ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Tuesday, January 29, 2013

ಹೇಡಿ ಹಿಂದೂ ಮತ್ತು ಪರಾಕ್ರಮಿ ಮುಸ್ಲಿಂ: ಮೂಢನಂಬಿಕೆಗಳ ಶೋಧದಲ್ಲಿ


"ವಿಜಯವಾಣಿ" ದೈನಿಕದ "ಜಗದಗಲ" ಅಂಕಣದಲ್ಲಿ ಮೂರು ವಾರಗಳಲ್ಲಿ ಪ್ರಕಟವಾದ ಲೇಖನ ಸರಣಿ
 
1. ಮೂಢನಂಬಿಕೆಗಳ ಶೋಧದಲ್ಲಿ

             ಆಂಧ್ರಪ್ರದೇಶ ವಿಧಾನಸಭಾ ಸದಸ್ಯ, ಮಜ್ಲಿಸ್-ಇ-ಇತ್ತೆಹಾದ್ ಅಲ್-ಮುಸ್ಲಿಮೀನ್ ಪಕ್ಷದ ನಾಯಕ ಅಕ್ಬರುದ್ದೀನ್ ಒವೈಸಿ ಡಿಸೆಂಬರ್ ೮ರಿಂದ ೨೪ರವರೆಗೆ ನಿಜಾಮಾಬಾದ್ ನಗರ, ಅದಿಲಾಬಾದ್ ಜಿಲ್ಲೆಯ ನಿರ್ಮಲ್ ಪಟ್ಟಣ ಸೇರಿದಂತೆ ಉತ್ತರ ಆಂಧ್ರದ ವಿವಿಧ ಸ್ಥಳಗಳಲ್ಲಿ ಮಾಡಿದ ಸಾರ್ವಜನಿಕ ಭಾಷಣಗಳಲ್ಲಿ ಹಿಂದೂಗಳ ಬಗ್ಗೆ ಆಡಿದ ಮಾತುಗಳು ವಿವಾದವನ್ನು ಸೃಷ್ಟಿಸಿರುವುದು ಎಲ್ಲರಿಗೂ ತಿಳಿದದ್ದೇ.  ಹಾಗೆ ನೋಡಿದರೆ ಒವೈಸಿ ವಿವಾದಾಸ್ಪದ ಹೇಳಿಕೆಗಳನ್ನು ಕೊಟ್ಟದ್ದು ಇದೇ ಮೊದಲಲ್ಲ.  ಅವರ ಈ ಬಗೆಯ ಅನುಚಿತ ಹಾಗೂ ಆಕ್ಷೇಪಾರ್ಹ ವರ್ತನೆಯ ಬಗ್ಗೆ ಕಳೆದ ಐದುವರ್ಷಗಳಿಂದೀಚೆಗೇ ಹಲವಾರು ಉದಾಹರಣೆಗಳು ದೊರೆಯುತ್ತವೆ.  ಆಗಸ್ಟ್ ೨೦೦೭ರಲ್ಲಿ ಬೂಕರ್ ಪ್ರಶಸ್ತಿ ವಿಜೇತ ಲೇಖಕ ಸಲ್ಮಾನ್ ರಶ್ದಿ ಮತ್ತು ಬಾಂಗ್ಲಾ ಲೇಖಕಿ ತಸ್ಲಿಮಾ ನಸ್ರೀನ್‌ರ ತಲೆದಂಡದ ಬಗೆಗಿನ ಫತ್ವಾಗಳ ಪರವಾಗಿ ಒವೈಸಿ ಮಾತಾಡಿದ್ದರು.  ತಸ್ಲಿಮಾರ ಬಗ್ಗೆ ಒವೈಸಿ ಅಂದೆಂತಹ ಆಕ್ರೋಶ ವ್ಯಕ್ತ ಪಡಿಸಿದರೆಂದರೆ ಫತ್ವಾಗೆ ಅನುಗುಣವಾಗಿ ಈ ಹೆಂಗಸಿನ ತಲೆ ಕಡಿಯುವುದು ನಮಗೆ ಬೇಕಾಗಿದೆ ಎಂದು ಹೇಳಿದ್ದರು.   ನಂತರ ೨೦೧೧ರಲ್ಲಿ ಮಾಜಿ ಪ್ರಧಾನಿ ಪಿ. ವಿ. ನರಸಿಂಹರಾವ್ ಮರಣ ಹೊಂದದೇ ಇದ್ದಿದ್ದರೆ ತಾವೇ ತಮ್ಮ ಕೈಯಾರೆ ಅವರನ್ನು ಕೊಲ್ಲುತ್ತಿದ್ದುದಾಗಿ ಕರ್ನೂಲ್‌ನಲ್ಲಿ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು.  ರಾವ್ ಅವರ ಬಗ್ಗೆ ಒವೈಸಿ ಉಪಯೋಗಿಸಿದ ಉರ್ದು ಬೈಗುಳಲ್ಲಿ ಕೆಲವು ಚೋರ್ (ಕಳ್ಳ), ಕಾತಿಲ್ (ಕೊಲೆಗಾರ) ದರಿಂದಾ (ರಕ್ಕಸ) ಎಂದಿದ್ದವು.  ಅದನ್ನು ಕೇಳಲು ರಾವ್ ಬದುಕಿರಲಿಲ್ಲ ಮತ್ತು ಅವರಿಗೆ ಸೋನಿಯಾ ನೇತೃತ್ವದ ಕಾಂಗ್ರೆಸ್ ದಶಕದ ಹಿಂದೆಯೇ ಘಟಶ್ರಾದ್ಧ ಮಾಡಿಬಿಟ್ಟಿದ್ದ ಕಾರಣದಿಂದಾಗಿ ಮಾನನಷ್ಟ ಮೊಕದ್ದಮೆ ಎದುರಿಸುದರಿಂದ ಒಬೈಸಿ ಬಚಾವಾದರು.

ತನ್ನನ್ನು ತಾನು ಭಾರತೀಯ ಮುಸ್ಲಿಮರ ಉದ್ಧಾರಕನೆಂದು ನಂಬಿರುವ ಒವೈಸಿ ಹಿಂದೂಗಳ ಬಗ್ಗೆ, ಹಿಂದೂ ದೇವರಾದ ರಾಮ ಮತ್ತವನ ತಾಯಿ ಕೌಸಲ್ಯಾ ಬಗ್ಗೆ, ರಾಮನ ಜನ್ಮದ ಬಗ್ಗೆ, ಹೈದರಾಬಾದಿನಲ್ಲಿರುವ ಭಾಗ್ಯಲಕ್ಷ್ಮಿ ದೇವಸ್ಥಾನದ ಬಗ್ಗೆ ತೀರಾ ಅವಹೇಳನಕಾರಿಯಾದ ಮಾತುಗಳನ್ನು ಕಳೆದ ಒಂದು ವರ್ಷದಲ್ಲೇ ಹೈದರಾಬಾದ್ ಸೇರಿದಂತೆ ಆಂಧ್ರದ ಹಲವು ಕಡೆ ಸಾರ್ವಜನಿಕವಾಗಿ ಮತ್ತೆಮತ್ತೆ ಆಡುತ್ತಾ ಬಂದಿದ್ದಾರೆ.  ಸರಿಸುಮಾರು ಈ ಎಲ್ಲ ಭಾಷಣಗಣಲ್ಲಿ ಒಂದು ಬಿಲಿಯನ್ ಹೇಡಿ ಹಿಂದೂಗಳಿಗಿಂತ ಇನ್ನೂರೈವತ್ತು ದಶಲಕ್ಷ ವೀರ ಮುಸ್ಲಿಮರು ಎಷ್ಟು ಶಕ್ತಿವಂತರು ಎಂದು ತೋರಿಸುವ ಪ್ರಯತ್ನ ನಡೆದಾಗೆಲ್ಲಾ ಷಂಡ ಪೋಲೀಸ್ ಪಡೆ ಮಧ್ಯೆ ಪ್ರವೇಶಿಸುತ್ತದೆ ಎಂದು ಆಕ್ಷೇಪಿಸಿದ್ದಾರೆ.

            ಈಗ ಸುದ್ದಿ ಮಾಡುತ್ತಿರುವ, ಡಿಸೆಂಬರ್ ೨೪ರಂದು ಅದಿಲಾಬಾದ್ ಜಿಲ್ಲೆಯ ನಿರ್ಮಲ್ ಪಟ್ಟಣದಲ್ಲಿ ೨೦-೨೫ ಸಾವಿರ ಮುಸ್ಲಿಮ್ ಸಭಿಕರಿದ್ದ ಸಭೆಯಲ್ಲಿನ ತನ್ನ ಎರಡು ತಾಸುಗಳ ಧೀರ್ಘ ಭಾಷಣದಲ್ಲಿ ಅಮೆರಿಕಾ, ಪೋಲೀಸ್ ಪಡೆ, ಹಿಂದೂ ದೇವತೆಗಳು, ಆರ್‌ಎಸ್‌ಎಸ್, ವಿಶ್ವ ಹಿಂದೂ ಪರಿಷದ್, ಬಿಜೆಪಿ ಹಾಗೂ ನರೆಂದ್ರ ಮೋದಿಯವರ ಬಗ್ಗೆ ನಿಂದನಾರ್ಹ ಮಾತುಗಳನ್ನಾಡುವುದರ ಜತೆಗೇ ಪೋಲೀಸ್ ಪಡೆ ಸುಮ್ಮನಿದ್ದರೆ ನೂರು ಕೋಟಿ ಹಿಂದೂಗಳು ಮತ್ತು ಇಪ್ಪತ್ತೈದು ಕೋಟಿ ಮುಸ್ಲಿಮರಲ್ಲಿ ಯಾರು ಹೆಚ್ಚು ಶಕ್ತಿಶಾಲಿಗಳು ಎನ್ನುವುದನ್ನು ಹದಿನೈದು ನಿಮಿಷಗಳಲ್ಲಿ ತೋರಿಸುತ್ತೇವೆ ಎಂದು ನಲವತ್ತೆರಡು ವರ್ಷ ವಯಸ್ಸಿನ ಒವೈಸಿ ಘೋಷಿಸಿದರು.

            ಆದರೆ, ಹಿಂದೂಗಳು ಹೇಡಿಗಳು, ಮುಸ್ಲಿಮರ ಮುಂದೆ ಅವರು ಏನೇನೂ ಅಲ್ಲ ಎನ್ನುವ ನಂಬಿಕೆ ಹೊಂದಿರುವವರಲ್ಲಿ ಅಕ್ಬರುದ್ದೀನ್ ಒವೈಸಿ ಮೊದಲಿಗರೇನೂ ಅಲ್ಲ.  ಅಂತಹ ಹೇಳಿಕೆಗಳು ಹಿಂದೆಯೂ ಬಂದಿವೆ.  ಸ್ವಾತಂತ್ರಪೂರ್ವದಲ್ಲಿ ಮುಸ್ಲಿಂ ಲೀಗ್‌ನ ಕೆಲವು ನಾಯಕರು ಹೀಗೇ ಹೇಳಿದ್ದಲ್ಲದೇ ಸ್ವಾತಂತ್ರಾನಂತರವೂ ಪಾಕಿಸ್ತಾನಿ ನಾಯಕರೂ ಇದನ್ನು ಮುಂದುವರಿಸಿಕೊಂಡು ಬಂದಿದ್ದಾರೆ.  ಇದರಲ್ಲಿ ಅತ್ಯಂತ ಪ್ರಮುಖವಾದುದು ೧೯೬೫ರ ಯುದ್ಧಕ್ಕೆ ಒಂದೆರಡು ದಿನ ಮೊದಲು ಪಾಕ್ ಅಧ್ಯಕ್ಷ ಜನರಲ್ ಮಹಮದ್ ಅಯೂಬ್ ಖಾನ್ ನೀಡಿದ ಒಬ್ಬೊಬ್ಬ ಮುಸ್ಲಿಮನೂ ನೂರಿಪ್ಪತ್ತೈದು ಹಿಂದೂಗಳಿಗೆ ಸಮ...  ಇನ್ನು ಹದಿನೈದು ದಿನಗಳಲ್ಲಿ ನಾವು ದೆಹಲಿಯಲ್ಲಿರುತ್ತೇವೆ.  ಕೆಂಪುಕೋಟೆಯಲ್ಲಿ ನಮ್ಮ ವಿಜಯದ ಕವಾಯಿತು ನಡೆಸುತ್ತೇವೆ... ಕೋಟೆಯ ಮೇಲೆ ಪಾಕಿಸ್ತಾನೀ ಧ್ವಜ ಹಾರಿಸುತ್ತೇವೆ... ಎಂಬ ಹೇಳಿಕೆ.

