ಕೇವಲ ಒಂದು ವರ್ಷದ ಹಿಂದೆ ಕೇಂದ್ರದಲ್ಲಿ ಅಧಿಕಾರವನ್ನು ಕನಸಿನಲ್ಲಾದರೂ ಕಾಣಲು ಅಸಮರ್ಥವಾಗಿದ್ದ ಬಿಜೆಪಿ ಅತ್ಯಂತ ಕಡಿಮೆ ಅವಧಿಯಲ್ಲಿ ತನ್ನ ಅದೃಷ್ಟರೇಖೆಯನ್ನು ಬದಲಾಯಿಸಿಕೊಂಡು ಚುನಾವಣೆಗಳಲ್ಲಿ ಅಭೂತಪೂರ್ವ ವಿಜಯ ಸಾಧಿಸಿದೆ. 1984ರ ನಂತರ ಮೊಟ್ಟಮೊದಲ ಬಾರಿಗೆ ಪೂರ್ಣ ಬಹುಮತ ಪಡೆಯುವ ಪಕ್ಷವಾಗಿ ಹೊರಹೊಮ್ಮಿ ಇತಿಹಾಸ ನಿರ್ಮಿಸಿದೆ. ಗುಜರಾತ್, ರಾಜಾಸ್ಥಾನ, ದೆಹಲಿ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಎಲ್ಲ ಸ್ಥಾನಗಳನ್ನೂ ಬಾಚಿಕೊಳ್ಳುವುದರ ಜತೆಗೆ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕಗಳ ಸ್ಥಾನಗಳಲ್ಲಿ ಸಿಂಹಪಾಲು ಗಳಿಸಿದೆ. ಅಸ್ಸಾಂ ಹಾಗೂ ಜಮ್ಮು ಮತ್ತು ಕಾಶ್ಮೀರಗಳಲ್ಲೂ ಅದರ ಸಾಧನೆ ಗಮನಾರ್ಹ. ಈ ಅಸಾಮಾನ್ಯ ಬೆಳವಣಿಗೆ ಬಯಲು ಮಾಡಿರುವ ರಾಜಕೀಯ ಸತ್ಯಗಳು ಹಲವಾರಿವೆ. ಅವುಗಳಲ್ಲಿ ಮುಖ್ಯವಾದ, ವಿಶ್ಲೇಷಕರ ಗಮನದಿಂದ ತಪ್ಪಿಸಿಕೊಂಡಿರುವ ಸತ್ಯವೊಂದರ ಪರಿಚಯ ಹಾಗೂ ವಿಶ್ಲೇಷಣೆ ಈ ಲೇಖನದ ವಸ್ತು ವಿಷಯ.
ಹಲವಾರು ವಿಶ್ಲೇಷಕರು ಗುರುತಿಸಿರುವಂತೆ ಈ ಬಾರಿಯ ಚುನಾವಣೆಗಳಲ್ಲಿ ಜಾತಿಯಾಧಾರಿತ
ಮತಚಲಾವಣೆ ಹಾಗೂ ಐಡೆಂಟಿಟಿ ಪಾಲಿಟಿಕ್ಸ್‌ಗಳಂತಹ ಖುಣಾತ್ಮಕ ರಾಜಕೀಯ ನಡೆಗಳು ಹಿಂದೆ ಸರಿದಿವೆ ಹಾಗೂ
ಅವುಗಳನ್ನೇ ತಮ್ಮ ಬಂಡವಾಳವಾಗಿಸಿಕೊಂಡಿದ್ದ ರಾಜಕೀಯ
ಪಕ್ಷಗಳು ಮತದಾರರಿಂದ ತಿರಸ್ಕೃತಗೊಂಡಿವೆ. ಬಿಜೆಪಿಯನ್ನು
ಕೋಮುವಾದಿ ಎಂದು ಹೀಗಳೆಯುತ್ತಿದ್ದ ಪಕ್ಷಗಳೆಲ್ಲಾ ಸಮಾಜವನ್ನು ಜಾತಿಗಳ ಆಧಾರದ ಮೇಲೆ ವಿಭಜಿಸಿ ಆ ಮೂಲಕ
ಮತಬ್ಯಾಂಕ್‍ಗಳನ್ನು ಸೃಷ್ಟಿಸಿಕೊಂಡಿದ್ದದ್ದು ಇದುವರೆಗಿನ ರಾಜಕೀಯ ವಾಸ್ತವ. ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ, ರಾಷ್ಟ್ರೀಯ ಜನತಾ
ದಲ ಮುಂತಾದ ಕೆಲ ಪಕ್ಷಗಳು ಕೇವಲ ಜಾತಿಯಾಧಾರಿತ, ಧರ್ಮಾಧಾರಿತ ಮತಗಳಿಂದಲೇ ಇದುವರೆಗೆ ಜೀವ ಹಿಡಿದುಕೊಂಡಿದ್ದದ್ದು. ಕಾಂಗ್ರೆಸ್ ಸಹಾ ಇದೇ ಅನಾಚಾರವನ್ನು ಹಲಬಾರಿ ಹಲವೆಡೆ ಮಾಡಿದೆ.
