ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Saturday, March 15, 2014

ಶ್ರೀಲಂಕಾ, ತಮಿಳುನಾಡು ಮತ್ತು ನಾನು



            ನಾನಿಂದು (ಮಂಗಳವಾರ, ನವೆಂಬರ್ ೧೨) ಪಾಂಡಿಚೆರಿಯಲ್ಲಿದ್ದೇನೆ.  ಇದೇ ನವೆಂಬರ್ ೧೫-೧೭ರಂದು ಕೊಲಂಬೋದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಸರಕಾರಗಳ ನಾಯಕರ ಸಮ್ಮೇಳನದಲ್ಲಿ ಭಾರತದ ಭಾಗವಹಿಸುವಿಕೆಯನ್ನು, ಶ್ರೀಲಂಕಾ ಸರಕಾರದ ತಮಿಳು-ವಿರೋಧಿ ನೀತಿ ನಿಲುವುಗಳನ್ನು ವಿರೋಧಿಸಿ ತಮಿಳು ಸಂಘಟನೆಗಳು ಇಲ್ಲಿ ಮತ್ತು ತಮಿಳುನಾಡಿನಲ್ಲಿ ಬಂದ್‌ಗೆ ಕರೆನೀಡಿವೆ.  ಬಂದ್ ಆರಂಭವಾಗಿದೆ.  ತಮಿಳುನಾಡಿನ ರಾಜಕೀಯ ಪಕ್ಷಗಳ, ನೇತಾರರ ಒತ್ತಡದಿಂದಾಗಿ ಕೊಲಂಬೋ ಸಮ್ಮೇಳನದಲ್ಲಿ ಭಾಗವಹಿಸದಿರಲು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ನಿರ್ಧರಿಸಿದ್ದಾರೆ.
ಮೂವತ್ತು ವರ್ಷಗಳ ಹಿಂದೆ ೧೯೮೩ರಲ್ಲಿ ದೆಹಲಿಯಲ್ಲಿ ಇಂಥದೇ ಕಾಮನ್‌ವೆಲ್ತ್ ಸಮ್ಮೇಳನ ಜರುಗಿತ್ತು.  ಶ್ರೀಲಂಕಾ ಅಧ್ಯಕ್ಷ ಜ್ಯೂನಿಯಸ್ ಜಯವರ್ಧನೆ ಅದರಲ್ಲಿ ಭಾಗವಹಿಸಿದ್ದರು.  ಈ ಮೂವತ್ತು ವರ್ಷಗಳಲ್ಲಿ ಭಾರತ - ಶ್ರೀಲಂಕಾ ಸಂಬಂಧಗಳಲ್ಲಿ ಅದೆಷ್ಟು ಏರುಪೇರುಗಳಾಗಿವೆ!
ದೆಹಲಿ ಸಮ್ಮೇಳನದ ನಂತರದ ಕೆಲವೇ ತಿಂಗಳುಗಳಲ್ಲಿ ಶ್ರೀಲಂಕಾದಲ್ಲಿ ಸಿಂಹಳೀ - ತಮಿಳು ಅಂತರ್ಯುದ್ಧ ಆರಂಭವಾದಂದಿನಿಂದಲೂ ತಮಿಳುನಾಡು ಮತ್ತೆಮತ್ತೆ ಮೂಗು ತೂರಿಸಿ ಭಾರತ - ಶ್ರೀಲಂಕಾ ಸಂಬಂಧಗಳನ್ನು ಹಾಳುಗೆಡವುತ್ತಿದೆ.  ಈ ಬಗ್ಗೆ ಹಿಂದೆ (ಜುಲೈ ೩, ೨೦೧೩ರಂದು) ವಿವರವಾಗಿ ಬರೆದಿದ್ದೇನೆ.  ಹೀಗಾಗಿ ಅದರ ಪುನರುಕ್ತಿ ಇಲ್ಲಿ ಅನಗತ್ಯ.  ಬದಲಿಗೆ ಶ್ರೀಲಂಕಾ ಸಮಸ್ಯೆಯನ್ನು ನನ್ನ ವೈಯುಕ್ತಿಕ ನೆಲೆಗಟ್ಟಿನಲ್ಲಿ ಅವಲೋಕಿಸುವುದು ಈ ಲೇಖನದ ಉದ್ದೇಶ.  ಜತೆಗೇ ತಮಿಳುನಾಡಿಗೆ, ತಮಿಳು ಜನಾಂಗಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ರಾಜಕೀಯ ಪಕ್ಷಗಳು ಮತ್ತು ನಾಯಕರು (ವೋಟಿಗಾಗಿ) ತೋರುವ ಸಂಕುಚಿತ ಮನೋಭಾವವನ್ನು ಇಡೀ ತಮಿಳು ಜನತೆಯ ಸ್ವಭಾವವೆಂದು ಸಾರಾಸಗಟಾಗಿ ಪರಿಗಣಿಸಿವುದರಲ್ಲಿನ ಅಪಾಯದ, ಅತಾರ್ಕಿತತೆಯ ಸೂಕ್ಷ್ಮ ಚಿತ್ರಣ ನೀಡುವುದಕ್ಕೂ ಪ್ರಯತ್ನಿಸುತ್ತೇನೆ.
