ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Wednesday, April 16, 2014

ಸುಳ್ಳು ಸಂಸ್ಕಾರ, ಸತ್ಯದ ತಲೆದಂಡ: ಎಂಥ ಅವಸ್ಥೆ!

ಮೊದಲ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
ಭಾಗ - 2
ಬಿಜೆಪಿ, ಆರ್‌ಎಸ್‌ಎಸ್ ಮತ್ತು ಈಗ ನರೇಂದ್ರ ಮೋದಿಯವರನ್ನು ಕೋಮುವಾದಿ, ವಿಚ್ಛಿದ್ರಕಾರಕ ಶಕ್ತಿಗಳೆಂದು ನಮ್ಮ ಬುದ್ಧಿಜೀವಿಗಳು ಬಣ್ಣಿಸುತ್ತಾರೆ.  ಅದರಲ್ಲೂ ಮೋದಿಯವರ ಬಗ್ಗೆ ಮಾತಾಡುವಾಗಂತೂ ಅವರ ಬಾಯಿಗಳಿಂದ ಕೇವಲ ನಕಾರಾತ್ಮಕ ಪದಗಳೇ ಹೊರಬರುತ್ತವೆ.  ಮೋದಿ ಪ್ರಧಾನಿಯಾದರೆ ದೇಶದಲ್ಲಿ ರಕ್ತದ ಹೊಳೆ ಹರಿಯುತ್ತದೆ ಎಂದು ಕೂಗುತ್ತಾರೆ.  ಇವರ ‘ಭವಿಷ್ಯ’ ನಿಜವಾಗುತ್ತದೆಯೇ?  ಇವರ ಮಾತುಗಳನ್ನೂ, ಭವಿಷ್ಯವಾಣಿಗಳನ್ನೂ ಇತಿಹಾಸ ಮತ್ತು ವರ್ತಮಾನದ ಆಧಾರದ ಮೇಲೆ ವಿಶ್ಲೇಷಿಸೋಣ.
ಕಳೆದ ಶತಮಾನದ ಆದಿಯಲ್ಲಿ “ಶಿಮ್ಲಾ ಡೆಪ್ಯುಟೇಷನ್” ಎಂಬ ಹೆಸರಿನಲ್ಲಿ ಒಂದುಗೂಡಿದ್ದ ಉತ್ತರ ಭಾರತದ ಮುಸ್ಲಿಂ ಸಮುದಾಯದ ಉಚ್ಛವರ್ಗದ ರಾಜಕೀಯ, ಆರ್ಥಿಕ ಲಾಲಸೆಗಳು ಬ್ರಿಟಿಷ್ ಆಳರಸರ ಸಾಮ್ರಾಜ್ಯಶಾಹೀ ಹಂಚಿಕೆ ಹಾಗೂ ಅಗತ್ಯಗಳೊಂದಿಗೆ ಮೇಳೈಸಿದ್ದು ಆಧುನಿಕ ಭಾರತದ ಚರಿತ್ರೆಯ ಒಂದು ದುರಂತ ಅಧ್ಯಾಯ.  ಅದರ ದುರದೃಷ್ಟಕರ ಮುಂದುವರಿಕೆಯಾಗಿ ಉಪಖಂಡದಲ್ಲಿ ತಮ್ಮ ರಾಜಕೀಯ ಅಧಿಕಾರವನ್ನು ಕೊನೆಗೊಳಿಸಿದ್ದ ಬ್ರಿಟಿಷರ ಜತೆಗೇ ಮುಸ್ಲಿಂ ಸಮುದಾಯ ಕೈಜೋಡಿಸಿ, ಶತಮಾನಗಳ ಕಾಲ ತಮ್ಮ ಅಧಿಕಾರವನ್ನು ಮಾನ್ಯಮಾಡಿ ಸಹಕರಿಸಿದ್ದ ಹಿಂದೂಗಳ ವಿರುದ್ಧವೇ ಘರ್ಷಣೆಗಿಳಿಯಿತು.  ಈಗ ಮಹಾಮಹಾ ವಿಚಾರವಾದಿಗಳಿಂದ ಹಿಡಿದು ಒಬ್ಬ ಬೀದಿಯಲ್ಲಿ ಹೋಗುವ ದಾಸಯ್ಯನೂ ಅಗತ್ಯವಿರಲೀ ಇಲ್ಲದಿರಲೀ ಎಗ್ಗಿಲ್ಲದೇ ಉದುರಿಸುವ "ಕೋಮುವಾದ" ಎಂಬ ನುಡಿಮುತ್ತು ಸಂಕೇತಿಸುವ ಬಹುತೇಕ ಅನಾಚಾರಗಳೂ ಈ ದೇಶದಲ್ಲಿ ಜನ್ಮ ತಾಳಿದ್ದು ಆಗ.
