ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Tuesday, March 18, 2014

ತೆರೆ



ಯಾವುದೇ ಪೂರ್ವಯೋಚನೆ, ಪೂರ್ವಯೋಜನೆ ಇಲ್ಲದೇ ಆರಂಭವಾಗಿ, ತಾನೇ ಆಯ್ದುಕೊಂಡ ದಾರಿಯಲ್ಲಿ ಸಾಗಿ ಅಂತ್ಯದಲ್ಲಿ ನನ್ನನ್ನೇ ಬೆಚ್ಚಿಸಿದ ಕಥೆ.  ಬರೆಸಿಕೊಂಡದ್ದು ಮೇ ೨೦೦೭ರಲ್ಲಿ.  ಎರಡು ತಿಂಗಳ ನಂತರ ಜುಲೈನಲ್ಲಿ "ಸುಧಾ"ದಲ್ಲಿ ಪ್ರಕಟಿತ.  ಅದೇವರ್ಷ ಪ್ರಕಟವಾದ ನನ್ನ "ಅಲೆಮಾರಿಯ ಕಥೆಗಳು" ಸಂಕಲನದಲ್ಲಿದೆ.

ಪ್ರೊಫೆಸರ್ ಸೆಂಗೋಟ್ಟೈ ಅವರ ಹೆಂಡತಿ ಕನಿಮೊಳಿ ಅವರ ರೀಸರ್ಚ್ ಸ್ಟೂಡೆಂಟ್ ವೇಲುವಿನ ಜತೆ ಓಡಿಹೋಗಿ ಒಂದುದಿನ ಕಳೆದು ಒಂಬತ್ತು ಗಂಟೆಗಳಾಗಿವೆ.  ಹೊಟ್ಟೆಗೇನೂ ಸಿಕ್ಕದಿದ್ದ ಮನೆಯ ಮುದ್ದಿನ ಬೆಕ್ಕು ಹಸಿವು ತಣಿಸಿಕೊಳ್ಳಲೆಂದು ಮೊದಲ ಬಾರಿ ಮನೆಯಿಂದ ಹೊರನಡೆದು ಒಂದು ದಿನವೇ ಆಯಿತು.  ಆವಾಗಿನಿಂದಾ ಅದು ಹೊರಗೆ ಹೋಗಿಬಂದು ಮಾಡುತ್ತಾ ಇದೆ.
ಪ್ರೊಫೆಸರರಿಗೂ ಮನೆಬಿಟ್ಟು ಎತ್ತಲಾದರೂ ಹೊರಟುಹೋಗಬೇಕೆನಿಸುತ್ತಿದೆ.  ಆದರೆ ಹೊರಗೆ ಕಾಲಿಟ್ಟರೆ ತಾನು ಬಯಲಲ್ಲಿ ಬೆತ್ತಲೆ ನಿಂತಂತೆನಿಸಿಬಿಡುತ್ತದೆ ಎಂಬ ವಿಚಿತ್ರ ಅಳುಕಿಗೆ ಸಿಕ್ಕಿ ಮನೆಯೊಳಗೇ, ಅದು ನೀಡುವ ರಕ್ಷಣೆಯೊಳಗೇ ಉಸಿರು ಬಿಗಿಹಿಡಿದು ಮೌನವಾಗಿ ಕೂತುಬಿಟ್ಟಿದ್ದಾರೆ.  ಮನೆಯಿಡೀ ನಿಶ್ಶಬ್ಧ.  ಗಂಟೆಗಳ ಹಿಂದೆ ರಾತ್ರಿಯ ನೀರವತೆಯಲ್ಲಿ ಒಮ್ಮೆ ಬಿಕ್ಕಿದಾಗ ಗೂಬೆಯೊಂದು ಕಿವಿಯಲ್ಲೇ ಗೂತ್ಕರಿಸಿದಂತಾಗಿ ಬೆಚ್ಚಿ ದನಿ ಕಳೆದುಕೊಂಡಿದ್ದಾರೆ.
ಇನ್ನೂ ಮೂರು ಗಂಟೆಗಳು ಕಳೆದು ಬೆಳಗಾದಾಗ ಪ್ರೊಫೆಸರರಿಗೆ ಸ್ವಲ್ಪ ಧೈರ್ಯ ಬಂದಿತ್ತು.  ಅವರಿಗೆ ಹಸಿವಾಗುತ್ತಿತ್ತು.
ಕಾಗೆಸ್ನಾನ ಮಾಡಿ ಹೊರನಡೆದರು.  ಬೀದಿ ಕೊನೆಯ ಅಯ್ಯರ್ ಹೋಟೆಲಿನಲ್ಲಿ ನಾಲ್ಕು ಇಡ್ಲಿ ತಿಂದರು.  ಕೇಳಿ ಉದ್ದಿನ ವಡೆ ತರಿಸಿಕೊಂಡು ಮೆದ್ದರು.  ಉದ್ದನೆಯ ಗಾಜಿನ ಲೋಟದ ಕತ್ತಿನವರೆಗೆ ತುಂಬಿದ್ದ ನೊರೆಕಾಫಿಯನ್ನು ಸೊರಸೊರನೆ ಹೀರಿದರು.  "ಇದೇನು ಸಾರ್ ಬೆಳಿಗ್ಗೆ ಬೆಳಿಗ್ಗೆಯೇ ಇಲ್ಲಿ!  ಅಮ್ಮಾವರನ್ನು ತವರಿಗೆ ಸಾಗಹಾಕಿದ್ದೀರೋ ಹೇಗೆ?" ಎಂದ ಕುಪ್ಪಣ್ಣನಿಗೆ ಡರ್ರೆಂದು ತೇಗಿ ಉತ್ತರಿಸಿದರು.
