ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Wednesday, August 28, 2013

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ದೈವನಿಂದೆ: ಕೆಲವು ಚಿಂತನೆಗಳು




ಇಂದಿನ "ವಿಜಯವಾಣಿ" ದೈನಿಕದಲ್ಲಿನ ನನ್ನ "ಜಗದಗಲ" ಅಂಕಣದಲ್ಲಿ ಪ್ರಕಟವಾಗಿರುವ ಲೇಖನ ಮೂಲಪಾಠ

ಹಿಂದೂ ದೈವ ಗಣಪತಿಯನ್ನು ನಕಾರಾತ್ಮಕವಾಗಿ ಚಿತ್ರಿಸಿರುವ "ಢುಂಢಿ ಅರಣ್ಯಕನೊಬ್ಬ ಗಣಪತಿಯಾದ ಕಥೆ" ಎಂಬ ಕನ್ನಡ ಕೃತಿಯೊಂದು ನಾಡಿನಾದ್ಯಂತ ಟೀಕೆಗೊಳಗಾಗುತ್ತಿದೆ.  ಹಾಗೆ ನೋಡಿದರೆ ಹಿಂದೂ ದೇವದೇವತೆಗಳನ್ನು ನಕಾರಾತ್ಮಕವಾಗಿ ಚಿತ್ರಿಸುವುದು ಇದೇನೂ ಹೊಸದಲ್ಲ.  ವಿದೇಶಗಳಲ್ಲಿ ಹಲಬಗೆಯಲ್ಲಿ ಬಹಳ ಕಾಲದಿಂದಲೂ ನಡೆದುಕೊಂಡು ಬಂದಿರುವ ಈ ತಿರಸ್ಕಾರಯೋಗ್ಯ ಚಟುವಟಿಕೆ ಕೆಲವರ್ಷಗಳ ಹಿಂದೆ ನಮ್ಮಲ್ಲೂ ಕಾಣಿಸಿಕೊಂಡಿತು.  ನಾಲ್ಕು ವರ್ಷಗಳ ಹಿಂದೆ ನ್ಯೂಲೈಫ್ ಎಂಬ ಕ್ರಿಶ್ಚಿಯನ್ ಸಂಸ್ಥೆ ಕರಾವಳಿ ಪ್ರದೇಶಗಳಲ್ಲಿ ವಿತರಿಸಿದ ಹೊತ್ತಿಗೆಯಲ್ಲಿ ರಾಮನ ಬಗ್ಗೆ ಇದ್ದಿತೆನ್ನಲಾದ ಅವಹೇಳನಕಾರಿಯಾದ ಮಾತುಗಳು, ಅವು ಮಂಗಳೂರಿನಲ್ಲಿ ಸೃಷ್ಟಿಸಿದ ಅಶಾಂತಿಯ ಹಿನ್ನೆಲೆಯಲ್ಲಿ ನನಗೆ ಮತ್ತೊಂದು ಕುತೂಹಲಕರ ಸಂಗತಿ ನೆನಪಿಗೆ ಬರುತ್ತದೆ.  ರಾಮನ ಬಗ್ಗೆ ಪ್ರಾಯಶಃ ನ್ಯೂಲೈಫ್ ಹೊತ್ತಿಗೆಯಲ್ಲಿದ್ದುಕ್ಕಿಂತಲೂ ಅವಹೇಳನಕಾರಿಯಾದ ಮಾತುಗಳಿದ್ದ ಪುಸ್ತಕವೊಂದು ಕನ್ನಡದಲ್ಲಿ ಮೂವತ್ತು ವರ್ಷಗಳ ಹಿಂದೆಯೇ ಬಂದಿದೆ.  ಹಿಂದೂ ಧಾರ್ಮಿಕ/ಸಾಮಾಜಿಕ ಸಂಸ್ಥೆಯೊಂದರ ಸಕ್ರಿಯ ಸದಸ್ಯರೊಬ್ಬರು ರಚಿಸಿದ, ರಾಜ್ಯದ ಪ್ರಮುಖ ಪ್ರಕಾಶನ ಸಂಸ್ಥೆಯೊಂದು ಪ್ರಕಟಿಸಿದ, ರಾಮನ ಜತೆಗೆ ಅನೇಕ ಹಿಂದೂ ದೇವರುಗಳ ಬಗ್ಗೆ ಕಟ್ಟಾ ಹಿಂದೂಗಳಿಗೆ ಮರ್ಮಾಘಾತವಾಗುವಂತಹ ಮಾತುಗಳಿರುವ ಈ ಪುಸ್ತಕ ಮರುಮುದ್ರಣಗಳನ್ನೂ ಕಂಡಿದೆ.  ಅಷ್ಟೇ ಅಲ್ಲ, ಅದರ ಪುಕ್ಕಟೆ ವಿತರಣೆಗೆಂದೇ ಒಬ್ಬರು ಧನಸಹಾಯ ಮಾಡಿದ್ದಾರೆ.  ಈ ಹಿನ್ನೆಲೆಯೊಂದಿಗೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ವಿಶ್ವಾದ್ಯಂತ ಧಾರ್ಮಿಕ ನಂಬಿಕೆಗಳನ್ನು ಘಾಸಿಗೊಳಿಸುವ ಚಟುವಟಿಕೆಗಳ ಪರಿಚಯ ಮತ್ತು ವಿಶ್ಲೇಷಣೆ ಈ ಲೇಖನದ ವಸ್ತುವಿಷಯ.