ಅನಂತರ ಬ್ರಿಟಿಷ್ ವಸಾಹತುಶಾಹಿ ಆಳರಸರ ಕೈಗೊಂಬೆಯಾಗಿ, ಅವರ ಸಕ್ರಿಯ ಸಹಕಾರದಿಂದ ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್ ಹಮ್ಮಿಕೊಂಡ ಕಾರ್ಯಯೋಜನೆಗಳು ದೇಶದ ಐಕ್ಯತೆಗೆ ಮಾರಣಾಂತಿಕ ಹೊಡೆತ ನೀಡಿ ಭಾರತ ಇಬ್ಬಾಗವಾಗಲು ಕಾರಣವಾದವು.  ಜಿನ್ನಾರ ನೀತಿಗಳನ್ನು ಅಲ್ಲಮಾ ಮುಷ್ರಾಖಿ ಉಗ್ರವಾಗಿ ವಿರೋಧಿಸಿದ್ದರು.  ಆದರೆ ಬ್ರಿಟಿಷರ ಬೆಂಬಲ ಸಂಪೂರ್ಣವಾಗಿ ಜಿನ್ನಾರಿಗಿತ್ತು ಮತ್ತು ಮುಷ್ರಾಖಿಯವರನ್ನು ಬ್ರಿಟಿಷ್ ಸರಕಾರ ತನ್ನ ಶತ್ರುವಿನಂತೆ ಪರಿಗಣಿಸಿತ್ತು ಎಂಬ ಐತಿಹಾಸಿಕ ಸತ್ಯ ಜಿನ್ನಾ ಹಾಗೂ ಬ್ರಿಟಿಷರ ನಡುವಿನ ಸಹಕಾರಕ್ಕೊಂದು ಉದಾಹರಣೆ.
ಬ್ರಿಟಿಷರೊಂದಿಗೆ ಹೊಂದಾಣಿಕೆಗಿಳಿದ ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್‌ನ ಮೂರ್ಖತನದಿಂದಾಗಿ ಭಾರತವಷ್ಟೇ ಇಬ್ಬಾಗವಾಗಲಿಲ್ಲ, ಉಪಖಂಡದ ಬಲಿಷ್ಟ ಮುಸ್ಲಿಂ ಸಮುದಾಯವೂ ಇಬ್ಬಾಗವಾಯಿತು.  ೧೯೭೧ರಲ್ಲಿ ಅದು ಮೂರು ಭಾಗಗಳಾಗಿ ಹೋಳಾಗಿ ಮತ್ತಷ್ಟು ಕೃಶವಾಯಿತು.  ಈ ಒಡೆಯುವಿಕೆಗೆ ಬಿಜೆಪಿಯಾಗಲೀ, ಆರೆಸ್ಸೆಸ್ ಆಗಲೀ ಕಾರಣವಾಗಿರಲಿಲ್ಲ.
ಆರ್‌ಎಸ್‌ಎಸ್ ಅನ್ನು ತನ್ನ ರಾಜಕೀಯ ನೆಲೆಯನ್ನು ಅಲುಗಿಸಬಲ್ಲ ಶಕ್ತಿಯೆಂದು ಪರಿಗಣಿಸಿದ ನೆಹರೂ ನಾಯಕತ್ವದ ಕಾಂಗ್ರೆಸ್ ಅಂತಿಮವಾಗಿ ಬ್ರಿಟಿಷರು ಮತ್ತು ಮುಸ್ಲಿಂ ಲೀಗ್‌ನ ಹುನ್ನಾರಗಳನ್ನು ಬೆಂಬಲಿಸಿದ್ದೂ ಸಹಾ ದೇಶವಿಭಜನೆಯನ್ನು ಸರಾಗವಾಗಿಸಿತು.  ಇದಾದದ್ದು ಮಹಾತ್ಮಾ ಗಾಂಧಿಯವರ ವಿರೋಧದ ಮಧ್ಯೆಯೇ ಎನ್ನುವುದನ್ನು ನಾವು ಮರೆಯಬಾರದು.  ದೇಶವಿಭಜನೆಯನ್ನು ಆರಂಭದಿಂದಲೂ ವಿರೋಧಿಸಿದ್ದ ಆರ್‌ಎಸ್‌ಎಸ್ ಮತ್ತು ೧೯೪೭ರ ಆದಿಯವರೆಗೂ ವಿರೋಧಿಸಿದ್ದ ಕಾಂಗ್ರೆಸ್‌ಗಳ ನಡುವೆ ಮೈತ್ರಿಯೇರ್ಪಟ್ಟು ಎರಡೂ ಸಂಘಟನೆಗಳು ಮುಸ್ಲಿಂ ಲೀಗ್ ವಿರುದ್ಧ ದನಿಯೆತ್ತಿದ್ದರೂ ದೇಶವಿಭಜನೆಯನ್ನು ತಡೆಯಲಾಗುತ್ತಿರಲಿಲ್ಲ.  ಯಾಕೆಂದರೆ ಈ ದೇಶವನ್ನು ಒಡೆಯುವುದು ಶಕ್ತಿಶಾಲಿ ಬ್ರಿಟಿಷ್ ಆಳರಸರ ‘ಹಿಡನ್ ಅಜೆಂಡಾ’ ಆಗಿತ್ತು ಮತ್ತು ಅವರ ಪರವಾಗಿ ಹಿಂದೂಗಳ ರಕ್ತಹರಿಸಲು ಮುಸ್ಲಿಂ ಲೀಗ್ ಟೊಂಕಕಟ್ಟಿ ನಿಂತಿತ್ತು.  