ಈ ಬಾರಿ ಮತಗಳನ್ನು ಜಾತಿಯ ಆಧಾರದ ಮೇಲೆ ವಿಘಟಿಸುವ
ತಂತ್ರಗಳು ವಿಫಲವಾಗಿವೆ. ಇದುವರೆಗೂ ಅಂಥ ಪ್ರಯತ್ನಗಳಲ್ಲಿ
ತೊಡಗಿದ್ದ ಪಕ್ಷಗಳು ಈಗ ಧೂಳೀಪಟವಾಗಿವೆ ಮತ್ತು ಈ ಪಕ್ಷಗಳೀಗ ಕುಸಿದುಬಿದ್ದಿರುವ ತಮ್ಮ ಏಕೈಕ ಅಧಾರಸ್ಥಂಭದ
ಮುಂದೆ ಕಣ್ಣುಕಣ್ಣುಬಿಡುತ್ತಾ ನಿಂತಿವೆ. ಇದು ಅತ್ಯಂತ
ಧನಾತ್ಮಕ ಬೆಳವಣಿಗೆ. ಇದರ ಪರಿಣಾಮವಾಗಿ ಮೋದಿ ನೇತೃತ್ವದ
ಬಿಜೆಪಿ ಮತ್ತು ಎನ್‍ಡಿಎಗಳಿಗೆ ಸಮಾಜದ ಎಲ್ಲ ವರ್ಗಗಳ, ಜಾತಿಗಳ ಹಾಗೂ ಧರ್ಮಗಳ ಮತದಾರರ ಮತಗಳು ಸಂದಿವೆ. ಹಿಂದೂ ಸಮಾಜದ ಉಚ್ಚವರ್ಗಗಳ ಪಕ್ಷ ಎಂಬ ಹಣೆಪಟ್ಟಿ ಬಿಜೆಪಿಯಿಂದ
ಈಗ ದೂರವಾಗಿದೆ. ರಾಷ್ಟ್ರ ರಾಜಕಾರಣದಲ್ಲಿ ಕಂಡುಬಂದಿರುವ
ಈ ಅತ್ಯಂತ ಧನಾತ್ಮತ ಹಾಗೂ ಸ್ವಾಗತಾರ್ಹ ಬೆಳವಣಿಗೆಗೆ ಬಹುಮುಖ್ಯ ಕಾರಣ ನರೇಂದ್ರ ಮೋದಿಯವರು ಚುನಾವಣಾ
ಪ್ರಚಾರವನ್ನು ನಿರ್ವಹಿಸಿದ ಬಗೆ. ಕಳೆದ ವರ್ಷದ ಸೆಪ್ಟೆಂಬರ್
13ರಂದು ಪಕ್ಷದ ಚುನಾವಣಾ ಪ್ರಚಾರದ ಜವಾಬ್ದಾರಿ ಹೊತ್ತಂದಿನಿಂದ ಅವರು ರೂಪಿಸಿದ ಕಾರ್ಯತಂತ್ರ, ಪ್ರಚಾರವೈಖರಿ
ಬೆರಗುಗೊಳಿಸುವಂಥದ್ದು. ಅವುಗಳ ಮೂಲಕ ಭಾರತ ಹಾಗೂ
ವಿಶ್ವ ತಮ್ಮ ಬಗ್ಗೆ ಹೊಂದಿದ್ದ ಅಭಿಪ್ರಾಯಗಳನ್ನವರು ತಿರುವುಮುರುವು ಮಾಡಿಬಿಟ್ಟಿದ್ದಾರೆ.