ಅಯೂಬ್‌ರ ಹೇಳಿಕೆಗೆ ಪಾಕಿಸ್ತಾನೀ ಸೇನಾವಲಯದಲ್ಲಿ ಅದ್ಭುತ ಪ್ರತಿಕ್ರಿಯೆ ದೊರಕಿತ್ತು.  ಯುದ್ಧದ ಅಂತಿಮ ಪರಿಣಾಮಗಳು ಅಯೂಬ್‌ರ ನಿರೀಕ್ಷೆಗೆ ವಿರುದ್ಧವಾಗಿದ್ದರೂ, ಆ ಯುದ್ಧದಲ್ಲಿ ಮುಸ್ಲಿಂ ಪಾಕಿಸ್ತಾನ ಹಿಂದೂ ಭಾರತದ ವಿರುದ್ಧ ಗೆಲುವು ಸಾಧಿಸಿತೆಂಬ ದಂತಕತೆಯನ್ನು ಹಲವು ಉದಾಹರಣೆಗಳ ಮೂಲಕ ಆಗಿನ ಸೇನಾ ಮುಖ್ಯಸ್ಥ ಮುಹಮದ್ ಮೂಸಾ ಸೇರಿದಂತೆ ಹಲವರು ಸೃಷ್ಟಿಸಿದರು.  ಹಿಂದೂಗಳಿಗಿಂತ ಮುಸ್ಲಿಮರು ಪರಾಕ್ರಮಿಗಳು ಎನ್ನುವ ಅಭಿಪ್ರಾಯ ಮುಕ್ಕಾದಂತೆ ನೋಡಿಕೊಳ್ಳುವ ಪ್ರಯತ್ನ ಇದು.  ಅಯೂಬ್‌ರ ಹೇಳಿಕೆಗೆ ಪಾಕಿಸ್ತಾನದಲ್ಲಿ ಸಿಕ್ಕಿದ ಬೆಂಬಲದಂತೇ ಭಾರತದಲ್ಲಿ ಒವೈಸಿಯವರ ಎಲ್ಲಾ ಹಿಂದೂ ವಿರೋಧಿ ಹೇಳಿಕೆಗಳನ್ನು ಮುಸ್ಲಿಮರೇ ಇದ್ದ ಸಭೆಗಳು ಅಲ್ಲಾ ಹೋ ಅಕ್ಬರ್ ಎಂದು ಘೋಷಿಸುವುದರ ಮೂಲಕ ಸ್ವಾಗತಿವೆ.

ಈ ಹಿನ್ನೆಲೆಯೊಂದಿಗೆ, ಹೇಡಿ ಹಿಂದೂವಿಗೆ ಎದುರಾಗಿ ಪರಾಕ್ರಮಿ ಮುಸ್ಲಿಮ್ನ ಚಿತ್ರಗಳು ಸೃಷ್ಟಿಯಾಗಿ ಉಪಖಂಡದ ಮುಸ್ಲಿಂ ಸಮುದಾಯದ ಮನಸ್ಸಿನಲ್ಲಿ ನೆಲೆನಿಂತ ಐತಿಹಾಸಿಕ ಪ್ರಕ್ರಿಯೆಯ ವಿಶ್ಲೇಷಣೆ ಎರಡು ಕಂತುಗಳ ಈ ಲೇಖನದ ಉದ್ದೇಶ.

ಒಬ್ಬನ ಶಾಂತಿಪ್ರಿಯತೆ ಮತ್ತೊಬ್ಬನಿಗೆ ಹೇಡಿತನವೆನಿಸುತ್ತದೆ ಹಾಗೂ ಒಬ್ಬನ ಪರಾಕ್ರಮ ಮತ್ತೊಬ್ಬನಿಗೆ ಆಕ್ರಮಣಶೀಲತೆಯೆನಿಸುತ್ತದೆ.  ಈ ಹೇಡಿತನ ಮತ್ತು ಪರಾಕ್ರಮಗಳು ಮೂಲಭೂತವಾಗಿ ಯಾವುದೇ ಒಂದು ಧರ್ಮದ ಸ್ವತ್ತೇನಲ್ಲ ಎನ್ನುವುದು ವಿಶ್ವದ ಧಾರ್ಮಿಕ ಇತಿಹಾಸವನ್ನು ಮುಕ್ತಮನಸ್ಸಿನಿಂದ ಅವಲೋಕಿಸಿದರೆ ಸ್ಪಷ್ಟವಾಗುತ್ತದೆ.  ನಮಗೆ ಲಭ್ಯವಿರುವ ಐತಿಹಾಸಿಕ ಮಾಹಿತಿಗಳ ಪ್ರಕಾರ ಪರ್ಶಿಯನ್ನರಿಂದ ಹಿಂದೂ ಎಂಬ ಹೆಸರು ಪಡೆದ, ಈಗ ಹಿಂದೂಯಿಸಂ ಎಂದು ಗುರುತಿಸಲ್ಪಡುವ ಪುರಾತನ ಧರ್ಮದ ಮೂಲನೆಲೆ ಕ್ಯಾಸ್ಪಿಯನ್ ಸಮುದ್ರದ ಉತ್ತರದ, ಈಗ ಉಕ್ರೇನ್ ಮತು ರಶಿಯಾಗಳ ಭಾಗವಾಗಿರುವ ಅರೆಮರುಭೂಮಿ ಪ್ರದೇಶ.  ಪೂರ್ವ ತುರ್ಕಿಯಲ್ಲಿನ ಬೋಗಜ್ ಕಾಯ್ ಎಂಬಲ್ಲಿ ದೊರೆತಿರುವ ವಿಶ್ವದ ಅತ್ಯಂತ ಪುರಾತನ ಶಿಲಾಶಾಸನದಲ್ಲಿ ಮಿತ್ರ, ವರುಣ, ಅಗ್ನಿ ಮುಂತಾದ ಹಿಂದೂ ದೇವತೆಗಳ ಪ್ರಸ್ತಾಪವಿರುವುದು ಹಿಂದೂ ನಂಬಿಕೆಯ ಪ್ರಾಚೀನ ಭೌಗೋಳಿಕ ನೆಲೆಗಳ ಒಂದು ಚಿತ್ರಣ ನೀಡುತ್ತದೆ.  ಆಗಿನ ಹಿಂದೂ ಧಾರ್ಮಿಕ ನೀತಿನಿಯಮಗಳನ್ನು ಆಳವಡಿಸಿಕೊಂಡಿದ್ದ ಆರ್ಯ ಜನಾಂಗದಲ್ಲಿ ಯುದ್ಧ ಮತ್ತು ಹಿಂಸೆಯ ಅಸ್ತಿತ್ವದ ಬಗ್ಗೆ, ಆರ್ಯರ ಕ್ಷಾತ್ರಗುಣಗಳ ಬಗ್ಗೆ ನಿರಾಕರಿಸಲಾಗದಷ್ಟು ಮಾಹಿತಿಗಳಿವೆ.  ಹಾಗೆಯೇ, ಯುದ್ಧ ಮತ್ತು ಹಿಂಸೆ ಇಸ್ಲಾಮ್ ತಲೆಯೆತ್ತಿದ ಅರೇಬಿಯಾದ ಬುಡಕಟ್ಟು ಸಮುದಾಗಳ ದೈನಂದಿನ ಬದುಕಿನ ಅವಿಭಾಜ್ಯ ಭಾಗಗಳೂ ಆಗಿದ್ದವು ಮತ್ತು ಆ ಕಾರಣದಿಂದಲೇ ಆ ಜನರು ಯುದ್ಧಕಲೆಯಲ್ಲಿ ಪರಿಣಿತಿ ಸಾಧಿಸಿದ್ದರು.

ಕ್ಯಾಸ್ಪಿಯನ್ ಪ್ರದೇಶದಲ್ಲಿ ತಲೆಯೆತ್ತಿದ ಹಿಂದೂಧರ್ಮ ಭಾರತ ಉಪಖಂಡಕ್ಕೆ ವರ್ಗಾವಣೆಗೊಂಡ ನಂತರ ಹಿಂಸೆಯನ್ನು ಗಣನೀಯವಾಗಿ ತ್ಯಜಿಸಿದರೆ ಯುದ್ಧಕೋರ ಸೆಮೆಟಿಕ್ ಅರೇಬಿಯಾದಲ್ಲಿ ತಲೆಯೆತ್ತಿದ ಇಸ್ಲಾಂ ನಂತರ ಆರ್ಯ ಪರ್ಶಿಯಾ ಮತ್ತು ಅಫಘಾನಿಸ್ತಾನಕ್ಕೆ ಕಾಲಿಟ್ಟರೂ ತನ್ನ ಹಿಂಸಾಪ್ರವೃತ್ತಿಯನ್ನು ಉಳಿಸಿಕೊಂಡಿತು.  ಇಲ್ಲಿ ಉದ್ಭವವಾಗುವ ಪ್ರಶ್ನೆಗಳು ಎರಡು ಬಗೆಯವು.  ಒಂದು- ಯುದ್ಧಕೋರ, ಹಿಂಸಾಪ್ರವೃತ್ತಿಯ ಆರ್ಯ ಹಿಂದೂಗಳು ಭಾರತವೆಂಬ ಭೌಗೋಳಿಕ ಪ್ರದೇಶದಲ್ಲಿ ಈಗ ಕೆಲವರಿಂದ ಹೇಡಿತನವೆಂದು ಪರಿಗಣಿತವಾಗಿರುವ ಶಾಂತಿಪ್ರಿಯತೆಯನ್ನು ಆಳವಡಿಸಿಕೊಂಡದ್ದು ಯಾಕೆ ಮತ್ತು ಹೇಗೆ?  ಎರಡು- ಇಸ್ಲಾಮ್ ಧರ್ಮ ಇರಾನ್, ಅಫಘಾನಿಸ್ತಾನ ಮತ್ತು ಮಧ್ಯ ಏಶಿಯಾದ ಆರ್ಯರ ಧರ್ಮವಾದ ಮೇಲೂ ಯುದ್ಧೋತ್ಸಾಹ, ಆಕ್ರಮಣಶೀಲತೆಯನ್ನು ಉಳಿಸಿಕೊಂಡು ಪರಾಕ್ರಮಿ ಎನಿಸಿಕೊಳ್ಳುತ್ತಿರುವುದು ಯಾಕೆ?  ಎರಡನ್ನೂ ಒಟ್ಟಿಗೆ ಸೇರಿಸಿದರೆ ಎದುರು ನಿಲ್ಲುವ ಪ್ರಶ್ನೆ- ಒಂದು ಜನಾಂಗದಲ್ಲಿ ಹೇಡಿತನ ಮತ್ತು ಪರಾಕ್ರಮಗಳು ಮೊಳೆತು ಬೆಳೆಯಲು ಪೂರಕವಾದ ಅಂಶಗಳು ಯಾವುವು ಮತ್ತು ಇದರಲ್ಲಿ ಧರ್ಮದ ಪಾತ್ರವೇನು?

ಸತ್ಯ ಮತ್ತು ಅಹಿಂಸೆ ಬಲು ಪುರಾತನವಾದುವು (ಖಿಡಿuh ಚಿಟಿಜ ಟಿoಟಿ-vioeಟಿಛಿe ಚಿಡಿe ಚಿs oಟಜ ಚಿs iಟಟs) ಎನ್ನುವುದು ಮಹಾತ್ಮಾ ಗಾಂಧಿಯವರ ಒಂದು ಬಹುಉಲ್ಲೇಖಿತ ಹೇಳಿಕೆ.   ಇಲ್ಲಿ ಸತ್ಯವನ್ನು ಪಕ್ಕಕ್ಕಿರಿಸಿ, ಅಹಿಂಸೆ ಮತ್ತದರ ಅವಳಿಯಾದ ಶಾಂತಿ ಭಾರತದಲ್ಲಿ ಎಷ್ಟು ಪುರಾತನವಾಗಿದ್ದಿರಬಹುದು ಎಂಬುದನ್ನು ಶೋಧಿಸಹೊರಟರೆ ಅದರ ಪ್ರಥಮ ಕುರುಹುಗಳು ಉಪಖಂಡದ ಪ್ರಪ್ರಥಮ ನಾಗರೀಕತೆಯ ತೊಟ್ಟಿಲಾದ ಸಿಂಧೂಕಣಿವೆಯಲ್ಲೇ ದೊರೆಯುತ್ತವೆ.  ಸಿಂಧ್ ಕೊಳ್ಳದ ಯಾವುದೇ ಉತ್ಖನನ ಸ್ಥಳದಲ್ಲಿ ಆಯುಧಗಳು ಅಥವಾ ಮಾರಕಾಸ್ತ್ರಗಳು ಪತ್ತೆಯಾಗಿಲ್ಲ.  ಯಥೇಚ್ಛವಾಗಿ ದೊರಕಿರುವುದು ದೈನಂದಿನ ಬದುಕಿಗೆ ಅಗತ್ಯವಾದ ಉಪಕರಣಗಳು.  (ಪತ್ತೆಯಾಗಿರುವ ಕೆಲವು ಆಯುಧಗಳು ನಂತರದ ಆರ್ಯರಿಗೆ ಸಂಬಂಧಿಸಿದಂಥವು.)

