ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Tuesday, November 7, 2017

"ಚೇ": ಗುರಿ ಸ್ಪಷ್ಟ, ದಾರಿ ಅಸ್ಪಷ್ಟ, ಛೇ ಛೇ!




ಅರ್ಜೆಂಟೀನಾದಲ್ಲಿ ಜನಿಸಿ, ಎಡಪಂಥೀಯ ವಿಚಾರಧಾರೆಯನ್ನು ರಕ್ತಗತಗೊಳಿಸಿಕೊಂಡು, ಉತ್ತರದಲ್ಲಿ ರಯೋ ಗ್ರ್ಯಾಂಡೆ ನದಿಯಿಂದ ಹಿಡಿದು ದಕ್ಷಿಣದಲ್ಲಿ ಟಿಯಾರಾ ದೆಲ್ ಫ್ಯೂಗೋ ದ್ವೀಪದವರೆಗೆ ಇಡೀ ಲ್ಯಾಟಿನ್ ಅಮೆರಿಕಾದ ಮೂವತ್ತರಷ್ಟು ಸಣ್ಣದೊಡ್ಡ ದೇಶಗಳನ್ನು ಸಮಾಜವಾದಿ ವ್ಯವಸ್ಥೆಯಲ್ಲಿ ಒಂದುಗೂಡಿಸುವ ಕನಸು ಕಂಡ, ಅದಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ, ಮೂಲಕ ಇಪ್ಪತ್ತನೆಯ ಶತಮಾನದ ಇತಿಹಾಸದಲ್ಲಿ ತನ್ನದೇ ಆದ ರಕ್ತರಂಜಿತ ಸ್ಥಾನವನ್ನು ಗಳಿಸಿಕೊಂಡ ಅಪ್ರತಿಮ ಕ್ರಾಂತಿಕಾರಿ ಎರ್ನೆಸ್ತೋ 'ಚೇ' ಗೆವಾರ ಕೇವಲ ಮೂವತ್ತೊಂಬತ್ತನೇ ವಯಸ್ಸಿನಲ್ಲಿ ಬೊಲಿವಿಯಾದಲ್ಲಿ ಮರಣದಂಡನೆಗೆ ಗುರಿಯಾಗಿ, ಒಂಬತ್ತು ಗುಂಡುಗಳ ಹೊಡೆತಕ್ಕೆ ಸಿಲುಕಿ ದಾರುಣವಾಗಿ ಮರಣಹೊಂದಿ ಇದೇ ಅಕ್ಟೋಬರ್ ೯ಕ್ಕೆ ಐವತ್ತು ವರ್ಷಗಳಾದವು.  ಅರ್ಧ ಶತಮಾನದಲ್ಲಿ ಚೇ ವಿಶ್ವಾದ್ಯಂತ ಬಂಡಾಯಕ್ಕೆ ಪರ್ಯಾಯ ಪದವಾಗಿ ಗುರುತಿಸಲ್ಪಟ್ಟಿದ್ದಾನೆ, ಬಿಸಿರಕ್ತದ ಯುವಕರ ಆರಾಧ್ಯ ಪುರುಷನಾಗಿ ಮೆರೆದಿದ್ದಾನೆ, ಒಂದು ದಂತಕತೆಯೇ ಅಗಿಹೋಗಿದ್ದಾನೆ.  ಅವನ ಬದುಕೊಂದು ದುರಂತ ಸಾಹಸಗಾಥೆ.  ಇದಕ್ಕೆ ಕಾರಣ, ಅವನ ಮನಸ್ಸು ಕಂಡು ಕಟ್ಟಿಕೊಂಡ ಸ್ಪಷ್ಟ ಗುರಿಗಳಿಗೆ ಕಣ್ಣುಗಳು ತೋರಿದ್ದು ಅಸ್ಪಷ್ಟ ದಾರಿಗಳನ್ನು.

ಎರ್ನೆಸ್ತೋ ಗೆವಾರ ಲಿಂಚ್ ಹಾಗೂ ಸೆಲಿಯಾ ದೆ ಲಾ ಸೆರ್ನಾ ಎರ್ನೆಸ್ತೋ ವೈ ಲೋಸಾ ದಂಪತಿಗಳ ಐದು ಮಕ್ಕಳಲ್ಲಿ ಮೊದಲನೆಯವನಾಗಿ ಎರ್ನೆಸ್ತೋ ಗೆವಾರ ಜನಿಸಿದ್ದು ಮೇ ೧೪, ೧೯೨೮ರಂದು, ಉತ್ತರ ಅರ್ಜೆಂಟೀನಾದ ರೊಸಾರಿಯೋ ನಗರದಲ್ಲಿ.  ಎರ್ನೆಸ್ತೋ ಮತ್ತು ಗೆವಾರಾಗಳ ನಡುವೆಚೇ” ಸೇರಿಕೊಂಡದ್ದು ನಂತರ ೧೯೫೪ರಲ್ಲಿ ಅವನು ಮೆಕ್ಸಿಕೋ ಸಿಟಿಯಲ್ಲಿ ಫಿದೆಲ್ ಕ್ಯಾಸ್ತ್ರೋ ನೇತೃತ್ವದ ಕ್ಯೂಬದ ಕ್ರಾಂತಿಕಾರಿಗಳ ಸಂಘಟನೆಗೆ ಸೇರಿಕೊಂಡಾಗ.  ಉತ್ತರ ಅರ್ಜೆಂಟೀನಿಗರು ಇದಿರಿನವರ ಗಮನ ಸೆಳೆಯಲು ಬಳಸುವ ಉದ್ಗಾರಚೇ” ಎಂದು.  ಹಾಗೆಂದರೆಹೇ, ನೀನು!” ಎಂಬರ್ಥ, ನಮ್ಮಹೋಯ್!”ಗೆ ಸಮಾನಾರ್ಥಕವಾದಂಥದ್ದು.  ಎರ್ನೆಸ್ತೋ ಗೆವಾರಾ ತನ್ನ ಉತ್ತರ ಅರ್ಜೆಂಟೀನ್ ಅಭ್ಯಾಸದಂತೆ ಮಾತುಮಾತಿಗೂ ಚೇ ಎನ್ನುತ್ತಿದ್ದುದನ್ನು ತಮಾಷೆಯಾಗಿ ಕಂಡ ಕ್ಯೂಬನ್ನರು ಆವನಿಗೆ ಚೇ ಎಂದೇ ಅಡ್ಡಹೆಸರಿಟ್ಟುಬಿಟ್ಟರು.  ಅವನದನ್ನು ಖುಷಿಯಿಂದಲೇ ಸ್ವೀಕರಿಸಿದ, ಹೆಸರಿನಿಂದಲೇ ಜಗತ್ತಿನಾದ್ಯಂತ ಗುರುತಿಸಲ್ಪಟ್ಟ,  ಸ್ಪ್ಯಾನಿಷ್ ಮಾತೃಭಾಷೆಯ ಜನ ಅವನನ್ನು ಚೇ ಗೆವಾರಾ ಎಂದು ಕರೆದರೆ ಇಂಗ್ಲಿಷ್ ಮಾತಾಡುವವವರು ಚೇ ಗೂವಾರಾ ಅನ್ನುತ್ತಾರೆ.  ಇದರ ನಡುವೆ, ಬರೆದಂತೆಯೇ ಉಚ್ಚರಿಸುವ ಅಭ್ಯಾಸವುಳ್ಳ ನಮ್ಮ ಭಾರತದಂತಹ ಪೌರ್ವಾತ್ಯ ನಾಡಿಗರು ದೀರ್ಘವಾಗಿ ಚೇ ಗುಯೆವಾರಾ ಎಂದು ಎಳೆದು ಹೇಳುತ್ತಾರೆ!

ಚೇ ಗೆವಾರಾನ ಮೈಯಲ್ಲಿ ಹರಿಯುತ್ತಿದ್ದುದು ತಂದೆಯ ಕಡೆಯಿಂದ ಐರಿಷ್ ರಕ್ತ ಹಾಗೂ ತಾಯಿಯ ಕಡೆಯಿಂದ ಸ್ಪ್ಯಾನಿಷ್ ರಕ್ತ.  ದೇಹ ಸೌಂದರ್ಯಕ್ಕೆ ಹೆಸರಾದ ಸ್ಪ್ಯಾನಿಯಾರ್ಡರಿಂದ ಸುಂದರ ದೇಹವನ್ನೂ, ಬಂಡಾಯಕ್ಕೆ ಹೆಸರಾದ ಐರಿಷರಿಂದ ಕ್ರಾಂತಿಯ ಮನೋಭಾವವನ್ನೂ ಚೇ ಪಡೆದುಕೊಂಡದ್ದು ಹೀಗೆ.  ಮೂವತ್ತರ ದಶಕದ ಸ್ಪ್ಯಾನಿಷ್ ಅಂತರ್ಯುದ್ಧದಲ್ಲಿ ಭಾಗಿಯಾಗಿದ್ದ ರಿಪಬ್ಲಿಕನ್ನರ ಪರವಾಗಿದ್ದ, ಯುದ್ಧಾನಂತರ ಅವರಲ್ಲೆ ಹಲವರಿಗೆ ತನ್ನ ಮನೆಯಲ್ಲೇ ಆತಿಥ್ಯ ನೀಡುತ್ತಿದ್ದ ತಂದೆಯಿಂದಾಗಿ ಎಳೆಯ ವಯಸ್ಸಿನಲ್ಲೇ ಚೇಗೆ ವಿಭಿನ್ನ ರಾಜಕೀಯ ವಿಚಾರಧಾರೆಗಳ ಪರಿಚಯವಾಯಿತು.  ಜತೆಗೆ, ತಂದೆಯ ಎಡ ವಿಚಾರಧಾರೆಯ ಪ್ರಭಾವದಿಂದ ದಮನಿತರ, ಶೋಷಿತರ, ಬಡಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸತೊಡಗಿದ ಎರ್ನೆಸ್ತೋನಲ್ಲಿ ಮಾರ್ಕ್ಸಿಸ್ಟ್ ವಿಚಾರಧಾರೆಯ ಬಗೆಗಿನ ಒಲವಿಗೆ ಎಳೆಯ ವಯಸ್ಸಿನಲ್ಲೇ ಬೀಜಾಂಕುರವಾಗಿ ಅವನು ಬೆಳೆದಂತೇ ಅದೂ ದಿನೇದಿನೇ ಹೆಮ್ಮರವಾಗಿ ಬೆಳೆಯುತ್ತಾ ಹೋಯಿತು.  ಎಡಪಂಥೀಯ ಚಿಂತಕರಲ್ಲಿ ಸಾಮಾನ್ಯವಾಗಿ ಎದ್ದುಕಾಣುವ ಎರಡು ಮುಖ್ಯ ಸ್ವಭಾವಗಳಾದ ಅಗಾಧ ಓದಿನ ಹಸಿವು ಹಾಗೂ ಕಾಮದ ತೃಷೆ ಚೇ ಗೆವಾರಾನಲ್ಲೂ ಸಹಜವಾಗಿಯೇ ಎಳೆಯ ವಯಸ್ಸಿನಲ್ಲೇ ಕಾಣಿಸಿಕೊಂಡವು.   ಮಹಾತ್ಮಾ ಗಾಂಧಿಯಿಂದ ಹಿಡಿದು ಮಾವೋ ತ್ಸೆ ತುಂಗ್ವರೆಗೆ ಲೆಕ್ಕವಿಲ್ಲದಷ್ಟು ರಾಜಕೀಯ ಚಿಂತಕರ ಕೃತಿಗಳ ಜತೆಗೇ ನೀತ್ಷೆ ಮುಂತಾದ ತತ್ವಜ್ಞಾನಿಗಳು, ಸಿಗ್ಮಂಡ್ ಫ್ರಾಯ್ಡ್ರಂತಹ ಮನಶಾಸ್ತ್ರಜ್ಞರು, ಜಾಕ್ ಲಂಡನ್, ವಿಲಿಯಂ ಫಾಕ್ನರ್ ಹಾಗೂ ಬರ್ನಾರ್ಡ್ ಶಾರಂತಹ ಸಾಹಿತಿಗಳ ನೂರಾರು ಕೃತಿಗಳನ್ನು ತನ್ಮಯತೆಯಿಂದ ಓದಿದ್ದ.  ಬುದ್ಧ ಹಾಗೂ ಅರಿಸ್ಟಾಟಿಲ್ ಬಗ್ಗೆ ತುಲನಾತ್ಮವಾಗಿ ಅಭ್ಯಸಿಸಿ ಅವನು ಮಾಡಿಟ್ಟ ಟಿಪ್ಪಣಿಗಳು ಅವನ ಓದು ಹಾಗೂ ವಿಶ್ಲೇಷಣೆಗೆ ಸಾಕ್ಷಿಯಾಗಿವೆ.  ಹೀಗೆ ಪಟ್ಟು ಹಿಡಿದು ಓದುವುದರ ಜತೆಗೇ ಚೇ ಹದಿವಯಸ್ಸಿನಲ್ಲೇ ಹೆಣ್ಣುಗಳ ಹುಚ್ಚನ್ನೂ ಹತ್ತಿಸಿಕೊಂಡ.  ಮೊದಲಿಗೆ ಮನೆಯ ಕೆಲಸದಾಕೆಯನ್ನು ಕಾಮಿಸಿದ ಅವನು ನಂತರ ಲೈಂಗಿಕತೆಯನ್ನು ಒಂದು ಗೀಳಾಗಿಸಿಕೊಂಡ.  ಅವನ ದಿನಗಳ ಸ್ನೇಹಿತರು ಹೇಳುವ ಪ್ರಕಾರ ಯಾವುದೇ ರೂಪಿನ, ಯಾವುದೇ ಗಾತ್ರದ, ಯಾವುದೇ ವಯಸ್ಸಿನ, ಯಾವುದೇ ಸ್ವಭಾವದ ಹೆಂಗಸರ ಮೇಲಾದರೂ ಅವನು ಹಿಂಜರಿಕೆಯಿಲ್ಲದೇ ಕಣ್ಣುಹಾಕುತ್ತಿದ್ದನಂತೆ.  ಪುಸ್ತಕಗಳು ಮತ್ತು ಹೆಣ್ಣುಗಳ ಜತೆಗೆ ಹದಿವಯಸ್ಸಿನಲ್ಲೇ ಅವನ ಅಸಕ್ತಿ ಕೆರಳಿಸಿದ ಮತ್ತೊಂದೆಂದರೆ ಗನ್.  ಮೂರೂ ಅವನ ಬದುಕಿನುದ್ದಕ್ಕೂ ಅವನ ಜತೆಯಲ್ಲಿ ಕಾಣಿಸಿಕೊಳ್ಳುತ್ತವೆ.  ಅವನ ಬಾಲ್ಯದ, ಹದಿವಯಸ್ಸಿನ ದಿನಗಳಲ್ಲಿ ಕಂಡುಬಂದ ಮತ್ತೊಂದು ಸ್ವಭಾವವೈಚಿತ್ರ್ಯವೆಂದರೆ ಅತಿಯಾದ ಕೊಳಕುತನ.  ಅವನು ಶರ್ಟ್ ಬದಲಾಯಿಸುತ್ತಿದ್ದುದು ವಾರಕ್ಕೊಂದು ಸಲ.  ಅವನ ಶರ್ಟ್ಗಳು ಗೆಳೆಯರ ಗುಂಪಿನಲ್ಲಿವಾರದ ಶರ್ಟ್‌ಗಳು” ಎಂದೇ ಹೆಸರಾಗಿದ್ದವು.  ಅವನ ಕೊಳಕುತನದಿಂದ ಬೇಸತ್ತಿದ್ದ ಗೆಳೆಯರು ಅವನಿಗೆಚಾಂಚೋ” ಎಂದು ಅಡ್ಡಹೆಸರು ಇಟ್ಟಿದ್ದರು.  ಉತ್ತರ  ಅರ್ಜೆಂಟೀನಾದ ಸ್ಪ್ಯಾನಿಷ್ ಆಡುಭಾಷೆಯಲ್ಲಿ ಚಾಂಚೋ ಅಂದರೆ ಹಂದಿ ಎಂದರ್ಥ.  ಅದೃಷ್ಟವಶಾತ್ ಚಾಂಚೋ ಎಂಬ ಅಡ್ಡಹೆಸರು ಅಂಟಿಕೊಳ್ಳದೇ ಚೇ ಎಂಬ ಹೆಸರೇ ಖಾಯಂ ಆಗಿ ಅವನು ಹೆಸರಿನಿಂದಲೇ ಜಗತ್ಪ್ರಸಿದ್ಧನಾಗಿಹೋಗಿದ್ದಾನೆ.  ಅವನ ಆರೋಗ್ಯದ ವಿಷಯ ನೋಡುವುದಾದರೆ ಅಸ್ತಮಾ ಅವನನ್ನು ಜೀವನದುದ್ದಕ್ಕೂ ಕಾಡಿತು.

