ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Thursday, May 29, 2014

ಸಾಮಾಜಿಕ ತಾಣಗಳೆಂಬ ಪ್ರತಿಗಾಮಿ ಪಿತೂರಿಗಳು



ಫೆಬ್ರವರಿ 12, 2014ರಂದು "ವಿಜಯವಾಣಿ" ಪತ್ರಿಕೆಯಲ್ಲಿನ ನನ್ನ ಅಂಕಣದಲ್ಲಿ ಪ್ರಕಟಿಸಿದ್ದ ಲೇಖನ.  ಮರೆತೇಬಿಟ್ಟಿದ್ದೆ.  ಹೀಗಾಗಿ ಇಲ್ಲಿ ತಡವಾಗಿ ಕಾಣಿಸಿಕೊಳ್ಳುತ್ತಿದೆ.

            ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಕಳೆದವಾರ ತನ್ನ ಹತ್ತನೆಯ ಹುಟ್ಟುಹಬ್ಬ ಅಚರಿಸಿಕೊಂಡಿತು.  ಹಿಂದಿನ ಆರ್ಕುಟ್ ಮುಂತಾದ ಜಾಲತಾಣಗಳನ್ನು ಮೂಲೆಗೊತ್ತರಿಸಿ ಬೆಳೆದ ಫೇಸ್‌ಬುಕ್ ಇಂದು ಮಿಲಿಯಾಂತರ ಜನರ ದಿನದ ಗಣನೀಯ ಭಾಗವನ್ನು ತನ್ನದಾಗಿಸಿಕೊಂಡಿದೆ.  ಅದರ ಜತೆಗೆ ಟ್ವಿಟರ್ ಸೇರಿದಂತೆ ಹಲವಾರು ಸಾಮಾಜಿಕ ತಾಣಗಳು ಇಂದು ವಿ-ವಿದ್ಯಾವಂತರ ಬದುಕಿನ ಅವಿಭಾಜ್ಯ ಭಾಗಗಳಾಗಿಹೋಗಿವೆ.
          ಈ ತಾಣಗಳು ಜಾಗತೀಕರಣದ ಒಂದು ಪ್ರಮುಖ ಅಂಗ.  ಪಶ್ಚಿಮದ ಮೌಲ್ಯಗಳು ವಿಶ್ವಾದ್ಯಂತ ಯಾವ ತಡೆಯೂ ಇಲ್ಲದೇ ಹರಡಿಕೊಳ್ಳಲು ಇವು ವಾಹಕಗಳಾಗಿವೆ.  ಒಂದರ್ಥದಲ್ಲಿ ಪೌರ್ವಾತ್ಯ ಜಗತ್ತಿನ ಮನಸ್ಸುಗಳನ್ನು ತನ್ನ ವಸಾಹತುಗಳನ್ನಾಗಿ ಮಾರ್ಪಡಿಸಿಕೊಳ್ಳಲು ಪಾಶ್ಚಿಮಾತ್ಯ ಜಗತ್ತಿಗೆ ಸಿಕ್ಕಿರುವ ಹೊಸ ಆಯುಧ ಈ ಸಾಮಾಜಿಕ ತಾಣಗಳು.  ಅಗಾಧ ವ್ಯಾಪ್ತಿಯ ಈ ವಿಷಯದ ಗಂಭೀರತೆಯನ್ನು ಒಂದು ಅಂಕಣಬರಹದ ಮಿತಿಯಲ್ಲಿ ಚರ್ಚಿಸುವುದು ಈ ಲೇಖನದ ಉದ್ದೇಶ.
            ಇಂಟರ್‌ನೆಟ್ ಮತ್ತು ಹ್ಯಾಂಬರ್ಗರ್‌ಗಳ ನಡುವಿನ ಏನಾದರೂ ಆಗಿರಬಹುದು” ಎಂದು ಸೂಸಾನ್ ಸ್ಟ್ರೇಂಜ್ ವರ್ಣಿಸುವ ಜಾಗತೀಕರಣ ಒಂದು ನಿರ್ದಿಷ್ಟ ಹಾಗೂ ನಿರ್ಣಾಯಕ ವ್ಯಾಖ್ಯಾನಕ್ಕೆ ಸಿಗಲಾರದು.  ನಮ್ಮ ಚರ್ಚೆಯ ಅನುಕೂಲಕ್ಕಾಗಿ ಅದನ್ನು 'ಏಕರೀರಿಯ ವೈಯುಕ್ತಿಕ, ಕೌಟಿಂಬಿಕ, ಸಾಮಾಜಿಕ, ಆರ್ಥಿಕ ಮೌಲ್ಯಗಳು ಜಗತ್ತಿನಾದ್ಯಂತ ಸಾರ್ವತ್ರಿಕ ಮನ್ನಣೆ ಪಡೆದುಕೊಳ್ಳುವ ಮತ್ತು ಅಚರಣೆಗೆ ತರಲ್ಪಡುವ ಪ್ರಕ್ರಿಯೆ' ಎಂದು ಸರಳವಾಗಿ ಕರೆದುಕೊಳ್ಳಬಹುದು.  ಇಂದಿನ ಜಾಗತೀಕರಣ ಪಶ್ಚಿಮದ ಮೌಲ್ಯಗಳು ಜಗತ್ತಿನಾದ್ಯಂತ ಹರಡಿಕೊಳ್ಳುವುದನ್ನು ಸೂಚಿಸುತ್ತಿದ್ದರೂ ಇದಕ್ಕೆ ವಿರುದ್ಧವಾದ ಪರಿಸ್ಥಿತಿ ಹಿಂದೆ ಅಸ್ತಿತ್ವದಲ್ಲಿತ್ತು.  ಇಪ್ಪತ್ತನಾಲ್ಕು ಶತಮಾನಗಳ ಹಿಂದೆಯೇ ಪಶ್ಚಿಮದ ಮಹಾನ್ ದಾರ್ಶನಿಕ ಪ್ಲೇಟೋ ತನ್ನ 'ಆದರ್ಶ ರಾಜ್ಯ'ದ ಪರಿಕಲ್ಪನೆಯಲ್ಲಿ ಭಾರತೀಯ ವರ್ಣಾಶ್ರಮಧರ್ಮದ ಪ್ರಭಾವಕ್ಕೊಳಗಾಗಿದ್ದ ಎಂದು ಹೇಳಲು ಆಧಾರಗಳಿವೆ.  ನಂತರದ ಶತಮಾನಗಳಲ್ಲಿ ಪೂರ್ವದ ಚೀನಾ, ಭಾರತ ಮತ್ತು ಮಧ್ಯಪ್ರಾಚ್ಯದ ವಿಜ್ಞಾನ, ಗಣಿತ, ಕಲೆ ಅಂತಿಮವಾಗಿ ಧರ್ಮಗಳು ಸಹಾ ಪಶ್ಚಿಮವನ್ನು ಪ್ರಭಾವಿಸಿದವು.  ಆರ್ಥಿಕ ರಂಗಕ್ಕೆ ಬಂದರೆ ಪ್ರಖ್ಯಾತ ರೋಮನ್ ಸಾಮ್ರಾಜ್ಯ ಸಹಾ ಪೌರ್ವಾತ್ಯ ಜಗತ್ತಿನ ಜತೆಗಿನ ವ್ಯಾಪಾರವಹಿವಾಟಿನಲ್ಲಿ 'ಪ್ರತಿಕೂಲ ಸಂದಾಯ ಬಾಕಿ' (Balance of Payment) ಪರಿಸ್ಥಿತಿಯನ್ನನುಭವಿಸುತ್ತಿತ್ತು.  ಕೇವಲ ಐನೂರು ವರ್ಷಗಳ ಹಿಂದೆ ಚೀನಾ ಮತ್ತು ಭಾರತಗಳು ಒಟ್ಟಿಗೆ ವಿಶ್ವವ್ಯಾಪಾರದ ಶೇಕಡಾ ೬೦ರಷ್ಟನ್ನು ತಮ್ಮ ತೆಕ್ಕೆಯಲ್ಲಿರಿಸಿಕೊಂಡಿದ್ದವು.  ನಂತರದ ದಿನಗಳಲ್ಲಿ ಪರಿಸ್ಥಿತಿ ತಿರುವುಮುರುವಾಯಿತು.  ತುರ್ಕರು ೧೪೫೩ರಲ್ಲಿ ಕಾನ್‌ಸ್ಟಾಂಟಿನೋಪಲ್ (ಇಂದಿನ ಇಸ್ತಾಂಬುಲ್) ನಗರವನ್ನು ಆಕ್ರಮಿಸಿಕೊಂಡು ಪೂರ್ವ ಪಶ್ಚಿಮಗಳ ನಡುವಿನ ವ್ಯಾಪಾರದ ಮಾರ್ಗವನ್ನು ಬಂದ್ ಮಾಡಿದ್ದು, ನಂತರ ಬಾರ್ಥಲೋಮ್ಯೋ ಡಯಾಸ್ ಮತ್ತು ವಾಸ್ಕೋ-ಡ-ಗಾಮಾರಿಂದ ಪೌರ್ವಾತ್ಯ ನಾಡುಗಳಿಗೆ ಸಮುದ್ರಮಾರ್ಗಗಳ ಶೋಧ, ಅದರಿಂದಾದ ವ್ಯಾಪಕ ವಸಾಹತೀಕರಣ ಪಶ್ಚಿಮದ ಮೌಲ್ಯಗಳು ಪೌರ್ವಾತ್ಯ ಜಗತ್ತಿಗೆ ಹರಡಲು ಅವಕಾಶ ಮಾಡಿಕೊಟ್ಟವು.  ಈ ಪ್ರಕ್ರಿಯೆಯನ್ನು ತೀವ್ರಗೊಳಿಸಿದ್ದು ವಿಜ್ಞಾನ, ಕೈಗಾರಿಕಾ ಹಾಗೂ ಸಮರ ತಂತ್ರಜ್ಞಾನಗಳಲ್ಲಿ ಪಶ್ಚಿಮ ಸಾಧಿಸಿದ ಅದ್ಭುತ ಪ್ರಗತಿ.  ಅದರಿಂದಾಗಿ ಪ್ರಪಂಚ ಕಿರಿದಾಗತೊಡಗಿತು.  ಇದನ್ನು ಒಂದು ಸೂಕ್ತ ಉದಾಹರಣೆಯ ಮೂಲಕ ಪರಿಣಾಮಕಾರಿಯಾಗಿ ಬಿಂಬಿಸಲು ಪ್ರಯತ್ನಿಸುತ್ತೇನೆ.
