ಹತ್ತು ವರ್ಷಗಳ ಹಿಂದಿನ ಆ ಮಂಗಳವಾರದ ಬೆಳಗು ಇತಿಹಾಸದ ದಿಕ್ಕು ಸಂಪೂರ್ಣವಾಗಿ ಬದಲಾಗಿಹೋಯಿತು. ಶೀತಲ ಸಮರದಲ್ಲಿ ಬಲಾಢ್ಯ ಸೋವಿಯೆತ್ ಯೂನಿಯನ್ ಅನ್ನು `ಸೋಲಿಸಿ' ಏಕಶೃಂಗೀ ಜಾಗತಿಕ ವ್ಯವಸ್ಥೆಯಲ್ಲಿ "ಎನ್ನಯ ಸರಿಸಮಾನರರೈ" ಎಂದು ಬೀಗುತ್ತಿದ್ದ ಅಮೆರಿಕಾಗೆ ಅಂದು ಬಿದ್ದ ಪೆಟ್ಟು ನ ಭೂತೋ, (ಇಂದಿನವರೆಗೆ) ನ ಭವಿಷ್ಯತಿ.
ಬಲಾಢ್ಯ ಅಮೆರಿಕಾದ ಬಲಾಢ್ಯ ಅಧ್ಯಕ್ಷ ಜಾರ್ಜ್ ಬುಷ್ ಜ್ಯೂನಿಯರ್ ಹಲವಾರು ಗಂಟೆಗಳ ಕಾಲ ಗುಪ್ತ ಸ್ಥಳವೊಂದರಲ್ಲಿ ಅಡಗಿಕೊಂಡ ಆ ದಿನ ಬಹುಷಃ ಹೆದರದ ಅಮೆರಿಕನ್ನನೇ ಇರಲಿಲ್ಲ. ಆನಂತರ ಸುಧಾರಿಸಿಕೊಂಡು ಮೇಲೆದ್ದು "ಇದೆಲ್ಲಾ ನಾಟಕ, ಅಮೆರಿಕನ್ ಸರಕಾರವೇ ಇದನ್ನು ಮಾಡಿಸಿದೆ, ಇದರ ಹಿಂದಿರುವುದು ಯಾವುದೋ ಕುಟಿಲೋದ್ದೇಶ" ಎಂದು ಮಾಳಿಗೆಯ ಮೇಲಿನಿಂದ ಕೂಗತೊಡಗಿದ ಕೆಲವು ತಲೆಕೆಟ್ಟ ಅಮೆರಿಕನ್ನರೂ ತಮ್ಮ ಜೀವದ ಬಗ್ಗೆ, ಭವಿಷ್ಯದ ಬಗ್ಗೆ ಅಂದು ಹೆದರಿದ್ದರು. ಆ ಹೆದರಿಕೆಗೆ ಸ್ಪಷ್ಟ ಕಾರಣಗಳಿದ್ದವು.
ಹತ್ತಿರ ಹತ್ತಿರ ಎರಡು ಶತಮಾನಗಳ ಹಿಂದೆ ೧೮೧೨-೧೬ರ ಯುದ್ಧದಲ್ಲಿ ಉತ್ತರದ ಕೆನಡಾದಿಂದ ಧಾಳಿಯಿಟ್ಟ ಬ್ರಿಟಿಷ್ ಸೇನೆ ಅಮೆರಿಕನ್ ಸೇನೆಯನ್ನು ಬಗ್ಗು ಬಡಿದು, ಅದನ್ನೂ, ಅದರ ಅಧ್ಯಕ್ಷ ಜೇಮ್ಸ್ ಮ್ಯಾಡಿಸನ್‌ನನ್ನೂ ವಾಷಿಂಗ್‌ಟನ್‌ನಿಂದ ಹೊರಗೋಡಿಸಿ ಅಧ್ಯಕ್ಷರ ನಿವಾಸಕ್ಕೆ ಬೆಂಕಿಯಿಟ್ಟು ಅಟ್ಟಹಾಸಗೈದಂದಿನಿಂದ ಅಮೆರಿಕಾದ ರಾಜಧಾನಿಯ ಮೇಲೆ ಧಾಳಿಯೆಸಗುವ ಸಾಮರ್ಥ್ಯವನ್ನು ಜಪಾನ್, ಜರ್ಮನಿ, ಸೋವಿಯೆತ್ ಯೂನಿಯನ್ ಸೇರಿದಂತೆ ಹಿಂದಿನ ಯಾವ ವೈರಿಯೂ ತೋರಿರಲಿಲ್ಲ. ತಮ್ಮ ರಾಜಧಾನಿಯೂ ಧಾಳಿಗೊಳಗಾಗುತ್ತದೆ ಎಂದು ಅಮೆರಿಕನ್ನರ ಹಲವಾರು ತಲೆಮಾರುಗಳಿಗೆ ಅನಿಸಿರಲೇ ಇಲ್ಲ. ಅವರೆಲ್ಲರ ನಂಬಿಕೆಗಳು ಅಂದು ಸುಳ್ಳಾದವು.