ಚೇ ಗೆವಾರಾನ ಅಧ್ಯಯನ ರಾಜಕೀಯ ಕ್ರಿಯಾಶೀಲತೆಗೆ ದಾರಿಮಾಡಿಕೊಟ್ಟದ್ದು ಐವತ್ತರ ದಶಕದ ಆರಂಭದಲ್ಲಿ.  ವೈದ್ಯಕೀಯ ಅಧ್ಯಯನಕ್ಕೆಂದು ೧೯೪೮ರಲ್ಲಿ ಬ್ಯೂನಸ್ ಐರ್ಸ್ ನಗರಕ್ಕೆ ಬಂದ ಚೇ ಎರಡು ವರ್ಷಗಳ ನಂತರ ಬೈಸಿಕಲ್ ಏರಿ ಉತ್ತರ ಅರ್ಜೆಂಟೀನಾದ ಹಳ್ಳಿಗಾಡಿನಲ್ಲಿ ಏಕಾಂಗಿಯಾಗಿ ಸುಮಾರು ನಾಲ್ಕೂವರೆ ಸಾವಿರ ಕಿಲೋಮೀಟರ್ ಸುತ್ತಿ ಜನಜೀವನವನ್ನು ಅಭ್ಯಸಿಸಿದ.  ಮರುವರ್ಷ ಮೆಡಿಕಲ್ ಅಧ್ಯಯನದ ನಡುವೆ ಒಂದು ವರ್ಷದ ರಜಾ ತೆಗೆದುಕೊಂಡು ಗೆಳೆಯ ಅಲ್ಬೆರ್ತೋ ಗ್ರನಾದಾ ಜತೆಗೂಡಿ ಮೋಟಾರ್ ಬೈಕ್ ಹತ್ತಿ ಮಧ್ಯ ಅರ್ಜೆಂಟಿನಾದತ್ತ ಸಾಗಿದ.  ಅಲ್ಲಿಂದ ಪಯಣ ನೆರೆಯ ಚಿಲಿಗೆ.  ಯಾಂಕೀ ಅಂದರೆ ಅಮೆರಿಕಾದ ಬಂಡವಾಳಶಾಹಿಯ ರುದ್ರನರ್ತನವನ್ನು ಚೇ ಕಣ್ಣಾರೆ ಕಂಡದ್ದು ಚಿಲಿಯಲ್ಲಿ.  ದೇಶದ ಎಲ್ಲ ಗಣಿಗಳೂ, ಕಾರ್ಖಾನೆಗಳೂ ಅಮೆರಿಕನ್ ಕಂಪೆನಿಗಳ ಒಡೆತನದಲ್ಲಿದ್ದವು, ಕಾರ್ಮಿಕರು ಮಾತ್ರ ಬಡ ಚಿಲಿಯನ್ನರು.  ಅವರ ಬದುಕಿನ ದುರವಸ್ಥೆ ಚೇಗೆ ಚಿಲಿಯ ಉದ್ದಗಲಕ್ಕೂ, ಮುಖ್ಯವಾಗಿ ಅಮೆರಿಕಾದ ಅನಕೊಂಡಾ ಕಂಪೆನಿ ಮಾಲಿಕತ್ವದ ಚುಕಿಕಮಾತಾ ತಾಮ್ರ ಗಣಿಯಲ್ಲಿ ಆಯಿತು.

ಗೆಳೆಯರಿಬ್ಬರೂ ಚಿಲಿಯಿಂದ ಉತ್ತರದ ಪೆರುವಿಗೆ ಪಯಣಿಸಿದರು, ಅಲ್ಲಿಂದ ಈಕ್ವೆಡಾರ್, ಕೊಲಂಬಿಯಾ, ವೆನಿಝ್ಯುಯೇಲಾ, ಮತ್ತು ಪನಾಮಾಗಳಲ್ಲಿ ಸುತ್ತಾಡಿದರು.  ಎಂಟುಸಾವಿರ ಕಿಲೋಮೀಟರ್ಗಳಷ್ಟು ಉದ್ದದ, ಏಳು ತಿಂಗಳುಗಳಷ್ಟು ದೀರ್ಘವಾದ ಮೋಟಾರ್ ಬೈಕ್ ಯಾತ್ರೆಯಲ್ಲಿ ಚೇಗೆ ಕಂಡದ್ದು ಎಲ್ಲೆಲ್ಲೂ ಬಡತನ, ಕಾರ್ಮಿಕರ, ಗೇಣಿದಾರರ ಬವಣೆ.  ಇಷ್ಟಾಗಿಯೂ, ದಕ್ಷಿಣದ ಚಿಲಿಯಿಂದ ಉತ್ತರದ ಪನಾಮಾವರೆಗೂ ಅವನಿಗೆ ಕಂಡದ್ದು ಒಂದೇ ಸಾಮಾಜಿಕ-ಸಾಂಸ್ಕೃತಿಕ-ಭಾಷಿಕ-ಆರ್ಥಿಕ ಲ್ಯಾಟಿನ್ ಅಮೆರಿಕನ್ ಅಸ್ಮಿತೆ.  ಕಮ್ಯೂನಿಸ್ಟ್ ಕ್ರಾಂತಿಯ ಅವಶ್ಯಕತೆ ಮತ್ತು ಇಡೀ ಲ್ಯಾಟಿನ್ ಅಮೆರಿಕಾವನ್ನು ರಾಜಕೀಯವಾಗಿ ಒಂದುಗೂಡಿಸುವ ಅಗತ್ಯವನ್ನು ಚೇ ಮನಗಂಡದ್ದು ಹೀಗೆ.  ಪಯಣದುದ್ದಕ್ಕೂ ತಾನು ಕಂಡದ್ದು, ತನಗೆ ಅನಿಸಿದ್ದು ಎಲ್ಲವನ್ನೂ ಚೇ ಮೋಟಾರ್ ಸೈಕಲ್ ಡೈರೀಸ್” ಎಂಬ ಕೃತಿಯಲ್ಲಿ ದಾಖಲಿಸಿದ್ದಾನೆ.  ( ಕೃತಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಬೆಸ್ಟ್ ಸೆಲರ್ ಪಟ್ಟಿಯಲ್ಲೂ ಇತ್ತು, ನಂತರ ೨೦೦೪ರಲ್ಲಿ ಅದೇ ಹೆಸರಿನಲ್ಲಿ ಚಲನಚಿತ್ರವೂ ಆಗಿದೆ.)  ಸುತ್ತಲ ಸಮಾಜಕ್ಕೆ ಸ್ಪಂದಿಸುವ ಎಳೆಯ ವಯಸ್ಸಿನ ಜೀವವೊಂದು ಹೇಗೆ ಎಡಪಂಥೀಯ ಸಮಗ್ರ ಕ್ರಾಂತಿಯತ್ತ ವಾಲಬಹುದೆಂದು ಅರಿಯಬೇಕಾದರೆ ಕೃತಿಯನ್ನೊಮ್ಮೆ ಓದಬೇಕು.

ಹೀಗೆ, ಚೇನ ಅಂತರಾಳದಲ್ಲಿ ಕ್ರಾಂತಿಕಾರಿಯೊಬ್ಬ ಜೀವ ತಳೆಯುತ್ತಿದ್ದಂತೇ, ಅದೇ ಕ್ರಾಂತಿಕಾರಿಯನ್ನು ವೈಫಲ್ಯದತ್ತ ದೂಡುವ ಮನೋಭಾವವೂ ಅದೇ ಅಂತರಾಳದಲ್ಲಿ ಮೂರ್ತರೂಪ ಪಡೆಯುತ್ತಿತ್ತು.  ಆದರೆ ಚೇಗೆ ಎರಡನೆಯದರ ಅರಿವಿರಲಿಲ್ಲ.  ಬಹುಶಃ ಅಂತ್ಯದವರೆಗೂ ಅವನಿಗದು ಅರಿವಾಗಲೇ ಇಲ್ಲ.  ನಿಷ್ಟ ಕ್ರಾಂತಿಕಾರಿಯೊಬ್ಬನ ಬದುಕಿನ ದುರಂತ ಇದು.