          ೧೪೯೭ರಲ್ಲಿ ಅಟ್ಲಾಂಟಿಕ್ ಮಹಾಸಾಗರವನ್ನು ಹಾಯಿಹಡಗುಗಳಲ್ಲಿ ದಾಟಲು ಕ್ರಿಸ್ಟೋಫರ್ ಕೊಲಂಬರ್ ತೆಗೆದುಕೊಂಡದ್ದು ಇಡೀ ೭೨ ದಿನಗಳು.  ೪೩೦ ವರ್ಷಗಳ ನಂತರ ಅದೇ ದೂರವನ್ನು ೧೯೨೭ರಲ್ಲಿ ಚಾರ್ಲ್ಸ್ ಲಿಂಡ್‌ಬರ್ಗ್ ತನ್ನ ವಿಮಾನದಲ್ಲಿ ಕ್ರಮಿಸಿದ್ದು ೩೩ ತಾಸುಗಳಲ್ಲಿ.  ಇಂದಿನ ಅತ್ಯಂತ ವೇಗದ ವಿಮಾನ ಕಾನ್‌ಕಾರ್ಡ್ ಲಂಡನ್‌ನಿಂದ ನ್ಯೂಯಾರ್ಕ್ ತಲುಪಲು ತೆಗೆದುಕೊಳ್ಳುವ ಕಾಲ ಕೇವಲ ಮೂರೂವರೆ ತಾಸುಗಳು.  ಟೆಲಿಫೋನ್ ಸಂಪರ್ಕಕ್ಕೆ ಬೇಕಾಗುವುದು ಒಂದು ಸೆಕೆಂಡ್ ಮಾತ್ರ.  ಇಂಟರ್‌ನೆಟ್ ಸಹಾ ಅಭಿಪ್ರಾಯಗಳನ್ನು, ವಿಚಾರಗಳನ್ನು, ಮೌಲ್ಯಗಳನ್ನೂ ವಿಶ್ವದ ಎಲ್ಲೆಡೆ ಕ್ಷಣಾರ್ಧದಲ್ಲಿ ತಲುಪಿಸುತ್ತಿದೆ.  ಅದರಲ್ಲಿಂದು ಪ್ರಮುಖ ಪಾತ್ರ ವಹಿಸುತ್ತಿರುವುದು ಫೇಸ್‌ಬುಕ್.
            ಎರಡು ದಶಕಗಳ ಹಿಂದೆ ಕೇಬಲ್ ಟೀವಿ ಮನೆಮನೆಗೂ ಬಂತು.  ಅದು ಭಾರತದಲ್ಲಿ ಬಂದ ಬಗೆಯಂತೂ ಒಂದುಕ್ಷಣ ನಿಂತು ಯೋಚಿಸಲು ಯೋಗ್ಯ.  ಶೀತಲಸಮರೋತ್ತರ ಕಾಲದ ಮೊದಲ ಯುದ್ದವಾದ ೧೯೯೧ರ ಇರಾಕ್ ಯುದ್ಧವನ್ನು ಸಿಎನ್‌ಎನ್ ನೇರಪ್ರಸಾರ ಮಾಡಿದಾಗ ಮೂರ್ಖರ ಪೆಟ್ಟಿಗೆಯಲ್ಲಿ ಅದೊಂದು ಮನರಂಜನೆಯ ಕಾರ್ಯಕ್ರಮದಂತೆ ಕಂಡಿತೇ ವಿನಃ ಲಕ್ಷಲಕ್ಷ ಜನರ ಬದುಕನ್ನು ಮೂರಾಬಟ್ಟೆಯಾಗಿಸಿದ ಮಾರಣಹೋಮವೆಂದಲ್ಲ.  ಅಲ್ಲಿಂದಾಚೆಗೆ ಚಿತ್ರಗೀತೆಗಳು, ಚಲನಚಿತ್ರಗಳು, ಕಳಪೆ ಧಾರಾವಾಹಿಗಳಂತಹ ಜನಪ್ರಿಯ ಸಂಸ್ಕೃತಿಯ ಕಲಾಪ್ರಕಾರಗಳು ದಿನದ ಇಪ್ಪತ್ತನಾಲ್ಕು ಗಂಟೆಗಳೂ ಪ್ರಸಾರವಾಗತೊಡಗಿದವು. ಇವುಗಳಿಗೆ ಮುಗಿಬಿದ್ದ ಜನತೆ ತಮ್ಮ ಬಗ್ಗೆ, ಸಮಾಜದ ಬಗ್ಗೆ, ದೇಶದ ಬಗ್ಗೆ ಮೌಲಿಕವಾಗಿ ಚಿಂತಿಸುವುದರಿಂದ ದೂರದೂರ ಸರಿಯತೊಡಗಿದರು.  ಪರಿಣಾಮವಾಗಿ ಇದುವರೆಗೆ ಈ ನಾಡು ರೂಢಿಸಿಕೊಂಡು ಬಂದಿದ್ದ, ಸಾಹಿತ್ಯಕ, ಸಾಂಸ್ಕೃತಿಕ ಚಿಂತನೆಗಳು ಸದ್ದಿಲ್ಲದೇ ಮೂಲೆಗುಂಪಾಗತೊಡಗಿದವು.  ಕಳೆದೆರಡು ದಶಕಗಳಲ್ಲಿ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳು ಕಂಡಿರುವ ಅವನತಿಗೆ ಇದು ಕಾರಣ.
