"ವಿಜಯವಾಣಿ" ದೈನಿಕದ "ಜಗದಗಲ" ಅಂಕಣದಲ್ಲಿ ಮಾರ್ಚ್ ೧೨, ೧೯ ಮತ್ತು ೨೬ರಂದು ಪ್ರಕಟವಾದ ಲೇಖನಸರಣಿ
ಭಾಗ - ೧
ಕಳೆದವಾರ ಬಾಂಗ್ಲಾದೇಶದಲ್ಲಿ ನಡೆದ ಏಶಿಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ತಂಡದ ವಿರುದ್ಧ
ಪಾಕಿಸ್ತಾನಿ ತಂಡ ಸಾಧಿಸಿದ ಗೆಲುವಿನ ಬಗ್ಗೆ ಹರ್ಷ ವ್ಯಕ್ತಪಡಿಸಿ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ
೬೫ ಕಾಶ್ಮೀರಿ ವಿದ್ಯಾರ್ಥಿಗಳು ಮತ್ತವರ ವಿರುದ್ಧ ಉತ್ತರ ಪ್ರದೇಶ ಪೋಲಿಸರು ದೇಶದ್ರೋಹದ ಆಪಾದನೆ ಹೊರಿಸಲು
ಮುಂದಾದ ಪ್ರಸಂಗ ಹಲವು ಪ್ರಶ್ನೆಗಳನ್ನೆತ್ತುತ್ತದೆ.
ಮೀರತ್‌ನ ಸ್ವಾಮಿ ವಿವೇಕಾನಂದ ಸುಭಾರ್ತಿ ವಿಶ್ವವಿದ್ಯಾಲಯದಲ್ಲಿ ನಡೆದ ಈ ಪ್ರಸಂಗ ಈ ನಿಟ್ಟಿನಲ್ಲಿ
ಮೊದಲನೆಯದೂ ಅಲ್ಲ, ಕೊನೆಯದೂ ಆಗಲಾರದು
ಎಂಬ ವಾಸ್ತವವನ್ನು ಗಮನದಲ್ಲಿಟ್ಟುಕೊಂಡು ಈ ಬಗ್ಗೆ ನನ್ನ ವಿಚಾರಗಳನ್ನು ಎರಡು ಭಾಗಗಳ ಈ ಲೇಖನದಲ್ಲಿ
ನಿಮ್ಮ ಮುಂದಿಡುತ್ತೇನೆ.
ಕಪಿಲ್ ದೇವ್ ನೇತೃತ್ವದ ಭಾರತ ತಂಡ ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು
ಮಣಿಸಿ ವಿಶ್ವಕಪ್ ಗೆದ್ದು ಕೆಲವೇ ತಿಂಗಳುಗಳಾಗಿದ್ದವು.
ವೆಸ್ಟ್ ಇಂಡೀಸ್ ತಂಡ ಭಾರತ ಪ್ರವಾಸವನ್ನಾರಂಭಿಸಿತ್ತು. ಮೊದಲ ಏಕದಿನ ಪಂದ್ಯ ಶ್ರೀನಗರದಲ್ಲಿ. ವಿಶ್ವಕಪ್ ಸೋಲಿನ ಪ್ರತೀಕಾರಕ್ಕೆಂದೇ ಭಾರತವನ್ನು ಬಗ್ಗುಬಡಿಯಲು
ಸರ್ವ ತಯಾರಿ ಮಾಡಿಕೊಂಡು ಬಂದಿದ್ದ ವೆಸ್ಟ್ ಇಂಡೀಸ್ ತಂಡದ ಬ್ಯಾಟ್ಸ್‌ಮನ್ ಒಬ್ಬ ಬಾರಿಸಿದ ಚೆಂಡು
ಮೈದಾನ ದಾಟಿ ಪ್ರೇಕ್ಷಕರ ಗ್ಯಾಲರಿಗೆ ಹೋಗಿ ಬಿತ್ತು.
ಇಂಥದ್ದು ಪ್ರತಿ ಕ್ರಿಕೆಟ್ ಪಂದ್ಯದಲ್ಲೂ ಆಗುವಂಥದ್ದೇ. ಆದರೆ ಅನಂತರ ನಡೆದ ಘಟನೆ ಮಾತ್ರ ಸಾಧಾರಣವಾದದ್ದಲ್ಲ. ತಮ್ಮ ನಡುವೆ ಬಂದು ಬಿದ್ದ ಚೆಂಡನ್ನು ಹಿಂತಿರುಗಿಸಲು ಪ್ರೇಕ್ಷಕರ
ಒಂದು ಗುಂಪು ನಿರಾಕರಿಸಿತು. ಪಂದ್ಯದ ಆರಂಭದಿಂದಲೂ
ಭಾರತ ತಂಡವನ್ನು ಹಂಗಿಸಿ ಕೂಗು ಕೇಕೆ ಹಾಕುತ್ತಿದ್ದ ಪ್ರೇಕ್ಷಕವರ್ಗದ ಭಾರತ-ವಿರೋಧಿ ಅಟ್ಟಹಾಸ ತಾರಕಕ್ಕೇರಿತು. ಪರಿಣಾಮ- ಅಲ್ಲಿಗೆ ಪಂದ್ಯವನ್ನು ನಿಲುಗಡೆಗೆ ತರಲಾಯಿತು. (ರನ್ ರೇಟ್ ಆಧಾರದ ಮೇಲೆ ವೆಸ್ಟ್ ಇಂಡೀಸ್ ತಂಡವನ್ನು ವಿಜಯಿಯೆಂದು
ಘೋಷಿಸಲಾಯಿತೆಂದು ನೆನಪು)
ಈ ಪ್ರಸಂಗ ಘಟಿಸಿ ಮೂರು ದಶಕಗಳಾಗಿಹೋಗಿವೆ. ಈ
ಮೂವತ್ತೂವರೆ ವರ್ಷಗಳಲ್ಲಿ ಶ್ರೀನಗರದಲ್ಲಿ ಕ್ರಿಕೆಟ್ ಪಂದ್ಯವೊಂದನ್ನು ಆಯೋಜಿಸಲು ಬಿಸಿಸಿಐ ಧೈರ್ಯ
ಮಾಡಿಲ್ಲ.
ಕಾಶ್ಮೀರಿಗಳು ಭಾರತ ವಿರೋಧಿಗಳು ಎಂಬುದಕ್ಕೆ ಉದಾಹರಣೆಯಾಗಿ ಬೆರಳು ತೋರಿಸಬದುದಾದ ಮೇಲಿನ ಎರಡು
ಪ್ರಸಂಗಗಳ ನಡುವಿನ ಮೂರು ದಶಕಗಳಲ್ಲಿ ಪಾಕಿಸ್ತಾನದ ವಿಜಯಗಳಿಗೆ ಕೆಲವು ಮುಸ್ಲಿಮರು ಸಂಭ್ರಮಿಸುವ ಪ್ರಕರಣಗಳು
ದೇಶದ ವಿವಿದೆಡೆ, ನಮ್ಮ ಕರ್ನಾಟಕದಲ್ಲೂ
ಸಹಾ ಘಟಿಸಿವೆ. ಹೀಗೇಕೆ?
ಉತ್ತರಕ್ಕಾಗಿ ಇತ್ತೀಚಿನ ಇತಿಹಾಸವನ್ನೊಮ್ಮೆ ಕೆದಕಬೇಕು.
ನಲವತ್ತೇಳರಲ್ಲಿ ಘಟಿಸಿದ ದೇಶವಿಭಜನೆ ಮತ್ತು ಪಾಕಿಸ್ತಾನದ ಸ್ಥಾಪನೆಯ ಹಿಂದಿದ್ದದ್ದು ಬ್ರಿಟಿಷರ
ಸಾಮ್ರಾಜ್ಯಶಾಹಿ ಹಂಚಿಕೆ ಮತ್ತು ಮುಸ್ಲಿಂ ಲೀಗ್ ಎಂಬ ಹಣೆಪಟ್ಟಿಯಡಿ ಒಂದಾಗಿ ಸೇರಿದ್ದ ಉತ್ತರ ಭಾರತದ
ಕೆಲವು ನವಸಾಕ್ಷರ ಶ್ರೀಮಂತ ಮುಸ್ಲಿಮರ ರಾಜಕೀಯ ಮತ್ತು ಆರ್ಥಿಕ ಲಾಲಸೆಗಳು. ಹಿಂದೂ ಮಹಾಸಾಗರದತ್ತ ರಶಿಯನ್ನರ ಧಾಪುಗಾಲನ್ನು ತಡೆಯಲು
ಭಾರತದ ವಾಯುವ್ಯದಲ್ಲಿ ಅಫ್ಘಾನಿಸ್ತಾನ ಮತ್ತು ಅರಬ್ಬೀ ಸಮುದ್ರಗಳ ನಡುವೆ ತಮ್ಮ ಮಾತು ಕೇಳುವ ಸ್ವತಂತ್ರ
ರಾಷ್ಟ್ರವೊಂದರ ನಿರ್ಮಾಣದ ಅಗತ್ಯವನ್ನು ಬ್ರಿಟಿಷರು ಇಪ್ಪತ್ತನೆಯ ಶತಮಾನದ ಆದಿಯಲ್ಲೇ ಮನಗಂಡರು. ಈ ರಾಷ್ಟ್ರದ ಸೃಷ್ಟಿಯಿಂದಾಗಿ ತಮಗೆ ಸಿಗಬಹುದಾದ ರಾಜಕೀಯ
ಸ್ಥಾನಮಾನಗಳು ಹಾಗೂ ಆರ್ಥಿಕ ಸವಲತ್ತುಗಳು ಮುಸ್ಲಿಮರಿಗೆ ಆಪ್ಯಾಯಮಾನವಾಗಿ ಕಂಡವು. ಹೀಗೆ ದೇಶವಿಭಜನೆಯೆಂಬ ದುರಂತ ನಾಟಕದ ಪ್ರಮುಖ ಪಾತ್ರಧಾರಿಗಳಾದ
ಬ್ರಿಟಿಷರು ಮತ್ತು ಮುಸ್ಲಿಂ ಲೀಗ್ ತಮ್ಮ ಸ್ವಾರ್ಥಪರ ಉದ್ದೇಶಗಳನ್ನು ಮರೆಮಾಚಿ ಇಡೀ ಬೆಳವಣಿಗೆಗಳಿಗೆ
ಧಾರ್ಮಿಕ ಆಯಾಮ ಕೊಟ್ಟು ಹಿಂದೂಗಳು ಮತ್ತು ಮುಸ್ಲಿಮರು ಎರಡು ವಿಭಿನ್ನ ರಾಷ್ಟ್ರಗಳು, ಈ ಎರಡು ರಾಷ್ಟ್ರಗಳು ಒಂದೇ ರಾಜ್ಯದಲ್ಲಿ
ಸಹಬಾಳ್ವೆ ನಡೆಸಲಾಗದು ಎಂದು ಘೋಷಿಸಿದ "ದ್ವಿರಾಷ್ಟ್ರ
ಸಿದ್ಧಾಂತ"ವನ್ನು ಮುಂದೊಡ್ಡಿ ಭಾರತೀಯರನ್ನಷ್ಟೇ ಅಲ್ಲ ಇಡೀ ವಿಶ್ವವನ್ನು ಅಡ್ಡದಾರಿಗೆಳೆದವು.
ಮುಸ್ಲಿಂ ಲೀಗ್‌ನ ಸುಳ್ಳನ್ನು ಸತ್ಯವೆಂದು ನಂಬಿದ ಕೋಟ್ಯಾಂತರ ಅಮಾಯಕ ಮುಸ್ಲಿಮರಿಗೆ ಪಾಕಿಸ್ತಾನ
ಸ್ವರ್ಗಸದೃಶವಾಗಿ ಕಂಡದ್ದರಲ್ಲಿ ಆಶ್ಚರ್ಯವಿಲ್ಲ.
ಹೀಗಾಗಿಯೇ ದೇಶವಿಭಜನೆಯ ಸಮಯದಲ್ಲಿ ಪಾಕಿಸ್ತಾನಕ್ಕೆ ಹೋಗಿ ನೆಲೆಸಲು ಬಯಸಿದ ಮುಸ್ಲಿಮರ ಸಂಖ್ಯೆ
ಸಾಕಷ್ಟಿತ್ತು. ದೂರ, ವೆಚ್ಚ, ಪ್ರಯಾಣ ಸಾಧನಗಳ ಕೊರತೆ ಹಾಗೂ ಗಡಿಪ್ರದೇಶಗಳಲ್ಲಿನ
ಅಗಾಧ ಹಿಂಸಾಚಾರ ಉಂಟುಮಾಡಿದ ಭಯದಿಂದಾಗಿ ಹೆಚ್ಚಿನವರ ಬಯಕೆ ಈಡೇರದೇ ಅವರು ಅನಿವಾರ್ಯವಾಗಿ ಈ ದೇಶದಲ್ಲೇ
ಉಳಿಯುವಂತಾಯಿತು. ತಮ್ಮದಲ್ಲದ ದೇಶದಲ್ಲಿ, ತಮ್ಮವರಲ್ಲದ ಜನರ ನಡುವೆ ನೆಲಸಿದ್ದೇವೆ ಎಂಬ
ಸ್ವಕಲ್ಪಿತ ಪರಿತಾಪದಿಂದ ಹೊರಬರಲು ಇವರಿಗೆ ದಶಕಗಳೇ ಬೇಕಾದವು. ಇಂಥವರು ದೇಶದ ಎಲ್ಲೆಡೆ ಇದ್ದರು ಮತ್ತು ಕ್ರಿಕೆಟ್ ಅಥವಾ
ಹಾಕಿಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಜಯಗಳಿಸಿದಾಗ ಸಂಭ್ರಮಿಸಿದವರು ಇವರೇ.