ಮೋಟಾರ್ ಬೈಕ್ ಯಾತ್ರೆ ಮುಗಿಸಿ ಬ್ಯೂನಸ್ ಐರ್ಸ್ ನಗರಕ್ಕೆ ಹಿಂತಿರುಗಿದ ಚೇ ತನ್ನ ಅಧ್ಯಯನ ಪೂರ್ಣಗಳಿಸಿ ೧೯೫೩ರಲ್ಲಿ ಡಾಕ್ಟರ್ ಪದವಿಯನ್ನು ಗಳಿಸಿಕೊಂಡನೇನೋ ನಿಜ.  ಆದರೆ ವೈದ್ಯನಾಗಿ ರೋಗಿಗಳ ಸೇವೆ ಮಾಡಲು ಅವನು ಜಗತ್ತಿಗೆ ಬಂದಂತಿರಲಿಲ್ಲ.  ಅವನು ಗುಣಪಡಿಸಲು ಹೊರಟಿದ್ದು ಸಮಾಜದ ರೋಗವನ್ನು, ಮೂಲೋತ್ಪಾಟನೆಗೊಳಿಸಹೊರಟಿದ್ದು ಅಸಮಾನತೆಯನ್ನು, ಶೋಷಣೆಯನ್ನು, ಬಡತನವನ್ನು.  ಇಂತಹ ಚೇ ಪದವಿ ಗಳಿಸಿದ ತಿಂಗಳೊಳಗೆ ಊರು, ಮನೆ ತೊರೆದು ತನ್ನ ಗುರಿಯರಸಿ ಹೊರಟಿದ್ದು ಸಹಜವೇ ಆಗಿತ್ತು.

ಬಾರಿ ಆತ ಹೋದದ್ದು ಹಿಂದೆ ಸುತ್ತಾಡಿದ್ದ ದೇಶಗಳ ಜತೆಗೇ ಬೊಲಿವಿಯಾ ಹಾಗೂ ಮಧ್ಯ ಅಮೆರಿಕಾದ ಎಲ್ ಸಾಲ್ವಡಾರ್, ನಿಕರಾಗುವಾ, ಹಾಂಡುರಾಸ್ ಮತ್ತು ಗ್ವಾಟೆಮಾಲಾ ದೇಶಗಳಿಗೆ.  ಅದೇ ಸಮಯದಲ್ಲಿ ಚೇ ಕಂಡಿದ್ದ ಕನಸು ಗ್ವಾಟೆಮಾಲಾದಲ್ಲಿ ಸಾಕಾರಗೊಳ್ಳುತ್ತಿದ್ದುದು ಕಾಕತಾಳೀಯ.  ಅಧ್ಯಕ್ಷ ಜಾಕೋಬೋ ಅರ್ಬೆಂಜ್ ಗುಜ಼್ಮ್ಯಾನ್ ಐತಿಹಾಸಿಕ ಭೂಸುಧಾರಣಾ ಯೋಜನೆಗಳನ್ನು ಕೈಗೊಂಡು ಕೃಷಿಗೋಳಪಡದಿದ್ದ ಖಾಸಗೀ ಜಮೀನುಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಂಡು ಭೂರಹಿತರಿಗೆ ಹಂಚುತ್ತಿದ್ದರು.  ಪರಿಣಾಮವಾಗಿ ಸಾವಿರಾರು ಜನರು ಸ್ವತಂತ್ರ ಬದುಕು ಕಂಡುಕೊಳ್ಳಲು ಅವಕಾಶವಾಗಿತ್ತು.  ಅಧ್ಯಕ್ಷ ಗುಜ಼್ಮ್ಯಾನ್ ಯೋಜನೆಗಳಿಂದ ನೆಮ್ಮದಿಗೊಂಡ ಚೇ ಗ್ವಾಟೆಮಾಲಾದಲ್ಲೇ ಉಳಿಯಲು ನಿರ್ಣಯಿಸಿದ.  ಅಲ್ಲೇ ಅವನಿಗೆ ಹಿಲ್ಡಾ ಗ್ಲಾಡಿಯಾ ಅಕೋಸ್ಟಾ ಎಂಬ ಪೆರು ದೇಶದ ಅರ್ಥಶಾಸ್ತ್ರಜ್ಞೆಯ ಪರಿಚಯವಾದದ್ದು.  ಪರಿಚಯ ಪ್ರೇಮಕ್ಕೆ ತಿರುಗಲು ಹೆಚ್ಚು ಕಾಲ ಬೇಕಾಗಲಿಲ್ಲ.  ಗ್ವಾಟೆಮಾಲಾ ನಗರದಲ್ಲಿ ಚೇನ ವಾಸ್ತವ್ಯಕ್ಕಾಗಿ ಹಿಲ್ಡಾ ತನ್ನ ಆಭರಣಗಳನ್ನು ಅಡವಿಟ್ಟು ದುಡ್ಡು ಹೊಂದಿಸಿದ್ದಷ್ಟೇ ಅಲ್ಲ, ಹಲವಾರು ಎಡಪಂಥೀಯ ಕ್ರಾಂತಿಕಾರಿಗಳನ್ನೂ ಅವನಿಗೆ ಪರಿಚಯಿಸಿದಳು.

ಅಧ್ಯಕ್ಷ ಗುಜ಼್ಮ್ಯಾನ್ ಭೂಸುಧಾರಣಾ ಕಾಯಿದೆಗಳಿಂದ ಹಾನಿಯಾಗಿದ್ದದ್ದು ಗ್ವಾಟೆಮಾಲಾದಲ್ಲಿ ವಿಶಾಲ ಕೃಷಿನೆಲವನ್ನು ಹೊಂದಿದ್ದ ಅಮೆರಿಕಾದ ಕಂಪೆನಿಗಳಿಗೆ, ಮುಖ್ಯವಾಗಿ ಲಕ್ಷಾಂತರ ಏಕರೆ ಬಾಳೆ ತೋಟಗಳನ್ನು ಹೊಂದಿದ್ದ ಯುನೈಟೆಡ್ ಫ್ರೂಟ್ ಕಂಪೆನಿಗೆ.  ಕಂಪೆನಿಯ ಡೈರೆಕ್ಶರ್ಗಳಲ್ಲೊಬ್ಬ ಅಂದಿನ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಜಾನ್ ಫಾಸ್ಟರ್ ಡಲೆಸ್!  ಅವನ ತಮ್ಮ ಅಲೆನ್ ಡಲೆಸ್ ಅಮೆರಿಕಾದ ಗುಪ್ತಚರ ಸಂಸ್ಥೆ ಸಿಐಎಯ ಮುಖ್ಯಸ್ಥ!  ಐಸೆನ್ಹೋವರ್ ಸರ್ಕಾರದ ದೃಷ್ಟಿಯಲ್ಲಿ ಅಧ್ಯಕ್ಷ ಗುಜ಼್ಮ್ಯಾನ್ ಒಬ್ಬ ಖಳನಾಯಕನಾಗಿ ಕಾಣಲು ಇದಕ್ಕಿಂತ ಒಳ್ಳೆಯ ಕಾರಣ ಬೇಕೆ?  ಅದರಲ್ಲೂ ಗುಜ಼್ಮ್ಯಾನ್ ಸರ್ಕಾರದ ಸೇನೆಯ ಉಪಯೋಗಕ್ಕೆಂದು ಕಮ್ಯೂನಿಸ್ಟ್ ಜೆಕೋಸ್ಲೊವೇಕಿಯಾದಿಂದ ಶಸ್ತ್ರಾಸ್ತ್ರಗಳು ಬಂದದ್ದೇ ಅಧ್ಯಕ್ಷ ಗುಜ಼್ಮ್ಯಾನ್ ಅಂತರರಾಷ್ಟ್ರೀಯ ಕಮ್ಯೂನಿಸ್ಟ್ ಚಳುವಳಿಯ ಲ್ಯಾಟಿನ್ ಅಮೆರಿಕನ್ ರೂಪವಾಗಿ ಅಮೆರಿಕಾಗೆ ಕಂಡುಬಿಟ್ಟರು.  ಪರಿಣಾಮ...!   ಸಿಐಎ ಒಳಸಂಚಿನ ಅಂಗವಾಗಿ ನಡೆದ ಕ್ಷಿಪ್ರಕ್ರಾಂತಿಯಲ್ಲಿ ಅಧ್ಯಕ್ಷ ಗುಜ಼್ಮ್ಯಾನ್ ಪದಚ್ಯುತಿಗೊಂಡರು.  ನಂತರ ಗುಜ಼್ಮ್ಯಾನ್ ಬೆಂಬಲಿಗರ ಹಾಗೂ ಸಮಾಜವಾದಿಗಳ ವಿರುದ್ಧ ಆರಂಭವಾದ ರಕ್ತಪಾತದಲ್ಲಿ ಚೇ ತನ್ನ ಜೀವಕ್ಕೂ ಅಪಾಯ ಕಂಡ.  ಮೊದಲಿಗೆ ಗ್ವಾಟೆಮಾಲಾ ನಗರದಲ್ಲಿನ ಅರ್ಜೆಂಟೀನಾ ದೂತಾವಾಸದಲ್ಲಿ ರಕ್ಷಣೆ ಪಡೆದ ಅವನು ನಂತರ ಉತ್ತರದ ಮೆಕ್ಸಿಕೋಗೆ ಪಲಾಯನಗೈದ.

