ಇಂಟರ್‌ನೆಟ್ ಮತ್ತು ಹ್ಯಾಂಬರ್ಗರ್‌ಗಳ ನಡುವಿನ ಏನಾದರೂ ಆಗಿರಬಹುದು
ಎಂದು ಸೂಸಾನ್ ಸ್ಟ್ರೇಂಜ್ ವರ್ಣಿಸುವ, ಒಂದು ನಿರ್ದಿಷ್ಟ ಹಾಗೂ ನಿರ್ಣಾಯಕ ವ್ಯಾಖ್ಯಾನಕ್ಕೆ ಸಿಗದ ಜಾಗತೀಕರಣ
ಕಳೆದೆರಡು ದಶಕಗಳಲ್ಲಿ ಬದುಕಿನ ಬಹುತೇಕ ಎಲ್ಲ ಅಯಾಮಗಳನ್ನೂ ಬದಲಿಸಿಬಿಟ್ಟಿರುವುದಂತೂ ನಿಜ. ಉದ್ಯೋಗಾವಕಾಶದಲ್ಲಿನ ವಿಪುಲತೆ, ವೈವಿಧ್ಯತೆ
ಹಾಗೂ ಅನಿಶ್ಚಿತತೆ ಯುವಜನಾಂಗದ ಆರ್ಥಿಕ ಬದುಕನ್ನು ರೋಲರ್ ಕೋಸ್ಟರ್‌ನಲ್ಲಿ ಕೂರಿಸಿರುವ ಕಾರಣದಿಂದಾಗಿ
ಅವರ ಕೌಟುಂಬಿಕ ಹಾಗೂ ಸಾಮಾಜಿಕ ಮೌಲ್ಯಗಳು ತೀವ್ರತರದಲ್ಲಿ ಪಲ್ಲಟಗೊಳ್ಳುತ್ತಿವೆ.
ತಂದೆಯ ವೃತ್ತಿಯನ್ನು
ಮಗ ಜೀವಮಾನವಿಡೀ ಸಾಗಿಸಿ ಮುಂದಿನ ತಲೆಮಾರಿಗೆ ವರ್ಗಾಯಿಸುತ್ತಿದ್ದ ಕಾಲದಲ್ಲಿ ತಲೆಮಾರುಗಳ ನಡುವೆ
ಅಭಿಪ್ರಾಯಭೇದಗಳು ಕನಿಷ್ಟವಾಗಿದ್ದು ಪರಸ್ಪರ ಅವಲಂಬನೆ, ಅರಿವಿನ
ವರ್ಗಾವಣೆ ಹೆಚ್ಚಿನ ಪ್ರಮಾಣದಲ್ಲಿತ್ತು. ಬದುಕಿನ
ಪ್ರಶ್ನೆಗಳಿಗೆ ಒಂದು ತಲೆಮಾರು ಕಂಡುಕೊಂಡ ಉತ್ತರಗಳು ಮುಂದಿನ ಹಲವಾರು ತಲೆಮಾರುಗಳಿಗೆ ದೀವಿಗೆಯಾಗುತ್ತಿದ್ದವು. ಆದೆಲ್ಲವೂ ಈಗ ಬದಲಾಗುತ್ತಿದೆ. ಜಾಗತೀಕರಣ ಮುಂದಿಟ್ಟಿರುವ ಹೊಸಹೊಸ ಅವಕಾಶಗಳ ಹಾದಿಯಲ್ಲಿ
ಮುನ್ನುಗ್ಗುತ್ತಿರುವ ಇಂದಿನ ಯುವಜನಾಂಗ ತನಗೆದುರಾಗುತ್ತಿರುವ ಹೊಚ್ಚಹೊಸ ಪ್ರಶ್ನೆಗಳಿಗೆ ತಾನೇ ಉತ್ತರಗಳನ್ನು
ಕಂಡುಕೊಳ್ಳಬೇಕಾದ ಅನಿವಾರ್ಯ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡೇ ಮುಂದೆ ಸಾಗಬೇಕಾಗಿದೆ.. ಇದರಿಂದಾಗಿ ಇಂದಿನ ತಲೆಮಾರಿನ ಇಷ್ಟಾನಿಷ್ಟಗಳು, ಭಾವನೆಬವಣೆಗಳು