ತಲೆ ತಗ್ಗಿಸಿ ಮನೆ ಸಮೀಪಿಸಿದಾಗ ಪಕ್ಕದ ಮನೆಯ ಕಾಂಪೌಂಡಿಗೊರಗಿ ನಿಂತು ಒಳಗಿದ್ದವಳೊಂದಿಗೆ ಉಭಯಕುಶಲೋಪರಿ ನಡೆಸುತ್ತಿದ್ದ ಹೆಂಗಸು ಇವರತ್ತ ತಿರುಗಿದಳು.  "ಓ ಅವ್ರು ಬಂದ್ರು.  ಆಮೇಲೆ ಸಿಗ್ತೀನಿ" ಎನ್ನುತ್ತಾ ಸರಸರನೆ ನಡೆದುಬಂದು ಇವರ ಹಿಂದೆ ಒಂದು ಮೆಟ್ಟಲು ಹತ್ತಿ ಮುಂದಿನ ಮೆಟ್ಟಲೇರಲು ಎತ್ತಿದ್ದ ಕಾಲನ್ನು ಹಿಂದಕ್ಕೆಳೆದು ನಿಂತಳು.
ಒಂದು ಕ್ಷಣ ತಮ್ಮ ಕಣ್ಣನ್ನೇ ನಂಬದ ಪ್ರೊಫೆಸರರ ಮನದಲ್ಲಿ ಅರೆಗಳಿಗೆಯಲ್ಲಿ ನೂರೊಂದು ಭಾವನೆಗಳು ಎದ್ದು ಬಿದ್ದು ಒದ್ದಾಡಿ ಗುದ್ದಾಡಿ ಸುಸ್ತಾಗಿ ಕೊನೆಯಲ್ಲಿ ಒಂದು ಇರಿಸುಮುರಿಸು ಅಚ್ಚರಿಯನ್ನೂ ಅದಕ್ಕೆ ಜೋಡಿಯಾಗಿ ಒಂದು ಬಿಕನಾಸಿ ನೆಮ್ಮದಿಯನ್ನೂ ತಳಕು ಹಾಕಿ ನಿಲ್ಲಿಸಿ ಹಿಂದೆ ಸರಿದವು.
ಇವಳು ಹಿಂದಕ್ಕೆ ಬಂದಿದ್ದಾಳೆ ಅಬ್ಬ!
ಎರಡು ರಾತ್ರಿ ಒಂದು ಹಗಲು ನಾನು ಮಂಕು ಹಿಡಿದು ಮೂಲೆ ಸೇರಿದ್ದಾಗ ಬರಲಿಲ್ಲ ಸಧ್ಯ.
ಪ್ರೊಫೆಸರರು ಮೌನವಾಗಿ ಬಾಗಿಲು ತೆರೆದು ಒಳಹೋದರು.  ಅಲ್ಲೇ ಹಾಲ್‌ನಲ್ಲೇ ಕೂತುಕೊಳ್ಳುವುದಾ ಎಂದು ಅರೆಕ್ಷಣ ಗೊಂದಲಕ್ಕೊಳಗಾದರು.  ಹೆಜ್ಜೆಗಳನ್ನು ಎಡಕ್ಕೊಮ್ಮೆ ಬಲಕ್ಕೊಮ್ಮೆ ತಿರುಗಿಸಿದರು.  ಕೊನೆಗೊಂದು ದಾರಿ ಹಿಡಿದು ನೇರವಾಗಿ ಬೆಡ್‌ರೂಮಿನ ಒಳಹೊಕ್ಕು ಹಾಸಿಗೆಯ ಮೇಲೆ ಅಂಗಾತ ಮಲಗಿ ಕಣ್ಣುಮುಚ್ಚಿದರು.  ಕಿವಿಗಳನ್ನು ಅಗಲವಾಗಿ ತೆರೆದುಕೊಂಡರು.
ಕನಿಮೊಳಿ ಒಂದೊಂದೇ ಹೆಜ್ಜೆ ಇಡುತ್ತಾ ಬೆಡ್‌ರೂಮಿನ ಬಾಗಿಲಿಗೆ ಬಂದು ನಿಂತಳು.  ಒಳಗಡಿಯಿಡಲು ಹೆಜ್ಜೆಗಳು ಅನುಮಾನಿಸಿದವು.  ಮೂವತ್ತಾರು ಗಂಟೆಗಳ ಹಿಂದೆ ಇದೇ ಮನೆಯ ಹೊಸಿಲು ದಾಟುತ್ತಿದ್ದಾಗ ಹೆಜ್ಜೆಗಳಿಗೇಕೆ ಈ ಅನುಮಾನ ಕಿಂಚಿತ್ತೂ ಕಾಡಲಿಲ್ಲ?  ಆಗ ಅವುಗಳಿಗಿದ್ದ ಧಾವಂತ ಈಗೆಲ್ಲಿ ಹಾರಿಹೋಯಿತು?  ಒಂದೂವರೆ ದಿನದಲ್ಲಿ ಏನೆಲ್ಲಾ ಆಗಿಹೋಯಿತು!  ಕಾಲುಗಳ ಶಕ್ತಿಯೇ ಸೋರಿಹೋಗಿದೆಯಲ್ಲ!