ಯಶಸ್ವಿಯಾಗಿ ಪಾಕಿಸ್ತಾನ ತಲುಪಿದವರು ಮತ್ತು ಅಲ್ಲಿಗೆ ಹೋಗಲಾಗದೇ ಇಲ್ಲೇ ಉಳಿದು ಪರಿತಪಿಸಿದವರಿಗೆ
ಆ ಗಳಿಗೆಯಲ್ಲಿ ಅರಿವಿಗೆ ಬಾರದ ದಾರುಣ ಸತ್ಯವೊಂದಿತ್ತು.
ವಾಸ್ತವವಾಗಿ ಮುಸ್ಲಿಂ ಲೀಗ್‌ಗೆ ಇಸ್ಲಾಮಿನ ಬಗೆಗಾಗಲೀ ಸಾಮಾನ್ಯ ಮುಸ್ಲಿಮರ ಬಗೆಗಾಗಲೀ ಯಾವ
ಕಾಳಜಿಯೂ ಇರಲಿಲ್ಲ. ಅದಕ್ಕೆ ಬೇಕಾಗಿದ್ದುದು ತನ್ನ
ರಾಜಕೀಯ ಅಧಿಕಾರಕ್ಕಾಗಿ ಒಂದಷ್ಟು ನೆಲ ಅಷ್ಟೇ. ಈ
ಸತ್ಯ ನಮಗೆ ಗೋಚರವಾಗುವುದು ಪಾಕಿಸ್ತಾನಕ್ಕಾಗಿ ಮುಸ್ಲಿಂ ಲೀಗ್ ಬೇಡಿದ ಪ್ರದೇಶಗಳನ್ನು ನೋಡಿದಾಗ. ಅದರ ಬೇಡಿಕೆಯ ಪಟ್ಟಿಯಲ್ಲಿದ್ದ ಪ್ರದೇಶಗಳು ಪಶ್ಚಿಮದಲ್ಲಿ
ಬಲೂಚಿಸ್ತಾನ, ಸಿಂಧ್, ವಾಯುವ್ಯ ಗಡಿನಾಡು ಪ್ರಾಂತ್ಯ, ಜಮ್ಮು ಮತ್ತು ಕಾಶ್ಮೀರ ಹಾಗೂ ದೆಹಲಿ ಮತ್ತು
ಇಂದಿನ ಹರಿಯಾನಾ, ಹಿಮಾಚಲ್ ಪ್ರದೇಶ್
ಸೇರಿದಂತೆ ಹಿಂದಿನ ಇಡೀ ಪಂಜಾಬ್ ಪ್ರಾಂತ್ಯ, ಪೂರ್ವದಲ್ಲಿ ಕಲ್ಕತ್ತಾ ಸೇರಿದಂತೆ ಇಡೀ ಬಂಗಾಲ, ಇಡೀ ಪೂರ್ವೋತ್ತರ ರಾಜ್ಯಗಳು, ಜತೆಗೆ ಪೂರ್ವ ಪಶ್ಚಿಮಗಳನ್ನು ಸೇರಿಸಲು ಉತ್ತರ
ಪ್ರದೇಶ ಮತ್ತು ಬಿಹಾರಗಳ ಉತ್ತರ ಭಾಗಗಳನ್ನು ಸೇರಿಸಿ ಎಳೆದ ಒಂದು ಪಟ್ಟೆ. ತಾನು ಬೇಡಿಕೆಯಿತ್ತ ಪ್ರದೇಶಗಳೆಲ್ಲವೂ ಮುಸ್ಲಿಂ ಲೀಗ್‌ಗೆ
ಸಿಕ್ಕಿದ್ದರೆ ಪಾಕಿಸ್ತಾನದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಾಗುತ್ತಿದ್ದರು! ಇನ್ನೂ ಮುಂದುವರೆದು ಹೇಳುವುದಾದರೆ ಬ್ರಿಟಿಷರು ಅಂತಿಮವಾಗಿ
ಕೊಟ್ಟ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನಗಳನ್ನು ಣಡಿuಟಿಛಿಚಿಣeಜ ಚಿಟಿಜ moಣh-eಚಿಣeಟಿ (ತುಂಡರಿಸಲ್ಪಟ್ಟ ಮತ್ತು ಹುಳು ತಿಂದ) ಎಂದು ಹೀಗಳೆದ ಮಹಮದ್ ಆಲಿ ಜಿನ್ನಾ
ಹತ್ತಿರದ ಉದಯಪುರ, ಜೈಪುರ ಮುಂತಾದ
ದೇಶೀಯ ಸಂಸ್ಥಾನಗಳನ್ನು ಪಾಕಿಸ್ತಾನಕ್ಕೆ ಸೇರಿಸಿಕೊಳ್ಳಲು ಸಂಚುಹೂಡಿದರು. ಅವರ ಪ್ರಯತ್ನಗಳು ಯಶಸ್ವಿಯಾಗಿದ್ದರೆ ರಾಜಧಾನಿ ಜೈಪುರ ಸೇರಿದಂತೆ
ಈಗಿನ ರಾಜಾಸ್ಥಾನದ ಬಹುತೇಕ ಪ್ರದೇಶಗಳು ಪಾಕಿಸ್ತಾನಕ್ಕೆ ಸೇರಿರುತ್ತಿದ್ದವು. ಇದರ ಜತೆಗೆ ಹಿಂದೂ ಬಹುಸಂಖ್ಯಾತ ಹೈದರಾಬಾದ್ ಮತ್ತು ಜುನಾಘಡಗಳನ್ನು
ತನ್ನದಾಗಿಸಿಕೊಳ್ಳಲು ಪಾಕಿಸ್ತಾನ ಹೂಡಿದ ತಂತ್ರಗಳನ್ನೂ ನೆನಪಿಸಿಕೊಳ್ಳಬೇಕು.
ಮುಸ್ಲಿಂ ಲೀಗ್ ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ಜತೆ ಶಾಮೀಲಾಗಿ ಧರ್ಮವನ್ನು ರಾಜಕೀಯ ಉದ್ದೇಶಗಳಿಗಾಗಿ
ದುರುಪಯೋಗಪಡಿಸಿಕೊಂಡಿತು ಎಂಬ ಆಘಾತಕಾರೀ `ರಹಸ್ಯ' ಪಾಕಿಸ್ತಾನ ಸ್ಥಾಪನೆಯಾಗುತ್ತಿದ್ದಂತೇ ಬಯಲಾಯಿತು. "ದ್ವಿರಾಷ್ಟ್ರ ಸಿದ್ದಾಂತ"ವನ್ನು ಮುಂದೊಡ್ಡಿ, ಮುಸ್ಲಿಮರ ಹಿತರಕ್ಷಣೆಯ ಕೂಗು ಹಾಕಿ, ಪ್ರತ್ಯೇಕ ಮುಸ್ಲಿಂ ರಾಷ್ಟ್ರ ನಿರ್ಮಾಣಕ್ಕಾಗಿ
ತಕರಾರು ತೆಗೆದು ಅದು ಯಶಸ್ವಿಯಾಗಿ ಪಾಕಿಸ್ತಾನ ನಿರ್ಮಾಣವಾದ ಮರುಗಳಿಗೆಯಲ್ಲೇ ಲೀಗ್‌ನ ನಾಯಕರು ರಾಗ
ಬದಲಾಯಿಸಿದರು. ಅವರ ಪಾಕಿಸ್ತಾನದಲ್ಲಿ ಸಾಮಾನ್ಯ ಮುಸ್ಲಿಮರಿಗೆ
ಸ್ಥಾನವಿರಲಿಲ್ಲ. ಪಾಕಿಸ್ತಾನದ ಮೊದಲ ಪ್ರಧಾನಮಂತ್ರಿಯಾದವರು
ಯುನೈಟೆಡ್ ಪ್ರಾವಿನ್ಸ್ (ಈಗಿನ ಉತ್ತರ ಪ್ರದೇಶ)ದ ಶ್ರೀಮಂತ ಮನೆತನವೊಂದಕ್ಕೆ ಸೇರಿದ್ದ ಲಿಯಾಖತ್ ಅಲಿ
ಖಾನ್. ಭಾರತದಿಂದ ಪ್ರವಾಹದಂತೆ ಹರಿದುಬರುತ್ತಿದ್ದ
ಮುಸ್ಲಿಂ ನಿರಾಶ್ರಿತರ ಬಗ್ಗೆ ತಿರಸ್ಕಾರ ತೋರುತ್ತಾ ಅವರು "ಪೂರ್ವ ಪಂಜಾಬ್‌ನ ಮುಸ್ಲಿಮರ ಹೊರತಾಗಿ
ಯುನೈಟೆಡ್ ಪ್ರಾವಿನ್ಸ್ ಸೇರಿದಂತೆ ಬೇರಾವ ಪ್ರದೇಶಗಳ ಮುಸ್ಲಿಮರಿಗೂ ಪಾಕಿಸ್ತಾನದಲ್ಲಿ ಸ್ಥಳ ಇಲ್ಲ"
ಎಂದು ಬಹಿರಂಗವಾಗಿ ಹೇಳಿಕೆ ನೀಡಿದರು! ಅಷ್ಟೇ ಅಲ್ಲ, ಪಾಕಿಸ್ತಾನ ಒಂದು ಧರ್ಮಾಧಾರಿತ ರಾಷ್ಟ್ರವಾಗುವುದು
ತಮ್ಮ ಆಶಯವಲ್ಲ ಎಂದು ರಾಷ್ಟ್ರದ ಸೃಷ್ಟಿಕರ್ತ ಜಿನ್ನಾ ಸ್ಪಷ್ಟ ಮಾತುಗಳಲ್ಲಿ ಹೇಳಿದರು. ಆಗಸ್ಟ್ ೧೨, ೧೯೪೭ರಂದು ಪಾಕಿಸ್ತಾನದ ಸಂವಿಧಾನ ಸಭೆಯಲ್ಲಿನ
ತಮ್ಮ ಮೊಟ್ಟಮೊದಲ ಅಧ್ಯಕ್ಷೀಯ ಭಾಷಣದಲ್ಲಿ ನವರಾಷ್ಟ್ರದ ರಾಜನೀತಿಯ ಬಗ್ಗೆ ಹೇಳುತ್ತಾ "ಪಾಕಿಸ್ತಾನ
ಒಂದು ಧರ್ಮನಿರಪೇಕ್ಷ ಹಾಗೂ ಆಧುನಿಕ ರಾಷ್ಟ್ರವಾಗಿ ಉಗಮಿಸಬೇಕು" ಎಂದು ಘೋಷಿಸಿದರು. ಮುಂದುವರೆದು ಅವರು "...ನೀವು ಯಾವುದೇ ಕೋಮಿಗೆ ಸೇರಿರಲಿ
ನೀವೆಲ್ಲರೂ ಈ ರಾಷ್ಟ್ರದಲ್ಲಿ ಸಮಾನ ಹಕ್ಕುಗಳು, ಸವಲತ್ತುಗಳು ಮತ್ತು ಜವಾಬ್ದಾರಿಗಳನ್ನು ಹೊಂದಿದ ಪ್ರಜೆಗಳು... ನೀವು ಮಂದಿರಗಳಿಗೆ, ಮಸೀದಿಗಳಿಗೆ ಅಥವಾ ಇನ್ನಾವುದೇ ಪವಿತ್ರಸ್ಥಳಕ್ಕೆ
ಹೋಗಿ ಪೂಜೆ ಸಲ್ಲಿಸಿ... ಇದು ಸರಕಾರದ ಕಾರ್ಯಕಲಾಪಗಳಿಗೆ ಯಾವುದೇ ವಿಧದಲ್ಲೂ ಸಂಬಂಧಿಸಿರುವುದಿಲ್ಲ... ನಾವೆಲ್ಲರೂ ಒಂದೇ ರಾಷ್ಟ್ರದ ಪ್ರಜೆಗಳು, ಸಮಾನ ಪ್ರಜೆಗಳು ಎಂಬ ಮೂಲಭೂತ ತತ್ವದ ಆಧಾರದ
ಮೇಲೆ ನಾವು ಮುಂದಡಿ ಇಡುತ್ತಿದ್ದೇನೆ..." ಎಂದು ಘೋಷಿಸಿದರು. ಅಲ್ಲಿಯವರೆಗೆ ಹಿಂದೂಗಳನ್ನೂ ಮುಸ್ಲಿಮರನ್ನೂ ಪ್ರತ್ಯೇಕ
"ರಾಷ್ಟ್ರ"ಗಳು ಎಂದು ಉಲ್ಲೇಖಿಸುತ್ತಿದ್ದ ಜಿನ್ನಾ ಈಗ ಅವೆರಡನ್ನೂ ಕೇವಲ ಬೇರೆ ಬೇರೆ
"ಕೋಮು"ಗಳು ಎಂದು ಕರೆದರು!