ಸಮಾಜದಿಂದ ಮೊದಲು ಒಳ್ಳೆಯ ನಾಯಕ, ನಾಡಿನ ಭಾಗ್ಯವಿಧಾತ ಎಂದೆಲ್ಲಾ ಕರೆಸಿಕೊಂಡು
ಜನಪ್ರಿಯರಾದವರು ನಂತರ ಸಮಾಜಕಂಟಕರಾಗಿ, ಶಾಂತಿಯ ಶತ್ರುಗಳಾಗಿ, ಮಾನವತೆಯ ವೈರಿಗಳಾಗಿ ಬದಲಾದದ್ದಕ್ಕೆ
ಅನೇಕ ಉದಾಹರಣೆಗಳಿವೆ. ಆದರೆ ಮೊದಲು ಸಾವಿನ ವ್ಯಾಪಾರಿ,
ಕೊಲೆಗಡುಕ, ನರಹಂತಕ ಎಂದೆಲ್ಲಾ ಕರೆಸಿಕೊಂಡ ನಾಯಕನೊಬ್ಬ ಜನರ ಪ್ರೀತಿ ಗಳಿಸಿ ಅವರ ಹೃದಯಗಳಲ್ಲಿ ಸ್ಥಾನ
ಪಡೆಯುವುದಕ್ಕೆ ಆಧುನಿಕ ಇತಿಹಾಸದ ಬಹುಶಃ ಮೊಟ್ಟಮೊದಲ ಉದಾಹರಣೆ ನರೇಂದ್ರ ಮೋದಿ. ಈ ಅಸಾಮಾನ್ಯ ಬೆಳವಣಿಗೆಗೆ ನಾಡಿನ ಬಗೆಗಿರುವ ಮೋದಿಯವರ ಪ್ರಾಮಾಣಿಕ
ಕಳಕಳಿಯ ಜತೆಗೇ ಅವರ ವಿರೋಧಿಗಳಲ್ಲಿದ್ದ ಉದ್ದೇಶಪೂರ್ವಕ ಅಪ್ರಾಮಾಣಿಕತೆ ಹಾಗೂ ಮಿಥ್ಯೆಗಳನ್ನು ಗುರುತಿಸಿದ
ಮತದಾರದ ಪ್ರಬುದ್ಧತೆಯೂ ಕಾರಣ.
2002ರ ಗುಜರಾತ್ ಕೋಮುಗಲಭೆಗಳ ಸಂಪೂರ್ಣ ಜವಾಬ್ದಾರಿಯನ್ನು ಮೋದಿಯವರ ತಲೆಗೆ
ಕಟ್ಟಿ ಅವರನ್ನು ಕೋಮುವಾದಿ ನರಹಂತಕ ಎಂದು ವಿಶ್ವಾದ್ಯಂತ ಬಿಂಬಿಸಿದ್ದು ಕಾಂಗ್ರೆಸ್ ರಾಜಕಾರಣಿಗಳು,
ಮಾಧ್ಯಮದ ಒಂದು ದೊಡ್ಡ ವರ್ಗ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಒಂದಷ್ಟು ಭಾರತೀಯ
ವಿಚಾರವಾದಿಗಳು. ವಾಸ್ತವ ಇವರು ಬಿಂಬಿಸಿದ್ದಕ್ಕಿಂತ
ಸಂಪೂರ್ಣ ವಿರುದ್ಧವಾಗಿತ್ತು.