೧೯೮೩ರಲ್ಲಿ ಶ್ರೀಲಂಕಾದಲ್ಲಿ ತಮಿಳು-ಸಿಂಹಳೀ ಅಂತರ್ಯುದ್ಧ ಆರಂಭವಾದಾಗ ನಾನು ದೆಹಲಿ ವಿಶ್ವವಿದ್ಯಾಲಯದಲ್ಲಿ ಎಂ. ಎ. ವಿದ್ಯಾರ್ಥಿ.  ದೆಹಲಿಯಲ್ಲೇ ಹುಟ್ಟಿಬೆಳೆದಿದ್ದ ನನ್ನ ಇಬ್ಬರು ತಮಿಳು ಗೆಳತಿಯರು ಶ್ರೀಲಂಕಾ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ.  ಹೀಗಾಗಿ ಆ ವಿಷಯದ ಬಗ್ಗೆ ಒಮ್ಮೆಯೂ ನಮ್ಮ ನಡುವೆ ಚರ್ಚೆಯಾಗಲಿಲ್ಲ.  ನಿಜ ಹೇಳಬೇಕೆಂದರೆ ನನಗೆ ಹಿಂದಿ ಚಿತ್ರಗೀತೆಗಳ ಹುಚ್ಚು ಹಚ್ಚಿಸಿದ್ದೇ ಆ ಇಬ್ಬರಲ್ಲೊಬ್ಬಾಕೆ.  ಆ ದಿನಗಳ ಜನಪ್ರಿಯ ಯುಗಳಗೀತೆಗಳನ್ನು ನಾವಿಬ್ಬರೂ ಒಟ್ಟಾಗಿ ಹಾಡಿ ಸುತ್ತಲಿನವರನ್ನು ರಂಜಿಸುತ್ತಿದ್ದೆವು.  ನಂತರ ನಾನು ಸಂಶೋಧನೆಗೆಂದು ಜವಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯವನ್ನು ಸೇರಿದಾಗ ತಮಿಳುನಾಡಿನಿಂದ ಬಂದಿದ್ದ ಹಲವಾರು ವಿದ್ಯಾರ್ಥಿಗಳ ಪರಿಚಯವಾಗಿ ಶ್ರೀಲಂಕಾ ಸಮಸ್ಯೆ ನಮ್ಮ ನಡುವೆ ಆಗಾಗ ಚರ್ಚೆಯ ವಿಷಯವಾಗತೊಡಗಿತು.  ಅದು ಅತಿರೇಕವೆನ್ನುವ ಮಟ್ಟಕ್ಕೆ ಹೋದದ್ದು ೧೯೮೭-೯೦ರ ಆವಧಿಯಲ್ಲಿ ಭಾರತೀಯ ಸೇನೆ (IPKF) ಶ್ರೀಲಂಕಾದಲ್ಲಿದ್ದಾಗ.  ಜೆಎನ್‌ಯುನ ತಮಿಳು ವಿದ್ಯಾರ್ಥಿಗಳ ಒಂದು ಗುಂಪು IPKF ವಿರುದ್ಧದ ಘೋಷಣಾಪತ್ರಗಳನ್ನು ರಾತ್ರಿಯಲ್ಲಿ ಎಲ್ಲೆಡೆ ಅಂಟಿಸಿ ಕ್ಯಾಂಪಸ್‌ನಲ್ಲಿ ಪರಿಸ್ಥಿತಿ ಗಂಭೀರವಾಗುವಂತೆ ಮಾಡಿತು.  ಶ್ರೀಲಂಕಾ ತಮಿಳರ ಮೇಲಿನ ಸಿಂಹಳೀಯರ ವ್ಯವಸ್ಥಿತ ದಬ್ಬಾಳಿಕೆಯ ಬಗ್ಗೆ ನನಗೆ ಅತೀವ ಅಸಮ್ಮತಿ ಇದ್ದರೂ ತಮಿಳರ ಉದ್ದಾರಕ್ಕಾಗಿ LTTE ಹಿಡಿದ ದಾರಿ ಸರಿಯೆಂದು ಕಾಣಲಿಲ್ಲ.  