ಈ ಬೆಳವಣಿಗೆಗಳು ಕೆಲವು ಮುಸ್ಲಿಮರಿಗೆ ಸತ್ಯದ ಅರಿವು ಮೂಡಿಸಿ ಅವರನ್ನು ಪಾಕಿಸ್ತಾನದಿಂದ ವಿಮುಖವಾಗಿಸಿದರೂ
ಹೆಚ್ಚಿನವರಿಗೆ ಈ ಸತ್ಯದರ್ಶನಕ್ಕಾಗಿ ಮತ್ತಷ್ಟು ಪುರಾವೆಗಳು ಬೇಕಾಗಿದ್ದವು. ಆ ಪುರಾವೆಗಳನ್ನು ಭಾರತ ಮತ್ತು ಪಾಕಿಸ್ತಾನಗಳೆರಡೂ ಒದಗಿಸಿದವು. ಪ್ರಜಾಪ್ರಭುತ್ವದ ವೈಫಲ್ಯ ಹಾಗೂ ಅದು ತಂದ ರಾಜಕೀಯ ಅವ್ಯವಸ್ಥೆ, ಅರ್ಥಿಕ ಅಧೋಗತಿ ಮತ್ತು ಎಂಬತ್ತರ ದಶಕದಿಂದ
ಆರಂಭಗೊಂಡ ಭಯೋತ್ಪಾದನೆಯಿಂದಾಗಿ ಪಾಕಿಸ್ತಾನದಲ್ಲಿ ನೆಮ್ಮದಿಯ ಬದುಕು ಅಸಾಧ್ಯ ಎಂಬ ಅಭಿಪ್ರಾಯವನ್ನು
ಭಾರತೀಯ ಮುಸ್ಲಿಮರಲ್ಲಿ ಬಿತ್ತಿತು. ಇದೆಲ್ಲಕ್ಕಿಂತಲೂ
ಆಘಾತಕಾರಿಯಾದ ಸುದ್ಧಿ ಮತ್ತೊಂದಿತ್ತು. ಪಾಕಿಸ್ತಾನದ
ನಿರ್ಮಾಣದಲ್ಲಿ ಮತ್ತು ಅದರ ಪ್ರಾರಂಭಿಕ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿದವರು ಈಗಿನ ಭಾರತದ ಪ್ರದೇಶಗಳಿಂದ
ವಲಸೆಹೋದ ಮುಸ್ಲಿಮರು. ದುರಂತವೆಂದರೆ ಅವರನ್ನು ತಮ್ಮವರೆಂದು
ಸ್ಥಳೀಯರು ಇಂದಿಗೂ ಒಪ್ಪಿಕೊಂಡಿಲ್ಲ. ಇಂದಿಗೂ ಅವರನ್ನು
ಮೊಹಾಜಿರ್ ಅಂದರೆ ನಿರಾಶ್ರಿತರು ಎಂದು ಕರೆಯಲಾಗುತ್ತದೆ.
ಅವರ ವಿರುದ್ಧ ಹಿಂಸಾಚಾರ ರಾಷ್ಟ್ರದ ಎಲ್ಲೆಡೆ, ಮುಖ್ಯವಾಗಿ ಕರಾಚಿ ನಗರದಲ್ಲಿ ಎಗ್ಗಿಲ್ಲದೇ
ಸಾಗುತ್ತಿದೆ. ಭಾರತಕ್ಕೆ ಹಿಂತಿರುಗಿಹೋಗಿ ಎಂದು ಅವರಿಗೆ
ಹೇಳಲಾಗುತ್ತದೆ. ಅವರ ಹಿತರಕ್ಷಣೆಗೆಂದೇ ಹುಟ್ಟಿಕೊಂಡ
ರಾಜಕೀಯ ಪಕ್ಷ ಮೊಹಾಜಿರ್ ಕ್ವಾಮಿ ಇತ್ತೆಹಾದ್. ಅದರ
ನಾಯಕ ಅಲ್ತಾಫ್ ಹುಸೇನ್ ವಿರೋಧಿಗಳಿಗೆ ೧೯೮೩ರಷ್ಟು ಹಿಂದೆಯೇ ನೀಡಿದ ತಿರುಗೇಟು ಇಂದಿಗೂ ಪ್ರಸ್ತುತ:
ಪಾಕಿಸ್ತಾನವನ್ನು ನಿರ್ಮಿಸಿದವರು ನಾವು. ಭಾರತಕ್ಕೆ
ಹಿಂತಿರುಗಿ ಎಂದು ನೀವು ನಮಗೆ ಹೇಳುತ್ತಿದ್ದೀರಿ.
ಆಯಿತು, ಹೋಗುತ್ತೇವೆ. ಹೋಗುವಾಗ ಪಾಕಿಸ್ತಾನವನ್ನೂ ಜತೆಗೆ ಕೊಂಡೊಯ್ಯುತ್ತೇವೆ.
ಪಾಕಿಸ್ತಾನದಲ್ಲಿನ ಈ ಬೆಳವಣಿಗೆಗಳು ಆ ದೇಶ ತಮ್ಮ ಕನಸಿನ ಸ್ವರ್ಗವಲ್ಲ ಎನ್ನುವ ದಾರುಣ ಸತ್ಯವನ್ನು
ನಲವತ್ತೇಳರಲ್ಲಿ ಅಲ್ಲಿಗೆ ಹೋಗಲಾಗದೇ ನಿರಾಶೆಗೊಂಡಿದ್ದ ಬಹುತೇಕ ಭಾರತೀಯ ಮುಸ್ಲಿಮರಲ್ಲಿ ಮೂಡಿಸಿದವು. ಜತೆಗೆ, ಜಾತ್ಯತೀತ ಮಾರ್ಗ ಹಿಡಿದ ಭಾರತದಲ್ಲಿ ನೆಮ್ಮದಿ
ಹಾಗೂ ನಿರ್ಭೀತಿಯಿಂದ ತಮ್ಮ ಬದುಕನ್ನು ಹಸನುಗೊಳಿಸಿಕೊಳ್ಳುವ ಹೇರಳ ಅವಕಾಶಗಳಿವೆ ಎನ್ನುವುದನ್ನು ಮನಗಂಡ
ಅವರಲ್ಲಿ ಪಾಕಿಸ್ತಾನದ ಬಗೆಗಿನ ಪ್ರೀತಿ ಕರಗತೊಡಗಿತು.
ವಿಪುಲ ಅವಕಾಶಗಳ ಭಾರತವನ್ನು ತೊರೆದು ಗೊಂದಲಮಯ ಪಾಕಿಸ್ತಾನಕ್ಕೆ ಹೋಗಿ ಮೊಹಾಜಿರ್ ಎಂಬ ಹೀನಾಯ
ಹಣೆಪಟ್ಟಿ ಹಚ್ಚಿಸಿಕೊಳ್ಳಲು ಯಾವ ವಿವೇಕಿ ತಾನೆ ಇಷ್ಟಪಡುತ್ತಾನೆ?
ನಲವತ್ತೇಳರಲ್ಲಿ ಗಡಿಯ ಸನಿಹಕ್ಕೆ ಹೋದರೂ ಪಾಕಿಸ್ತಾನ ಸೇರಲಾಗದೆ ನಿರಾಸೆಯಿಂದ ಕೊರಗುತ್ತಾ ಹಿಂದಕ್ಕೆ
ಬಂದ ಭೂಪಾಲ್‌ನ ಮುಸ್ಲಿಂ ಕುಟುಂಬವೊಂದರ ಹಿರಿಯ ಸದಸ್ಯರೊಬ್ಬರು ೧೯೯೭ರಲ್ಲಿ ಹೇಳಿದ ಈ ಮಾತುಗಳು ನನ್ನ
ಕಿವಿಯಲ್ಲಿನ್ನೂ ಗುಂಯ್‌ಗುಡುತ್ತಿವೆ. ಮುಂದುವರೆದು
ಅವರು ಭಾರತದಲ್ಲೇ ಉಳಿದ ಬಗ್ಗೆ ನನಗೆ ಈಗ ಅತೀವ ನೆಮ್ಮದಿಯೆನಿಸುತ್ತಿದೆ
ಎಂದು ಹೇಳಿದ್ದು ಇತ್ತೀಚಿನ ವರ್ಷಗಳಲ್ಲಿ ಪಾಕ್ ಕ್ರೀಡಾವಿಜಯಗಳಿಗೆ ಮುಸ್ಲಿಮರು ಸಂಭ್ರಮಿಸುವುದು ಇಲ್ಲವೇ
ಇಲ್ಲ ಎನ್ನುವಷ್ಟರ ಮಟ್ಟಿಗೆ ಕಡಿಮೆಯಾಗುತ್ತಿರುವುದೇಕೆ ಎಂಬ ಪ್ರಶ್ನೆಗೆ ಉತ್ತರ ಒದಗಿಸುತ್ತದೆ.
ಭಾಗ - ೨
ಪಾಕಿಸ್ತಾನಕ್ಕೆ ಹೋಗಬಯಸಿ, ಹೋಗಲಾಗದೆ ಭಾರತದಲ್ಲೇ ಉಳಿದ ಮುಸ್ಲಿಮರು ಕಾಲಕ್ರಮೇಣ ಭಾರತವನ್ನು ತಮ್ಮ
ಮಾತೃಭೂಮಿಯೆಂದು ಬಗೆದು ಈ ದೇಶವನ್ನು ಪ್ರೀತಿಸತೊಡಗಿದರೆ ಇದಕ್ಕೆ ಸಂಪೂರ್ಣ ವಿರುದ್ಧವಾದ ಬೆಳವಣಿಗೆ
ಕಾಶ್ಮೀರ ಕಣಿವೆಯಲ್ಲಿ ಘಟಿಸಿದೆ. ಮೊದಲಿಗೆ ಪಾಕಿಸ್ತಾನವನ್ನು
ಉಗ್ರವಾಗಿ ವಿರೋಧಿಸುತ್ತಿದ್ದ ಅಲ್ಲಿಯ ಜನ ನಿಧಾನವಾಗಿ ಭಾರತದ್ವೇಷಿಗಳಾಗಿ ಬದಲಾದರು. ಹೀಗಾಗುವಂತೆ ಮಾಡುವುದು ಪಾಕಿಸ್ತಾನದ ಅಂತರಿಕ ಹಾಗೂ ವಿದೇಶನೀತಿಯ
ಪ್ರಮುಖ ಗುರಿಯಾಗಿದ್ದರೆ ಅದಕ್ಕೆ ಸಹಕಾರಿಯಾಗುವಂತಹ ನೀತಿಗಳನ್ನು ಅನುಸರಿಸಿಕೊಂಡು ಬಂದದ್ದು ಭಾರತದ
ಅವಿವೇಕವಾಗಿದೆ.
ಪ್ರಸಕ್ತ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಭಾರತದ ಬಗ್ಗೆ ವಿರೋಧ, ಅಸಹನೆ ಉಗ್ರವಾಗಿ ಕಾಣಿಸಿಕೊಳ್ಳುತ್ತಿರುವುದು
ಕೇವಲ ಕಾಶ್ಮೀರಿ ಕಣಿವೆಯಲ್ಲಿ, ಅದರಲ್ಲೂ ಅಲ್ಲಿರುವ ಸುನ್ನಿಗಳಲ್ಲಿ ಮಾತ್ರ. ರಾಜ್ಯದ ಜನಸಂಖ್ಯೆಯಲ್ಲಿ ಶೇಕಡಾ ೩೪ರಷ್ಟಿರುವ ಹಿಂದೂ ಮತ್ತು
ಬೌದ್ಧರು ಭಾರತದ ಪರ. ಶೇಕಡಾ ೨೭ರಷ್ಟಿರುವ ಶಿಯಾಗಳಿಗೂ
ಪಾಕಿಸ್ತಾನ ಬೇಡ. ಇನ್ನುಳಿದ ಸುನ್ನಿಗಳಲ್ಲಿ ಕಣಿವೆಯಲ್ಲಿರುವವರ
ಹೊರತಾಗಿ ಉಳಿದೆಡೆಯಲ್ಲಿನ ಬಹುಜನರು ಭಾರತದ ಪರ. ಈ
ಮಾತುಗಳೊಂದಿಗೆ ಕಾಶ್ಮೀರ ಕಣಿವೆ ಭಾರತವಿರೋಧಿಯಾದ ಪ್ರಕ್ರಿಯೆಯ ಸಂಕ್ಷಿಪ್ತ ಪರಿಚಯ ಮಾಡಿಕೊಡುತ್ತೇನೆ.
ಪಕ್ಕದ ಪಂಜಾಬ್ ಅಥವಾ ದೂರದ ಬಂಗಾಲದಂತೆ ಜಮ್ಮು ಮತ್ತು ಕಾಶ್ಮೀರ ಸಂಸ್ಥಾನವೂ ಒಂದು ನೇರ ಬ್ರಿಟಿಷ್
ಆಡಳಿತದಲ್ಲಿದ್ದ ಪ್ರಾಂತ್ಯವಾಗಿದ್ದರೆ ಆ ಎರಡು ಪ್ರಾಂತ್ಯಗಳನ್ನು ಧರ್ಮದ ಆಧಾರದಲ್ಲಿ ವಿಭಜಿಸಿದಂತೆ
ಬ್ರಿಟಿಷರು ಇದನ್ನೂ ವಿಭಜಿಸಿ ಮುಸ್ಲಿಂ ಕಾಶ್ಮೀರವನ್ನು ಪಾಕಿಸ್ತಾನಕ್ಕೂ, ಹಿಂದೂ ಮತ್ತು ಬೌದ್ಧ ಕಾಶ್ಮೀರವನ್ನು ಭಾರತಕ್ಕೂ
ಕೊಡುತ್ತಿದ್ದರು ಎಂದು ನಾನು ಸ್ಪಷ್ಟವಾಗಿ ನಂಬುತ್ತೇನೆ.
ಅದರ ಪ್ರಕಾರ ಜಮ್ಮು ಮತ್ತು ಲಡಾಖ್ (ಈಗಿನ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ವಿಶಾಲ ಬಾಲ್ಟಿಸ್ತಾನ್
ಸೇರಿ) ಭಾರತಕ್ಕೂ ಉಳಿದ ಭಾಗಗಳು ಪಾಕಿಸ್ತಾನಕ್ಕೂ ಸೇರಿಹೋಗುತ್ತಿದ್ದವು. ಇಷ್ಟಾಗಿಯೂ ಕಾಶ್ಮೀರದ ಬಗ್ಗೆ ಭಾರತ ಮತ್ತು ಪಾಕಿಸ್ತಾನಗಳ
ನಡುವೆ ವೈಷಮ್ಯ ಸಂಪೂರ್ಣವಾಗಿ ಇಲ್ಲವಾಗುತ್ತಿರಲಿಲ್ಲ.
ಯಾಕೆಂದರೆ ಕಾಶ್ಮೀರ ಒಂದು ಆರ್ಥಿಕ ಪ್ರಶ್ನೆ, ಧಾರ್ಮಿಕ ಪ್ರಶ್ನೆಯಲ್ಲ. ಮುಸ್ಲಿಂ ಲೀಗ್ ಮತ್ತು ನಂತರದ ಪಾಕಿಸ್ತಾನೀ ನಾಯಕರಿಗೆ ಇಸ್ಲಾಮ್
ಮತ್ತು ಮುಸ್ಲಿಮರ ಬಗ್ಗೆ ಯಾವ ಕಾಳಜಿಯೂ ಇಲ್ಲ. ಧರ್ಮವೆನ್ನುವುದು
ಅವರ ಕೈಯಲ್ಲಿ ರಾಜಕೀಯ ಅಧಿಕಾರ ಮತ್ತು ಆರ್ಥಿಕ ಸವಲತ್ತುಗಳನ್ನು ಗಳಿಸಿಕೊಳ್ಳಲು ಉಪಯೋಗಕ್ಕೆ ಬರುವ
ಒಂದು ಆಯುಧ ಅಷ್ಟೇ ಎನ್ನುವುದನ್ನು ಆಧಾರಸಹಿತವಾಗಿ ಈಗಾಗಲೇ ವಿವರಿಸಿದ್ದೇನೆ. ಅವರ 'ಕಾಶ್ಮೀರಪ್ರೀತಿ'ಯ ಹಿಂದಿರುವುದೂ ಆರ್ಥಿಕ ಲಾಲಸೆ. ಇಸ್ಲಾಂ ಅಲ್ಲ.
ಸಿಂಧೂ ಸೇರಿದಂತೆ ಪಾಕಿಸ್ತಾನದ ಮೂರು ಪ್ರಮುಖ ನದಿಗಳೂ ಹರಿದುಬರುವುದು ಬೌದ್ಧ ಲಡಾಖ್ ಮತ್ತು
ಹಿಂದೂ ಜಮ್ಮು ಪ್ರದೇಶಗಳ ಮೂಲಕ. ಈ ಪ್ರದೇಶಗಳು ಭಾರತದ
ವಶದಲ್ಲಿಯೇ ಉಳಿದರೆ ಪಾಕಿಸ್ತಾನ ತನ್ನ ನೀರಿನ ಅಗತ್ಯಕ್ಕಾಗಿ ಯಾವಾಗಲೂ ಭಾರತದ ದಾಕ್ಷಿಣ್ಯದಲ್ಲಿರಬೇಕಾಗುತ್ತದೆ. ಭಾರತವೇನಾದರೂ ಆ ನದಿಗಳನ್ನು ತಡೆಗಟ್ಟಿದರೆ ಪಾಕಿಸ್ತಾನದ
ಮೇಲೆ ಅದರ ಪರಿಣಾಮ ಭೀಕರ. (ಪಾಕಿಸ್ತಾನದ ಒಳಗೇ ಪಂಚಾಬಿಗಳು
ಸಿಂಧೂ ನದಿಯ ನೀರಿನ ಸಿಂಹಪಾಲನ್ನು ಕಬಳಿಸುತ್ತಿರುವುದರಿಂದ ಒಂದು ಕಾಲದ ನಾಗರಿಕತೆಯ ತೊಟ್ಟಿಲಾದ ಸಿಂಧ್
ಈಗ ಬರಡು ಅರೆಮರುಭೂಮಿಯಾಗಿರುವ ದುರಂತ ಇಲ್ಲಿ ಉಲ್ಲೇಖನೀಯ). ಇಂತಹ ದುರವಸ್ಥೆಗೆ ಸಿಲುಕಬಾರದೆಂದೇ ಪಾಕಿಸ್ತಾನ ಕೊನೇಪಕ್ಷ
ಲಡಾಖ್ ಮೇಲಾದರೂ ತನ್ನ ಹತೋಟಿ ಸ್ಥಾಪಿಸಲು ಪ್ರಯತ್ನಿಸುತ್ತಿತ್ತು. ಪರಿಣಾಮವಾಗಿ ಪಾಕಿಸ್ತಾನದ ಭಾಗವಾಗಿರುತ್ತಿದ್ದ ಕಾಶ್ಮೀರ
ಕಣಿವೆ ಮತ್ತು ಭಾರತದ ಭಾಗವಾಗಿರುತ್ತಿದ್ದ ಬಾಲ್ಟಿಸ್ತಾನ್/ಲಡಾಖ್‌ಗಳ ನಡುವಿನ ಗಡಿಯಲ್ಲಿ ವೈಷಮ್ಯ
ಹೊಗೆಯಾಡುತ್ತಲೇ ಇರುತ್ತಿತ್ತು, ಈಗಿರುವಷ್ಟಲ್ಲದಿದ್ದರೂ ಈ ವಲಯದಲ್ಲಿ ಶಾಂತಿಗೆ
ಭಂಗವಾಗುವ ಮಟ್ಟಿಗೆ ಕಾಶ್ಮೀರ ಯಾವಾಗಲೂ ಉದ್ರಿಕ್ತವಾಗಿಯೇ ಇರುತ್ತಿತ್ತು. ಆದರೆ ಕಾಶ್ಮೀರಿ ಕಣಿವೆಯ ಮುಸ್ಲಿಮರು ಪಾಕಿಸ್ತಾನಿ ಕ್ರಿಕೆಟ್
ತಂಡದ ವಿಜಯಕ್ಕೆ ಸಂಭ್ರಮಿಸುವುದಕ್ಕೆ ಸಂಪೂರ್ಣ ಸ್ವತಂತ್ರರಾಗಿರುತ್ತಿದ್ದರು ಮತ್ತು ಅವರ ಸಂಭ್ರಮದ
ಬಗ್ಗೆ ಇಲ್ಲಿ ಯಾರೂ ತಲೆ ಬಿಸಿ ಮಾಡಿಕೊಳ್ಳುತ್ತಿರಲಿಲ್ಲ.
ಜಮ್ಮು ಮತ್ತು ಕಾಶ್ಮೀರ ಸಂಸ್ಥಾನವನ್ನು ತನ್ನದಾಗಿಸಿಕೊಳ್ಳಲು ಪಾಕಿಸ್ತಾನ ಮೊದಲಿಗೆ ಅನುಸರಿಸಿದ್ದು
ಆರ್ಥಿಕ ದಿಗ್ವಂಧನ ಮತ್ತಿತರ ಕೈತಿರುಚುವ ತಂತ್ರಗಳು.
ಆದರೆ ಅದ್ಯಾವುದಕ್ಕೂ ಮಹಾರಾಜ ಹರಿಸಿಂಗ್ ಸೊಪ್ಪುಹಾಕದೇ ಹೋದಾಗ ಪಾಕಿಸ್ತಾನ ಸೈನಿಕ ಕಾರ್ಯಾಚರಣೆಯ
ಮಾರ್ಗ ಹಿಡಿಯಿತು. ಪಾಕಿಸ್ತಾನೀ ಸೇನೆಯಿಂದ ತರಬೇತಿ
ಮತ್ತು ಆಯುಧಗಳನ್ನು ಪಡೆದ ಸುಮಾರು ಐದುಸಾವಿರ ಪಠಾಣರು ಅಕ್ಟೋಬರ್ ೨೨, ೧೯೪೭ರ ರಾತ್ರಿ ಕಾಶ್ಮೀರದ ಗಡಿದಾಟಿ ಬೆಳಗಿನ
ಜಾವದ ಹೊತ್ತಿಗೆ ಮುಝಾಫರಾಬಾದ್ ಪಟ್ಟಣವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಬಾರಾಮುಲ್ಲಾದತ್ತ ಮುಂದುವರೆದರು. ಅವರ ಅಂತಿಮ ಗುರಿ ಶ್ರೀನಗರವಾಗಿತ್ತು.
ಭಾರತೀಯ ಉಪಖಂಡ ಎರಡು ಶತ್ರುರಾಷ್ಟ್ರಗಳಾಗಿ ವಿಭಜನೆಗೊಂಡದ್ದರ ಅರಿವು ಆ ದಿನಗಳಲ್ಲಿ ಸ್ಥಳೀಯ
ಕಾಶ್ಮೀರಿಗಳಿಗಿರಲಿಲ್ಲ. ಅದು ಅವರಿಗೆ ಆಸಕ್ತಿಯ ವಿಷಯವಾಗಿರಲೂ
ಇಲ್ಲ. ಅವರ ಗಮನವೇನಿದ್ದರೂ ತಮ್ಮ ಶಾಂತಿಯುತ ಬದುಕಿಗೆ
ಯಾರು ಸಹಕಾರಿ ಅಥವಾ ಕಂಟಕ ಅನ್ನುವುದಷ್ಟೇ ಆಗಿತ್ತು.
ಹೀಗಾಗಿಯೇ ಅವರು ತಮ್ಮ ಮೇಲೆ ಬರ್ಬರ ದಾಳಿಯೆಸಗಿದ ಪಾಕಿಸ್ತಾನಿಯರನ್ನು ತಮ್ಮ ಶತ್ರುಗಳೆಂದೂ, ತಮ್ಮನ್ನು ವಿಮೋಚನೆಗೊಳಿಸಿದ ಭಾರತೀಯ ಸೇನೆಯನ್ನು
ಮಿತ್ರರೆಂದೂ ಬಗೆದರು. ಹೀಗಾಗಿ ಇಂದು ಪ್ರತ್ಯೇಕತಾವಾದಿಗಳ ಆಡಂಬೋಲವಾಗಿರುವ ಕಾಶ್ಮೀರಿ
ಕಣಿವೆ, ಮುಖ್ಯವಾಗಿ ಬಾರಾಮುಲ್ಲಾ
ಪಟ್ಟಣ ಸ್ವಾತಂತ್ರ್ಯದ ಹೊಸತರಲ್ಲಿ ಸಂಪೂರ್ಣ ಭಾರತೀಯವಾಗಿತ್ತು. ಪಾಕಿಸ್ತಾನೀ ಆಕ್ರಮಣಕಾರರ ಪಾಶವೀಕೃತ್ಯಗಳಿಂದ ನೊಂದಿದ್ದ
ಅಲ್ಲಿನ ಜನರನ್ನು ನಿಮ್ಮನ್ನು ಯಾರು ಆಳಬೇಕೆಂದು ನೀವು ಬಯಸುತ್ತೀರಿ ಎಂದು ಪ್ರಶ್ನಿಸಿದರೆ 'ಜನರಲ್ ತಿಮ್ಮಯ್ಯ' ಎಂದು ಕಣ್ಣವೆ ಅಲುಗಿಸದೇ ಉತ್ತರಿಸುತ್ತಿದ್ದರಂತೆ! ಈ ಜನರ ಭಾರತಪ್ರೀತಿಗೆ ಸ್ಪಷ್ಟ ಕಾರಣಗಳಿವೆ. ಅಕ್ಟೋಬರ್ ೨೪, ೧೯೪೭ರಂದು ಬಾರಾಮುಲ್ಲಾ ಪಟ್ಟಣ ಪಾಕಿಸ್ತಾನೀ
ಧಾಳಿಕೋರರ ವಶವಾದಾಗ ಅಲ್ಲಿನ ಜನಸಂಖ್ಯೆ ನಲವತ್ತೈದು ಸಾವಿರ. ಆರುತಿಂಗಳ ನಂತರ ಭಾರತೀಯ ಸೇನೆ ಅದನ್ನು ವಿಮೋಚನೆಗೊಳಿಸಿದಾಗ
ಅಲ್ಲಿ ಉಳಿದಿದ್ದವರು ಕೇವಲ ನಾಲ್ಕುಸಾವಿರದ ಇನ್ನೂರು ಜನ!