ಫೆಬ್ರವರಿ 27, 2002ರ ಬೆಳಿಗ್ಗೆ ಘಟಿಸಿದ ಗೋಧ್ರಾ
ರೈಲು ದುರಂತಕ್ಕೆ ಕಾರಣರಾದವರು ಆ ಪ್ರದೇಶದ ಘಾಂಚಿ ಮುಸ್ಲಿಮರು. ಸಬರ್‍ಮತಿ ಎಕ್ಸ್‍ಪ್ರೆಸ್‍ಗೆ ಬೆಂಕಿ ಹಚ್ಚಲು ಈ ದುಶ್ಕರ್ಮಿಗಳು
ಹಿಂದಿನ ಸಂಜೆಯೇ 6oo ಲೀಟರ್ ಪೆಟ್ರೋಲ್‍ನೊಂದಿಗೆ ತಯಾರಾಗಿದ್ದರು ಎಂದು ಜಸ್ಟಿಸ್ ನಾನಾವತಿ ಆಯೋಗ
ಹೇಳಿದೆ. ಇವರಿಗೆ ಸ್ಥಳೀಯ ಕಾಂಗ್ರೆಸ್ ನಾಯಕರ ನೇರ
ಸಂಪರ್ಕ ಹಾಗೂ ಬೆಂಬಲವಿತ್ತು ಎಂದೂ, ಅವರಲ್ಲಿ ಕೆಲವರು ಘಟನಾನಂತರ ಪಾಕಿಸ್ತಾನಕ್ಕೆ ಓಡಿಹೋಗಿ ತಲೆಮರೆಸಿಕೊಂಡರು
ಎಂದೂ ಆಯೋಗ ಬಯಲು ಮಾಡಿದೆ. ಆದರೆ ಈ ರೈಲು ದುರಂತವನ್ನು
ಅಕಸ್ಮಿಕ ಎಂದು ಕಾಂಗ್ರೆಸ್, ಕಾಂಗ್ರೆಸ್ ಕೃಪಾಪೋಷಿತ ಎನ್‍ಜಿಓಗಳು ಹಾಗೂ ಬಹುಪಾಲು ಮಾಧ್ಯಮಗಳು ಪ್ರಚಾರ
ನಡೆಸಿದವು. ಅವರ ಈ ಕುಕೃತ್ಯ ಇಲ್ಲಿಗೆ ನಿಲ್ಲಲಿಲ್ಲ.
ಹಿಂದಿನಿಂದಲೂ ಗುಜರಾತ್, ಮುಖ್ಯವಾಗಿ ಗೋಧ್ರಾ
ಪ್ರದೇಶದ ಮತೀಯ ವಾತಾವರಣ ಸೂಕ್ಷ್ಮವಾಗಿತ್ತು. ನಾನಾವತಿ
ಆಯೋಗವೇ ಗುರುತಿಸಿರುವಂತೆ 1925ರಿಂದ 1992ರವರೆಗೆ ಅಲ್ಲಿ ಹದಿನೈದು ಮತೀಯ ಗಲಭೆಗಳಾಗಿವೆ. ಹೀಗಾಗಿ ಕಾಂಗ್ರೆಸ್ ಬೆಂಬಲಿತ ಮುಸ್ಲಿಮರಿಂದ ಸಬರ್‌ಮತಿ
ಎಕ್ಸ್‍ಪ್ರೆಸ್ ದುರಂತದಲ್ಲಿ ಐವತ್ತಕ್ಕೂ ಹೆಚ್ಚಿನ ಹಿಂದೂಗಳು ಮರಣವನ್ನಪ್ಪುತ್ತಿದ್ದಂತೇ ಸಹಜವಾಗಿಯೇ
ಆ ಪ್ರದೇಶದಲ್ಲಿ ಮತೀಯ ಗಲಭೆಗಳು ಭುಗಿಲೆದ್ದವು. ಅತ್ಯಲ್ಪ
ಅವಧಿಯಲ್ಲಿ ಕೋಮುಗಲಭೆ ಇಡೀ ರಾಜ್ಯಕ್ಕೆ ಹಬ್ಬಿತು.