ಬದಲಾಗಿ, ಅದು ಬದುಕನ್ನು ನೋಡುವ ಬಗೆಯೂ ಬದಲಾಗುತ್ತಿದೆ. ಇದನ್ನು ಎರಡು ಉದಾಹರಣೆಗಳ ಮೂಲಕ ಸಾಂಕೇತಿಕವಾಗಿ ಚಿತ್ರಿಸಬಹುದು. ಒಂದು- ಎರಡುಮೂರು ವರ್ಷಗಳ ಹಿಂದೆ ಕೇರಳದಲ್ಲಿ ನಡೆದ ಸರ್ವೇ
ಒಂದರಲ್ಲಿ ಗಂಡ ಮತ್ತು ಉದ್ಯೋಗದ ನಡುವೆ ಆಯ್ಕೆ ಇರುವುದಾದರೆ ಉದ್ಯೋಗವನ್ನೇ ಆಯ್ದುಕೊಳ್ಳುವುದಾಗಿ
ಹೆಚ್ಚಿನ ಹೆಂಗೆಳೆಯರು ಬಯಸುವುದು ಕಂಡುಬಂದಿತ್ತು.
ಎರಡು- ಮೈಸೂರು ಮಲ್ಲಿಗೆಯ ರಾಯರು ರಾತ್ರಿಯಲ್ಲಿ ಮಾವನ ಮನೆಗೆ ಬಂದಾಗ ಪದುಮಳು ಒಳಗಿಲ್ಲ ಎಂದು
ತಿಳಿದು ನಿರಾಶೆಗೊಂಡಂತೆ ಇಂದಿನ ರಾಯರುಗಳು ನಿರಾಶೆಗೊಳ್ಳುವ ಪ್ರಮೇಯವಿರುವುದಿಲ್ಲ. ಯಾಕೆಂದರೆ ಇಂದಿನ ಪದುಮ ಒಳಹೊರಗಿನ ನಡುವಿನ ಗೆರೆಯನ್ನು
ಅಳಿಸಿಹಾಕಿದ್ದಾಳೆ ಮತ್ತು ಲೇಖಕ ಜೋಗಿಯವರ ಮಾತಿನಲ್ಲಿ ಹೇಳುವುದಾದರೆ, ಯಾವಾಗಲೂ
ಜತೆಯಲ್ಲೇ ಇರುತ್ತಾಳೆ ಮತ್ತು ಸ್ಯಾನಿಟರಿ ನ್ಯಾಪ್‌ಕಿನ್ ತಂದುಕೊಂಡುವಂತೆ ರಾಯರನ್ನೇ ಕೇಳುತ್ತಾಳೆ.
ಇಂದಿನ ಬದುಕಿನಲ್ಲಿ
ಗೋಚರವಾಗುತ್ತಿರುವ ಈ ಬಗೆಯ ಸ್ಥಿತ್ಯಂತರಗಳಿಂದಾಗಿಯೇ ಈ ಹೊಸ ಕಾಲದ ಹೊಸ ಸಾಹಿತ್ಯಕ ಅಭಿವ್ಯಕ್ತಿ ಮಹತ್ವ
ಪಡೆದುಕೊಳ್ಳುತ್ತದೆ. ಹಿಂದೆಂದೂ ಕಂಡಿರದ ಹೊಚ್ಚಹೊಸ
ಬದುಕೊಂದರ ಅನಾವರಣವನ್ನು ಇಂದಿನ ತಲೆಮಾರಿನ ಸಾಹಿತ್ಯದಲ್ಲಿ ನಿರೀಕ್ಷಿಸಬಹುದಾಗಿದೆ. ಈ ನಿರೀಕ್ಷೆ ಹುಸಿಯಾಗದಂತೆ, ಬದಲಾಗುತ್ತಿರುವ
ಬದುಕು, ಬದುಕಿನ ಮೌಲ್ಯಗಳು ಬಿಂಬಿತವಾಗುವಂತಹ ಸಾಹಿತ್ಯ ನಾಡಿನ ಒಳಹೊರಗಿನ ಬರಹಗಾರರಿಂದ
ರಚಿತವಾಗುತ್ತಿದೆ.