 ಕೋಟ್ಯಾಂತರ ಜನ ಪೂಜ್ಯಭಾವನೆ ಹೊಂದಿರುವ ರಾಮ, ಜೀಸಸ್, ಮಹಮದ್ ಮುಂತಾದ ಅನೇಕ ಹೆಸರುಗಳನ್ನು ಲೇವಡಿ ಮಾಡುವ ಪ್ರವೃತ್ತಿ ಇಂದು ನಿನ್ನೆಯದಲ್ಲ.  ಎಂಟು - ಒಂಬತ್ತು ಶತಮಾನಗಳ ಹಿಂದೆಯೇ ಕ್ರೂಸೇಡ್‌ಗಳ ಕಾಲದಲ್ಲಿ ಯೂರೋಪಿನ ಕ್ರಿಶ್ಚಿಯನ್ನರು ಪ್ರವಾದಿ ಮಹಮದ್‌ರನ್ನು Mahound ಎಂದು ಕರೆದು ಹೀಯಾಳಿಸಿದ್ದರು.  ನಮ್ಮ ಕಾಲದಲ್ಲಿ ಸಲ್ಮಾನ್ ರಶ್ದೀ ತನ್ನ "Satanic Verses"ನಲ್ಲಿ ಈ ಪದಪ್ರಯೋಗ ಮಾಡಿ ವಿಶ್ವಾದ್ಯಂತ ಮುಸ್ಲಿಂ ಶ್ರದ್ಧಾಳುಗಳ ಮನ ನೋಯಿಸಿದರು.  ನಿಜ ಹೇಳಬೇಕೆಂದರೆ ಜೀವಂತ ಹಾಗೂ ಮೃತ ಪ್ರಸಿದ್ಧರನ್ನು ಅವಹೇಳನ ಮಾಡುವುದು ಆರಂಭದಲ್ಲಿ ರಶ್ದಿಯ ಸ್ವಭಾವವೇ ಆಗಿಹೊಗಿತ್ತು.  ತನ್ನ ಬೂಕರ್ ಪ್ರಶಸ್ತಿ ವಿಜೇತ Midnight's Childrenನಲ್ಲಿ ಆತ ದೇಶದ ಅರ್ಥವ್ಯವಸ್ಥೆಯನ್ನು ಆಗಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರ ತಲೆಗೂದಲಿಗೆ ಹೋಲಿಸಿ ಲೇವಡಿ ಮಾಡಿದ್ದರು.  ಅರ್ಥವ್ಯವಸ್ಥೆಯಲ್ಲಿದ್ದ ಬಿಳೀಹಣದ ಪ್ರಮಾಣವನ್ನು ಇಂದಿರಾಗಾಂಧಿಯವರ ತಲೆಯ ಬಲಬದಿಯಲ್ಲಿದ್ದ ಸ್ವಲ್ಪ ಬಿಳೀ ಕೂದಲಿಗೂ ಕಪ್ಪುಹಣದ ಪ್ರಮಾಣವನ್ನು ಅವರ ತಲೆಯ ಉಳಿದೆಲ್ಲಾ ಭಾಗವನ್ನು ಆವರಿಸಿಕೊಂಡಿದ್ದ ಕಪ್ಪುಕೂದಲಿಗೂ ಹೋಲಿಸಿದ್ದರು.  ನಂತರ, ಪಾಕಿಸ್ತಾನದ ಬಗೆಗಿನ ತನ್ನ Shame ಕಾದಂಬರಿಯಲ್ಲಿ ಭುಟ್ಟೋರನ್ನು ಸಂಕೇತಿಸುವ ಪಾತ್ರವೊಂದು ಸರ್ವಾಧಿಕಾರಿ ಜಿಯಾರನ್ನು ಸಂಕೇತಿಸುವ ಪಾತ್ರವನ್ನು ಕುರಾನಿನ ಮೇಲೆ ಎರಡಕ್ಕೆ ಮಾಡುವ ಹೇತ್ಲಾಂಡ ಧರ್ಮಲಂಡ (Diarrheic infidel who shits on Koran)) ಎಂದು ಬೈಯುವಂತೆ ಚಿತ್ರಿಸಿದ್ದರು.  