            ಭಾರತ ಉಪಖಂಡ ಮೂಲತಃ ವಲಸಿಗರ ದೇಶ.  ಸಿಂಧೂ ಕಣಿವೆಯ ನಾಗರೀಕತೆಯನ್ನು ಸೃಷ್ಟಿಸಿ ಬೆಳೆಸಿದ ಜನರೂ ಸಹಾ ಹೊರಗಿನಿಂದ ಬಂದವರೇ.  ಆದರೆ ಎಲ್ಲಿಂದ ಎನ್ನುವ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.   ಚೀನಾ, ಈಜಿಪ್ಟ್, ಗ್ರೀಕ್, ರೋಮನ್, ಮಾಯನ್, ಇಂಕಾ ಮುಂತಾದ ಪ್ರಾಚೀನ ನಾಗರೀಕತೆಗಳು ನಿಧಾನವಾಗಿ ಸೃಷ್ಟಿಯಾಗಿ ಬೆಳೆಯುತ್ತಾ ಹೋದರೆ ಅವುಗಳಿಗೆ ವಿರುದ್ಧವಾಗಿ ಸುಮೇರಿಯನ್ ಮತ್ತು ಸಿಂಧೂ ಕಣಿವೆಯ ನಾಗರೀಕತೆಗಳು ಯಾವುದೇ ಪೂರ್ವತಯಾರಿಯಿಲ್ಲದೇ ಆಯಾಯಾ ಪ್ರದೇಶಗಳಲ್ಲಿ ಏಕಾಏಕಿ ಉದ್ಭವಿಸಿದಂತೆ, ಬೇರೊಂದೆಡೆಯಿಂದ ಕಿತ್ತು ತಂದು ನಾಟಿ ಹಾಕಿದಂತೆ ತೋರುತ್ತವೆ.  ಬಹುಶಃ ಯಾವುದೋ ಕಾರಣದಿಂದ ಅವಸಾನ ಹೊಂದುತ್ತಿದ್ದ ಪ್ರಾಚೀನ ನಾಗರೀಕತೆಯೊಂದರ ಅಳಿದುಳಿದ ಕೆಲವರು ಸುಮೇರಿಯಾ ಮತ್ತು ಸಿಂಧ್ ಕೊಳ್ಳಕ್ಕೆ ಆಶ್ರಯಕ್ಕಾಗಿ ವಲಸೆ ಬಂದು ಇಲ್ಲಿ ನಾಗರೀಕತೆಗಳನ್ನು ಸೃಷ್ಟಿಸಿರಬಹುದಾದ ಸಾಧ್ಯತೆ ಇಲ್ಲಿ ಕಂಡುಬರುತ್ತದೆ.  ಸಿಂಧೂ ಕಣಿವೆಯ ಪ್ರದೇಶದಲ್ಲಿ ಸಮೃದ್ಧ ನಗರವೊಂದು ಒಂಬತ್ತು ಸಾವಿರ ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ಖಚಿತ ಕುರುಹುಗಳು ಗುಜರಾತಿನ ಖಂಬಾಯತ್ ಕೊಲ್ಲಿಯಲ್ಲಿ ದೊರೆತಿರುವುದಕ್ಕೂ, ವಿಶ್ವದ ನಾಗರೀಕತೆಗಳ ಹಿರಿಯಣ್ಣನಂತೆ ಮೆರೆದಿದ್ದ ಅಟ್ಲಾಂಟಿಸ್ ನಾಗರೀಕತೆ ಹನ್ನೊಂದೂವರೆ ಸಾವಿರ ವರ್ಷಗಳ ಹಿಂದೆ ಪ್ರಾಕೃತಿಕ ಮತ್ತು ಮಾನವಪ್ರೇರಿತ ದುರಂತಗಳಿಂದ ನಾಶವಾಯಿತೆಂದು ಪ್ಲೇಟೋ ಬರೆದಿಟ್ಟಿರುವುದಕ್ಕೂ ಸಂಬಂಧ ಕಲ್ಪಿಸಿದರೆ ಭಾರತದ ಮೊಟ್ಟಮೊದಲ ನಾಗರೀಕತೆಯ ಮೂಲದ ಬಗೆಗಿನ ಪ್ರಶ್ನೆಗೆ ಉತ್ತರ ದೊರೆಯುವಂತೆ ಕಂಡರೂ ಇಲ್ಲಿ, ಈ ನಿಟ್ಟಿನಲ್ಲಿ, ನಾನು ಮುಂದುವರೆದು ಹೋಗುವುದಿಲ್ಲ.  ಈ ಲೇಖನದ ವ್ಯಾಪ್ತಿಯೊಳಗೆ ಅದು ಬರುವುದಿಲ್ಲ ಎನ್ನುವುದು ಒಂದು ಕಾರಣವಾದರೆ, ಅಲ್ಲಿಂದಾಚೆಗೆ ಊisoಡಿಥಿ ಹ್ರಸ್ವವಾಗಿ soಡಿಥಿ ಆಗಿಬಿಡಬಹುದಾದ ಅಪಾಯದ ಅರಿವೂ ನನಗಿದೆ.  ಹೊರಗಿನಿಂದ ಬಂದ ಜನಾಂಗವೊಂದು ಭಾರತದಲ್ಲಿ ನೆಲೆಸಿ ತಲೆಮಾರುಗಳು ಸರಿದುಹೋದಂತೆ ತನ್ನ ಹಿಂಸಾಪ್ರವೃತ್ತಿಯನ್ನು ಕ್ರಮೇಣವಾಗಿ ಕಳೆದುಕೊಂಡು ಶಾಂತಿಪ್ರಿಯ (ಹೇಡಿ?) ಆಗಿರಬಹುದಾದ ಪ್ರಕ್ರಿಯೆ ಸಿಂಧೂ ಕಣಿವೆ ನಾಗರೀಕತೆಯಿಂದಲೇ ಆರಂಭವಾಗಿದೆಯೆಂದು ಸೂಚಿಸಿ ನಾನು ಮುಂದೆ ಹೇಳಲಿರುವ ವಿಷಯಗಳ ಬಗ್ಗೆ ಓದುಗರಿಗೆ ಪೂರ್ವಸೂಚನೆ ನೀಡುವುದಷ್ಟೇ ಇಲ್ಲಿ ನನ್ನ ಉದ್ದೇಶ.

ನಮಗೆ ಸ್ಪಷ್ಟ ಮಾಹಿತಿ ಇರುವ ಇತಿಹಾಸದಲ್ಲೂ ಅಂದರೆ ಆರ್ಯ ಭಾರತದಲ್ಲೂ ಸಹಾ ಈ ಹೇಡಿಯಾಗುವ ಪ್ರಕ್ರಿಯೆ ಅನೂಚಾನವಾಗಿ ಜಾರಿಯಲ್ಲಿರುವುದನ್ನೂ, ಇದಕ್ಕೆ ಈ ನಾಡಿನ ಹಣೆಬರಹವನ್ನು ಬರೆದ ಹಿಂದೂ ಹಾಗೂ ಮುಸ್ಲಿಂ ಜನಾಂಗಗಳೆರಡೂ ಒಳಗಾಗಿರುವುದನ್ನೂ, ಈ ಪ್ರಕ್ರಿಯೆಗೆ ಕಾರಣವಾಗುವ ಧರ್ಮವನ್ನು ಮೀರಿದ ಅಂಶಗಳನ್ನೂ ಮುಂದಿನ ವಾರ ಪರಿಶೀಲಿಸೋಣ.

ಜನವರಿ ೮, ೨೦೧೩

 
2. ಪರಾಕ್ರಮಿ ಮುಸ್ಲಿಂನ ಐತಿಹಾಸಿಕ ಹೆಜ್ಜೆಗುರುತುಗಳು

             ಕ್ಯಾಸ್ಪಿಯನ್ ಸಮುದ್ರದ ಉತ್ತರದ ಪ್ರದೇಶಗಳಿಂದ ಕಾಕಸಸ್ ಪರ್ವತಗಳು, ಅರ್ಮೇನಿಯಾ, ಪೂರ್ವ ತುರ್ಕಿ, ಉತ್ತರ ಇರಾನ್ ಮತ್ತು ಅಫಘಾನಿಸ್ತಾನಗಳ ಮೂಲಕ ಭಾರತಕ್ಕೆ ಪ್ರವೇಶಿಸಿದ ಆರ್ಯರು ದೈಹಿಕ ಹಾಗೂ ಮಾನಸಿಕವಾಗಿ ಸಿಂಧೂ ಕಣಿವೆಯ ಜನರಿಗಿಂತ ಭಿನ್ನರಾಗಿದ್ದರು.  ಎತ್ತರವಾಗಿದ್ದು ಅಗಲ ಭುಜಗಳನ್ನು ಹೊಂದಿದ್ದ ಅವರು ಸ್ವಾಭಾವಿಕವಾಗಿಯೇ ಮಧ್ಯಮ ಎತ್ತರದ ಸಿಂಧೂ ಜನರಿಗಿಂತ ಹೆಚ್ಚಿನ ಯುದ್ಧಕಲಿಗಳಾಗಿದ್ದರು ಮತ್ತು ಮಾರಕಾಸ್ತ್ರಗಳ ಜತೆ ಕುದುರೆಗಳನ್ನೂ ಹೊಂದಿದ್ದರು.  ಈ ಎಲ್ಲಾ ಅನುಕೂಲತೆಗಳಿಂದಾಗಿ ಅವರು ಸಿಂಧ್ ಕಣಿವೆಯ ಜನರನ್ನು ನಿರಾಯಾಸವಾಗಿ ದಮನಗೈದು ಅತ್ಯಲ್ಪ ಕಾಲದಲ್ಲೇ ಇಡೀ ಉತ್ತರ ಭಾರತದ ಸಾರ್ವಭೌಮರಾದರು.  ಅಲ್ಲಿಗೆ ಅವರು ಕಟ್ಟಿಕೊಂಡು ತಂದಿದ್ದ ಕಲಿತನದ ಗಂಟು ಖಾಲಿಯಾಗಿ   ನಂತರದ ಶತಮಾನ ಹಾಗೂ ಸಹಸ್ರಮಾನಗಳಲ್ಲಿ ದಂಡೆತ್ತಿ ಬಂದ ಬಹುತೇಕ ಎಲ್ಲಾ ಪರ್ಶಿಯನ್ ಮತ್ತು ಅಫ್ಘನ್ ಅರ್ಯರ ಮುಂದೆ ಶರಣಾಗತರಾದರು.

            ಇಲ್ಲಿ ಕುತೂಹಲಕರ ವಿಷಯವೆಂದರೆ ಪರ್ಶಿಯಾ (ಇರಾನ್) ಮತ್ತು ಅಫ್ಘಾನಿಸ್ತಾನದ ಜನರು, ಭಾರತದ ಆರ್ಯರು ಈ ದೇಶಕ್ಕೆ ಬರುವ ದಾರಿಯಲ್ಲಿ ಬಿಟ್ಟುಬಂದಿದ್ದ ತಮ್ಮ ದಾಯಾದಿಗಳೇ ಆಗಿದ್ದರು.  ಆದರೆ ಪರ್ಶಿಯನ್ ಮತ್ತು ಅಫ್ಘನ್ ಆರ್ಯರು ತಮ್ಮ ಕ್ಷಾತ್ರಗುಣ ಹಾಗೂ ಯುದ್ಧೋತ್ಸಾಹಗಳನ್ನು ಉಳಿಸಿಕೊಂಡರೆ ಇದೇ ಗುಣಗಳನ್ನು ಭಾರತದ ಆರ್ಯರು ಕಳೆದುಕೊಂಡದ್ದೇಕೆ ಎಂಬ ಪ್ರಶ್ನೆ ಎದುರಾಗುತ್ತದೆ.  ಇದಕ್ಕೆ ಸಮರ್ಪಕ ಉತ್ತರಗಳು ದೊರೆಯುವುದು ಭೂಗೋಳ ಮತ್ತು ಅರ್ಥಶಾಸ್ತ್ರಗಳಲ್ಲಿ.