ಹನ್ನೆರಡು ವರ್ಷಗಳ ಹಿಂದೆ ಈ ಮನೆಗೆ ಕಾಲಿಟ್ಟಾಗಲೂ ಹೆಜ್ಜೆಗಳು ಅಳುಕಿನಿಂದಲೇ ಅತ್ತಿತ್ತ ಸರಿದಾಡಿದ್ದವು.  ಅರಿಶಿಣದ ಮುಸುಕಿನಲ್ಲಿ ಅಡಿಗಡಿಗೆ ನಾಚುತ್ತಿದ್ದವು.  ಆದರೀಗ ಅದೇ ಕಾಲುಗಳಲ್ಲೀಗ ಧೂಳು ದಟ್ಟವಾಗಿ ಮೆತ್ತಿಕೊಂಡಿತ್ತು.  ಹನ್ನೆರಡು ವರ್ಷಗಳಿಂದ ಇದೇ ಮನೆಯಲ್ಲಿ ಗಳಿಗೆಗೊಂದಿಷ್ಟರಂತೆ ಸೇರಿದ್ದ ಧೂಳು ಅದು.  ಅಂತಿಂಥಾ ಧೂಳಲ್ಲ.  ಅರಿಶಿಣವನ್ನದು ಸಂಪೂರ್ಣವಾಗಿ ಮುಚ್ಚಿಹಾಕಿದ್ದಲ್ಲದೇ ಅದರ ಕೈಕೂಸಾಗಿದ್ದ ಲಜ್ಜೆಯನ್ನೀಗ ಉಟ್ಟಬಟ್ಟೆ ಬಿಗಿಯಾಗುವ ನಿಂತಲ್ಲಿ ನಿಲ್ಲಲಾರದ ಕುಂತಲ್ಲಿ ಕೂರಲಾರದ ಹರಯದ ಹೆಣ್ಣಾಗಿ ಬದಲಾಯಿಸಿಬಿಟ್ಟಿತ್ತು.  ಆ ಜವ್ವನಿಗೆಯೀಗ ಮೂರು ಕೆರೆ ನೀರು ಕುಡಿದು ಬಂದಿದ್ದಳು.  ಕೆರೆ ಕಂಡಲ್ಲಿ ನೀರು ಕುಡಿಯಬೇಕೆನಿಸಿತ್ತೇ ವಿನಃ ಕಾಲುಗಳನ್ನು ತೊಳೆಯಬೇಕೆಂದು ಅನಿಸಿರಲೇ ಇಲ್ಲ.  ಹೀಗಾಗಿ ಹಿಂದೊಮ್ಮೆ ಅರಿಶಿಣ ಅಲಂಕರಿಸಿದ್ದ ಪಾದಗಳಲ್ಲೀಗ ಧೂಳೋ ಧೂಳು.
ಯಾವಳೋ ಮುತ್ತೈದೆ ಹಚ್ಚಿದ ಅರಿಶಿಣ, ತನ್ನದೇ ಬದುಕು ಹಚ್ಚಿದ ಧೂಳು.  ಎತ್ತಣಿಂದೆತ್ತ ಸಂಬಂಧವಯ್ಯಾ?
ಅರಿಶಿಣ ಧೂಳಾದ ಪರಿ ಪ್ರೊಫೆಸರರ ಕಣ್ಣಿಗೆ ಕಂಡಿರಲೇ ಇಲ್ಲ!  ಅವರು ಅದರ ಬಗ್ಗೆ ಯಾವತ್ತೂ ರೀಸರ್ಚ್ ಮಾಡಿರಲಿಲ್ಲ.  ಲೇಖನ ಬರೆದು ಪ್ರಕಟಿಸಿರಲಿಲ್ಲ.  ಸೆಮಿನಾರುಗಳಲ್ಲಿ ಪ್ರಬಂಧ ಮಂಡಿಸಿರಲಿಲ್ಲ.  ಇದ್ದದ್ದನ್ನು ಇದ್ದಹಾಗೆ ಹೇಳಬೇಕೆಂದರೆ ಈ ವಿಷಯ ಅವರು ವಿಶ್ವವಿದ್ಯಾಲಯದಲ್ಲಿ ಪಾಠ ಮಾಡುವ ಸಿಲಬಸ್‌ನಲ್ಲೇ ಇರಲಿಲ್ಲ.  ಹೀಗಾಗಿ ಅವರಿಗದು ಗೊತ್ತಿರಲಿಲ್ಲ.
ಮೂರುಕೆರೆ ನೀರು ನೂರು ನಾಯಿಗಳ ಭಂಡತನವನ್ನೂ ಮುನ್ನೂರು ನರಿಗಳ ಬುದ್ಧಿಯನ್ನೂ ಕಲಿಸುತ್ತದಂತೆ.  ಕನಿಮೊಳಿ ಗಂಡನ ನಾಡಿ ಹಿಡಿದು ನೋಡಿಯಾಗಿತ್ತು.
ಪ್ರೊಫೆಸರ್ ಸಾಹೇಬರು "ಈಗ್ಯಾಕೆ ಬಂದೆ?" ಎಂದು ಅಬ್ಬರಿಸಿರಲಿಲ್ಲ.  ಮುಂದಲೆ ಹಿಡಿದು ಬೆನ್ನ ಮೇಲೆ ಗುದ್ದಿರಲಿಲ್ಲ.  "ತೊಲಗಾಚೆ ನಾಯಿ" ಎಂದು ಬಾಗಿಲಾಚೆ ನೂಕಿರಲಿಲ್ಲ.  ಅವರು ಮೌನವಾಗಿದ್ದರು.
ಎದುರಾಳಿ ಮೌನಕ್ಕೆ ಶರಣುಹೋದರೆ ಯುದ್ಧವನ್ನು ಅರ್ಧ ಗೆದ್ದಂತೆಯೇ.