ಈ ಗಲಭೆಗಳಲ್ಲಿ ಎರಡು ಧರ್ಮದವರೂ ತೊಡಗಿದ್ದರು ಹಾಗೂ ಮೃತರಾದವರಲ್ಲಿ ಮುಸ್ಲಿಮರಷ್ಟೇ ಅಲ್ಲ,
ಹಿಂದೂಗಳೂ ಸಾಕಷ್ಟಿದ್ದರು. ಆದರೆ ಮುಸ್ಲಿಮರು ಗಲಭೆಯಲ್ಲಿ
ತೊಡಗಿದ್ದನ್ನೂ, ಹಿಂದೂಗಳು ಮೃತರಾದದ್ದನ್ನೂ ರಾಷ್ಟ್ರೀಯ ಮಾಧ್ಯಮಗಳು ವರದಿಮಾಡಲಿಲ್ಲ. ಘಟನೆಗಳ ಒಂದು ಮುಖವನ್ನು ಮಾತ್ರ ವರದಿ ಮಾಡಿದವರಲ್ಲಿ ಮುಂಚೂಣಿಯಲ್ಲಿ
ಬರುವ ಹೆಸರುಗಳು ಆಗ ಎನ್‍ಡಿಟಿವಿಯಲ್ಲಿದ್ದ ರಾಜ್‍ದೀಪ್ ಸರ್ದೇಸಾಯಿ ಮತ್ತು ಈಗಲೂ ಅದರಲ್ಲಿರುವ ಬರ್ಕಾ
ದತ್ ಅವರುಗಳದ್ದು. ಅವರ ಈ ಸಮಾಜಘಾತುತ ಹಾಗೂ ಅನೀತಿಯುತ
ಕೃತ್ಯಗಳಿಗೆ ಸರಿಯಾದ ವಿವರಣೆಗಳನ್ನು ಅವರಿಂದ ಪಡೆಯುವ ಹಕ್ಕು ಸಮಾಜಕ್ಕಿದೆ.
ನಾನಾವತಿ ಆಯೋಗ ಬಯಲು ಮಾಡಿರುವ ಪ್ರಕಾರ ಕೋಮುಗಲಭೆಗಳನ್ನು
ಹರಡುವುದರಲ್ಲಿ ಕಾಂಗ್ರೆಸ್ ರಾಜಕಾರಣಿಗಳೂ ತೊಡಗಿದ್ದರು!
ಇದಾವುದನ್ನೂ ವರದಿ ಮಾಡದ ಮಾಧ್ಯಮಗಳು ದುರಂತದ ಎಲ್ಲ ಜವಾಬ್ದಾರಿಗಳನ್ನೂ ಮೋದಿಯವರ ತಲೆಗೆ
ಕಟ್ಟಿದವು. ಗಲಭೆಗಳನ್ನು ತಡೆಯಲು ಮೋದಿ ಸರಕಾರ ಕೈಗೊಂಡ
ತುರ್ತುಕ್ರಮಗಳ ಉಲ್ಲೇಖವನ್ನೇ ಅವು ಮಾಡಲಿಲ್ಲ. ಅಷ್ಟೇ
ಅಲ್ಲ, ಗಲಭೆಗಳು ಆರಂಭವಾದ ಕೆಲವೇ ಗಂಟೆಗಳಲ್ಲಿ ಭದ್ರತಾ ಸಿಬ್ಬಂದಿಗಳಿಗಾಗಿ ಕಾಂಗ್ರೆಸ್ ಆಡಳಿತವಿದ್ದ
ನೆರೆಯ ರಾಜಾಸ್ಥಾನ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ಸರಕಾರಗಳಿಗೆ ಗುಜರಾತ್ ಸರಕಾರ ಮಾಡಿಕೊಂಡ ಲಿಖಿತ
ಮನವಿ, ಅದಕ್ಕೆ ಬಂದ ನಕಾರಾತ್ಮಕ ಉತ್ತರಗಳೂ ಮಾಧ್ಯಮಗಳಲ್ಲಿ ವರದಿಯಾಗಲಿಲ್ಲ. ರಾಷ್ಟ್ರೀಯ ಸ್ತರದ ಮುದ್ರಣ ಮಾಧ್ಯಮಗಳ ಬೇಜವಾಬ್ದಾರಿ ನಡವಳಿಕೆಯ
ಪರಾಕಾಷ್ಟೆಯೆಂದರೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ತಂಡವೊಂದರ ವರದಿ. ಟೈಂಸ್ ಆಫ್ ಇಂಡಿಯಾದ ಮಾಜಿ ಸಂಪಾದಕ ಹಾಗೂ ಗೌರವಾನ್ವಿತ
ಪತ್ರಕರ್ತ ದಿಲೀಪ್ ಪಡಗಾಂವ್‍ಕರ್ ಹಾಗೂ ಆಕಾರ್ ಪಟೇಲ್ ನೇತೃತ್ವದ ಈ ತಂಡ ಯಾವ ಪರಿಶೀಲನೆಯನ್ನೂ ಮಾಡದೇ
ಎಲ್ಲ ತಪ್ಪುಗಳನ್ನೂ ಮೋದಿ ಸರಕಾರದ ಮೇಲೆ ಹಾಕಿತು.