ಈ ಕೃತಿಯನ್ನು ಜಿಯಾ ನಿಷೇಧಿಸಿದರು.  ಆನಂತರ Sಚಿಣಚಿಟಿiಛಿ ಗಿeಡಿsesನಲ್ಲಿ ಪ್ರವಾದಿ ಮಹಮದ್ ಮತ್ತು ಕುರಾನ್ ಬಗ್ಗೆ ಉಪಯೋಗಿಸಿದ ಪದಗಳು ಮತ್ತು ರೂಪಕಗಳನ್ನು ಇರಾನೀ ನಾಯಕ ಆಯತೊಲ್ಲಾ ಖೊಮೇನಿ ದೈವನಿಂದೆ (Blasphemy) ಎಂದು ತೀರ್ಮಾನಿಸಿ ತಲೆದಂಡ ಕೇಳಿದ ನಂತರವೇ ರಶ್ದಿ ತನ್ನ ಚಾಳಿ ಬಿಟ್ಟದ್ದು.  ಆದಾಗ್ಯೂ, ಇತರರು ಮಹಮದ್‌ರನ್ನು ಬರಹಗಳಲ್ಲಿ, ಕಾರ್ಟೂನ್‌ಗಳಲ್ಲಿ ಲೇವಡಿ ಮಾಡುವುದು ಪಶ್ಚಿಮದಲ್ಲಿ ಆಗೊಮ್ಮೆ ಈಗೊಮ್ಮೆ ನಡೆಯುತ್ತಲೇ ಇದೆ.  ಆರೇಳು ವರ್ಷಗಳ ಹಿಂದೆ ಡ್ಯಾನಿಷ್ ವ್ಯಂಗ್ಯಚಿತ್ರಕಾರನೊಬ್ಬ ಪ್ರವಾದಿಯವರ ತಲೆವಸ್ತ್ರಕ್ಕೆ ಬಾಂಬ್ ಸೇರಿಸಿದ್ದನ್ನು ಈ ಸಂದರ್ಭದಲ್ಲಿ ಖೇದದಿಂದ ನೆನಪು ಮಾಡಿಕೊಳ್ಳಬಹುದು.


            ಇಸ್ಲಾಂ ಅಥವಾ ಬೇರಾವುದೇ ಧರ್ಮದ ಸಂಕೇತಗಳಿಗೆ ಅವಮಾನವೆಸಗುವ, ಅವಮಾನಿಸಿದವರನ್ನು ರಕ್ಷಿಸಿ ತಾವು ಅಭಿವ್ಯಕ್ತಿ ಸ್ವಾತಂತ್ರದ ಸಮರ್ಥಕರೆಂದು ಘೋಷಿಸಿಕೊಳ್ಳುವ ಪಾಶ್ಚಿಮಾತ್ಯ ಸಮಾಜಗಳು ಮತ್ತು ಸರಕಾರಗಳು ಕ್ರೈಸ್ತ ಧರ್ಮದ ಸಂಕೇತಗಳಿಗೆ ಅವಮಾನವಾದಾಗ ಹೇಗೆ ವರ್ತಿಸುತ್ತವೆ ಎನ್ನುವುದು ಕುತೂಹಲಕರ.  ಐವತ್ತರ ದಶಕದಲ್ಲಿ ಗ್ರೀಕ್ ಲೇಖಕ ನಿಕೋಸ್ ಕಝಾನ್‌ತ್ಸಾಕಿಸ್ ತನ್ನ ಕಾದಂಬರಿ“The Last Temptation of Jesus Christ”ನಲ್ಲಿ ಮೇರಿ ಮ್ಯಾಗ್ಡಲೀನಾ ಮತ್ತು ಜೀಸಸ್ ನಡುವಿನ ಶಾರೀರಿಕ ಸಂಬಂಧದ ಬಗ್ಗೆ ಬರೆದಾಗ ಅದು ಪಾಶ್ಚಿಮಾತ್ಯ ಕ್ರಿಶ್ಚಿಯನ್ ಸಮಾಜಗಳಲ್ಲಿ ಕಡು ಟೀಕೆಗೊಳಗಾಯಿತು.  ಕಾದಂಬರಿಯನ್ನು ಬ್ರಿಟಿಷ್ ಸರಕಾರ ನಿಷೇಧಿಸಿತು.