ತಮ್ಮ ದೇಶಕ್ಕೆ ಇಂತಹ ಮರ್ಮಾಘಾತವನ್ನು ನೀಡಿದವರ್‍ಯಾರು ಎಂದು ಯಾವೊಬ್ಬ ಅಮೆರಿಕನ್ನನಿಗೂ ಅಂದು ಅರಿವಿರಲಿಲ್ಲ. ಜಪಾನಿನ ರೆಡ್ ಆರ್ಮಿಯಿಂದ ಹಿಡಿದು ಯುನಾ ಬಾಂಬರ್‌ನಂತಹ ಮತ್ಯಾವನೋ ತಲೆಕೆಟ್ಟವನ ಬಗ್ಗೆ ಅವರ ಊಹೆಗಳು ಗಿರಿಗಿಟ್ಟೆ ಹಾಕುತ್ತಿದ್ದವು. ಅವರ ಆತಂಕವನ್ನು ಹೆಚ್ಚಿಸಿದ್ದು ಮುಂದಿನ ಕ್ಷಣದ ಅನಿಶ್ಚಿತತೆ. ಅಪಹರಣಗೊಂಡ ನಾಲ್ಕು ವಿಮಾನಗಳಲ್ಲಿ ಎರಡು ಅಮೆರಿಕಾದ ಆರ್ಥಿಕ ಶಕ್ತಿಯ ಸಂಕೇತವಾದ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಗೋಪುರಗಳನ್ನು, ಮೂರನೆಯದು ಮಿಲಿಟರಿ ಸಾಮರ್ಥ್ಯದ ಸಂಕೇತವಾದ ಪೆಂಟಗನ್‌ನ ಒಂದು ಪಾರ್ಶ್ವವನ್ನೂ ನೆಲಸಮಗೊಳಿಸಿದ್ದವು. ಪೆನ್ಸಿಲ್ವೇನಿಯಾದಲ್ಲಿ ಅಫಘಾತಕ್ಕೀಡಾದ ನಾಲ್ಕನೆಯ ವಿಮಾನದ ಗುರಿ ಏನಿತ್ತು? ವೈಟ್ ಹೌಸ್? ಕ್ಯಾಪಿಟಲ್ ಹಿಲ್? ಉಳಿದ ಮೂರರಂತೆ ಇದೂ ತನ್ನ ಗುರಿ ಮುಟ್ಟಿದ್ದರೆ...! ಅಧ್ಯಕ್ಷನೂ ಸೇರಿದಂತೆ ಅಮೆರಿಕನ್ ಆಡಳಿತವ್ಯವಸ್ಥೆಯಲ್ಲಿ ತೀರ್ಮಾನಗಳನ್ನು ತೆಗೆದುಕೊಂಡು ಅನುಷ್ಠಾನಕ್ಕೆ ತರುವ ಅಧಿಕಾರವುಳ್ಳವರಲ್ಲಿ ಹೆಚ್ಚಿನವರನ್ನು ಅದು ನಿರ್ನಾಮಗೊಳಿಸಿಬಿಟ್ಟಿದ್ದರೆ...! ಅಪಹರಣವಾದ್ದು ಆ ನಾಲ್ಕು ವಿಮಾನಗಳು ಮಾತ್ರವೇ? ಅಥವಾ ಐದನೆಯದೇನಾದರೂ ಇದೆಯೇ? ಒಟ್ಟಿನಲ್ಲಿ ಅಂದು ಗೊಂದಲವೋ ಗೊಂದಲ.
ಮೇಲಿನ ಪ್ರಶ್ನೆಗಳಲ್ಲಿ ಕೊನೆಯ ಎರಡಕ್ಕೆ ಉತ್ತರ ಸಿಗಲು ಇಪ್ಪತ್ತನಾಲ್ಕು ಗಂಟೆಗಳಿಗಿಂತಲೂ ಅಧಿಕ ಸಮಯ ಹಿಡಿಯಿತು. ಇನ್ನುಳಿದ ಪ್ರಶ್ನೆಗಳು ಇದುವರೆಗೂ ಪ್ರಶ್ನೆಗಳಾಗಿಯೇ ಉಳಿದಿವೆ.
ಈ ಕೃತ್ಯಗಳ ಹಿಂದಿರುವುದು ಅಲ್ ಖಯೀದಾ ಎಂದು ಅರಿವಾದಾಗ ಹೆಚ್ಚಿನ ಅಮೆರಿಕನ್ನರಿಗೆ ನಂಬಿಕೆಯೇ ಆಗಲಿಲ್ಲ. ಸೋವಿಯೆತ್ ಯೂನಿಯನ್‌ನಿಂದ ಅಣ್ವಸ್ತ್ರ ಧಾಳಿಯ ಭಯವಿಲ್ಲದ, ಶೀತಲ ಸಮರೋತ್ತರ ಕಾಲದ "Brave New World" (!) ನಲ್ಲಿನ `ಶಾಂತಿ, ನೆಮ್ಮದಿ'ಯ ಆ ದಿನಗಳಲ್ಲಿ ತಮ್ಮದೇ ಲೋಕದಲ್ಲಿ ಮುಳುಗಿಹೋಗಿದ್ದ ಸಾಮಾನ್ಯ ಅಮೆರಿಕನ್ನರಿಗೆ ಅಲ್ ಖಯೀದಾ ಎಂಬ ವೈರಿಯೊಬ್ಬ ತಲೆಯೆತ್ತುತ್ತಿರುವ ಸೂಚನೆ ಸಿಗದಿದ್ದುದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಹಿಂದಿನ ಒಂದು ದಶಕದಲ್ಲಿ ಅಮೆರಿಕಾದ ಒಳಗೆ ಮತ್ತು