ಆದರಿದು ಹಳಿತಪ್ಪಿದೆಯೋ
ಎಂಬ ಆತಂಕವೂ ಉಂಟಾಗುತ್ತದೆ. ಓದುಗನತ್ತ ಉಡಾಫೆ ತೋರುವ, ಹೊಸ ಬದುಕಿನ
ಚಿತ್ರಣದ ಬದಲು ಜಾಗತೀಕರಣ ಜಗತ್ತಿನ ಮೂಲೆಮೂಲೆಗಳಿಂದ ಎತ್ತಿ ತಂದು ಸುರಿಯುತ್ತಿರುವ ಹೊಸ ಪದಗಳ ದೊಂಬರಾಟವೇ
ಸಾಹಿತ್ಯವಾಗುತ್ತಿರುವ ಅಪಾಯವೂ ಕಾಣುತ್ತಿದೆ. ಜತೆಗೇ, ಕಥೆಗಳಿಗೆ
ಪತ್ರಿಕೆಯ ಮೂರನೇ ಪುಟದ ಸುದ್ದಿಯ ಗಾತ್ರ ಹಾಗೂ ಸ್ವರೂಪವನ್ನು ನೀಡುವ ಪ್ರಯತ್ನವೂ ನಡೆಯುತ್ತಿದೆ. ಇದಕ್ಕೆ ಓದುಗನ ಸಮಯಾಭಾವವನ್ನು ಕಾರಣವೆಂದು ಮುಂದೆ ಮಾಡುತ್ತಿದ್ದರೂ
ನಿಜವಾಗಿ ಇದರ ಹಿಂದಿರುವುದು ಲೇಖಕನ ಸಮಯಾಭಾವ ಮತ್ತು ಸೋಮಾರಿತನ, ಏನನ್ನಾದರೂ
ಸಾಹಿತ್ಯದ ಹೆಸರಿನಲ್ಲಿ ತೇಲಿಬಿಡಬಹುದು ಎಂಬ ಉಡಾಫೆ.
ಇದು ಸಾಲದು ಎಂಬಂತೆ ಸಾಹಿತ್ಯದ ವಿವಿಧ ಪ್ರಕಾರಗಳ ಬಗೆಗಿನ, ಅವುಗಳ
ನಡುವಿನ ಹೋಲಿಕೆವ್ಯತ್ಯಾಸಗಳ ಬಗೆಗಿನ ಇದುವರೆಗಿನ ಪರಿಕಲ್ಪನೆಗಳನ್ನೇ ಅಸಡ್ಡೆಯಿಂದ ದೂರ ತಳ್ಳಿ ಹೈಬ್ರಿಡ್
ಪ್ರಕಾರಗಳನ್ನು ಸೃಷ್ಟಿಸುವ ಕ್ರಿಯೆಯೂ ಜಾರಿಯಲ್ಲಿದೆ.
ಹಿಂದಿನ ನಗೆಬರಹಗಳು ಇಂದು ಲಲಿತಪ್ರಬಂಧಗಳೆಂದು ಹಣೆಪಟ್ಟಿ ಹಚ್ಚಿಸಿಕೊಂಡು ಚಲಾವಣೆಗಿಳಿಯುತ್ತಿರುವ
ಪ್ರಕ್ರಿಯೆ, ಅವುಗಳಿಗೆ ದೊರೆಯುತ್ತಿರುವ ಪ್ರಚಾರ ನಾಳಿನ ಸಾಹಿತ್ಯದ ಬಗ್ಗೆ ಆತಂಕವನ್ನುಂಟುಮಾಡುತ್ತದೆ. ಸಮುದ್ರಮಥನ ಈಗಷ್ಟೇ ಅರಂಭವಾಗಿದೆ, ಅಮೃತಕ್ಕಾಗಿ
ಕಾಯಬೇಕು ಎಂದು ನಮ್ಮನ್ನು ನಾವು ಸಮಾಧಾನಿಸಿಕೊಳ್ಳಬೇಕಷ್ಟೇ.