          ಇಂಟರ್ನೆಟ್ ಕ್ರಾಂತಿಯಿಂದಾಗಿ ಇ-ಜರ್ನಲ್‌ಗಳು, ಬ್ಲಾಗ್‌ಗಳು ಮತ್ತು ಸಾಮಾಜಿಕ ಜಾಲತಾಣಗಳು ಅಭಿವ್ಯಕ್ತಿಗೆ, ಹೊಸ ಬರಹಗಾರರ ಉದಯಕ್ಕೆ ವೇದಿಕೆಯಾಗುತ್ತಿರುವುದನ್ನು ಅಲ್ಲಗಳೆಯಲಾಗುವುದಿಲ್ಲ.  ಹಿಂದಿನಂತೆ ಬರಹಗಳನ್ನು ಪತ್ರಿಕೆಗಳಿಗೆ ರವಾನಿಸಿ ವಾರಗಟ್ಟಲೆ, ತಿಂಗಳುಗಟ್ಟಲೆ ಅಂಚೆಯಣ್ಣನ ಬೈಸಿಕಲ್‌ನ ಟ್ರಿಣ್ ಟ್ರಿಣ್‌ಗಾಗಿ ಕಿವಿಗೊಟ್ಟು ಕಾದುನಿಲ್ಲುವಂತಹ ಪರಿಸ್ಥಿತಿ ಈಗಿಲ್ಲ.  ಥಟಕ್ಕನೆ ಸ್ಫುರಿಸಿದ ಭಾವವೊಂದನ್ನು ಥಟ್ಟನೆ ಅಕ್ಷರಕ್ಕಿಳಿಸಿ ಕಣ್ಣುಮುಚ್ಚಿ ಕಣ್ಣುತೆರೆಯುವಷ್ಟರಲ್ಲಿ ಓದುಗರಿಗೆ ತಲುಪಿಸುವ ಅವಕಾಶವನ್ನು ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳು ಒದಗಿಸಿಕೊಟ್ಟಿವೆ.  ಇಲ್ಲಿ ಸಂತೋಷದ ಜತೆಗೇ ಆತಂಕವನ್ನೂ ಉಂಟುಮಾಡುವ ಅಂಶಗಳಿವೆ.  ಒಂದುಕ್ಷಣದ ಸೃಜನಶೀಲ ಒರತೆಯಿಂದ ಒಂದು ಚಂದದ ವಾಕ್ಯ, ಹೆಚ್ಚೆಂದರೆ ಒಂದು ಸುಂದರ ಅರ್ಥಪೂರ್ಣ ಪ್ಯಾರಾಗ್ರಾಫ್ ಸೃಷ್ಟಿಯಾಗಬಹುದಷ್ಟೇ.  ಅದನ್ನೊಂದು ಮೌಲಿಕ ಕಥೆಯಾಗಿಸಲು, ಕಾದಂಬರಿಯಾಗಿದಲು, ಪ್ರಬಂಧವಾಗಿಸಲು ತುಸು ಧೀರ್ಘ ಧ್ಯಾನಸ್ಥ ಮನಸ್ಥಿತಿಯ ಅಗತ್ಯವಿರುತ್ತದೆ.  ಈ ಮನಸ್ಥಿತಿಗೆ ಇಂದು ಹೆಚ್ಚಿನ ಬರಹಗಾರರು ತಯಾರಾಗಿಲ್ಲ.  ಆ ಧ್ಯಾನಸ್ಥ ಸ್ಥಿತಿಗೆ ಅಗತ್ಯವಾದ ತಹತಹದ, ತುಡಿತದ ಸ್ಥಿತಿಗೆ ತಲುಪುವುದಕ್ಕೆ ಫೇಸ್‌ಬುಕ್ ಅವಕಾಶ ಮಾಡಿಕೊಡುತ್ತಿಲ್ಲ.  ಆ ಕ್ಷಣದ ಬಯಕೆಯನ್ನು ಆ ಕ್ಷಣವೇ ಪೂರ್ಣಗೊಳಿಸಿಕೊಳ್ಳುವ ಅವಕಾಶವನ್ನು ನೀಡಿ ತೃಪ್ತಿಯ ಮಿಥ್ಯಾ ವಾಸ್ತವವನ್ನದು ನಿರ್ಮಿಸುತ್ತಿರುವುದರಿಂದ ಬಹುಪಾಲು ಜನರ ಸೃಜನಶೀಲತೆ ಅಲ್ಲಿಗೇ ಸಮಾಪ್ತವಾಗುತ್ತಿದೆ.  ಒಳ್ಳೆಯ ಬರಹಗಾರರಾಗುವ ಸಾಮಥ್ಯವಿರುವವರು ಕ್ಷಣಿಕ ತೃಪ್ತಿಯಲ್ಲಿ ಮುಳುಗಿಹೋಗಿ ಮಹತ್ವಾಕಾಂಕ್ಷೆಗಳನ್ನೂ, ಅದಕ್ಕೆ ಅಗತ್ಯವಾದ ದೀರ್ಘ ಪರಿಶ್ರಮವನ್ನೂ ಕಡೆಗಣಿಸುತ್ತಿದ್ದಾರೆ.  ಪರಿಣಾಮವಾಗಿ ಇತ್ತೀಚಿನ ವರ್ಷಗಳಲ್ಲಿ ಸಾಹಿತ್ಯಕ್ಷೇತ್ರದಲ್ಲಿ ಯಾವುದೇ ಪರಿಣಾಮಕಾರಿ ಬೆಳವಣಿಗೆ, ಚಳುವಳಿ ಕಾಣಬರುತ್ತಿಲ್ಲ.
          ಹಾಗೆ ನೋಡಿದರೆ ಜಾಗತೀಕರಣ ಒಳ್ಳೆಯ ಸಾಹಿತ್ಯ, ಸಾಂಸ್ಕೃತಿಕ ಫಸಲಿಗೆ ಫಲವತ್ತಾದ ನೆಲವಾಗಬೇಕಾಗಿತ್ತು.  ಜಾಗತೀಕರಣದ ಪ್ರಕ್ರಿಯೆ ಕಳೆದೆರಡು ದಶಕಗಳಲ್ಲಿ ಬದುಕಿನ ಬಹುತೇಕ ಎಲ್ಲ ಅಯಾಮಗಳನ್ನೂ ಬದಲಿಸಿಬಿಟ್ಟಿರುವುದನ್ನು ಯಾರೂ ಅಲ್ಲಗಳೆಯಲಾಗುವುದಿಲ್ಲ.  ಉದ್ಯೋಗಾವಕಾಶದಲ್ಲಿನ ವಿಪುಲತೆ, ವೈವಿಧ್ಯತೆ ಹಾಗೂ ಅನಿಶ್ಚಿತತೆ ನಮ್ಮ, ಮುಖ್ಯವಾಗಿ ಯುವಜನಾಂಗದ ಆರ್ಥಿಕ ಬದುಕನ್ನು ರೋಲರ್ ಕೋಸ್ಟರ್‌ನಲ್ಲಿ ಕೂರಿಸಿರುವ ಕಾರಣದಿಂದಾಗಿ ಕೌಟುಂಬಿಕ ಹಾಗೂ ಸಾಮಾಜಿಕ ಮೌಲ್ಯಗಳು ತೀವ್ರತರದಲ್ಲಿ ಪಲ್ಲಟಗೊಳ್ಳುತ್ತಿವೆ.  ತಂದೆಯ ವೃತ್ತಿಯನ್ನು ಮಗ ಜೀವಮಾನವಿಡೀ ಸಾಗಿಸಿ ಮುಂದಿನ ತಲೆಮಾರಿಗೆ ವರ್ಗಾಯಿಸುತ್ತಿದ್ದ ಕಾಲದಲ್ಲಿ ತಲೆಮಾರುಗಳ ನಡುವೆ ಅಭಿಪ್ರಾಯಭೇದಗಳು ಕನಿಷ್ಟವಾಗಿದ್ದು ಪರಸ್ಪರ ಅವಲಂಬನೆ, ಅರಿವಿನ ವರ್ಗಾವಣೆ ಹೆಚ್ಚಿನ ಪ್ರಮಾಣದಲ್ಲಿತ್ತು.  ಬದುಕಿನ ಪ್ರಶ್ನೆಗಳಿಗೆ ಒಂದು ತಲೆಮಾರು ಕಂಡುಕೊಂಡ ಉತ್ತರಗಳು ಮುಂದಿನ ಹಲವಾರು ತಲೆಮಾರುಗಳಿಗೆ ದೀವಿಗೆಯಾಗುತ್ತಿದ್ದವು.  ಆದೆಲ್ಲವೂ ಈಗ ಬದಲಾಗುತ್ತಿದೆ.  ಜಾಗತೀಕರಣ ಮುಂದಿಟ್ಟಿರುವ ಹೊಸಹೊಸ ಅವಕಾಶಗಳ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಇಂದಿನ ಯುವಜನಾಂಗ ತನಗೆದುರಾಗುತ್ತಿರುವ ಹೊಚ್ಚಹೊಸ ಪ್ರಶ್ನೆಗಳಿಗೆ ತಾನೇ ಉತ್ತರಗಳನ್ನು ಕಂಡುಕೊಳ್ಳಬೇಕಾದ ಅನಿವಾರ್ಯ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡೇ ಮುಂದೆ ಸಾಗಬೇಕಾಗಿದೆ. ಇದರಿಂದಾಗಿ ಇಂದಿನ ತಲೆಮಾರಿನ ಇಷ್ಟಾನಿಷ್ಟಗಳು, ಭಾವನೆಬವಣೆಗಳು ಬದಲಾಗಿ, ಅದು ಬದುಕನ್ನು ನೋಡುವ ಬಗೆಯೂ ಬದಲಾಗುತ್ತಿದೆ.