ಯಾಂಕೀ ಬಂಡವಾಳಶಾಹಿ ಸಾಮ್ರಾಜ್ಯಶಾಹಿಯ ದಬ್ಬಾಳಿಕೆಯ ನೇರಪರಿಚಯ ಚೇಗೆ ಹೀಗೆ ಗ್ವಾಟೆಮಾಲಾದಲ್ಲಿ ಆದದ್ದೇ ಕ್ರಾಂತಿಯ ಬಗೆಗಿನ ಅವನ ನಿಷ್ಟೆ ಮತ್ತಷ್ಟು ಗಾಢವಾಯಿತು  ಸಶಸ್ತ್ರ ಸಂಘರ್ಷದ ಮೂಲಕ ಮಾರ್ಕ್ಸ್ವಾದದ ಸ್ಥಾಪನೆ ಮತ್ತು ಶಸ್ತ್ರಸಜ್ಜಿತ ಜನತೆಯಿಂದ ಅದರ ರಕ್ಷಣೆಯಷ್ಟೇ ಬಡಜನರ ಕಷ್ಟಕಾರ್ಪಣ್ಯಗಳ ಹಾಗೂ ಬಂಡವಾಳಶಾಹಿಯ ನಿರ್ಮೂಲಕ್ಕೆ ಏಕೈಕ ಮಾರ್ಗ ಎಂಬ ಅವನ ನಂಬಿಕೆ ಮತ್ತಷ್ಟು ಬಲವಾದದ್ದು ಗ್ವಾಟೆಮಾಲಾದಲ್ಲಿ ಎಂದು ಅವನ ಪತ್ನಿ ಹಿಲ್ಡಾ ತನ್ನ 'My Life With Che" ಕೃತಿಯಲ್ಲಿ ಬರೆಯುತ್ತಾಳೆ.  ನಂಬಿಕೆಯ ಜತೆಗೆ, ಮಾರ್ಕ್ಸ್ವಾದ ಸ್ಥಾಪನೆ ಸಾಧ್ಯ ಎಂಬ ವಿಶ್ವಾಸ ಚೇನಲ್ಲಿ ಮೂಡಿದ್ದು ಮೆಕ್ಸಿಕೋದಲ್ಲಿ.  ಅಲ್ಲೇ ಅವನಿಗೆ ಕ್ಯೂಬದ ಕ್ರಾಂತಿಕಾರಿ ರಾವುಲ್ ಕ್ಯಾಸ್ತ್ರೋ, ಅವರಣ್ಣ ಫಿದೆಲ್ ಕ್ಯಾಸ್ತ್ರೋ ಗಾಢ ಸ್ನೇಹಿತರಾದದ್ದು.  ಆವರ ಕ್ರಾಂತಿಕಾರಿ ಸಂಘಟನೆಗೆ ಚೇ ವೈದ್ಯನಾಗಿ ಸೇರಿಕೊಂಡ.  ಮಾತುಮಾತಿಗೂ ಚೇ ಎಂಬ ಉದ್ಗಾರ ಬೆರೆಸುತ್ತಿದ್ದ ಅವನಿಗೆ ಅವನ ಹೊಸ ಕ್ಯೂಬನ್ ಗೆಳೆಯರು ಚೇ ಅಂತಲೇ ಅಡ್ಡಹೆಸರಿಟ್ಟುಬಿಟ್ಟರು.  ಅಲ್ಲಿಂದಾಚೆಗೆ ಕ್ಯಾಸ್ತ್ರೋ ಸಹೋದರರ ಜತೆಗೆ ಅವನ ಸಂಬಂಧ ಘನಿಷ್ಟವಾಗುತ್ತಾ ಸಾಗಿ ಮುಂದಿನ ಆರು ವರ್ಷಗಳಲ್ಲಿ ಅವನನ್ನು ಜಾಗತಿಕ ಕಮ್ಯೂನಿಸ್ಟ್ ಕ್ರಾಂತಿಯ ಮುಂಚೂಣಿಯಲ್ಲಿ ನಿಲ್ಲಿಸಿತು.  ಕ್ಯೂಬನ್ನರ ಜತೆ ಸೇರಿ ಮೆಕ್ಸಿಕೋದ ಗುಡ್ಡಗಾಡುಗಳಲ್ಲಿ ಗೆರಿಲ್ಲಾ ಯುದ್ಧದ ತರಬೇತಿ ಪಡೆದು ತರಬೇತಿದಾರ ಜನರಲ್ ಬಾಯೋನಿಂದಅತ್ಯುತ್ತಮ ಗೆರಿಲ್ಲಾ” ಎಂಬ ಪ್ರಶಂಸೆಯನ್ನು ಚೇ ಗಳಿಸಿದ.  ಅಲ್ಲಿಯವರೆಗೆ ಮಾರ್ಕ್ಸಿಸ್ಟ್ ವಿಚಾರವಾದಿಯಷ್ಟೇ ಆಗಿದ್ದ ಚೇ ಹೀಗೆ ಶಸಸ್ತ್ರ ಗೆರಿಲ್ಲಾ ಆಗಿ ಬೆಳೆದ.  ಅದು ಅವನ ಬದುಕಿನ ನಿರ್ಣಾಯಕ ತಿರುವು.  ಕ್ರಾಂತಿಯಲ್ಲಿ ಗೆರಿಲ್ಲಾ ಯುದ್ಧದ ಅಗತ್ಯ ಮತ್ತು ಮಹತ್ವಕ್ಕೆ ಚೇ ಅದೆಷ್ಟು ಪ್ರಾಮುಖ್ಯತೆ ಕೊಟ್ಟನೆಂದರೆಮಾನವನ ಅತ್ಯುನ್ನತ ಮಾದರಿಯೆಂದರೆ ಗೆರಿಲ್ಲಾ ಆಗಿರುವುದು” ಎಂದವನು ನಂಬಿದ್ದಾಗಿ ಆತನ ಜೀವನಚರಿತ್ರೆ ರಚನಕಾರ ಜಾನ್ ಲೀ ಆಂಡರ್ಸನ್ ಹೇಳುತ್ತಾರೆ.

ನಡುವೆ ಬಸುರಿಯಾಗಿದ್ದ ಪ್ರೇಯಸಿ ಹಿಲ್ಡಾಳನ್ನು ಚೇ ಮದುವೆಯಾಗಿ ಸಂಸಾರಸ್ಥನೂ ಆದ.  ಆದರೆ ಮರುವರ್ಷವೇ ಕ್ಯಾಸ್ತ್ರೋ ಜತೆ ರಹಸ್ಯವಾಗಿ ಕ್ಯೂಬಕ್ಕೆ ಪಯಣಿಸಿದ.  ಮುಂದಿನ ಎರಡು ವರ್ಷಗಳು ಸರ್ವಾಧಿಕಾರಿ ಬಾತಿಸ್ತಾನ ಸೇನೆಯೊಂದಿಗೆ ಕಡು ಪ್ರಯಾಸದ ಗೆರಿಲ್ಲಾ ಯುದ್ಧದಲ್ಲಿ ಕಳೆದುಹೋದವು.  ಚೇನ ಒಳಗಿದ್ದ ಮಾರ್ಕ್ಸಿಸ್ಟ್ ಚಿಂತಕ ಹಾಗೂ ಸಶಸ್ತ್ರ ಗೆರಿಲ್ಲಾ ಇಬ್ಬರೂ ಹುರಿಗೊಂಡ ಕಾಲಘಟ್ಟವಿದು.  ಅಂತಿಮವಾಗಿ ಫಿದೆಲ್ ಕ್ಯಾಸ್ತ್ರೋ ಮತ್ತು ಚೇ ಗೆವಾರಾ ನೇತೃತ್ವದ ಮಾರ್ಕ್ಸಿಸ್ಟ್ ಗೆರಿಲ್ಲಾ ಸೇನೆ ವಿಜಯಿಯಾಗಿ ಜನವರಿ , ೧೯೫೯ರಂದು ಹವಾನಾ ನಗರವನ್ನು ಪ್ರವೇಶಿಸಿತು.  ಚೇ ಕಂಡ ಕಮ್ಯೂನಿಸ್ಟ್ ಕ್ರಾಂತಿಯ ಕನಸು ನನಸಾಗಿತ್ತು.

ಕ್ಯಾಸ್ತ್ರೋ ನೇತೃತ್ವದ ಹೊಸ ಎಡಪಂಥೀಯ ಸರ್ಕಾರ ಚೇಗೆ ಕ್ಯೂಬದ ನಾಗರಿಕತ್ವ ನೀಡಿತು.  ಚೇಯನ್ನು ಕ್ಯಾಸ್ತ್ರೋ ತನ್ನ ಮಂತ್ರಿಮಂಡಳದಲ್ಲಿ ಸೇರಿಸಿಕೊಂಡು ಅವನಿಗೆ ಕೈಗಾರಿಕೆಯ ಖಾತೆ ನೀಡಿದ್ದಷ್ಟೇ ಅಲ್ಲ, ಅವನನ್ನು ಕ್ಯೂಬದ ನ್ಯಾಷನಲ್ ಬ್ಯಾಂಕ್ ಮುಖ್ಯಸ್ಥನಾಗಿಯೂ ನೇಮಿಸಿದ.  ಚೇಯ ಸಹಿ ಇರುವ ಕರೆನ್ಸಿ ನೋಟ್ಗಳು ಇನ್ನೂ ನೋಡಲು ಸಿಗುತ್ತವೆ.  ತನ್ನ ಕ್ರಾಂತಿಯ ಕನಸು ನನಸಾದ, ಜನರ ಬದುಕನ್ನು ಹಸನುಗೊಳಿಸಲು ತಾ ಬಯಸಿದ್ದ ಸುವರ್ಣಾವಕಾಶ ಚೇಗೆ ಸಿಕ್ಕಿತೇನೋ ನಿಜ.  ಆದರೆ, ಕ್ಯೂಬದಲ್ಲಿನ ಅವನ ಬದುಕಿನ ಅದ್ಭುತಗಳೆಲ್ಲಾ ಶಿಥಿಲ ಅಡಿಪಾಯದ ಮೇಲೆ ನಿರ್ಮಿತವಾಗಿದ್ದ ಭವ್ಯ ಸೌಧವಾಗಿದ್ದದ್ದು ದುರಂತ ವಾಸ್ತವ.

ಚೇ ಕ್ಯೂಬದಲ್ಲಿ ಕಳೆದೊಂದು ವರ್ಷದಿಂದಲೂ ಅಲೇದಾ ಮಾರ್ಚ್ ಎಂಬ ಕ್ಯೂಬನ್ ಯುವತಿಯ ಪ್ರೇಮಪಾಶದಲ್ಲಿ ಸಿಲುಕಿದ್ದ.  ಇದಾವುದನ್ನೂ ಅರಿಯದ, ಕೇವಲ ಕ್ಯೂಬ ಕ್ರಾಂತಿಯ ಯಶಸ್ಸನ್ನಷ್ಟೇ ತಿಳಿದಿದ್ದ ಪತ್ನಿ ಹಿಲ್ಡಾ ಸಂಭ್ರಮಿಸಲೆಂದು ಮಗಳೊಂದಿಗೆ ಹವಾನಾಗೆ ಬಂದಳು.  ಆದರೆ ಚೇ ಅವಳಿಗೆ ನಿರ್ದಾಕ್ಷಿಣ್ಯವಾಗಿ ಹೇಳಿದ್ದುಈಗ ನಿನ್ನ ಮೇಲೆ ನನಗೆ ಯಾವ ಪ್ರೀತಿಪ್ರೇಮವೂ ಉಳಿದಿಲ್ಲ, ನಾನೀಗ ಬೇರೊಬ್ಬಳಲ್ಲಿ ಅನುರಕ್ತನಾಗಿದ್ದೇನೆ” ಎಂದು!  ಅವರಿಬ್ಬರ ವಿಚ್ಚೇದನ ಆದ ಹದಿಮೂರು ದಿನಕ್ಕೆ ಚೇ ಅಲೇದಾಳನ್ನು ಮದುವೆಯಾದ.  ಅದಕ್ಕೆ ಸಾಕ್ಷಿಯಾದದ್ದು ರಾವುಲ್ ಕ್ಯಾಸ್ತ್ರೋ.

ಹಿಲ್ಡಾಳನ್ನು ದೂರೀಕರಿಸಿದ್ದು ಚೇ ಎಸಗಿಗ ಬಹುದೊಡ್ಡ ತಪ್ಪು ಎಂದು ನನಗನಿಸುತ್ತದೆ.  ಕೆಲವು ವ್ಯಕ್ತಿಗಳು ನಮ್ಮ ಬದುಕಿನಲ್ಲಿ ಅದೃಷ್ಟದೇವತೆಗಳಂತೆ ಪ್ರವೇಶಿಸಿಬಿಡುತ್ತಾರೆ.  ಗಳಿಗೆಯಿಂದ ನಾವು ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತದೆ.  ಅವರನ್ನು ಉಳಿಸಿಕೊಳ್ಳದೇ ಬೇರಾವುದೋ ಅಮಿಷಕ್ಕೆ ಸಿಲುಕಿ ನಾವವರನ್ನು ದೂರ ತಳ್ಳಿದರೆ ಗಳಿಗೆಯಿಂದ ನಮ್ಮ ಅಧಃಪತನ ಆರಂಭವಾಗುತ್ತದೆ.  ಹಿಲ್ದಾ ಒಬ್ಬಳು ಕಾಳಜಿಪೂರ್ಣ ಹೃದಯದ ಪ್ರೇಮಮಯಿ, ತನ್ನವರ ಹಿತಕ್ಕಾಗಿ ಏನನ್ನಾದರೂ ಮಾಡಬಲ್ಲ ತ್ಯಾಗಮಯಿ ಸ್ತ್ರೀಯಾಗಿದ್ದಳು.  ಅವಳ ಸಾಂಗತ್ಯವಾದ ಗಳಿಗೆಯಿಂದ ಚೇನ ಕ್ರಾಂತಿಯ ಕನಸು ಸ್ಪಷ್ಟ ರೂಪ ಪಡೆದು, ನೇರ ಹಾದಿಯಲ್ಲಿ ಸಾಗಿ ಐದುವರ್ಷಗಳಲ್ಲಿ ಕ್ಯೂಬದ ಕ್ರಾಂತಿಯಲ್ಲಿ ಅವನ ಅಪ್ರತಿಮ ಪಾತ್ರಕ್ಕೆ ಕಾರಣವಾಗಿ ಅವನನ್ನು ಜಗದ್ವಿಖ್ಯಾತಗೊಳಿಸಿತು.  ಆದರೆ, ಅವನು ಹಿಲ್ಡಾಳನ್ನು ತೊರೆದ ಗಳಿಗೆಯಿಂದ ಅವನ ಅದೃಷ್ಟರೇಖೆ ಕೆಳಮುಖವಾಗಿಹೋಯಿತು.  ಅಲ್ಲಿಂದಾಚೆಗೆ ಎಲ್ಲವೂ ದುರಂತಕಥೆಯೇ.