ಪತ್ರಿಕೆಗಳು ಹೆಚ್ಚಿದಂತೆ
ಇ-ಜರ್ನಲ್‌ಗಳೂ ಹೆಚ್ಚುತ್ತಿರುವುದು ಹೆಚ್ಚುಹೆಚ್ಚು ಬರಹಗಳನ್ನು ಹೆಚ್ಚುಹೆಚ್ಚು ಓದುಗರಿಗೆ ತಲುಪಿಸಲು
ಸಹಕಾರಿಯಾಗುತ್ತಿರುವುದು ಈ ದಿನದ ಮತ್ತೊಂದು ಸಕಾರಾತ್ಮಕ ಬೆಳವಣಿಗೆ. ಇವುಗಳ ಜತೆ ಬ್ಲಾಗ್‌ಗಳು ಮತ್ತು ಸಾಮಾಜಿಕ ಜಾಲತಾಣಗಳೂ ಸಹಾ
ಅಭಿವ್ಯಕ್ತಿಗೆ, ಹೊಸ ಬರಹಗಾರರ ಉದಯಕ್ಕೆ ವೇದಿಕೆಯಾಗುತ್ತಿವೆ. ಹಿಂದಿನಂತೆ ಬರಹಗಳನ್ನು ಪತ್ರಿಕೆಗಳಿಗೆ ರವಾನಿಸಿ ವಾರಗಟ್ಟಲೆ, ತಿಂಗಳುಗಟ್ಟಲೆ
ಅಂಚೆಯಣ್ಣನ ಬೈಸಿಕಲ್‌ನ ಟ್ರಿಣ್ ಟ್ರಿಣ್‌ಗಾಗಿ ಕಿವಿಗೊಟ್ಟು ಕಾದುನಿಲ್ಲುವಂತಹ ಪರಿಸ್ಥಿತಿ ಈಗಿಲ್ಲ. ಥಟಕ್ಕನೆ ಸ್ಫುರಿಸಿದ ಭಾವವೊಂದನ್ನು ಥಟ್ಟನೆ ಅಕ್ಷರಕ್ಕಿಳಿಸಿ
ಕಣ್ಣುಮುಚ್ಚಿ ಕಣ್ಣುತೆರೆಯುವಷ್ಟರಲ್ಲಿ ಓದುಗರಿಗೆ ತಲುಪಿಸುವ ಅವಕಾಶವನ್ನು ಅಂತರ್ಜಾಲ ಒದಗಿಸಿಕೊಟ್ಟಿದೆ. ಇಲ್ಲಿ ಸಂತೋಷದ ಜತೆಗೇ ಆತಂಕವನ್ನೂ ಉಂಟುಮಾಡುವ ಅಂಶಗಳಿವೆ. ಒಂದುಕ್ಷಣದ ಸೃಜನಶೀಲ ಒರತೆಯಿಂದ ಒಂದು ಚಂದದ ವಾಕ್ಯ, ಹೆಚ್ಚೆಂದರೆ
ಒಂದು ಸುಂದರ ಅರ್ಥಪೂರ್ಣ ಪ್ಯಾರಾಗ್ರಾಫ್ ಸೃಷ್ಟಿಯಾಗಬಹುದಷ್ಟೇ. ಅದನ್ನೊಂದು ಕಥೆಯಾಗಿಸಲು ತುಸು ಧೀರ್ಘ ಧ್ಯಾನಸ್ಥ ಮನಸ್ಥಿತಿಯ
ಅಗತ್ಯವಿರುತ್ತದೆ. ಈ ಮನಸ್ಥಿತಿಗೆ ಇಂದು ಹೆಚ್ಚಿನ
ಬರಹಗಾರರು ತಯಾರಾಗಿಲ್ಲ.