ಕನಿಮೊಳಿ ಲೆಕ್ಕಹಾಕಿದ್ದೆಲ್ಲವನ್ನೂ ಮತ್ತೊಮ್ಮೆ ನೆನಪಿಸಿಕೊಂಡು ಬೆಡ್‌ರೂಮಿನೊಳಗೆ ಪ್ರವೇಶಿಸಿದಳು.  ನೇರವಾಗಿ ಮಂಚದತ್ತ ಸಾಗದೇ ಅದರ ಪಕ್ಕದ ಗೋಡೆಯನ್ನೊರಗಿ ನೆಲದ ಮೇಲೆ ಕುಳಿತಳು.  "ಊಊಊ" ಎಂದು ಸಣ್ಣಗೆ ದನಿ ತೆಗೆದು ಅಳತೊಡಗಿದಳು.  ಯಾವ ಗೋಡೆಯೂ ಪ್ರತಿಕ್ರಿಯಿಸದಾದಾಗ ಒಮ್ಮೆ ಬಿಕ್ಕಿದಳು.  "ನಂದು ತಪ್ಪಾಯ್ತೂಂದ್ರೇ..." ಎಂದಳು.  "ನನ್ನನ್ನ ಕ್ಷಮಿಸಿಬಿಡೀಂದ್ರೇ" ಎನ್ನುತ್ತಾ ಧಡಕ್ಕನೆದ್ದು ಧಾಪುಗಾಲಿಟ್ಟು ಮಂಚದ ತಳಭಾಗ ಸೇರಿ ಪತಿದೇವರ ಪಾದಗಳನ್ನು ಹಿಡಿದಳು.  ಅವುಗಳ ಮೇಲೆ ತಲೆಯಿಟ್ಟಳು.  ಅವು ಶುಭ್ರವಾಗಿದ್ದವು.
ಪ್ರೊಫೆಸರ್ ಸಾಹೇಬರು ಪ್ರತಿರಾತ್ರಿಯ ಕತ್ತಲಿನಲ್ಲೂ ಇದೇ ಮಂಚದ ಮೇಲೆ ಕಾಲುಗಳನ್ನು ಚೆನ್ನಾಗಿ ತೊಳೆದುಕೊಳ್ಳುತ್ತಿದ್ದರು.  ಹೆಂಡತಿಯ ಬಚ್ಚಲಲ್ಲಿ ತನ್ನ ತಂಬಿಗೆಯ ನೀರು ಸುರಿದು ಎರಡೇ ಕ್ಷಣಗಳಲ್ಲಿ ತಮಗೆ ತೃಪ್ತಿಯಾಗುವಂತೆ ಕಾಲುಗಳನ್ನು ಶುಭ್ರವಾಗಿ ತೊಳೆದುಕೊಳ್ಳುವ ಪರಿಯನ್ನು ಅವರು ಹನ್ನೆರಡು ವರ್ಷಗಳಿಂದ ರೂಢಿಸಿಕೊಂಡಿದ್ದರು.  `ರಾತ್ರಿಚರಿ'ಗೆ ಅವರು ಒಗ್ಗಿಹೋಗಿದ್ದರು.  ಒಮ್ಮೆ ಸ್ಖಲನವಾಗಿ ತಮ್ಮ ಕಾಲುಗಳು ಶುಭ್ರವಾದರೆ ಸಾಕು ಅತ್ತ ಹೊರಳಿಬಿಡುತ್ತಿದ್ದರು.  ಹೆಂಡತಿಯ ಕಾಲುಗಳ ಮೇಲೆ ಧೂಳು ದಿನಕ್ಕೊಂದು ಪದರ ಕಟ್ಟುತ್ತಿದ್ದುದನ್ನು ಗಮನಿಸುವ ಗೊಡವೆಗೇ ಅವರು ಹೋಗುತ್ತಿರಲಿಲ್ಲ.  ಪ್ರತಿರಾತ್ರಿ ತಮ್ಮ ತಂಬಿಗೆ ಇಲ್ಲೇ ಇಡಿಯಾಗಿ ಖಾಲಿಯಾದರೂ ಹೆಂಡತಿಯ ಬಚ್ಚಲು ಹೀಗೇಕೆ ಒಣಗಿ ಬಿರುಬೇಸಗೆಯ ಕೆರೆಯಂಗಳದ ಜೇಡಿಮಣ್ಣಿನಂತೆ ಬಿರುಕುಬಿಟ್ಟು "ಹುಯ್ಯೋ ಹುಯ್ಯೋ ಮಳೆರಾಯಾ, ಬಾಳಿನ ತೋಟಕೆ ನೀರಿಲ್ಲಾ" ಎಂದು ಆಕ್ರಂದಿಸುತ್ತಿದೆ ಎಂದು ಪರಿಶೀಲಿಸುವ ಗೋಜಿಗೆ ಅವರೆಂದೂ ಹೋಗಲೇ ಇಲ್ಲ.  ಮುಖ್ಯ ವಿಷಯವೆಂದರೆ ತನ್ನ ಕಣ್ಣುಗಳಿಗೆ ಬಚ್ಚಲಂತೆ ಕಾಣುವುದು ನಿಜಕ್ಕೂ ಒಂದು ರಮಣೀಯ ನಂದನವನ, ತನ್ನ ಬಾಳಸಂಗಾತಿ ಅದನ್ನು ಅಕ್ಕರೆಯಿಂದ ಪೋಷಿಸಿ ಬೆಳೆಸಿ ಕ್ಷಣಕ್ಷಣವೂ ಮುದಗೊಳ್ಳುತ್ತಿದ್ದಾಳೆ, ತನ್ನ ಗಂಡ ವಿರಾಮವಾಗಿ ಒಂದೊಂದೇ ಹೆಜ್ಜೆ ಇಡುತ್ತಾ ಅಲ್ಲಿ ವಿಹರಿಸಬೇಕೆಂದು ಅವಳು ಅನುದಿನವೂ ಬಯಸುತ್ತಿದ್ದಾಳೆ ಎಂಬುದರ ಅರಿವೇ ಅವರಿಗಿರಲಿಲ್ಲ.  ಅರಿಯುವ ತಾಳ್ಮೆಯೂ ಇರಲಿಲ್ಲ.