            ತುರುಗಾಹಿಗಳಾಗಿದ್ದ ಆರ್ಯರು ಮರುಭೂಮಿಯಾಗಿದ್ದ ತಮ್ಮ ಮೂಲಸ್ಥಾನವನ್ನು ತೊರೆದು ಪಶ್ಚಿಮದ ಯೂರೋಪ್ ಮತ್ತು ದಕ್ಷಿಣದ ತುರ್ಕಿ ಹಾಗೂ ಇರಾನ್‌ಗೆ ಹೊರಟದ್ದು ತಮಗೆ ಆಹಾರ, ತಮ್ಮ ದನಗಳಿಗೆ ಹುಲ್ಲು, ಮತ್ತು ಇಬ್ಬರಿಗೂ ಅಗತ್ಯವಾದ ಸಿಹಿನೀರನ್ನರಸಿ.  ಆದರೆ ಪರ್ವತಮಯವಾದ ಪೂರ್ವ ತುರ್ಕಿ ಹಾಗೂ ಅರ್ಮೇನಿಯಾ, ಬರಡುಗುಡ್ಡಗಳಿಂದ ಕೂಡಿದ ಇರಾನ್, ಹಿಮಾಚ್ಛಾದಿತ ಪರ್ವತಗಳಿಂದ ಆವೃತವಾದ ಅಫಫಾನಿಸ್ತಾನದಲ್ಲಿ ವೃಧ್ದಿಸುತ್ತಿದ್ದ ಆರ್ಯನ್ ಜನಸಂಖ್ಯೆಗೆ ಅಗತ್ಯವಾದ ಅನ್ನ, ನೀರು, ಹುಲ್ಲು ದೊರೆಯಲಿಲ್ಲ.  ಹೀಗಾಗಿಯೇ ಆ ಪ್ರದೇಶಗಳಲ್ಲಿನ ಹೆಚ್ಚಿನ ಆರ್ಯರು ನೀರನ್ನರಸಿ ಭಾರತಕ್ಕೆ ಬಂದರು.  ಈ ವಲಸೆ ಹತ್ತಾರು ತಲೆಮಾರುಗಳಲ್ಲಿ ಮತ್ತು ಹಲವು ಶತಮಾನಗಳ ಆವಧಿಯಲ್ಲಿ ಘಟಿಸಿತು.  ಭಾರತದಲ್ಲಿ ಆರ್ಯರಿಗೆದುರಾದ ಮೊದಲ ನದಿಯೇ ಅವರು ತಮ್ಮ ಮೂಲಸ್ಥಾನದಿಂದ ಇಲ್ಲಿಯವರೆಗಿನ ಹಾದಿಯಲ್ಲೆಲ್ಲೂ ಕಂಡಿರದಂತಹ ಸಿಹಿನೀರಿನ ಅಗಾಧ ಭಂಡಾರ.  ಸಿಂಧೂ ನಂತರ ಅವರಿಗೆದುರಾದದ್ದು ಮತ್ತೆ ಐದು ನದಿಗಳು, ನಂತರ ಎದುರಾದದ್ದು ಮತ್ತೆರಡು ಬೃಹತ್ ನದಿಗಳು- ಯಮುನಾ ಮತ್ತು ಗಂಗಾ, ಅವೆರಡರ ಆರೇಳು ಉಪನದಿಗಳು.  ಇಷ್ಟೊಂದು ಸಿಹಿನೀರನ್ನು ಆರ್ಯರು ತಮ್ಮ ಇತಿಹಾಸದಲ್ಲಿ ಕಂಡೇ ಇರಲಿಲ್ಲ.  ಈ ಅಗಾಧ ಸಿಹಿನೀರು, ಸಾವಿರಾರು ಚದರ ಮೈಲು ವಿಸ್ತಾರದ ಫಲವತ್ತಾದ ನೆಲ, ಇವೆರಡರಿಂದ ತಮಗೆ ಬೇಕಾದ್ದನ್ನೆಲ್ಲಾ ಬೆಳೆದುಕೊಳ್ಳುವ ಅವಕಾಶ!  ಅಂದರೆ ಅಲೆದಾಟದ ಬದುಕಿಗೆ ಅಂತ್ಯ!  ಹೀಗಾಗಿಯೇ ಕ್ಯಾಸ್ಪಿಯನ್ ಪ್ರದೇಶದಿಂದ ನೂರಾರು ವರ್ಷಗಳವರೆಗೆ ಅಲೆದಾಡುತ್ತಾ ಭಾರತಕ್ಕೆ ಬಂದ ಆರ್ಯರು ಬಂಗಾಲವನ್ನು ದಾಟಿ ಮುಂದೆ ಹೋಗಲಿಲ್ಲ.  ಹೋಗುವ ಅಗತ್ಯವೇ ಅವರಿಗಿರಲಿಲ್ಲ.  ಒಂದುವೇಳೆ ತುರ್ಕಿ, ಇರಾನ್ ಮತ್ತು ಅಫಘಾನಿಸ್ತಾನಗಳಂತೆ ಉತ್ತರ ಭಾರತವೂ ಹೆಚ್ಚಿನ ಜನವಸತಿಗೆ ಯೋಗ್ಯವಲ್ಲದ ಬರಡು ನೆಲವಾಗಿದ್ದರೆ ಆರ್ಯರು ಬಂಗಾಲವನ್ನೂ ದಾಟಿ ಈಗಿನ ಪೂರ್ವೋತ್ತರ ರಾಜ್ಯಗಳು, ಬರ್ಮಾ, ಥಾಯ್‌ಲ್ಯಾಂಡ್ ಮಂತಾದ ಆಗ್ನೇಯ ಏಶಿಯಾದ ದೇಶಗಳಿಗೆ ಖಂಡಿತಾ ಹೋಗುತ್ತಿದ್ದರು ಎಂದು ನಾನು ನಂಬುತ್ತೇನೆ.

            ಅನ್ನನೀರಿನ ಕೊರತೆ ನೀಗಿದ್ದೇ ಭಾರತದ ಆರ್ಯರು ತಮ್ಮ ಕ್ಷಾತ್ರಗುಣ ಅಂದರೆ mಚಿಡಿಣiಚಿಟ sಠಿiಡಿiಣ ಅನ್ನು ಕಳೆದುಕೊಳ್ಳಲು ಕಾರಣವಾಯಿತು.  ಈ ಪ್ರಕ್ರಿಯೆಗೆ ಸ್ವಲ್ಪ ವಿವರಣೆ ಅಗತ್ಯವೆನಿಸುತ್ತದೆ.

ಸಂಪನ್ಮೂಲಗಳ ಕೊರತೆ ಇರುವಾಗ, ಸೀಮಿತ ಸಂಪನ್ಮೂಲಗಳ ಸಮಾನ ಹಂಚಿಕೆಯನ್ನು ನಿರ್ವಹಿಸುವ ಖಾಯಂ ರಾಜಕೀಯ ಹಾಗೂ ಕಾನೂನು ವ್ಯವಸ್ಥೆ ಇಲ್ಲದಿದ್ದಾಗ ತಮ್ಮಲ್ಲಿರುವ ವಸ್ತುಗಳನ್ನು ಕಾಪಾಡಿಕೊಳ್ಳುವುದು, ಅವಕಾಶ ಸಿಕ್ಕಿದಾಗ ಇತರರ ವಸ್ತುಗಳನ್ನು ಕಸಿದುಕೊಳ್ಳುವುದು ಮನುಷ್ಯನ ಸ್ವಭಾವವಾಗುತ್ತದೆ.   ಇಂತಹ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಜನ ಅನುಕ್ಷಣವೂ ತಮ್ಮ ದೈಹಿಕ ಸಾಮರ್ಥ್ಯ ಹಾಗೂ ಮಾನಸಿಕ ಜಾಗರೂಕತೆಯನ್ನು ಕಾಪಾಡಿಕೊಂಡಿರಬೇಕಾಗುತ್ತದೆ.  ಹಾಗಿಲ್ಲದಿದ್ದ ಪಕ್ಷದಲ್ಲಿ ತಮ್ಮ ವಸ್ತುಗಳನ್ನೂ, ಜೀವವನ್ನೂ ಕಳೆದುಕೊಳ್ಳಬೇಕಾಗುತ್ತದೆ.

            ಸಂಪನ್ಮೂಲಗಳ ತೀವ್ರ ಕೊರತೆ ಇದ್ದ ಪಶ್ಚಿಮ ಮತ್ತು ಮಧ್ಯ ಏಶಿಯಾದ ನಾಡುಗಳಲ್ಲಿ ನೆಲೆಸಿದ ಆರ್ಯರು ಸ್ವಾಭಾವಿಕವಾಗಿಯೇ ತಮ್ಮ ಜೀವ ಹಾಗೂ ವಸ್ತುಗಳ ರಕ್ಷಣೆಗಾಗಿ ಕ್ಷಾತ್ರಗುಣವನ್ನು ಉಳಿಸಿಕೊಂಡರು.  ಪ್ರತಿದಿನದ ಬದುಕೂ ಒಂದು ಸಂಘರ್ಷವಾಗಿದ್ದ ಆ ದಿನಗಳಲ್ಲಿ ಅದು ಅಗತ್ಯವಾಗಿತ್ತು.  ಆದರೆ ಸಂಪನ್ಮೂಲಗಳು ಯಥೇಚ್ಛವಾಗಿದ್ದ ಉತ್ತರ ಭಾರತದಲ್ಲಿ ಜೀವಕ್ಕಾಗಲೀ, ಆಸ್ತಿಪಾಸ್ತಿಗಾಗಲೀ ಯಾವ ಅಪಾಯವೂ ಇರಲಿಲ್ಲ.   ಎಲ್ಲರಿಗೂ ಎಲ್ಲವೂ ಸಿಗುವಾಗ ಮತ್ತೊಬ್ಬನನ್ನು ಕೊಂದು ಅವನ ಆಸ್ತಿಯನ್ನು ಕಸಿಯುವ ಮನೊಭಾವದ ಅಗತ್ಯವಿರುವುದಿಲ್ಲ.  ಇಂತಹ ಸನ್ನಿವೇಶದಲ್ಲಿ ಅನುಕ್ಷಣವೂ ದೈಹಿಕ ಸಾಮರ್ಥ್ಯ ಹಾಗೂ ಮಾನಸಿಕ ಚಾಗರೂಕತೆಯನ್ನು ಕಾಪಾಡಿಕೊಳ್ಳುವ ಅಗತ್ಯವೂ ಇರುವುದಿಲ್ಲ.  ಹೀಗಾದಾಗ ತಲೆಮಾರುಗಳು ಉರುಳಿದಂತೆ ಕ್ಷಾತ್ರಗುಣವೂ ಕ್ರಮೇಣ ನಶಿಸಿಹೋಗುತ್ತದೆ.  ಇದರ ತಾರ್ಕಿಕ ಮುಂದುವರಿಕೆಯಾಗಿ ಶಾಂತಿಯ ಮನೋಭಾವನೆ ಸಾರ್ವತ್ರಿಕವಾಗಿ ಜನಮನದಲ್ಲಿ, ಸಂಸ್ಕೃತಿ ಸಂಪ್ರದಾಯಗಳಲ್ಲಿ ಹಾಸುಹೊಕ್ಕಾಗುತ್ತದೆ.  ಕ್ಷಾತ್ರಗುಣ ಕಡಿಮೆಯಾದಂತೆ ಶಾಂತಿ ಸಾಮುದಾಯಿಕ ಅಗತ್ಯವಾಗುವುದು ಸ್ವಾಭಾವಿಕ.  ದೈನಂದಿನ ಬದುಕಿನಲ್ಲಿ ಆಕ್ರಮಣಶೀಲತೆ ಕಡಿಮೆಯಾದಂತೆ ಧಾರ್ಮಿಕ ಮೌಲ್ಯಗಳು ಮತ್ತು ಆಚರಣೆಗಳು ಆಕ್ರಮಣಶೀಲತೆಯನ್ನು ದೂರವಿರಿಸುತ್ತವೆ, ಅಂದರೆ ಶಾಂತಿಯುತವಾಗುತ್ತದೆ.  ಹಿಂದೂಧರ್ಮ ಒಳಗಾದದ್ದು ಈ ಬದಲಾವಣೆಗೆ.  ಈ ಶಾಂತಿಪ್ರಿಯತೆ ಈ ನೆಲದಲ್ಲಿ ಕಾಲಾಂತರದಲ್ಲಿ ಉದ್ಭವವಾದ ಹೊಸ ನಂಬಿಕೆಗಳ ಮೂಲಮಂತ್ರವೂ ಆಯಿತು.

            ಈಗ ಇಸ್ಲಾಂನತ್ತ ತಿರುಗೋಣ.