ಬಹುತೇಕ ಎಲ್ಲ ಮಹಿಳೆಯರು ಮಾನಭಂಗಕ್ಕೊಳಗಾಗಿದ್ದರು. ಈ ಆಕ್ರಮಣಕಾರೀ ಕಿರಾತಕರು ಚರ್ಚ್ ಒಂದರಲ್ಲಿದ್ದ ಯೂರೋಪಿಯನ್
ಸಂನ್ಯಾಸಿನಿಯರನ್ನೂ ಬಿಡಲಿಲ್ಲವಂತೆ.
ಆ ದಿನಗಳ ಅಗಾಧ ಜನಬೆಂಬಲದೊಂದಿಗೆ ಭಾರತೀಯ ಸೇನೆ ಕಾಶ್ಮೀರದಿಂದ ಪಾಕಿಸ್ತಾನೀ ಆಕ್ರಮಣಕಾರರನ್ನು
ಹೊರದಬ್ಬುವುದರಲ್ಲಿ ಮೊದಲ ಹೆಜ್ಜೆ ಇಡುತ್ತಿದ್ದಂತೇ ಜನವರಿ ೧, ೧೯೪೮ರಂದು ನೆಹರೂ ಸರಕಾರ ಕಾಶ್ಮೀರ ಸಮಸ್ಯೆಯನ್ನು
ವಿಶ್ವಸಂಸ್ಥೆಗೆ ಒಯ್ದದ್ದಂತೂ ತಲೆಯ ಮೇಲೆ ಮಣ್ಣು ಹಾಕಿಕೊಳ್ಳುವಂತಹ ಕೃತ್ಯ. ಇದರಿಂದ ಅನುಕೂಲವಾದದ್ದು ಪಾಕಿಸ್ತಾನಕ್ಕೆ. ಪಾಕಿಸ್ತಾನವನ್ನು ಸೃಷ್ಟಿಸಲು ಮತ್ತು ಕಾಶ್ಮೀರ ಅದರ ಭಾಗವಾಗಲು
ದಶಕಗಳಿಂದ ಹಂಚಿಕೆ ಹೂಡಿದ್ದ ಬ್ರಿಟನ್ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಪರ ನಿಂತಿತು. ಎರಡನೇ ಮಹಾಯುದ್ಧದ ನಂತರ ಪಶ್ಚಿಮದ ಪ್ರಜಾಪ್ರಭುತ್ವವಾದೀ
ಗುಂಪಿನ ನಾಯಕತ್ವವನ್ನು ಬ್ರಿಟನ್‌ನಿಂದ ಪಡೆದುಕೊಂಡಿದ್ದ ಅಮೆರಿಕಾ ಸಹಾ ತನ್ನ ಸೋವಿಯೆತ್-ವಿರೋಧೀ
ನೀತಿಗಳಿಗೆ ಪಾಕಿಸ್ತಾನ ಅನುಕೂಲಕರವೆಂದು ಬಗೆದು ಆದರ ಪರವಾಗಿ ನಿಂತಿತು. ಅಲಿಪ್ತ ನೀತಿಯನ್ನು ಬೋಧಿಸತೊಡಗಿದ ನೆಹರೂರನ್ನು ಅಮೆರಿಕಾ
ಮತ್ತು ಬ್ರಿಟನ್ ಒಬ್ಬ ಶತ್ರುವಿನಂತೆ ಪರಿಗಣಿಸಿದ್ದು ಸಹಜವೇ ಆಗಿತ್ತು. ಜತೆಗೇ ಸ್ಟ್ಯಾಲಿನ್‌ನ ಸೋವಿಯೆತ್ ಯೂನಿಯನ್ ಸಹಾ ಭಾರತವನ್ನು
ಸಂಶಯದಿಂದ ನೋಡಿತು. ಹೀಗಾಗಿ ವಿಶ್ವಸಂಸ್ಥೆಯಲ್ಲಿ
ಭಾರತ ಏಕಾಂಗಿಯಾಯಿತು. ನಿಜ ಹೇಳಬೇಕೆಂದರೆ ವಿಶ್ವಸಂಸ್ಥೆಯಲ್ಲಿ
ರಾಜತಾಂತ್ರಿಕ ಯುದ್ದಕ್ಕಿಂತ ಕಾಶ್ಮೀರದಲ್ಲಿ ಸೇನಾ ಯುದ್ದ ನಡೆಸುವುದು ಭಾರತಕ್ಕೆ ಅನುಕೂಲಕರವಾಗಿರುತ್ತಿತ್ತು. ಆದರೆ ನೆಹರೂ ಹಿಡಿದದ್ದು ಬೇರೆ ದಾರಿ. ಅದು ಅಲ್ಲಿಗೇ ನಿಲ್ಲಲಿಲ್ಲ. ಜನವರಿ ೧, ೧೯೪೯ರಂದು ಕಾಶ್ಮೀರದ ಒಂದು ದೊಡ್ಡ ಭಾಗ ಪಾಕಿಸ್ತಾನೀ
ಸೇನೆಯ ವಶದಲ್ಲಿರುವಾಗಲೇ ವಿಶ್ವಸಂಸ್ಥೆಯ ಕದನವಿರಾಮ ನಿರ್ಣಯವನ್ನು ಒಪ್ಪಿಕೊಂಡು ಯುದ್ಧ ನಿಲ್ಲಿಸಿ
ನೆಹರೂ ಮತ್ತೊಂದು ದೊಡ್ಡ ಅವಿವೇಕದ ಕೆಲಸ ಮಾಡಿದರು.
ಕಾಶ್ಮೀರದ ಮೂರನೆಯ ಒಂದು ಭಾಗ ಪಾಕ್ ಆಕ್ರಮಣದಲ್ಲೇ ಉಳಿಯಲು ಬಿಟ್ಟ ನೆಹರೂ ಸರಕಾರ ನಕ್ಷೆಗಳಲ್ಲಿ
ಮಾತ್ರ ಇಡೀ ಕಾಶ್ಮೀರವನ್ನು ಭಾರತಕ್ಕೆ ಸೇರಿಸಿಕೊಂಡಿತು.
ಅನಂತರದ ವರ್ಷಗಳಲ್ಲಿ ಶ್ರೀನಗರದಲ್ಲಿ ಒಬ್ಬರ ಮೇಲೊಬ್ಬರನ್ನು ಎತ್ತಿಕಟ್ಟುವ ತಂತ್ರದಿಂದಷ್ಟೇ
ಕಾಶ್ಮೀರವನ್ನು ಭಾರತದ ಒಕ್ಕೂಟದಲ್ಲಿ ಉಳಿಸಿಕೊಳ್ಳಬಹುದೆಂದು ನಂಬಿದ ನೆಹರು ಸರಕಾರ ಆ ನಿಟ್ಟಿನಲ್ಲಿ
ತಪ್ಪುಹೆಜ್ಜೆ ಇಟ್ಟರೂ ಕಾಶ್ಮೀರಿ ಕಣಿವೆಯ ಜನತೆ ಸಾರಾಸಗಟಾಗಿ ಭಾರತದಿಂದ ದೂರಾಗಲಿಲ್ಲ. ೧೯೬೩ರಲ್ಲಿ ಹಜರತ್ ಬಾಲ್ ಮಸೀದಿಯಲ್ಲಿ ಘಟಿಸಿದ ಪ್ರವಾದಿ
ಮಹಮದ್‌ರ ಗಡ್ಡದ ಕೂದಲಿನ ಕಳವಿನ ವಿರುದ್ಧ ಭುಗಿಲೆದ್ದ ಅಶಾಂತಿ ಭಾರತ-ವಿರೋಧಿ ದಂಗೆಯಾಗಿ ಬದಲಾದರೂ
ಅದು ತಾತ್ಕಾಲಿಕವಾಗಿತ್ತು. ಎರಡು ವರ್ಷಗಳ ನಂತರ ಕಾಶ್ಮೀರಿ
ಕಣಿವೆಯ ಜನತೆ ಭಾರತದ ವಿರುದ್ಧ ದಂಗೆಯೇಳುವಂತೆ ಅಯೂಬ್ ಖಾನ್ ಸರಕಾರ ಪಿತೂರಿ ಹೂಡಿದರೂ ಅದು ಫಲಕಾರಿಯಾಗಲಿಲ್ಲ. ಪಾಕಿಸ್ತಾನೀಯರ ನಿರೀಕ್ಷೆಗೆ ವಿರುದ್ಧವಾಗಿ ಕಾಶ್ಮೀರಿಗಳು
ಯುದ್ದದಲ್ಲಿ ಭಾರತೀಯ ಸೇನೆಗೆ ಸಹಕಾರ ನೀಡಿದರು. ೧೯೭೧ರ
ಯುದ್ಧದಲ್ಲೂ ಇದೇ ಪರಿಸ್ಥಿತಿ ಇತ್ತು ಮತ್ತು ಎಪ್ಪತ್ತರ ದಶಕದಲ್ಲಿ ಇಂದಿರಾಗಾಂಧಿವರ ಸಕಾರಾತ್ಮಕ ನೀತಿಗಳಿಂದಾಗಿ
ಕಾಶ್ಮೀರಿಗಳು ಭಾರತಕ್ಕೆ ಅತೀ ಹತ್ತಿರಾಗಿದ್ದರು.
ಆದರೆ ೧೯೭೯-೮೯ರ ನಡುವಿನ ಒಂದು ದಶಕದಲ್ಲಿ ಘಟಿಸಿದ ಮೂರು ಬೆಳವಣಿಗೆಗಳು ಕಾಶ್ಮೀರಿಗಳನ್ನು
ಭಾರತದಿಂದ ದೂರ ಒಯ್ದವು.
೧೯೭೯ರ ಅಂತ್ಯದಲ್ಲಿ ಅಫ್ಘಾನಿಸ್ತಾನಕ್ಕೆ ಸೋವಿಯೆತ್ ಸೇನೆ ನುಗ್ಗಿದ್ದು ಕಾಶ್ಮೀರದ ಮೇಲೆ ನಕಾರಾತ್ಮಕ
ಪರಿಣಾಮ ಬೀರಿತು. ಸೋವಿಯೆತ್ ಸೇನಾಕ್ರಮವನ್ನು ಇಸ್ಲಾಮ್‌ನ
ವಿರುದ್ಧದ ಯುದ್ಧ ಎಂದು ಪಾಕಿಸ್ತಾನೀ ಮತ್ತು ಪಶ್ಚಿಮದ ಮಾಧ್ಯಮಗಳು ಬಿಂಬಿಸಿದವು. ಜತೆಗೆ ಸೋವಿಯೆತ್ ಪರವಾಗಿ ನಿಂತ ಭಾರತವನ್ನು ಇಸ್ಲಾಮ್-ವಿರೋಧಿ
ಎಂದು ಪಾಕ್ ಮಾಧ್ಯಮಗಳು ಬಣ್ಣಿಸಿದವು. ಅವುಗಳ ನಿರಂತರ
ಅಪಪ್ರಚಾರದ ಪರಿಣಾಮವಾಗಿ ಕಾಶ್ಮೀರಿ ಕಣಿವೆಯ ಜನತೆಯ ಮನೋಭಾವ ಬದಲಾಗತೊಡಗಿತು. ಅದಕ್ಕೆ ಪೂರಕವಾಗಿ ೧೯೮೭ರ ವಿಧಾನಸಭಾ ಚುನಾವಣೆಗಳಲ್ಲಿ ರಾಜೀವ್
ಗಾಂಧಿಯವರ ಕಾಂಗ್ರೆಸ್ ಪಕ್ಷ ಅನೀತಿಯುತ ಚಟುವಟಿಕೆಗಳಿಗೆ ಮುಂದಾದದ್ದೇ ಪಾಕ್ ಅಪಪ್ರಚಾರಕ್ಕೆ ಬಲ ಬಂದು
ಕಾಶ್ಮೀರಿಗಳ ಮನೋಭಾರ ನಿರ್ಣಾಯಕವಾಗಿ ಬದಲಾಗಿಹೋಯಿತು.
ಈ ವಿಷಮ ಪರಿಸ್ಥಿತಿಯಲ್ಲಿ ಮರುವರ್ಷವೇ ಅಂದರೆ ೧೯೮೮ರಲ್ಲಿ ಮೊದಲ ಅಫ್ಘನ್ ಯುದ್ದ ನಿಲುಗಡೆಗೆ
ಬಂದು ಸೋವಿಯೆತ್ ಸೇನೆ ಹಿಂತಿರುಗಿ ಹೋದದ್ದರಿಂದ 'ಕೆಲಸ' ಕಳೆದುಕೊಂಡ ಭಯೋತ್ಪಾದಕರನ್ನು ಪಾಕಿಸ್ತಾನದ
ಐಎಸ್‌ಐ ಕಾಶ್ಮೀರಕ್ಕೇ ಅಟ್ಟಿದ್ದೇ ೧೯೮೯-೯೦ರಲ್ಲಿ ಕಣಿವೆಯಲ್ಲಿ ಅಶಾಂತಿ, ಭಯೋತ್ಪಾದನೆ ಭುಗಿಲೇಳುವುದಕ್ಕೆ ಕಾರಣವಾಯಿತು. ಇದೆಲ್ಲಕ್ಕೂ ಅಡಿಪಾಯವಾದದ್ದು ಅಫ್ಘನ್ ಯುದ್ಧದಲ್ಲಿ ಇಂದಿರಾ
ಗಾಂಧಿಯವರ ಸೋವಿಯೆತ್‌ಪರ ನೀತಿ, ೧೯೮೭ರಲ್ಲಿ ರಾಜೀವ್ ಗಾಂಧಿಯವರ ಚುನಾವಣಾ ಭ್ರಷ್ಟಾಚಾರ ಮತ್ತು ಇದೆಲ್ಲವನ್ನೂ
ಭೂತಗನ್ನಡಿಯಲ್ಲಿ ಕಾಶ್ಮೀರಿಗಳ ಮುಂದಿಟ್ಟ ಪಾಕ್ ಮಾಧ್ಯಮಗಳು.