ಎಷ್ಟಾದರೂ, ಈಗಲೂ
ಸಾಹಿತ್ಯದ ಅಭಿವ್ಯಕ್ತಿಗೆ ಮುದ್ರಣ ಮಾಧ್ಯಮವೇ ಅತ್ಯುತ್ತಮ ವೇದಿಕೆಯಾಗಿ ಉಳಿದಿದೆ ಎನ್ನುವುದನ್ನು
ಅಲ್ಲಗಳೆಯಲಾಗುವುದಿಲ್ಲ. ಆದರೆ ಮುದ್ರಣ ಮಾಧ್ಯಮದಲ್ಲಿ
ಇತ್ತೀಚೆಗೆ ಒಂದು ಕ್ಯಾನ್ಸರ್‌ನಂತೆ ಹರಡಿಕೊಳ್ಳುತ್ತಿರುವ ಸ್ವಜನಪಕ್ಷಪಾತ ಹೆಚ್ಚಿನ ಹೊಸಬರಹಗಾರರನ್ನು
ದಿಕ್ಕೆಡಿಸುತ್ತಿದೆ. ಆಯಕಟ್ಟಿನಲ್ಲಿರುವವರ ಸಂಪರ್ಕದ
ಅಗತ್ಯ ಸರಕಾರೀ ಕಚೇರಿಗಳಂತೆ ಪತ್ರಿಕಾ ಕಚೇರಿಗಳಲ್ಲೂ ಮುಖ್ಯವಾಗುತ್ತಿದೆ. ಇಷ್ಟಾಗಿಯೂ, ಹೊಸಬರಹಗಾರರು
ನಿರಾಶಾವಾದಿಗಳಾಗದೇ ತಾಳ್ಮೆವಹಿಸಿದರೆ ಅವರಿಗೆ ಅಗತ್ಯವಾದ ವೇದಿಕೆ ಮುದ್ರಣ ಮಾಧ್ಯಮದಲ್ಲಿ ಸಿಕ್ಕೇ
ಸಿಗುತ್ತದೆ. ಈ ನಿಟ್ಟಿನಲ್ಲಿ ಹೊಸಬರು ಗಮನಿಸಬೇಕಾದ
ಅಂಶವೊಂದಿದೆ:
ಸಂಪಾದಕರು ಬದಲಾದಂತೆ
ಪತ್ರಿಕೆಯ ಧೋರಣೆಗಳೂ ಬದಲಾಗುತ್ತವೆ. ಪತ್ರಿಕೆಗಳು
ಮನೆಗಳ ಹಾಗೆ, ಸಂಪಾದಕರು ಅಲ್ಲಿ ಬಾಡಿಗೆಗಿರುವ ಜನರ ಹಾಗೆ. ಒಂದು ಮನೆಯಲ್ಲಿ ವಾಸಿಸುವ ಜನರಿಗೆ ಹೇಗೋ ನಿಮ್ಮ ಬಗ್ಗೆ
ಆದರ ಮೂಡಿರುತ್ತದೆ. ನೀವು ಹೋದಾಗಲೆಲ್ಲಾ ಅವರು ನಗುಮೊಗದಿಂದ
ಆದರಿಸುತ್ತಾರೆ. ಕೆಲಕಾಲಾನಂತರ ಅವರು ಆ ಮನೆ ಬಿಟ್ಟು
ಬೇರೆತ್ತಲೋ ಹೊರಟುಹೋಗುತ್ತಾರೆ. ಆ ಮನೆಗೆ ಬೇರೊಬ್ಬರು
ವಾಸಕ್ಕೆ ಬರುತ್ತಾರೆ. ಮನೆ ಹಾಗೇ ಇದೆಯಲ್ಲ, ಅದೇ ಗೋಡೆಗಳು, ಅದೇ ಬಾಗಿಲು
ಕಿಟಕಿಗಳು, ನಮಗೆ ಈಗಲೂ ಅಲ್ಲಿ ಅದೇ ಹಿಂದಿನ ಸ್ವಾಗತ ಸಿಗುತ್ತದೆ ಎಂದುಕೊಂಡು ನೀವು
ಆ ಮನೆಗೆ ಹೋಗುತ್ತೀರಿ. ನಿಮ್ಮ ನಿರೀಕ್ಷೆಗೆ ವಿರುದ್ಧವಾಗಿ
ಆ ಮನೆಯಲ್ಲಿ ಈಗಿರುವ ಜನ ನಿಮ್ಮನ್ನು ಆದರಿಸುವುದಿಲ್ಲ.