          ಇಂದಿನ ಬದುಕಿನಲ್ಲಿ ಗೋಚರವಾಗುತ್ತಿರುವ ಈ ಬಗೆಯ ಸ್ಥಿತ್ಯಂತರಗಳಿಂದಾಗಿಯೇ ಈ ಹೊಸ ಕಾಲದ ಹೊಸ ಸಾಹಿತ್ಯಕ ಅಭಿವ್ಯಕ್ತಿ ಮಹತ್ವ ಪಡೆದುಕೊಳ್ಳುತ್ತದೆ.  ಹಿಂದೆಂದೂ ಕಂಡಿರದ ಹೊಚ್ಚಹೊಸ ಬದುಕೊಂದರ ಅನಾವರಣವನ್ನು ಇಂದಿನ ತಲೆಮಾರಿನ ಸಾಹಿತ್ಯದಲ್ಲಿ ನಿರೀಕ್ಷಿಸಬಹುದಾಗಿದೆ.  ಆದರೆ ಈ ನಿರೀಕ್ಷೆ ಹುಸಿಯಾಗುತ್ತಿದೆ.  ಓದುಗನತ್ತ ಉಡಾಫೆ ತೋರುವ, ಹೊಸ ಬದುಕಿನ ಚಿತ್ರಣದ ಬದಲು ಜಾಗತೀಕರಣ ಜಗತ್ತಿನ ಮೂಲೆಮೂಲೆಗಳಿಂದ ಎತ್ತಿತಂದು ಸುರಿಯುತ್ತಿರುವ ಹೊಸ ಪದಗಳ ದೊಂಬರಾಟವೇ ಸಾಹಿತ್ಯವಾಗುತ್ತಿರುವ ಅಪಾಯವೀಗ ಕಾಣುತ್ತಿದೆ.  ಜತೆಗೇ, ಅಂತರ್ಜಾಲದ ಪ್ರಭಾವದಿಂದಾಗಿ, ಮತ್ತದು ವಿಧಿಸುವ (ಬಹುಪಾಲು ನಿರ್ಲಕ್ಷಿಸಬಹುದಾದ!) ನಿಯಮಗಳಿಂದಾಗಿ ಕಥೆಗಳಿಗೆ ಪತ್ರಿಕೆಯ ಮೂರನೇ ಪುಟದ ಸುದ್ದಿಯ ಗಾತ್ರ ಹಾಗೂ ಸ್ವರೂಪವನ್ನು ನೀಡುವ ಪ್ರಯತ್ನವೂ ನಡೆಯುತ್ತಿದೆ.  ಇದಕ್ಕೆ ಓದುಗನ ಸಮಯಾಭಾವವನ್ನು ಕಾರಣವೆಂದು ಮುಂದೆ ಮಾಡುತ್ತಿದ್ದರೂ ನಿಜವಾಗಿ ಇದರ ಹಿಂದಿರುವುದು ಲೇಖಕನ ಸಮಯಾಭಾವ, ಕಡಿಮೆ ಕಾಲದಲ್ಲಿ ಹೆಚ್ಚುಹೆಚ್ಚು ಪ್ರಕಟಿಸಬೇಕೆಂಬ ತೆವಲು, ಏನನ್ನಾದರೂ ಸಾಹಿತ್ಯದ ಹೆಸರಿನಲ್ಲಿ ತೇಲಿಬಿಡಬಹುದು ಎಂಬ ಉಡಾಫೆ.   ಇದು ಸಾಲದು ಎಂಬಂತೆ ಸಾಹಿತ್ಯದ ವಿವಿಧ ಪ್ರಕಾರಗಳ ಬಗೆಗಿನ, ಅವುಗಳ ನಡುವಿನ ಹೋಲಿಕೆವ್ಯತ್ಯಾಸಗಳ ಬಗೆಗಿನ ಇದುವರೆಗಿನ ಪರಿಕಲ್ಪನೆಗಳನ್ನೇ ಅಸಡ್ಡೆಯಿಂದ ದೂರತಳ್ಳಿ ಹೈಬ್ರಿಡ್ ಪ್ರಕಾರಗಳನ್ನು ಸೃಷ್ಟಿಸುವ ಕ್ರಿಯೆಯೂ ಜಾರಿಯಲ್ಲಿದೆ.  ಕಚಗುಳಿಯಿಡುವ ಕಲ್ಪಿತ ಘಟನೆ, ಸನ್ನಿವೇಶಗಳನ್ನೊಳಗೊಂಡ ಹಿಂದಿನ ನಗೆಬರಹಗಳು, ಹರಟೆಗಳು ಇಂದು ಲಲಿತಪ್ರಬಂಧಗಳೆಂದು, ಸುಲಲಿತ ಪ್ರಬಂಧಗಳೆಂದು ಹಣೆಪಟ್ಟಿ ಹಚ್ಚಿಸಿಕೊಂಡು ಚಲಾವಣೆಗಿಳಿಯುತ್ತಿರುವ ಪ್ರಕ್ರಿಯೆ, ಅವುಗಳಿಗೆ ದೊರೆಯುತ್ತಿರುವ ಪ್ರಚಾರ ನಾಳಿನ ಸಾಹಿತ್ಯದ ಬಗ್ಗೆ ಆತಂಕವನ್ನುಂಟುಮಾಡುತ್ತದೆ.  ಈ ಬಗೆಯಾಗಿ ಪೌರ್ವಾತ್ಯ ಸಮಾಜಗಳ ಚಿಂತನೆ ಅವನತಿಗೀಡಾಗಬೇಕೆಂದು ಬಹುಶಃ ವಿಶ್ವ ಇತಿಹಾಸದ ಮೇಲೆ ನಿಜವಾದ ಹಿಡಿತ ಹೊಂದಿರುವ ಶಕ್ತಿಗಳು ಹಂಚಿಕೆ ಹಾಕಿರಬಹುದು.  ನಮ್ಮ ಲೇಖಕರು ಅರಿವಿಲ್ಲದೇ ಅದಕ್ಕೆ ಅವಕಾಶ ಮಾಡಿಕೊಡುತ್ತಿರಬಹುದು.
          ಈ ತೆರೆಯ ಹಿಂದಿನ ಆಟಗಳ ನಿಜವಾದ ಪರಿಣಾಮದ ಅರಿವು ಜನತೆಗೆ ತಟ್ಟದಂತೆ ನೋಡಿಕೊಳ್ಳುವ ಪಿತೂರಿಗಳೂ ನಡೆಯುತ್ತಿವೆ.  ಫೇಸ್‌ಬುಕ್‌ಗೆ ಇಲ್ಲದ ಮಹತ್ವವನ್ನು ಜಾಗತಿಕ ಮಟ್ಟದಲ್ಲಿ ನೀಡಲು ಅದನ್ನು ಎತ್ತರದ ಪೀಠದಲ್ಲಿ ಪ್ರತಿಷ್ಟಾಪಿಸಿ ಹೆಚ್ಚೆಚ್ಚು ಜನ ಅದಕ್ಕೆ ದಾಸರಾಗುವಂತೆ ಈ ಪಿತೂರಿಗಾರರು ಯೋಜನೆ ರೂಪಿಸುತ್ತಿದ್ದಾರೆ.  ಮೂರು ವರ್ಷಗಳ ಹಿಂದೆ ಈಜಿಪ್ಟ್‌ನಲ್ಲಿ ನಡೆದ ಜನಾಂದೋಳನದ ಯಶಸ್ಸಿಗೆ ಫೇಸ್‌ಬುಕ್ಕನ್ನು ಕಾರಣವಾಗಿಸುವ ತಂತ್ರ ಇದಕ್ಕೊಂದು ಉದಾಹರಣೆ.  ಮುಬಾರಕ್-ವಿರೋಧಿ ಜನಾಂದೋಳನಕ್ಕೆ ಫೇಸ್‌ಬುಕ್ ಜನರನ್ನು 'ಕರೆತಂದಿತು', ಹೀಗಾಗಿ ಇದು 'ಫೇಸ್‌ಬುಕ್ ಕ್ರಾಂತಿ' ಎಂಬ ಪ್ರಚಾರವಂತೂ ಇತಿಹಾಸಕ್ಕೆ ಎಸಗಿದ ಅಪಚಾರ.  ವಾಸ್ತವವಾಗಿ ಹೇಳಬೇಕೆಂದರೆ ಕೈರೋದ ತೆಹ್ರೀರ್ ಚೌಕದಲ್ಲಿ ಜನರ ಸಂಖ್ಯೆ ಹೆಚ್ಚತೊಡಗಿ ಮೂರುಲಕ್ಷ ಸಮೀಪಿಸಿದ್ದು ಮುಬಾರಕ್ ಸರಕಾರ ಅಂತರ್ಜಾಲವನ್ನು ನಿರ್ಬಂಧಿಸಿದ ಮೇಲೆಯೇ.  ಇಂಟರ್‌ನೆಟ್ ಇರಲಿ, ಕಂಪ್ಯೂಟರ್‌ನ ಮುಖವನ್ನೇ ಸಾಮಾನ್ಯಜನತೆ ನೋಡಿಲ್ಲದ ಕಾಲದಲ್ಲಿ ಜನಸಂಖ್ಯೆಯ ದೃಷ್ಟಿಯಲ್ಲಿ ಈಜಿಪ್ಟ್‌ಗಿಂತಲೂ ಅದೆಷ್ಟೋ ಪಟ್ಟು ಪುಟ್ಟದಾಗಿದ್ದ ಇರಾನ್‌ನಲ್ಲಿ, ಪೂರ್ವ ಯೂರೋಪಿನ ದೇಶಗಳಲ್ಲಿ ಸರಕಾರ-ವಿರೋಧಿ ಆಂದೋಳನಗಳಲ್ಲಿ ಮಿಲಿಯನ್‌ಗಟ್ಟಲೆ ಜನ ಭಾಗವಹಿಸಿದ್ದಾರೆ ಮತ್ತು ಯಶಸ್ವಿಯಾಗಿ ಸರಕಾರಗಳನ್ನು ಬದಲಾಯಿಸಿದ್ದಾರೆ.
