ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Wednesday, November 14, 2012

ಮತ್ತೊಮ್ಮೆ ಕಾರ್ನಾಡ್: ಸಂಸ್ಕೃತಿ ಚಿಂತನೆಯ ಮುಂದಿರುವ ಸವಾಲುಗಳು


          ಗಿರೀಶ್ ಕಾರ್ನಾಡ್ ಮತ್ತೆ ಸುದ್ದಿಯಲ್ಲಿದ್ದಾರೆ.  ಸರ್ ವಿದಿಯಾಧರ್ ಸೂರಜ್‌ಪ್ರಸಾದ್ ನೈಪಾಲ್ ಅವರನ್ನು ಮುಸ್ಲಿಂ ವಿರೋಧಿ ಎಂದು ಮುಂಬೈ ಸಾಹಿತ್ಯೋತ್ಸವದಲ್ಲಿ ಟೀಕಿಸಿದ ಬಿಸಿ ಆರುವ ಮೊದಲೇ ನೆಲಮಂಗಲದಲ್ಲಿ ರವೀಂದ್ರನಾಥ್ ಟ್ಯಾಗೋರ್ ಎರಡನೆಯ ದರ್ಜೆಯ ನಾಟಕಕಾರ ಎಂದು ಹೇಳಿದ್ದಾರೆ.  ಕಾರ್ನಾಡ್ ಪರ/ವಿರೋಧ ಬಾಣಗಳ ಹಾರಾಟ ಸಾಗಿದೆ.

          ಎಸ್. ಎಲ್. ಭೈರಪ್ಪ, ಯು. ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡರಂಥ ಸಾಹಿತ್ಯಕ ದಿಗ್ಗಜಗಳ ಬಗ್ಗೆ ಯಾವ ಅಭಿಪ್ರಾಯವನ್ನು ಹೊಂದಿದ್ದೇವೆಂಬುದರ ಆಧಾರದ ಮೇಲೆ ಸಾಹಿತ್ಯಕ್ಷೇತ್ರದಲ್ಲಿನ ಸ್ಥಾನಮಾನಗಳಿರಲಿ, ವೈಯುಕ್ತಿಕ ಸಂಬಂಧಗಳೂ ಸಹಾ ನಿರ್ಧರಿತವಾಗುವಂಥ ಉಸಿರುಕಟ್ಟುವ ವಾತಾವರಣ ಕನ್ನಡ ಸಾಂಸ್ಕೃತಿಕವಲಯದಲ್ಲಿ ನಿರ್ಮಾಣವಾಗಿರುವ ಕಾಲ ಇದು.  ಇಲ್ಲೀಗ ನೈಪಾಲರ ಬಗೆಗಿನ ಕಾರ್ನಾಡರ ಅಸಹನೆಯ ಹಿಂದಿನ ಕಾರಣಗಳಂಥ ವಿವಾದಾಸ್ಪದ ವಿಷಯವನ್ನು ಚರ್ಚೆಗೆತ್ತಿಕೊಳ್ಳುವುದು ಜಾರುವ ನೆಲದಲ್ಲಿ ಕಾಲಿಟ್ಟಂತೆ.  ಇಂಥಾ ಪರಿಸ್ಥಿತಿಯಲ್ಲಿ, ಕಾರ್ನಾಡರ ಬಗೆಗಿನ ನನ್ನ ವೈಯುಕ್ತಿಕ ಅನುಮಾನ, ಅಭಿಪ್ರಾಯಗಳ ಸುಳಿವು ನೀಡಿಯೇ ಮುಂದುವರೆಯುವುದು ಸೂಕ್ತ.

          ತುಘ್‌ಲಕ್ನ ಹಿಂದಿರುವುದು ಆಲ್ಬರ್ಟ್ ಕಮೂನ ಕಾಲಿಗುಲ ಎಂಬ ಆಪಾದನೆಯಂಥವುಗಳನ್ನು ಕೇಳಿಯೂ ಕಾರ್ನಾಡ್ ಒಬ್ಬ ಅತ್ಯುತ್ತಮ ನಾಟಕಕಾರ ಎಂದು ನಂಬಿದವನು ನಾನು.  ಹನ್ನೊಂದು ದಿನಗಳ ಹಿಂದಷ್ಟೇ ದೆಹಲಿಯ ಕೋಟ್ಲಾ ಮೈದಾನದಲ್ಲಿ ಆಸಕ್ತಿಯಿಂದ ತುಘ್‌ಲಕ್ ನೋಡಿ ಕಾರ್ನಾಡರ ಪ್ರತಿಭೆಯ ಬಗ್ಗೆ (ಅದೆಷ್ಟನೆಯ ಬಾರಿಯೋ) ವಿಸ್ಮಿತನಾದವನು ನಾನು.  ಆದರೆ ಅವರ ಸಾಹಿತ್ಯೇತರ ಚಿಂತನೆಗಳ ಬಗ್ಗೆ ನನ್ನಲ್ಲಿ ಅಸಹನೆ ಮೂಡಿದ ಉದಾಹರಣೆಗಳುಂಟು.  ಕಾವೇರಿ ವಿವಾದದ ಬಗೆಗಿನ ಅವರ ಹೇಳಿಕೆಗಳು, ಮೇಲೇರಲು ನನಗೆ ಯಾರೂ ಸಹಕರಿಸಲಿಲ್ಲ, ಹಾಗಾಗಿ ನಾನೂ ಯಾರಿಗೂ ಸಹಕರಿಸುವುದಿಲ್ಲ ಎಂಬ ಅವರ ಘನತೆಗೆ ತಕ್ಕುದಲ್ಲದ ಮಾತುಗಳು ಮೂಡಿಸಿದ ಬೇಸರದ ಹಿನ್ನೆಲೆಯಲ್ಲಿಯೇ ನಾಟಕಗಳ ಹೊರತಾದ ಅವರ ಸೃಜನಶೀಲ ಕೃತಿಗಳನ್ನೂ ಅನುಮಾನದಿಂದ ನೋಡುವವನು ನಾನು.  ಎರಡೂವರೆ ವರ್ಷಗಳ ಹಿಂದೆ ದೇಶ ಕಾಲ ತ್ರೈಮಾಸಿಕದ ವಿಶೇಷ ಸಂಚಿಕೆಯಲ್ಲಿ ಓದಿದ ಮುಸಲ್ಮಾನ ಬಂದ, ಮುಸಲ್ಮಾನ ಬಂದ ಎಂಬ ಅವರ ಸಣ್ಣಕಥೆಯಂತೂ ನನ್ನಲ್ಲಿ ಅತ್ಯಂತ ತಿರಸ್ಕಾರವನ್ನುಂಟುಮಾಡಿತ್ತು.  ನಮ್ಮ ಬುದ್ಧಿಜೀವಿಗಳು ಬಹಿರಂಗವಾಗಿ ಇಷ್ಟಪಡದ ಸೌಂದರ್ಯ ಸ್ಪರ್ಧೆಗಳಲ್ಲೊಂದು ನಿಯಮವಿದೆಯಂತೆ.  ವಿಶ್ವಸುಂದರಿಯಾಗಿ ಆಯ್ಕೆಯಾದವಳು ಆನಂತರ ತನಗೆ ಪ್ರಶಸ್ತಿ ತಂದುಕೊಟ್ಟ ಮೈಮಾಟದ ಅಂಕಿಅಂಶಗಳಲ್ಲಿ ತೀವ್ರತರದ ಬದಲಾವಣೆಗಳನ್ನು ತಂದುಕೊಂಡರೆ ಆಕೆಯಿಂದ ಪ್ರಶಸ್ತಿಯನ್ನು ಕಿತ್ತುಕೊಳ್ಳಲಾಗುತ್ತದಂತೆ.  ಇಂತಹ ನಿಯಮವನ್ನು ಜ್ಞಾನಪೀಠ ಪ್ರತಿಷ್ಠಾನವೂ ಜಾರಿಗೆ ತಂದು, ಪ್ರಶಸ್ತಿಯ ಮೌಲ್ಯವನ್ನು ಕುಗ್ಗಿಸುವ ಕೃತಿಗಳನ್ನು ರಚಿಸುವ ಜ್ಞಾನಪೀಠಿಗಳಿಂದ ಪ್ರಶಸ್ತಿಯನ್ನು ಕಿತ್ತುಕೊಳ್ಳುವಂತಾದರೆ ಎಷ್ಟು ಒಳ್ಳೆಯದು ಎಂದು ಯೋಚಿಸಿದ್ದೆ.