ಇದು ಜಗತ್ತಿಗೇ ಮನವರಿಕೆಯಾದದ್ದು ಆಗಸ್ಟ್ ೧೬, ೧೯೪೬ರಂದು.  ಬಂಗಾಲದಲ್ಲಿ ಅಧಿಕಾರದಲ್ಲಿದ್ದ ಮುಸ್ಲಿಂ ಲೀಗ್ ಆಯೋಜಿಸಿದಡೈರೆಕ್ಟ್ ಆಕ್ಷನ್ ಡೇ”' ಎಂಬ ಕೋಮುವಾದಿ ರ್‍ಯಾಲಿ ಮತ್ತದರ ಪರಿಣಾಮವಾದ, ಇತಿಹಾಸದಲ್ಲಿ ಕುಪ್ರಸಿದ್ಧವಾಗಿರುವದ ಗ್ರೇಟ್ ಕಲ್ಕಟ್ಟಾ ಕಿಲ್ಲಿಂಗ್ಸ್” ದೇಶವಿಭಜನೆಯನ್ನು ಅನಿವಾರ್ಯವಾಗಿಸಿದವು.  ಈ ರ್‍ಯಾಲಿಯ ಪರಿಣಾಮವಾಗಿ ಕಲ್ಕತ್ತಾದಲ್ಲಿ ಮುಸ್ಲಿಮರಿಂದ ನಡೆದ ಸುಮಾರು ನಾಲ್ಕು ಸಾವಿರ ಹಿಂದೂಗಳ ಹತ್ಯೆಗೆ ಪ್ರತೀಕಾರವಾಗಿ ನೆರೆಯ ಬಿಹಾರದಲ್ಲಿ ಹಿಂದೂಗಳು ಎಂಟು ಸಾವಿರಕ್ಕೂ ಅಧಿಕ ಮುಸ್ಲಿಮರನ್ನು ಹತ್ಯೆಗೈದರು.  ಆಗ ಬಿಹಾರದಲ್ಲಿ ಇದ್ದದ್ದು ಕಾಂಗ್ರೆಸ್ ಸರಕಾರ ಮತ್ತು ಉದ್ರಿಕ್ತ ಹಿಂದೂಗಳನ್ನು ತಡೆಯಲು ಅದರಿಂದಾಗಲಿಲ್ಲ ಎನ್ನುವ ಐತಿಹಾಸಿಕ ಸತ್ಯವನ್ನು ಗಮನಿಸಿ.
ಕಲ್ಕತ್ತಾದಲ್ಲಿ ನಡೆದ ಹಿಂದೂಗಳ ಹತ್ಯೆಯನ್ನೂ, ಅದಕ್ಕೆ ಪ್ರತಿಕ್ರಿಯೆಯಾಗಿ ಬಿಹಾರದಲ್ಲಿ ನಡೆದ ಮುಸ್ಲಿಮರ ಹತ್ಯೆಯನ್ನೂ ಗೋಧ್ರಾ ಹತ್ಯಾಕಾಂಡ ಮತ್ತು ತದನಂತರದ ಗುಜರಾಜ್ ಹಿಂಸಾಚಾರಕ್ಕೆ ಹೋಲಿಸಿ.  ಎರಡರ ನಡುವಿನ ಸಾಮ್ಯತೆಯನ್ನೂ, ಕಾರ್ಯಾಕಾರಣ ಸಂಬಂಧಗಳನ್ನು ಗುರುತಿಸಿ.  ಆಧುನಿಕ ಭಾರತದ ಬಗ್ಗೆ ನನ್ನದೊಂದು ಖಚಿತ ಅಭಿಪ್ರಾಯವನ್ನು ಈ ಸಂದರ್ಭದಲ್ಲಿ ಅನಂತಮೂರ್ತಿ ಹಾಗೂ ಗಿರೀಶ ಕಾರ್ನಾಡರಿಗೆ ನಾನು ಹೇಳಲೇಬೇಕು.  ಅದೆಂದರೆ- 1947ನ್ನು “ಸ್ವಾತಂತ್ರದ ವರ್ಷ” ಎನ್ನುವುದಕ್ಕಿಂತಲೂ “ದೇಶವಿಭಜನೆಯ ವರ್ಷ” ಎಂದು ಕರೆದು ಅದರಾಚೆಯ ಕಾಲವನ್ನು “ವಿಭಜನಾಪೂರ್ವ ಕಾಲ”, ಅದರೀಚೆಯ ಕಾಲವನ್ನು “ವಿಭಜನೋತ್ತರ ಕಾಲ” ಎಂದು ಪರಿಗಣಿಸಿದರೆ ದಕ್ಷಿಣ ಏಶಿಯಾವನ್ನು ಈ ದಿನಗಳಲ್ಲಿ ಕಾಡುತ್ತಿರುವ ಅನೇಕ ಪ್ರಶ್ನೆಗಳಿಗೆ ಉತ್ತರಗಳು ಸಿಗುತ್ತವೆ.  ಈ ಉತ್ತರಗಳಲ್ಲಿ ಅತ್ಯಂತ ಪ್ರಮುಖವಾದುವು “ಕೋಮುವಾದಿಗಳು ಯಾರು?”, ಮತ್ತು “ತಮ್ಮ ಕೋಮುವಾದದಿಂದ ದೇಶವನ್ನು ಛಿದ್ರಗೊಳಿಸಿದವರು ಯಾರು?” ಎಂಬ ಪ್ರಶ್ನೆಗಳಿಗೆ ದೊರೆಯುವ ಉತ್ತರಗಳು.