ಈ ಸಂದರ್ಭದಲ್ಲಿ ಎಂ. ಎಫ್. ಹುಸೇನ್‌ರ ಚಿತ್ರಗಳ ಬಗೆಗೂ ಉಲ್ಲೇಖಿಸುವುದು ಅವಶ್ಯಕ.  ಅವರು ಹಿಂದೂ ದೇವತೆಗಳನ್ನು ನಗ್ನವಾಗಿ ಚಿತ್ರಿಸಿರುವುದನ್ನು ತಪ್ಪಲ್ಲವೆಂದು ಭಾವಿಸಿದರೂ ಆ ಚಿತ್ರಗಳು ಸಂಕೇತಿಸುವ ವಿಚಾರಗಳು ಒಪ್ಪತಕ್ಕವಲ್ಲ.  ಗಣಪತಿಯ ತಲೆಯ ಮೇಲೆ ಕುಳಿತಿರುವ ನಗ್ನ ಲಕ್ಷ್ಮಿಯ ಚಿತ್ರ, ಸಿಂಹ ಮತ್ತು ಪಾರ್ವತಿ ಇರುವ ಚಿತ್ರ, ರಾವಣ, ಸೀತೆ ಮತ್ತು ಹನುಮಂತ ಇರುವ ಚಿತ್ರಗಳು ಕೆಲವು ಉದಾಹರಣೆಗಳಷ್ಟೇ.  ಇದೇ ಹುಸೇನ್ ತನ್ನ ತಾಯಿ, ಮಗಳು, ಮುಸ್ಲಿಂ ಅರಸರು, ಕವಿಗಳು ಮತ್ತು ತತ್ವಜ್ಞಾನಿಗಳನ್ನು ಪೂರ್ಣ ಉಡುಪಿನಲ್ಲಿ ಚಿತ್ರಿಸುತ್ತಾರೆ.  ನಕಾರಾತ್ಮಕ ವಿಚಾರಗಳನ್ನು ಸೂಚಿಸುವಂತಹ ಹಿಂದು ದೇವತೆಗಳ ಚಿತ್ರಗಳ ಜತೆ ಆತ ನಗ್ನವಾಗಿ ಚಿತ್ರಿಸಿರುವುದು ನನಗೆ ತಿಳಿದಂತೆ ಒಬ್ಬ ಬ್ರಾಹ್ಮಣ ಮತ್ತು ಜರ್ಮನ್ ಸರ್ವಾಧಿಕಾರಿ ಹಿಟ್ಲರ್‌ನನ್ನು ಮಾತ್ರ.  ಇದನ್ನು ತಪ್ಪು ಎನ್ನಲಾಗದು, ಅದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವ ವಾದವನ್ನು ನಾನು ಒಪ್ಪುವುದಿಲ್ಲ.  ಕಲೆ ಅಥವಾ ಸಾಹಿತ್ಯ ಮತ್ತೊಬ್ಬರ ನಂಬಿಕೆಗಳನ್ನು ಅವಮಾನಿಸುವ ಸ್ವಾತಂತ್ಯ್ರವನ್ನು ನಮಗೆ ನೀಡುವುದಿಲ್ಲ.  ಇದು ಸ್ವಾತಂತ್ರ್ಯದ ದುರುಪಯೋಗ.  ಹುಸೇನ್‌ರ ತಪ್ಪಿನಲ್ಲಿ ಅವರನ್ನು ಸಮರ್ಥಿಸುವವರದೂ ಪಾಲಿದೆ.