ಹೆಚ್ಚಿನ ಗಂಡಸರ ಹಣೆಬರಹವೇ ಇಷ್ಟು.
ಇವರ ಹಾರಾಟ ಒದರಾಟಗಳನ್ನು ನೀವು ನೋಡಬೇಕಾದ್ದು ರೋಸಿದ ಹೆಂಡತಿ ಕಳ್ಳಬಾಗಿಲ ಮೂಲಕ ಬೇರಾರನ್ನೋ ತನ್ನ ನಂದನವನದೊಳಗೆ ಬಿಟ್ಟುಕೊಂಡು ಈ ಹಣ್ಣು ತಿನ್ನು, ಈ ನೆಳಲಲ್ಲಿ ಮಲಗು, ಈ ಹುಲ್ಲಿನ ಮೇಲೆ ಉರುಳಾಡು, ಈ ಕೊಳದಲ್ಲಿ ಈಜು ಎಂದವನನ್ನು ಎಲ್ಲಾ ಕಡೆ ಕೈಹಿಡಿದು ತಿರುಗಾಡಿಸಿದಾಗ.  ಆ ಗಳಿಗೆಯಲ್ಲಿ ಶಿಖಂಡಿಯೂ ತಾತ್ಕಾಲಿಕವಾಗಿ ಘನಂದಾರಿ ಬೀಜದ ಹೋರಿಯಾಗಿಬಿಡುತ್ತಾನೆ.
ಇದೇನೂ ನಿಮಗೆ ತಿಳಿಯದಂಥದ್ದೇನಲ್ಲ ಬಿಡಿ.  ಕಥೆ ಕಾದಂಬರಿಗಳಲ್ಲಿ ಓದಿದ್ದೀರಿ, ಸಿನಿಮಾಗಳಲ್ಲಿ ನೋಡಿದ್ದೀರಿ, ಈಗಂತೂ ಮನೆಯ ಡ್ರಾಯಿಂಗ್ ರೂಂಗಳಲ್ಲಿ ಆರಾಮವಾಗಿ ಕುಳಿತು ಕಿರುತೆರೆಯ ಹಿರಿಧಾರಾವಾಹಿಗಳಲ್ಲಿ ನೋಡುತ್ತಲೇ ಇದ್ದೀರಿ.  ಎಲ್ಲಾ ನಿಮಗೆ ಗೊತ್ತಿರುವಂಥದ್ದೇ.  ಅದನ್ನೇ ಹೇಳಿ ನಿಮ್ಮ ಸಮಯ ವ್ಯರ್ಥ ಮಾಡುವುದರ ಬದಲು ಸೆಂಗೋಟ್ಟೈ - ಕನಿಮೊಳಿ ದಂಪತಿಗಳ ಬಗ್ಗೆ ಮಾತ್ರ ಹೇಳುತ್ತೇನೆ.  ಇದು ಸ್ವಲ್ಪ ಬೇರೆ.
ಹೆಂಡತಿ ತನ್ನ ಕಾಲುಗಳನ್ನು ಹಿಡಿದಾಗ ಪ್ರೊಫೆಸರರಿಗೆ ಯಾವ ರೀತಿ ಪ್ರತಿಕ್ರಿಯಿಸಬೆಕೆಂದು ತೋಚಲಿಲ್ಲ.  ಅನುಮಾನಿಸುತ್ತಲೇ ಕಾಲುಗಳನ್ನು ಎಳೆದುಕೊಂಡರು.  "ನೀನು ಹೀಗೆ ಮಾಡಬಹುದಾ?" ಎಂದು ಒರಲಿದರು.
ಅಭೇದ್ಯ ಚಕ್ರವ್ಯೂಹದೊಳಗೆ ಥಟಕ್ಕನೆ ಪ್ರವೇಶ ಸಿಕ್ಕಿಬಿಟ್ಟಿತ್ತು ಕನಿಮೊಳಿಗೆ.
"ಏನೋ ವಿಷಗಳಿಗೇರೀ.  ತಪ್ ಮಾಡ್ಬಿಟ್ಟೆ.  ಊಊಊ."  ಹಾಸಿಗೆಯಲ್ಲಿ ಹಾವಿನಂತೆ ಹರಿದು ಅತ್ತ ಸರಿದಿದ್ದ ಗಂಡನ ಕಾಲುಗಳನ್ನು ಅವಚಿ ಹಿಡಿದಳು.
"ಅಲ್ಲಾ ನಾ ನಿಂಗೆ ಯಾವ ಅನ್ಯಾಯ ಮಾಡಿದ್ದೆ?"  ಹೇಗಾದರೂ ಬಾಯಿಂದಾಚೆ ಹೋಗದಂತೆ ತಡೆದು ನಿಲ್ಲಿಸಿಕೊಳ್ಳಲು ಮೊನ್ನೆ ಸಂಜೆಯಿಂದಾ ಮಾಡಿದ್ದ ರಿಹರ್ಸಲ್ ವ್ಯರ್ಥವಾಗಿ ಪ್ರಶ್ನೆ ಹೊರಬಂದೇಬಿಟ್ಟಿತ್ತು.