ಕಣಿವೆಯಲ್ಲಿ ಭಯೋತ್ಪಾದನೆ ಆರಂಭವಾಗಿ ಇಪ್ಪತ್ತನಾಲ್ಕು ವರ್ಷಗಳು ಗತಿಸಿಹೋಗಿವೆ. ಈ ಇಡೀ ಕಾಲಾವಧಿಯಲ್ಲಿ ಸೇನಾಕಾರ್ಯಾಚರಣೆಯೂ ಅವ್ಯಾಹತವಾಗಿ
ಸಾಗುತ್ತಾ ಬಂದಿದೆ. ಹೀಗಾಗಿ ಕಣಿವೆಯ ಜನತೆಯ ಒಂದಿಡೀ
ತಲೆಮಾರು ತನ್ನ ಇದುವರೆಗಿನ ಇಡೀ ಜೀವಿತಾವಧಿಯನ್ನು ಪಾಕ್ ಅಪಪ್ರಚಾರದ ತೆಕ್ಕೆಯಲ್ಲಿ, ಭಾರತ-ವಿರೋಧಿ ಅಲೆಯಲ್ಲಿ ಕಳೆದಿದೆ. ಈ ಯುವಜನತೆಗೆ ಸಹಜವಾಗಿಯೇ ಪಾಕಿಸ್ತಾನ ಈಗಲೂ ಮುಸ್ಲಿಮರ
ಸ್ವರ್ಗ, ಭಾರತ ಕಾಫಿರರ ನಾಡು. ಕಣಿವೆಯಲ್ಲಿ ಪಾಕ್ ಪರ ಘೋಷಣೆ ಕೂಗುವವರು ಇವರೇ, ಸೈನಿಕರ ವಿರುದ್ಧ ಕಲ್ಲು ತೂರುವವರೂ ಇವರೇ. ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಜಯಗಳಿಸಿದರೆ
ಕುಣಿದು ಕುಪ್ಪಳಿಸುವುದರ ಜತೆಗೆ ಅಗತ್ಯ ಬಿದ್ದರೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಗಿ ಭಯೋತ್ಪಾದನೆಯ
ತರಬೇತಿ ಪಡೆಯಲೂ ಇವರು ತಯಾರು. ಇವರ ಭಾರತ-ದ್ವೇಷ
ಸ್ಪಷ್ಟ. ಇವರ ಗುಂಪಿಗೆ ಮೀರತ್‌ನ ಸ್ವಾಮಿ ವಿವೇಕಾನಂದ
ವಿಶ್ವವಿದ್ಯಾಲಯದ ಮದನ್‌ಲಾಲ್ ಧಿಂಗ್ರಾ ಹಾಸ್ಟೆಲ್‌ನಲ್ಲಿ ಪಾಕ್ ವಿಜಯಕ್ಕೆ ಸಂಭ್ರಮಿಸಿ ಪಾಕ್ ಪರ
ಘೋಷಣೆಗಳನ್ನು ಕೂಗಿದ ಕಾಶ್ಮೀರಿ ವಿದ್ಯಾರ್ಥಿಗಳನ್ನೂ ಸೇರಿಸಬಹುದೇ?
ಹೇಗೆ? ಏಕೆ?
ಭಾಗ - ೩
ಕಳೆದ ಎರಡೂವರೆ ದಶಕಗಳಲ್ಲಿ ಕಾಶ್ಮೀರ ಕಣಿವೆಯಲ್ಲಿನ ಪರಿಸ್ಥಿತಿಯಲ್ಲಿ ಏರುಪೇರುಗಳಿದ್ದೇ ಇವೆ. ಭಯೋತ್ಪಾದನೆ ತಹಬಂದಿಗೆ ಬಂದು ಕಣಿವೆಯಲ್ಲಿ ಶಾಂತಿಯ ಸೂಚನೆ
ಕಾಣಿಸಿಕೊಳ್ಳುವುದು, ಏಕಾಏಕಿ ಪರಿಸ್ಥಿತಿ
ಹದಗೆಟ್ಟು ಅಶಾಂತಿ ಉಲ್ಬಣಿಸಿ ರಕ್ತದೋಕುಳಿ ತಾರಕಕ್ಕೇರುವುದು ಮತ್ತೆಮತ್ತೆ ನಡೆಯುತ್ತಾ ಬಂದಿದೆ. ಪರಿಸ್ಥಿತಿ ಹದಗೆಡುವುದಕ್ಕೆ ಪಾಕ್ ಕುಟಿಲ ನೀತಿಗಳು ಕಾರಣವಾದಷ್ಟೇ
ಭಾರತದ ಅವಿವೇಕದ ನಡವಳಿಕೆಗಳೂ ಪದೇಪದೇ ಕಾಣವಾಗಿವೆ.
ಇದಕ್ಕೆ ಇತ್ತೀಚಿನ ಉದಾಹರಣೆ ವರ್ಷದ ಹಿಂದೆ ಪರಿಸ್ಥಿತಿ ಸುಧಾರಿಸುತ್ತಿದ್ದ ಸಮಯದಲ್ಲಿ ಅಫ್ಜಲ್
ಗುರುವನ್ನು ಗಲ್ಲಿಗೇರಿಸಿ ತನ್ನ ವಿರುದ್ದ ಅಪಪ್ರಚಾರಕ್ಕೆ ಭಾರತ ಹೊಸ ಅವಕಾಶ ಒದಗಿಸಿಕೊಟ್ಟದ್ದು.
ಇಷ್ಟಾಗಿಯೂ ೧೯೯೦ರಂತೆ ೨೦೧೪ ಇಲ್ಲ ಎನ್ನುವುದಂತೂ ನಿರ್ವಿವಾದದ ಸಂಗತಿ. ನಿಜ ಹೇಳಬೇಕೆಂದರೆ ೧೯೯೫ರ ಬೇಸಿಗೆಯ ಹೊತ್ತಿಗೇ ಭಯೋತ್ಪಾದನೆಯಲ್ಲಿ
ಕಣಿವೆಯ ಬಹುಪಾಲು ಜನತೆ ಆಸಕ್ತಿ ಕಳೆದುಕೊಂಡಿತು.
ಅದಕ್ಕೆ ಹಿಂದಿನ ವರ್ಷಗಳಲ್ಲಿ ಸೇನೆಯಿಂದ ಹತನಾದ ಲಷ್ಕರ್-ಎ-ತೋಯ್ಬಾ (ಎಲ್‌ಇಟಿ) ಭಯೋತ್ಪಾದಕನೊಬ್ಬನ
ಶವಯಾತ್ರೆಯಲ್ಲಿ ಸ್ಥಳೀಯ ಜನತೆ ಸ್ವಯಂಪ್ರೇರಿತವಾಗಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸುವುದು
ಸರಿಸುಮಾರು ದಿನನಿತ್ಯದ ನೋಟವಾಗಿರುತ್ತಿತ್ತು. ಲಷ್ಕರ್
ಭಯೋತ್ಪಾದಕರಲ್ಲಿ ನೂರಕ್ಕೆ ತೊಂಬತ್ತರಷ್ಟು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದವರು, ಇನ್ನುಳಿದವರು ಅಫ್ಘನ್ ತಾಲಿಬಾನಿಗಳು ಮತ್ತಿತರ
ವಿದೇಶಿಗಳು. ಕಾಶ್ಮೀರಿಗಳ ಸಂಖ್ಯೆ ಇಲ್ಲವೆನ್ನುವಷ್ಟು
ವಿರಳ. ಆದಾಗ್ಯೂ ಈ ವಿದೇಶಿಯರನ್ನು ತಮ್ಮವರೇ ಎಂದು
ಕಾಶ್ಮೀರಿ ಕಣಿವೆಯ ಜನತೆ ಸ್ವೀಕರಿಸಿತ್ತು. ಹತ್ಯೆಗೀಡಾದ
ಭಯೋತ್ಪಾದಕನ ಶವಯಾತ್ರೆಯಲ್ಲಿ ಸಾವಿರಗಟ್ಟಳೆಯಲ್ಲಿ ಮಹಿಳೆಯರು ಎದೆ ಬಡಿದುಕೊಳ್ಳುತ್ತಾ ರೋಧಿಸುವುದು, ಪುರುಷರು ಮುಷ್ಟಿ ಮೇಲೆತ್ತಿ ಪಾಕಿಸ್ತಾನದ
ಪರ ಮತ್ತು ಭಾರತದ ವಿರುದ್ಧ ಘೋಷಣೆ ಕೂಗುವುದು ಸಾಮಾನ್ಯ ದೃಶ್ಯವಾಗಿತ್ತು. ಆದರೆ ೯೦ರ ದಶಕದ ಮಧ್ಯದಿಂದೀಚಿಗೆ ಇಂತಹ ಶವಯಾತ್ರೆಗಳಲ್ಲಿ
ಭಾಗವಹಿಸುವ ಸ್ಥಳೀಯರ ಸಂಖ್ಯೆ ಗಣನೀಯವಾಗಿ ಇಳಿದುಹೋಯಿತು.
ಇದಕ್ಕೆ ಎರಡು ಪ್ರಮುಖ ಕಾರಣಗಳಿದ್ದವು. ಮೊದಲನೆಯದು-
ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಜಮ್ಮು ಆಂಡ್ ಕಾಶ್ಮೀರ್ ಲಿಬರೇಶನ್ ಫ್ರಂಟ್ (JKLF)
ಮತ್ತು ಹಿಜ್ಬುಲ್ ಮುಜಾಹಿದೀನ್‌ಗಳಿಗೆ ಪಾಕಿಸ್ತಾನದ ಬೆಂಬಲವಿಲ್ಲ. ಅದರ ಒಲವೇನಿದ್ದರೂ ಪಾಕಿಸ್ತಾನಿಗಳಿಂದ ತುಂಬಿದ್ದ, ಕಾಶ್ಮೀರವನ್ನು
ಪಾಕಿಸ್ತಾನದ ಭಾಗವಾಗಿಸುವ ಉದ್ದೇಶವುಳ್ಳ ಲಷ್ಕರ್-ಎ-ತೋಯ್ಬಾಗೆ ಮಾತ್ರ. ಹೀಗಾಗಿ ಕಣಿವೆಯಲ್ಲಿನ ಭಾರತ-ವಿರೋಧಿ ಭಾವನೆಯನ್ನು ಪಾಕಿಸ್ತಾನ
ತನ್ನ ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಳ್ಳುವುದರ ಅರಿವು ಸ್ಥಳೀಯರಿಗಾಯಿತು. ಎರಡನೆಯದು- ಪಾಕಿಸ್ತಾನದ ಹುನ್ನಾರಗಳು ಅಂತಿಮವಾಗಿ ತಮ್ಮ
ಹಿತಾಸಕ್ತಿಗಳಿಗೆ ಮಾರಕವಾಗುತ್ತವೆಂದು ಹೆಚ್ಚಿನ ಸ್ಥಳೀಯ ಕಾಶ್ಮೀರಿಗಳು ಮನಗಂಡರು. ಭಯೋತ್ಪಾದನೆಯ ತರಬೇತಿಗೆಂದು ಪಾಕಿಸ್ತಾನಕ್ಕೆ ಹೋಗಿ ಭ್ರಮನಿರಸನಗೊಂಡು
ಹಿಂತಿರುಗಿದ ಕಾಶ್ಮೀರಿ ಯುವಕರು ತಂದ ಸುದ್ಧಿಗಳು ಸ್ಥಳೀಯರನ್ನು ಕಂಗೆಡಿಸಿಬಿಟ್ಟವು. ಪಂಜಾಬಿಗಳ ಅಟ್ಟಹಾಸದಲ್ಲಿ ನಲುಗುತ್ತಿರುವ, ಸ್ವತಂತ್ರ ಅಸ್ತಿತ್ವವನ್ನೇ ಕಳೆದುಕೊಂಡಿರುವ
ಸಿಂಧಿ, ಬಲೂಚೀ ಮತ್ತು ಪುಶ್ತೂ
ಸಂಸ್ಕೃತಿಗಳು ಪಾಕಿಸ್ತಾನದಲ್ಲಿ ತಮಗೇನು ಕಾದಿದೆ ಎನ್ನುವುದರ ಅರಿವನ್ನು ಸ್ಥಳೀಯರಿಗೆ ಮನವರಿಕೆ ಮಾಡಿಕೊಟ್ಟವು. ಎಲ್‌ಇಟಿ ಮತ್ತು ಐಎಸ್‌ಐಗಳ ಹುನ್ನಾರಕ್ಕೆ ಬಲಿಬಿದ್ದು ಕಾಶ್ಮೀರವನ್ನು
ಪಾಕಿಸ್ತಾನದ ಭಾಗವಾಗಿಸಿದರೆ ಅಲ್ಲಿಗೆ ತಮ್ಮ ಕಾಶ್ಮೀರಿಯತ್‌ನ ಅಂತ್ಯವಾದಂತೇ ಎಂದು ಕಾಶ್ಮೀರಿಗಳು
ಭಾವಿಸಿದರು. ಪರಿಣಾಮವಾಗಿ ಸ್ಥಳೀಯರು ಎಲ್‌ಇಟಿಯಿಂದ
ದೂರಾಗತೊಡಗಿದರು. ಲಷ್ಕರ್ ಭಯೋತ್ಪಾದಕರ ಶವಯಾತ್ರೆಯಲ್ಲಿ
ಸ್ಥಳೀಯ ಮಹಿಳೆಯರು ಮತ್ತು ಪುರುಷರು ಭಾಗಿಯಾಗುವುದು ಕಡಿಮೆಯಾಗುತ್ತಾ ಹೋಯಿತು. ಈಗಂತೂ ಅದು ಇಲ್ಲವೇ ಇಲ್ಲ ಎನ್ನುವ ಮಟ್ಟಿಗಾಗಿದೆ.