            ಇಡೀ ಪ್ರಕರಣದಲ್ಲಿ ನನಗೆ ತುಂಬಾ ಬೇಸರವನ್ನುಂಟುಮಾಡಿದ್ದೆಂದರೆ ಹುಸೇನರ ನಡವಳಿಕೆ.  ‘ನನ್ನಿಂದ ತಪ್ಪಾಗಿದೆ ಎಂಬ ಎರಡು ಪದಗಳು ಅವರ ಬಾಯಿಂದ ಬರಲೇ ಇಲ್ಲ.  ಒಂದೇ ಒಂದು ಸಲ ಆ ಮಾತುಗಗಳನ್ನು ಅವರು ಉಚ್ಚರಿಸಿದ್ದರೂ ಸಾಕಿತ್ತು, ಈ ನಾಡು ಅವರನ್ನು ಕ್ಷಮಿಸಿ ಅಪ್ಪಿಕೊಳ್ಳುತ್ತಿತ್ತು.  ಹಾಗೆ ಮಾಡುವ ಸುಸಂಸ್ಕೃತ ನಡವಳಿಕೆಗೆ ಬದಲಾಗಿ ಹುಸೇನ್ ಆಯ್ದುಕೊಂಡದ್ದು ದೇಶ ತೊರೆಯುವ ನಿರ್ಧಾರ.  ದುಬೈನಲ್ಲಿ ಅವರು ಹೆಚ್ಚುಕಾಲ ಬದುಕಲಿಲ್ಲವಾದರೂ ಇರುವಷ್ಟು ಕಾಲ ಸುರಕ್ಷಿತವಾಗಿಯೇ ಇದ್ದರು.  ಯಾಕೆಂದರೆ ಇಸ್ಲಾಂಗೆ ಸಂಬಂಧಿಸಿದ ವ್ಯಕ್ತಿಗಳನ್ನು ಮತ್ತು ಸಂಕೇತಗಳನ್ನು ಅವರು ತಮ್ಮ ಚಿತ್ರಗಳಲ್ಲಿ ಅವಮಾನಿಸಲಿಲ್ಲ.  ಹಿಂದೂ ಸಂಕೇತಗಳನ್ನು ಚಿತ್ರಿಸಿದ ಬಗೆಯಲ್ಲಿ ಇಸ್ಲಾಂ ಬಗ್ಗೆ ಒಂದೇ ಒಂದು ಚಿತ್ರ ರಚಿಸಿದ್ದರೂ ದುಬೈ ಇರಲಿ ಪ್ರಪಂಚದ ಯಾವುದೇ ಭಾಗದಲ್ಲಿ ಅವರು ನಿಶ್ಚಿಂತೆಯಿಂದ ಇರಲು ಸಾಧ್ಯವಾಗುತ್ತಿರಲಿಲ್ಲ.
            ಇಲ್ಲಿ, ಭಾರತಮಾತೆಯನ್ನು ಸೂಚಿಸುವ ಹುಸೇನ್‌ರ ಚಿತ್ರದ ಪ್ರಸ್ತಾಪವೂ ಅಗತ್ಯ.  ಈ ಚಿತ್ರದಲ್ಲಿ ನಗ್ನ ಭಾರತಮಾತೆಯ ಜತೆ ಅಶೋಕ ಚಕ್ರದಂತಹ ರಾಷ್ಟ್ರೀಯ ಚಿನ್ಹೆಗಳೂ ನಕಾರಾತ್ಮಕ ಬಗೆಯಲ್ಲಿ ಉಪಯೋಗಿಸಲ್ಪಟ್ಟಿವೆ.  ಭಾರತಮಾತೆ ಎಂಬ ದೇವತೆಯೇನೂ ಇಲ್ಲ.  ಕನ್ನಡಾಂಬೆ, ತೆಲುಗುತಲ್ಲಿ ಮುಂತಾದವುಗಳ ಹಾಗೆ ಇದೊಂದು ಭಾವುಕ ಕಲ್ಪನೆಯಷ್ಟೇ.  ಆದರೂ ಈ ಕಲ್ಪನೆ ಕೋಟ್ಯಾಂತರ ಮಂದಿಯ ಮನದಲ್ಲಿ ಪವಿತ್ರ ಸ್ಥಾನ ಗಳಿಸಿರುವುದನ್ನು ಅಲ್ಲಗಳೆಯಲಾಗುವುದಿಲ್ಲ.  ಸ್ವಾತಂತ್ರ್ಯಹೋರಾಟದಲ್ಲಿ ಭಾರತಮಾತೆ ಎಂಬ ಕಲ್ಪನೆ ಹೊಮ್ಮಿಸಿದ ಸ್ಪೂರ್ತಿ ಯಾವ ದೇವತೆಗೂ ಕಡಿಮೆಯಿಲ್ಲ.  