ಕಲ್ಕತ್ತಾ ಹತ್ಯೆಗಳಿಗೆ ಪ್ರತಿಕ್ರಿಯೆಯಾಗಿ ಬಿಹಾದರಲ್ಲಿ ನಡೆದ ಹತ್ಯೆಗಳ ಬಗ್ಗೆ ಅಲ್ಲಿನ ಕಾಂಗ್ರೆಸ್ ಸರಕಾರ ಅನುಸರಿಸಿದ ನೀತಿಗಳನ್ನು ಗುಜರಾತ್ ಘಟನೆಗಳ ಸಂದರ್ಭದಲ್ಲಿ ನರೇಂದ್ರ ಮೋದಿ ಸರಕಾರ ತಳೆದ ನಿಲುವುಗಳೊಂದಿಗೆ ಹೋಲಿಸೋಣ.  ಗೋಧ್ರಾ ರೈಲು ಹತ್ಯಾಕಾಂಡಕ್ಕೆ ಪ್ರತಿಯಾಗಿ ಗುಜರಾತ್ ಹೊತ್ತಿ ಉರಿಯತೊಡಗಿದಾಗ ಅದರ ಶಮನಕ್ಕೆ ಅಗತ್ಯವಾದ ಕ್ರಮಗಳನ್ನು ಮೋದಿ ಸರಕಾರ ತಕ್ಷಣವೇ ಕೈಗೊಂಡ ಬಗ್ಗೆ ಸುಪ್ರೀಂ ಕೋರ್ಟ್ ನೇಮಿಸಿದ್ದ ವಿಶೇಷ ತನಿಖಾ ಆಯೋಗ (ಎಸ್‌ಐಟಿ) ಸ್ಪಷ್ಟವಾಗಿ ಉಲ್ಲೇಖಿಸಿದೆ.  ಅಷ್ಟೇ ಅಲ್ಲ, ಮೋದಿ ಮತ್ತವರ ಸರಕಾರದ ಮೇಲೆ ಕಾಂಗ್ರೆಸ್, ಸೆಕ್ಯೂಲರ್ ಮಾಧ್ಯಮಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಮಾಡಿದ ಆರೋಪಗಳಲ್ಲಿ ಯಾವ ಹುರುಳೂ ಇಲ್ಲ ಎನ್ನುವುದನ್ನೂ ಎಸ್‌ಐಟಿ ಘಂಟಾಘೋಷವಾಗಿ ಸಾರಿದೆ.  ಈ ಸುಳ್ಳು ಆರೋಪಗಳಲ್ಲಿ ಪ್ರಮುಖವಾದುವು ಗಲಭೆಗಳನ್ನು ತಡೆಯಲು ಮೋದಿ ಸರಕಾರ ಯಾವ ಕ್ರಮಗಳನ್ನೂ ಕೈಗೊಳ್ಳಲಿಲ್ಲ ಮತ್ತು ಗೋಧ್ರಾ ರೈಲು ಹತ್ಯಾಕಾಂಡದಲ್ಲಿ ಸುಟ್ಟುಹೋದ ಹಿಂದೂಗಳ ಶವಗಳನ್ನು ಅಹಮದಾಬಾದ್‍ಗೆ ಕೊಂಡೊಯ್ದು ಹಿಂದೂಗಳನ್ನು ಉದ್ರೇಕಿಸಲಾಯಿತು ಎನ್ನುವುವು.  ಅದೇ ಎಸ್‌ಐಟಿ ಮತ್ತೊಂದು ಮುಚ್ಚಿಟ್ಟ ಸತ್ಯವನ್ನೂ ಬಯಲಿಗೆಳೆದಿದೆ.  ತನ್ನ ಸುರಕ್ಷಾ ಪಡೆಗಳಿಂದ ಗಲಭೆಯ ಹತೋಟಿ ಸಾಧ್ಯವಿಲ್ಲ ಎಂದು ಅರಿವಾದೊಡನೇ ಮೋದಿ ಸರಕಾರ ಸಹಾಯಕ್ಕಾಗಿ ನೆರೆಯ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಾಸ್ಥಾನ್ ಸರಕಾರಗಳಿಗೆ ಅಧಿಕೃತ ವಿನಂತಿ ಮಾಡಿಕೊಂಡಿತು.  