ಹೊರಗೆ ಅಮೆರಿಕನ್ ಹಿತಾಸಕ್ತಿಗಳ ಮೇಲೆ ನಡೆದ ಧಾಳಿಗಳ ಹಿಂದೆ ಅಲ್ ಖಯೀದಾ ಇದ್ದ ಬಗ್ಗೆ ಅರಿವಿದ್ದವರಿಗೂ ಇಂತಹದೊಂದು ಧಾಳಿಯ ಕಲ್ಪನೆ ಇದ್ದಿರಲಾರದು. ಅಲ್ ಖಯೀದಾ ೧೯೯೩ರಲ್ಲಿ ಇದೇ ವಿಶ್ವ ವ್ಯಾಪಾರ ಕೇಂದ್ರದ ಬೇಸ್‌ಮೆಂಟ್‌ನಲ್ಲಿದ್ದ ಕಾರ್ ಪಾರ್ಕಿಂಗ್‌ನಲ್ಲಿ ನಡೆಸಿದ ಬಾಂಬ್ ಸ್ಫೋಟ, ೧೯೯೮ರ ಆಗಸ್ಟ್‌ನಲ್ಲಿ ಪೂರ್ವ ಆಫ್ರಿಕಾದ ದಾರ್ ಎಸ್ ಸಲಾಂ ಮತ್ತು ನೈರೋಬಿಗಳಲ್ಲಿನ ಅಮೆರಿಕನ್ ದೂತಾವಾಸಗಳಲ್ಲಿ ನಡೆಸಿದ ಬಾಂಬ್ ಸ್ಫೋಟಗಳು, ೨೦೦೦ರ ಅಕ್ಟೋಬರ್‌ನಲ್ಲಿ ಏಡನ್ ಬಂದರಿನಲ್ಲಿದ್ದ ಅಮೆರಿಕನ್ ನೌಕೆ ಯುಎಸ್‌ಎಸ್ ಕೋಲ್ ಮೇಲೆ ನಡೆಸಿದ ಧಾಳಿ- ಇವ್ಯಾವುವೂ ಆ ಭಯೋತ್ಪಾದಕ ಸಂಘಟನೆಯ ವಿಧ್ವಂಸಕ ಸಾಮರ್ಥ್ಯಗಳು ಈ ಮಟ್ಟಕ್ಕೆ ಏರಬಹುದೆಂದು ಸೂಚನೆ ನೀಡಿರಲಿಲ್ಲ. ಜತೆಗೇ, ಕೇವಲ ಪ್ರಯಾಣಿಕರ ವಿಮಾನಗಳನ್ನೇ ಆಯುಧಗಳಾಗಿ ಬಳಸಿ ವಿಶ್ವದ ದೊಡ್ಡಣ್ಣನ ತಲೆಯ ಮೇಲೆ ಈ ಪರಿಯಾಗಿ ಮೊಟಕಬಹುದೆಂದು ಅಮೆರಿಕದ ಒಳಗಾಗಲೀ ಹೊರಗಾಗಲೀ ಯಾರಾದರೂ ಊಹಿಸಿರಬಹುದಾದ ಸಾಧ್ಯತೆ ಬಹುಷಃ ಇರಲಿಲ್ಲ.
ಈ ಧಾಳಿಗಳ ಬಗ್ಗೆ ಸತತ ಎಂಬತ್ತು ಗಂಟೆಗಳವರೆಗೆ ವರದಿ, ಚರ್ಚೆಗಳನ್ನು ಪ್ರಸಾರ ಮಾಡಿದ ಅಮೆರಿಕನ್ ದೂರದರ್ಶನ ಕೇಂದ್ರಗಳಲ್ಲಿ ಹಿಂದಿನ ಇಂತಹದೇ ದುರಂತಗಳ ಸಮೀಕ್ಷೆ ಸಹಾ ನಡೆಯಿತು. ತೀರಾ ಇತ್ತೀಚೆಗೆ ೧೯೯೪ರ ಬೇಸಿಗೆಯಲ್ಲಿ ರವಾಂಡಾದಲ್ಲಿ ಘಟಿಸಿದ ಹುಟು - ಟುಟ್ಸಿ ಜನಾಂಗೀಯ ಮಾರಣಹೋಮದಲ್ಲಿ ಒಂದೇ ದಿನದಲ್ಲಿ ಹತರಾದದ್ದು ಸುಮಾರು ಎರಡೂವರೆ ಲಕ್ಷ ಜನ. ಮಧ್ಯಯುಗದಲ್ಲಿ ಮಂಗೋಲ್ ಧಾಳಿಕಾರರಾದ ಚೆಂಗೀಸ್ ಖಾನ್, ಅತ್ತಿಲ, ಹುಲಕು ಖಾನ್‌ರು ಸಮರ್ಕಂದ್, ಬುಖಾರಾ, ಕಂದಹಾರ್, ಕಾಬೂಲ್, ಖೀವಾಗಳ ಮೇಲೆ ನಡೆಸಿದ ಪೈಶಾಚಿಕ ಧಾಳಿಗಳಲ್ಲಿ ಒಂದೊಂದು ಊರಿನಲ್ಲೂ ಒಂದೊಂದೇ ದಿನದಲ್ಲಿ ಲಕ್ಷಾಂತರ ಜನ ಪ್ರಾಣ ಕಳೆದುಕೊಂಡಿದ್ದರು. ಅಷ್ಟೇಕೆ, ಇದೇ ಅಮೆರಿಕನ್ನರು ಹಿರೋಷಿಮಾ ಮೇಲೆ ಹಾಕಿದ ಅಣ್ವಸ್ತ್ರದಿಂದ ಎಂಬತ್ತು ಸಾವಿರ ಜಪಾನೀಯರು ಅಸುನೀಗಿದ್ದರು. ಸಾವುನೋವಿನ ಪ್ರಮಾಣಕ್ಕೆ ಹೋಲಿಸಿದರೆ ೯/೧೧ರ ಧಾಳಿಗಳು ಏನೇನೂ ಅಲ್ಲ. ಆದರೆ ಈ ಧಾಳಿಗಳು ವಿಶ್ವ ಇತಿಹಾಸವನ್ನು ಬದಲಿಸಿದ ಮಟ್ಟಿಗೆ ಹಿಂದಿನ ಯಾವ ಧಾಳಿಯೂ ಬದಲಾಯಿಸಿರಲಿಲ್ಲ.