ಕೋಟ್ಯಾಂತರ ಜನರಿಗೆ ಭಾರತಮಾತೆ ಎಂದರೆ ತಾಯಿಯೇ.  ಆದರೆ ಹುಸೇನ್‌ರಂಥವರು ಮತ್ತವರ ಬೆಂಬಲಿಗರು ಇದನ್ನು ಅರ್ಥ ಮಾಡಿಕೊಳ್ಳುವುದಿಲ್ಲ.  ಹಾಗೆ ನೋಡಿದರೆ ಮಾತೆ ಅಥವಾ ತಾಯಿ ಎಂಬ ಪೂಜನೀಯ ವ್ಯಕ್ತಿಯನ್ನು ಹಿಂದಿದ್ದ ಉನ್ನತಸ್ಥಾನದಿಂದ ಕೆಳಗಿಳಿಸುವ ಪ್ರಕ್ರಿಯ ಇಂದಿನ ಜಗತ್ತಿನಲ್ಲಿ ಜಾರಿಯಲ್ಲಿರುವುದೂ ಕಾಣುತ್ತದೆ.  ಇದಕ್ಕೆ ಸಂಬಂಧಿಸಿದಂತೆ ತೊಂಬತ್ತರ ದಶಕದ ಉತ್ತರಾರ್ಧದ ಮಿಸ್ ಯೂನಿವರ್ಸ್ ಸ್ಪರ್ಧೆಯೊಂದು ನನಗೆ ನೆನಪಾಗುತ್ತದೆ.  ಆ ಸ್ಪರ್ಧೆಯಲ್ಲಿ ರಾಣಿ ಜಯರಾಜ್ ಎಂಬ ಭಾರತೀಯ ಸುಂದರಿಯೊಬ್ಬಳು ಅಂತಿಮ ಸುತ್ತು ತಲುಪಿದ್ದಳು.  ಅವಳಿಗೂ ಪ್ರಶಸ್ತಿಗೂ ಇದ್ದ ಅಂತರವೆಂದರೆ ಒಂದು ಪ್ರಶ್ನೆಗೆ ಉತ್ತರ ಮಾತ್ರ.  "ನಿಮ್ಮ ಮೇಲೆ ಪ್ರಭಾವ ಬೀರಿದ ಮಹಿಳೆ ಯಾರು?" ಎಂಬ ತೀರ್ಪುಗಾರರ ಪ್ರಶ್ನೆಗೆ ಅಕೆ ಉತ್ತರಿಸಿದ್ದು ನನ್ನ ತಾಯಿ ಎಂದು.  ಮಾರ್ಗರೇಟ್ ಥ್ಯಾಚರ್, ಇಂದಿರಾಗಾಂಧಿ, ಮದರ್ ಥೆರೆಸಾ, ಕೊನೇಪಕ್ಷ, ಲೇಡಿ ಡಯಾನಾರಂತಹ ಹೆಸರುಗಳನ್ನು ನಿರೀಕ್ಷಿಸಿದ್ದ ತೀರ್ಪುಗಾರರಿಗೆ ರಾಣಿಯ ಉತ್ತರ ಸಮ್ಮತವಾಗಲಿಲ್ಲ.  ಆಕೆಗೆ ಕಿರೀಟ ಸಿಗಲಿಲ್ಲ.  ಆದರೆ ಇಲ್ಲಿನ ಪ್ರಶ್ನೆ ವಿಶ್ವಸುಂದರಿ ಕಿರೀಟದ್ದಲ್ಲ.  ವ್ಯಕ್ತಿಯೊಬ್ಬರಿಗೆ ತನ್ನ ತಾಯಿ ಮಾದರಿಯಾಗುವುದು ಸಾಧ್ಯವಿಲ್ಲವೇ?  ಈ ದಿನಗಳಲ್ಲಿ ತಾಯಿ ಅಂತಹ ಯೋಗ್ಯತೆ, ಸಾಮರ್ಥ್ಯಗಳನ್ನು ಕಳೆದುಕೊಂಡಿದ್ದಾಳೆಯೇ?  ಆ ತೀರ್ಪುಗಾರರು ತಮ್ಮ ತಾಯಂದಿರಿಂದ ಯಾವ ಸ್ಪೂರ್ತಿಯನ್ನೂ ಪಡೆಯಲಿಲ್ಲ ಅಂದರೆ ಉಳಿದರೂ ಪಡೆಯಲಿಲ್ಲವೇ?  ಆ ಅಯೋಗ್ಯ ತೀರ್ಪುಗಾರರೂ, ಹುಸೇನರಂಥವರೂ ತಾಯಿಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಬದಲಿಸಿಕೊಳ್ಳುವ ಅಗತ್ಯವಿದೆ.