ಈ ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ ಸರಕಾರಗಳಿದ್ದವು ಎನ್ನುವುದನ್ನು ನೆನಪಿಡಿ.  ಮಹಾರಾಷ್ಟ್ರ ಅಲ್ಪಪ್ರಮಾಣದಲ್ಲಿ ಭದ್ರತಾ ಸಿಬ್ಬಂದಿಗಳ ಪೂರೈಕೆ ಮಾಡಿದರೆ ಮಧ್ಯಪ್ರದೇಶ ಮತ್ತು ರಾಜಾಸ್ಥಾನ ಯಾವುದೇ ಸಹಕಾರ ನೀಡಲು ನಿರಾಕರಿಸಿದವು!  1946ರಲ್ಲಿ ಬಿಹಾರದಲ್ಲಿ ಮುಸ್ಲಿಮರ ಹತ್ಯೆಯನ್ನು ತಡೆಯಲಾಗದ ಕಾಂಗ್ರೆಸ್ 2002ರಲ್ಲಿ ಗುಜರಾತಿನಲ್ಲಿ ಮುಸ್ಲಿಮರ ಹತ್ಯೆಯನ್ನು ತಡೆಯಲು ಸಹಕರಿಸಲು ಹಿಂದೆಗೆಯಿತು!  ಇದನ್ನು ಆ ಪಕ್ಷದ ನಾಯಕಿ ಸೋನಿಯಾ ಗಾಂಧಿ ಮರೆತಿರುವುದೇಕೆ?  ಅದಕ್ಕೆ ಕಾರಣ ಇಷ್ಟೇ: ಗುಜರಾತಿನಲ್ಲಿ ಕೆಲವು ಸಾವಿರ ಮುಸ್ಲಿಮರ ಜೀವಗಳನ್ನು ಬಲಿಕೊಡುವುದರಿಂದ ದೇಶದಾದ್ಯಂತ ಕೋಟಿಕೋಟಿ ಸಂಖ್ಯೆಯಲ್ಲಿ ಗಳಿಸಬಹುದಾದ ಮುಸ್ಲಿಂ ಮತಗಳ ಲೆಕ್ಕಾಚಾರ ಅವರ ಮನಸ್ಸಿನಲ್ಲಿತ್ತು!  ಆ ಲೆಕ್ಕಾಚಾರದ ಪರಿಣಾಮವೇ ಅವರು ಮೋದಿಯವರನ್ನು “ಸಾವಿನ ವ್ಯಾಪಾರಿ” ಎಂದು ಬಣ್ಣಿಸುತ್ತಾ, ಆ ಮೂಲಕ ಮುಸ್ಲಿಮರನ್ನು ಉದ್ರೇಕಿಸುತ್ತಾ ಸಾಗಿದ್ದು.  ಅವರ ಲೆಕ್ಕಾಚಾರಕ್ಕೆ ಇಂದು ಸಿಗುವ ಕರಾಳ ಉದಾಹರಣೆಯೆಂದರೆ ಇದೇ ಏಪ್ರಿಲ್ ಒಂದರಂದು ಅವರು ದೆಹಲಿಯ ಜಾಮಾ ಮಸೀದಿಯ ಶಾಹಿ ಇಮಾಂರನ್ನು ಭೇಟಿಯಾದದ್ದು ಮತ್ತು ಮುಸ್ಲಿಂ ಮತಗಳಿಗಾಗಿ ಯಾಚಿಸಿದ್ದು.  ಅವರ ಬೇಡಿಕೆಗೆ ಸಮ್ಮತಿಸಿದ ಶಾಹಿ ಇಮಾಂ ಈ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಮತ ನೀಡುವಂತೆ ದೇಶದ ಮುಸ್ಲಿಮರಿಗೆ ಕರೆ ನೀಡಿದರು.