ಇದಕ್ಕೊಂದು ಉದಾಹರಣೆ: ಅಹಮದಾಬಾದ್‍ನ ಮಜ಼ಾರ್ ಮತ್ತು ಮಸೀದಿಯೊಂದನ್ನು ಮೋದಿ ಸರಕಾರ ಧ್ವಂಸಗೊಳಿಸಿ
ಒಂದೇ ದಿನದಲ್ಲಿ ಅಲ್ಲಿ ಟಾರ್ ರಸ್ತೆಯನ್ನು ನಿರ್ಮಿಸಿತು ಎಂದು ಈ ತಂಡ ಆಪಾದಿಸಿತು. ನಿಜವಾಗಿ ನಡೆದಿದ್ದೇನೆಂದರೆ ಈ ವಿನಾಶವನ್ನು ಖುದ್ದಾಗಿ
ನಿಂತು ಮಾಡಿಸಿದ್ದು ಅಹಮದಾಬಾದ್‍ನ ಕಾಂಗ್ರೆಸ್ ಮೇಯರ್ ಹಿಮ್ಮತ್ ಸಿಂಗ್ ಪಟೇಲ್! ಮೋದಿ ಸರಕಾರಕ್ಕೂ ಈ ಘಟನೆಗೂ ಯಾವ ಸಂಬಂಧವೂ ಇರಲಿಲ್ಲ.
ಇಂತಹ ಉದ್ದೇಶಪೂರ್ವಕ ಸುಳ್ಳುಪ್ರಚಾರಗಳಿಂದಾಗಿ
ನರೇಂದ್ರ ಮೋದಿ ತಮ್ಮದಲ್ಲದ ತಪ್ಪಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟಹೆಸರು ಪಡೆದುಕೊಂಡರು. ದುರಂತವೆಂದರೆ ಕಾಂಗ್ರೆಸ್, ಕಾಂಗ್ರೆಸ್ ಕೃಪಾಪೋಷಿತ ಎನ್‍ಜಿಓಗಳು
ಮತ್ತು ಮಾಧ್ಯಮಗಳ ಹುನ್ನಾರಗಳನ್ನವರು ಮೌನವಾಗಿ ಸಹಿಸಿಕೊಂಡು ತಮ್ಮ ದಿನಕ್ಕಾಗಿ ತಾಳ್ಮೆಯಿಂದ ಕಾದರು. ಅಚ್ಚರಿಯೆಂದರೆ ಅವರಿಗೆ ವಿರೋಧಿಗಳು ಕಾಂಗ್ರೆಸ್‍ನಲ್ಲಿ
ಮಾತ್ರವೇ ಇರಲಿಲ್ಲ, ತಮ್ಮದೇ ಎನ್‍ಡಿಎನಲ್ಲೂ ಇದ್ದರು.
ಗೋಧ್ರಾ ರೈಲು ದುರಂತದ ತನಿಖೆ ಕೈಗೊಂಡ ನಾನಾವತಿ ಆಯೋಗಕ್ಕೆ ಅಸಹಕಾರ ತೋರಿದ್ದು ರೈಲ್ವೇ ಇಲಾಖೆ. ಆಗ ರೈಲ್ವೇ ಮಂತ್ರಿಯಾಗಿದ್ದದ್ದು ಜೆಡಿಯು ನಾಯಕ ನಿತೀಶ್
ಕುಮಾರ್!
ಅಚ್ಚರಿಯ ವಿಷಯವೆಂದರೆ ಮೋದಿಯವರಿಗೆ ತಮ್ಮ ಪರವಾದ
ವಾದವನ್ನು ಮಂಡಿಸಲು ಎನ್‍ಡಿಎ ಅವಕಾಶವನ್ನೇ ಕೊಡಲಿಲ್ಲ.