ಇದನ್ನು ಯಾವ ಹಿಂಜರಿಕೆಯೂ ಇಲ್ಲದೇ ನನ್ನ ಗೆಳೆಯರ ಮುಂದೆ ಹೇಳುತ್ತಲೂ ಇದ್ದೆ.  ನನ್ನ ಅಭಿಪ್ರಾಯವನ್ನು ಬೆಂಬಲಿಸುವ ತಮಿಳರ ಮತ್ತು ತಮಿಳೇತರರ ಒಂದು ದೊಡ್ಡ ಗುಂಪೇ ನನ್ನ ಜತೆ ಇತ್ತು.  ಹೀಗಾಗಿ ಶ್ರೀಲಂಕಾ ಸಮಸ್ಯೆ ನಮ್ಮ ನಡುವೆ ಎಂದೂ ವೈಷಮ್ಯವನ್ನುಂಟು ಮಾಡಲಿಲ್ಲ.  ನಿಜ ಹೇಳಬೇಕೆಂದರೆ ವಾಗ್ವಾದದಲ್ಲಿ ಆರಂಭವಾದ ಚರ್ಚೆ ಕೊನೆಗೆ ತಮಾಷೆಯಲ್ಲಿ, ಪರಸ್ಪರ ಕೀಟಲೆಯಲ್ಲಿ, ನಗೆಯಲ್ಲಿ ಕೊನೆಯಾಗುತ್ತಿದ್ದುದು ಅನೇಕ ಬಾರಿ.  ನಾನು ಪಾಂಡಿಚೆರಿಗೆ ಬರುವ ಹೊತ್ತಿಗೆ ಶ್ರೀಲಂಕಾ ಸಮಸ್ಯೆ ದಿನನಿತ್ಯದ ಬದುಕಿನ ಒಂದು ಭಾಗದಂತೆ ಸಾಮಾನ್ಯವಾಗಿಬಿಟ್ಟಿತ್ತು.
            ಭಾರತದ ವಿದೇಶಾಂಗ ನೀತಿಯ ತರಗತಿಗಳಲ್ಲಿ ಭಾರತ - ಶ್ರೀಲಂಕಾ ಸಂಬಂಧಗಳ ಬಗ್ಗೆ ಹೇಳುವಾಗ ನಾನು ವಸ್ತುನಿಷ್ಟ ವಿವರಗಳನ್ನೇ ಕೊಡುತ್ತಿದ್ದೆ.  ಸಮಸ್ಯೆಯ ಎಲ್ಲ ಮುಖಗಳನ್ನೂ ವಿದ್ಯಾರ್ಥಿಗಳ ಮುಂದಿಡುತ್ತಿದ್ದೆ.  ಹೀಗಾಗಿ ಒಂದೆರಡು ಪ್ರಸಂಗಗಳನ್ನು ಬಿಟ್ಟರೆ ಯಾವುದೇ ಕಹಿ ವಾಗ್ವಾದ ನಡೆಯಲು ಆವಕಾಶವಿರಲಿಲ್ಲ.  ಆದರೆ ಈ ಬಗ್ಗೆ ಸಾರ್ವಜನಿಕವಾಗಿ ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲೇಬೇಕಾದ ಪ್ರಸಂಗ ೧೯೯೬ರಲ್ಲಿ ಎದುರಾಯಿತು.  Tamil Eelam Liberation Front (TELF) ಎಂಬ ಪುಟ್ಟ ತಮಿಳು ಉಗ್ರವಾದೀ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಈಳವೇಂದನ್ ಭಾರತದಲ್ಲಿ ರಾಜಕೀಯ ಆಶ್ರಯ ಪಡೆದಿದ್ದರು.  