"ಅಯ್ಯೋ ನೀವೇನೂ ಅನ್ಯಾಯ ಮಾಡ್ಲಿಲ್ಲಾರೀ.  ನೀವು ದೇವ್ರಂಥೋರು.  ನಾನು ಪಾಪಿ.  ಊಊಊ."
ಕೆಲಕ್ಷಣಗಳ ಮೌನ.
"ನಾಕು ಜನಕ್ಕೆ ಗೊತ್ತಾದ್ರೆ ನನ್ ಮರ್ಯಾದೆ ಏನು?  ಅಕ್ಕಪಕ್ಕದಲ್ಲಿ ನನ್ನನ್ನ ಏನಂತ ತಿಳಕೋತಾರೆ?"
ಕನಿಮೊಳಿ ಚಕ್ರವ್ಯೂಹದೊಳಗೆ ಪ್ರವೇಶಿಸುತ್ತಿದ್ದಂತೇ ಸೆಂಗೋಟ್ಟೈ ತನ್ನ ಗುರಾಣಿಯನ್ನು ಕೆಳಗೆಸೆದುಬಿಟ್ಟಿದ್ದ.
ಕನಿಮೊಳಿಯ ಕಣ್ಣಳತೆಯಲ್ಲಿ ವಿಜಯಮಾಲೆ.
"ಅಯ್ಯೋ ಯಾರ್‍ಗೂ ಗೊತ್ತಾಗದ ಹಾಗೆ ನಾ ನೋಡ್ಕೋತೀನೀರೀ.  ಇದ್ದಕ್ಕಿದ್ದ ಹಾಗೆ ಎಲ್ಲೋಗಿದ್ದೆ ಅಂತ ಸರೋಜ ಕೇಳಿದ್ಲು.  ನಮ್ ಚಿಕ್ಕಮ್ಮ ಹೋಗ್ಬಿಟ್ರು.  ಸುದ್ಧಿ ತಿಳಿದ ಕೂಡ್ಲೇ ಕೃಷ್ಣಗಿರಿಗೆ ಓಡ್ದೆ ಅಂತ ಹೇಳ್ದೆ" ಎನ್ನುತ್ತಾ ಗಂಡನ ಮುಖವನ್ನು ನೇರವಾಗಿ ನೋಡಿದಳು.
ತನ್ನದೇ ಗೋಳಿನಲ್ಲಿ ಕಣ್ಣು ಮುಚ್ಚಿಕೊಂಡಿದ್ದ ಸೆಂಗೊಟ್ಟೈ ಮತ್ತೊಮ್ಮೆ ಒರಲಿದ:
"ಆ ಲೋಫರ್ ಯೂನಿವರ್ಸಿಟೀನಲ್ಲಿ ಎಲ್ಲಾರ್ಗೂ ಸಾರ್ಕೊಂಡ್ ಬಂದ್ರೆ...  ಇದನ್ನ ಯೋಚಿಸೀ ಯೋಚಿಸೀ ನಾನು ಕಂಗಾಲಾಗಿಹೋಗಿದ್ದೀನಿ...  ನಾಡಿದ್ದು ಸೋಮವಾರ ನಾನು ಹೆಚ್‌ಓಡಿಯಾಗಿ ಚಾರ್ಜ್ ತಗೋತಾ ಇದೀನಿ.  ಹಾಗಿರೋವಾಗ..."  ಸೆಂಗೋಟ್ಟೈನ ಕೌಪೀನದ ಒಂದು ಗಂಟು ಅವನಿಗರಿವಿಲ್ಲದಂತೆ ಬಿಚ್ಚಿಹೋಯಿತು.
"ಇಲ್ಲಾರಿ, ಅವ್ನು ಅಂಥೋನಲ್ಲ.  ನಾನು ಭಾಷೆ ತಗೊಂಡಿದ್ದೀನಿ."  ಬಿಚ್ಚಿದ ಗಂಟಿನತ್ತ ಕೈಚಾಚಿದಳು.
"ಏನಂತ?"  ಥಟಕ್ಕನೆ ಬಂತು ಪ್ರಶ್ನೆ.  ಬಾಣದಂತೆ ಬಂತು ಉತ್ತರ.
"ಈ ವಿಷಯಾನ ಅವ್ನು ಯಾರಿಗೂ ಹೇಳಬಾರ್ದು ಅಂತ.  ನೀವು ಫ್ರೀ ಇಲ್ಲದ್ದರಿಂದ ನೀವೇ ಅವನನ್ನ ನನ್ನ ಜತೆ ಮಾಡಿ ಕೃಷ್ಣಗಿರಿಗೆ ಕಳಿಸಿದ್ರಿ ಅಂತ ಕೇಳಿದೋರಿಗೆ ಹೇಳ್ತಾನೆ.  ಹಾಗಂತ ನಂಗೆ ಭಾಷೆ ಕೊಟ್ಟಿದ್ದಾನೆ.  ನಾ ತಗೋಂಡಿದ್ದೀನಿ.  ಬಿಡ್ತೀನಾ?  ನಿಮ್ಮ ಮರ್ಯಾದೇನೇ ನನ್ನ ಮರ್ಯಾದೆ ಅಲ್ವಾ?"  ಕೌಪೀನದ ಮತ್ತೊಂದು ಗಂಟನ್ನು ಉಪಾಯವಾಗಿ ಬಿಚ್ಚಿಬಿಟ್ಟಳು.
"ನಿಜವಾಗ್ಲೂ!"
"ಹ್ಞೂ ನನ್ನಾಣೆ."  ಮೂರನೆಯ ಗಂಟನ್ನೂ ಕಿತ್ತು ಹಾಕಿದಳು.