            ರಾಮ, ಕೃಷ್ಣ, ಜೀಸಸ್, ಮೇರಿ, ಮಹಮದ್ ಮುಂತಾದವರನ್ನು ಮಹಾತ್ಮರು, ದೇವರು ಎಂದು ನಂಬಿ ಆರಾಧಿಸುವ ಕೋಟ್ಯಾಂತರ ಜನ ಈ ಭೂಮಿಯಲ್ಲಿದ್ದಾರೆ ಎಂಬ ಸತ್ಯವನ್ನು ನಾವು ಮರೆಯಬಾರದು.  ಅವರ ನಂಬಿಕೆಗಳನ್ನು ಘಾಸಿಗೊಳಿಸುವ ಸ್ವಾತಂತ್ರ್ಯವನ್ನು ಕಲೆ ಅಥವಾ ಸಾಹಿತ್ಯ ನಮಗೆ ಕೊಡುವುದಿಲ್ಲ ಎಂಬ ಪ್ರಜ್ಞೆ ನಮಗಿರಬೇಕು.  ಇನ್ನೊಬ್ಬರ ಭಾವನೆಗಳನ್ನು ನೋಯಿಸದೇ ಮಹಾನ್ ಸಾಹಿತಿ, ಚಿತ್ರಕಾರರಾಗುವ ಹೇರಳ ಅವಕಾಶಗಳು ನಮಗಿವೆ.  ಮನುಷ್ಯಪ್ರೀತಿ, ಮಾನವತೆಯ ಕಾಳಜಿ ಇಲ್ಲದ ಕಲೆ ಮತ್ತು ಸಾಹಿತ್ಯಗಳಿಂದ ಒಳಿತಿಗಿಂತಲೂ ಕೆಡುಕೇ ಆಗುತ್ತದೆ.
            ಈ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ನೀಳ್ಗತೆ "ಗತ - ಗತಿ"ಯ ("ಬೊಳ್ಳೊಣಕಯ್ಯ" ಸಂಕಲನದಲ್ಲಿದೆ) ಪಾತ್ರವೊಂದರ ಮಾತುಗಳೊಂದಿಗೆ ಲೇಖನವನ್ನು ಪೂರ್ಣಗೊಳಿಸುವುದು ಸೂಕ್ತ:
"ರಾಮಸೀತೆಯರ ಬಗ್ಗೆಯಾಗಲೀ, ಜೀಸಸ್ ಬಗ್ಗೆಯಾಗಲೀ ಅಥವಾ ಮಹಮದ್ದರ ಬಗ್ಗೆಯಾಗಲೀ ನಮಗೆ ನಂಬಿಕೆ ಗೌರವ ಇಲ್ಲದಿದ್ದರೆ ಏನೂ ನಷ್ಟ ಇಲ್ಲ.  ಆದ್ರೆ ಅವರನ್ನ ದೇವರುಗಳು ಮಹಾತ್ಮರು ಅಂತ ಪೂಜಿಸೋ ಗೌರವಿಸೋ ಕೋಟ್ಯಾಂತರ ಜನ ಈ ಭೂಮಿ ಮೇಲಿದ್ದಾರೆ ಅನ್ನೋದನ್ನ ನಾವು ಮರೀಬಾರದು... ಇದನ್ನ ಅರೀದೇ ಜನ ನೆರೆಮನೆಯವನ ಹಾದರದ ಬಗ್ಗೆ ಮಾತಾಡೋವಷ್ಟೇ ಹಗುರವಾಗಿ ಜೀಸಸ್ - ಮೇರಿ ಮ್ಯಾಗ್ಡಲೀನ ಬಗ್ಗೆ ಮಾತಾಡ್ತಾರೆ, ರಾಮ ಹೆಂಡ ಕುಡೀತಿದ್ದ ಅಂತ ಹೇಳಿಕೆ ಕೊಡ್ತಾರೆ.  