ಇಷ್ಟೆಲ್ಲಾ ಐತಿಹಾಸಿಕ ಹಾಗೂ ವರ್ತಮಾನದ ಸತ್ಯಗಳ ಹಿನ್ನೆಲೆಯಲ್ಲಿ, ಧರ್ಮದ ಆಧಾರದಲ್ಲಿ ಸಮಾಜವನ್ನು, ದೇಶವನ್ನು ಒಡೆಯುತ್ತಿರುವವರು ಯಾರು, ಕೋಮುವಾದಿಗಳು ಯಾರು ಎಂದು ಅನಂತಮೂರ್ತಿ ಮತ್ತು ಗಿರೀಶ ಕಾರ್ನಾಡರಂಥ ಬುದ್ಧಿಜೀವಿಗಳಿಗೆ ಇನ್ನೂ ಗೊತ್ತಾಗಿಲ್ಲವೆಂದರೆ ಅವರ ಬುದ್ಧಿಯಲ್ಲೇ ಏನೋ ಡೊಂಕಿದೆ.  ಅದಿಲ್ಲವಾದರೆ ಏನೋ ಲೆಕ್ಕಾಚಾರವಿದೆ. ನಾಡಿನ ಹಿತಾಸಕ್ತಿಗಳ  ಬಗ್ಗೆ ಮಾತಾಡುತ್ತಿರುವ ಈ ಬುದ್ಧಿಜೀವಿಗಳ ವಿಶ್ವಾಸಾರ್ಹತೆ ಸಹಾ ಈ ಸಂದರ್ಭದಲ್ಲಿ ಚರ್ಚಾಯೋಗ್ಯ.
ನಾಡಿನ ಹಿತಕ್ಕಾಗಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವುದು ಅಗತ್ಯ ಎಂದು ಗಿರೀಶ ಕಾರ್ನಾಡ ಹೇಳುತ್ತಾರೆ.  ನಂದನ್ ನೀಲೇಕಣಿಯವರ ಪರವಾಗಿ ಮಾತಾಡುತ್ತಾ ಅವರು ನಾರಾಯಣಮೂರ್ತಿ, ಕಿರಣ್ ಮುಜುಂದಾರ್‌ರಂಥವರು ರಾಜಕೀಯಕ್ಕಿಳಿಯಬೇಕೆಂದು ಕರೆ ನೀಡಿದ್ದಾರೆ.  ಈ ಸಂದರ್ಭದಲ್ಲಿ ನೆನಪಾಗುವುದು ಬೆಂಗಳೂರನ್ನು ಕರ್ನಾಟಕದಿಂದ ಪ್ರತ್ಯೇಕಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವುದು ಸೂಕ್ತವೆಂಬ ಸಲಹೆಯನ್ನು 2007ರ ನವೆಂಬರ್‌ನಲ್ಲಿ ನಾರಾಯಣಮೂರ್ತಿ ನೀಡಿದ್ದು.  ತಮ್ಮ ಸಂಸ್ಥೆಯ ಹಿತಕ್ಕಾಗಿ ರಾಜ್ಯದ ಹಿತವನ್ನು ಬಲಿಗೊಡಲು ಮುಂದಾಗುವ ನಾರಾಯಣಮೂರ್ತಿಯಂಥವರು ರಾಜಕೀಯಕ್ಕಿಳಿಯಬೇಕೆಂದು ಕಾರ್ನಾಡ್ ಬಯಸುತ್ತಾರೆ.  ಈಗ ನಾಡಿನ ಹಿತದ ಬಗ್ಗೆ ಕಾರ್ನಾಡರ ನಿಷ್ಟೆಯ ಒಂದು ಉದಾಹರಣೆ ನೋಡೋಣ.  ಕಾವೇರಿ ಜಲ ಹಂಚಿಕೆಯ ಬಗ್ಗೆ ರಾಜ್ಯದ ಹಿತಕ್ಕೆ ವಿರುದ್ಧವಾದ ತೀರ್ಪನ್ನು ಕಾವೇರಿ ಟ್ರಿಬ್ಯೂನಲ್ 2007ರ ಫೆಬ್ರವರಿಯಲ್ಲಿ ನೀಡಿದಾಗ, ಅದನ್ನು ಇಡೀ ರಾಜ್ಯವೇ ವಿರೋಧಿಸುತ್ತಿದ್ದಾಗ, ಆ ಅನ್ಯಾಯಕರ ತೀರ್ಪಿನ ಪರವಾದ ಹೇಳಿಕೆಗಳನ್ನು ಕಾರ್ನಾಡರು ನೀಡಿದ್ದರು.  ಇಂಥಾ ಕಾರ್ನಾಡರು ನಾರಾಯಣಮೂರ್ತಿವರನ್ನಲ್ಲದೇ ಮತ್ಯಾರನ್ನು ಬೆಂಬಲಿಸುತ್ತಾರೆ?  ಕಂತೆಗೆ ತಕ್ಕ ಬೊಂತೆ!