2001ರಲ್ಲಿ ಗುಜರಾತ್‍ನ ಮುಖ್ಯಮಂತ್ರಿಯಾಗುವುದಕ್ಕೆ ಮೊದಲು ಮೋದಿಯವರನ್ನು ಕೇಶುಭಾಯಿ ಪಟೇಲ್
ಆರು ವರ್ಷಗಳ ಕಾಲ ಗುಜರಾತ್‍ನಿಂದ ದೂರವಿಟ್ಟಿದ್ದರು.
ಮುಖ್ಯಮಂತ್ರಿಯಾದ ನಂತರ ಪಕ್ಷದ ತೆರೆಯ ಹಿಂದಿನ ಕೈಗಳು ಮೋದಿಯವರನ್ನು ರಾಷ್ಟ್ರೀಯ ರಾಜಕಾರಣದಿಂದ
ಉದ್ದೇಶಪೂರ್ವಕವಾಗಿ ದೂರವಿಟ್ಟವು. ಅದರ ಕಹಿಫಲವನ್ನು
ಬಿಜೆಪಿ ಮುಂದಿನ ಎರಡೂ ಚುನಾವಣೆಗಳಲ್ಲಿ ಅನುಭವಿಸಿತು.
ಗುಜರಾತ್ ಕೋಮುಗಲಭೆಗಳ ನಿಜವಾದ ಚಿತ್ರಣವನ್ನೂ,
ಕಾಂಗ್ರೆಸ್‍ನ ಹುನ್ನಾರಗಳನ್ನೂ ಆಧಾರಸಹಿತವಾಗಿ 2002ರ ಚುನಾವಣೆಗಳಲ್ಲೇ ಜನತೆಯ ಮುಂದಿಟ್ಟಿದ್ದರೆ
ವಾಜಪೇಯಿ ಸರಕಾರ ಆ ಚುನಾವಣೆಗಳನ್ನು ಸೋಲುತ್ತಲೇ ಇರಲಿಲ್ಲ. ಆದರೆ ಅನೂಹ್ಯ ಕಾರಣಗಳಿಂದಾಗಿ ಅದನ್ನು ಕೈಬಿಟ್ಟ ಎನ್‍ಡಿಎ
ನೆಚ್ಚಿಕೊಂಡದ್ದು “ಭಾರತ ಪ್ರಕಾಶಿಸುತ್ತಿದೆ” ಎಂಬ ಹುಸಿ ಘೋಷಣೆ. ಅದು ಸೋಲಿನಲ್ಲಿ ಕೊನೆಗಾಣುವುದು ನಿಶ್ಚಿತವೇ ಆಗಿತ್ತು. ಮುಂದಿನ ಐದು ವರ್ಷಗಳಲ್ಲೂ ಬಿಜೆಪಿ ಪಾಠ ಕಲಿಯಲೇ ಇಲ್ಲ. ಅಮೆರಿಕಾ ಜತೆ ಅಣು ಒಪ್ಪಂದ ಸೇರಿದಂತೆ ಹಿಂದೆ ತಾನೇ ಪ್ರತಿಪಾದಿಸಿದ್ದ
ಹಲವಾರು ವಿಷಯಗಳನ್ನು ಉನ್ಮಾದಕರವಾಗಿ ವಿರೋಧಿಸುವ ಮೂಲಕ, ಸಂಸತ್ ಕಲಾಪಗಳಿಗೆ ಮತ್ತೆಮತ್ತೆ ಅಡ್ಡಿ
ಒಡ್ಡುವುದರ ಮೂಲಕ ಬಿಜೆಪಿ ಜನರ ಪ್ರೀತಿವಿಶ್ವಾಸವನ್ನದು ಕಳೆದುಕೊಂಡಿತು. ಪರಿಣಾಮ 2009ರಲ್ಲಿ ಮತ್ತೊಮ್ಮೆ ಸೋಲು.