          ಕಾರ್ನಾಡರನ್ನು ಅನುಮಾನಿಸುತ್ತಲೇ, ತಿರಸ್ಕರಿಸುತ್ತಲೇ, ಮೆಚ್ಚುತ್ತಲೇ ಅವರ ಬಗ್ಗೆ ಒಂದು ನಿರ್ದಿಷ್ಟ ಅಭಿಪ್ರಾಯವನ್ನು ರೂಪಿಸಿಕೊಂಡಿದ್ದೇನೆ.  ಧೀರ್ಘಕಾಲದ ಮೌನವನ್ನು ಥಟ್ಟನೆ ಭಂಗಿಸಿ ಧಿಗ್ಗನೆದ್ದು ಕೂತು ಮಾತು ಆರಂಭಿಸುವಂತೆ ಅವರು ಆಗಾಗ ನೀಡುವ ಹೇಳಿಕೆಗಳ ಹಿಂದೆ ಸದಾ ಸುದ್ಧಿಯಲ್ಲಿರಬೇಕೆನ್ನುವ ಗೀಳು ಕೆಲಸಮಾಡುತ್ತಿಲ್ಲ.  ತಮ್ಮ ಅಭಿಪ್ರಾಯ, ನಿಲುವುಗಳನ್ನು ಇತರರು ಒಪ್ಪಲೇಬೇಕೆನ್ನುವ ಒತ್ತಾಯವೂ ಅವರಲ್ಲಿಲ್ಲ.  ಟೀಕೆಗಳ ಬಗ್ಗೆ ಅವರು ಸಹನೆ ಕಳೆದುಕೊಂಡು ಪ್ರತಿಕ್ರಿಯಿಸಿದ ಹಾಗೆಯೂ ಕಾಣುವುದಿಲ್ಲ.  ಪ್ರಸಕ್ತ ವಿವಾದವನ್ನೇ ಉದಾಹರಣೆಗೆ ತೆಗೆದುಕೊಂಡರೆ, ತಮಗೆ ಪ್ರೊಫೆಷನಲ್ ಸೆಕ್ಯೂಲರಿಸ್ಟ್ ಎಂಬ ಹಣೆಪಟ್ಟಿ ಹಚ್ಚಿರುವುದರ ಬಗ್ಗೆ ತಮ್ಮಲ್ಲಿ ಯಾವ ಅಭ್ಯಂತರವೂ ಇಲ್ಲ ಎಂದು ತಣ್ಣಗೆ ಹೇಳಿದ್ದಾರೆ.  ಒಟ್ಟಿನಲ್ಲಿ, ತಮಗನಿಸಿದ್ದನ್ನು ನೇರವಾಗಿ, ಪ್ರಾಮಾಣಿಕವಾಗಿ ಹೇಳಿಬಿಡುವ ಅವರು ಚೀರ್‌ಗರ್ಲ್ಸ್‌ರಂಥ ಕಾರ್ಡ್‌ಹೋಲ್ಡರ್ ವಂದಿಮಾಗಧರನ್ನು ಕಟ್ಟಿಕೊಂಡು ದಿನಕ್ಕೊಂದು ಕಡೆ ಗಿಲೀಟಿನ ಮಾತುಗಳನ್ನಾಡುತ್ತಲೇ ಇದುವರೆಗಿನ ಬದುಕು ಕಳೆದವರಲ್ಲ.  ಅವರ ಮಾತುಗಳನ್ನು ಮೊದಲು ಗಮನವಿಟ್ಟು ಕೇಳಿದ ನಂತರವಷ್ಟೇ ಅದು ಪುರಸ್ಕಾರಯೋಗ್ಯವೋ, ತಿರಸ್ಕಾರಯೋಗ್ಯವೋ ಎಂದು ತೀರ್ಮಾನಿಸಲು ನನ್ನನ್ನು ಪ್ರೇರೇಪಿಸುವುದು ನನಗೆ ದಕ್ಕಿದ ಅವರ ಈ ವ್ಯಕ್ತಿತ್ವ.