            ಫೇಸ್‌ಬುಕ್ ತನ್ನ ಉತ್ತುಂಗವನ್ನು ತಲುಪಿದೆ, ಮೇಲೇರಿದ ಎಲ್ಲವೂ ಕೆಳಗಿಳಿಯಲೇಬೇಕು ಎಂಬ ನಿಯಮದಂತೆ ಫೇಸ್‌ಬುಕ್ ಸಹಾ ಕೆಳಗಿಳಿಯುತ್ತದೆ, ಅದು ೨೦೧೫-೧೭ರಲ್ಲಿ ಘಟಿಸಬಹುದು ಎಂದು ಜಾಗತಿಕ ಸರ್ವೇಯೊಂದು ಹೇಳುತ್ತದೆ.  ಅದರ ಜತೆ ಟಿವಿ ಸಂಸ್ಕೃತಿಯಿಂದಲೂ ಜನ ವಿಮುಖರಾಗಲಿ ಎಂದು ಬಯಸೋಣ.  ಆಗಲಾದರೂ ನಮ್ಮ ಜನ ಒಳ್ಳೆಯ ಸಾಹಿತ್ಯಕ್ಕೆ, ಚಿಂತನೆಗೆ ಹಿಂತಿರುಗಲಿ; ಉದಯೋನ್ಮುಖ ಬರಹಗಾರರಿಗೆ ಕ್ಷಣಿಕ ತೃಪ್ತಿಯ ಹುಚ್ಚು ಇಳಿದು ಅವರು ಮಹತ್ವಾಕಾಂಕ್ಷೆಗೆ, ಅದಕ್ಕೆ ಅಗತ್ಯವಾದ ಪರಿಶ್ರಮಕ್ಕೆ, ಧ್ಯಾನಸ್ಥ ಮನಸ್ಥಿತಿಗೆ ತಯಾರಾಗಲಿ ಎಂದು ಆಶಿಸೋಣ.

Monday, May 26, 2014

ಮೋದಿಯೆಂಬ ಮಾಂತ್ರಿಕ ವಾಸ್ತವ


          ಕೇವಲ ಒಂದು ವರ್ಷದ ಹಿಂದೆ ಕೇಂದ್ರದಲ್ಲಿ ಅಧಿಕಾರವನ್ನು ಕನಸಿನಲ್ಲಾದರೂ ಕಾಣಲು ಅಸಮರ್ಥವಾಗಿದ್ದ ಬಿಜೆಪಿ ಅತ್ಯಂತ ಕಡಿಮೆ ಅವಧಿಯಲ್ಲಿ ತನ್ನ ಅದೃಷ್ಟರೇಖೆಯನ್ನು ಬದಲಾಯಿಸಿಕೊಂಡು ಚುನಾವಣೆಗಳಲ್ಲಿ ಅಭೂತಪೂರ್ವ ವಿಜಯ ಸಾಧಿಸಿದೆ.  1984ರ ನಂತರ ಮೊಟ್ಟಮೊದಲ ಬಾರಿಗೆ ಪೂರ್ಣ ಬಹುಮತ ಪಡೆಯುವ ಪಕ್ಷವಾಗಿ ಹೊರಹೊಮ್ಮಿ ಇತಿಹಾಸ ನಿರ್ಮಿಸಿದೆ.  ಗುಜರಾತ್, ರಾಜಾಸ್ಥಾನ, ದೆಹಲಿ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಎಲ್ಲ ಸ್ಥಾನಗಳನ್ನೂ ಬಾಚಿಕೊಳ್ಳುವುದರ ಜತೆಗೆ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕಗಳ ಸ್ಥಾನಗಳಲ್ಲಿ ಸಿಂಹಪಾಲು ಗಳಿಸಿದೆ.  ಅಸ್ಸಾಂ ಹಾಗೂ ಜಮ್ಮು ಮತ್ತು ಕಾಶ್ಮೀರಗಳಲ್ಲೂ ಅದರ ಸಾಧನೆ ಗಮನಾರ್ಹ.  ಈ ಅಸಾಮಾನ್ಯ ಬೆಳವಣಿಗೆ ಬಯಲು ಮಾಡಿರುವ ರಾಜಕೀಯ ಸತ್ಯಗಳು ಹಲವಾರಿವೆ.  ಅವುಗಳಲ್ಲಿ ಮುಖ್ಯವಾದ, ವಿಶ್ಲೇಷಕರ ಗಮನದಿಂದ ತಪ್ಪಿಸಿಕೊಂಡಿರುವ ಸತ್ಯವೊಂದರ ಪರಿಚಯ ಹಾಗೂ ವಿಶ್ಲೇಷಣೆ ಈ ಲೇಖನದ ವಸ್ತು ವಿಷಯ.
ಹಲವಾರು ವಿಶ್ಲೇಷಕರು ಗುರುತಿಸಿರುವಂತೆ ಈ ಬಾರಿಯ ಚುನಾವಣೆಗಳಲ್ಲಿ ಜಾತಿಯಾಧಾರಿತ ಮತಚಲಾವಣೆ ಹಾಗೂ ಐಡೆಂಟಿಟಿ ಪಾಲಿಟಿಕ್ಸ್‌ಗಳಂತಹ ಖುಣಾತ್ಮಕ ರಾಜಕೀಯ ನಡೆಗಳು ಹಿಂದೆ ಸರಿದಿವೆ ಹಾಗೂ ಅವುಗಳನ್ನೇ ತಮ್ಮ  ಬಂಡವಾಳವಾಗಿಸಿಕೊಂಡಿದ್ದ ರಾಜಕೀಯ ಪಕ್ಷಗಳು ಮತದಾರರಿಂದ ತಿರಸ್ಕೃತಗೊಂಡಿವೆ.  ಬಿಜೆಪಿಯನ್ನು ಕೋಮುವಾದಿ ಎಂದು ಹೀಗಳೆಯುತ್ತಿದ್ದ ಪಕ್ಷಗಳೆಲ್ಲಾ ಸಮಾಜವನ್ನು ಜಾತಿಗಳ ಆಧಾರದ ಮೇಲೆ ವಿಭಜಿಸಿ ಆ ಮೂಲಕ ಮತಬ್ಯಾಂಕ್‍ಗಳನ್ನು ಸೃಷ್ಟಿಸಿಕೊಂಡಿದ್ದದ್ದು ಇದುವರೆಗಿನ ರಾಜಕೀಯ ವಾಸ್ತವ.   ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ, ರಾಷ್ಟ್ರೀಯ ಜನತಾ ದಲ ಮುಂತಾದ ಕೆಲ ಪಕ್ಷಗಳು ಕೇವಲ ಜಾತಿಯಾಧಾರಿತ, ಧರ್ಮಾಧಾರಿತ ಮತಗಳಿಂದಲೇ ಇದುವರೆಗೆ ಜೀವ ಹಿಡಿದುಕೊಂಡಿದ್ದದ್ದು.  ಕಾಂಗ್ರೆಸ್ ಸಹಾ ಇದೇ ಅನಾಚಾರವನ್ನು ಹಲಬಾರಿ ಹಲವೆಡೆ ಮಾಡಿದೆ.  ಈ ಬಾರಿ ಮತಗಳನ್ನು ಜಾತಿಯ ಆಧಾರದ ಮೇಲೆ ವಿಘಟಿಸುವ ತಂತ್ರಗಳು ವಿಫಲವಾಗಿವೆ.  ಇದುವರೆಗೂ ಅಂಥ ಪ್ರಯತ್ನಗಳಲ್ಲಿ ತೊಡಗಿದ್ದ ಪಕ್ಷಗಳು ಈಗ ಧೂಳೀಪಟವಾಗಿವೆ ಮತ್ತು ಈ ಪಕ್ಷಗಳೀಗ ಕುಸಿದುಬಿದ್ದಿರುವ ತಮ್ಮ ಏಕೈಕ ಅಧಾರಸ್ಥಂಭದ ಮುಂದೆ ಕಣ್ಣುಕಣ್ಣುಬಿಡುತ್ತಾ ನಿಂತಿವೆ.  ಇದು ಅತ್ಯಂತ ಧನಾತ್ಮಕ ಬೆಳವಣಿಗೆ.  ಇದರ ಪರಿಣಾಮವಾಗಿ ಮೋದಿ ನೇತೃತ್ವದ ಬಿಜೆಪಿ ಮತ್ತು ಎನ್‍ಡಿಎಗಳಿಗೆ ಸಮಾಜದ ಎಲ್ಲ ವರ್ಗಗಳ, ಜಾತಿಗಳ ಹಾಗೂ ಧರ್ಮಗಳ ಮತದಾರರ ಮತಗಳು ಸಂದಿವೆ.  ಹಿಂದೂ ಸಮಾಜದ ಉಚ್ಚವರ್ಗಗಳ ಪಕ್ಷ ಎಂಬ ಹಣೆಪಟ್ಟಿ ಬಿಜೆಪಿಯಿಂದ ಈಗ ದೂರವಾಗಿದೆ.  ರಾಷ್ಟ್ರ ರಾಜಕಾರಣದಲ್ಲಿ ಕಂಡುಬಂದಿರುವ ಈ ಅತ್ಯಂತ ಧನಾತ್ಮತ ಹಾಗೂ ಸ್ವಾಗತಾರ್ಹ ಬೆಳವಣಿಗೆಗೆ ಬಹುಮುಖ್ಯ ಕಾರಣ ನರೇಂದ್ರ ಮೋದಿಯವರು ಚುನಾವಣಾ ಪ್ರಚಾರವನ್ನು ನಿರ್ವಹಿಸಿದ ಬಗೆ.  ಕಳೆದ ವರ್ಷದ ಸೆಪ್ಟೆಂಬರ್ 13ರಂದು ಪಕ್ಷದ ಚುನಾವಣಾ ಪ್ರಚಾರದ ಜವಾಬ್ದಾರಿ ಹೊತ್ತಂದಿನಿಂದ ಅವರು ರೂಪಿಸಿದ ಕಾರ್ಯತಂತ್ರ, ಪ್ರಚಾರವೈಖರಿ ಬೆರಗುಗೊಳಿಸುವಂಥದ್ದು.  ಅವುಗಳ ಮೂಲಕ ಭಾರತ ಹಾಗೂ ವಿಶ್ವ ತಮ್ಮ ಬಗ್ಗೆ ಹೊಂದಿದ್ದ ಅಭಿಪ್ರಾಯಗಳನ್ನವರು ತಿರುವುಮುರುವು ಮಾಡಿಬಿಟ್ಟಿದ್ದಾರೆ.