ಅಲ್ ಖಯೀದಾ ಈ ಮಟ್ಟದ ವಿಧ್ವಂಸಕ ಸಂಘಟನೆಯಾಗಿ ಬೆಳೆಯುವುದಕ್ಕೆ ಅಮೆರಿಕಾವನ್ನೇ ದೂಷಿಸುವವರಿದ್ದಾರೆ. ಈ ಅಪಾದನೆಯನ್ನು ಒಂದು ಹಂತದವರೆಗೆ ಒಪ್ಪಿಕೊಳ್ಳಬಹುದು. ೧೯೭೯ರ ಡಿಸೆಂಬರ್‌ನಲ್ಲಿ ಅಫಘಾನಿಸ್ತಾನವನ್ನು ಪ್ರವೇಶಿಸಿದ ಸೋವಿಯೆತ್ ಸೇನೆಯನ್ನು ಅಲ್ಲಿಂದ ಕಾಲ್ತೆಗೆಯುವಂತೆ ಮಾಡಲು ಅಮೆರಿಕಾ ಬಳಸಿಕೊಂಡದ್ದು ಇಸ್ಲಾಮನ್ನು. ಧರ್ಮವೇ ಇಲ್ಲದ ಕಮ್ಯೂನಿಸ್ಟರನ್ನು ಅಫಘಾನಿಸ್ತಾನದಲ್ಲಿ ಇರಗೊಟ್ಟರೆ ಅವರು ಆ ದೇಶದಲ್ಲಿ ಇಸ್ಲಾಮನ್ನೇ ನಾಶ ಮಾಡಿಬಿಡುತ್ತಾರೆ, ಇಸ್ಲಾಂ ಉಳಿಯಬೇಕಾದರೆ ರಶಿಯನ್ನರು ಅಫಘಾನಿಸ್ತಾನದಿಂದ ಕಾಲ್ತೆಗೆಯುವಂತೆ ಮಾಡಲೇಬೇಕು ಎಂದು ಅಮೆರಿಕಾ ವಾದಿಸಿದಾಗ ಅದನ್ನು ಒಪ್ಪಿ ಇಸ್ಲಾಮನ್ನು ಉಳಿಸುತ್ತಿದ್ದೇನೆ ಎಂಬ ನಂಬಿಕೆಯಲ್ಲಿ ದೂರದೂರದ ದೇಶಗಳಿಂದ ಅಫಘಾನಿಸ್ತಾನಕ್ಕೆ ಬಂದವರಲ್ಲಿ ಒಸಾಮಾ ಬಿನ್ ಲಾಡೆನ್ ಸಹಾ ಒಬ್ಬ. ಒಂಬತ್ತು ವರ್ಷಗಳ ನಂತರ ಸೋವಿಯೆತ್ ಸೇನೆ ಕೊನೆಗೂ ಅಫಘಾನಿಸ್ತಾನದಿಂದ ಕಾಲ್ತೆಗೆದಾಗ ಯುದ್ಧದಿಂದ ಜರ್ಝರಿತವಾಗಿದ್ದ ಆ ನತದೃಷ್ಟ ದೇಶವನ್ನು ಹೇಗಿತ್ತೋ ಹಾಗೇ ಬಿಟ್ಟು ಅಮೆರಿಕನ್ನರು ಓಡಿಹೋದರು. ಅಮೆರಿಕನ್ನರಿಗೆ ಇಸ್ಲಾಮಿನ ಮೇಲೆ ಯಾವ ಪ್ರೀತಿಯೂ ಇಲ್ಲ, ಅವರು ಅಫಘಾನಿಸ್ತಾನದಲ್ಲಿ ಕಾರ್ಯನಿರತರಾದಿದ್ದದ್ದು ಇಸ್ಲಾಮನ್ನು ಉಳಿಸಲೆಂದಲ್ಲ, ಬದಲಾಗಿ ರಶಿಯನ್ನರು ಹಿಂದೂ ಮಹಾಸಾಗರದತ್ತ ಮುನ್ನುಗ್ಗದಂತೆ ತಡೆದು ತನ್ಮೂಲಕ ಈ ವಲಯದಲ್ಲಿ ತಮ್ಮ ಸೈನಿಕ ಪ್ರಭಾವವಕ್ಕೆ ಯಾವ ಧಕ್ಕೆಯೂ ಆಗದಂತೆ ನೋಡಿಕೊಳ್ಳುವ ಸ್ವಾರ್ಥಪರ ಹುನ್ನಾರದಿಂದ ಎಂಬುದು ಆಗ ಲಾದೆನ್‌ಗೆ ಅರಿವಾಯಿತು. ವಾಸ್ತವವಾಗಿ ಇಸ್ಲಾಮಿನ ಹೆಸರು ಹೇಳಿಕೊಂಡು ಅಮೆರಿಕಾ ತನ್ನ ಬೇಳೆ ಬೇಯಿಸಿಕೊಂಡಿತ್ತು, ಅದಕ್ಕೆ ಸಹಕರಿಸಿ ತಾನು ಮೂರ್ಖನಾದೆ ಎಂಬ ಜ್ಞಾನೋದಯವಾದದ್ದೇ ಆತ ಅಮೆರಿಕಾದ ವಿರುದ್ಧ ತಿರುಗಿ ಬಿದ್ದ. ಅವನ ಅಮೆರಿಕಾದ್ವೇಷ ಆರಂಭವಾದದ್ದು ಹೀಗೆ. ೧೯೮೮ರ ನಂತರ ಅಫಘಾನಿಸ್ತಾನದ ಪುನರ್ನಿರ್ಮಾಣಕ್ಕೆ ಅಗತ್ಯವಾದ ತಂತ್ರಜ್ಞಾನ ಹಾಗೂ ಆರ್ಥಿಕ ಸಹಕಾರವನ್ನು ನೀಡಿ ಆ ದೇಶ ಚೇತರಿಸಿಕೊಳ್ಳುವಂತೆ ಅಮೆರಿಕಾ ನೋಡಿಕೊಂಡಿದ್ದರೆ ಅಲ್ ಖಯೀದಾವಾಗಲೀ ತಾಲಿಬಾನ್ ಆಗಲಿ ತಲೆಯೆತ್ತಲು ಸಾಧ್ಯವಿರಲಿಲ್ಲ. ಇದನ್ನು ಅರಿಯಲಾರದಷ್ಟು ಸಂಕುಚಿತ ಮನೋಭಾವದವರಾಗಿದ್ದರೇ ವೈಟ್ ಹೌಸ್‌ನ ಪ್ರಭೃತಿಗಳು ಎಂಬು ಅಚ್ಚರಿಯಾಗುತ್ತದೆ. ಒಟ್ಟಿನಲ್ಲಿ, ಒಂಬತ್ತು ವರ್ಷಗಳ ಅಂತರ್ಯುದ್ಧ ಬಳುವಳಿಯಾಗಿತ್ತ ಹಸಿವು, ಬಡತನ, ರೋಗರುಜಿನ, ಅನಕ್ಷರತೆ, ನಿರುದ್ಯೋಗಗಳಲ್ಲಿ ನರಳಲು ಅಫ್ಘನ್ ಜನತೆಯನ್ನು ಬಿಟ್ಟು, ಆ ದೇಶ ಮೂಲಭೂತವಾದಕ್ಕೆ ಫಲವತ್ತಾದ ನೆಲವಾಗುವುದನ್ನು ಮನಗಾಣದೇ ಮುಖ ತಿರುಗಿಸಿಕೊಂಡು ಓಡಿಹೋದ ಅಮೆರಿಕಾ "ಜಗತ್ತಿನ ದೊಡ್ಡಣ್ಣ" ಎಂಬ ಉಪಾಧಿಗೆ ತಕ್ಕ ಜವಾಬ್ದಾರಿಯುತ ನಡವಳಿಕೆಯನ್ನು ಪ್ರದರ್ಶಿಸಲಿಲ್ಲ ಎನ್ನುವುದು ವಿಷಾದದ ಸಂಗತಿ.
ಆ ನಂತರವೂ ಸಹಾ ಈ ವಲಯದಲ್ಲಿನ ಬೆಳವಣಿಗೆಗಳ ಬಗ್ಗೆ, ಅವುಗಳಿಂದ ತನಗೂ, ವಿಶ್ವಕ್ಕೂ ತಗುಲಬಹುದಾದ ದುರಂತಗಳ ಬಗ್ಗೆ ಅಮೆರಿಕಾ ದಿವ್ಯ ನಿರ್ಲಕ್ಷ ತೋರಿತು. ಅಫಘಾನಿಸ್ತಾನದಲ್ಲಿ ಪತನಗೊಂಡ ಶಿಬ್ಗತುಲ್ಲಾ ಮುಜಾದೀದಿ ಸರಕಾರ; ರಾಜಕೀಯ ಸ್ಥಿರತೆ ಸಾಧಿಸಲಾಗದ ಬಲಹೀನ ಬುರ್ಹಾನುದ್ದೀನ್ ರಬ್ಬಾನಿ ಸರಕಾರ; ಪಖ್ತೂನ್ ನಾಯಕ ಗುಲ್ಬುದ್ದೀನ್ ಹೆಕ್‌ಮತ್ಯಾರ್, ಉಝ್ಬೇಗ್ ನಾಯಕ ಜನರಲ್ ದೋಸ್ತುಂ ಮತ್ತು ತಾಜಿಕ್ ನಾಯಕ ಅಹ್ಮದ್ ಷಾ ಮಾಸೂದ್‌ರ ನಡುವೆ ಉಲ್ಬಣಗೊಂಡ ವೈಷಮ್ಯ; ಅದರಿಂದಾದ ಅರಾಜಕತೆ ಪಾಕಿಸ್ತಾನದ ಹಸ್ತಕ್ಷೇಪಕ್ಕೆ ಅವಕಾಶ ಮಾಡಿಕೊಟ್ಟದ್ದು; ಅದು ಪ್ರತಿಗಾಮಿ ತಾಲಿಬಾನನ್ನು ಹುಟ್ಟುಹಾಕಿ ತನ್ನ ಕೈಗೊಂಬೆಯಾಗಿರಿಸಿಕೊಂಡದ್ದು; ಈ ಬೆಳವಣಿಗೆಗಳಿಂದ ಈ ವಲಯದ ರಾಜಕೀಯ ಕುದಿಯತೊಡಗಿದ್ದು- ಇದ್ಯಾವುದನ್ನೂ ಅಮೆರಿಕಾ ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಕೊನೇಪಕ್ಷ, ೧೯೯೩ರಲ್ಲಿ ವಿಶ್ವ ವ್ಯಾಪಾರ ಕೇಂದ್ರದ ಬೇಸ್‌ಮೆಂಟ್‌ನಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಅಲ್ ಖಯೀದಾ ಕಾರಣವೆಂದು ಅರಿತಾಗಲಾದರೂ ಆ ಸಂಘಟನೆಗೆ ಸುಡಾನ್, ಅಫಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಸಿಗುತ್ತಿರುವ ಬೆಂಬಲವನ್ನು ಗಮನಿಸಿ ಅದನ್ನು ಹತ್ತಿಕ್ಕಲು ಪರಿಣಾಮಕಾರೀ ಕ್ರಮಗಳನ್ನು ಕ್ಲಿಂಟನ್ ಸರಕಾರ ಕೈಗೊಳ್ಳಬೇಕಾಗಿತ್ತು. ಅಧ್ಯಕ್ಷ ಕ್ಲಿಂಟನ್ ತನ್ನ ಮೊದಲ ಆವಧಿಯಲ್ಲಿ ವಿದೇಶ ನೀತಿಯನ್ನು ನಿರ್ಲಕ್ಷಿಸಿ ಕೇವಲ ಆರ್ಥಿಕ ಹಿಂಜರಿತವನ್ನು ತಡೆಗಟ್ಟುವುದರಲ್ಲೇ ಮಗ್ನರಾಗಿಬಿಟ್ಟರು. ತನ್ನ ಎರಡನೇ ಆವಧಿಯಲ್ಲಿ ಆತ ಎಚ್ಚತ್ತುಕೊಳ್ಳುವ ಹೊತ್ತಿಗೆ ಪರಿಸ್ಥಿತಿ ಕೈಮೀರಿ ಹೋಗಿತ್ತು. ಅಲ್ ಖಯೀದಾ ಅಪಾಯಕಾರಿ ಮಟ್ಟಕ್ಕೆ ಬೆಳೆದಿತ್ತು ಮತ್ತು ಅದಕ್ಕೆ ಅಫಘಾನಿಸ್ತಾನದಲ್ಲಿ ಭದ್ರ ನೆಲ ಸಿಕ್ಕಿತ್ತು. ಒಂದು ತಲೆಮಾರಿನ ಬೇಜವಾಬ್ದಾರಿ ವರ್ತನೆಗೆ ಮುಂದಿನ ತಲೆಮಾರು ತೆರಬೇಕಾದ ಭೀಕರ ಬೆಲೆಗೆ ಇದೊಂದು ಉದಾಹರಣೆ.