          ನೈಪಾಲರಿಗೆ ನೀಡಲಾದ ಜೀವಮಾನ ಸಾಧನೆಯ ಪ್ರಶಸ್ತಿಯ ಉದ್ದೇಶವನ್ನೇ ಕಾರ್ನಾಡ್ ಪ್ರಶ್ನಿಸಿದ್ದಾರೆ.  ಇದು ವಿಚಾರಯೋಗ್ಯ ಪ್ರಶ್ನೆ.  ಈ ಪ್ರಶಸ್ತಿ ಜಗತ್ತಿಗೆ ನೀಡುತ್ತಿರುವ ಸಂದೇಶವೇನು ಎಂಬ ಪ್ರಶ್ನೆ ನನ್ನನ್ನೂ ಕಾಡುತ್ತಿದೆ.  ಬಹುಮುಖಿ ಭಾರತೀಯ ಸಂಸೃತಿಯ ಬಗ್ಗೆ ಏಕಮುಖ ತೀರ್ಮಾನಗಳನ್ನು ಕೊಡುವ, ಭಾರತೀಯ ಸಂಸ್ಕೃತಿಯಲ್ಲಿ ಇಸ್ಲಾಂನ ಸ್ಥಾನದ ಬಗ್ಗೆ ಪೂರ್ವಗ್ರಹಪೀಡಿತ, ನಕಾರಾತ್ಮಕ ನಿಲುವುಗಳನ್ನು ತಳೆದಿರುವ, ಇಸ್ಲಾಮಿಕ್ ಮೂಲಭೂತವಾದವನ್ನೇ ಇಸ್ಲಾಂನ ನೈಜರೂಪ ಎಂಬ ಅಭಿಪ್ರಾಯ ಹೊಂದಿರುವ, ಮತ್ತವುಗಳನ್ನು ಯಾವ ಹಿಂಜರಿಕೆಯೂ ಇಲ್ಲದೇ ಪ್ರಚುರಪಡಿಸುತ್ತಿರುವ ನೈಪಾಲರಿಗೆ ಈ ಬಗೆಯ ಪ್ರಶಸ್ತಿಯೆಂದರೆ ಅವರ ನಿಲುವುಗಳನ್ನು ಸಮರ್ಥಿಸಿದಂತಾಗುವುದಿಲ್ಲವೇ?  ಈ ಪ್ರಶಸ್ತಿಯ ಹಿಂದೆ ಕೆಲಸ ಮಾಡುತ್ತಿರುವ ಶಕ್ತಿಗಳು ಯಾವುವು ಮತ್ತು ಅವುಗಳ ಉದ್ದೇಶವೇನು?

ನೈಪಾಲರಿಗೆ ನೊಬೆಲ್ ಬಹುಮಾನ ಸಿಕ್ಕಿದ್ದು ೨೦೦೧ರಲ್ಲಿ.  ಆ ದಿನಗಳಲ್ಲಿ ಪಾಶ್ಚಿಮಾತ್ಯ ಜಗತ್ತಿಗೆ ಇಸ್ಲಾಮಿಕ್ ಮೂಲಭೂತವಾದ ಒಡ್ಡಿದ ಅಪಾಯ, ಅದಕ್ಕೆ ಅಮೆರಿಕಾ ಮತ್ತು ಪಶ್ಚಿಮ ಯೂರೋಪ್ ಪ್ರತಿಕ್ರಿಯಿಸಿದ ಬಗೆಗೂ ಇಸ್ಲಾಂವಿರೋಧಿ ನೈಪಾಲರ ನೊಬೆಲ್‌ಗೂ ಸಂಬಂಧವಿರಬಹುದೇ?  ನೊಬೆಲ್ ಬಹುಮಾನಗಳ (ಮುಖ್ಯವಾಗಿ ಶಾಂತಿ ಮತು ಸಾಹಿತ್ಯ) ಹಿಂದಿರುವ ಪಶ್ಚಿಮಪರ ರಾಜಕೀಯದ ಅರಿವಿದ್ದವರಿಗೆ ನನ್ನ ಪ್ರಶ್ನೆ ಅರ್ಥವಾಗಬಹುದು.  ಬ್ರಾಹ್ಮಣರನ್ನು ಜರೆದರೆ ಪ್ರಶಸ್ತಿ ನಿಶ್ಚಿತ ಎಂಬ ಕೆಟ್ಟ ಪರಿಸ್ಥಿತಿ ಇತ್ತೀಚಿನವರೆಗೂ ಭಾರತದಲ್ಲಿತ್ತು.  ಈಗ ಇಸ್ಲಾಂ ವಿರುದ್ಧ ಬರೆದರೆ ಅಂತರರಾಷ್ಟ್ರೀಯ ಪ್ರಶಸ್ತಿ ನಿಶ್ಚಿತ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆಯೇ?  ಅದೀಗ ನೈಪಾಲರ ಜೀವಮಾನ ಸಾಧನೆ ಪ್ರಶಸ್ತಿಯ ಮೂಲಕ ಭಾರತಕ್ಕೂ ಕಾಲಿಡುತ್ತಿದೆಯೇ?  ಅಂದರೆ ಭಾರತೀಯ ಸಾಹಿತ್ಯದ ಒಂದು ವರ್ಗ ಭಾರತೀಯ ಸಂಸ್ಕೃತಿಗೆ ಇಸ್ಲಾಂನ ಕಾಣಿಕೆಯನ್ನು ನಗಣ್ಯಗೊಳಿಸಲು, ತನ್ಮೂಲಕ ಇಸ್ಲಾಮನ್ನು ನಿರಾಕರಿಸಲು ಪ್ರಯತ್ನ ಆರಂಭಿಸಿದೆಯೇ?  ಹಾಗಿದ್ದಲ್ಲಿ ಇದರ ದೂರಗಾಮಿ ಪರಿಣಾಮಗಳೇನು?  ಸಂಸ್ಕೃತಿ ಚಿಂತಕರು ಗಮನಿಸಬೇಕಾದ ವಿಷಯ ಇದು.

          ನೈಪಾಲ್ ಬಗ್ಗೆ ಮಾತಾಡಲು ಕಾರ್ನಾಡ್ ಆಯ್ದುಕೊಂಡ ಸಂದರ್ಭದ ಔಚಿತ್ಯದ ಪ್ರಶ್ನೆ ಹಲವರನ್ನು ಕಾಡಿದೆ.  ಮುಂಬೈ ಸಾಹಿತ್ಯೋತ್ಸವದ ಆಯೋಜಕ ಅನಿಲ್ ಧಾರ್ಕರ್ ಈ ಬಗ್ಗೆ ವಿ. ಎಸ್. ನೈಪಾಲ್ ಬಗ್ಗೆ ಗಿರೀಶ್ ಕಾರ್ನಾಡ್ ಅವರ ಧಾಳಿಯಿಂದ ನಾವೆಲ್ಲಾ ಬೆಚ್ಚಿದ್ದೇವೆ.  ಅವರನ್ನು ನಾವಿಲ್ಲಿಗೆ ಆಹ್ವಾನಿಸಿದ್ದು ತಮ್ಮ ರಂಗಯಾನದ ಬಗ್ಗೆ ಮಾತಾಡಲಷ್ಟೆ.  ಶ್ರೀ ನೈಪಾಲ್‌ರಿಗೂ ಇದಕ್ಕೂ ಯಾವ ಸಂಬಂಧವೂ ಇರಲಿಲ್ಲ ಎಂದು ಹೇಳುವ ಮೂಲಕ ತಮ್ಮ ಅಸಂತೋಷ, ಅಸಮಾಧಾನವನ್ನು ಹೊರಹಾಕಿದ್ದಾರೆ.  ಆದರೆ ನೈಪಾಲ್ ಬಗ್ಗೆ ಮಾತಾಡಲು ತಾವು ಆಯ್ಕೆ ಮಾಡಿಕೊಂಡದ್ದು ಸರಿಯಾದ ಸಂದರ್ಭ, ಸರಿಯಾದ ಸ್ಥಳ ಹಾಗೂ ಸರಿಯಾದ ಶ್ರೋತೃಸಮೂಹ ಎಂದು ಕಾರ್ನಾಡ್ ಯಾವ ಹಿಂಜರಿಕೆಯೂ ಇಲ್ಲದೇ ಹೇಳಿದ್ದಾರೆ.  ಅವರ ಪ್ರಕಾರ, ಹತ್ತುವರ್ಷಗಳ ಹಿಂದೆ ನೈಪಾಲ್ ಬಿಬಿಸಿ ಟೆಲಿವಿಷನ್‌ನಲ್ಲಿ ಮುಸ್ಲಿಮರ ವಿರುದ್ಧ ಆಡಿದ ಮಾತುಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೊರಹಾಕುವುದು ತಾವು ಸರಕಾರೀ ನೌಕರನಾಗಿದ್ದರಿಂದ ಸಾಧ್ಯವಾಗಲಿಲ್ಲ.  ಸರಕಾರೀ ನೌಕರರಿರಲಿ, ಸರಕಾರೀವ್ಯವಸ್ಥೆಯಿಂದ ಎಲ್ಲ ಸವಲತ್ತುಗಳನ್ನೂ ಪಡೆದುಕೊಂಡೂ, ವ್ಯವಸ್ಥೆಯ ವಿರುದ್ಧ ಹಿಂಸಾತ್ಮಕ ಚಟುವಟಿಕೆಗಳನ್ನು ಕೈಗೊಳ್ಳುವವರ ಪರವಾಗಿ ಮಾತಾಡುವವರು ಕಾರ್ನಾಡರಿಂದ ಕಲಿಯುವುದು ಸಾಕಷ್ಟಿದೆ.