            ಪ್ರವಾದಿ ಮಹಮದ್‌ರ ಬದುಕಿನ ಕೊನೆಯ ಎಂಟು ವರ್ಷಗಳಲ್ಲಿ ತುಂಬಿಹೋಗಿರುವುದು ಸಶಸ್ತ್ರ ಘರ್ಷಣೆಗಳ ಸರಣಿ.  ಪೈಗಂಬರರು ಇಸ್ಲಾಂ ಧರ್ಮದ ಸ್ಥಾಪಕರಷ್ಟೇ ಅಲ್ಲ, ಖುರೇಶ್ ನಾಯಕತ್ವದ ಅರಬ್ ಸಾಮ್ರಾಜ್ಯದ ಸ್ಥಾಪಕರೂ ಸಹಾ ಎನ್ನುವುದು ಐತಿಹಾಸಿಕ ಸತ್ಯ.  ಅವರ ಜೀವಿತಾವಧಿಯಲ್ಲಿ ಬಹುತೇಕ ಕತ್ತಿಯ ಸಹಾಯದಿಂದ ಮತ್ತು ಸ್ವಲ್ಪಮಟ್ಟಿಗೆ ಅರಬ್ ಬುಡಕಟ್ಟುಗಳ ನಡುವಿನ ಹೊಕ್ಕುಬಳಕೆಗಳ ಮೂಲಕ ಮದೀನಾ ಪಟ್ಟಣದಾಚೆಗಿನ ಅರೇಬಿಯಾ ಪರ್ಯಾಯದ್ವೀಪಕ್ಕೆ ಹರಡಿದ ಅರಬ್ ಸಾಮ್ರಾಜ್ಯವಾದ ಕ್ರಿ. ಶ. ೬೩೨ರಲ್ಲಿ ಅವರು ಕಾಲವಾದ ಮೇಲೆ ಕೇವಲ ಒಂದೇ ತಲೆಮಾರಿನಲ್ಲಿ ಕತ್ತಿಯ ಮೂಲಕ ಸಿರಿಯಾ, ಇರಾಕ್, ಪ್ಯಾಲೆಸ್ತೈನ್‌ಗಳಿಗೆ ಹಬ್ಬಿತು.  ಜತೆಗೆ ಅದು ಪೂರ್ವದಲ್ಲಿ ಸುಮಾರು ಒಂಬೈನೂರು ವರ್ಷಗಳ ಇತಿಹಾಸವಿದ್ದ ಪರ್ಶಿಯಾದ ಸಸಾನಿದ್ ಸಾಮ್ರಾಜ್ಯವನ್ನು ಧೂಳೀಪಟಗೊಳಿಸಿದ್ದಲ್ಲದೇ ಪಶ್ಚಿಮದಲ್ಲಿ ತುರ್ಕಿಯನ್ನು ಆಕ್ರಮಿಸಿಕೊಂಡು ವಿಖ್ಯಾತ ಬೈಜಾಂಟೈನ್ ಸಾಮ್ರಾಜ್ಯವನ್ನು ಕಾನ್‌ಸ್ಟಾಂಟಿನೋಪಲ್ ನಗರಕ್ಕಷ್ಟೇ ಸೀಮಿತಗೊಳಿಸಿತು.  ಮುಂದುವರೆದು ಅದು ಈಜಿಪ್ಟ್, ಉತ್ತರ ಆಫ್ರಿಕಾವನ್ನು ದಾಟಿ ಜಿಬ್ರಾಲ್ಟರ್ ಮೂಲಕ ಸ್ಪೇನ್ ಸೇರಿ ಅಲ್ಲಿನ ವಿಸಿಗೋಥ್ ರಾಜ್ಯವನ್ನು ಪದಾಕ್ರಾಂತಗೊಳಿಸಿಕೊಂಡು, ನಂತರ ಪಿರನೀಸ್‌ನಾಚೆಗಿನ ಫ್ರಾನ್ಸ್‌ಗೂ ಕಾಲಿಟ್ಟಿತು.

ಅರಬ್ ಸಾಮ್ರಾಜ್ಯವಾದದ ವೇಗ ವಿಶ್ವ ಇತಿಹಾಸದಲ್ಲಿ ಅದ್ವಿತೀಯ.  ರೋಮನ್ ಸಾಮ್ರಾಜ್ಯ ತನ್ನ ಗರಿಷ್ಟ ಮೇರೆಗಳನ್ನು ತಲುಪಲು ತೆಗೆದುಕೊಂಡದ್ದು ಪೂರ್ತಿ ಎರಡು ಶತಮಾನಗಳು.  ಆದರೆ ಅರಬ್ ಸಾಮ್ರಾಜ್ಯವಾದ ಕೇವಲ ಒಂದೆರಡು ತಲೆಮಾರುಗಳ ಆವಧಿಯಲ್ಲಿ ಇದನ್ನು ಸಾಧಿಸಿತು.   ಪ್ರವಾದಿ ಮಹಮದ್‌ರ ಕಾಲಾನಂತರದ ಒಂದು ಶತಮಾನದಲ್ಲಿ ಪಶ್ಚಿಮದ ಅಟ್ಲಾಂಟಿಕ್ ತೀರದಿಂದ ಪೂರ್ವದ ಸಿಂಧೂ ನದಿಯವರೆಗಿನ ವಿಶಾಲ ಪ್ರದೇಶದಲ್ಲಿ ಅರಬ್ ಶಾಸನವಿತ್ತು.  ಆದರೆ ಈ ಪ್ರದೇಶಗಳಲ್ಲಿ ರಾಜಕೀಯ ಹಾಗೂ ಸೇನಾ ಶಾಸನವನ್ನು ಸ್ಥಾಪಿಸುವುದರಲ್ಲಿ ಕೇವಲ ಮೂರೇ ತಲೆಮಾರುಗಳಲ್ಲಿ ಯಶಸ್ವಿಯಾದ ಅರಬ್ಬರು ಇಡೀ ಜನಸಮುದಾಯವನ್ನು ಇಸ್ಲಾಂಗೆ ಮತಾಂತರಗೊಳಿಸಲು ತೆಗೆದುಕೊಂಡ ಕಾಲ ಮೂರು ಶತಮಾನಗಳು.  ಈ ಮತಾಂತರದ ಜತೆಗೇ ಪೂರ್ವದಲ್ಲಿ ಇರಾಕ್‌ನಿಂದ ಹಿಡಿದು ಪಶ್ಚಿಮದಲ್ಲಿ ಮೊರಾಕ್ಕೋವರೆಗಿನ ವಿಶಾಲ ಪ್ರದೇಶದಲ್ಲಿ ಎಲ್ಲ ಪ್ರಮುಖ ಭಾಷೆಗಳನ್ನೂ ಮೂಲೆಗೊತ್ತಿ ಅರೇಬಿಕ್ ಅನ್ನು ಜನಭಾಷೆಯನ್ನಾಗಿಸಿದ ಮತ್ತು ಅರಬ್ ಜೀವನವಿಧಾನವನ್ನು ಸಾರ್ವತ್ರಿಕಗೊಳಿಸಿದ ಈ ಪ್ರಕ್ರಿಯೆ ಒಂದು ಅರ್ಥದಲ್ಲಿ ಮಧ್ಯಕಾಲದಲ್ಲಿ ಘಟಿಸಿದ ಮಿನಿ ಜಾಗತೀಕರಣ.

ಆದರೆ ಅರಬ್ಬರು ಕೈಗೊಂಡ ವ್ಯಾಪಕ ಮತಾಂತರವೇ ಅರಬ್ ಸಾಮ್ರಾಜ್ಯಶಾಹಿಗೆ ಮುಳುವಾಗಿ ಇಸ್ಲಾಂನ ನಾಯಕತ್ವ ಅರಬ್ಬರ ಕೈತಪ್ಪಿ ತುರ್ಕರ ಪಾಲಾಯಿತು.  ತುರ್ಕರು ಪೂರ್ವದಲ್ಲಿ ಉತ್ತರ ಭಾರತ ಮತ್ತು ಪಶ್ಚಿಮ ಚೀನಾದಲ್ಲಿ ಮುಸ್ಲಿಂ ರಾಜಪ್ರಭುತ್ವಗಳಿಗೆ ಬುನಾದಿ ಹಾಕಿದ್ದಲ್ಲದೇ ಪೂರ್ವ ಯೂರೋಪಿನಲ್ಲಿ ಕ್ರಿಶ್ಚಿಯಾನಿಟಿಯ ಬುಡವನ್ನೇ ಅಲುಗಿಸಿಬಿಟ್ಟರು.  ಕ್ರಿ. ಶ. ೧೫೪೩ರಲ್ಲಿ ಕಾನ್‌ಸ್ಟಾಂಟಿನೋಪಲ್ ನಗರವನ್ನು ಆಕ್ರಮಿಸಿಕೊಂಡ ಅವರು ಮುಂದಿನ ಒಂದು ಶತಮಾನದಲ್ಲಿ ಗ್ರೀಸ್ ಸೇರಿದಂತೆ ಇಡೀ ಆಗ್ನೇಯ ಯೂರೋಪನ್ನು ಪದಾಕ್ರಾಂತಗೊಳಿಸಿಕೊಂಡರು.  ತಮ್ಮ ಸಾಮ್ರಾಜ್ಯವಾದದ ಮುಂದುವರಿಕೆಯಾಗಿ ೧೬೮೩ರಲ್ಲಿ ಬಲಾಢ್ಯ ಆಸ್ಟ್ರಿಯನ್ ಸಾಮ್ರಾಜ್ಯದ ರಾಜಧಾನಿ ವಿಯೆನ್ನಾಗೆ ಮುತ್ತಿಗೆ ಹಾಕಿದರು.  ವಿಯೆನ್ನಾ ಇನ್ನೇನು ಅವರ ಕೈವಶವಾಗಿಯೇಬಿಟ್ಟಿತು ಅನ್ನುವಾಗ ಪೋಲೆಂಡಿನ ಅರಸ ಮೂರನೆಯ ಜಾನ್ ತನ್ನ ಸೇನೆಯೊಂದಿಗೆ ಆಗಮಿಸಿ ಸೆಪ್ಟೆಂಬರ್ ೧೨ರ ನಸುಕಿಗೂ ಮೊದಲೇ ತುರ್ಕಿ ಪಾಳಯದ ಮೇಲೆ ಹಠಾತ್ ಧಾಳಿ ನಡೆಸಿ ಅದನ್ನು ದಿಕ್ಕೆಡಿಸಿ ಸಂಜೆಯ ಹೊತ್ತಿಗೆ ತುರ್ಕಿ ಸೇನಾಧಿಕಾರಿ ಕಾರಾ ಮುಸ್ತಫಾ ತೊರೆದುಹೋಗಿದ್ದ ಡೇರೆಯನ್ನು ಪ್ರವೇಶಿಸಿದ.  ಈ ನಿರ್ಣಾಯಕ ಸೋಲಿನೊಂದಿಗೆ ಯೂರೋಪಿನಲ್ಲಿ ತುರ್ಕಿ ಮತ್ತು ಇಸ್ಲಾಂನ ಪಶ್ಚಿಮಾಭಿಮುಖಿ ಅಭಿಯಾನ ಅಂತ್ಯಗೊಂಡಿತು.  ಒಂದುವೇಳೆ ವಿಯೆನ್ನಾ ಪತನವಾಗಿ ಆಸ್ಟ್ರಿಯನ್ ಸಾಮ್ರಾಜ್ಯ ತುರ್ಕರ ಕೈವಶವಾಗಿಹೋಗಿದ್ದರೆ ರಾಷ್ಟ್ರ-ರಾಜ್ಯಗಳ (ಓಚಿಣioಟಿ-sಣಚಿಣe) ಸೃಷ್ಟಿಯ ಪ್ರಕ್ರಿಯೆಯಲ್ಲಿ ತೊಡಗಿಕೊಂಡು ಛಿದ್ರವಾಗಿದ್ದ ಪಶ್ಚಿಮ ಯೂರೋಪ್ ಇಸ್ಲಾಂನ ಧಾಪುಗಾಲಿಗೆ ಸಿಕ್ಕಿಹೋಗುತ್ತಿತ್ತು.  ಹೀಗಾಗಿಯೇ, ಮೂರನೆಯ ಜಾನ್‌ನನ್ನು ಆಗಿನ ಪೋಪ್ ಪಶ್ಚಿಮ ಯೂರೋಪಿಯನ್ ನಾಗರೀಕತೆಯ ಸಂರಕ್ಷಕ ಎಂದು ಕೊಂಡಾಡಿದ್ದು ಅನ್ವರ್ಥವೇ ಆಗಿತ್ತು.