೯/೧೧ರ ಧಾಳಿಯ ನಂತರ ಎಚ್ಚತ್ತುಕೊಂಡ ಅಮೆರಿಕಾ, ಅಫಘಾನಿಸ್ತಾನ ಮತ್ತು ಇರಾಕಿನಲ್ಲಿ ಕೈಗೊಂಡ ಮಿಲಿಟರಿ ಕಾರ್ಯಾಚರ್ಣೆಗಳು ತನ್ನ ಹಿಂದಿನ ಎಲ್ಲಾ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ವಾಷಿಂಗ್‌ಟನ್ ಗಡಿಬಿಡಿಯಲ್ಲಿ ಕೈಗೊಂಡ ಕ್ರಮಗಳಂತೆ ಕಾಣುತ್ತಿವೆ. ಗಡಿಬಿಡಿಯಲ್ಲಿ ಮಾಡುವ ಯಾವುದೇ ಕೆಲಸವೂ ಪರಿಣಾಮಕಾರಿಯಾಗಿರುವುದಿಲ್ಲ ಎನ್ನುವುದನ್ನೂ ಅವು ಎತ್ತಿ ತೋರಿಸುತ್ತಿವೆ.
ಇರಾಕ್ ಒಂದು ಕೆಸರು, ಅಲ್ಲಿರುವ ವಿರೋಧಿ ಸದ್ದಾಂ ಮತ್ತವನ ಮಾರಕಾಸ್ತ್ರಗಳ ತಂತ್ರಜ್ಞಾನ ಮಾತ್ರ ಎಂಬ ನಂಬಿಕೆ ಅದೆಷ್ಟು ಅರ್ಥಹೀನ ಎಂದು ಅರಿಯಲು ಅಮೆರಿಕಾಗೆ ಹೆಚ್ಚು ಕಾಲವೇನೂ ಬೇಕಾಗಲಿಲ್ಲ. ಪಾಕಿಸ್ತಾನದ ಇಬ್ಬಂದಿ ನೀತಿಯನ್ನು ಗುರುತಿಸಿ ಪರಿಹಾರಾತ್ಮಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗದ ನಿಸ್ಸಹಾಯಕತೆ ಅಥವಾ ಬೇಜವಾಬ್ದಾರಿಯಿಂದಾಗಿ ಅಫ್ಘನ್ ಕಾರ್ಯಾಚರಣೆ ದಿಕ್ಕು ತಪ್ಪಿದೆ. ತಾಲಿಬಾನ್ ದಿನೇ ದಿನೇ ಬಲಿಷ್ಟವಾಗುತ್ತಾ ನಡೆದಿದೆ. ಅಫಘಾನಿಸ್ತಾನ ಮತ್ತೊಂದು ವಿಯೆಟ್ನಾಂ ಆಗುವ ಎಲ್ಲ ಸೂಚನೆಗಳು ಕಾಣಬರುತ್ತಿವೆ. ಯಾವುದೇ ಪವಾಡದಿಂದ ಅಫ್ಘನ್ ಕಾರ್ಯಾಚರಣೆ ಇನ್ನೊಂದೆರಡು ವರ್ಷಗಳಲ್ಲಿ ಅಮೆರಿಕಾದ ಯಶಸ್ಸಿನಲ್ಲಿ ಮುಕ್ತಾಯವಾದರೂ ವಾಷಿಂಗ್‌ಟನ್‌ನ ತಲೆನೋವುಗಳು ದೂರಾಗುತ್ತವೆ ಎಂದು ಹೇಳಲಾಗದು. ತಾಲಿಬಾನಿಗಳು ಪಾಕಿಸ್ತಾನದಲ್ಲಿ ಭದ್ರವಾಗಿ ಬೇರು ಬಿಟ್ಟಿದ್ದಾರೆ. ಪಾಕಿಸ್ತಾನಿ ಸೇನಾ ವರಿಷ್ಟರು ಅಮೆರಿಕ ಪರವಾಗಿದ್ದರೂ ಕೆಳಹಂತರ ಅಧಿಕಾರಿಗಳು ಮತ್ತು ಸೈನಿಕರಲ್ಲಿ ಬಹುಪಾಲು ತಾಲಿಬಾನ್ ಬಗ್ಗೆ ಸಹಾನುಭೂತಿ ಹೊಂದಿದ್ದಾರೆ. ಈ ಸಹಾನುಭೂತಿ ಐಎಸ್‌ಐನಲ್ಲಿ ಅಪಾಯಕಾರಿ ಮಟ್ಟದಲ್ಲಿದೆ. ಕೆಲವರ್ಷಗಳ ಹಿಂದೆ ಗಡಿನಾಡಿನಲ್ಲಷ್ಟೇ ಬಲಿಷ್ಟವಾಗಿದ್ದ ತಾಲಿಬಾನಿಗಳು ಇತ್ತೀಚೆಗೆ ಲಷ್ಕರ್ ಎ ತೊಯ್ಬಾದಂತಹ ತಮ್ಮ ಸಹಚರರಿಂದಾಗಿ ಜನನಿಬಿಡ ಪಂಜಾಬಿನಲ್ಲೂ ಜನಮನ್ನಣೆ ಗಳಿಸಿಕೊಳ್ಳುತ್ತಿದ್ದಾರೆ. ಅಫಘಾನಿಸ್ತಾನದಿಂದ ಕಾಲ್ತೆಗೆಯುವಂತಾದರೆ ಅವರು ತಮ್ಮ ಕಾರ್ಯಕ್ಷೇತ್ರವನ್ನು ಪಾಕಿಸ್ತಾನಕ್ಕೆ ವಿಸ್ತರಿಸುತ್ತಾರೆ. ಅಮೆರಿಕಾದ ಪಾಲಿಗೆ ಅದು ಹಿಂದೆಂದಿಗಿಂತಲೂ ಮಿಗಿಲಾದ ಸವಾಲಾಗುತ್ತದೆ. ಹಣಕಾಸಿನ ಪರಿಸ್ಥಿತಿ ಮತ್ತು ಜನಸಂಖ್ಯೆಯ ದೃಷ್ಟಿಯಿಂದ ಅಫಘಾನಿಸ್ತಾನಕ್ಕಿಂತ ಅದೆಷ್ಟೋ ಪಟ್ಟು ಮಿಗಿಲಾಗಿರುವ ಪಾಕಿಸ್ತಾನ ತಾಲಿಬಾನ್ ಮತ್ತು ಅಲ್ ಖಯೀದಾಗಳ ಕಾರ್ಯಕ್ಷೇತ್ರವಾದರೆ ಅದರ ಪರಿಣಾಮ ಊಹೆಗೂ ಮೀರಿದ್ದು. ಚಾಣಾಕ್ಷ ಮತ್ತು (ಪಾಕಿಸ್ತಾನದ ಪರಿಸ್ಥಿತಿಯಲ್ಲಿ) ಸಮರ್ಥ ಆಡಳಿತಗಾರನಾಗಿದ್ದ ಮುಷರ್ರಫ್ ಪತನಗೊಂಡಾಗಿನಿಂದ ಪಾಕಿಸ್ತಾನ ರಾಜಕೀಯ ಅಸ್ಥಿರತೆಯನ್ನೆದುರಿಸುತ್ತಿದೆ. ಸಧ್ಯಕ್ಕೆ ಜರ್ದಾರಿ - ಗಿಲಾನಿ ಸರಕಾರವಿದ್ದರೂ ಅದು ನಿಂತಿರುವುದು ಸೇನೆಯ ಬೆಂಬಲದ ಮೇಲೆ. ಸ್ವತಂತ್ರವಾಗಿ ಪಾಕಿಸ್ತಾನಕ್ಕೆ ರಾಜಕೀಯ ಸ್ಥಿರತೆ ತಂದುಕೊಂಡುವ ಸಾಮರ್ಥ್ಯ ಅಲ್ಲಿನ ಯಾವ ರಾಜಕೀಯ ಪಕ್ಷಕ್ಕಾಗಲೀ, ನಾಯಕನಿಗಾಗಲೀ ಇಲ್ಲ. ಸೇನೆ ಬಯಸಿದಾಗ ಈಗಿನ ಸರಕಾರವನ್ನು ಕಸದ ಬುಟ್ಟಿಗೆ ಎಸೆಯಬಹುದು. ಅಂತಹ ಸಂದರ್ಭದಲ್ಲಿ ತಮ್ಮ ಬಗ್ಗೆ ಸಹಾನುಭೂತಿ ಹೊಂದಿರುವ ಕೆಳಹಂತದ ಅಧಿಕಾರಿಗಳು ಮತ್ತು ಸೈನಿಕರ ಸಹಕಾರದಿಂದ ತಾಲಿಬಾನ್ ಮತ್ತು ಅಲ್ ಖಯೀದಾ ಇಸ್ಲಾಮಾಬಾದ್‌ನಲ್ಲಿ ರಾಜಕೀಯ ಸೂತ್ರಧಾರಾಗಬಹುದು. ಅಲ್ಲಿಗೆ ಇರಾಕ್‌ನಲ್ಲಿ ಏನಾಗಬಾರದೆಂದು ಅಮೆರಿಕಾ ಇಷ್ಟು ವರ್ಷಗಳಿಂದ ಹೆಣಗುತ್ತಿದೆಯೋ ಅದು ಪಾಕಿಸ್ತಾನದಲ್ಲಿ ನಡೆದುಹೋಗುತ್ತದೆ, ಅಂದರೆ, ಅಲ್ ಖಯೀದಾಗೆ ಅಣ್ವಸ್ತ್ರಗಳು ಸಿಕ್ಕಿಹೋಗುತ್ತವೆ! ಅಲ್ಲಿಗೆ ಅಮೆರಿಕಾದ ರಕ್ಷಣೆಯ ಕೋಟೆಯಲ್ಲಿ ಭಾರಿ ಬಿರುಕುಗಳು ಕಾಣಿಸಿಕೊಂಡಂತೇ.