          ತಮ್ಮ ರಂಗ ಯಾನದ ಬಗ್ಗೆ ಮಾತಾಡುವಂತೆ ತಮಗೆ ಬಹಳ ಹಿಂದೆಯೇ ಆಹ್ವಾನ ಬಂದಿತ್ತೆಂದೂ, ನೈಪಾಲರಿಗೆ ಜೀವಮಾನ ಸಾಧನೆಯ ಪ್ರಶಸ್ತಿಯನ್ನು ನೀಡಲಾಗುವ ಬಗ್ಗೆ ತಮಗೆ ತಿಳಿದದ್ದು ಎರಡು ದಿನಗಳ ಹಿಂದಷ್ಟೇ ಎಂದೂ ಕಾರ್ನಾಡ್ ಹೇಳಿದ್ದಾರೆ.  ಹೀಗಾಗಿಯೇ ಆ ನೊಬೆಲ್ ಪುರಸೃತರ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೊರಹಾಕಲು ಇದೇ ಸುಸಂದರ್ಭವೆನಿಸಿತು ಎಂದೂ ಅವರು ಹೇಳಿದ್ದಾರೆ.  ಇಲ್ಲಿ ಸುಮ್ಮನಿದ್ದು, ಆಮೇಲೆ ಬೆಂಗಳೂರಿಗೆ ಹೋಗಿ ಮಾತಾಡಿದರೇನು ಪ್ರಯೋಜನ? ಎಂದವರು ಪ್ರಶ್ನಿಸುತ್ತಾರೆ.  ಮೇಲೆ ಉಲ್ಲೇಖಿಸಿರುವ ನೈಪಾಲರ ಜೀವಮಾನ ಸಾಧನೆಯ ಪ್ರಶಸ್ತಿಯ ಔಚಿತ್ಯದ ಬಗ್ಗೆ ಯೋಚಿಸಿದರೆ ಕಾರ್ನಾಡರ ಈ ಪ್ರಶ್ನೆ ಅರ್ಥಪಡೆದುಕೊಳ್ಳುತ್ತದೆ.  ಎಲ್ಲರಿಗೂ ಗೊತ್ತಿರುವ, ಕಾರ್ನಾಡರೇ ಹಲವು ಕಡೆ ವಿವರಿಸಿರುವ ಅವರ ರಂಗ ಸಾನ್ನಿದ್ಯದ ಬಗೆಗಿನ ಮಾತುಕತೆಗಳಿಗಿಂತಲೂ ನೈಪಾಲರಿಗೆ ನೀಡಲಾದ ಪ್ರಶಸ್ತಿಯ ಉದ್ದೇಶ ಮತ್ತು ಔಚಿತ್ಯದ ಬಗ್ಗೆ ಮಾತಾಡುವುದು ಈ ದಿನದ ಅಗತ್ಯ.  ಅದನ್ನು ಕಾರ್ನಾಡ್ ಸರಿಯಾದ ಸಂದರ್ಭದಲ್ಲಿ, ಸರಿಯಾದ ಸ್ಥಳದಲ್ಲಿ, ಸರಿಯಾದ ಶ್ರೋತೃಗಳ ಮುಂದೆ ಸರಿಯಾಗಿ ಮಾಡಿದ್ದಾರೆ.

          ನಾನು ಶಾಲೆಯಲ್ಲಿದ್ದಾಗ ಪತ್ರಿಕೆಗಳಲ್ಲಿ ಓದಿದ್ದ ಒಂದು ವಿಷಯವನ್ನು ಇಲ್ಲಿ ನೆನಪಿಸಿಕೊಳ್ಳುವುದು ಉಚಿತ.  ೧೯೭೧-೭೨ರಲ್ಲಿರಬೇಕು, ಚಿಂತಕ ನೋಮ್ ಚೋಮ್‌ಸ್ಕಿ ಬೆಂಗಳೂರಿಗೆ ಆಹ್ವಾನಿತರಾಗಿದ್ದರು.  ಅವರು ಭಾಷಾಶಾಸ್ತ್ರಜ್ಞರಾಗಿದ್ದವರು ಮತ್ತು ವಿಯೆಟ್ನಾಂ ಯುದ್ದದ ಕಡುವಿರೋಧಿಯಾಗಿದ್ದವರು.  ಅವರ ಕೃತಿ America and the New Mandarins ವಿಶ್ವಾದ್ಯಂತ ಚರ್ಚೆಗೊಳಗಾಗುತ್ತಿತ್ತು.  ಬೆಂಗಳೂರಿಗೆ ಅವರು ಅಹ್ವಾನಿತರಾಗಿದ್ದದ್ದು ಭಾಷಾಶಾಸ್ತ್ರದ ಬಗ್ಗೆ ಮಾತಾಡಲು.  ಆದರೆ ಅವರು ಮಾತಾಡಿದ್ದು ವಿಯೆಟ್ನಾಂನಲ್ಲಿ ಅಮೆರಿಕಾ ನಡೆಸುತ್ತಿದ್ದ ದೌರ್ಜನ್ಯಗಳ ಬಗ್ಗೆ.  ತಮ್ಮ ಭಾಷಣವನ್ನು ಅವರು ಆರಂಭಿಸಿದ್ದು ಸರಿಸುಮಾರು ಹೀಗೆ: ...ಈ ಗಳಿಗೆಯಲ್ಲಿ ನಾಗರೀಕ ಪ್ರಪಂಚದ ಮುಂದಿರುವ ಅತ್ಯಂತ ಜಟಿಲ ಪ್ರಶ್ನೆ ವಿಯೆಟ್ನಾಂನಲ್ಲಿ ಅಮೆರಿಕಾ ನಡೆಸುತ್ತಿರುವ ನರಮೇಧ.  ಇದನ್ನು ನಿರ್ಲಕ್ಷಿಸಿ ಭಾಷಾಶಾಸ್ತ್ರದ ಬಗ್ಗೆ ಮಾತಾಡುವುದು ಅರ್ಥಹೀನ.  ಭಾಷಾಶಾಸ್ತ್ರದ ಬಗೆಗಷ್ಟೇ ನನ್ನ ಮಾತುಗಳನ್ನು ನಿರೀಕ್ಷಿಸಿ ಇಲ್ಲಿಗೆ ಬಂದಿರುವವರು ಹೊರಹೋಗಬಹುದು...