ಇಸ್ಲಾಂನ ಹರಡುವಿಕೆಯ ಈ ಅಸಾಧಾರಣ ವೇಗಕ್ಕೆ ಜಿಹಾದ್ ಪರಿಕಲ್ಪನೆ ಕಾರಣವೇ ಅಥವಾ ಅಲ್ಲವೇ ಎನ್ನುವುದು ಚರ್ಚೆಯ ವಿಷಯ.  ಖುರಾನ್‌ನಲ್ಲಿ ಅನ್ಯಮತೀಯರನ್ನು ಸವಿನಯ ಬೋಧನೆಯ ಮೂಲಕ ಇಸ್ಲಾಂ ಹಾದಿಗೆ ತರುವಂತೆ ಕರೆನೀಡುವ ವಾಕ್ಯಗಳಿರುವಂತೇ, ಯುದ್ಧಕ್ಕೆ, ಹಿಂಸಾಮಾರ್ಗಕ್ಕೆ ಪ್ರೇರೇಪಿಸುವಂತಹ, ಯುದ್ಧ ಮಾಡದವರನ್ನು ಹಂಗಿಸುವಂತಹ ವಾಕ್ಯಗಳೂ ಇವೆ.  ಇದು ಹಿಂಸಾಮಾರ್ಗವನ್ನು ಹಿಡಿಯಲಿಚ್ಚಿಸದ ಅಲ್ಪಸಂಖ್ಯಾತ ಮುಸ್ಲಿಮರ ಅಸ್ತಿತ್ವದ ಸುಳಿವು ನೀಡಿದರೂ, ಇಸ್ಲಾಂನ ಉಸಿರುಕಟ್ಟಿಸುವ ವೇಗಕ್ಕೆ ಕಾರಣ ಬಹುಪಾಲು ಅರಬ್ಬರು ಮತ್ತು ತುರ್ಕರು ಸ್ವಭಾವತಃ ಯುದ್ಧೋತ್ಸಾಹಿಗಳಾಗಿದ್ದದ್ದು.  ಈ ಜನಾಂಗಗಳ ಆಕ್ರಮಣಶೀಲತೆ, ಕಲಿತನ, ಎಲ್ಲ ವಿರೋಧವನ್ನು ಬಗ್ಗುಬಡಿದು ಅತ್ಯಲ್ಪ ಕಾಲದಲ್ಲಿ ಬೃಹತ್ ಸಾಮ್ರಾಜ್ಯಗಳನ್ನು ಕಟ್ಟಿದ ಅವರ ಅಸಾಧಾರಣ ಸ್ಥೈರ್ಯ ಮತ್ತು ಸಾಹಸಗಳು ಏಶಿಯಾ ಮತ್ತು ಆಫ್ರಿಕಾದಲ್ಲಿ ಮುಸ್ಲಿಮರೆಂದರೆ ಅಜಾತಶತ್ರುಗಳು ಎಂಬ ಪ್ರತೀತಿಯ ಉಗಮಕ್ಕೆ ಕಾರಣವಾದವು.  ಈ ಪ್ರತೀತಿ ಭಾರತದಲ್ಲಿ ಉಗಮವಾದ ಬಗೆ ಮತ್ತು ಅದರ ಸತ್ಯಾಸತ್ಯತೆಯನ್ನು ಮುಂದಿನವಾರ ಪರಿಶೀಲನೆಗೆತ್ತಿಕೊಳ್ಳೋಣ.

ಜನವರಿ ೧೫, ೨೦೧೩

 
3. ಉಪಖಂಡದಲ್ಲಿ ಹೇಡಿಯಾದ ಪರಾಕ್ರಮಿ ಮುಸ್ಲಿಂ

 ಇಂದಿನ ಪಾಕಿಸ್ತಾನದ ಭಾಗವಾಗಿರುವ ಪಂಜಾಬ್‌ನ ದಕ್ಷಿಣದಲ್ಲಿರುವ ಮುಲ್ತಾನ್ ಪಟ್ಟಣ ಸೇರಿದಂತೆ ಭಾರತದ ನೆಲದ ಮೇಲೆ ಅರಬ್ಬರ ಧಾಳಿಗಳು ಕ್ರಿ. ಶ. ೬೬೪ರಲ್ಲಿ ಆರಂಭವಾದರೂ ಅವುಗಳ ಉದ್ದೇಶ ಸಂಪತ್ತಿನ ದೋಚುವಿಕೆಗಿಂತ ಹೆಚ್ಚಿನದೇನೂ ಆಗಿರಲಿಲ್ಲ.  ಭಾರತೀಯ ಪ್ರದೇಶವೊಂದು ಅರಬ್ಬರ ನೇರ ಸೇನಾಹಿಡಿತಕ್ಕೆ ಸಿಕ್ಕಿ ಮುಸ್ಲಿಂ ಶಾಸನಕ್ಕೊಳಗಾದದ್ದು ಕ್ರಿ. ಶ. ೭೧೧-೧೨ರಲ್ಲಿ.  ಆ ವರ್ಷ ಅರಬ್ ದಂಡನಾಯಕ ಮಹಮದ್ ಬಿನ್ ಖಾಸಿಂ ಸಿಂಧ್‌ನ ಹಿಂದೂ ಅರಸ ದಹೀರ್‌ನನ್ನು ಸೋಲಿಸಿ ಆ ಪ್ರದೇಶವನ್ನು ಆಕ್ರಮಿಸಿಕೊಂಡ.   ಸಿಂಧ್‌ನ ಯಶಸ್ವೀ ಆಕ್ರಮಣದ ನಂತರ ಅರಬ್ಬರು ಮುಲ್ತಾನ್ ಸೇರಿದಂತೆ ದಕ್ಷಿಣ ಪಂಜಾಬ್‌ನ ವಿವಿಧ ಪ್ರದೇಶಗಳ ಮೇಲೆ ಧಾಳಿಯೆಸಗಿದರೂ ಅವುಗಳ ಮೇಲೆ ತಮ್ಮ ನೇರ ಶಾಸನ ವಿಧಿಸುವುದರಲ್ಲಿ ಹತ್ತಾರು ಕಾರಣಗಳಿಂದ ವಿಫಲರಾದರು.  ಆದರೆ ಅವರ ಧಾಳಿಗಳು ಮತ್ತು ಮತಾಂತರಗಳ ಪರಿಣಾಮವಾಗಿ ಅಲ್ಲೆಲ್ಲಾ ಹಿಂದೂ ಅರಸೊತ್ತಿಗೆಗಳು ಕುಸಿದು ಮತಾಂತರಗೊಂಡ ಹಲವು ಸಣ್ಣಪುಟ್ಟ ಮುಸ್ಲಿಂ ಅರಸೊತ್ತಿಗೆಗಳು ತಲೆಯೆತ್ತಿದವು.  ಕ್ರಿ. ಶ. ೧೦೦೦ರಿಂದ ೧೦೨೫ರವರೆಗೆ ಘಜನಿಯ ಟರ್ಕೋ-ಅಘ್ಟನ್ ಸುಲ್ತಾನ ಮಹಮದ್ ಪಶ್ಚಿಮ ಭಾರತದ ಮೇಲೆ ನಡೆಸಿದ ಹದಿನೇಳು ಯಶಸ್ವಿ ಧಾಳಿಗಳಿಗೆ ಪಂಜಾಬ್‌ನ ಈ ಮುಸ್ಲಿಂ ರಾಜ್ಯಗಳನ್ನೂ ಗುರಿಯಾಗಿರಿಸಿಕೊಂಡಿದ್ದ ಎನ್ನುವುದು ಗಮನಿಸಬೇಕಾದ ಆಂಶ.  ಮಹಮದ್‌ನ ದಂಡಯಾತ್ರೆಗಳ ಉದ್ದೇಶ ಲೂಟಿಯೇ ಹೊರತು ಇಸ್ಲಾಂನ ಪ್ರಚಾರವಾಗಲೀ, ಸಾಮ್ರಾಜ್ಯದ ಸ್ಥಾಪನೆಯಾಗಲೀ ಆಗಿರಲಿಲ್ಲ.  ಅವನ ಉದ್ದೇಶ ಅದಾಗಿದ್ದರೆ ಅವನದರಲ್ಲಿ ನಿಶ್ಚಿತವಾಗಿಯೂ ಯಶಸ್ವಿಯಾಗುತ್ತಿದ್ದ ಎನ್ನುವುದು ಅವನ ದಂಡಯಾತ್ರೆಗಳ ಸಫಲತೆಯಿಂದ, ಅವನಿಗೆದುರಾದ ಅಲ್ಪ ಪ್ರತಿರೋಧಗಳಿಂದ ವ್ಯಕ್ತವಾಗುತ್ತದೆ.

ಅರಬ್ ಮತ್ತು ಟರ್ಕೋ-ಅಫ್ಟನ್ ಸೇನೆಗಳು ರಣಾಂಗಣಗಳಲ್ಲಿ ಭಾರತೀಯರ ವಿರುದ್ದ ಗಳಿಸಿದ ಸರಣೀ ಯಶಸ್ಸುಗಳು ನಮ್ಮ ಈ ವಿಶ್ಲೇಷಣೆಗೆ ಮುಖ್ಯವಾಗುತ್ತವೆ.  ಮಹಮದ್ ಘಜನಿಯ ಧಾಳಿಗಳ ಬಗ್ಗೆ ಪರ್ಶಿಯನ್ ಇತಿಹಾಸಕಾರ ಅಲ್ ಬೆರೂನಿಯ ಮಹತ್ವದ ತಾರಿಖ್ ಇ ಹಿಂದ್ ಸೇರಿದಂತೆ ಹಲವು ವಿಶ್ವಾಸಾರ್ಹ ಲಿಖಿತ ದಾಖಲೆಗಳಿವೆ.  ಆದರೆ ಅರಬ್ಬರ ಸಿಂಧ್ ಆಕ್ರಮಣದ ಬಗ್ಗೆ ನಮಗೆ ವಿವರಗಳು ದೊರೆಯುವುದು ೧೨೧೬ರಲ್ಲಿ ಆಲಿ ಬಿನ್ ಹಮೀದ್ ಅಲ್ ಕೂಫಿಯಿಂದ ರಚಿತವಾದ, ಕಳೆದುಹೋಗಿರುವ ಅರಬ್ ಕೃತಿಯೊಂದರ ಅನುವಾದವೆಂದು ನಂಬಲಾಗಿರುವ ಚಾಚ್‌ನಾಮಾದಲ್ಲಿ ಮಾತ್ರ.  ಅರಬ್ ಸೇನೆಯ ಯಶಸ್ಸಿಗೆ ಮುಖ್ಯ ಕಾರಣ ಸಿಂಧ್‌ನ ಹಿಂದೂಗಳು ಮತ್ತು ಬೌದ್ಧರ ನಡುವಿನ ಅವಿಶ್ವಾಸ ಮತ್ತು ಅಹಿಂಸಾವಾದಿಗಳಾದ ಬೌದ್ಧರು ಯುದ್ಧ ಮಾಡಲು ಹಿಂದೆಗೆದದ್ದು ಎಂದು ಚಾಚ್‌ನಾಮಾ ಹೇಳುತ್ತದೆ.  ಸುಮಾರು ಐದು ಶತಮಾನಗಳಷ್ಟು ಧೀರ್ಘ ಕಾಲದ ನಂತರ ರಚಿತವಾದ ಈ ಕೃತಿಯಲ್ಲಿನ ವಿವರಗಳ ವಿಶ್ವಾಸಾರ್ಹತೆಯ ಬಗ್ಗೆ ಇತಿಹಾಸಕಾರರಲ್ಲಿ ಭಿನ್ನಾಭಿಪ್ರಾಯಗಳಿವೆ.  ಇಷ್ಟಾಗಿಯೂ ನಮಗಿಲ್ಲಿ ಮುಖ್ಯವಾಗುವುದು ಅರಬ್ಬರು ರಣಾಂಗಣದಲ್ಲಿ ಯಶಸ್ವಿಯಾದರು ಎನ್ನುವುದು.  ಅಷ್ಟೇ ಅಲ್ಲ, ನಂತರದ ಕಾಲದಲ್ಲಿ ಅರಬ್ ಸಾಮ್ರಾಜ್ಯವಾದ ಶಿಥಿಲಗೊಂಡು ಸಿಂಧ್ ಅದರಿಂದ ಹೊರಬಂದಿತಾದರೂ ಅಲ್ಲಿ ಮುಸ್ಲಿಂ ಶಾಸನ ಅನೂಚಾನವಾಗಿ ಮುಂದುವರೆಯಿತು ಮತ್ತು ದಖನ್‌ನ ರಾಷ್ಟ್ರಕೂಟರು ಸಿಂಧ್‌ನ ಮುಸ್ಲಿಂ ಅರಸರಿಂದ ಕಪ್ಪ ಸ್ವೀಕರಿಸಿದರೂ ಆ ಪ್ರದೇಶದಲ್ಲಿ ಮುಸ್ಲಿಂ ಶಾಸನವನ್ನು ತೆರವುಗೊಳಿಸುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ ಎನ್ನುವುದೂ ನಮಗೆ ಮುಖ್ಯವಾಗುತ್ತದೆ.  ಈ ಭಾರತೀಯ ಮನೋಭಾವನೆಯನ್ನು ಮುಸ್ಲಿಂ ಶಾಸನವನ್ನು ಕೊಡವಿಕೊಳ್ಳಲು ಸ್ಪೇನ್ ತೋರಿಸಿದ ಉತ್ಸುಕತೆಯೊಂದಿಗೆ ಹೋಲಿಸಿ.