ಬಿಜೆಪಿಯ ನೀತಿನಿಲುವುಗಳಲ್ಲಿ ಕೊನೆಗೂ ಬದಲಾವಣೆ
ಕಂಡುಬಂದದ್ದು ಕಳೆದವರ್ಷದ ಆದಿಯಲ್ಲಿ. ಪಿಂಚಣಿ, ಮಹಿಳೆಯರ
ಮೇಲಿನ ದೌರ್ಜನ್ಯದ ತಡೆ ಸೇರಿದಂತೆ ಹಲವಾರು ಜನಪರ ಕಾಯಿದೆಗಳ ವಿಷಯದಲ್ಲಿ ಅದು ಆಡಳಿತಾರೂಢ ಕಾಂಗ್ರೆಸ್‍ಗೆ
ಸಹಕಾರಿಯಾಗಿ ನಿಂತಿತು. ಸಂಸತ್ತಿನಲ್ಲಿ ಮಂಡಿಸುವ
ಅವಕಾಶ ಅನತಿಕಾಲದಲ್ಲೇ ದೊರೆಯುತ್ತಿದ್ದರೂ ಎಲ್ಲ ಶ್ರೇಯಸ್ಸನ್ನೂ ತಾನೇ ಪಡೆದುಕೊಳ್ಳುವ ಉದ್ದೇಶದಿಂದ
ಆಹಾರ ಭದ್ರತೆಯ ಬಗ್ಗೆ ಸುಗ್ರೀವಾಜ್ಞೆಯನ್ನು ಹೊರಡಿಸುವ ಹುನ್ನಾರಕ್ಕೆ ಕಾಂಗ್ರೆಸ್ ಕೈಹಾಕಿದಾಗ ಬಿಜೆಪಿ
ವಿರೋಧಿಸಲೇ ಇಲ್ಲ. ಹೀಗೆ ‘ಸುಸಂಸ್ಕೃತ’ವಾಗುತ್ತಾ
ಸಾಗಿದ ಬಿಜೆಪಿ ತೆಗೆದುಕೊಂಡ ಅತ್ಯುತ್ತಮ ಹಾಗೂ ನಿರ್ಣಾಯಕ ಕ್ರಮ ಸೆಪ್ಟೆಂಬರ್ 13, 2013ರಂದು ಮೋದಿಯವರನ್ನು
ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದು.
ಮೋದಿಯವರ ಸತತ ಹನ್ನೊಂದು ವರ್ಷಗಳ ತಾಳ್ಮೆ ಕೊನೆಗೂ ಫಲ ನೀಡಿತ್ತು. ತಾಳಿದವನು ಬಾಳಿಯಾನು ಎಂಬ ಉಕ್ತಿ ನಿಜವಾಯಿತು. ಮೋದಿಯೆಂಬ ಮಾಂತ್ರಿಕ ಮತದಾರರನ್ನು ತಮ್ಮೆಡೆಗೆ ಸೆಳೆದುಕೊಂಡಾಯಿತು. ಈ ಪುರಾತನ ನಾಡಿನ ಚುಕ್ಕಾಣಿ ಮೋದಿಯವರ ಕೈಯಲ್ಲಿ. ಇದು ವಾಸ್ತವ.
ಮೋದಿಯವರ ಮುಂದಿನ ಹಾಗಿ ಹಗ್ಗದ ಮೇಲಿನ ನಡಿಗೆಯಂತೆ. ಇಡೀ ಪ್ರಪಂಚ ಅವರನ್ನು ನೋಡುತ್ತಿದೆ. ನಿಜವಾದ ಹಿತೈಷಿಗಳನ್ನು ಹತ್ತಿರವಿಟ್ಟುಕೊಂಡು ಜನಪರ ಕಾರ್ಯಗಳಲ್ಲಿ
ತೊಡಗಿಕೊಳ್ಳುವುದರ ಜತೆಗೇ ರಾಮ್‍ದೇವ್‍ರಂಥವರನ್ನು ಹರದಾರಿ ದೂರದಲ್ಲಿಡುವುದರಲ್ಲಿ ಅವರ ಹಾಗೂ ಸಮಾಜದ
ಹಿತ ಅಡಗಿದೆ.
Nice writing, as usual.
ReplyDeleteWhat is even more remarkable than his spectacular victory is the way he has been conducting himself after becoming the PM. Total focus on delivering results as promised, no witch-hunts because that would dilute his focus, etc., etc. As the joke goes, the one thing in common between him and his predecessor Manmohan Singh is working for 18 hours a day. If so, then why was the latter so miserably ineffective? Age...?