          ಟ್ಯಾಗೋರ್ ಕುರಿತು ಕಾರ್ನಾಡ್ ಹೇಳಿಕೆಯ ಬಗ್ಗೆ ಒಂದೆರಡು ಮಾತು.  ಕಾರ್ನಾಡ್‌ರಂತಹ ಒಬ್ಬ ಪ್ರತಿಭಾವಂತ ನಾಟಕಕಾರ ಮತ್ತೊಬ್ಬರ (ಅವರು ಯಾರೇ ಆಗಿರಲಿ) ನಾಟಕಗಳ ಬಗ್ಗೆ ಏನನ್ನಾದರೂ ಹೇಳಿದರೆ ರಂಗಕರ್ಮಿಗಳು ಮತ್ತು ರಂಗಾಸಕ್ತರು ಅದನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿದೆ ಎಂದು ನಾನು ನಂಬುತ್ತೇನೆ.  ನಾಟಕಕಾರರಿಂದ ಹಿಡಿದು ರಾಜಕಾರಣಿಗಳವರೆಗೆ ಹಲವಾರು ಬಂಗಾಲಿ ಪ್ರಮುಖರು ಕಾರ್ನಾಡ್ ಹೇಳಿಕೆ ವಿರುದ್ಧ ಮುಜುಗರ, ಅಸಂತೋಷ, ಕೋಪ ವ್ಯಕ್ತಪಡಿಸುತ್ತಿರುವುದರ ಹಿಂದಿರುವುದು ವಸ್ತುನಿಷ್ಟ ಅವಲೋಕನಕ್ಕಿಂತಲೂ ಸಬ್‌ನ್ಯಾಷನಲಿಸ್ಟ್ ಎಂದು ಕರೆಯಬಹುದಾದಷ್ಟು ಉಗ್ರವಾದ ಬಂಗಾಲೀ ಭಾಷೀಯ, ಪ್ರಾದೇಶಿಕ, ಸಾಂಸ್ಕೃತಿಕ ಅಭಿಮಾನ ಎಂದು ನನಗನಿಸುತ್ತದೆ.  ರವೀಂದ್ರನಾಥ್ ಟ್ಯಾಗೋರ್ ಭಾರತದ ಮೊಟ್ಟಮೊದಲ ಹಾಗೂ ಏಕೈಕ ನೊಬೆಲ್ ಪುರಸ್ಕೃತ ಸಾಹಿತಿ, ಭಾರತೀಯ ಕಾವ್ಯಕ್ಕೆ ಹೊಸದಿಕ್ಕನ್ನು ತೋರಿದವರು.  ಈ ಕಾರಣಗಳಿಂದಾಗಿಯೇ ಅವರ ಸಾಹಿತ್ಯಕ ಕೃತಿಗಳ ವಿಮರ್ಶೆ, ಪುನರ್ವಿಮರ್ಶೆ ಮತ್ತೆ ಮತ್ತೆ ನಡೆಯಬೇಕಾದ ಅಗತ್ಯವಿದೆ.  ಯಾವುದೇ ಸಾಹಿತ್ಯ ಕೃತಿಯೊಂದು ಜೀವಂತವಾಗಿ ಉಳಿಯಬೇಕಾದರೆ ಅದರ ಬಗ್ಗೆ ನಿರಂತರವಾಗಿ ಚರ್ಚೆಯಾಗುತ್ತಲೇ ಇರಬೇಕು.  ಯಾವಾಗ ವಿಮರ್ಶೆ, ಪುನರ್ವಿಮರ್ಶೆಗಳು ನಿಂತುಹೋಗುತ್ತವೋ ಆಗ ಆ ಕೃತಿಯೊಂದು ಸಾಹಿತ್ಯಕ ಮಮ್ಮಿಯಾಗಿಬಿಡುತ್ತದೆ.  ಕೃತಿಯೊಂದನ್ನು ಕೊಲ್ಲುವ ಅತ್ಯುತ್ತಮ ವಿಧಾನವೆಂದರೆ ಅದರ ಬಗ್ಗೆ ಚರ್ಚೆ ಮಾಡದಿರುವುದು.  ಹಾಗೆ ಕೃತಿಯೊಂದನ್ನು ಕೊಂದರೆ ಕೃತಿಕಾರನ ಅಸ್ತಿತ್ವವೂ ಅಷ್ಟರ ಮಟ್ಟಿಗೆ ಘಾಸಿಗೊಳಗಾಗುತ್ತದೆ, ಇತಿಹಾಸದಲ್ಲಿ ನಗಣ್ಯವಾಗುತ್ತದೆ.  ಟ್ಯಾಗೋರರಿಗೆ ಅಂತಹ ದುರ್ಗತಿ ಬರುವುದು ಬೇಡ.  ಅವರ ಕೃತಿಗಳು ಪವಿತ್ರ ಗೋವುಗಳಾಗುವುದು ಬೇಡ.  ಕಾರ್ನಡರು ಎತ್ತಿರುವ ಟೀಕೆಗಳಿಗೆ ಪ್ರತಿಕ್ರಿಯೆಯಾಗಿ ಅವರ ಬಗ್ಗೆ ವೈಯುಕ್ತಿಕ ನಿಂದನೆಗಳಿಲ್ಲದ ಅರೋಗ್ಯಕರ ಚರ್ಚೆಯೊಂದು ಆರಂಭವಾದರೆ ಟ್ಯಾಗೋರರನ್ನು ನಮ್ಮ ನಡುವೆ ಮತ್ತೊಮ್ಮೆ ಜೀವಂತಗೊಳಿಸಿಕೊಳ್ಳಬಹುದು.