ಭಾರತದ ಹೃದಯಭಾಗದಲ್ಲಿ ಮುಸ್ಲಿಂ ಶಾಸನವನ್ನು ಸ್ಥಾಪಿಸಿ ಈ ನೆಲದಲ್ಲಿ ಮುಸ್ಲಿಂ ಸಾಮ್ರಾಜ್ಯವಾದಕ್ಕೆ ಬುನಾದಿ ಹಾಕಿದ್ದು ಮತ್ತೊಬ್ಬ ಟರ್ಕೋ-ಅಘ್ಘನ್ ಅರಸ ಮಹಮದ್ ಘೋರಿ.  ಕ್ರಿ. ಶ. ೧೧೯೧ರಲ್ಲಿನ ತನ್ನ ಮೊದಲ ಪ್ರಯತ್ನ ವಿಫಲವಾದರೂ ಎದೆಗುಂದದ ಆತ ಮರುವರ್ಷವೇ ಎರಡನೆಯ ಪ್ರಯತ್ನಕ್ಕೆ ಮುಂದಾಗಿ ಅದರಲ್ಲಿ ಯಶಸ್ವಿಯಾದ.  ನಂತರ ಇಡೀ ಉತ್ತರ ಭಾರತ ಟರ್ಕೋ-ಅಫ್ಟನ್ ಮುಸ್ಲಿಂ ಶಾಸನಕ್ಕೆ ಒಳಗಾಗಲು ತಗಲಿದ್ದು ಕೇವಲ ಹನ್ನೊಂದು ವರ್ಷಗಳು.  ೧೨೦೨-೦೩ರಲ್ಲಿ ಗಂಗಾ ಬಯಲಿನಲ್ಲಿ ವಾಯುವೇಗದಲ್ಲಿ ಸಂಚರಿಸಿದ ಬಕ್ತಿಯಾರ್ ಖಿಲ್ಜಿ ಕೇವಲ ಹದಿನೆಂಟು ಅಶ್ವಾರೋಹಿಗಳೊಂದಿಗೆ ಬಂಗಾಲವನ್ನು ಗೆದ್ದುಕೊಂಡ.  ಮಹಮದ್ ಘೋರಿ, ಕುತ್ಬುದ್ದೀನ್ ಐಬಕ್, ಬಕ್ತಿಯಾರ್ ಖಿಲ್ಜಿ ಮತ್ತವರ ಸೈನಿಕರೆಲ್ಲರೂ ಆರ್ಯರೇ, ಭಾರತದ ಹಿಂದೂ ಅರ್ಯರು ಇಲ್ಲಿಗೆ ಬರುವ ಹಾದಿಯಲ್ಲಿ ಬಿಟ್ಟುಬಂದಿದ್ದ ತಮ್ಮ ದಾಯಾದಿಗಳೇ.  ಆದರೆ ಅವರ ಧರ್ಮ ಮಾತ್ರ ಈಗ ಬೇರೆಯಾಗಿತ್ತು.

ನಂತರದ ಮೂರು ಶತಮಾನಗಳವರೆಗೆ ಭಾರತ ಕಂಡದ್ದು ಟರ್ಕೋ-ಅಫ್ಟನ್ ಮುಸ್ಲಿಂ ಸೇನಾ ಪ್ರಾಬಲ್ಯ.  ಪಂಜಾಬ್‌ನಿಂದ ಮಧುರೈವರೆಗಿನ ವಿಶಾಲ ಪ್ರದೇಶದಲ್ಲಿ ಸತತ ಸೇನಾ ಕಾರ್ಯಾಚರಣೆಗಳನ್ನು ನಡೆಸಿ ಮತ್ತೆಮತ್ತೆ ಜಯಶೀಲರಾದ ಅಫ್ಟನ್ ಮುಸ್ಲಿಂ ಆರ್ಯರು ಉಪಖಂಡದ ಆಚೆಗಿನ ಜನಾಂಗಗಳ ಮೇಲೆ ರಣಾಂಗಣದಲ್ಲಿ ವಿಜಯ ಸಾಧಿಸಿದ ಉದಾಹರಣೆಗಳು ಅಪರೂಪ.  ಹದಿನೆಂಟು ಅಶ್ವಾರೋಹಿಗಳೊಂದಿಗೆ ಬಂಗಾಲವನ್ನು ಕೈವಶ ಮಾಡಿಕೊಂಡ ಬಕ್ತಿಯಾರ್ ಖಿಲ್ಜಿ ಮೂರು ವರ್ಷಗಳ ನಂತರ ಟಿಬೆಟ್‌ನಲ್ಲಿ ವಿಫಲನಾದ.  ಆ ವೈಫಲ್ಯವೇ ಅವನಿಗೆ ಮಾರಣಾಂತಿಕವೂ ಆಯಿತು.  ಮಲಿಕ್ ಕಾಫರ್‌ನ ಮೂಲಕ ದೇವಗಿರಿ, ವಾರಂಗಲ್, ದ್ವಾರಸಮುದ್ರ, ಮಧುರೈಗಳ ಮೇಲೆ ಅಭೂತಪೂರ್ವ ವಿಜಯ ಸಾಧಿಸಿದ ಅಲ್ಲಾವುದ್ದೀನ್ ಖಿಲ್ಜಿಗೆ ಉಪಖಂಡದ ಹೊರಗೆ ದಕ್ಕಿದ ಏಕಮಾತ್ರ ಮಹತ್ವದ ವಿಜಯವೆಂದರೆ ಘಾಜಿ ಖಾನ್‌ನ ನೇತೃತ್ವದ ಗಡಿಸೇನೆ ಹೂಣರನ್ನು ಖೈಬರ್‌ನಾಚೆಗಿನ ಅಫ್ಘಾನಿಸ್ತಾನಕ್ಕೆ ಅಟ್ಟಿದ್ದು.  ಮಂಗೋಲರ ವಿರುದ್ಧ ಭಾರತದ ಮುಸ್ಲಿಂ ಅರಸರ ಪರಾಕ್ರಮ ಅಲ್ಲಿಗೆ ನಿಂತುಹೋಯಿತು.  ಕೊನೆಗೆ ಅದೆಲ್ಲಿಗೆ ತಲುಪಿತೆಂದರೆ ಮಂಗೋಲ್-ಟರ್ಕಿಷ್ ಮಿಶ್ರರಕ್ತದ ಮೊಗಲರು ೧೫೨೬-೫೬ರಲ್ಲಿ ಉತ್ತರ ಭಾರತದ ಸಾರ್ವಭೌಮರಾದರು.  ಬಾಬರ್‌ನ ನಂತರ ಅಫ್ಘಾನಿಸ್ತಾನದಲ್ಲಿ ನೆಲೆ ಕಳೆದುಕೊಂಡ ಮೊಗಲರು ತಮ್ಮ ಸೇನಾಸಾಮರ್ಥ್ಯವನ್ನು ಪ್ರದರ್ಶಿಸಿದ್ದೆಲ್ಲವೂ ಉಪಖಂಡದ ಎಲ್ಲೆಯೊಳಗೇ.  ಅದರಾಚೆಗೆ ಅವರ ಆಟ ನಡೆಯಲಿಲ್ಲ.  ಇಲ್ಲಿ ನಾನೇನು ವಿಶದಪಡಿಸಲು ಯತ್ನಿಸುತ್ತಿದ್ದೇನೆಂದರೆ ಹನ್ನೆರಡು-ಹದಿಮೂರನೆಯ ಶತಮಾನಗಳ ಸಂಧಿಕಾಲದಲ್ಲಿ ಭಾರತದ ಹಿಂದೂ ಆರ್ಯರನ್ನು ಸೋಲಿಸಿ ಈ ದೇಶವನ್ನು ಗೆದ್ದು ಆಳತೊಡಗಿದ ಅಫ್ಘನ್ ಮುಸ್ಲಿಂ ಆರ್ಯರು ಮೂರು ಶತಮಾನಗಳು ಉರುಳುವಷ್ಟರಲ್ಲಿ ತಮ್ಮ ಕಲಿತನವನ್ನು ಕಳೆದುಕೊಂಡು ಮಧ್ಯಏಶಿಯಾದಿಂದ ಬಂದ ಮೊಗಲರಿಗೆ ಸೋತು ಶರಣಾದರು ಮತ್ತು ಎರಡು ಶತಮಾನಗಳ ನಂತರ ಮೊಗಲರೂ ಸಹಾ ಹಿಂದೂ ಮತ್ತು ಸಿಖ್ ಪ್ರತಿರೋಧವನ್ನು ನಿಗ್ರಹಿಸುವುದರಲ್ಲಿ ವಿಫಲರಾದರು ಮತ್ತು ಇರಾನಿಯನ್ ಮುಸ್ಲಿಂ ಆರ್ಯರ ಮುಂದೆ ಸೋಲೊಪ್ಪಿದರು.

ಹೊರಗಿನಿಂದ ಬಂದ ಮುಸ್ಲಿಂ ಜನಾಂಗಗಳ ಕ್ಷಾತ್ರಗುಣ ಕೆಲ ತಲೆಮಾರುಗಳ ನಂತರ ಅದೆಷ್ಟು ಕ್ಷೀಣಿಸಿತೆಂದರೆ ತಾವು ಬಿಟ್ಟುಬಂದಿದ್ದ ಪ್ರದೇಶಗಳಲ್ಲಿ, ಕೊನೇಪಕ್ಷ ಭಾರತಕ್ಕೆ ಭೌಗೋಳಿಕವಾಗಿ ಹತ್ತಿರವಾಗಿದ್ದ ಅಫ್ಘಾನಿಸ್ತಾನದಲ್ಲಿಯೂ ಸಹಾ, ತಮ್ಮ ಪರಾಕ್ರಮವನ್ನು ಮತ್ತೊಮ್ಮೆ ಮೆರೆಯುವಲ್ಲಿ ವಿಫಲರಾದವು ಮತ್ತು ತಮ್ಮ ಸೇನಾಪ್ರಾಬಲ್ಯವನ್ನು, ಶಾಸನವನ್ನು ಕೇವಲ ಭಾರತದ ಎಲ್ಲೆಯೊಳಗಷ್ಟೇ ಸೀಮಿತಗೊಳಿಸುವ ಹಣೆಬರಹಕ್ಕೊಳಗಾದವು.  ಇದರಿಂದ ವಿಶದವಾಗುವುದೇನೆಂದರೆ, ಭಾರತವನ್ನು ತಮ್ಮ ನಿವಾಸವನ್ನಾಗಿ ಮಾಡಿಕೊಂಡ ಹಿಂದೂಗಳ ಹಣೆಬರಹಕ್ಕೂ ಮುಸ್ಲಿಮರ ಹಣೆಬರಹಕ್ಕೂ ಯಾವ ವ್ಯತ್ಯಾಸವೂ ಇಲ್ಲ.  ಕ್ಷಾತ್ರಗುಣವನ್ನು ಅವರವರ ಧರ್ಮಗಳೇನೂ ಅವರಿಗೆ ಉಳಿಸಿಕೊಡಲಿಲ್ಲ.  ಅಂದರೆ, (ಅಕ್ಬರುದ್ದೀನ್ ಒವೈಸಿಯವರ ನಿಘಂಟಿನ ಪ್ರಕಾರ) ಹೇಡಿಗಳಾದವರು ಕೇವಲ ಹಿಂದೂಗಳಲ್ಲ.  ಮುಸ್ಲಿಮರದೂ ಅದೇ ಗತಿ.  ಈ ದೇಶದ ಹಿಂದೂಗಳಂತೇ ಮುಸ್ಲಿಮರ ಪರಾಕ್ರಮವೇನಿದ್ದರೂ ಉಪಖಂಡದ ಎಲ್ಲೆಯೊಳಗೆ ಮಾತ್ರ.  ಹಮಾರಾ ಕುತ್ತಾ ಹಮಾರೀ ಗಲೀ ಮೇ ಶೇರ್!

