  ಅವನು "ಓ ನೋ" ಎಂದು ಚೀರುತ್ತಾ ಓಡತೊಡಗಿದ.  ಎರಡು ಕ್ಷಣದಲ್ಲಿ ಗುಡ್ಡದ ಕಲ್ಲುಗೋಡೆಯ ಹಿಂದೆ ಮರೆಯಾಗಿಹೋದ.
ಅವಳತ್ತ ತಿರುಗಿದೆ.  ಕಲ್ಲನ್ನು ಎರಡೂ ಕೈಗಳಲ್ಲಿ ಮೇಲೆತ್ತಿ ನೆಟ್ಟಗೆ ನಿಂತಿದ್ದಳು.  ಹರಿದ ಲಂಗದ ಅಂಚುಗಳು ಗಾಳಿಯಲ್ಲಿ ಪಟಪಟ ಬಡಿದುಕೊಳ್ಳುತ್ತಿದ್ದವು.  ಎದೆ ಏರಿಳಿಯುತ್ತಿತ್ತು.  ನೋಟ ಅವನು ಹೋದ ದಿಕ್ಕಿಗೇ ಕೀಲಿಸಿತ್ತು.
ನಿಬ್ಬೆರಗಾಗಿ ನಿಂತೆ.  ಏಕಾಏಕಿ ಯೋಚನೆ ಬಂತು.  ಅವನ ಕೈಯಲ್ಲೂ ಚಾಕು ಅಥವಾ ಅದಕ್ಕಿಂತ ಹೆಚ್ಚಿನ ಗನ್ ಅಂಥದೇನಾದರೂ ಇದ್ದಿದ್ದರೆ...!  ಛಿಲ್ಲನೆ ಬೆವತುಹೋದೆ.
ನಿಮಿಷದ ನಂತರ ಅವಳ ಎದೆ ಒಮ್ಮೆ ಏರಿಳಿಯಿತು.  ಕಲ್ಲು ಕೆಳಗೆ ಬಿದ್ದು ತಗ್ಗಿನಲ್ಲಿ ಸಶಬ್ಧವಾಗಿ ಉರುಳಿಹೋಯಿತು.  ಅವಳ ಕೈಗಳು ಸೋತಂತೆ ಕೆಳಗಿಳಿದವು.  ಮರುಕ್ಷಣ ಅವಳು ಕೆಳಗೆ ಕುಸಿದಳು.  ಬಿಕ್ಕಿ ಬಿಕ್ಕಿ ಅಳತೊಡಗಿದಳು.
ಮರದ ಕೆಳಗಿದ್ದ ಅವಳ ಸೂಟ್‌ಕೇಸ್ ಮತ್ತು ಕೈಚೀಲಗಳನ್ನು ಎತ್ತಿಕೊಂಡು ಅವಳತ್ತ ನಡೆದೆ.  ಭುಜದ ಮೇಲೆ ಮೃದುವಾಗಿ ಕೈಯಾಡಿಸಿದೆ.  "ಬಟ್ಟೆ ಹಾಕ್ಕೊಳ್ಳಿ."  ಮೆಲ್ಲನೆ ಹೇಳಿದೆ.
ಹಿಂದೆ ತಿರುಗಿ ನನ್ನ ನೀರಿನ ಬಾಟಲಿಗಾಗಿ ಹುಡುಕಾಡಿದೆ.  ಸ್ವಲ್ಪ ದೂರ ಉರುಳಿಹೋಗಿದ್ದ ಅದು ಕುರುಚಲು ಗಿಡವೊಂದಕ್ಕೆ ತಾಗಿ ನಿಂತಿತ್ತು.  ಎತ್ತಿಕೊಂಡೆ.  ಬಿರಟೆ ಸಡಿಲಾಗಿತ್ತೋ ಏನೋ ನೀರೆಲ್ಲಾ ಸುರಿದುಹೋಗಿ ತಳದಲ್ಲಿ ಎರಡು ಗುಟುಕಿನಷ್ಟು ಮಾತ್ರ ಉಳಿದಿತ್ತು.
ಅವಳತ್ತ ನಡೆದೆ.  ಕಣ್ಣೊರೆಸಿಕೊಂಡು ತಲೆಯೆತ್ತಿದಳು.  ನೀರಿನ ಬಾಟಲನ್ನು ಅವಳ ಮುಂದೆ ಹಿಡಿದೆ.  ಕೈಚಾಚಿ ತೆಗೆದುಕೊಂಡಳು.

--***೦೦೦***--

ಜನವರಿ ೧೧, ೨೦೦೮