          ಅನಂತಮೂರ್ತಿಯವರ ರಾಜಕೀಯ ಬಯಕೆ ಬವಣೆಗಳ ಬಗ್ಗೆ, ವಿವಿಧ ವೈಚಾರಿಕ ಬಣ್ಣಗಳ ರಾಜಕಾರಣಿಗಳ ಜತೆ ಅವರ ಒಡನಾಟಗಳ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ.  ಅದರ ಪುನರಾವರ್ತನೆ ಇಲ್ಲಿ ಅನಗತ್ಯ.  ನಮ್ಮ ಇಲ್ಲಿನ ಚರ್ಚೆಗೆ ಅನುಕೂಲವಾಗಲು ಒಂದೇಒಂದು ಉದಾಹರಣೆಯನ್ನು ನೀಡಬಯಸುತ್ತೇನೆ.  ಕೆಲವೇ ವರ್ಷಗಳ ಹಿಂದೆ ರಾಜ್ಯಸಭಾ ಸದಸ್ಯತ್ವದ ಕನಸು ಕಂಡ ಅವರು ಬೆಂಬಲಕ್ಕಾಗಿ ಹುಡುಕಾಡುತ್ತಾ ದೇವೇಗೌಡರ ಬಾಗಿಲನ್ನೂ ಬಡಿದಿದ್ದರು.  ಈಗ ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಬಂದಾಗಿನಿಂದ ತಮಗೆ ಸಿಗುತ್ತಿರುವ ಪ್ರಾಮುಖ್ಯತೆ ಕಂಡು ತಮ್ಮ ಹಳೆಯ ಕನಸು ಈಗಲಾದರೂ ನನಸಾಗುವ ಕಾಲ ಹತ್ತಿರ ಬಂದಿದೆಯೆಂದು ಅವರು ಎಣಿಸಿರುವ ಸಾಧ್ಯತೆ ಇದೆ.  ತಮ್ಮನ್ನು ತಾವು ಕಾಂಗ್ರೆಸ್ಸಿಗರು ಎಂದವರು ಪರಿಗಣಿಸಿಬಿಟ್ಟಿದ್ದಾರೆ.  ಕಾಂಗ್ರೆಸ್ ಪರವಾಗಿ ಮತ ಯಾಚಿಸುವ ಮೂಲಕ ತಮ್ಮನ್ನು ತಮ್ಮೊಳಗೊಬ್ಬ ಎಂದು ಪರಿಗಣಿಸಬೇಕೆಂದು ಕಾಂಗ್ರೆಸ್ಸಿಗರನ್ನು ಕೇಳುತ್ತಿದ್ದಾರೆ.
'ಜನರಲ್' ಆಗಿ ಒಂದು ಕೊನೆಯ ಮಾತು: ಮುನಿಗಳೆ ಆಗಲಿ, ಮೌಲ್ವಿಗಳೇ ಆಗಲಿ, ಸಂತರೆ ಆಗಲಿ, ಸಾಹಿತಿಗಳೇ ಆಗಲಿ ಸಮಾಜಕ್ಕೆ ಮಾರ್ಗದರ್ಶನ ನೀಡಬೇಕಾದರೆ ಅದಕ್ಕೆ ಅಗತ್ಯವಾದ ನೈತಿಕ ಅರ್ಹತೆಯನ್ನು ಮೊದಲು ಗಳಿಸಿಕೊಂಡಿರಬೇಕು.  ಈ ಅರ್ಹತೆಗಳು ಬರುವುದು ಒಳ್ಳೆಯ ಸಂಸ್ಕಾರದಿಂದ, ಬದುಕಿನಲ್ಲಿ ನಂಬಿ ಆಚರಿಸಿದ ಮೌಲ್ಯಗಳಿಂದ.  ಗಳಿಸಿದ ಪ್ರಶಸ್ತಿಗಳು ಮತ್ತು ಸ್ಥಾನಮಾನಗಳಿಂದಲ್ಲ.  (ಆಲ್ಬಂಗಳಿಂದಲೂ ಅಲ್ಲ!)  “ಮೇಲೇರಲು ನನಗೆ ಯಾರೂ ಸಹಾಯ ಮಾಡಿಲ್ಲ, ಆದ್ದರಿಂದ ನಾನೂ ಯಾರಿಗೂ ಸಹಾಯ ಮಾಡುವುದಿಲ್ಲ” ಎಂದು ಹೇಳುವ, ಅಗ್ನಿಅಕಸ್ಮಿಕದಲ್ಲಿ ಮೈಯನ್ನೆಲ್ಲಾ ಸುಟ್ಟುಕೊಂಡು ನರಳಿದ ಹೆಣ್ಣುಜೀವವೊಂದನ್ನು (ಆಕೆ ನಾಡಿನ ಹೆಮ್ಮೆಯ ಕವಯಿತ್ರಿ ಎನ್ನುವುದು ಇಲ್ಲಿ ಅಮುಖ್ಯ) “ನಿನಗೆ 'ಅಲ್ಲೂ' ಸುಟ್ಟಿದೆಯಾ?” ಎಂದು ಪ್ರಶ್ನಿಸುವಂಥವರು ಸಮಾಜಕ್ಕಿರಲಿ ತಮ್ಮ ಮಕ್ಕಳಿಗಾದರೂ ಸಹಾ ಮಾರ್ಗದರ್ಶನ ನೀಡಲು ಅರ್ಹರಲ್ಲ ಎನ್ನುವುದು ನನ್ನ ದೃಢ ನಂಬಿಕೆ.