ಸಮಾಜದಿಂದ ಮೊದಲು ಒಳ್ಳೆಯ ನಾಯಕ, ನಾಡಿನ ಭಾಗ್ಯವಿಧಾತ ಎಂದೆಲ್ಲಾ ಕರೆಸಿಕೊಂಡು ಜನಪ್ರಿಯರಾದವರು ನಂತರ ಸಮಾಜಕಂಟಕರಾಗಿ, ಶಾಂತಿಯ ಶತ್ರುಗಳಾಗಿ, ಮಾನವತೆಯ ವೈರಿಗಳಾಗಿ ಬದಲಾದದ್ದಕ್ಕೆ ಅನೇಕ ಉದಾಹರಣೆಗಳಿವೆ.  ಆದರೆ ಮೊದಲು ಸಾವಿನ ವ್ಯಾಪಾರಿ, ಕೊಲೆಗಡುಕ, ನರಹಂತಕ ಎಂದೆಲ್ಲಾ ಕರೆಸಿಕೊಂಡ ನಾಯಕನೊಬ್ಬ ಜನರ ಪ್ರೀತಿ ಗಳಿಸಿ ಅವರ ಹೃದಯಗಳಲ್ಲಿ ಸ್ಥಾನ ಪಡೆಯುವುದಕ್ಕೆ ಆಧುನಿಕ ಇತಿಹಾಸದ ಬಹುಶಃ ಮೊಟ್ಟಮೊದಲ ಉದಾಹರಣೆ ನರೇಂದ್ರ ಮೋದಿ.  ಈ ಅಸಾಮಾನ್ಯ ಬೆಳವಣಿಗೆಗೆ ನಾಡಿನ ಬಗೆಗಿರುವ ಮೋದಿಯವರ ಪ್ರಾಮಾಣಿಕ ಕಳಕಳಿಯ ಜತೆಗೇ ಅವರ ವಿರೋಧಿಗಳಲ್ಲಿದ್ದ ಉದ್ದೇಶಪೂರ್ವಕ ಅಪ್ರಾಮಾಣಿಕತೆ ಹಾಗೂ ಮಿಥ್ಯೆಗಳನ್ನು ಗುರುತಿಸಿದ ಮತದಾರದ ಪ್ರಬುದ್ಧತೆಯೂ ಕಾರಣ.
2002ರ ಗುಜರಾತ್ ಕೋಮುಗಲಭೆಗಳ ಸಂಪೂರ್ಣ ಜವಾಬ್ದಾರಿಯನ್ನು ಮೋದಿಯವರ ತಲೆಗೆ ಕಟ್ಟಿ ಅವರನ್ನು ಕೋಮುವಾದಿ ನರಹಂತಕ ಎಂದು ವಿಶ್ವಾದ್ಯಂತ ಬಿಂಬಿಸಿದ್ದು ಕಾಂಗ್ರೆಸ್ ರಾಜಕಾರಣಿಗಳು, ಮಾಧ್ಯಮದ ಒಂದು ದೊಡ್ಡ ವರ್ಗ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಒಂದಷ್ಟು ಭಾರತೀಯ ವಿಚಾರವಾದಿಗಳು.  ವಾಸ್ತವ ಇವರು ಬಿಂಬಿಸಿದ್ದಕ್ಕಿಂತ ಸಂಪೂರ್ಣ ವಿರುದ್ಧವಾಗಿತ್ತು.
ಫೆಬ್ರವರಿ 27, 2002ರ ಬೆಳಿಗ್ಗೆ ಘಟಿಸಿದ ಗೋಧ್ರಾ ರೈಲು ದುರಂತಕ್ಕೆ ಕಾರಣರಾದವರು ಆ ಪ್ರದೇಶದ ಘಾಂಚಿ ಮುಸ್ಲಿಮರು.  ಸಬರ್‍‍ಮತಿ ಎಕ್ಸ್‍ಪ್ರೆಸ್‍ಗೆ ಬೆಂಕಿ ಹಚ್ಚಲು ಈ ದುಶ್ಕರ್ಮಿಗಳು ಹಿಂದಿನ ಸಂಜೆಯೇ 6oo ಲೀಟರ್ ಪೆಟ್ರೋಲ್‍ನೊಂದಿಗೆ ತಯಾರಾಗಿದ್ದರು ಎಂದು ಜಸ್ಟಿಸ್ ನಾನಾವತಿ ಆಯೋಗ ಹೇಳಿದೆ.  ಇವರಿಗೆ ಸ್ಥಳೀಯ ಕಾಂಗ್ರೆಸ್ ನಾಯಕರ ನೇರ ಸಂಪರ್ಕ ಹಾಗೂ ಬೆಂಬಲವಿತ್ತು ಎಂದೂ, ಅವರಲ್ಲಿ ಕೆಲವರು ಘಟನಾನಂತರ ಪಾಕಿಸ್ತಾನಕ್ಕೆ ಓಡಿಹೋಗಿ ತಲೆಮರೆಸಿಕೊಂಡರು ಎಂದೂ ಆಯೋಗ ಬಯಲು ಮಾಡಿದೆ.  ಆದರೆ ಈ ರೈಲು ದುರಂತವನ್ನು ಅಕಸ್ಮಿಕ ಎಂದು ಕಾಂಗ್ರೆಸ್, ಕಾಂಗ್ರೆಸ್ ಕೃಪಾಪೋಷಿತ ಎನ್‍ಜಿಓಗಳು ಹಾಗೂ ಬಹುಪಾಲು ಮಾಧ್ಯಮಗಳು ಪ್ರಚಾರ ನಡೆಸಿದವು.  ಅವರ ಈ ಕುಕೃತ್ಯ ಇಲ್ಲಿಗೆ ನಿಲ್ಲಲಿಲ್ಲ.
