ಹುಟ್ಟಿದ ಹಬ್ಬದ ಬೆಳಗು
ಕೋಳಿ ಕೂಗಲಿಲ್ಲ
ಆದರೂ ನನಗೆ ಎಚ್ಚರವಾಯಿತು
ವರುಷವರುಷಗಳ ಹಿಂದೆ
ಬಾಲ್ಯದಲ್ಲಿ ನನ್ನ ಗಾಳ
ದ ಚೂಪು ಮೊನೆಗೆ ಸಿಕ್ಕಿ
ನೇತಾಡಿದ ಮೀನುಗಳು
ನೆನಪಿನ ನೆರಳು
ಗಳಾಗಿ ಜೋತಾಡಿದವು
ಒಂದೊಂದು ವರುಷಕ್ಕೆ
ಒಂದೊಂದು ಮೀನು
ಗಂಟಲಿಗೆ, ನೆತ್ತಿಗೆ,
ಕಣ್ಣಗುಡ್ಡೆಯ ನಟ್ಟನಡುವೆ
ಚುಚ್ಚಿದ ಗಾಳ-
ವರುಷಗಳು ಪಟಪಟ
ಒದರಾಡಿ ಸೋತವು
ಲೆಕ್ಕ ಹಾಕಿ
ಬುಟ್ಟಿಯಲ್ಲಿ ತುಂಬಿ
ಮಾರಲು ಹೊರಟಾಗ
ನಡುನೆತ್ತಿಯ ಮೇಲೆ
ಕಾಗೆ ಕೂಗುತ್ತಿತ್ತು
No comments:
Post a Comment