ಕಾಶ್ಮೀರದಲ್ಲಿನ ಸೋಲನ್ನು ಬೇರೆಡೆ ಯಶಸ್ಸಾಗಿ ಪರಿವರ್ತಿಸುವ ಉದ್ದೇಶದಿಂದ ಎಲ್‌ಇಟಿ ಮತ್ತು ಐಎಸ್‌ಐಗಳು
ತಮ್ಮ ಉಗ್ರವಾದಿ ಕಾರ್ಯಯೋಜನೆಗಳನ್ನು ಭಾರತದ ಇತರೆಡೆಗಳಿಗೆ ವಿಸ್ತರಿಸತೊಡಗಿದವು. ತಮ್ಮ ಅಸ್ತಿತ್ವಕ್ಕಾಗಿ, ಭಾರತವನ್ನು ಸದಾ ಆತಂಕ ಸ್ಥಿತಿಯಲ್ಲಿಡುವ
ಉದ್ದೇಶಕ್ಕಾಗಿ ಅವರಿಗದು ಅಗತ್ಯವಾಗಿತ್ತು
ಇದೇ ಸಮಯದಲ್ಲಿ ತಮ್ಮ ಪ್ರಭಾವವನ್ನು ವಿಸ್ತರಿಸಿಕೊಂಡ ಹಿಜ್ಬುಲ್ ಮುಜಾಹಿದೀನ್, ಜೆಕೆಎಲ್‌ಎಫ್, ದುಕ್ತರಾನ್-ಇ-ಮಿಲ್ಲತ್ ಮುಂತಾದ ಸ್ಥಳೀಯ
ಸಂಘಟನೆಗಳು ಕಣಿವೆಯಲ್ಲಿ ಭಾರತ-ವಿರೋಧ ಹೊಗೆಯಾಡುತ್ತಿರುವಂತೆ ನೋಡಿಕೊಂಡವು. ಪಾಕಿಸ್ತಾನದಲ್ಲಿ ಕಾಶ್ಮೀರದ ವಿಲೀನ ಈ ಸಂಘಟನೆಗಳಿಗೆ ಬೇಕಿಲ್ಲ, ಹಾಗೆ ಸ್ವತಂತ್ರ ಕಾಶ್ಮೀರವೂ ಗಗನಕುಸುಮ ಎಂಬ
ವಾಸ್ತವ ಅವರಿಗೆ ಗೊತ್ತು. ಆದಾಗ್ಯೂ ಕಣಿವೆಯಲ್ಲಿ
ಅಶಾಂತಿ ಹೊಗೆಯಾಡುತ್ತಲೇ ಇರುವುದರ ಅರ್ಥಿಕ ಲಾಭಗಳ ಅರಿವು ಅವರಿಗಿದೆ. ಎಲ್ಲಿಯವರೆಗೆ ಕಾಶ್ಮೀರದಲ್ಲಿ ಅಶಾಂತಿ ಜಾರಿಯಲ್ಲಿರುತ್ತದೆಯೋ
ಅಲ್ಲಿಯವರೆಗೆ ಕಾಶ್ಮೀರಕ್ಕಿರುವ ವಿಶೇಷ ಸ್ಥಾನಮಾನಗಳನ್ನು ತೆಗೆದುಹಾಕುವ ಧೈರ್ಯವನ್ನು ದೆಹಲಿಯ ಯಾವ
ಸರಕಾರವೂ ಮಾಡಲಾರದು ಎಂದವರಿಗೆ ಗೊತ್ತು. ಪರಿಣಾಮವಾಗಿ
ಕೇಂದ್ರದಿಂದ ಅಗಾಧ ಆರ್ಥಿಕ ನೆರವು ವರ್ಷವರ್ಷವೂ ಹರಿದುಬರುತ್ತಲೇ ಇರುತ್ತದೆ, ಕಾಶ್ಮೀರದಲ್ಲಿ ಅಗತ್ಯವಸ್ತುಗಳು ಭಾರತದ ಇತರೆಡೆಗಳಿಗಿಂತ
ಕಡಿಮೆ ಬೆಲೆಯಲ್ಲಿ ದೊರೆಯುತ್ತಲೇ ಇರುತ್ತವೆ, ಕಾಶ್ಮೀರ ಕಣಿವೆಯ ಜನರು ಭಾರತದ ಇತರೆಡೆಗಳ ಜನರಿರಲಿ ತಮ್ಮದೇ ರಾಜ್ಯದ ಜಮ್ಮು
ಮತ್ತು ಲಡಾಖ್‌ನ ಜನರಿಗಿಂತ ಆರ್ಥಿಕವಾಗಿ ಹೆಚ್ಚು ಅನುಕೂಲವಾಗಿರುವುದು ಮುಂದುವರೆಯುತ್ತಲೇ ಹೋಗುತ್ತದೆ.
ಹೀಗೆ ಆರ್ಥಿಕ ಲಾಭಗಳಿಗಾಗಿ ದೆಹಲಿಯನ್ನು ಮತ್ತು ಭಾರತವನ್ನು ಬ್ಲಾಕ್‌ಮೇಲ್ ಮಾಡುವ ಉದ್ದೇಶದಿಂದಲೇ
ಕಾಶ್ಮೀರಿ ಕಣಿವೆಯ ಸಂಘಟನೆಗಳು ಭಯೋತ್ಪಾದನೆಯನ್ನು ಒಂದು ಮಿತಿಯಲ್ಲಿ ಜಾರಿಯಲ್ಲಿಟ್ಟಿವೆ. 'ಎಲ್ಲ ಬಲ್ಲ' ಒಮರ್ ಅಬ್ದುಲ್ಲಾ, ಮೆಹಬೂಬಾ ಮಫ್ತಿಯಂತಹ ರಾಜಕಾರಣಿಗಳು ಹಾಗೂ ಸೈಯದ್ ಆಲಿ ಶಾ ಜಿಲಾನಿಯಂತಹ
ಜನನಾಯಕರು ಜನರನ್ನು ಉದ್ರೇಕಿಸುವ ಹೇಳಿಕೆಗಳನ್ನು ಆಗಾಗ ನೀಡುತ್ತಾ ಭಯೋತ್ಪಾದಕ ಸಂಘಟನೆಗಳಿಗೆ ಪರೋಕ್ಷ
ಸಹಕಾರ ನೀಡುತ್ತಾ ಅತ್ತ ಮಗುವನ್ನೂ ಚಿವುಟುತ್ತಾ ಇತ್ತ ತೊಟ್ಟಿಲನ್ನೂ ತೂಗುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಲೇ
ಇರುತ್ತಾರೆ. ಇಡೀ ನಾಟಕದ ಸ್ಪಷ್ಟ ಅರಿವಿರುವ ನಮ್ಮ
ಮಾಧ್ಯಮಗಳು ಅದರ ಬಗ್ಗೆ ಚಕಾರವೆತ್ತುವುದಿಲ್ಲ. ಯಾಕೆಂದರೆ
ಅದರಲ್ಲಿ ಅವರ ಆರ್ಥಿಕ ಲಾಭದ ಲೆಕ್ಕಾಚಾರವಿರುತ್ತದೆ.
ಹಾಗೆಯೇ ಇಡೀ ಕಾಶ್ಮೀರ ಸಮಸ್ಯೆಯನ್ನು ನಮ್ಮ ಬುದ್ಧಿಜೀವಿಗಳು ತಮ್ಮ ಬುದ್ಧಿಜೀವಿ ಪಟ್ಟವನ್ನು
ಗಳಿಸಿಕೊಳ್ಳುವುದಕ್ಕಾಗಿ ಮತ್ತು ಉಳಿಸಿಕೊಳ್ಳುವುದಕ್ಕಾಗಿ ಬಲು ಜಾಣತನದಿಂದ ಉಪಯೋಗಿಸಿಕೊಳ್ಳುತ್ತಿದ್ದಾರೆ.
ಇಂಥದೊಂದು ನಾಟಕ ನಡೆಯುತ್ತಿದೆಯೆಂದು ಭಾರತದ ಕೋಟ್ಯಾಂತರ ಯುವಜನತೆಗೆ ಗೊತ್ತಿಲ್ಲ. ಹಾಗೆ ಗೊತ್ತಿಲ್ಲದವರು ಕಾಶ್ಮೀರ ಕಣಿವೆಯಲ್ಲೂ ಇದ್ದಾರೆ. ಈ ಕಾಶ್ಮೀರಿಗಳಲ್ಲಿ ಎರಡು ವರ್ಗಗಳಿವೆ. ಮೊದಲನೆಯ ವರ್ಗದ ಜನರು ಭಾರತವನ್ನು ವಿರೋಧಿಸುವುದರಿಂದ ತಮ್ಮ
ರಾಜಕಾರಣಿಗಳು, ಭಯೋತ್ಪಾದನಾ ಸಂಘಟನೆಗಳು
ಹಾಗೂ ಜನನಾಯಕರು ಅದೆಷ್ಟು ಆರ್ಥಿಕ ಲಾಭ ಗಳಿಸುತ್ತಿದ್ದಾರೆಂದು ತಿಳಿಯದ ಅಮಾಯಕರು. ಭಯೋತ್ಪಾದಕ ಸಂಘಟನೆಗಳು ನೀಡಿದ ಬಂದ್ ಕರೆಗಳಿಗೆ ಉತ್ಸಾಹದಿಂದ
ಪ್ರತಿಕ್ರಿಯಿಸುವವರು, ಸುರಕ್ಷಾಪಡೆಗಳ
ವಿರುದ್ಧ ಕಲ್ಲು ತೂರುತ್ತಿದ್ದವರು ಇವರೇ. Iಜoಟ miಟಿಜ is ಜeviಟ's ತಿoಡಿಞshoಠಿ ಎಂದರಿತ ಸೇನೆ ನಾಲ್ಕು ವರ್ಷಗಳಿಂದೀಚೆಗೆ
ಇವರ ಕೈಗೆ ಕ್ರಿಕೆಟ್ ಬ್ಯಾಟು ಬಾಲ್‌ಗಳನ್ನಿತ್ತು ಆಟ ಆಡಲು ಪ್ರೇರೇಪಿಸುತ್ತಿದೆ. ಪರಿಣಾಮವಾಗಿ ಇವರೀಗ ಕಲ್ಲುಗಳನ್ನೆತ್ತಿಕೊಳ್ಳುತ್ತಿಲ್ಲ. ಖುಶಿಯಿಂದ ಕ್ರಿಕೆಟ್ ಅಡುತ್ತಾರೆ. ಆಷ್ಟೇ ಅಲ್ಲ ಕೊಲವೆರಿ ಡೀ ಎಂದು ಹಾಡುತ್ತಾ ಕುಣಿಯುತ್ತಾರೆ.
ಭಯೋತ್ಪಾದನೆಯ ಹೊರತಾದ ನೆಮ್ಮದಿಯ ಬದುಕು ತಮ್ಮ ಹಕ್ಕು ಎಂದರಿತು ಅದನ್ನು ಪಡೆಯುವುದಕ್ಕಾಗಿ ಪ್ರಯತ್ನಿಸುವವರು
ಎರಡನೆಯ ವರ್ಗಕ್ಕೆ ಸೇರಿದ ಯುವಜನತೆ. ನೆಮ್ಮದಿಯ ಬದುಕಿಗಾಗಿ
ಉನ್ನತ ಶಿಕ್ಷಣ ಅಗತ್ಯವೆಂದವರು ಅರಿತಿದ್ದಾರೆ. ಕಾಶ್ಮೀರದಲ್ಲಿ
ಅದು ಲಭ್ಯವಿಲ್ಲ ಎಂದವರೂ ಗುರುತಿಸಿದ್ದಾರೆ. ಸ್ಥಳೀಯ
ವಿಶ್ವವಿದ್ಯಾಲಯಗಳ (ಹೆಸರು ಹೇಳುವುದು ಬೇಡ) ಶಿಕ್ಷಣ ಮಟ್ಟ, ಅಧ್ಯಾಪಕರ ಜ್ಞಾನದ ಮಟ್ಟ ಹೀನಾಯ ಸ್ಥಿತಿಯಲ್ಲಿದೆ. ಪ್ರತಿಷ್ಟಿತ ವಿಶ್ವವಿದ್ಯಾಲಯವೊಂದು ರಾಜಕಾರಣಿಗಳು ಮತ್ತಿತರ 'ದೊಡ್ಡಮನುಷ್ಯರು'ಗಳಿಗಾಗಿ ಅನಧಿಕೃತ ವೇಶ್ಯಾವಾಟಿಕೆಯಾಗಲು
ಅದರ ಉನ್ನತಾಧಿಕಾರಿಗಳೇ ಶ್ರಮಿಸಿದ್ದ ಉದಾಹರಣೆಯಿದೆ.