ದಿನಗಳಲ್ಲಿ ಇಡೀ ಹವಾನಾ ನಗರ ಒಂದು ಬೃಹತ್ ವೇಶ್ಯಾಗೃಹವಾಗಿತ್ತು.  ದ್ವಿತೀಯ ಮಹಾಯುದ್ಧ ತಂದಿಟ್ಟ ಕಷ್ಟಕಾರ್ಪಣ್ಯಗಳು, ಅವುಗಳನ್ನು ಪರಿಹರಿಸಲು ಸರ್ವಾಧಿಕಾರಿ ಬಾತಿಸ್ತಾನ ಸರ್ಕಾರ ಯಾವುದೇ ಪರಿಣಾಮಕಾರಿ ಪ್ರಯತ್ನವನ್ನೇ ಮಾಡದಿದ್ದದ್ದು ಸತತ ಎರಡು ತಲೆಮಾರುಗಳನ್ನು ಹತಾಷೆಯ ಪಾತಾಳಕ್ಕೆ ದೂಡಿತ್ತು.  ಜೀವನೋಪಾಯಕ್ಕಾಗಿ ಸಾವಿರಾರು ಯುವತಿಯರು ಆಯ್ದುಕೊಂಡ ಮಾರ್ಗ ವೇಶ್ಯಾವೃತ್ತಿ.  ನಗರದ ಪ್ರಮುಖ ಆಕರ್ಷಣೆಯಾಗಿದ್ದ ಜೀಸಸ್ ಕ್ರೈಸ್ಟ್ ಪ್ರತಿಮೆಯ ಕೆಳಗಿನ ಪೊದೆಗಳೂ ವೇಶ್ಯಾತಾಣಗಳಾಗಿಬಿಟ್ಟಿದ್ದವು.  ವಾರಾಂತ್ಯಗಳನ್ನು ಸಹಸ್ರ ಸಹಸ್ರ ಅಮೆರಿಕನ್ನರು ಮಜಾ ಮಾಡಲೆಂದೇ ಹವಾನಾ ನಗರಕ್ಕೆ ಬರುತ್ತಿದ್ದರು.  ಇಂತಹ ಸನ್ನಿವೇಶದಲ್ಲಿ ತನ್ನ ಯುವ ಗೆರಿಲ್ಲಾಗಳನ್ನು ಹದ್ದುಬಸ್ತಿನಲ್ಲಿಡುವುದು ಚೇಗೆ ಪ್ರಯಾಸವೇ ಆಯಿತು.  ಜತೆಗೆ, ಕ್ರಾಂತಿಯ ವಿರೋಧಿಗಳನ್ನು ನಿಗ್ರಹಿಸಲು ಅವನು ಆಯ್ದುಕೊಂಡ ಕೊಲೆಗಡುಕ ಮಾರ್ಗ ಅವನಿಗೆ ರಕ್ತಪಿಪಾಸು ಎಂಬ ಕುಖ್ಯಾತಿ ತಂದಿತು.  ಇದು ಸಾಲದು ಎಂಬಂತೆ ಕ್ಯಾಸ್ತ್ರೋ ಸಹೋದರರ ಜತೆ, ಮುಖ್ಯವಾಗಿ ಫಿದೆಲ್ ಕ್ಯಾಸ್ತ್ರೋ ಜತೆ ಅಭಿಪ್ರಾಯಭೇದ ಮೊಳಕೆಯೊಡೆದು ಬೆಳೆಯತೊಡಗಿತು.

ಚೇನ ಉಗ್ರ ಅಮೆರಿಕಾ-ವಿರೋಧಿ ನೀತಿಗೆ ಬೆಲೆಕೊಟ್ಟು ಉತ್ತರದ ದೊಡ್ಡಣ್ಣನನ್ನು ಎದುರುಹಾಕಿಕೊಳ್ಳುವುದು ಹರಾಕಿರಿಗೆ ಸಮ ಎಂದರಿತ ಫಿದೆಲ್ ಕ್ಯಾಸ್ತ್ರೋ ಅಮೆರಿಕಾಗೆ ಇರಿಸುಮುರಿಸಾಗುವ ಮಾತುಗಳನ್ನು ಆಡಲು ನಿರಾಕರಿಸಿದ.  ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ವಾಷಿಂಗ್ಟನ್ಗೆ ಭೇಟಿಯಿತ್ತು ತಾನು ಮಾರ್ಕ್ಸಿಸ್ಟ್ ಅಲ್ಲ, ಕಮ್ಯೂನಿಸ್ಟ್ ಅಲ್ಲ ಎಂದು ಉಪಾಧ್ಯಕ್ಷ ರಿಚರ್ಡ್ ನಿಕ್ಸನ್ ಮುಂದೆ ಘೋಷಿಸಿದ.  ಅಷ್ಟೇ ಅಲ್ಲ, ತನ್ನ ನೀತಿಗಳಿಗೆ ಚೇನಿಂದ ಯಾವುದೇ ಅಭಾಸವುಂಟಾಗಬಾರದೆಂಡು ಎಣಿಸಿದ ಕ್ಯಾಸ್ತ್ರೋ ಅವನನ್ನು ಕ್ಯೂಬದಿಂದ ಹೊರಗಿಡಲು ಹದಿನಾಲ್ಕು ವಾರಗಳ ವಿದೇಶೀ ಯಾತ್ರೆಗೆ ಕಳುಹಿಸಿಬಿಟ್ಟ.

ಕ್ಯಾಸ್ತ್ರೋ ಅಮೆರಿಕಾವನ್ನು ಎದುರುಹಾಕಿಕೊಳ್ಳಬಾರದೆಂದು ಸರ್ಕಸ್ಗೆ ತೊಡಗಿದ್ದೇನೋ ಸರಿ, ಆದರೆ ಅವನ ಅಂತರಿಕ ನೀತಿಗಳು ಸಹಜವಾಗಿಯೇ ಅಮೆರಿಕಾದ ಸಿಟ್ಟಿಗೆ ಕಾರಣವಾದವು.  ತಾವು ಕಮ್ಯೂನಿಸ್ಟರಲ್ಲ, ಯಾವುದೇ ಜಮೀನನ್ನೂ ಸರ್ಕಾರದ ಒಡೆತನಕ್ಕೆ ತೆಗೆದುಕೊಳ್ಳುವುದಿಲ್ಲ, ಯಾವ ಕೈಗಾರಿಕೆಯನ್ನೂ ರಾಷ್ಟ್ರೀಕರಣಗೊಳಿಸುವುದಿಲ್ಲ ಎಂದು ಘೋಷಿಸಿದ್ದ ಕ್ಯಾಸ್ತ್ರೋ ಕೆಲವೇ ತಿಂಗಳುಗಳಲ್ಲಿ ಅದೆಲ್ಲವನ್ನೂ ಮಾಡತೊಡಗಿದಾಗ ತನ್ನದೇ ಜನತೆಯ ವಿರೋಧಕ್ಕ್ನಷ್ಟೇ ಅಲ್ಲ, ಅಮೆರಿಕಾದ ವಿರೋಧಕ್ಕೂ ಗುರಿಯಾದ.  ಯಾಕೆಂದರೆ ಕ್ಯೂಬದ ಬಹುತೇಕ ಎಲ್ಲ ಕೈಗಾರಿಕೆಗಳೂ ಇದ್ದದ್ದು ಅಮೆರಿಕನ್ ಕಂಪೆನಿಗಳ ಒಡೆತನದಲ್ಲಿ.  ಪರಿಣಾಮವಾಗಿ ಹವಾನಾ ಮತ್ತು ವಾಷಿಂಗ್ಟನ್ಗಳ ನಡುವೆ ಸಂಬಂಧ ಬಿಗಡಾಯಿಸುತ್ತಾ ಹೋಗಿ, ಕ್ಯೂಬದ ಮೇಲೆ ಅಮೆರಿಕಾ ಆರ್ಥಿಕ ದಿಗ್ಬಂಧನ ವಿಧಿಸಿತು.  ಹೀಗೆ ಕ್ಯೂಬದ ಪ್ರಮುಖ ರಫ್ತುವಸ್ತುವಾದ ಸಕ್ಕರೆಗೆ ಮಾರುಕಟ್ಟೆ ಇಲ್ಲವಾಗಿ ವಿದೇಶೀ ವಿನಿಮಯದ ಹರಿವು ನಿಂತುಹೋಗಿ ಅರ್ಥವ್ಯವಸ್ಥೆ ಧರಾಶಾಯಿಯಾಯಿತು.  ಆಗ ಕ್ಯಾಸ್ತ್ರೋ ತಿರುಗಿದ್ದು ಕೋವಿಯೆತ್ ಯೂನಿಯನ್ನತ್ತ.  ರಶಿಯನ್ ನೇತಾರರ ಜತೆ ವ್ಯವಹರಿಸಲು ಕಾಸ್ತ್ರೋ ಚೇನನ್ನು ಮಾಸ್ಕೋಗೆ ಕಳುಹಿಸಿದ್ದ.  ಚೇನ ರಾಜತಂತ್ರ ನೈಪುಣ್ಯ ಹೊರಬಂದದ್ದು ಇಲ್ಲಿ.  ಕ್ಯೂಬ ಕ್ರಾಂತಿಯ ಯಶಸ್ಸಿನ ಆರಂಭದ ದಿನಗಳಲ್ಲಿ ಸೋವಿಯೆತ್ ನಾಯಕರಿಗೆ ಕ್ಯೂಬನ್ ಕಮ್ಯೂನಿಸ್ಟರ ಮೇಲೆ ಪ್ರೀತಿಯೇನೂ ಇರಲಿಲ್ಲ.  ಕ್ರಾಂತಿಯ ವಿರೋಧಿಗಳೆಂದು ಹಣೆಪಟ್ಟಿ ಹಚ್ಚಿ ಲೆಕ್ಕವಿಲ್ಲದಷ್ಟು ಕ್ಯೂಬನ್ನರ ಮಾರಣಹೋಮದಲ್ಲಿ ತೊಡಗಿದ್ದ ಚೇ ಮತ್ತು ಫಿದೆಲ್ ಕ್ಯಾಸ್ತ್ರೊ ಬಗ್ಗೆ ಸೋವಿಯೆತ್ ನಾಯಕ ನಿಕಿತಾ ಕ್ರುಶ್ಚೇವ್ ಅಸಹನೆ, ಅಸಹ್ಯ ಹೊಂದಿದ್ದರೆಂದು ಅವರ ಪುತ್ರ ಸೆರ್ಗೆಯಿ ಕ್ರುಶ್ಚೇವ್ ಹೇಳುತ್ತಾರೆ.  ಎಲ್ಲಾ ನಕಾರಾತ್ಕಕ ಭಾವನೆಗಳನ್ನು ತೊಡೆದುಹಾಕುವಲ್ಲಿ ಚೇ ಯಶಸ್ವಿಯಾದ.  ಕ್ರುಶ್ಚೇವ್ ಸೇರಿದಂತೆ ಸೋವಿಯೆತ್ ಉಚ್ಛ ನಾಯಕತ್ವದ ಜತೆ ವಿವರವಾಗಿ ಚರ್ಚೆ ನಡೆಸಿದ ಅವನು ಕ್ಯೂಬದ ಸಕ್ಕರೆಯನ್ನು ಸೋವಿಯೆತ್ ಯೂನಿಯನ್ ಖರೀದಿಸುವಂತೆ ಮಾಡಿದ್ದಷ್ಟೇ ಅಲ್ಲ, ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಹಾಗೂ ಸೇನಾ ಸಹಕಾರಕ್ಕೂ ಭದ್ರ ಅಸ್ತಿಭಾರ ಹಾಕಿದ.  ಅಷ್ಟೇ ಅಲ್ಲ, ಒಂದಷ್ಟು ಕ್ಯಾಸ್ತ್ರೋ-ವಿರೋಧಿ ಕ್ಯೂಬನ್ನರನ್ನು ಒಟ್ಟುಗೂಡಿಸಿ ಅಮೆರಿಕಾದ ಸಿಐಎ ಕ್ಯೂಬದ ಕಮ್ಯೂನಿಸ್ಟ್ ಸರ್ಕಾರವನ್ನು ಉರುಳಿಸಲು ನಡೆಸಿದ ವಿಫಲ ಪ್ರಯತ್ನಬೇ ಆಫ್ ಪಿಗ್ಸ್ ಪ್ರಕರಣ” ಘಟಿಸಿದಾಗ ಚೇ ಮತ್ತು ಕ್ಯಾಸ್ತ್ರೋ ಸೋವಿಯೆತ್ ಯೂನಿಯನ್ಗೆ ಮತ್ತಷ್ಟು ಗಟ್ಟಿಯಾಗಿ ಅಂಟಿಕೊಳ್ಳುವಂತಾಯಿತು.  ಕ್ಯೂಬದ ನೆಲದಲ್ಲಿ ಸೋವಿಯೆತ್ ಅಣ್ವಸ್ತ್ರ ಕ್ಷಿಪಣಿಗಳನ್ನು ಇರಿಸುವಂತೆ ಅವರಿಬ್ವರೂ ಕ್ರುಶ್ಚೇವ್ ಮನವೋಲಿಸಿದರು.  ಆದರೆ ಅಲ್ಲೂ ನಿರಾಶೆ ಕಾದಿತ್ತು.

ತನ್ನ ನೆಲಕ್ಕೆ ಕೇವಲ ನೂರೈವತ್ತು ಕಿಲೋಮೀಟರ್ ಹತ್ತಿರದಲ್ಲಿ ವೈರಿಯ ಅಣ್ವಸ್ತ್ರಗಳಿರುವುದನ್ನು ಸಹಿಸದ ಅಮೆರಿಕಾ ರಶಿಯನ್ನರಿಗೆ ಉಗ್ರ ಬೆದರಿಕೆ ಹಾಕಿತು.  ಸೋವಿಯೆತ್ ನಾಯಕ ಕ್ರುಶ್ಚೇವ್ ನಿರ್ವಾಹವಿಲ್ಲದೇ ಕ್ಷಿಪಣಿಗಳನ್ನು ಕ್ಯೂಬದಿಂದ ಹೊರತೆಗೆಯಬೇಕಾಯಿತು.  ಆದರೂ, ಅವರದನ್ನು ಮಾಡಿದ್ದು ಕ್ಯೂಬದ ಮೇಲೆ ಯಾವುದೇ ಆಕ್ರಮಣ ಎಸಗುವುದಿಲ್ಲ ಎಂದು ಅಧ್ಯಕ್ಷ ಕೆನಡಿಯವರಿಂದ ಆಶ್ವಾಸನೆ ಪಡೆದುಕೊಂಡೇ.  ಆದರೆ ತನಗೆ ಯಾವುದೇ ಮಾಹಿತಿ ನೀಡದೇ ಅಮೆರಿಕನ್ನರೊಡನೆ ಕ್ರುಶ್ಚೇವ್ ಒಪ್ಪಂದ ಮಾಡಿಕೊಂಡದ್ದು, ಕ್ಯೂಬದ ನೆಲದಿಂದ ಕ್ಷಿಪಣಿಗಳನ್ನು ಹೊರತೆಗೆದದ್ದು ಚೇಗೆ ಮಹಾಪರಾಧವಾಗಿ ಕಂಡಿತು.  ಅಮೆರಿಕಾವನ್ನು ಖಡಾಖಂಡಿತವಾಗಿ ಎದುರಿಸಲಾಗದ ಕ್ರುಶ್ಚೇವ್ ಅಸಹಾಯಕತೆ, ಆವರ ಕೈಗಳನ್ನು ಕಟ್ಟಿಹಾಕಿದ ಅಂತರರಾಷ್ಟ್ರೀಯ ಸಂಬಂದಗಳ ಒಳಸುಳಿಗಳನ್ನು ಚೇ ಅರ್ಥಮಾಡಿಕೊಳ್ಳಲೆ ಇಲ್ಲ.  ಚೀನಾದ ಮಾವೋ ಜತೆ ಮಿತ್ರತ್ವ ಸಾಧಿಸಿದ ಆತ ಕ್ಯೂಬವನ್ನು ರಶಿಯಾದಿಂದ ದೂರ ಒಯ್ದು ಚೀನಾಗೆ ಕಟ್ಟಿಹಾಕಲು ಯೋಜಿಸಿದ.  ಆದರೆ ಕ್ಯಾಸ್ತ್ರೋನ ಇಂಗಿತ ಬೇರೆಯೇ ಆಗಿತ್ತು.  ಕಷ್ಟಕಾಲದಲ್ಲಿ ಕೈಹಿಡಿದು ಕಾಪಾಡಿದ ಸೋವಿಯೆತ್ ಯೂನಿಯನ್ ಅನ್ನು ಬಿಡಲು ಆತ ತಯಾರಿರಲಿಲ್ಲ.  ಅದೇ ವೇಳೆಗೆ ಚೇನ ಆರ್ಥಿಕ ನೀತಿಗಳು ವಿಫಲವಾಗಿ ಕ್ಯೂಬದ ಅರ್ಥವ್ಯವಸ್ಥೆ ನೆಲಕಚ್ಚಿತು.  ಚೇನನ್ನು ದೂರವಿಡುವ ಮಾರ್ಗಗಳನ್ನು ಕ್ಯಾಸ್ತ್ರೋ ಹುಡುಕತೊಡಗಿದ.  ಅಂತಹ ಅವಕಾಶವನ್ನು ಚೇ ಡಿಸೆಂಬರ್ ೧೯೬೪ರಲ್ಲಿ ತಾನಾಗಿಯೇ ಸೃಷ್ಟಿಸಿದ.

ಕ್ಯೂಬವನ್ನು ಪ್ರತಿನಿಧಿಸಿ ವಿಶ್ವಸಂಸ್ಥೆಯಲ್ಲಿ ಮಾತಾಡಿದ ಚೇ ಅಮೆರಿಕಾವನ್ನು ಅದರ ನೀತಿಗಳಿಗಾಗಿ ತರಾಟೆಗೆ ತೆಗೆದುಕೊಂಡದ್ದೇನೋ ಸರಿ, ಆದರೆ ನ್ಯೂಯಾರ್ಕ್ನಿಂದ ಆಲ್ಜಿಯರ್ಸ್ಗೆ ಹಾರಿದ ಚೇ ಅಲ್ಲಿ ಸೋವಿಯೆತ್ ಯೂನಿಯನ್ ಅನ್ನು ಉಗ್ರವಾಗಿ ಟೀಕಿಸಿದ.  ಅವನನ್ನು ಹೊರಗಟ್ಟುವ ಗಳಿಗೆ ಬಂತೆಂದು ಕ್ಯಾಸ್ತ್ರೋ ಅಂತಿಮವಾಗಿ ನಿರ್ಣಯಿಸಿದ್ದು ಆಗ.  ಚೇ ಆಲ್ಜಿಯರ್ಸ್ನಿಂದ ಹಿಂತಿರುಗಿದ್ದೇ ಅವನೊಡನೆ ಏಕಾಂತದಲ್ಲಿ ಮಾತಾಡಿದ ಕ್ಯಾಸ್ತ್ರೋ ಇನ್ನು ನಿನ್ನಿಂದ ಕ್ಯೂಬಕ್ಕೆ ಯಾವ ಉಪಯೋಗವೂ ಇಲ್ಲ, ನೀನು ಹೊರಡಬಹುದು ಎಂದು ನೇರವಾಗಿ ಹೇಳಿದ.  ಮಾತಿನ ಸತ್ಯತೆ ಚೇಗೂ ಅರ್ಥವಾಯಿತು.  ಕ್ಯೂಬದ ಕ್ರಾಂತಿಯಲ್ಲಿ ತಾನೆಂದೂ ನಾಯಕನಾಗಿರಲಿಲ್ಲ, ತನ್ನ ಪಾತ್ರವೇನಿದ್ದರೂ ಒಬ್ಬ ಸಮರ್ಥ ಕಾಲಾಳಿನದು ಮಾತ್ರ ಎಂಬ ಕಟುವಾಸ್ತವ ಕೊನೆಗೂ ಅವನ ಅರಿವಿಗೆ ಬಂದಿತ್ತು.

ಕ್ರಾಂತಿಕಾರೀ ಜೀವನಶೈಲಿಯ ಹೊರತಾಗಿ ಬೇರಾವುದಕ್ಕೂ ಹೊಂದಿಕೊಳ್ಳಲಾಗದ ಚೇಗೆ ಕಂಡದ್ದು ಮಧ್ಯ ಆಫ್ರಿಕಾದ ಕಾಂಗೋದಲ್ಲಿ ನಡೆಯುತ್ತಿದ್ದ ಅಂತರ್ಯುದ್ಧ.  ಅಮೆರಿಕಾದ ಕೈಗೊಂಬೆ ಜೋಸೆಫ್ ಕಸಾವಾಬುನ ಸರ್ವಾಧಿಕಾರದ ವಿರುದ್ಧ ಸೆಣಸುತ್ತಿದ್ದ, ಜನನಾಯಕನೆಂದು ಹೊರಜಗತ್ತಿಗೆ ಬಿಂಬಿತವಾಗಿದ್ದ ಇಪ್ಪತ್ತಾರು ವರ್ಷದ ಲಾರೆಂಟ್ ಕಬೀಲಾನಿಗೆ ಸಹಕರಿಸಲೆಂದು ಚೇ ತನ್ನ ಒಂದಷ್ಟು ಗೆರಿಲ್ಲಾ ಸಹಚರರನ್ನು ಕಟ್ಟಿಕೊಂಡು ತಾಂಜಾನಿಯಾ ಮೂಲಕ ಕಾಂಗೋಗೆ ಹೋದ.  ಆದರೆ ಅಲ್ಲಿಯೂ ಅವನಿಗೆ ನಿರಾಶೆ ಕಾದಿತ್ತು.  'ಜನನಾಯಕ' ಕಬೀಲನಿಗಾಗಿ ಕಾಯುತ್ತಾ ಚೇ ಟ್ಯಾಂಗನ್ಯೀಕಾ ಸರೋವರದ ದಡದಲ್ಲಿ ಕುಳಿತಿದ್ದ.  ಕಬೀಲ ಸ್ಪೀಡ್ಬೋಟ್ನಲ್ಲಿ ಬಂದಿಳಿದ.  ಅವನ ಜತೆ ಬೋಟ್ನಲ್ಲಿ ಇದ್ದದ್ದೇನು?  ಒಂದಷ್ಟು ವೇಶ್ಯೆಯರು ಮತ್ತು ಬೋಟ್ ತುಂಬಾ ವಿಸ್ಕಿ ಬಾಟಲುಗಳು!  ಅದನ್ನು ನೋಡಿದ್ದೇ ಇಂಥಾ ಅಯೋಗ್ಯನ ಪರವಾಗಿ ನಾವು ಹೋರಾಡಬೇಕೇ ಎಂದು ಚೇನ ಸಹಚರರು ಉರಿದುಹೋದರು.  ಕಬೀಲ ಜನನಾಯಕನಿರಬಹುದು, ಆದರೆ ಅವನೆಂದಿಗೂ ಕ್ರಾಂತಿನಾಯಕನಾಗಲಾರ, ರಾಷ್ಟ್ರನಿರ್ಮಾತೃವಾಗಲಾರ ಎಂದು ಚೇಗೂ ಅರಿವಾಗಿಹೋಯಿತು.  ಆದರೆ ಕಾಂಗೋದಲ್ಲಿ ಹೋರಾಟದ ಬದುಕಲ್ಲದೇ ಬೇರೆ ದಾರಿ ತನಗಿಲ್ಲ ಎಂದೂ ಅವನಿಗೆ ಅರಿವಾಗಿತ್ತು.  ಯಾಕೆಂದರೆ, ಕ್ಯೂಬದ ನಾಗರಿಕತ್ವ, ಕ್ಯೂಬ ಸೇನೆಯ ಕಮ್ಯಾಂಡರ್ ಹುದ್ಧೆ, ಮಂತ್ರಿಯ ಸ್ಥಾನಮಾನ ಎಲ್ಲವನ್ನೂ ತ್ಯಜಿಸಿ ಬಗ್ಗೆ ಕ್ಯಾಸ್ತ್ರೋಗೆ ಪತ್ರ ಬರೆದು ಗುಡ್ ಬೈ ಅಂತಲೂ ಹೇಳಿಬಿಟ್ಟಿದ್ದ ಚೇ.

ಮುಂದಿನ ಹನ್ನೊಂದು ತಿಂಗಳವರೆಗೆ ಚೇ ಬಗ್ಗೆ ಜಗತ್ತಿಗೆ ಏನೂ ತಿಳಿಯಲಿಲ್ಲ.  ಅವನು ಸತ್ತಿರಬಹುದೆಂಬ ವದಂತಿಯೂ ಹಬ್ಬಿತು.  ಅವನ ಅಂತ್ಯಕ್ಕೆ ಕ್ಯಾಸ್ತ್ರೋ ಕಾರಣವಾಗಿರಬಹುದೆಂಬ ಆಪಾದನೆಯೂ ಕೇಳಿಬರತೊಡಗಿತು.  ತನ್ನ ಮೇಲಿನ ಅನುಮಾನಗಳನ್ನು ದೂರೀಕರಿಸುವ ಉದ್ದೇಶದಿಂದ ಚೇ ಬರೆದಿದ್ದ ಪತ್ರವನ್ನು ಕ್ಯಾಸ್ತ್ರೋ ಸಾರ್ವಜನಿಕವಾಗಿ ಓದಿ ಜಗತ್ತಿಗೆ ಸಾರಿಬಿಟ್ಟ.  ಅಲ್ಲಿಗೆ ಚೇಗೆ ಕ್ಯೂಬದ ಹಾದಿ ಬಂದ್ ಆಗಿಹೋಯಿತು.  ತನ್ನ ಪತ್ರವನ್ನು ಕ್ಯಾಸ್ತ್ರೋ ಸಾರ್ವಜನಿಕಗೊಳಿಸಿದ ಸುದ್ಧಿ ಸಿಕ್ಕಿದ ಸಮಯದಲ್ಲೇ ತನ್ನ ತಾಯಿಯ ಮರಣದ ವಾರ್ತೆಯೂ ಚೇಗೆ ತಲುಪಿತು.  ಅವೆರಡರಿಂದಲೂ ಅತಿಯಾಗಿ ಘಾಸಿಗೊಂಡ ಆತ ದಿನವಿಡೀ ಯಾರೊಂದಿಗೂ ಮಾತಾಡದೇ ಒಬ್ಬನೇ ಚಿಂತಾಕ್ರಾಂತನಾಗಿ ಕುಳಿತುಬಿಟ್ಟಿದ್ದ.

ಸರ್ಕಾರೀ ಸೇನೆಯ ಮರುದಾಳಿಯಿಂದ ಕಬೀಲಾನ ಪಡೆ ಚೆಲ್ಲಾಪಿಲ್ಲಿಯಾಗಿಹೋಯಿತು.  ಜತೆಗೆ ಚೇ ಸಹಾ ತನ್ನ ಹಲವಾರು ಸಹಚರರನ್ನು ಕಳೆದುಕೊಂಡ.  ಒಂದು ಹಂತದಲ್ಲಂತೂ ಅವನ ಜೀವವೇ ಅಪಾಯಕ್ಕೆ ಸಿಲುಕುವಂತಾಯಿತು.  ಹೀಗೆ ಕಾಂಗೋದಲ್ಲಿನ ವೈಫಲ್ಯದಿಂದಾಗಿ ಪೂರ್ಣವಾಗಿ ಭ್ರಮನಿರಸನಗೊಂಡ, ಕ್ಯೂಬದ ಬಾಗಿಲು ಬಂದ್ ಆಗಿ ಅಸಹಾಯಕನಾಗಿದ್ದ ಚೇ ಕೆಲಕಾಲ ತಾಂಜಾನಿಯಾ ಹಾಗೂ ಜೆಕೋಸ್ಲೊವೇಕಿಯಾದಲ್ಲಿ ತಂಗಿದ.  ಆದರೆ, ಒಂದುಕಡೆ ಸುಮ್ಮನೆ ನೆಲೆನಿಲ್ಲುವ ಜಾಯಮಾನದವನಲ್ಲದ ಚೇ ಕೆಲವೇ ದಿನಗಳಲ್ಲಿ ಮತ್ತೊಂದು ಮಿಥ್ಯಾಸಂಜ್ಞೆಗೆ ಓಗೊಟ್ಟು ಅಜ್ಞಾತವೇಷದಲ್ಲಿ ಬೊಲಿವಿಯಾ ಸೇರಿದ.  ಅವನ ಹೋರಾಟದ ಬದುಕಿನ ಅಂತಿಮ ಚರಣ ಆರಂಭವಾಯಿತು.

ತಮ್ಮ ಗೆರಿಲ್ಲಾ ಯುದ್ಧಕ್ಕೆ ನಿನ್ನ ಅಗತ್ಯವಿದೆಯೆಂದು ಬೊಲಿವಿಯಾದ ಕಮ್ಯೂನಿಸ್ಟರು ಅವನಿಗೆ ಹೇಳಿದ್ದೇನೋ ನಿಜ.  ಆದರೆ, ಅಲ್ಲಿನ ಜನಸಾಮನ್ಯರಲ್ಲಿ ಕಮ್ಯೂನಿಸಂ ಬಗ್ಗೆ ಯಾವುದೇ ಒಲವಿರಲಿಲ್ಲ.  ಸರ್ಕಾರೀ ಭೂಸುಧಾರಣಾ ಯೋಜನೆಗಳಿಂದಾಗಿ ೧೯೫೪ರಷ್ಟು ಹಿಂದೆಯೇ ಜಮೀನುಗಳನ್ನು ಪಡೆದು ಸ್ವತಂತ್ರ ಬದುಕು ಕಟ್ಟಿಕೊಂಡಿದ್ದ ಲಕ್ಷಾಂತರ ಬೊಲಿವಿಯನ್ನರಿಗೆ ಕಮ್ಯೂನಿಸಂನ ಅಗತ್ಯವೇನೂ ಕಂಡಿರಲಿಲ್ಲ.  ಒಟ್ಟಿನಲ್ಲಿ, ಬೊಲಿವಿಯಾ ಕಮ್ಯೂನಿಸ್ಟ್ ಕ್ರಾಂತಿಗೆ ತಕ್ಕ ನೆಲವಾಗಿರಲೇ ಇಲ್ಲ.  ಪರಿಣಾವಮಾಗಿ ಚೇ ಮತ್ತವನ ಗೆರಿಲ್ಲಾ ಸಂಗಾತಿಗಳು ಎಲ್ಲಿ ಹೋದರೂ ಅವರ ಬಗ್ಗೆ ಸೇನೆಗೆ ಮಾಹಿತಿ ನೀಡತೊಡಗಿದ್ದು ರೈತರೇ.  ಯಾರ ಪರವಾಗಿ ತಾನು ಹೋರಾಡುತ್ತಿದ್ದೇನೆಂದು ಅಂದುಕೊಂಡಿದ್ದನೋ ಅವರಿಂಗಲೇ ನಿರಾಕರಿಸಲ್ಪಟ್ಟ ಚೇ ಸಂಗಾತಿಗಳೊಡಗೂಡಿ ಏಳು ತಿಂಗಳುಗಳವರೆಗೆ ಆಗ್ನೇಯ ಬೊಲಿವಿಯಾದ ಚಾಕೋ ಪ್ರದೇಶದಲ್ಲಿ ಅನ್ನನೀರಿಲ್ಲದೇ, ಗೊತ್ತುಗುರಿಯಿಲ್ಲದೇ ಅಲೆದ.  ಚೇ ಅರ್ಧದಷ್ಟು ಇಳಿದುಹೋದ, ಕೂದಲು ಉದ್ದವಾಗಿ ಜಡೆಗಟ್ಟಿಹೋಯಿತು.  ನಿಷ್ಟ ಕ್ರಾಂತಿಕಾರಿಯೊಬ್ಬ ಹಂತಹಂತವಾಗಿ ಕುಸಿಯುತ್ತಿದ್ದ.

  ಅಂತಿಮವಾಗಿ, ಚೇ ಮತ್ತವನ ಸಂಗಾತಿಗಳು ವ್ಯಾಲೇಗ್ರಾಂದೆ ಕಣಿವೆಯ ಯುರೋ ಕೊರಕಲಿನಲ್ಲಿ ಅಡಗಿರುವ ಬಗ್ಗೆ ಅಕ್ಟೋಬರ್ , ೧೯೬೭ರಂದು ಬೊಲಿವಿಯಾದ ಸೇನೆಗೆ ಮಾಹಿತಿ ಸಿಕ್ಕಿತು.  ಮರುದಿನ ಬೆಳಿಗ್ಗೆಬೆಳಿಗ್ಗೆಯೇ ,೮೦೦ ಸೈನಿಕರು ಕೊರಕಲನ್ನು ಸುತ್ತುವರೆದರು.  ಕ್ರಾಂತಿವೀರನ ಕೈಗಳು ಕಟ್ಟಿಹೋದವು.  ಕೊನೇ ಪ್ರಯತ್ನವೆನ್ನುವಂತೆ ಸೇನೆಯ ಜತೆ ಗುಂಡಿನ ಕಾಳಗಕ್ಕಿಳಿದ ಚೇ ಗಾಯಗೊಂಡ.  ಅವನ ರೈಫಲ್ ಸಹಾ ಸೀಳುಬಿಟ್ಟು ನಿರುಪಯುಕ್ತವಾಯಿತು.  ಇಂತಹ ನಿರಾಶಾದಾಯಕ ಕ್ಷಣದಲ್ಲಿ ಎದುರಿಗೆ ಬಂದು ನಿಂತ ಬಂದೂಕುಧಾರಿ ಸೈನಿಕರಿಗೆ ಚೇ ಕೂಗಿ ಹೇಳಿದ: “ನಾನೇ ಚೇ.  ನನ್ನತ್ತ ಗುಂಡು ಹಾರಿಸಬೇಡಿ.  ಮೃತ ಚೇ ಬದಲು ಜೀವಂತ ಚೇ ನಿಮಗೆ ಹೆಚ್ಚು ಅಮೂಲ್ಯ”.

ಚೇನನ್ನು ಬಂಧಿಸಿ ಹತ್ತಿರದ ಮುರುಕಲು ಶಾಲೆಯೊಂದರ ಕೋಣೆಯಲ್ಲಿ ಕೂಡಿಹಾಕಿದ ಕರ್ನಲ್ ಗ್ಯಾರಿ ಪ್ರಾದೋ ಒಂದು ಆಸಕ್ತಿಕರ ಮಾಹಿತಿ ನೀಡುತ್ತಾನೆ.  ಬೊಲಿವಿಯನ್ ಗೆರಿಲ್ಲಾ ಒಬ್ಬನ ಆಸರೆಯಲ್ಲಿ ಅತೀವ ಪ್ರಯಾಸದಿಂದ ಕೊರಕಲನ್ನು ಹತ್ತಿಬರುತ್ತಿದ್ದ ಚೇ ಕೈಯಲ್ಲಿ ಬಹಳ ಜೋಪಾನವಾಗಿ ಪೊಟ್ಟಣವೊಂದನ್ನು ಹಿಡಿದಿದ್ದನಂತೆ.   ಪೊಟ್ಟಣದಲ್ಲಿದ್ದದ್ದು ಆರು ಮೊಟ್ಟೆಗಳು!  ಅದು ಅವನ ನಾಳಿನ ಊಟವಾಗಿದ್ದಿರಬಹುದು ಎಂದು ಕರ್ನಲ್ ಪ್ರಾದೋ ಹೇಳುತ್ತಾನೆ.  ಅದೇ ಪ್ರಾದೋ ನಂತರ ಚೇಗೆ ಕೇಳುತ್ತಾನೆ: “ಪರಿಸ್ಥಿತಿ ಇಷ್ಟು ಕೆಡುವವರೆಗೆ ಯಾಕೆ ಕಾದೆ?  ಕೆಲದಿನ ಮೊದಲೇ ನೀನು ಶಸ್ತ್ರ ತ್ಯಜಿಸಬಹುದಿತ್ತಲ್ಲ?”  ಅದಕ್ಕೆ ಚೇನ ಪ್ರತಿಕ್ರಿಯೆ:ಆಮೇಲೆ ನಾನು ಹೋಗುವುದಾದರೂ ಎಲ್ಲಿಗೆ?”  ತನಗಾಗಿ ಏನನ್ನೂ ಸಂಪಾದಿಸದೇ, ಸದಾ ಇತರರ ಕಷ್ಟಕ್ಕೇ ಮಿಡಿದ ಚೇಗೆ ಅಂತಿಮವಾಗಿ ಏನೂ ಇರಲಿಲ್ಲ.

ಮುಂದಿನ ದೊಡ್ಡ ಕಥೆಯನ್ನು ಚಿಕ್ಕದಾಗಿಸಿ ಹೇಳುವುದಾದರೆ, ಚೇ ಕುರಿತು ಅಮೆರಿಕಾದ ಸಿಐಎ, ಬೊಲಿವಿಯಾದ ಸರ್ಕಾರ, ಸೇನೆ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದುದು ಸಂಕೇತಗಳ ಮೂಲಕ.  ಪ್ರಕಾರ ೫೦೦ ಎಂದರೆ ಚೇ, ೬೦೦ ಎಂದರೆ ಚೇಗೆ ಮರಣದಂಡನೆ, ೭೦೦ ಅಂದರೆ ಚೇಯ ಜೀವಂತ ಕೈದು.  ಚೇಗೆ ಮರಣದಂಡನೆ ವಿಧಿಸಬೇಕೆಂದು ಬೊಲಿವಿಯಾದ ಅಧ್ಯಕ್ಷ ರೆನೋ ಬ್ಯಾರಿಯೆಂತೋ ಅಕ್ಟೋಬರ್ ೯ರ ಬೆಳಿಗ್ಗೆ ನಿರ್ಣಯ ತೆಗೆದುಕೊಂಡರು.  ಸೇನಾ ಹೈಕಮ್ಯಾಂಡ್ ಕಚೇರಿಯಿಂದ ಚೇನನ್ನು ಬಂಧಿಸಿದ್ದ ಸೇನಾತುಕಡಿಗೆ ಸಂದೇಶ ಬಂತು, “೫೦೦, ೬೦೦” ಅಂತ!

ಇಲ್ಲಿ ಅದೃಷ್ಟದೇವತೆ ಒಮ್ಮೆ ಕಣ್ಣುಮುಚ್ಚಾಲೆಯಾಡಿದಳು.  ಚೇಯನ್ನು ನಿವಾರಿಸಿಕೊಳ್ಳಬೇಕೆಂದು ಬೊಲಿವಿಯನ್ನರು ನಿರ್ಧರಿಸಿದರೂ, ಅಮೆರಿಕಾಗೆ ಅದು ಬೇಡವಾಗಿತ್ತು.  ಅವನ್ನು ಬಂಧಿಸಿ ವಿಚಾರಣೆಗೊಳಪದಿಸುವುದು ಅಮೆರಿಕನ್ ಸರ್ಕಾರ ಹಾಗೂ ಸಿಐಎನ ಉದ್ದೇಶವಾಗಿತ್ತು.  ಉದ್ದೇಶಸಾಧನೆಗಾಗಿ ಕೆಲಸ ಮಾಡುತ್ತಿದ್ದುದು ಫೆಲಿಕ್ಸ್ ರಾದ್ರಿಗ್ಯುಯೆಜ಼್ ಎಂಬ ಕ್ಯೂಬನ್ ನಿರಾಶ್ರಿತ.  ಹವಾನಾದಲ್ಲಿ ಕ್ಯಾಸ್ತ್ರೋ ಸರ್ಕಾರ ಸ್ಥಾಪನೆಯಾದಾಗ ಅಮೆರಿಕಾಗೆ ಓಡಿಹೋದ ಈತ ಸಿಐಎಯ ಹಸ್ತಕನಾಗಿ ೧೯೬೧ರ ಬೇ ಆಫ್ ಪಿಗ್ಸ್ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ.  ಚೇನನ್ನು ಉಳಿಸಲು ಅವನು ಕೊನೆಯ ಪ್ರಯತ್ನವೆಂಬಂತೆ ಬೊಲಿವಿಯನ್ ಸೇನೆಗೆ ವಿನಂತಿಸಿಕೊಂಡ.  ಆದರೆ ಬೊಲಿವಿಯನ್ನರ ನಿರ್ಧಾರ ಅಚಲವಾಗಿತ್ತು.  ಎಷ್ಟು ಸಾಧ್ಯವೋ ಅಷ್ಟು ಬೇಗ ಚೇನನ್ನು ನಿವಾರಿಸಿಕೊಳ್ಳುವುದು ತನಗೆ ಕ್ಷೇಮಕರ ಎಂದು ಬೊಲಿವಿಯನ್ ಸರ್ಕಾರ ತಿಳಿದಂತಿತ್ತು.

ನಿರಾಸೆಗೊಂಡ ಫೆಲಿಕ್ಸ್ ಕೊನೆಯ ಬಾರಿಯೆಂಬಂತೆ ಚೇನ ಭೇಟಿಗಾಗಿ ಕತ್ತಲ ಕೊಠಡಿ ಪ್ರವೇಶಿಸಿದ.  ಚೇನನ್ನು ಉಳಿಸಿಕೊಳ್ಳಲಾಗದ ತನ್ನ ಅಸಹಾಯಕತೆಯನ್ನು ಸಾಂಕೇತಿಕವಾಗಿ ಚೇಗೆ ಅರುಹಿದ.  ಚೇಗೆ ತನ್ನ ಭವಿಷ್ಯ ಸ್ಪಷ್ಟವಾಗಿಹೋಯಿತು.  ಮರುಮದುವೆಯಾಗಿ ಸುಖವಾಗಿರು ಎಂದು ತನ್ನ ಹೆಂಡತಿ ಅಲೇದಾಳಿಗೆ ಹೇಳುವಂತೆ ಫೆಲಿಕ್ಸ್ನನ್ನು ಕೇಳಿಕೊಂಡ ಚೇ.

ಅದೇ ಮಧ್ಯಾಹ್ನ ೨೭ ವರ್ಷದ ಸೈನಿಕ ಮಾರಿಯೋ ತೆರಾನ್ ರೈಫಲ್ ಹಿಡಿದು ಕತ್ತಲ ಕೊಟಡಿ ಪ್ರವೇಶಿಸಿದ.  ಅವನ ಕಣ್ಣುಗಳಲ್ಲಿ ಚೇಗೆ ಕಂಡದ್ದು ತನ್ನ ಹಂತಕ ಇವನೇ ಎಂಬ ಸೂಚನೆ.  ಮಾರಿಯೋನತ್ತ ಕ್ರೂರನೋಟ ಬೀರಿ ಚೇ ಕೂಗಿದ: “ನನ್ನನ್ನು ಕೊಲ್ಲಲು ಬಂದಿದ್ದೀಯ!  ಹೇಡೀ, ಗುಂಡು ಹಾರಿಸು.  ನೀನು ಕೊಲ್ಲಹೊರಟಿರುವುದು ಒಬ್ಬ ಮನುಷ್ಯನನ್ನು ಮಾತ್ರ.”  ನನ್ನ ವಿಚಾರಗಳನ್ನೆಂದೂ ನೀನು ನಾಶಮಾಡಲಾರೆ ಎಂಬ ಗಟ್ಟಿ ಸಂದೇಶ ಮಾತಿನಲ್ಲಿತ್ತು.

ಸೈನಿಕರೊಂದಿಗಿನ ಗುಂಡಿನ ಕಾಳಗದಲ್ಲಿ ಚೇ ಹತನಾದ ಎಂಬರ್ಥ ಬರುವಂತೆ ಅವನನ್ನು ಕೊಲ್ಲಬೇಕು ಎಂದು ತೆರಾನ್ಗೆ ಮೊದಲೇ ಸೂಚನೆ ಕೊಡಲಾಗಿತ್ತು.  ಅದರಂತೆ ಆತ ಮೊದಲು ಚೇನ ಕಾಉಗಳಿಗೆ, ಕೈಗಳಿಗೆ, ಭುಜಕ್ಕೆ ಏಳು ಗುಂಡುಗಳನ್ನು ಹಾರಿಸಿದ.  ಕೆಳಗುರುಳಿದ ಚೇ ನೋವಿನ ಚೀತ್ಕಾರ ಹತ್ತಿಕ್ಕಲೆಂದು ಮೊಣಕೈಯನ್ನು ಬಲವಾಗಿ ಕಚ್ಚಿದ.  ಕೊನೆಗೆ ಅವನ ಎದೆಗೆ, ಗಂಟಲಿಗೆ ಕೊನೆಯ ಎರಡು ಗುಂಡು ತುಂಬಿದ ತೆರಾನ್.  ಒಂಬತ್ತು ಗುಂಡುಗಳು!  ಸ್ಥಳೀಯ ಕಾಲಮಾನ ಮಧ್ಯಾಹ್ನ ಒಂದುಗಂಟೆ ಹತ್ತು ನಿಮಿಷಕ್ಕೆ ಚೇ ಮೃತನಾಗಿರುವನೆಂದು ಘೋಷಿಸಲಾಯಿತು.  ವಿಶ್ವದ ಕ್ರಾಂತಿಯಾಗಸದಲ್ಲಿ ಇಡೀ ಹತ್ತುವರ್ಷಗಳು ಜಾಜ್ವಲವಾಗಿ ಉರಿದ ನಕ್ಷತ್ರವೊಂದು ಅಸ್ತಂಗತವಾಯಿತು.

ಚೇ ಮತ್ತೊಬ್ಬರ ನೋವಿಗೆ ತಟಕ್ಕನೆ ಸ್ಪಂದಿಸುವ ಭಾವುಕ ಜೀವಿ.  ಪೆರುವಿನಲ್ಲಿ ತಾನು ಶುಶ್ರೂಸೆ ಮಾಡಿದ ಕುಷ್ಟರೋಗಿಗಳು, ಮೆಕ್ಸಿಕೋದ ಹಾಸ್ಟೆಲ್ನಲ್ಲಿ ತನಗೆ ಅನ್ನವಿಕ್ಕಿದ ಮಹಿಳೆ, ಅಲ್ಲಿ ಎದುರಾದ ಅಸಹಾಯಕ ವೃದ್ಧ ಅಗಸಗಿತ್ತಿ- ಹೀಗೆ ಅದೆಷ್ಟೋ ನತದೃಷ್ಟರು ಅವನ ಬರಹಗಳಲ್ಲಿ ಸ್ಥಾನ ಪಡೆದಿದ್ದಾರೆ, ಅವರ ಬದುಕು ಹಸನಾಗಲೆಂದು ತನ್ನ ಕವನಗಳಲ್ಲಿ ಹಾರೈಸಿದ್ದಾನೆ ಚೇ.  ಇಷ್ಟಾಗಿಯೂ,  ಚೇ ಬದುಕುಪೂರ್ತಿ ಕಾರ್ಯನಿರತನಾಗಿದ್ದರ್ರು ತನ್ನದಲ್ಲದ ನೆಲದಲ್ಲಿ, ತನ್ನವರಲ್ಲದ ಜನರಿಗಾಗಿ.  ಬದುಕಿದ್ದಾಗ ಅವನಿಗೆ ಯಾರೂ ಇರಲಿಲ್ಲ.  ಆದರೆ ಅವನು ಬದುಕಿದ, ಸತ್ತ ಬಗೆಯೇ ಅವನನ್ನು ವಿಶ್ವಾದ್ಯಂತ ಹೀರೋ ಮಾಡಿಬಿಟ್ಟಿತು, ಅವನ ಮುಖ ವಿಶ್ವಾದ್ಯಂತ ಲಕ್ಷಾಂತರ ಟೀಶರ್ಟ್ಗಳ ಮೇಲೆ ಅವುಗಳ ಹಿಂದಿದ್ದ ಹೃದಯಗಳೊಳಗೆ ರಾರಾಜಿಸುವಂತಾಯಿತು.  ಅಂತಿಮವಾಗಿ ಹೇಳುವುದಾದರೆ, ಚೇ ಒಬ್ಬ ಭಾವುಕ ಆದರ್ಶವಾದಿ, ಎಲ್ಲ ಆದರ್ಶವಾದಿಗಳಂತೇ ಅವನೂ ವಾಸ್ತವಗಳನ್ನು ಗುರುತಿಸಲೇ ಇಲ್ಲ.  ಪರಿಣಾಮವಾಗಿ ಗುರಿ ಸ್ಪಷ್ಟವಿದ್ದರೂ ಪ್ರತೀ ಹೆಚ್ಚೆಯನ್ನೂ ಆತ ಅಸ್ಪಷ್ಟ, ತಪ್ಪುದಾರಿiಲ್ಲಿ ಇಟ್ಟ.  ಹೀಗಾಗಿ ಅವನೊಬ್ಬ ಯಶಸ್ಚೀ ರಚನಾತ್ಮಕ ಕ್ರಾಂತಿಕಾರಿಗಿಂತಲೂ, ಋಣಾತ್ಮಕ ಕ್ರಾಂತಿಕಾರಕ ಅರಾಜಕತಾವಾದಿಯಾಗಿ ಇತಿಹಾಸದಲ್ಲಿ ದಾಖಲಾಗುತ್ತಾನೆ.

No comments:

Post a Comment