 

12 comments:

  1. ಕಾರ್ನಾಡರು ಪ್ರಜಾವಾಣಿ ದೀಪಾವಳಿ ವಿಶೇಷಾಂಕ ದಲ್ಲಿ ಬರೆದ " ನಾನು ಮತ್ತು ಪ್ರಧಾನ ಮಂತ್ರಿ" ಲೇಖನವನ್ನು ಗಮನಿಸಿದ್ದೀರಾ..? ಕಾರ್ನಾಡರಿಗೆ ಕೇವಲ ಒಂದು ಜಾತಿಯವರಿಗೆ "ಆಗುವಂತಹ" (ವಾಸ್ತವವಾಗಿ ಅಲ್ಲದಿದ್ದರೂ) ತೊಂದರೆಗಳು ಮಾತ್ರ ಕಾಣುತ್ತದೆಯೋ .. ಸಮಾಜದ ಎಲ್ಲರಿಗೂ ಇಂದು ಎದುರಾಗುವ ಹಣದುಬ್ಬರ, ದರ ಏರಿಕೆ, ಅಡುಗೆ ಅನಿಲದ ಕಡಿತ, ಉನ್ನತ ಮಟ್ಟದಲ್ಲಿ ನಡೆಯುವ ಭ್ರಷ್ಟಾಚಾರಗಳು ಎಲ್ಲ ಇವರಿಗೆ ಯಾವುದೇ ರೋಷ, ಕ್ರೋಧ ಮಾಡುವುದಿಲ್ಲವೇ..? ಚರಿತ್ರೆಯು ನಿಜಕ್ಕೂ ನಿಜವೇ.? ಅಲ್ಲ ಯಾವುದಾದರು ಪ್ರಶಸ್ತಿಯ ಬೆನ್ನು ಹತ್ತಿದ್ದಾರೆಯೇ..

    ReplyDelete
    Replies
    1. ಇಲ್ಲ, ಆ ಲೇಖನದ ಬಗ್ಗೆ ನನಗೆ ತಿಳಿದಿರಲಿಲ್ಲ. ಓದಲು ಪ್ರಯತ್ನಿಸುತ್ತೇನೆ. ಎಲ್ಲರನ್ನೂ ಕಾಡುವ ಸಮಸ್ಯೆಗಳ ಬಗ್ಗೆ ಎಲ್ಲರೂ ಮಾತಾಡಲಾಗುವುದಿಲ್ಲ. ಹಾಗೆಂದ ಮಾತ್ರಕ್ಕೆ ಅವರಲ್ಲಿ ಕಾಳಜಿ ಇಲ್ಲವೇ ಇಲ್ಲ ಎಂದು ಹೇಳಲಾಗುವುದಿಲ್ಲ. ಒಬ್ಬೊಬ್ಬರ ಆಸಕ್ತಿ ಒಂದೊಂದು ಬಗೆಯಾಗಿರುತ್ತದೆ. ಕಾರ್ನಾಡರು ಭ್ರಷ್ಟಾಚಾರದ ಬಗ್ಗೆ ಮಾತಾಡುತ್ತಿಲ್ಲ. ಹಾಗೇ ಅಣ್ಣಾ ಹಜಾರೆ ಟ್ಯಾಗೋರ್ ಬಗ್ಗೆ ಮಾತಾಡುತ್ತಿಲ್ಲ, ಕೇಜ್ರಿವಾಲ್ ಕಾವೇರಿಯ ಬಗ್ಗೆ ಮಾತಾಡುತ್ತಿಲ್ಲ. ನನ್ನ ಈ ಲೇಖನದ ಬಗ್ಗೆ ಪ್ರತಿಕ್ರಿಯೆ ತೋರಿದ ನೀವು ನನ್ನ ಇತರ ಬರಹಗಳ ಬಗ್ಗೆ, ಕಥೆಗಳ ಬಗ್ಗೆ ಎಂದಾದರೂ ಇಲ್ಲಿ ಪ್ರತಿಕ್ರಿಯೆ ತೋರಿದ್ದುಂಟೇ? ಅವರವರ ಆಸಕ್ತಿಯ ಬಗ್ಗೆ ಅವರವರು ಮಾತಾಡುತ್ತಾರೆ. ಕಾರ್ನಾಡರಿಗೆ ಒಂದು ಜಾತಿಯವರಿಗೆ (ಧರ್ಮದವರಿಗೆ ಎನ್ನಬಹುದೇ?)ಆಗುವಂತಹ ತೊಂದರೆಗಳು ಮಾತ್ರ ಕಾಣುತ್ತವೆಯೇ ಎಂಬ ನಿಮ್ಮ ಪ್ರಶ್ನೆ ನನಗೆ ಅರ್ಥಪೂರ್ಣ. ಆ ಸಂದೇಹ ನನಗೂ ಇದೆ. ದೇಶಕಾಲ ಪತ್ರಿಕೆಯಲ್ಲಿ ಬಂದ ಅವರ ಕತೆಯ ಬಗ್ಗೆ ನನಗೆ ತಿರಸ್ಕಾರ ಉಂಟಾದದ್ದು ಆ ಕಾರಣಕ್ಕಾಗಿಯೇ.