ಅವರದೊಂದು ಭಾಷಣವನ್ನು ವಿಶ್ವವಿದ್ಯಾಲಯದಲ್ಲಿ ಎರ್ಪಡಿಸಬೇಕಾದ ಸಂದಿಗ್ಧಕ್ಕೆ ನಾವು ಹೇಗೋ ಸಿಕ್ಕಿಕೊಂಡೆವು.  ಸಭಾಂಗಣವಿಡೀ ನೆರೆದಿದ್ದ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಬೋಧಕೇತರ ವರ್ಗದ ಶ್ರೋತೃಗಳಿಗೆ ನಮ್ಮ ಡೀನ್ ಆ ವ್ಯಕ್ತಿಯ ಪರಿಚಯ ಮಾಡಿಕೊಟ್ಟರು.  ನಂತರ ಒಂದೂವರೆ ಗಂಟೆಗೂ ಅಧಿಕ ಕಾಲ ಮಾತಾಡಿದ ಆ ವ್ಯಕ್ತಿ ಶ್ರೀಲಂಕಾ ಸಮಸ್ಯೆಯ ಮೂಲದ ಬಗ್ಗೆ ವಿವಿರವಾಗಿ ಹೇಳಿದರು.  ಆ ಮಾತುಗಳ ಬಗ್ಗೆ ನಮ್ಮ ಯಾವುದೇ ತಕರಾರಿರಲಿಲ್ಲ.  ಅದರೆ ಆತ ಮುಂದುವರೆದು ರಾಜೀವ್ ಗಾಂಧಿ ಹತ್ಯೆಯ ಹಿಂದೆ LTTE ಇರುವುದಾಗಿ ಸೂಚಿಸಿ ಆ ಹತ್ಯೆ ಶ್ರೀಲಂಕಾ ತಮಿಳರ ಹಿತದ ದೃಷ್ಟಿಯಿಂದ ಅಗತ್ಯವಾಗಿತ್ತು ಎಂದರು.  IPKF ವಿರುದ್ಧ ಅವಹೇಳನಕಾರಿಯಾಗಿ ಮಾತಾಡಿದರು.  ಆ ದಿನಗಳಲ್ಲಿ ಚಂದ್ರಿಕಾ ಕುಮಾರತುಂಗ ಸರಕಾರ ಮತ್ತು ತಮಿಳು ಉಗ್ರರ ನಡುವೆ ಆರಂಭವಾಗಿದ್ದ ಮಾತುಕತೆಗಳನ್ನು ಪ್ರಸ್ತಾಪಿಸಿ ನಮಗೆ ಸಂಪೂರ್ಣ ಸ್ವಾತಂತ್ರ್ಯ ಬೇಡ, ಕೇವಲ ಆಂತರಿಕ ಸ್ವಾಯುತ್ತತೆ ಸಾಕು ಎಂದು ಪ್ರಭಾಕರನ್ ಹೇಳಿದ್ದಾರೆ ಹಾಗೂ ಚಂದ್ರಿಕಾ ಸರಕಾರ ಇದಕ್ಕೆ ಒಪ್ಪುವ ಸೂಚನೆ ಸಿಕ್ಕಿದೆ.  ಇದರಿಂದಾಗಿ ಭಾರತದ ಹಸ್ತಕ್ಷೇಪವಿಲ್ಲದೇ ನಾವು ನಮ್ಮ ದೇಶದಲ್ಲಿ ಶಾಂತಿ ಸ್ಥಾಪಿಸಿಕೊಳ್ಳಲು ಸಮರ್ಥರಾಗಿದ್ದೇವೆ... ಎಂದೆಲ್ಲಾ ಹೇಳಿದರು.  ಕೊನೆಯಲ್ಲಿ ವಂದನಾರ್ಪಣೆ ನನ್ನ ಜವಾಬ್ದಾರಿ.  ಔಪಚಾರಿಕವಾಗಿ ಆವರಿಗೆ ವಂದನೆಗಳನ್ನರ್ಪಿಸಿ ಮುಂದುವರೆದು ನಾನು ಆವರ ಹೇಳಿಕೆಗಳ ವಿಮರ್ಶೆಗೆ ತೊಡಗಿದೆ.  ಭಾರತದಲ್ಲಿ ರಾಜಕೀಯ ಆಶ್ರಯ ಪಡೆದಿರುವ ಅವರು ಭಾರತದ ನೆಲದಲ್ಲಿ ಭಾರತದ ವಿರುದ್ಧ ಬೀಸು ಹೇಳಿಕೆ ನೀಡುವುದು ಉಚಿತವೇ ಎಂದು ನೇರವಾಗಿ ಪ್ರಶ್ನಿಸಿದೆ.  ಭಾರತದಲ್ಲಿ ಸಿಕ್ಕಿರುವ ಈ ಸ್ವಾತಂತ್ರ್ಯ ಪ್ರಭಾಕರನ್ ನೇತೃತ್ವದ ಈಳಂನಲ್ಲಿ ನಿಮಗೆ ಸಿಗುತ್ತದೆಯೇ ಎಂದು ಜಾಡಿಸಿದೆ.  ಪ್ರಭಾಕರನ್ ಈಗ ಆಂತರಿಕ ಸ್ವಾಯುತ್ತತೆಯನ್ನು ಒಪ್ಪಿಕೊಳ್ಳುತ್ತಿರುವ ಬಗ್ಗೆ, ಚಂದ್ರಿಕಾ ಅದಕ್ಕೆ ಸಕರಾತ್ಮಕವಾಗಿ ಸ್ಪಂದಿಸುತ್ತಿರುವ ಬಗ್ಗೆ ಆವರು ಹೇಳಿದ್ದನ್ನು ಪ್ರಸ್ತಾಪಿಸಿ ಇದೇ ಮಾರ್ಗವನ್ನು ಇಂದಿರಾಗಾಂಧಿ ಸರಕಾರ ೧೯೮೪ರಲ್ಲೇ ಸೂಚಿಸಿತ್ತಲ್ಲವೇ?  ಆಗ ಅದು ಕಾದಾಡುವ ಹುಮ್ಮಸ್ಸಿನಲ್ಲಿ ಮುಳುಗಿದ್ದ ನಿಮಗಿಬ್ಬರಿಗೂ ಇಷ್ಟವಾಗಲಿಲ್ಲ ಎನ್ನುವುದು ನೆನಪಿದೆಯೇ?  ನಮ್ಮ ಸರಕಾರದ ಮಾತು ಕೇಳಿದ್ದರೆ ನೀವು ಈಗ ಕಾಣುತ್ತಿರುವ ಶಾಂತಿಯ ಕನಸು ಹನ್ನೆರಡು ವರ್ಷಗಳ ಹಿಂದೆಯೇ ನನಸಾಗಿರುತ್ತಿತ್ತಲ್ಲವೇ?  ಇಷ್ಟೆಲ್ಲಾ ರಕ್ತಪಾತವನ್ನು ತಡೆಗಟ್ಟಬಹುದಾಗಿತ್ತಲ್ಲವೇ?  ಬುದ್ಧಿವಂತರು ಮೊದಲು ಮಾಡುವ ಕೆಲಸವನ್ನು ಮೂರ್ಖರು ಕೊನೆಯಲ್ಲಿ ಮಾಡುತ್ತಾರೆ ಎಂಬ ಮಾತಿಗೆ ಸೂಕ್ತ ಉದಾಹರಣೆಯಂತಿದೆಯಲ್ಲವೇ ನಿಮ್ಮ ನಡವಳಿಕೆ? ಎಂದು ಮರ್ಮಕ್ಕೆ ತಾಗುವಂತೆ ಪ್ರಶ್ನಿಸಿದೆ.  ಈಳವೇಂದನ್ ಉತ್ತರಿಸಲಿಲ್ಲ.
            ಆದರೆ ಸಮಕಾಲೀನ ವಿಷಯಗಳ ಬಗ್ಗೆ ಹೆಚ್ಚು ಅರಿವಿಲ್ಲದ ಬೋಧಕೇತರ ವರ್ಗದ ಹಲವರು ಹಾಗೂ ವಿದ್ಯಾರ್ಥಿಗಳಲ್ಲಿ ಕೆಲವರು ನಾನು ತಮಿಳು-ವಿರೋಧಿ ಎಂದು ತೀರ್ಮಾನಕ್ಕೆ ಬಂದುಬಿಟ್ಟರು.  ನನ್ನ ಹೆಸರು ಬೇರೆ ಸಿಂಹಳೀ ಹೆಸರಿನಂತಿರುವುದು ಅವರ ತೀರ್ಮಾನಕ್ಕೆ ಪುಷ್ಟಿ ನೀಡಿತು.  ಈ ವಿಚಾರದಲ್ಲಿ ಬೌದ್ಧಿಕವಾಗಿ ನನ್ನೊಡನೆ ವಾಗ್ವಾದಕ್ಕಿಳಿಯಲಾಗದಿದ್ದರೂ ಅವರು ನಂತರದ ದಿನಗಳಲ್ಲಿ, ಮುಖ್ಯವಾಗಿ ಕಾವೇರಿ ವಿವಾದ ಉಲ್ಬಣಕ್ಕೇರಿದಾಗಲೆಲ್ಲಾ ನನ್ನ ಬಗ್ಗೆ ಅಲ್ಲಲ್ಲಿ ಅಪಪ್ರಚಾರ ನಡೆಸಿದರು.  ಜತೆಗೆ, ನಾವು ಬೇರೊಂದು ಮೂಲದಿಂದ ಇಕ್ಕಟ್ಟಿಗೆ ಸಿಕ್ಕಿದೆವು.  ಆ pro-LTTE ಗೆರಿಲ್ಲಾಗೆ ಮಾತಾಡಲು ನೀವೇಕೆ ಅವಕಾಶ ಕೊಟ್ಟಿರಿ ಎಂದು ನಮ್ಮ ಗುಪ್ತಚರ ಇಲಾಖೆ Intelligence Bureau (IB) ನಮ್ಮ ಹಿಂದೆ ಬಿತ್ತು.  ಅದು ಬೇರೆಯೇ ಕಥೆ ಬಿಡಿ.
            ಆನಂತರ ನನ್ನ ಕೆಲವು ತಮಿಳು ಗೆಳೆಯರೇ ನನ್ನ ಬಗ್ಗೆ ಕಾಳಜಿ ವಹಿಸಿ ಸಾರ್ವಜನಿಕವಾಗಿ ನಾನು ಶ್ರೀಲಂಕಾ ಬಗ್ಗೆ ಮಾತಾಡುವ ಅವಕಾಶ ಬಾರದಂತೆ ನೋಡಿಕೊಂಡರು.  ಚೆನ್ನೈನಲ್ಲಿ ನಡೆದ ಒಂದು ಸೆಮಿನಾರ್‌ನಲ್ಲಿ ಕಾವೇರಿ ವಿವಾದದ ಬಗ್ಗೆ ವಸ್ತುನಿಷ್ಟ ಹಾಗೂ ವಾಸ್ತವಿಕ ವಿಶ್ಲೇಶಣೆ ಮಾಡಹೊರಟ ಕರ್ನಾಟಕದ ಗೌರವಾನ್ವಿತ ಪ್ರೊಫೆಸರ್ ಒಬ್ಬರ ಮಾತುಗಳನ್ನು ತಮಿಳು ವಿದ್ವಾಂಸರು ವಿರೋಧಿಸಿ ಅವರ ಪ್ರಬಂಧ ಮಂಡನೆಗೆ ತಡೆಯೊಡ್ಡಿದ ಪ್ರಸಂಗ ನಡೆದ ಮೇಲಂತೂ ನಮ್ಮ ವಿಶ್ವವಿದ್ಯಾಲಯದಲ್ಲಿ ಕಾವೇರಿ ಬಗ್ಗೆ ಬಹಿರಂಗವಾಗಿ ಚರ್ಚೆಯಾಗಲೇಬಾರದೆಂದು ಅನಧಿಕೃತವಾಗಿ ನಿರ್ಧಾರ ತೆಗೆದುಕೊಳ್ಳಲಾಯಿತು.  ಪ್ರಭಾಕರನ್ ಹತ್ಯೆಯ ಸ್ವಲ್ಪ ಮೊದಲು ೨೦೦೯ರ ಆದಿಯಲ್ಲಿ ಚೆನ್ನೈನಲ್ಲಿ ಆಯೋಜಿಸಿದ್ದ ಶ್ರೀಲಂಕಾ ತಮಿಳರ ಬಗೆಗಿನ ಸಮಾವೇಶದಲ್ಲಿ ಒಂದು ಗೋಷ್ಟಿಯ ಅಧ್ಯಕ್ಷತೆಯನ್ನು ನಾನು ವಹಿಸಬೇಕಾಗಿತ್ತು.  ಆ ಸಮಾವೇಶದಲ್ಲಿ ಪ್ರಾಧ್ಯಾಪಕರುಗಳಿಗಿಂತಲೂ ದೇಶವಿದೇಶಗಳ ತಮಿಳು ಸಂಘಟನೆಗಳ ಸದಸ್ಯರುಗಳೇ ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವ ಹಾಗೂ ಅದರಿಂದ ಉಂಟಾಗಬಹುದಾದ ಪ್ರತಿಕೂಲ ಪರಿಸ್ಥಿತಿಯ ಸೂಚನೆ ಕಂಡ ನನ್ನ ಗೆಳೆಯರು ನೀನಲ್ಲಿಗೆ ಹೋಗಲೇಬೇಡ ಎಂದು ತಾಕೀತು ಮಾಡಿಬಿಟ್ಟರು.  ಅವರ ಕಾಳಜಿ ನೈಜವಾಗಿತ್ತು.
            ಇಷ್ಟೆಲ್ಲಾ ಅನುಭವಗಳಿಂದಾಗಿ ನನಗೆ ತಮಿಳರ ಬಗ್ಗೆ ಸಾರಾಸಗಟು ಕೆಟ್ಟ ಭಾವನೆಗಳಿಲ್ಲ.  ದ್ರವಿಡಿಯನ್ ಪಕ್ಷಗಳ ಗೋಸುಂಬೆ ರಾಜಕಾರಣಿಗಳು ಅಮಾಯಕ ಜನತೆಯನ್ನು ಅಡ್ಡದಾರಿಗೆಳೆಯುವುದನ್ನು ನಿಲ್ಲಿಸಿದರೆ ಸಾಮಾನ್ಯ ತಮಿಳರು ಭಾಷೆಯ ವಿಷಯದಲ್ಲಿ ಅಳತೆ ಮೀರಿ ವರ್ತಿಸುವುದಿಲ್ಲ ಎಂದು ನನ್ನ ಸ್ಪಷ್ಟ ಅಭಿಪ್ರಾಯ.  ಚಿಕ್ಕವನಾಗಿದ್ದಾಗ ಬಿ. ಜಿ. ಎಲ್. ಸ್ವಾಮಿ ಅವರ ಪುಸ್ತಕಗಳನ್ನೋದಿ ತಮಿಳರೆಂದರೆ ಅವಿವೇಕಿಗಳು, ಮೂರ್ಖರು, ಸಂಕುಚಿತ ಮನಸ್ಕರು ಎಂದೆಲ್ಲಾ ಅಂದುಕೊಂಡಿದ್ದೆ.  ಆದರೆ ಬೆಳೆದಂತೆ ಅದೇ ಪುಸ್ತಕಗಳನ್ನು ಮತ್ತೆ ಮತ್ತೆ ಓದಿದಾಗ ಅವುಗಳಲ್ಲಿನ ಉದ್ದೇಶಪೂರ್ವಕ ಕಿಡಿಗೇಡೀತನ ನನ್ನ ಅರಿವಿಗೆ ನಿಲುಕಲಾರಂಭಿಸಿತು.  ಸ್ವಾಮಿಯವರು ಒಂದು ವರ್ಗದ ತಮಿಳರನ್ನು ಮಾತ್ರ ಸರ್ವಸದ್ಗುಣಸಂಪನ್ನರೆಂಬಂತೆ ಚಿತ್ರಿಸಿ ಇನ್ನುಳಿದವರನ್ನೆಲ್ಲಾ ಹೆಡ್ಡರು, ಮುಠ್ಠಾಳರು, ಭಾಷಾದುರಭಿಮಾನಿಗಳು ಎಂಬಂತೆ ಚಿತ್ರಿಸುವುದನ್ನು ಗಮನಿಸಿದಾಗ ತಮಿಳರ ಬಗ್ಗೆ ಅವರ ಪುಸ್ತಕಗಳು ವಸ್ತುನಿಷ್ಟವಾಗಿಲ್ಲ ಎಂಬ ತೀರ್ಮಾನಕ್ಕೆ ಬಂದೆ.  “ತಮಿಳು ತಲೆಗಳ ನಡುವೆ”, “ಕಾಲೇಜುರಂಗ”, “ಕಾಲೇಜುತರಂಗ”, “ಪ್ರಾಧ್ಯಾಪಕನ ಪೀಠದಲ್ಲಿ”, ಅಷ್ಟೇಕೆ ಕೇಂದ್ರ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿವಿಜೇತ “ಹಸುರು ಹೊನ್ನು” ಕೃತಿಗಳು ತಮಿಳರ ಬಗ್ಗೆ ತಿಳಿಸುವುದಕ್ಕಿಂತಲೂ ಸ್ವಾಮಿಯವರ ಮನೋಭಾವದ ಬಗ್ಗೆ ಆಸಕ್ತಿದಾಯಕ ಒಳನೋಟ ನೀಡುತ್ತವೆ ಎಂದು ನನಗರಿವಾಯಿತು.
ಕರ್ನಾಟಕದಲ್ಲಿ ಸಾಮಾನ್ಯವಾಗಿ ಪ್ರಚಲಿತವಿರುವಂತೆ ತಮಿಳರು ಭಾಷಾದುರಭಿಮಾನಿಗಳೇನಲ್ಲ.  ತಮಿಳಿನಲ್ಲೇ ಮಾತಾಡಿ ಎಂದು ಹೊರಗಿನವರನ್ನು ಒತ್ತಾಯಿಸುವುದಿಲ್ಲ.  ಎರಡು ದಶಕಗಳಿಗಿಂತಲೂ ಅಧಿಕವಾದ ನನ್ನ ತಮಿಳುನಾಡು ವಾಸದಲ್ಲಿ ಅಂತಹ ಪ್ರಸಂಗ ನಡೆದದ್ದು ಒಂದೇ ಒಂದು ಬಾರಿ.  ಹಾಗೆ `ಒತ್ತಾಯಿಸಿದವನು' ಒಬ್ಬ ಕುಡುಕ.  ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ನಾನು ಮತ್ತು ನನ್ನ ತವಿಳು ಗೆಳೆಯ ಇಂಗ್ಲಿಷ್‌ನಲ್ಲಿ ಸಂಭಾಷಿಸುತ್ತಿದ್ದುದನ್ನು ಕೇಳಿಸಿಕೊಂಡ ಆ ಕುಡುಕ ‘ಇದು ತಮಿಳುನಾಡು.  ಇಲ್ಲಿ ತಮಿಳಿನಲ್ಲೇ ಮಾತಾಡಬೇಕು’ ಎಂದು ಒದರಾಡತೊಡಗಿದ.  ಅವನ ಮಾತುಗಳನ್ನು ನಾವಾಗಲೀ, ನೂರಕ್ಕೆ ತೊಂಬತ್ತೊಂಬತ್ತು ಭಾಗ ಇದ್ದ ಇನ್ನುಳಿದ ತಮಿಳು ಪ್ರಯಾಣಿಕರಾಗಲೀ ಲೆಕ್ಕಕ್ಕೆ ತೆಗೆದುಕೊಳ್ಳಲೇ ಇಲ್ಲ.  ಕುಡುಕನೊಬ್ಬನ ವರ್ತನೆಯ ಆಧಾರದ ಮೇಲೆ ಇಡೀ ಜನಾಂಗವೊಂದರ ಬಗ್ಗೆ ಪೂರ್ವಾಗ್ರಹಪೀಡಿತನಾಗಲು ನನ್ನ ಇದುವರೆಗಿನ ಜೀವನಾನುಭವ ಅವಕಾಶ ನೀಡುವುದಿಲ್ಲ.
ನವೆಂಬರ್ ೧೨, ೨೦೧೩ರಂದು "ವಿಜಯವಾಣಿ" ದೈನಿಕದ "ಜಗದಗಲ" ಅಂಕಣದಲ್ಲಿ ಪ್ರಕಟವಾದ ಲೇಖನ

No comments:

Post a Comment