ಪೂರಕವಾಗಿ ಈ ಲೇಖನವನ್ನೂ ಓದಿ:
ಮುಂದಿನ ಚುನಾವಣೆಗಳ ಅಸ್ಪಷ್ಟ ಮುಖಗಳು

6 comments:

  1. ಶ್ರೀ ಪ್ರೇಮಶೇಖರ ಅವರಿಗೆ-- ಇಂದು ಫೇಸ್ ಬುಕ್ ನಲ್ಲಿ ತಮ್ಮ ಬ್ಲಾಗ್ ನ ಕೊಂಡಿ ಸಿಕ್ಕಿತು. ಇಲ್ಲಿಯ ತನಕ ನಿಮ್ಮ ಬಗ್ಗೆ, ನಿಮ್ಮ ಬ್ಲಾಗ್ ಬಗ್ಗೆ ತಿಳಿದಿರಲಿಲ್ಲ. ಕನ್ನಡದ ಐದಾರು ಬ್ಲಾಗ್ ಗಳನ್ನು ದಿನಾ ನೋಡುತ್ತಿರುತ್ತೇನೆ. ಇಂದಿನಿಂದ ನನ್ನ ಆ ಲಿಸ್ಟ್ ಗೆ ತಮ್ಮದೂ ಸೇರಿದ್ದು ಸಂತೋಷವಾಗಿದೆ. ಯಾವುದೇ ಪೂರ್ವಗ್ರಹವಿಲ್ಲದೆ ವಿಷಯಗಳನ್ನು ಮಂಡಿಸುವ ತಮ್ಮ ರೀತಿ ನನಗೆ ಮೆಚ್ಚಿಗೆಯಾಗಿದೆ. ಇನ್ನು ನಮ್ಮ ಸಾಹಿತಿಗಳೂ ಈ ಸಲದ ಲೋಕಸಭಾ ಚುನಾವಣೆಯಲ್ಲಿ ತಮ್ಮ ತಮ್ಮ ಇಷ್ಟಾನುಸಾರ ಯಾವುದಾದರೊಂದು ರಾಜಕೀಯ ಪಕ್ಷದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಇದು ಸ್ವಾಗತಾರ್ಹ. ಸಹಜವಾಗಿ ರಾಜಕೀಯದ 'ವೈರಸ್' ಅವರ ಮೇಲೂ attack ಆಗಿದೆ. ಏನೂ ಮಾಡಲಿಕ್ಕೆ ಆಗುವುದಿಲ್ಲ. ಪಕ್ಷದ ಪ್ರಣಾಳಿಕೆಗೆ ತಕ್ಕಂತೆ ಭಾಷಣ ಮಾಡಲೇಬೇಕಲ್ಲವೇ?--ಎಂ ಎ ಶ್ರೀರಂಗ ಬೆಂಗಳೂರು

    ReplyDelete
  2. ಕೋಮುವಾದಿಗಳು ಯಾರೆಂದು ಉದಾಹರಣೆ ಮೂಲಕ ವಿವರಿಸಿದ ತಮಗೆ ಅನಂತಾನಂತ ಕೃತಜ್ಞತೆಗಳು ಸರ್.

    ReplyDelete
  3. ಪ್ರಿಯ ಶ್ರಿರಂಗ, ನೀತಾ ರಾವ್ ಹಾಗೂ ವಿದ್ಯಾ ಕುಲಕರ್ಣಿ- ಲೇಖನವನ್ನು ಇಷ್ಟಪಟ್ಟದ್ದಕ್ಕಾಗಿ ತಾವು ಮೂವರಿಗೂ ಹೃತ್ಪೂರ್ವಕ ಕೃತಜ್ಞತೆಗಳು.

    ReplyDelete
  4. Nice meaningful, yet playful caption

    ReplyDelete
  5. ಪ್ರಿಯ ಪ್ರೇಮ ಶೆಖರ್,

    ನಿಮ್ಮ ಬ್ಲಾಗ್ ಇಷ್ಟು ದಿನ ನನ್ನ ಗಮನಕ್ಕೆ ಬ೦ದಿರಲಿಲ್ಲ. ಈ ದಿನ ನೀವು ಶೇರ್ ಮಾಡಿದ್ದರಿ೦ದ ಓದುವ ಅವಕಾಶ ಲಭಿಸಿತು. ಅದಕ್ಕಾಗಿ ಧನ್ಯವಾದಗಳು.

    Sorry, I could not continue writing in Kannada due to some technical problem. In these two articles the the hypocritical veil of the so called intellectuals has been unveiled very convincingly in the back ground of the historical happenings in India time to time.

    With regards,
    Ramesh Megaravalli.

    ReplyDelete