ಈ ಬೆಳವಣಿಗೆಗಳ ಪರಿಣಾಮ ಅಮೆರಿಕಾದ ಮೇಲಷ್ಟೇ ಅಲ್ಲ, ನಮ್ಮ ಮೇಲೂ ಸಹಾ ಭೀಕರವಾಗಿರುತ್ತದೆ.
ತಾಲಿಬಾನ್ ಒಂದು ಫಕ್ತೂನಿ ಸಂಘಟನೆ. ಹಿಂದೆ ನವದೆಹಲಿ ಅವರ ವಿರುದ್ಧವಾಗಿ ಸೋವಿಯೆತ್ ಯೂನಿಯನ್ ಅನ್ನು ಬೆಂಬಲಿಸಿದ್ದರಿಂದ ಮತ್ತು ಪಾಕಿಸ್ತಾನದ ಪ್ರಭಾವದಿಂದ ಅವರು ಭಾರತವನ್ನು ದ್ವೇಷಿಸುತ್ತಿದ್ದಾರೆ. ತಮ್ಮ ಭಾರತದ್ವೇಷವನ್ನು ಅಲ್ ಖಯೀದಾ ತಲೆಗೂ ತುಂಬಿದ್ದಾರೆ. ಹೀಗಾಗಿಯೇ ಅಲ್ ಖಯೀದಾ ಅಮೆರಿಕಾ, ಇಂಗ್ಲೆಂಡ್, ಇಸ್ರೇಲ್ ಜತೆಗೆ ಭಾರತವನ್ನೂ ತನ್ನ ವೈರಿ ಎಂದು ಘೋಷಿಸಿದ್ದು. ತಾಲಿಬಾನ್ ಮತ್ತು ಅಲ್ ಖಯೀದಾಗಳಿಗೆ ಪಾಕಿಸ್ತಾನದ ರಾಜಕೀಯದಲ್ಲಿ ಪಾಲು ದೊರೆಯುತ್ತಿದ್ದಂತೇ ಅವುಗಳ ಭಾರತದ್ವೇಷ ಘೋಷಣೆಯ ಮಟ್ಟವನ್ನು ಮೀರಿ ಕಾರ್ಯರೂಪಕ್ಕಿಳಿಯುತ್ತದೆ.
ಲಷ್ಕರ್ ಎ ತೋಯ್ಬಾ ಮತ್ತು ಜೈಷ್ ಎ ಮೊಹಮ್ಮದ್ ಸಂಘಟನೆಗಳು ಮುಂಬೈ, ಅಹಮದಾಬಾದ್, ದೆಹಲಿ ಸೇರಿದಂತೆ ಭಾರತದ ನಗರಗಳಲ್ಲಿ ಈಗಾಗಲೇ ಪ್ರದರ್ಶಿಸಿರುವ ವಿಧ್ವಂಸಕ ಸಾಮರ್ಥ್ಯ; ಕಶ್ಮೀರದಲ್ಲಿ ಐಎಸ್‌ಐ ತನ್ನ ಕಾರ್ಯತಂತ್ರವನ್ನು ಬದಲಿಸಿದ್ದು, ಅದನ್ನು ಅರಿತು ಸರಿಯಾಗಿ ಪ್ರತಿಕ್ರಿಯಿಸಲಾಗದೇ ಹೋದ ನಮ್ಮ ರಾಜಕೀಯ ಹಾಗೂ ಭದ್ರತಾ ವ್ಯವಸ್ಥೆ, ಪರಿಣಾಮವಾಗಿ ಶಾಂತಿಗೆ ಮರಳುತ್ತಿದ್ದ ಕಶ್ಮೀರ ಕಣಿವೆ ಮತ್ತೊಮ್ಮೆ ಹಿಂಸೆ ಅಶಾಂತಿಯ ದಳ್ಳುರಿಗೆ ಸಿಲುಕಿರುವುದು, ಅಲ್ಲೀಗ ಯಾವ ತರ್ಕವೂ, ವಿಶ್ಲೇಶಣೆಯೂ ಅರ್ಥಹೀನವಾಗಿರುವುದು; ಪಂಜಾಬಿನಲ್ಲಿ ಭಯೋತ್ಪಾದನೆಯನ್ನು ಮತ್ತೆ ಉತ್ತೇಜಿಸಲು ಐಎಸ್‌ಐ ಕಾರ್ಯತಂತ್ರ ರೂಪಿಸಿರುವುದು; ಪಕ್ಷಭೇದದ ರಾಜಕೀಯದಿಂದ ಹೊರಬರಲಾಗದ, ಆ ಕಾರಣದಿಂದಾಗಿಯೇ ಭಯೋತ್ಪಾದನೆಯ ವಿರುದ್ಧ ಪರಿಣಾಮಕಾರಿ ನೀತಿಯೊಂದನ್ನು ರೂಪಿಸಲಾಗದ ನಮ್ಮ ಕೇಂದ್ರ ಸರಕಾರ- ಇಂತಹ ಪರಿಸ್ಥಿತಿಯಲ್ಲಿ ಅಫಘಾನಿಸ್ತಾನ ಮತ್ತು ಪಾಕಿಸ್ತಾನಗಳಲ್ಲಿನ ಬೆಳವಣಿಗೆಗಳು ಅಮೆರಿಕಾಗಿಂತಲೂ ಭಾರತದ ಮೇಲೆ ಭೀಕರ ಪರಿಣಾಮವನ್ನುಂಟು ಮಾಡುತ್ತವೆ.