ಮತ್ತೆ ಮೌನ.  ಸೆಂಗೋಟ್ಟೈನ ತಲೆಯಲ್ಲಿ ಚಕ್ರ ಸುತ್ತುತ್ತಿತ್ತು.
"ಆ ರ್‍ಯಾಸ್ಕಲ್‌ನ ಮುಖಾನೂ ನೋಡೋಕೆ ಇಷ್ಟಾ ಇಲ್ಲ ನಂಗೆ.  ಎಲ್ಲಾದ್ರೂ ತೊಲಗಿಹೋಗು ಅನ್ನು."
"ನಾನು ಅದಕ್ಕೂ ವ್ಯವಸ್ಥೆ ಮಾಡಿದ್ದೀನಿ.  ನಿಮಗಿಷ್ಟ ಇಲ್ಲ ಅಂದ್ರೆ ಅವ್ನು ಈ ಯೂನಿವರ್ಸಿಟೀನೇ ಬಿಟ್ಟು ಹೊರಟುಹೋಗ್ತಾನೆ.  ಪಿ ಹೆಚ್ ಡಿನ ಬೇರೆಲ್ಲಾದ್ರೂ ಮಾಡ್ಕೋತಾನಂತೆ."  ಗಂಟುಗಳೆಲ್ಲಾ ಬಿಚ್ಚಿಹೋಗಿದ್ದ ಎದುರಾಳಿಯ ಕೌಪೀನವನ್ನು ಕಿತ್ತೆಸೆದ ಕನಿಮೊಳಿ ಗಕ್ಕನೆ ಮೇಲೆಗರಿ ಕತ್ತಿ ಹಿಡಿದ ಅವನ ಕೈಯನ್ನೇ ಹಿಡಿದುಬಿಟ್ಟಳು.
"ಯೆಸ್.  ಹಾಗೇ ಮಾಡ್ಲಿ ಆ ಬ್ಯಾಸ್ಟರ್ಡ್.  ನಾನಂತೂ ಅವನಿಗೆ ಗೈಡ್ ಮಾಡೋಲ್ಲ."  ಸೆಂಗೋಟ್ಟೈ ಕತ್ತಿಯನ್ನು ಕೆಳಗೆ ಒಗೆದುಬಿಟ್ಟ.  ಕನಿಮೊಳಿ ಅದನ್ನೆತ್ತಿಕೊಂಡಳು.
"ನಂಗರ್ಥ ಆಗತ್ತೆ.  ಇಷ್ಟೆಲ್ಲಾ ಮಾಡು ಅಂತ ನಾನೇ ಅವನಿಗೆ ಗೈಡ್ ಮಾಡಿದ್ದೀನಿ.  ನನ್ ಗೈಡೆನ್ಸನ್ನ ಮೀರಲ್ಲ ಅವ್ನು.  ಅವ್ನು ಯಾವುದೇ ತಾಪತ್ರಯ ಇಲ್ದೇ ಯೂನಿವರ್ಸಿಟೀನ ಬಿಟ್ಟುಹೋಗೋದಿಕ್ಕೆ ನೀವು ಹೆಲ್ಪ್ ಮಾಡಿದ್ರೆ ಸಾಕು."  ಎದುರಾಳಿಯ ಕೊರಳಿನ ಮೇಲೆ ಅವನದೇ ಕತ್ತಿಯನ್ನು ಮೆಲ್ಲಗೆ ಆಡಿಸಿದಳು.
ಪ್ರೊಫೆಸರ್ ಸೆಂಗೋಟ್ಟೈಯವರಿಗೆ ನೆಮ್ಮದಿಯೆನಿಸಿತು.  ಕಣ್ಣುಮುಚ್ಚಿದರು.  ಹಾಗೇ ಜೋಂಪು ಹತ್ತಿತು.  ನಿದ್ದೆಯಲ್ಲೊಂದು ಬಣ್ಣದ ಕನಸು...
ಅವರಿಗೆ ಎಚ್ಚರಾವಾದಾಗ ಕನಿಮೊಳಿ ಚಹಾದ ಲೋಟ ಹಿಡಿದು ನಿಂತಿದ್ದಳು.  ಅವಳು ಸ್ನಾನ ಮಾಡಿ ಒಗೆದ ನೈಟಿ ಧರಿಸಿದ್ದಳು.
ಚಹಾದ ಲೋಟವನ್ನು ತೆಗೆದುಕೊಳ್ಳಲು ಕೈಚಾಚಿದ ಪ್ರೊಫೆಸರ್ ಸೆಂಗೋಟ್ಟೈ ಗಕ್ಕನೆ ಕೈ ಹಿಂತೆಗೆದರು.  ಧಡಕ್ಕನೆ ಮೇಲೆದ್ದರು.
ಕನಿಮೊಳಿ ಬೆದರಿದಳು.  "ಏನಾಯ್ತು?" ಪಿಸುಗಿದಳು.
"ನೀನೇನಾದ್ರೂ ಕಸದ ಬುಟ್ಟಿ ಖಾಲಿ ಮಾಡಿದೆಯಾ?"  ಪ್ರೊಫೆಸರರ ದನಿಯಲ್ಲಿ ಗಾಬರಿಯಿತ್ತು.
"ಇಲ್ವಲ್ಲ.  ಮನೇನ್ನ ಇನ್ನೂ ಕ್ಲೀನ್ ಮಾಡಿಲ್ಲ ನಾನು.  ನನ್ನ ಮೈ ತೊಳಕೊಂಡೆ ಅಷ್ಟೇ.  ಏನು ವಿಷಯ?"