            ಹೀಗೆ ಹೊರಗಿನಿಂದ ವಲಸೆ ಅಥವಾ ಧಾಳಿಯ ಮೂಲಕ ಭಾರತವನ್ನು ಗೆದ್ದುಕೊಂಡ ಜನಾಂಗಗಳು, ಹಿಂದೂ ಆಗಿರಲಿ ಅಥವಾ ಮುಸ್ಲಿಂ ಆಗಿರಲಿ, ಕೆಲವು ತಲೆಮಾರುಗಳ ನಂತರ ಈ ನೆಲದ ಭೌಗೋಳಿಕ ಅಂಶಗಳು ಮತ್ತು ಅವು ಒದಗಿಸಿದ ಆರ್ಥಿಕ ಅನುಕೂಲತೆ, ತತ್ಪರಿಣಾಮವಾಗಿ ದಕ್ಕಿದ ನಿರಾಳತೆಯಿಂದಾಗಿ (ವಿವರಗಳಿಗೆ ಕಳೆದ ವಾರದ ಲೇಖನ ನೋಡಿ) ತನ್ನ ಕಲಿತನವನ್ನು ಕಳೆದುಕೊಂಡು ಹೊಸ ಧಾಳಿಕಾರರ ಮುಂದೆ ಮಂಡಿಯೂರಿದವು.  ಆದರೆ ಬದುಕೊಂದು ಸಂಘರ್ಷವಾಗಿದ್ದ ಪಶ್ಚಿಮ ಏಶಿಯಾದ ಜನಾಂಗಗಳು ಆದಿಕಾಲದಿಂದಲೂ ತಂತಮ್ಮ ಕ್ಷಾತ್ರಗುಣಗಳನ್ನು ಉಳಿಸಿ ಬೆಳೆಸಿ ಯುದ್ಧಕಲೆಯನ್ನು ಕರಗತಗೊಳಿಸಿಕೊಳ್ಳುತ್ತಾ ಸಾಗಿದವು.  ಕಾಲಕಾಲಕ್ಕೆ ಆ ನೆಲದಲ್ಲಿ ಪ್ರಭಾವಶಾಲಿಯಾಗಿದ್ದ ಯೆಹೂದಿ, ಹಿಂದೂ, ಪಾರ್ಸೀ ಮತ್ತುಅಂತಿಮವಾಗಿ ಮುಸ್ಲಿಂ ಜನತೆಗಳೆಲ್ಲವೂ ಆ ನಿರ್ವಾಹವಿಲ್ಲದೇ ಆ ಪ್ರಕ್ರಿಯೆಗೆ ಒಳಗಾದವು.

            ಹೊರಗಿನಿಂದ ಉಪಖಂಡಕ್ಕೆ ಬಂದ ಜನಾಂಗಗಳು ಯಾವ ಕ್ಷಾತ್ರಗುಣಗಳಿಂದ ಈ ನೆಲದ ಅಧಿಪತಿಗಳಾದರೋ ಅದೇ ಕ್ಷಾತ್ರಗುಣಗಳಿಂದಾಗಿ ಅವರ ಅಸ್ತಿತ್ವಕ್ಕೆ ಇಲ್ಲಿ ಸವಾಲುಗಳು ಉತ್ಪನ್ನವಾಗಲಿಲ್ಲ.  ಕಾಲಕಾಲಕ್ಕೆ ಭಾರತದ ಅಧಿಪತಿಗಳಾಗಿ ಮೆರೆದ ಹಿಂದೂ ಅಥವಾ ಮುಸ್ಲಿಂ ಅರಸುಮನೆತನಗಳ ಅಸ್ತಿತ್ವಕ್ಕೆ ತೀವ್ರತರದ ಅಪಾಯ ಎದುರಾಗುತ್ತಿದ್ದುದು ಹೊರಗಿನಿಂದ ಮಾತ್ರ.  ಹೀಗಾಗಿ ಹೊರಗಿನ ಶತೃಗಳನ್ನು ಪರಿಣಾಮಕಾರಿಯಾಗಿ ಎದುರಿಸುವುದು ಅಸ್ತಿತ್ವದ ಪ್ರಶ್ನೆಯಾದ ಕಾರಣ ಅಂತರಿಕ ಕ್ಷೇತ್ರದಲ್ಲಿ ಪರಸ್ಪರ ರಾಜಿ ಸಹಿಷ್ಟುತೆ, ಶಾಂತಿ ಮುಖ್ಯವೆನಿಸಿದವು.  ಸಿಂಧ್‌ನ ಮುಸ್ಲಿಂ ಅರಸರು ರಾಷ್ಟ್ರಕೂಟರಿಗೆ ಕಪ್ಪ ಒಪ್ಪಿಸಿದ್ದಕ್ಕೂ, ಮೊಗಲರು ರಜಪೂತರನ್ನು ಓಲೈಸಿದ್ದಕ್ಕೂ ಇದು ಕಾರಣ. 

            ಇದೇ ನೆಲೆಯಲ್ಲಿ ಇತಿಹಾಸದ ಯಾವುದೇ ಹಂತದಲ್ಲೂ ಉಪಖಂಡದಲ್ಲಿ ಸಾರಾಸಗಟು ಮತಾಂತರ ನಡೆಯದೇ ಹೋದುದನ್ನೂ ವಿವರಿಸಬಹುದು.  ಭಾರತದ ಭೌಗೋಳಿಕ ಹಾಗೂ ಆರ್ಥಿಕ ಕಾರಣಗಳು ಜೀವನಮೌಲ್ಯಗಳನ್ನೂ, ಧಾರ್ಮಿಕ ರೀತಿರಿವಾಜುಗಳನ್ನೂ ಬದಲಾಯಿಸುವುದು ಹಿಂದೂಗಳಿಗಷ್ಟೇ ಸೀಮಿತವಾಗಿರಲಿಲ್ಲ.  ಆ ಪ್ರಕ್ರಿಯೆಗೆ ಮುಸ್ಲಿಮರೂ ಸಹಾ ಒಳಗಾಗಿದ್ದಾರೆ.  ಸಂಪನ್ಮೂಲಗಳ ಕೊರತೆ ಇರುವಲ್ಲಿ ಪಕ್ಕದಲ್ಲಿ ಅನ್ಯನ ಅಸ್ತಿತ್ವ ಆರ್ಥಿಕ ಪ್ರಶ್ನೆಗಳನ್ನು ಜಟಿಲಗೊಳಿಸುತ್ತದೆ.  ಹೀಗಾಗಿ ಅಲ್ಲಿ ಅಸಹನೆ ಒಡಮೂಡುತ್ತದೆ.  ಎಲ್ಲರನ್ನೂ ತಮ್ಮವರನ್ನಾಗಿ ಮಾಡಿಕೊಳ್ಳುವುದರಿಂದ ಆ ಪ್ರಶ್ನೆಗಳನ್ನು ನಿವಾರಿಸಬಹುದೆಂಬ ನಿರೀಕ್ಷೆಯೇ ಇರಾನ್, ಟರ್ಕಿ, ಮಧ್ಯ ಏಶಿಯಾಗಳಲ್ಲಿ ಸಾರಾಸಗಟಾಗಿ ಎಲ್ಲರನ್ನೂ ಇಸ್ಲಾಂಗೆ ಮತಾಂತರಗೊಳಿಸುವ ಪ್ರಕ್ರಿಯೆಗೆ ಕಾರಣವಾಯಿತು.  ಈ ಮತಾಂತರವೇ ಆ ಪ್ರದೇಶದಲ್ಲಿ ಹಿಂದಿನ ಎಲ್ಲಾ ಧರ್ಮಗಳಿಗಿಂತಲೂ ಇಸ್ಲಾಂ ಹೆಚ್ಚು ಪ್ರಬಲವಾಗಲು, ವ್ಯಾಪಕವಾಗಲು ಹಾಗೂ ಧೀರ್ಘಾಯುಷ್ಯವಾಗಲು ಕಾರಣವಾಯಿತು.  ಭೌಗೋಳಿಕ ಹಾಗೂ ಆರ್ಥಿಕ ವಾಸ್ತವಗಳನ್ನು ನಿರ್ಲಕ್ಷಿಸಿದ್ದೇ ಹಿಂದಿನ ಎಲ್ಲಾ ಧರ್ಮಗಳಿಗೂ ಮುಳುವಾಯಿತು.

ಆದರೆ  ಉಪಖಂಡದ ಪರಿಸ್ಥಿತಿ ಬೇರೆ.  ತೀವ್ರತರದ ಅರ್ಥಿಕ ಸವಾಲುಗಳಿಲ್ಲದ ಭಾರತ ಉಪಖಂಡದಲ್ಲಿ ನಾವು ಮತ್ತು ಅವರುಗಳ ನಡುವಿನ ವ್ಯತ್ಯಾಸ ಕಣ್ಣಿಗೆ ರಾಚುವಂತೆ ಬೆಳೆದುನಿಲ್ಲಲಿಲ್ಲ.  ಪರಿಣಾಮವಾಗಿ ಪರಸ್ಪರ ಸಹನೆ, ಸಹಿಷ್ಟುತೆ ಸಾಮಾಜಿಕ ಹಾಗೂ ರಾಜಕೀಯ ಬದುಕಿನಲ್ಲಿ ಹಾಸುಹೊಕ್ಕಾದವು.  ಹೀಗಾಗಿಯೇ, ಮೂರು ಸಹಸ್ರಮಾನಗಳ ಹಿಂದೆ ಇಲ್ಲಿನ ಆಡಳಿತಗಾರರಾದ ಹಿಂದೂಗಳಿಗೂ, ಒಂದು ಸಹಸ್ರಮಾನದ ಹಿಂದೆ ಈ ನೆಲವನ್ನು ಆಳತೊಡಗಿದ ಮುಸ್ಲಿಮರಿಗೂ ಸಾರಾಸಗಟು ಬಲವಂತದ ಮತಾಂತರದ ಅಗತ್ಯ ಕಾಣಲಿಲ್ಲ.  ನನ್ನೀ ಮಾತುಗಳ ಅರ್ಥವನ್ನು ಗ್ರಹಿಸಬೇಕಾದರೆ ಒಬ್ಬ ಪುಷ್ಯಮಿತ್ರ ಶುಂಗ, ಒಬ್ಬ ಶಶಾಂಕ, ಒಬ್ಬ ಔರಂಗಜೇಬ್, ಒಬ್ಬ ಟಿಪ್ಪು ಸುಲ್ತಾನ್ ಅಥವಾ ಒಬ್ಬ ಅಕ್ಬರುದ್ದೀನ್ ಒವೈಸಿಯಂತಹ ಅಪವಾದಗಳನ್ನು ಆಧಾರವಾಗಿಟ್ಟುಕೊಂಡು ಇತಿಹಾಸವನ್ನಾಗಲೀ, ವರ್ತಮಾನವನ್ನಾಗಲೀ ಪುನರ್ರಚಿಸುವ ಮೂರ್ಖತನಕ್ಕೆ ಕೈಹಾಕದಿರುವ ಅಗತ್ಯವಿದೆ.

ಅಂತಿಮವಾಗಿ, ಒವೈಸಿಯ ತಲೆತಿರುಕ ಹೇಳಿಕೆಗಳನ್ನು ಮೆಚ್ಚಿ ಅಲ್ಲಾ ಹೋ ಅಕ್ಬರ್ ಎಂದು ಕೂಗುವವರು ಕೊಂಬೆಯ ಮೇಲೆ ಕುಳಿತು ಬುಡ ಕಡಿಯುವಂಥವರಾದರೆ, ಒವೈಸಿಯನ್ನು ಗಲ್ಲಿಗೇರಿಸಿ ಎಂದು ಕೂಗುವವರು ನೆಗಡಿಯಾದರೆ ಮೂಗನ್ನೇ ಕತ್ತರಿಸಿಕೊಳ್ಳುವಂಥವರು.  ವಿವೇಕ ಇಬ್ಬರಲ್ಲೂ ಮೂಡಬೇಕಾಗಿದೆ.  ಇತಿಹಾಸದ ಚಕ್ರವನ್ನು ಹಿಂದಕ್ಕೆ ತಿರುಗಿಸುವ ಯಾವುದೇ ಪ್ರಯತ್ನ ಭವಿಷ್ಯವನ್ನು ಕರಾಳವಾಗಿಸುತ್ತದೆ.

ಜನವರಿ ೨೨, ೨೦೧೩

2 comments: