"ವಿಜಯವಾಣಿ" ದೈನಿಕದ "ಜಗದಗಲ" ಅಂಕಣದಲ್ಲಿ ಬುಧವಾರ, ಜುಲೈ ೨ರಂದು ಪ್ರಕಟವಾದ ಲೇಖನ
“ರೇಶನ್ ಕಾಳು ಬಡೂರಿಗೆ ಸಿಗತಾವು ಅಂತ ತಿಳದೀರಿ? ನಾವು ಬಿಟ್ಟಕೊಟ್ಟ ಬಂದ ಕಾಳು ಮತ್ತೂ ಇದ್ದಾರ ಪಾಲ ಆಕ್ಕಾವು. ಅವು ಅವಶ್ಯ ಇದ್ದಾರಿಗೆ ಆಗೂದಿಲ್ಲಾ. ಹಸದ ಹೊಟ್ಟಿ ಸೇರುದಿಲ್ಲಾ. ಇವು ಹೆಸರಿಗೆ ಅಷ್ಟ ನ್ಯಾಯಬೆಲೆ ಅಂಗಡಿ. ಬಡವರು ಮತ್ತಷ್ಟು ರೊಕ್ಕಾ ಕೊಟ್ಟು ಹೆಚ್ಚು ಕಾಳು ಬೇಕು ಅಂದ್ರೂ ಸಿಗೂದಿಲ್ಲಾ. ಆದರ ಇದ್ದಾರಿಗೆ ಬೇಕಾದಷ್ಟು ಸಿಗತಾವು. ಈಗ ನಾವು ತರೂದು ಬಿಟ್ಟವಿ ಅಂದ್ರ ಅದನ್ನ ಹೆಚ್ಚಿನ ರೊಕ್ಕಕ್ಕ ಮಾರಕೊಂತಾರಾ. ಅದರ ಬದಲಿಗೆ ನಾವು ಅವುನ್ನ ತುಗೊಂಡ ಬಂದು ಪುಗಸಟ್ಟೆ ಆದ್ರೂ ಹಂಚಿಬಿಟ್ಟರ ಆ ಬಡೂರು ತೃಪ್ತಿಪಟ್ಟ, ಖುಷಿಯಿಂದ ತಗೊಂಡ ಹೋದ್ರು ಅಂದ್ರ ಅದಕ್ಕಿಂತ ನೆಮ್ಮದಿ ಮತ್ತೇನ ಐತ್ರಿ?”
ಬಡವರಿಗೆ ಅನುಕೂಲವಾಗಲೆಂದು ಸರಕಾರ ಯೋಜಿಸಿದ ಕಾರ್ಯಕ್ರಮವೊಂದು ಭ್ರಷ್ಟಾಚಾರದ ಕಬಂಧಬಾಹುವಿನಲ್ಲಿ
ಸಿಲುಕಿ ಪ್ರತಿಕೂಲ ಪರಿಣಾಮವನ್ನು ಉಂಟುಮಾಡಿರುವ ದುರಂತ ವಾಸ್ತವವೊಂದರ ಬಗ್ಗೆ ಕಾದಂಬರಿಕಾರ್ತಿ ಪಾರ್ವತಿ
ಪಿಟಗಿ ತಮ್ಮ ಕಾದಂಬರಿ “ಅಪರಿಚಿತ”ದಲ್ಲಿನ ಪಾತ್ರವೊಂದರ ಮೂಲಕ ಹೇಳಿಸುವ ಮಾತುಗಳಿವು. (ಪುಸ್ತಕಯಾನ, ಮೈಸೂರು, 2013, ಪುಟ. 128) ನನಗಿವು ನೆನಪಾಗಿ ಕಾಡತೊಡಗಿದ್ದು ಸಿದ್ಧರಾಮಯ್ಯ ನೇತೃತ್ವದ
ಕಾಂಗ್ರೆಸ್ ಸರಕಾರದ ”ಅನ್ನಭಾಗ್ಯ” ಯೋಜನೆ ಭ್ರಷ್ಟ ಗಿರಣಿ ಮಾಲಿಕರು ಮತ್ತವರಿಗೆ ಶಾಮೀಲಾಗಿರಬಹುದಾದ
ಸರಕಾರಿ ಅಧಿಕಾರಿಗಳಿಂದಾಗಿ ಹಳಿ ತಪ್ಪುತ್ತಿರುವ ವರದಿಗಳನ್ನು ನೋಡಿದಾಗ. ಕಡುಬಡವರಿಗೆ ವರದಾನವಾದ ಈ ಯೋಜನೆಯಡಿಯಲ್ಲಿ ಸಂಗ್ರಹವಾದ
ಅಕ್ಕಿಯನ್ನು ಸಂಬಂಧಪಟ್ಟ ಇಲಾಖೆಗಳ ಕೆಲ ಅಧಿಕಾರಿಗಳು ಮತ್ತು ನೌಕರರು ಹೆಚ್ಚಿನ ಬೆಲೆಗೆ ಮಾರಿಕೊಂಡ
ವಿಷಯ ಕೆಲತಿಂಗಳುಗಳ ಹಿಂದೆ ಬಯಲಾಗಿತ್ತು. ಈಗ ಗಿರಣಿ
ಮಾಲಿಕರನೇಕರು ಸಾವಿರಾರು ಟನ್ ಕಳಪೆ ಅಕ್ಕಿಯನ್ನು ಸರಕಾರಕ್ಕೆ ನೀಡಿ ಕೋಟ್ಯಾಂತರ ರೂಪಾಯಿ ಲಪಟಾಯಿಸಿರುವ
ಸುದ್ಧಿ ಬಂದಿದೆ. ಅವಶ್ಯವಿದ್ದವರಿಗೆ ಸಹಕಾರಿಯಾಗಲೆಂದು,
ಅವರಿಗೆ ಬದುಕು ಭಾರವಾಗದಿರಲೆಂದು ವ್ಯವಸ್ಥೆಗಳು ರೂಪಿಸುವ ಕಾರ್ಯಯೋಜನೆಗಳು ಹೀಗೆ ಕೆಲವರ ದುರಾಸೆ,
ವಂಚನಾಪ್ರವೃತ್ತಿಯ ಪರಿಣಾಮವಾಗಿ ಹಾಳಾಗುವುದು ಬಹುಷಃ ಎಲ್ಲ ಸಮಾಜಗಳಲ್ಲಿಯೂ ಎಲ್ಲ ಕಾಲಗಳಲ್ಲಿಯೂ ನಡೆಯುತ್ತಿರುವಂತಹದೇ. ಇದರ ಹಿಂದಿರುವುದು ಮನುಷ್ಯಸ್ವಭಾವದಲ್ಲಿನ ಮೂಲಭೂತ ದೋಷವಾದ
ಅಪ್ರಾಮಾಣಿಕತೆ ಮತ್ತದರ ಪರಿಣಾಮವಾದ ಅಲ್ಪ ದೈಹಿಕ ಹಾಗೂ ಆರ್ಥಿಕ ಹೂಡಿಕೆಯಿಂದ ಅಧಿಕ ಲಾಭ ಗಳಿಸಬಹುದೆಂಬ
ಲೆಕ್ಕಾಚಾರ, ಲಾಲಸೆ.
ತನಗಾಗಿ ಹೆಚ್ಚುಹೆಚ್ಚು ಹಣ ಗಳಿಸಬೇಕು, ಅದು ದುರ್ಮಾರ್ಗದಿಂದಾದರೂ ಸರಿ ಎನ್ನುವ ಮನುಷ್ಯಸ್ವಭಾವವನ್ನು
ತಿದ್ದಲು ಬಹುತೇಕ ಎಲ್ಲ ಧರ್ಮಗಳೂ ಪ್ರಯತ್ನಿಸಿವೆ, ಸೋತಿವೆ. ಮನುಷ್ಯನ ಧನಲಾಲಸೆಗೆ ಪ್ರಮುಖ ಪ್ರಚೋದಕ ಕುಟುಂಬ ಮತ್ತು
ತನ್ನ ಪ್ರೀತಿಪಾತ್ರರು ಅಂದರೆ ವ್ಯಕ್ತಿಯೊಬ್ಬ ಹಣ, ಐಶ್ವರ್ಯ, ಆಸ್ತಿಪಾಸ್ತಿ ಗಳಿಸಲು ತೊಡಗುವುದು
ಕುಟುಂಬದಲ್ಲಿನ ತನ್ನ ಪ್ರೀತಿಪಾತ್ರರನ್ನು ಸುಖವಾಗಿರಿಸಲು ಎನ್ನುವುದು ಬಹುತೇಕ ದೃಢಪಟ್ಟ ಸಂಗತಿ. ಪ್ರೀತಿಪಾತ್ರರೇ ಇಲ್ಲದಿದ್ದ ಮೇಲೆ, ತನ್ನ ಮೇಲೆ ಯಾರೂ ಅವಲಂಬಿತರಾಗಿಲ್ಲದ
ಸಂದರ್ಭದಲ್ಲಿ ಮನುಷ್ಯ ಯಾಕಾಗಿ ಯಾರಿಗಾಗಿ ಹಣ ಒಟ್ಟುಗೂಡಿಸುತ್ತಾನೆ? ತನ್ನದೇ ಸಂಸಾರ, ಹೆಂಡತಿ ಮಕ್ಕಳಿಲ್ಲದ ವ್ಯಕ್ತಿ ಯಾವುದೇ
ಆಸ್ತಿಪಾಸ್ತಿ ಗಳಿಸುವತ್ತ ಕೊನೆಪಕ್ಷ ತನ್ನದು ಎನುವಂತಹ ಸೂರೊಂದನ್ನಾದರೂ ಪಡೆದುಕೊಳ್ಳುವತ್ತ ಗಮನ
ನೀಡದೇ ಸರಳವಾಗಿ ಬದುಕುವುದಕ್ಕೆ ಅಗಣಿತ ಉದಾಹರಣೆಗಳಿವೆ.
ಇವುಗಳಲ್ಲಿ ನಮಗೆ ಅತ್ಯಂತ ಸಮೀಪದ ಉದಾಹರಣೆಯೆಂದರೆ ಪ್ರೊ. ಎಚ್. ನರಸಿಂಹಯ್ಯನವರು ಬದುಕಿದ
ಬಗೆ. ಅವರಿಗೆ ಅವರದೇ ಆದ ಸಂಸಾರವೊಂದಿದ್ದರೆ ತಮ್ಮ ಬದುಕುಪೂರ್ತಿ ನ್ಯಾಷನಲ್ ಕಾಲೇಜಿನ ಹಾಸ್ಟೆಲ್
ಕೋಣೆಯೊಂದರಲ್ಲಿ ಕಳೆಯುವುದು ಸಾಧ್ಯವಾಗುತ್ತಿರಲಿಲ್ಲ.
ಮನುಷ್ಯನ ಬದುಕಿನಲ್ಲಿ ಹಣದ ಸ್ಥಾನವನ್ನೇ ಕುಗ್ಗಿಸಿಬಿಟ್ಟರೆ, ಸ್ವಂತ ಸಂಸಾರವಾಗಲೀ, ಪ್ರೀತಿಪಾತ್ರರಾಗಲೀ
ಅವನಿಗಿಲ್ಲದಂತೆ ನೋಡಿಕೊಂಡರೆ ಅವನಲ್ಲಿ ಧನಲಾಲಸೆಯನ್ನು ಹತ್ತಿಕ್ಕಿ ಅವನು ವಂಚಕನಾಗದಂತೆ ತಡೆಯಬಹುದೆಂದು
ಕೆಲವೊಂದು ಚಿಂತಕರೂ ಯೋಜಿಸಿ ಅನುಷ್ಟಾನಕ್ಕೆ ತಂದದ್ದೂ ಉಂಟು. ಕ್ರಿ.ಪೂ. ಎಂಟನೆಯ ಶತಮಾನದಲ್ಲಿ ಬದುಕಿದ್ದನೆನ್ನಲಾದ ಲೈಕರ್ಗಸ್
ಎಂಬಾತ ಗ್ರೀಕ್ ನಗರರಾಜ್ಯ (City-State) ಸ್ಪಾರ್ಟಾದ ಸಂವಿಧಾನವನ್ನು ರೂಪಿಸಿದಾಗ ಜನರ ವೈಯುಕ್ತಿಕ
ಹಾಗೂ ಸಾಮಾಜಿಕ ಬದುಕಿನಲ್ಲಿ ಹಣ ಕನಿಷ್ಟ ಪಾತ್ರ ವಹಿಸುವ ವ್ಯವಸ್ಥೆ ಮಾಡಿದ. ಮದುವೆ, ಕುಟುಂಬವ್ಯವಸ್ಥೆಯನ್ನು ನಿಷೇಧಿಸಿದ ಸ್ಪಾರ್ಟಾದ
ಸಂವಿಧಾನ ಸಂತಾನಾಭಿವೃದ್ಧಿಗಾಗಿ, ಸಮಾಜದ ಮುಂದುವರಿಕೆಗಾಗಿ ನಿರ್ದಿಷ್ಟ ವಯಸ್ಸಿನ ಸ್ತ್ರೀಪುರುಷರು
ವರ್ಷದ ಒಂದು ನಿರ್ದಿಷ್ಟ ಕಾಲದಲ್ಲಿ ಒಟ್ಟುಗೂಡುವಂತಹ ವ್ಯವಸ್ಥೆಯನ್ನು ರೂಪಿಸಿತು. ಮಕ್ಕಳು ಹುಟ್ಟಿದ ತಕ್ಷಣ ಅವರನ್ನು ತಾಯಂದಿರಿಂದ ಬೇರ್ಪಡಿಸಲಾಗುತ್ತಿತ್ತು. ಅವರ ಪಾಲನೆ, ಪೋಷಣೆಯ ಜವಾಬ್ದಾರಿ ರಾಜ್ಯದ್ದಾಗಿತ್ತು. ಹೀಗಾಗಿ ಗಂಡ, ಹೆಂಡತಿ, ತಂದೆ, ತಾಯಿ, ಮಕ್ಕಳು ಎಂಬ ಮೋಹ
ಬೆಳೆಯಲು ಅವಕಾಶವೇ ಇರಲಿಲ್ಲ. ತತ್ವಜ್ಞಾನಿ ಪ್ಲೇಟೋ
ತನ್ನ ಆದರ್ಶ ರಾಜ್ಯದಲ್ಲಿಯೂ ಇದೇ ವ್ಯವಸ್ಥೆಯನ್ನು ಬಯಸಿದ್ದುದು ಅವನ ಪ್ರಸಿದ್ದ ಕೃತಿ “ರಿಪಬ್ಲಿಕ್”ನಲ್ಲಿ
ಸವಿವರವಾಗಿ ದಾಖಲಾಗಿದೆ. ಆದಾಗ್ಯೂ, ಹಣವಿಲ್ಲದೇ ಆರ್ಥಿಕ
ಚಟುವಟಿಕೆಗಳು ಜರುಗುವುದಿಲ್ಲ ಎನ್ನುವುದನ್ನು ಮನಗಂಡ ಆತ ಹಣಕಾಸು, ವ್ಯಾಪಾರವಹಿವಾಟಿನ ಜವಾಬ್ದಾರಿ
ವಿದೇಶಿಯರಾಗಿರಬೇಕೆಂದೂ, ಪ್ರಜೆಗಳು ಅದರಲ್ಲಿ ಭಾಗಿಯಾಗಕೂಡದೆಂದೂ ಹೇಳಿದ್ದ. ಪ್ಲೇಟೋನ ಈ ಕಲ್ಪನೆಯ ಅನುಷ್ಟಾನದಲ್ಲಿ ಎದುರಾಗಬಹುದಾದ ತೊಡಕುಗಳು
ನಮಗೆ ಢಾಳಾಗಿಯೇ ಕಂಡರೂ ವ್ಯಕ್ತಿಯ ಬದುಕಿನಲ್ಲಿ ಹಣದ ಸ್ಥಾನವನ್ನು ನಗಣ್ಯಗೊಳಿಸುವುದರ ಅಗತ್ಯದ ಬಗ್ಗೆ
ಆ ಮಹಾನ್ ದಾರ್ಶನಿಕ ಅದೆಷ್ಟು ತಲೆಕೆಡಿಸಿಕೊಂಡಿದ್ದ ಎನ್ನುವುದನ್ನು ನಿಮ್ಮ ಗಮನಕ್ಕೆ ತರಲು ಈ ವಿವರಗಳನ್ನು
ನೀಡುತ್ತಿದ್ದೇನೆ ಅಷ್ಟೇ.
ಒಟ್ಟಿನಲ್ಲಿ, ಲೈಕರ್ಗಸ್ ಸ್ಪಾರ್ಟಾಗೆ ನೀಡಿದ ಸಂವಿಧಾನ ಸಾರ್ವಕಾಲಿಕವಾಗಿ ಉಳಿಯಲಿಲ್ಲ, ಪ್ಲೇಟೋನ
ಆದರ್ಶ ರಾಜ್ಯ ಎಂದೂ ಅನುಷ್ಟಾನಕ್ಕೆ ಬರಲಿಲ್ಲ. ವ್ಯಕ್ತಿಯಲ್ಲಿ
ಧನಶೇಖರಣೆಯನ್ನು ತಪ್ಪಿಸಿ ಅವನು ಒಟ್ಟಾರೆ ಸಮಾಜಕ್ಕಾಗಿ ದುಡಿಯುವ ಆಶಯವನ್ನು ಪ್ರಮುಖವಾಗಿ ಹೊಂದಿದ್ದ
ಕಮ್ಯೂನಿಸಂ ಸಹಾ ಅನುಷ್ಠಾನದಲ್ಲಿ ವಿಫಲವಾಗಿದೆ. ಇದರರ್ಥ
ಈ ವಿಚಾರಧಾರೆಗಳೆಲ್ಲವೂ ಮನುಷ್ಯನ ಮೂಲಭೂತ ಸ್ವಭಾವವಾದ ಸ್ವಹಿತ ಮತ್ತು ಅದರ ಸಾಧನೆಗಾಗಿ ಇತರರನ್ನು
ಸಂಕಷ್ಟಕ್ಕೀಡುಮಾಡಲು ಹಿಂಜರಿಯದ ಮನೋಭಾವದ ವಿರುದ್ದ ಸೆಣಸಲಾಗದೇ ಸೋತುಹೋದವು. ಈ ಚಿಂತನೆಗಳ ಉದ್ದೇಶ ಅದೆಷ್ಟೇ ಉದಾತ್ತವಾಗಿದ್ದರೂ ಹಣದ
ಮೇಲಿನ ಮನುಷ್ಯನ ಪ್ರೀತಿಯನ್ನು ಅರ್ಥಮಾಡಿಕೊಳ್ಳುವುದರಲ್ಲಿ ಅವು ವಿಫಲವಾದವು. “ವ್ಯಕ್ತಿಯೊಬ್ಬ ತನ್ನ ತಂದೆಯ ಕೊಲೆಗಾರನನ್ನಾದರೂ ಕ್ಷಮಿಸುತ್ತಾನೆ,
ಆದರೆ ತನ್ನ ಅಸ್ತಿಯನ್ನು ಲಪಟಾಯಿಸಿದವನನ್ನು ಮಾತ್ರ ಕ್ಷಮಿಸಲಾರ” ಎಂದು ಹೇಳುವುದರ ಮೂಲಕ ಮೆಕಿಯಾವೆಲ್ಲಿ
ಮನುಷ್ಯಸ್ವಭಾವದಲ್ಲಿನ ಬಲಹೀನತೆಯನ್ನು ಐದು ಶತಮಾನಗಳ ಹಿಂದೆಯೇ ತೆರೆದಿಟ್ಟಿದ್ದಾನೆ.
ಇತರರನ್ನು, ಸಮಾಜವನ್ನು ವಂಚಿಸಿ ಹಣ ಗಳಿಸುವುದರಿಂದ ಸಿಗುವುದಾದರೂ ಏನು? ಬಯಸಿದ್ದೆಲ್ಲವನ್ನೂ ಕೈಯಳೆಯೊಳಗಿರಿಸಿಕೊಂಡು ‘ಆರಾಮ’ವಾಗಿ
ಬದುಕಬಹುದೆಂಬ ನಿರೀಕ್ಷೆ. ಆದರೆ ಇದು ನಿಜವೇ? ದುರ್ಮಾರ್ಗಗಳಿಂದ ಹಣ ಗಳಿಸಿದವರ ಬದುಕು ಆರಾಮವಾಗಿರುವುದಿಲ್ಲ
ಎನ್ನುವುದಕ್ಕೆ ನಿತ್ಯಜೀವನದಲ್ಲಿ ಅಗಣಿತ ಉದಾಹರಣೆಗಳು ದೊರೆಯುತ್ತವೆ. ಶೇರುವಂಚಕ ಹರ್ಷದ್ ಮೆಹ್ತಾ ಜೈಲಿನಲ್ಲಿ ಹೃದಯಾಘಾತದಿಂದ ಮೃತನಾದ. ದಾವೂದ್ ಇಬ್ರಾಹಿಂನ ಬದುಕು ನಿತ್ಯವೂ ಅನಿಶ್ಚಿತತೆಯಲ್ಲಿ
ಹೊಯ್ದಾಡುತ್ತಿದೆ, ಮೇವು ಹಗರಣದ ಲಾಲೂ ಯಾದವ್ ಜೈಲಿಗೆ ಹೋಗಿ ಬಂದಿದ್ದಾರೆ... ಉದಾಹರಣೆಗಳ ಪಟ್ಟಿಗೆ ಕೊನೆಯೇ ಇಲ್ಲ. ಆ ಪಟ್ಟಿಯಲ್ಲಿ ಹಲವು ಹೆಸರುಗಳು ನಮಗೆ ತುಂಬಾ ಹತ್ತಿರದಲ್ಲೇ
ಇವೆ. ಸುತ್ತಮುತ್ತ ಕಾಣಸಿಗುವ ಪ್ರಸಿದ್ದರಲ್ಲದ ಲೆಕ್ಕವಿಲ್ಲದಷ್ಟು
ವಂಚಕರು, ದುರ್ಮಾರ್ಗಿಗಳು ನಿತ್ಯಜೀವನದಲ್ಲಿ ಭಯ, ಆತಂಕ, ಮಾನಸಿಕ ಒತ್ತಡಗಳಿಂದ ಜರ್ಝರಿತರಾಗಿರುತ್ತಾರೆ,
ದೈಹಿಕ ಹಾಗೂ ಮಾನಸಿಕ ರೋಗಗಳಿಂದ ಕ್ಷಣಕ್ಷಣವೂ ನರಳುತ್ತಿರುತ್ತಾರೆ. ಸಂಪಾದಿಸಿದ ಆಸ್ತಿ ಹಣ ಅವರಿಗೆ ಸುಖಕರ ಜೀವನವನ್ನು ನೀಡಿಲ್ಲ. ಇಷ್ಟಾಗಿಯೂ ಮನುಷ್ಯನಲ್ಲಿ ವಂಚನೆ, ಮೋಸ ನಿಂತಿಲ್ಲ. ಧರ್ಮವಾಗಲೀ, ನೀತಿನಿಯಮಗಳಾಗಲೀ, ಕಾನೂನಾಗಲೀ ಮನುಷ್ಯನನ್ನು
ಸದ್ಗುಣಿಯಾಗಿಸಿಲ್ಲ.
ಹಾಗಿದ್ದರೆ ಬೇರಾವ ಮಾರ್ಗವೂ ಇಲ್ಲವೇ? ಇಲ್ಲ
ಎನ್ನಲು ಮನಸ್ಸು ಒಪ್ಪುತ್ತಿಲ್ಲ. ಇದೆ ಎಂದು ಹೇಳಲು
ಅಳುಕಾಗುತ್ತದೆ. ಆದರೂ ಹೇಳುತ್ತೇನೆ. ಧರ್ಮಗಳು, ಕಾನೂನು ಸೋತ ಎಡೆಯಲ್ಲಿ ಈ ಮಾರ್ಗ ಯಶಸ್ವಿಯಾಗುತ್ತದೆಂಬ
ನಂಬಿಕೆ ನನಗಿಲ್ಲ. ಆದರೂ ನನ್ನ ಅರಿವಿಗೆ ಬಂದ ಕೆಲವಿಚಾರಗಳನ್ನು
ನನ್ನ ಓದುಗರ ಮುಂಡಿಡಬಯಸುತ್ತೇನೆ. ಧರ್ಮದ ಸೋಂಕಿಲ್ಲದ,
ಸಿದ್ಧಾಂತದ ಬಣ್ಣಗಳಿಲ್ಲದ ಈ ವಿಚಾರಗಳು ಈಚಿನ ದಶಕಗಳಲ್ಲಿ ವಿಜ್ಞಾನದ ಮೂಸೆಯಿಂದ ಪುಟಕ್ಕಿಟ್ಟ ಚಿನ್ನವಾಗಿ
ಹೊರಬರುತ್ತಿವೆ.
ನಮಗೆ ಇರುವುದು ಇದೊಂದೇ ಬದುಕೇ? ನಮ್ಮ ಬದುಕು
ನಮ್ಮ ಹುಟ್ಟಿನೊಂದಿಗೆ ಆರಂಭವಾಗಿ ಸಾವಿನೊಂದಿಗೆ ಕೊನೆಯಾಗಿಬಿಡುತ್ತದೆಯೇ?
ಇತ್ತೀಚಿನ ದಶಕಗಳಲ್ಲಿ ಈ ವಿಷಯಗಳ ಬಗ್ಗೆ
ಆಳ ಸಂಶೋಧನೆ ನಡೆಸಿರುವ ರೋಜರ್ ಊಲ್ಜರ್, ಬ್ರಿಯಾನ್ ವೇಸ್ ಮುಂತಾದ ಹಲವಾರು ಮನೋವಿಶ್ಲೇಷಕರು ಮತ್ತು ಮನೋವೈದ್ಯರು
ಕರ್ಮಕ್ಕನುಗುಣವಾಗಿ ಮರುಜನ್ಮದ ಬಗ್ಗೆ ನಿರಾಕರಿಸಲಾಗದಷ್ಟು ವಿವರಗಳನ್ನು ಕಲೆಹಾಕಿದ್ದಾರೆ. ಸಾವಿರಾರು ಪುಟಗಳ ಆ ವಿವರಗಳನ್ನು ಹೀಗೆ ಕ್ರೋಢೀಕರಿಸಬಹುದು:
·
ಸತ್ತ ನಂತರ ಇಡೀ ಬದುಕನ್ನು ಅವಲೋಕಿಸಲು ನಮ್ಮ ಆತ್ಮಕ್ಕೆ ಸಮಯ, ಅವಕಾಶ,
ಅನುಕೂಲ, ಪ್ರಚೋದನೆ ಮತ್ತು ಸಹಕಾರ ದೊರೆಯುತ್ತದೆ.
·
ನಮ್ಮಿಂದ ಹಾನಿಗೊಳಗಾದ ಪ್ರತಿಯೊಂದು ಆತ್ಮದ ಜತೆಗೂ ನಮ್ಮ ಆತ್ಮ ಸಂವಾದಿಸುತ್ತದೆ. ನಮ್ಮ ಸುಳ್ಳಿನಿಂದ, ವಂಚನೆಯಿಂದ, ಕುಟಿಲತನದಿಂದ, ಕುಕೃತ್ಯದಿಂದ,
ಎಲ್ಲ ಬಗೆಯ ಹಿಂಸೆ ಹಾಗೂ ಕ್ರೌರ್ಯದಿಂದ ಮತ್ತೊಂದು ಆತ್ಮ ಭೌತಿಕ ಶರೀರದಲ್ಲಿ ಅನುಭವಿಸಿದ ನೋವನ್ನು
ಅಷ್ಟೇ ಗಾಢವಾಗಿ, ಆಳವಾಗಿ ನಮ್ಮ ಆತ್ಮವೂ ಅನುಭವಿಸುತ್ತದೆ. ಭೌತಿಕ ಜಗತ್ತಿಗೆ ಹಿಂತಿರುಗಿ ತಪ್ಪನ್ನು ಸರಿಪಡಿಸಿಕೊಳ್ಳಲು
ಆತ್ಮಗಳ ನಡುವೆ ಒಪ್ಪಂದವೇರ್ಪಡುತ್ತದೆ.
·
ನಂತರ ವಾಗ್ದಾನ ಪೂರೈಕೆಗಾಗಿ ನಮ್ಮ ಆತ್ಮಗಳು ಮರುಜನ್ಮವೆತ್ತಿ ಈ ಭೂಮಿಗೆ
ಭೌತಿಕ ಶರೀರದೊಂದಿಗೆ ಹಿಂತಿರುಗುತ್ತದೆ. ಆಗ ದುರದೃಷವಶಾತ್
ನಾವು ಮಾಡಿಕೊಂಡ ಒಪ್ಪಂದಗಳು ನಮ್ಮ ಜಾಗೃತ ಮನಸ್ಸಿನಿಂದ ಮರೆಯಾಗಿರುತ್ತವೆ (ಆದರೆ ಸುಪ್ತ ಮನಸ್ಸಿನಲ್ಲಿ
ಸ್ಪಷ್ಟವಾಗಿ ದಾಖಲಾಗಿರುತ್ತವೆ)
·
ನಾವು ಆತ್ಮರೂಪದಲ್ಲಿ ಒಪ್ಪಂದ ಮಾಡಿಕೊಂಡ ಅತ್ಮಗಳೂ ಸಹಾ ಭೌತಿಕ ಶರೀರದೊಂದಿಗೆ
ಈ ಭೂಮಿಗೆ ಹಿಂತಿರುಗುತ್ತವೆ ಮತ್ತು ಇಲ್ಲಿ ನಮ್ಮ ಬದುಕಿನ ಒಂದಲ್ಲ ಒಂದು ಹಂತದಲ್ಲಿ ಆ ವ್ಯಕ್ತಿಗಳು
ನಮಗೆ ಯಾವುದಾದರೂ ಸಂಬಂಧದ ರೂಪದಲ್ಲಿ ಎದುರಾಗುತ್ತಾರೆ.
ಈ ಸಂಬಂಧಗಳು ಧೀರ್ಘ ಕಾಲದವರೆಗೆ ಸಾಗುವ ಅತ್ಯಂತ ಹತ್ತಿರದ ಅಥವಾ ಕಡಿಮೆ ಸಮಯದ ಕೇಲವ ಪರಿಚಯದ-
ಹೀಗೆ ಯಾವುದಾದರೂ ಆಗಿರಬಹುದು.
·
ಹೀಗೆ ಭೇಟಿಯಾದಾಗ ನಮ್ಮೆದುರು ಎರಡು ದಾರಿಗಳು ತೆರೆದುಕೊಳ್ಳುತ್ತವೆ. 1. ಒಪ್ಪಂದದ ಹಾದಿ: ಇದು ನಾವು ಆತ್ಮರೂಪದಲ್ಲಿ ಮಾಡಿಕೊಂಡಿರುವ
ಒಪ್ಪಂದದ ಅನುಷ್ಟಾನದ ದಾರಿ ಅಂದರೆ ಸದ್ಗುಣಿಯಾಗಿ ನಡೆದುಕೊಂಡು ಒಪ್ಪಂದವನ್ನು ಪೂರೈಸುವುದು ಮತ್ತು
ಯಾವ ಹೊಸ ಹಾನಿಯನ್ನೂ ಎಸಗದಿರುವುದು, 2. ಸ್ವತಂತ್ರ ಆಯ್ಕೆ: ಆ ಗಳಿಗೆಯಲ್ಲಿ ನಮಗೆ ಬೇಕೆನಿಸುವ ಐಹಿಕ
ಸುಖಭೋಗಗಳಿಗೆ ಗಮನವಿತ್ತು ಒಪ್ಪಂದವನ್ನು ಮರೆಯುವುದು ಮತ್ತು ಆ ಮೂಲಕ ಹೊಸ ಹಾನಿಯನ್ನೆಸಗುವುದು.
·
ಒಪ್ಪಂದಕ್ಕೆ ಅನುಗುಣವಾಗಿ ನಡೆದುಕೊಂಡರೆ ಲೆಕ್ಕ ಚುಕ್ತಾ ಆದಂತೆ. ಪರಿಣಾಮವಾಗಿ ಆತ್ಮಗಳ ನಡುವೆ ಶಾಶ್ವತ ಪ್ರೀತಿ ಹಾಗೂ ಮೈತ್ರಿ
ಏರ್ಪಡುತ್ತದೆ. ವಿಮುಖವಾಗಿ ನಡೆದುಕೊಂಡರೆ ಮುಂದಿನ
ಪರಿಣಾಮ- ಮತ್ತೊಮ್ಮೆ ಆತ್ಮಗಳ ನಡುವೆ ಒಪ್ಪಂದ, ಭೌತಿಕ ಶರೀರದೊಡನೆ ಭೂಮಿಗೆ ಪುನರಾಗಮನ... ಜನ್ಮಜನ್ಮಗಳ ಸರಪಳಿ...
ಇದೆಲ್ಲವೂ ಹೇಳುವುದೇನೆಂದರೆ ನಾವು ಮಾಡುವ
ಯಾವುದೇ ಕುಕೃತ್ಯದಿಂದ ನಾವು ಎಂದಿಗೂ ತಪ್ಪಿಸಿಕೊಳ್ಳಲಾಗುವುದಿಲ್ಲ. ನಾವು ಹೇಳುವ ಒಂದೊಂದು ಸುಳ್ಳೂ, ಮಾಡುವ ಒಂದೊಂದು ಮೋಸವೂ,
ಎಸಗುವ ಒಂದೊಂದು ಕ್ರೌರ್ಯವೂ ನಮ್ಮನ್ನು ಆಗೊಮ್ಮೆ ಈಗೊಮ್ಮೆ ಸ್ವರ್ಗದ ಭ್ರಮೆ ಹುಟ್ಟಿಸುವ ಈ ಬದುಕೆಂಬ
ನರಕಕ್ಕೆ ಮತ್ತೆಮತ್ತೆ ಎಳೆದು ತರುತ್ತಿರುತ್ತದೆ.
ಹೇಳಿ, ನಮಗಿದು ಬೇಕೇ?
No comments:
Post a Comment