"ಅದೇ ನೀನು ಆ ರ್‍ಯಾಸ್ಕಲ್ ಜೊತೆ ಹೋಗ್ತಿದೀನೀ ಅಂತ ಬರೆದಿಟ್ಟಿದ್ದ ಚೀಟೀನ ಕಸದ ಬುಟ್ಟಿಗೆ ಹಾಕಿದ್ದೆ. ನೀನು ಯಾವಾಗ್ಲೂ ಮಾಡೋ ಹಾಗೆ ಕಾಂಪೌಂಡ್ ಪಕ್ಕ ಕಸ ಸುರಿದ್ರೆ ಆ ಚೀಟಿ ಅಲ್ಲಿ ಇಲ್ಲಿ ಹಾರಾಡ್ಕೊಂಡು ಯಾರದಾದ್ರೂ ಮನದೊಳಗೆ ನುಗ್ಗಿಬಿಡಬೋದು.  ಆಮೇಲದು ಒಂದು ಸುತ್ತೋಲೆಯಾಗಿ ಊರುಕೇರಿ ಸುತ್ತಿ ಯೂನಿವರ್ಸಿಟಿಯ ಬಸ್ಸು ಹತ್ತಿ ಲೈಬ್ರರಿಯ ಪೀರಿಯಾಡಿಕಲ್ಸ್ ಸೆಕ್ಷನ್ ತಲುಪೋದಿಕ್ಕೆ ಹೆಚ್ಚು ಹೊತ್ತು ಬೇಕಾಗೋದಿಲ್ಲ.  ಅಲ್ಲಿಗೆ ನಾ ಕೆಟ್ಟ ಹಾಗೆ."  ಆತುರಾತುರವಾಗಿ ಹೇಳಿ ಅಡಿಗೆಮನೆಯತ್ತ ಓಡಿ ಮೂಲೆಯಲ್ಲಿದ್ದ ಕಸದ ಬುಟ್ಟಿಯನ್ನೆಳೆದುಕೊಂಡರು ಪ್ರೊಫೆಸರ್ ಸೆಂಗೋಟ್ಟೈ.  ಚಹಾದ ಲೋಟವನ್ನು ಹಿಡಿದಂತೇ ಅವರ ಹಿಂದೆ ಬಂದಳು ಕನಿಮೊಳಿ.
ಬುಟ್ಟಿಯಲ್ಲಿದ್ದ ಕಸವನ್ನೆಲ್ಲಾ ಕೆಳಗೆ ಸುರಿದು ತಿಪ್ಪೆ ಕೆದಕುವ ಕೋಳಿಯಂತೆ ಕೆದಕತೊಡಗಿದರು ಪ್ರೊಫೆಸರ್ ಸೆಂಗೋಟ್ಟೈ.  ಪಕ್ಕದಲ್ಲಿದ್ದ ಸೋಫಾದಲ್ಲಿ ಆರಾಮವಾಗಿ ಒರಗಿದ ಕನಿಮೊಳಿ ಕಣ್ಣುಗಳನ್ನು ಅರೆಮುಚ್ಚಿ ಸಣ್ಣಗೆ ನಗುತ್ತಾ ಚಹಾದ ಲೋಟಕ್ಕೆ ತುಟಿಯೊತ್ತಿದಳು.  ಅಡಿಗೆಮನೆಯಿಂದ ಹೊರಬಂದ ಬೆಕ್ಕು ಪ್ರೊಫೆಸರರು ಮತ್ತವರ ಮುಂದಿದ್ದ ಕಸದ ರಾಶಿಯ ಸುತ್ತ ಒಂದು ಸುತ್ತು ಹಾಕಿ ಮೂತಿ ತಿರುವಿ ಟಣ್ಣನೆ ಸೋಫಾದ ಮೇಲೆ ಜಿಗಿದು ಒಡತಿಯ ಮಡಿಲಲ್ಲಿ ಬೆಚ್ಚಗೆ ಹುದುಗಿ ಕಣ್ಣುಮುಚ್ಚಿತು.
ಈ ದೃಶ್ಯವನ್ನು ಕಲ್ಪಿಸಿಕೊಳ್ಳುವುದು ನಿಮಗೆ ಸಾಧ್ಯವಾಗುವುದೇ ಆದರೆ...
ಸೆಂಗೋಟ್ಟೈ - ಕನಿಮೊಳಿಯರ ದಾಂಪತ್ಯದ ಈ ಸೊಬಗು ಸೊಗಡಿನ ಕೊತ್ತಿಯಂತೆ ಸುತ್ತಲೂ ಮೂಗರಳಿಸಿ ತಿರುಗುವ ಯಾವನಾದರೂ ಕಥೆಗಳ್ಳ ನಿರ್ದೇಶಕನ ಕಾಕದೃಷ್ಟಿಗೆ ಬಿದ್ದು ಅವನದನ್ನು ಮೂಸಿ ನೆಕ್ಕಿ ಜಗಿದು ರಸವನ್ನೆಲ್ಲಾ ಕುಡಿದು ಅಳಿದುಳಿದ ಸಿಪ್ಪೆಗೆ ಒಂದು ಕೊಳಗ ತನ್ನ ಎಂಜಲು ಬೆರಸಿ ನಿಮ್ಮ ಮಧ್ಯಾಹ್ನದ ಊಟಕ್ಕೆ ಬಡಿಸಿ ಕಣ್ಣು ಮಿಟುಕಿಸುತ್ತಾ ನಿಲ್ಲುವ ಮೊದಲೇ...
ಒಮ್ಮೆ ಪ್ರಯತ್ನಿಸಿ.

--***೦೦೦೦೦೦೦***--

ಮೇ ೨೦೦೭

No comments:

Post a Comment