ಬಾಯಿಗೆ ಬಂದದ್ದು ಒದರಿಕೊಂಡು ಬೀದಿಯಲ್ಲಿ ಹೋಗೋ ಒಬ್ಬ ಅರೆಹುಚ್ಚನ ಬಗ್ಗೆ ಮಾತಾಡೋವಷ್ಟೆ ಕ್ಷುಲ್ಲಕವಾಗಿ ಪ್ರವಾದಿ ಮಹಮದ್ದರ ಬಗ್ಗೆ ಮಾತಾಡ್ತಾರೆ...  ದುರಂತ ಅಂದ್ರೆ ಇಂಥವರ ಮಾತುಗಳಿಗೆ ಪ್ರಚಾರ ಕೊಡೋ ಪತ್ರಿಕೆಗಳ ಒಂದು ಗುಂಪೇ ಇದೆ.  ಪ್ರಗತಿಯ ಲಕ್ಷಣ ಅಂದರೆ ಮತ್ತೊಬ್ಬರ ನಂಬಿಕೆಗಳನ್ನ ಲೇವಡಿ ಮಾಡೋದು ಅನ್ನೋ ವಿಲಕ್ಷಣ ಸಂಸ್ಕೃತಿಯನ್ನ ಈ ಪತ್ರಿಕೆಗಳು ಹುಟ್ಟು ಹಾಕ್ತಾ ಇವೆ.  ಮದುವೆಮನೆಯಲ್ಲಿ ಬಾಸಿಂಗ ಕಟ್ಟಿಕೊಂಡ ಮದುಮಗ, ಶವಯಾತ್ರೆಯಲ್ಲಿ ಸಿಂಗರಿಸಿದ ಹೆಣ ಆಗೋ ತೆವಲು ಇರೋ ಕೆಲವು ಬುದ್ಧಿಜೀವಿಗಳು ಎಲ್ಲದಕ್ಕೂ ಬಾಯಿ ಹಾಕ್ತಾ ಇಂಥಾ ಪತ್ರಿಕೆಗಳ ಮೂಲಕ ಸದಾ ಸುದ್ಧಿಯಲ್ಲಿರ್ತಾರೆ.  ಆದರೆ ಬುದ್ಧಿಜೀವಿಯೊಬ್ಬ ಸುದ್ಧಿಜೀವಿಯಾದ್ರೆ ಅವನು ಲದ್ದಿಜೀವಿಯಾಗೋ ಕಾಲ ದೂರ ಇಲ್ಲ ಅನ್ನೋದು ಇವರಿಗೆ ಗೊತ್ತಿಲ್ಲ."

2 comments:

  1. ರಾಮ, ಕೃಷ್ಣ, ಜೀಸಸ್, ಮೇರಿ, ಮಹಮದ್ ಮುಂತಾದವರನ್ನು ಮಹಾತ್ಮರು, ದೇವರು ಎಂದು ನಂಬಿ ಆರಾಧಿಸುವ ಕೋಟ್ಯಾಂತರ ಜನ ಈ ಭೂಮಿಯಲ್ಲಿದ್ದಾರೆ ಎಂಬ ಸತ್ಯವನ್ನು ನಾವು ಮರೆಯಬಾರದು. ಅವರ ನಂಬಿಕೆಗಳನ್ನು ಘಾಸಿಗೊಳಿಸುವ ಸ್ವಾತಂತ್ರ್ಯವನ್ನು ಕಲೆ ಅಥವಾ ಸಾಹಿತ್ಯ ನಮಗೆ ಕೊಡುವುದಿಲ್ಲ ಎಂಬ ಪ್ರಜ್ಞೆ ನಮಗಿರಬೇಕು. >>>>- ತೂಕಭರಿತ ಲೇಖನ.. ತುಂಬಾ ಇಷ್ಟವಾಯ್ತು ಸರ್.

    -ತೇಜಸ್ವಿನಿ.

    ReplyDelete
    Replies
    1. Dear ma'am, I am happy you liked my thoughts. Thank you so much for your kind words.

      Delete