      Delete
  2. ನಾನು ಹೊಟ್ಟೆಕಿಚ್ಚಿನಿ೦ದಲೇ ಒಪ್ಪಿಕೊಳ್ಳುವಷ್ಟು ನಿಖರವಾಗಿ ಮೊಳೆಯ ತಲೆ ಮೇಲೆ ನಿಮ್ಮ ಸುತ್ತಿಗೆ ಏಟು ಬಿದ್ದಿದೆ, ಸರ್. ನಾನು ನೈಪುಲ್ ಅವರ ಬಗ್ಗೆ ಸ್ವಲ್ಪವೇ ಕೇಳಿ ತಿಳಿದಿರುವವನು, ಆದರೂ ಅವರು ತೀರಾ ಒರಟು ಸ್ಪ೦ದನೆಯ ಪ್ರಖರ ಸಾಹಿತಿ ಅ೦ತೇನೋ ತಿಳಿದುಕೊ೦ಡಿದ್ದೆ, ಹಾಗಾಗಿ ಕಾರ್ನಾಡ್ ರ೦ತವರ ಬಾಯಿಯಿ೦ದ ಹೊಮ್ಮಿದ ಮಾತುಗಳು ಆಶ್ಚರ್ಯ ಉ೦ಟುಮಾಡದಿದ್ದರೂ ಸ್ವಲ್ಪ ವಿಷಾದವಾಯಿತು - ಕಾರ್ನಾಡ್ ರಿಗೆ ಜ್ನಾನಪೀಠ ದೊರೆತಾಗ ಅನೇಕ ಕನ್ನಡಿಗರು ತುಸು ದಿಗಿಲಾದರೂ ಕನ್ನಡಕ್ಕೆ ಸ೦ದ ಮನ್ನಣೆ ಎ೦ದು ಬಾಯಿಮುಚ್ಚಿ ಸ೦ತೋಷಪಟ್ಟಹಾಗೆ. ಡಿಟ್ಟೋ, ಠಾಕೂರ್. ಕಳೆದವಾರ ಟೈ೦ಸ್ ನೌ ನಲ್ಲಿ ಬ೦ದ ಸ೦ವಾದವೊ೦ದರಲ್ಲಿ ಠಾಕೂರ್ ರ ನಾಟಕಗಳ ಕಿರು ವಿಮರ್ಶೆ ಕೇಳಿದ ಬಳಿಕ ಇ೦ತಹುದೇ ಅಭಿಪ್ರಾಯ ಹೊ೦ದುವ೦ತಾಗಿತ್ತು. ಈ ಆಲೋಚನೆಗಳಿಗೆ ನೀವು ಮೂರ್ತ ರೂಪ ನೀಡಿದಿರಿ. ಆದರೂ ಕಾರ್ನಾಡ್ ರ ನಾಟಕ ಹೊರತು ಪಡಿಸಿ, ಇತರ ಯಾವುದೇ ವಿಷಯ ಕುರಿತು ಗ೦ಭೀರವಾಗಿ ತೆಗೆದುಕೊಳ್ಳಬಾರದು ಎ೦ದು ನನ್ನ ದೃಢ ಅಭಿಮತ. ಕಾರ್ನಾಡ್ ರ ನಾಟಕಗಳ ಮಾಯಾಲೋಕ ನಿಜವಾಗಿಯೂ ವಿಶಿಷ್ಟ, ನನ್ನ ಸೀಮಿತ ಅನುಭವಕ್ಕೂ ದಕ್ಕಿದ ಭಾವನೆ ಇದು. ೫-೬ ವರ್ಷ ಹಿ೦ದೆ ಪ್ರಜಾವಾಣಿ ರವಿವಾರ ಪುರವಣಿಯಲ್ಲಿ ಕೆ ವಿ ತಿರುಮಲೇಶ್ ಕಾರ್ನಾಡ್ ರ ಪ್ರಸಿಧ್ಧಿಯ ಹಿ೦ದಿನ ಮುಖ ಅನಾವರಣಗೊಳಿಸಿದ್ದಾಗ ತಲೆದೂಗಿದ್ದೆ. ಗಾಜಿನ ವಿಶ್ವದಲ್ಲಿ ವಾಸಿಸುವ ನೈಪುಲ್, ಕಾರ್ನಾಡ್,, ಎಲ್ಲರೂ ಸದಾ ಈ ರಿಸ್ಕ್ ಜೊತೆ ಆರಾಮವಾಗಿ ಇರುತ್ತಾರೆ, ಅಲ್ಲವೇ ?
    ವ೦ದನೆಗಳು

    ReplyDelete
    Replies
    1. ಎಂದಿನಂತೆ ನಿಮ್ಮ ಉತ್ತೇಜನಪೂರಕ ಪ್ರತಿಕ್ರಿಯೆ ನೋಡಿ ಖುಷಿಯಾಯಿತು. ನಿಮ್ಮ ಮಾತು ನಿಜ. ನಾಟಕಗಳ ಹೊರತಾಗಿ ಸೃಜನಶೀಲ ಕೃತಿಗಳಲ್ಲಿ ಮೆಚ್ಚಿಕೊಳ್ಳುವಂಥದ್ದು ಕಾರ್ನಾಡರಲ್ಲಿ ಅಷ್ಟೇನೂ ಇಲ್ಲ. ಆದರೆ, ಅವರು ಸುಮ್ಮನೆ ಮಾತಾಡುವ ಗೀಳಿನಿಂದಷ್ಟೇ ಮಾತಾಡುವುದಿಲ್ಲ ಎಂಬ ಅಂಶ ನನಗೆ ಇಷ್ಟ. ಅವರ ಈ ಸ್ವಭಾವ ಇತರರಿಗೆ ಮಾದರಿಯಾಗಬೇಕು.

      Delete
  3. " ಟ್ಯಾಗೋರ್ ಕುರಿತು ಕಾರ್ನಾಡ್ ಹೇಳಿಕೆಯ ಬಗ್ಗೆ ಒಂದೆರಡು ಮಾತು. ಕಾರ್ನಾಡ್‌ರಂತಹ ಒಬ್ಬ ಪ್ರತಿಭಾವಂತ ನಾಟಕಕಾರ ಮತ್ತೊಬ್ಬರ (ಅವರು ಯಾರೇ ಆಗಿರಲಿ) ನಾಟಕಗಳ ಬಗ್ಗೆ ಏನನ್ನಾದರೂ ಹೇಳಿದರೆ ರಂಗಕರ್ಮಿಗಳು ಮತ್ತು ರಂಗಾಸಕ್ತರು ಅದನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿದೆ ಎಂದು ನಾನು ನಂಬುತ್ತೇನೆ. ನಾಟಕಕಾರರಿಂದ ಹಿಡಿದು ರಾಜಕಾರಣಿಗಳವರೆಗೆ ಹಲವಾರು ಬಂಗಾಲಿ ಪ್ರಮುಖರು ಕಾರ್ನಾಡ್ ಹೇಳಿಕೆ ವಿರುದ್ಧ ಮುಜುಗರ, ಅಸಂತೋಷ, ಕೋಪ ವ್ಯಕ್ತಪಡಿಸುತ್ತಿರುವುದರ ಹಿಂದಿರುವುದು ವಸ್ತುನಿಷ್ಟ ಅವಲೋಕನಕ್ಕಿಂತಲೂ ಸಬ್‌ನ್ಯಾಷನಲಿಸ್ಟ್ ಎಂದು ಕರೆಯಬಹುದಾದಷ್ಟು ಉಗ್ರವಾದ ಬಂಗಾಲೀ ಭಾಷೀಯ, ಪ್ರಾದೇಶಿಕ, ಸಾಂಸ್ಕೃತಿಕ ಅಭಿಮಾನ ಎಂದು ನನಗನಿಸುತ್ತದೆ." ಇದನ್ನಂತೂ ಒಪ್ಪಲೇಬೇಕು. ಕಾರ್ನಾಡರು ತಮ್ಮ ಮಾತುಗಳಲ್ಲಿ ಮತ್ತೊಬ್ಬ ಬಂಗಾಳಿ ನಾಟಕಕಾರ (ಹಾಗೆ ಕರೆಯುವುದಾದರೆ) ಬಾದಲ್ ಸರ್ಕಾರ್ ರ ಹೆಸರನ್ನೂ ಎತ್ತಿದ್ದಾರೆ. ಠಾಕೂರರು ಸರ್ಕಾರರಶ್ಟು ದೊಡ್ಡ ನಾಟಕಕಾರರಲ್ಲ ಎಂದು ಹೇಳಿದ್ದಾರೆ. ಆದರೆ, ಬಂಗಾಳ, ಬಂಗಾಳಿ ಎಂದರೆ ರವೀಂದ್ರನಾಥ ಠಾಕೂರ್ ಮಾತ್ರ ಎನ್ನುವಶ್ಟು ಕುರುಡುಮೆಚ್ಚುಗೆ ಬೆಳೆಸಿಕೊಂಡಿರುವ ಬಂಗಾಳಿಗಳು ಎಣಿಸಿದಂತೆಯೇ ಅದಕ್ಕೆ ಹುಚ್ಚುಚ್ಚಾಗಿ ಎದುರುಮಾತುಗಳನ್ನಾಡಿದ್ದಾರೆ. ಎಲ್ಲರೂ, ಎಲ್ಲವೂ ಪ್ರಶ್ನಾರ್ಹವಾಗಬೇಕು. ಇಲ್ಲವಾದಲ್ಲಿ, ಅದರ ಹಿರಿಮೆ ಗರಿಮೆಯನ್ನು ಅಳೆಯಲಾಗುವುದಿಲ್ಲ. ಯಾವುದು ದಿಟವೋ ಅದು ಕಾಲನೊಡ್ಡುವ ಎಲ್ಲ ಪರೀಕ್ಶೆಗಳನ್ನೆದುರಿಸಿ ನಿಲ್ಲುತ್ತದೆ!