ಹಿಂದಿನಿಂದಲೂ ಗುಜರಾತ್, ಮುಖ್ಯವಾಗಿ ಗೋಧ್ರಾ ಪ್ರದೇಶದ ಮತೀಯ ವಾತಾವರಣ ಸೂಕ್ಷ್ಮವಾಗಿತ್ತು.  ನಾನಾವತಿ ಆಯೋಗವೇ ಗುರುತಿಸಿರುವಂತೆ 1925ರಿಂದ 1992ರವರೆಗೆ ಅಲ್ಲಿ ಹದಿನೈದು ಮತೀಯ ಗಲಭೆಗಳಾಗಿವೆ.  ಹೀಗಾಗಿ ಕಾಂಗ್ರೆಸ್ ಬೆಂಬಲಿತ ಮುಸ್ಲಿಮರಿಂದ ಸಬರ್‌ಮತಿ ಎಕ್ಸ್‍ಪ್ರೆಸ್ ದುರಂತದಲ್ಲಿ ಐವತ್ತಕ್ಕೂ ಹೆಚ್ಚಿನ ಹಿಂದೂಗಳು ಮರಣವನ್ನಪ್ಪುತ್ತಿದ್ದಂತೇ ಸಹಜವಾಗಿಯೇ ಆ ಪ್ರದೇಶದಲ್ಲಿ ಮತೀಯ ಗಲಭೆಗಳು ಭುಗಿಲೆದ್ದವು.  ಅತ್ಯಲ್ಪ ಅವಧಿಯಲ್ಲಿ ಕೋಮುಗಲಭೆ ಇಡೀ ರಾಜ್ಯಕ್ಕೆ ಹಬ್ಬಿತು.  ಈ ಗಲಭೆಗಳಲ್ಲಿ ಎರಡು ಧರ್ಮದವರೂ ತೊಡಗಿದ್ದರು ಹಾಗೂ ಮೃತರಾದವರಲ್ಲಿ ಮುಸ್ಲಿಮರಷ್ಟೇ ಅಲ್ಲ, ಹಿಂದೂಗಳೂ ಸಾಕಷ್ಟಿದ್ದರು.  ಆದರೆ ಮುಸ್ಲಿಮರು ಗಲಭೆಯಲ್ಲಿ ತೊಡಗಿದ್ದನ್ನೂ, ಹಿಂದೂಗಳು ಮೃತರಾದದ್ದನ್ನೂ ರಾಷ್ಟ್ರೀಯ ಮಾಧ್ಯಮಗಳು ವರದಿಮಾಡಲಿಲ್ಲ.  ಘಟನೆಗಳ ಒಂದು ಮುಖವನ್ನು ಮಾತ್ರ ವರದಿ ಮಾಡಿದವರಲ್ಲಿ ಮುಂಚೂಣಿಯಲ್ಲಿ ಬರುವ ಹೆಸರುಗಳು ಆಗ ಎನ್‍ಡಿಟಿವಿಯಲ್ಲಿದ್ದ ರಾಜ್‍ದೀಪ್ ಸರ್ದೇಸಾಯಿ ಮತ್ತು ಈಗಲೂ ಅದರಲ್ಲಿರುವ ಬರ್ಕಾ ದತ್ ಅವರುಗಳದ್ದು.  ಅವರ ಈ ಸಮಾಜಘಾತುತ ಹಾಗೂ ಅನೀತಿಯುತ ಕೃತ್ಯಗಳಿಗೆ ಸರಿಯಾದ ವಿವರಣೆಗಳನ್ನು ಅವರಿಂದ ಪಡೆಯುವ ಹಕ್ಕು ಸಮಾಜಕ್ಕಿದೆ.
ನಾನಾವತಿ ಆಯೋಗ ಬಯಲು ಮಾಡಿರುವ ಪ್ರಕಾರ ಕೋಮುಗಲಭೆಗಳನ್ನು ಹರಡುವುದರಲ್ಲಿ ಕಾಂಗ್ರೆಸ್ ರಾಜಕಾರಣಿಗಳೂ ತೊಡಗಿದ್ದರು!  ಇದಾವುದನ್ನೂ ವರದಿ ಮಾಡದ ಮಾಧ್ಯಮಗಳು ದುರಂತದ ಎಲ್ಲ ಜವಾಬ್ದಾರಿಗಳನ್ನೂ ಮೋದಿಯವರ ತಲೆಗೆ ಕಟ್ಟಿದವು.  ಗಲಭೆಗಳನ್ನು ತಡೆಯಲು ಮೋದಿ ಸರಕಾರ ಕೈಗೊಂಡ ತುರ್ತುಕ್ರಮಗಳ ಉಲ್ಲೇಖವನ್ನೇ ಅವು ಮಾಡಲಿಲ್ಲ.  ಅಷ್ಟೇ ಅಲ್ಲ, ಗಲಭೆಗಳು ಆರಂಭವಾದ ಕೆಲವೇ ಗಂಟೆಗಳಲ್ಲಿ ಭದ್ರತಾ ಸಿಬ್ಬಂದಿಗಳಿಗಾಗಿ ಕಾಂಗ್ರೆಸ್ ಆಡಳಿತವಿದ್ದ ನೆರೆಯ ರಾಜಾಸ್ಥಾನ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ಸರಕಾರಗಳಿಗೆ ಗುಜರಾತ್ ಸರಕಾರ ಮಾಡಿಕೊಂಡ ಲಿಖಿತ ಮನವಿ, ಅದಕ್ಕೆ ಬಂದ ನಕಾರಾತ್ಮಕ ಉತ್ತರಗಳೂ ಮಾಧ್ಯಮಗಳಲ್ಲಿ ವರದಿಯಾಗಲಿಲ್ಲ.  ರಾಷ್ಟ್ರೀಯ ಸ್ತರದ ಮುದ್ರಣ ಮಾಧ್ಯಮಗಳ ಬೇಜವಾಬ್ದಾರಿ ನಡವಳಿಕೆಯ ಪರಾಕಾಷ್ಟೆಯೆಂದರೆ ಎಡಿಟರ್ಸ್ ಗಿಲ್ಡ್‍ ಆಫ್ ಇಂಡಿಯಾದ ತಂಡವೊಂದರ ವರದಿ.  ಟೈಂಸ್ ಆಫ್ ಇಂಡಿಯಾದ ಮಾಜಿ ಸಂಪಾದಕ ಹಾಗೂ ಗೌರವಾನ್ವಿತ ಪತ್ರಕರ್ತ ದಿಲೀಪ್ ಪಡಗಾಂವ್‍ಕರ್ ಹಾಗೂ ಆಕಾರ್ ಪಟೇಲ್ ನೇತೃತ್ವದ ಈ ತಂಡ ಯಾವ ಪರಿಶೀಲನೆಯನ್ನೂ ಮಾಡದೇ ಎಲ್ಲ ತಪ್ಪುಗಳನ್ನೂ ಮೋದಿ ಸರಕಾರದ ಮೇಲೆ ಹಾಕಿತು.  ಇದಕ್ಕೊಂದು ಉದಾಹರಣೆ: ಅಹಮದಾಬಾದ್‍ನ ಮಜ಼ಾರ್ ಮತ್ತು ಮಸೀದಿಯೊಂದನ್ನು ಮೋದಿ ಸರಕಾರ ಧ್ವಂಸಗೊಳಿಸಿ ಒಂದೇ ದಿನದಲ್ಲಿ ಅಲ್ಲಿ ಟಾರ್ ರಸ್ತೆಯನ್ನು ನಿರ್ಮಿಸಿತು ಎಂದು ಈ ತಂಡ ಆಪಾದಿಸಿತು.  ನಿಜವಾಗಿ ನಡೆದಿದ್ದೇನೆಂದರೆ ಈ ವಿನಾಶವನ್ನು ಖುದ್ದಾಗಿ ನಿಂತು ಮಾಡಿಸಿದ್ದು ಅಹಮದಾಬಾದ್‍ನ ಕಾಂಗ್ರೆಸ್ ಮೇಯರ್ ಹಿಮ್ಮತ್ ಸಿಂಗ್ ಪಟೇಲ್!  ಮೋದಿ ಸರಕಾರಕ್ಕೂ ಈ ಘಟನೆಗೂ ಯಾವ ಸಂಬಂಧವೂ ಇರಲಿಲ್ಲ.
ಇಂತಹ ಉದ್ದೇಶಪೂರ್ವಕ ಸುಳ್ಳುಪ್ರಚಾರಗಳಿಂದಾಗಿ ನರೇಂದ್ರ ಮೋದಿ ತಮ್ಮದಲ್ಲದ ತಪ್ಪಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟಹೆಸರು ಪಡೆದುಕೊಂಡರು.  ದುರಂತವೆಂದರೆ ಕಾಂಗ್ರೆಸ್, ಕಾಂಗ್ರೆಸ್ ಕೃಪಾಪೋಷಿತ ಎನ್‍ಜಿಓಗಳು ಮತ್ತು ಮಾಧ್ಯಮಗಳ ಹುನ್ನಾರಗಳನ್ನವರು ಮೌನವಾಗಿ ಸಹಿಸಿಕೊಂಡು ತಮ್ಮ ದಿನಕ್ಕಾಗಿ ತಾಳ್ಮೆಯಿಂದ ಕಾದರು.  ಅಚ್ಚರಿಯೆಂದರೆ ಅವರಿಗೆ ವಿರೋಧಿಗಳು ಕಾಂಗ್ರೆಸ್‍ನಲ್ಲಿ ಮಾತ್ರವೇ ಇರಲಿಲ್ಲ, ತಮ್ಮದೇ ಎನ್‍ಡಿಎನಲ್ಲೂ ಇದ್ದರು.  ಗೋಧ್ರಾ ರೈಲು ದುರಂತದ ತನಿಖೆ ಕೈಗೊಂಡ ನಾನಾವತಿ ಆಯೋಗಕ್ಕೆ ಅಸಹಕಾರ ತೋರಿದ್ದು ರೈಲ್ವೇ ಇಲಾಖೆ.  ಆಗ ರೈಲ್ವೇ ಮಂತ್ರಿಯಾಗಿದ್ದದ್ದು ಜೆಡಿಯು ನಾಯಕ ನಿತೀಶ್ ಕುಮಾರ್!
ಅಚ್ಚರಿಯ ವಿಷಯವೆಂದರೆ ಮೋದಿಯವರಿಗೆ ತಮ್ಮ ಪರವಾದ ವಾದವನ್ನು ಮಂಡಿಸಲು ಎನ್‍ಡಿಎ ಅವಕಾಶವನ್ನೇ ಕೊಡಲಿಲ್ಲ.  2001ರಲ್ಲಿ ಗುಜರಾತ್‍ನ ಮುಖ್ಯಮಂತ್ರಿಯಾಗುವುದಕ್ಕೆ ಮೊದಲು ಮೋದಿಯವರನ್ನು ಕೇಶುಭಾಯಿ ಪಟೇಲ್ ಆರು ವರ್ಷಗಳ ಕಾಲ ಗುಜರಾತ್‍ನಿಂದ ದೂರವಿಟ್ಟಿದ್ದರು.  ಮುಖ್ಯಮಂತ್ರಿಯಾದ ನಂತರ ಪಕ್ಷದ ತೆರೆಯ ಹಿಂದಿನ ಕೈಗಳು ಮೋದಿಯವರನ್ನು ರಾಷ್ಟ್ರೀಯ ರಾಜಕಾರಣದಿಂದ ಉದ್ದೇಶಪೂರ್ವಕವಾಗಿ ದೂರವಿಟ್ಟವು.  ಅದರ ಕಹಿಫಲವನ್ನು ಬಿಜೆಪಿ ಮುಂದಿನ ಎರಡೂ ಚುನಾವಣೆಗಳಲ್ಲಿ ಅನುಭವಿಸಿತು.
ಗುಜರಾತ್ ಕೋಮುಗಲಭೆಗಳ ನಿಜವಾದ ಚಿತ್ರಣವನ್ನೂ, ಕಾಂಗ್ರೆಸ್‍ನ ಹುನ್ನಾರಗಳನ್ನೂ ಆಧಾರಸಹಿತವಾಗಿ 2002ರ ಚುನಾವಣೆಗಳಲ್ಲೇ ಜನತೆಯ ಮುಂದಿಟ್ಟಿದ್ದರೆ ವಾಜಪೇಯಿ ಸರಕಾರ ಆ ಚುನಾವಣೆಗಳನ್ನು ಸೋಲುತ್ತಲೇ ಇರಲಿಲ್ಲ.  ಆದರೆ ಅನೂಹ್ಯ ಕಾರಣಗಳಿಂದಾಗಿ ಅದನ್ನು ಕೈಬಿಟ್ಟ ಎನ್‍ಡಿಎ ನೆಚ್ಚಿಕೊಂಡದ್ದು “ಭಾರತ ಪ್ರಕಾಶಿಸುತ್ತಿದೆ” ಎಂಬ ಹುಸಿ ಘೋಷಣೆ.  ಅದು ಸೋಲಿನಲ್ಲಿ ಕೊನೆಗಾಣುವುದು ನಿಶ್ಚಿತವೇ ಆಗಿತ್ತು.  ಮುಂದಿನ ಐದು ವರ್ಷಗಳಲ್ಲೂ ಬಿಜೆಪಿ ಪಾಠ ಕಲಿಯಲೇ ಇಲ್ಲ.  ಅಮೆರಿಕಾ ಜತೆ ಅಣು ಒಪ್ಪಂದ ಸೇರಿದಂತೆ ಹಿಂದೆ ತಾನೇ ಪ್ರತಿಪಾದಿಸಿದ್ದ ಹಲವಾರು ವಿಷಯಗಳನ್ನು ಉನ್ಮಾದಕರವಾಗಿ ವಿರೋಧಿಸುವ ಮೂಲಕ, ಸಂಸತ್ ಕಲಾಪಗಳಿಗೆ ಮತ್ತೆಮತ್ತೆ ಅಡ್ಡಿ ಒಡ್ಡುವುದರ ಮೂಲಕ ಬಿಜೆಪಿ ಜನರ ಪ್ರೀತಿವಿಶ್ವಾಸವನ್ನದು ಕಳೆದುಕೊಂಡಿತು.  ಪರಿಣಾಮ 2009ರಲ್ಲಿ ಮತ್ತೊಮ್ಮೆ ಸೋಲು.
ಬಿಜೆಪಿಯ ನೀತಿನಿಲುವುಗಳಲ್ಲಿ ಕೊನೆಗೂ ಬದಲಾವಣೆ ಕಂಡುಬಂದದ್ದು ಕಳೆದವರ್ಷದ ಆದಿಯಲ್ಲಿ.  ಪಿಂಚಣಿ, ಮಹಿಳೆಯರ ಮೇಲಿನ ದೌರ್ಜನ್ಯದ ತಡೆ ಸೇರಿದಂತೆ ಹಲವಾರು ಜನಪರ ಕಾಯಿದೆಗಳ ವಿಷಯದಲ್ಲಿ ಅದು ಆಡಳಿತಾರೂಢ ಕಾಂಗ್ರೆಸ್‍ಗೆ ಸಹಕಾರಿಯಾಗಿ ನಿಂತಿತು.  ಸಂಸತ್ತಿನಲ್ಲಿ ಮಂಡಿಸುವ ಅವಕಾಶ ಅನತಿಕಾಲದಲ್ಲೇ ದೊರೆಯುತ್ತಿದ್ದರೂ ಎಲ್ಲ ಶ್ರೇಯಸ್ಸನ್ನೂ ತಾನೇ ಪಡೆದುಕೊಳ್ಳುವ ಉದ್ದೇಶದಿಂದ ಆಹಾರ ಭದ್ರತೆಯ ಬಗ್ಗೆ ಸುಗ್ರೀವಾಜ್ಞೆಯನ್ನು ಹೊರಡಿಸುವ ಹುನ್ನಾರಕ್ಕೆ ಕಾಂಗ್ರೆಸ್ ಕೈಹಾಕಿದಾಗ ಬಿಜೆಪಿ ವಿರೋಧಿಸಲೇ ಇಲ್ಲ.  ಹೀಗೆ ‘ಸುಸಂಸ್ಕೃತ’ವಾಗುತ್ತಾ ಸಾಗಿದ ಬಿಜೆಪಿ ತೆಗೆದುಕೊಂಡ ಅತ್ಯುತ್ತಮ ಹಾಗೂ ನಿರ್ಣಾಯಕ ಕ್ರಮ ಸೆಪ್ಟೆಂಬರ್ 13, 2013ರಂದು ಮೋದಿಯವರನ್ನು ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದು.  ಮೋದಿಯವರ ಸತತ ಹನ್ನೊಂದು ವರ್ಷಗಳ ತಾಳ್ಮೆ ಕೊನೆಗೂ ಫಲ ನೀಡಿತ್ತು.  ತಾಳಿದವನು ಬಾಳಿಯಾನು ಎಂಬ ಉಕ್ತಿ ನಿಜವಾಯಿತು.  ಮೋದಿಯೆಂಬ ಮಾಂತ್ರಿಕ ಮತದಾರರನ್ನು ತಮ್ಮೆಡೆಗೆ ಸೆಳೆದುಕೊಂಡಾಯಿತು.  ಈ ಪುರಾತನ ನಾಡಿನ ಚುಕ್ಕಾಣಿ ಮೋದಿಯವರ ಕೈಯಲ್ಲಿ.  ಇದು ವಾಸ್ತವ.
ಮೋದಿಯವರ ಮುಂದಿನ ಹಾಗಿ ಹಗ್ಗದ ಮೇಲಿನ ನಡಿಗೆಯಂತೆ.  ಇಡೀ ಪ್ರಪಂಚ ಅವರನ್ನು ನೋಡುತ್ತಿದೆ.  ನಿಜವಾದ ಹಿತೈಷಿಗಳನ್ನು ಹತ್ತಿರವಿಟ್ಟುಕೊಂಡು ಜನಪರ ಕಾರ್ಯಗಳಲ್ಲಿ ತೊಡಗಿಕೊಳ್ಳುವುದರ ಜತೆಗೇ ರಾಮ್‍ದೇವ್‍ರಂಥವರನ್ನು ಹರದಾರಿ ದೂರದಲ್ಲಿಡುವುದರಲ್ಲಿ ಅವರ ಹಾಗೂ ಸಮಾಜದ ಹಿತ ಅಡಗಿದೆ.