ಕಾರಣ ಇಷ್ಟೇ- ಆದರಿಸಲು ಅವರಿಗೆ ಅವರದೇ ಆದ ಸ್ನೇಹಿತರಿರುತ್ತಾರೆ. ನಿಮ್ಮನ್ನು ಆದರಿಸುವ ಆಗತ್ಯ ಅವರಿಗಿರುವುದಿಲ್ಲ. ಇನ್ನೊಂದು ಮನೆ.
ಅಲ್ಲಿನ ನಿವಾಸಿಗಳಿಗೆ ನಿಮ್ಮ ಬಗ್ಗೆ ಮಮತೆ.
ಅದು ಅವರದ್ದೇ ಸ್ವಂತ ಮನೆಯಾದ್ದರಿಂದ ಅವರು ಆ ಮನೆ ಬಿಟ್ಟು ಬೇರೆಡೆ ಹೋಗುವ ಮಾತೇ ಇಲ್ಲ. ಹೀಗಾಗಿ ನಿಮಗೆ ಆ ಮನೆಯಲ್ಲಿ ನಿರಂತರ ಸ್ವಾಗತ! ಆ ಸ್ವಾಗತದಲ್ಲಿ ಏರುಪೇರಾಗುವುದು ನಿಮ್ಮಿಂದ ಅಪಚಾರವೇನಾದರೂ
ಘಟಿಸಿದರೆ ಮಾತ್ರ. ಹಾಗಾಗದಂತೆ ನೀವು ಎಚ್ಚರಿಕೆ ವಹಿಸಿದರಾಯಿತು. ಬರಹಗಾರರಾಗಿ ಗುರುತಿಸಿಕೊಳ್ಳುವ ಬಯಕೆ ನಿಮಗಿದ್ದರೆ, ಅದಕ್ಕಾಗಿ
ನೀವು ಪ್ರಾಮಾಣಿಕವಾಗಿ ಪ್ರಯತ್ನಿಸುವುದೇ ಆದರೆ, ಆರು ತಿಂಗಳಿಗೊಮ್ಮೆ ಮೂರು
ತಿಂಗಳಿಗೊಮ್ಮೆ ಸಂಪಾದಕರು/ಉಪಸಂಪಾದಕರು ಬದಲಾಗುವ ಪತ್ರಿಕೆಗಳಲ್ಲಿ ನಿಮ್ಮ ಅದೃಷ್ಟವನ್ನು ಪರೀಕ್ಷಿಸಲು
ಹೋಗಬೇಡಿ. ಒಂದೇ ಒಡೆತನದಲ್ಲಿ ಅಥವಾ ಒಂದೇ ಸಂಪಾದಕವರ್ಗದ
ಕೈಯಲ್ಲಿರುವ ಪತ್ರಿಕೆಗಳಲ್ಲಿ ವಿಶ್ವಾಸ ಗಳಿಸಿಕೊಳ್ಳಲು ಪ್ರಯತ್ನಿಸಿ. ಗಳಿಸಿದ ಮೇಲೆ ಅದನ್ನು ಉಳಿಸಿಕೊಳ್ಳಲು ನಿರಂತರ ಶ್ರಮಿಸಿ.
***
*** ***
No comments:
Post a Comment