(ಅದಕ್ಕಾಗಿ ಅವರಿಗೆ ನಂತರ ಉನ್ನತ ಸ್ಥಾನಮಾನಗಳು ಮತ್ತು ಅಗಾಧ ಆರ್ಥಿಕ ಲಾಭಗಳು ದೊರೆತಿವೆ
ಎನ್ನುವುದು ಬೇರೆ ವಿಷಯ).
ಹೀಗಾಗಿ ತಮ್ಮ ಶೈಕ್ಷಣಿಕ ಅಗತ್ಯಗಳನ್ನು ಭಾರತದ ಇತರೆಡೆಗಳಲ್ಲಿನ ಶಿಕ್ಷಣಸಂಸ್ಥೆಗಳೇ ಪೂರೈಸಬಲ್ಲವು
ಎಂದರಿತ ಈ ಯುವಜನರು ತಮ್ಮ ಹಿರಿಯರು ಹಾಗೂ ಹಿತೈಷಿಗಳ ಸಹಕಾರ ಮತ್ತು ಪ್ರೋತ್ಸಾಹಗಳಿಂದ ಭಾರತದ ಉದ್ದಗಲಕ್ಕೂ
ಹರಡಿಹೋಗುತ್ತಿದ್ದಾರೆ. ವಿದ್ಯಾಭ್ಯಾಸ ಮುಗಿದ ನಂತರ
ಕಾಶ್ಮೀರದ ಹೊರಗಿನ ಭಾರತದಲ್ಲೇ ನೌಕರಿ ಗಳಿಸಿ ನೆಲೆಸುವ ಬಯಕೆಯೂ ಅನೇಕರಿಗಿದೆ ಮತ್ತು ಇದರಲ್ಲಿ ಯಶಸ್ವಿಯಾದವರು
ನನ್ನ ಪರಿಚಯದ ಕಾಶ್ಮೀರಿಗಳಲ್ಲೇ ಇದ್ದಾರೆ. ಇವರಲ್ಲಿ
ಯುವಕರಷ್ಟೇ ಅಲ್ಲ, ಯುವತಿಯರೂ ಇದ್ದಾರೆ. ಇಂತಹ ಹಲವಾರು ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪಾಠ ಹೇಳಿದ, ವಿದ್ಯಾಭ್ಯಾಸವಷ್ಟೇ ಅಲ್ಲ ವೈಯುಕ್ತಿಕ ಬದುಕಿನಲ್ಲೂ
ಮಾರ್ಗದರ್ಶನ ನೀಡಿ ಅವರ ಪ್ರೀತಿವಿಶ್ವಾಸವನ್ನು ಗಳಿಸಿದ ತೃಪ್ತಿ ನನಗಿದೆ.
ತಮ್ಮ ಶೈಕ್ಷಣಿಕ ಅಗತ್ಯಗಳು ಭಾರತದಲ್ಲಿ ಪೂರೈಕೆಯಾಗುತ್ತವೆ ಎಂಬ ನಂಬಿಕೆಯೇ ಈ ಕಾಶ್ಮೀರಿ ಯುವಜನರನ್ನು
ಭಾರತದಾತ್ಯಂತ ಪಯಣಗಳಿಗೆ ಪ್ರೇರೇಪಿಸಿದೆ. ಇಷ್ಟಾಗಿಯೂ
ಇವರಲ್ಲಿ ಭಾರತದ ಬಗ್ಗೆ ತುಸು ಅನುಮಾನವಿದ್ದೇ ಇದೆ.
ಇದಕ್ಕೆ ಕಾರಣ ೧೯೮೯ರಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದನೆ ಅರಂಭವಾದ ಸರಿಸುಮಾರಿಗೇ ಭಾರತದಲ್ಲಿ
ತಲೆಯೆತ್ತಿದ ಹಿಂದುತ್ವವಾದ. ರಾಷ್ಟ್ರದಾದ್ಯಂತ ಚರ್ಚಿತವಾದ
ಅಯೋಧ್ಯೆಯ ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದ ಹಿನ್ನೆಲೆಯೊಂದಿಗೆ ಆರಂಭವಾದ ಈ ಹಿಂದುತ್ವವಾದ ತನಗಿದ್ದ
ಸೀಮಿತ ಬೆಂಬಲದಿಂದಾಗಿ ದೇಶಕ್ಕೆ ಮಾರಕವಾಗುವಂತೆ ಬೆಳೆಯುವುದು ಸಾಧ್ಯವೇ ಇರಲಿಲ್ಲ. ಹಾಗೆ ಬೆಳೆಸುವ ಉದ್ದೇಶವೂ ಭಾರತೀಯ ಜನತಾಪಕ್ಷ ಹಾಗೂ ಅದರ
ಮುಂಚೂಣಿಯಲ್ಲಿದ್ದ ಎಲ್. ಕೆ. ಅದ್ವಾನಿಯವರಿಗಿರಲಿಲ್ಲ.
ಇಡೀ ಹಿಂದುತ್ವವಾದದ ಹಿಂದಿದ್ದದ್ದು ಬಿಜೆಪಿಯ ಹಾಗೂ ಅದ್ವಾನಿಯವರ ತಾತ್ಕಾಲಿಕ ಅವಕಾಶವಾದಿ
ರಾಜಕಾರಣವಷ್ಟೇ ಹೊರತು ಬೇರೇನೂ ಅಲ್ಲ. ಈ ಅಭಿಪ್ರಾಯವನ್ನು
ಸ್ಪಷ್ಟಗೊಳಿಸುವ ನಂತರದ ಇತಿಹಾಸದಲ್ಲಿ ದಾಖಲಾಗಿರುವಂತೆ ೧೯೯೮ರಲ್ಲಿ ಸಹಯೋಗಿಗಳೊಂದಿಗೆ ಸೇರಿ ಬಿಜೆಪಿ
ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಹೊತ್ತಿಗೆ ಅದರ ಹಿಂದುತ್ವವಾದ ಮೂಲೆಗೆ ಸರಿದಿತ್ತು ಮತ್ತು ಆರುವರ್ಷಗಳ
ಎನ್‌ಡಿಎ ಅಧಿಕಾರಾವಧಿಯಲ್ಲಿ ಅದೆಂದೂ ಮುಂಚೂಣಿಗೆ ಬರಲೇ ಇಲ್ಲ. ಆದರೆ ದುರಂತವೆಂದರೆ ಈ ದೇಶದ ಮಾಧ್ಯಮದ ಮತ್ತು ಬುದ್ಧಿಜೀವಿಗಳ
ಒಂದು ದೊಡ್ಡ ವರ್ಗ ಹಾಗೂ ಕೆಲವು ಪ್ರಮುಖ ರಾಜಕೀಯ ಪಕ್ಷಗಳು ಕಳೆದ ಎರಡೂವರೆ ದಶಕಗಳಿಂದಲೂ ಇದನ್ನೊಂದು
ದೇಶದ ಮುಂದಿರುವ ಭಾರಿ ಕಂಟಕದಂತೆ ಚಿತ್ರಿಸುತ್ತಲೇ ಬಂದಿವೆ. ಹಿಂದುತ್ವವಾದವನ್ನು ಬಿಜೆಪಿ ಮರೆತರೂ ಜನತೆ ಅದನ್ನು ಒಂದುಕ್ಷಣವೂ
ಮರೆಯದಂತೆ ಇವು ನೋಡಿಕೊಂಡಿವೆ. ಇವುಗಳ ಆರ್ಥಿಕ ಹಾಗೂ
ವೈಯುಕ್ತಿಕ ಲಾಲಸೆ ಮತ್ತು ರಾಜಕೀಯ ಲಾಭಗಳ ಲೆಕ್ಕಾಚಾರದ ದುರಂತಮಯ ಅಂತಿಮ ಪರಿಣಾಮವೆಂದರೆ ಧಾರ್ಮಿಕ
ಅಲ್ಪಸಂಖ್ಯಾತರಲ್ಲಿ ಮೂಡಿರುವ ಅಭದ್ರತೆಯ ಭಾವನೆ.
ಮೊದಲೇ ಭಾರತದ ಬಗ್ಗೆ ತೀವ್ರ ಅನುಮಾನವಿದ್ದ ಕಾಶ್ಮೀರಿಗಳಲ್ಲಿ ಈ ಅಭದ್ರತೆಯ ಭಾವನೆ ಮತ್ತಷ್ಟು
ಗಾಢವಾಗಿಬಿಟ್ಟಿತು ಮತ್ತು ಅದಿನ್ನೂ ಪೂರ್ಣವಾಗಿ ಹೋಗಿಲ್ಲ. ಕ್ಷಣದ ಉದ್ರೇಕದ ಮೂಲಕವಾದರೂ ಅದು ಆಗಾಗ ವ್ಯಕ್ತವಾಗುತ್ತಲೇ
ಇರುತ್ತದೆ. ಪಾಕ್ ವಿಜಯಕ್ಕೆ ಸಂಭ್ರಮಿಸಿ ಘೋಷಣೆಗಳನ್ನು
ಕೂಗಿದ ಕಾಶ್ಮೀರಿ ವಿದ್ಯಾರ್ಥಿಗಳು ಇದಕ್ಕೊಂದು ಇತ್ತೀಚಿನ ಉದಾಹರಣೆ.
ಅವರಲ್ಲಿನ ಅಭದ್ರತಾಭಾವನೆಯನ್ನು ದೂರಾಗಿಸುವ ಮಾರ್ಗ ಅವರ ವಿರುದ್ಧ ದೇಶದ್ರೋಹದ ಅಪಾದನೆ ಹೊರಿಸುವುದಲ್ಲ. ಆಪಾದನೆ ಮತ್ತು ಶಿಕ್ಷೆಯ ಮೂಲಕ ದೇಶಪ್ರೇಮವನ್ನು ಕಲಿಸಲಾಗುವುದಿಲ್ಲ. ಹಾಗೆ ಮಾಡಹೋದ ಯಾವ ವ್ಯವಸ್ಥೆಯೂ ಇಲ್ಲಿಯವರೆಗಿನ ಇತಿಹಾಸದಲ್ಲಿ
ಪೂರ್ಣವಾಗಿ ಯಶಸ್ವಿಯಾಗಿಲ್ಲ. ಅದರಲ್ಲೂ ಭಾರತೀಯ ಸಂದರ್ಭದಲ್ಲಿ
ಬಲವಂತ ಪ್ರಯೋಜನಕಾರಿಯಲ್ಲ. ಬಹುತ್ವದ ಪ್ರಮುಖ ಲಕ್ಷಣವಾದ
ವಿರೊಧಕ್ಕೆ ಸ್ಥಳಾವಕಾಶ ನೀಡುತ್ತಲೇ ಒಳಗೊಳ್ಳುವಿಕೆಯ ಅವಕಾಶವನ್ನೂ ಒದಗಿಸುತ್ತಾ ಬಂದಿರುವುದರಿಂದಲೇ
ಭಾರತೀಯ ರಾಷ್ಟ್ರ ಸಂಪೂರ್ಣವಾಗಿ ಛಿದ್ರವಾಗದೇ ಉಳಿದಿರುವುದು. ಅದನ್ನು ಉತ್ತರ ಪ್ರದೇಶದ ಪೋಲಿಸರು ಕ್ಷಿಪ್ರಕಾಲದಲ್ಲೇ ಅರ್ಥಮಾಡಿಕೊಂಡಿದ್ದಾರೆ. ಆದರೆ ಮೀರತ್‌ನಲ್ಲಿ ಘಟಿಸಿದಂತಹ ಘಟನೆ ಮತ್ತೊಮ್ಮೆ ನಡೆಯಲಾರದೇ?
ನಮ್ಮ ಮಾಧ್ಯಮಗಳು, ಬುದ್ಧಿಜೀವಿಗಳು, ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ
ಇಲ್ಲದ ಅಪಾಯವನ್ನು ಕಲ್ಪಿಸಿಕೊಂಡು ತೋಳ ಬಂತು ತೋಳ ಎಂದು ಕೂಗುವುದನ್ನು ನಿಲ್ಲಿಸುವವರೆಗೆ ಅಲ್ಪಸಂಖ್ಯಾತರಲ್ಲಿ
ಅಭದ್ರತೆಯ ಭಾವನೆ ಮತ್ತು ಅದು ಆಗಾಗ ವ್ಯಕ್ತವಾಗುವುದು ನಿಲ್ಲುವುದಿಲ್ಲ. ಹಾಗೆ ಮಾಡದೇ ಹೋದರೆ ಅವುಗಳ ಕೃತ್ಯ ಅವುಗಳಿಗೇ ಮುಳುವಾಗುವ
ದಿನ ದೂರವಿಲ್ಲ. ಆಗ ನಿಜವಾಗಿಯೂ ತೋಳ ಬಂದರೂ ಅವುಗಳ
ರಕ್ಷಣೆಗೆ ಯಾರೂ ಹೋಗುವುದಿಲ್ಲ. ಬಹುಶಃ ಆ ದಿನ ಹತ್ತಿರಾಗುತ್ತಿದೆ
ಎನ್ನುವುದು ನನ್ನ ಅನುಮಾನ.