    ReplyDelete
  4. ಎಸ್. ಎಲ್. ಭೈರಪ್ಪ, ಯು. ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡರಂಥ ಸಾಹಿತ್ಯಕ ದಿಗ್ಗಜಗಳು" ಎಂದು ಬರೆದಿದ್ದೀರಿ! ಗಿರೀಶ್ ಕಾರ್ನಾಡ್ ಅವರು ದೊಡ್ದ ಸಾಹಿತಿಯೇ ಅಲ್ಲ; ದೊಡ್ಡ ನಾಟಕಕಾರರು, ಚಲನ ಚಿತ್ರ ತಜ್ನರು ಇತ್ಯಾದಿ; ಅವರನ್ನು ಭೈರಪ್ಪ ಮತ್ತು ಅನಂತಮೂರ್ತಿ ಯರೊಡನೆ ಸೇರಿಸಿರುವುದು ಮಹಾ ಅಪರಾಧ!

    ನೈಪಾಲ್ ಅವರ ಬಗ್ಗೆ "ಮುಸ್ಲಿಂ ವಿರೊಧಿ" ಎಂಬ ಲೇಬಲ್ ಕೂಡಾ ಹಾಕಿದ್ದೀರಿ; ಭಾರಥದ ಹೊರಗೆ ಅವರನ್ನು ಆ ರೀತಿಯಲ್ಲಿ ಯಾರೂ ನೋಡುವುದಿಲ್ಲ.
    ಗಿರೀಶ್ ಕಾರ್ನಾಡರು ರವೀಂದ್ರನಾಥ ಟಾಗೋರ್ ಬರಹಗಳನ್ನು ವಿಮರ್ಶೆ ಮಾಡಿಲ್ಲ; ಬರೇ ನಿಂದೆ ಮಾಡಿದ್ದು; ಅದು ರವೀಂದ್ರನಾಥ ಟಾಗೋರ್ ಅವರ ನೆನಪನ್ನು ನಮ್ಮಲ್ಲಿ ಉಳಿಯುವ ಹಾಗೆ ಮಾಡುತ್ತದೆ ಎಂಬ ನಿಮ್ಮ ಲೋಜಿಕ್ ತಮಾಶೆಯಾಗಿ ಕಂಡಿತು!

    ReplyDelete
    Replies
    1. ನಿಮ್ಮ ಕಮೆಂಟಿನಲ್ಲಿರುವ ಹರಟೆಯ ದನಿಯನ್ನು ನೋಡಿ "ಸುಬ್ರು, ಸುಮ್ಕಿರು" ಎಂದು (ನಾಗರಹಾವು ಚಿತ್ರದ ಒಂದು ಸಂಭಾಷಣೆಯನ್ನು ಅನುಕರಿಸಿ) ಹೇಳಿಬಿಡಬಹುದಾಗಿತ್ತು. ಆದರೂ... ಉತ್ತರಿಸುತ್ತಿದೇನೆ. ಹೇಳಿ, ನಾಟಕಗಳು ಸಾಹಿತ್ಯಕ್ಕೆ ಸೇರುವುದಿಲ್ಲವೇ? ನೈಪಾಲ್ ಬಗ್ಗೆ ಆ ಭಾವನೆ ಭಾರತಕ್ಕಿಂತಲೂ ಹೊರದೇಶಗಳಲ್ಲಿ ಹೆಚ್ಚಾಗಿದೆ. ಇನ್ನು ಟ್ಯಾಗೋರ್ ವಿಷಯಕ್ಕೆ ಬಂದರೆ, ಕಾರ್ನಾಡ್ ಮಾತಾಡಿರುವುದು ಟ್ಯಾಗೋರರ ನಾಟಕಗಳ ಬಗ್ಗೆ. ನಿಮ್ಮ ಅಭಿಪ್ರಾಯದಲ್ಲಿ ನಾಟಕಗಳು ಸಾಹಿತ್ಯಕ್ಕೆ ಸೇರುವುದಿಲ್ಲವಲ್ಲ? ಅದರ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳುತ್ತೀರಿ? :)

      Delete
  5. You made an interesting observation.Nobel prize is an out come of American politics. Thanks for your valuable and well balanced analysis

    ReplyDelete
  6. Balanced write up...rejuvenating literary works and healthy discussion forums is need of the hour.

    ReplyDelete
    Replies
    1. Thank you. Yes, healthy discussions are very much needed now.

      Delete
  7. ಜ್ನಾನಪೀಟಿ ಯಾದ ಕಾರ್ನಾಡರು ಮೂಲತಃ ನಾತಕಕಾರರು. ಅವರ ಯಯಾತಿ ಮತ್ತು ಹಯವದನ ಒದಿದ್ದೆ. ಯಯತಿಯನ್ನು ಪದವಿಪೂರ್ವ ತರಗತಿ ಗಳಿಗೆ ತೆಗೆದುಕೊಂಡಿದ್ದೆ . ಅದರಲ್ಲಿ ಅವರು ಎರಡು ಹೊಸ ಪಾತ್ರಗಳನ್ನೇ ಸ್ರಷ್ಟಿ ಮಾಡಿದ್ದಾರೆ . ಅವರ ಎಲ್ಲ ನಾಟಕಗಳಿಗೆ (ತಘಲಕ್ ಬಿಟ್ಟು)ಹಿಂದೂ ಪುರಾಣ ಕಥೆಗಳೇ ಆಧಾರ ಽಅದರೆ "ನಾನು ಹಿಂದೂ ಅಂತ ಹೇಳಿಕೊಳ್ಳಲು ನನಗೆ ನಾಚಿಕೆ"ಅಂತ ಒಂದೆಡೆ ಹೇಳಿ ಅಭಾಸ ಉಂಟು ಮಾಡಿ
    ಕೊಂಡಿ ದ್ದಾರೆ ..

    ReplyDelete