ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Wednesday, October 29, 2014

ವಾಜಪೇಯಿಯವರ “ದುರ್ಗಾ” ಮರೆಯಾಗಿ ಮೂವತ್ತು ವರ್ಷಗಳು
          ಮಾಜಿ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಮರೆಯಾಗಿ ನಾಡಿದ್ದಿಗೆ ಮೂರು ದಶಕಗಳಾಗುತ್ತಿವೆ.  ಸ್ವತಂತ್ರ ಭಾರತದ ಅತ್ಯಂತ ವಿವಾದಾಸ್ಪದ ರಾಜಕಾರಣಿಯಾಗಿ ಬಿಂಬಿತವಾಗಿರುವ ಇಂದಿರಾ ಅಂತರಿಕ ಹಾಗೂ ವಿದೇಶ ವ್ಯವಹಾರಗಳಲ್ಲಿ ಅನುಸರಿಸಿದ ಹಲವಾರು ನೀತಿಗಳು ತೀವ್ರ ವಾದವಿವಾದಕ್ಕೊಳಗಾಗಿವೆ.  ಅದರೆ ಈ ವಾದವಿವಾದಗಳು ಹೆಚ್ಚಿನ ಸಂದರ್ಭಗಳಲ್ಲಿ ವಸ್ತುನಿಷ್ಟತೆ ಕಳೆದುಕೊಂಡು ಪೂರ್ವಾಗ್ರಹಪೀಡಿತವಾಗಿವೆ ಎಂದು ನನ್ನ ಅಭಿಮತ.  ಇದನ್ನು ಪುಟ್ಟ ಲೇಖನದ ಮಿತಿಯಲ್ಲಿ ಸಾಧ್ಯವಾದಷ್ಟು ಸ್ಪಷ್ಟವಾಗಿ ನಿಮ್ಮ ಮುಂದಿಡಲು ಪ್ರಯತ್ನಿಸುತ್ತೇನೆ.  ಮೊದಲಿಗೆ ವಿದೇಶವ್ಯವಹಾರದ ಬಗೆಗಿನ ಒಂದು ವಿಷಯವನ್ನು ಚರ್ಚೆಗೆತ್ತಿಕೊಳ್ಳೋಣ.  ಇದು ಇಂದಿರಾರ ವ್ಯಕ್ತಿತ್ವವನ್ನು ಪರಿಣಾಮಕಾರಿಯಾಗಿ ಬಿಂಬಿಸುತ್ತದೆ.
1971ರ ಬಾಂಗ್ಲಾದೇಶ ಯುದ್ಧದಲ್ಲಿ ಭಾರತದ ಹಿತಾಸಕ್ತಿಗಳಿಂದ ಪ್ರೇರಿತವಾದ ಅವರ ಸ್ವಭಾವದ ಮೂರು ಆಯಾಮಗಳನ್ನು ನಿಮ್ಮ ಗಮನಕ್ಕೆ ತರುತ್ತೇನೆ.  ಮೊದಲನೆಯದಾಗಿ, ಶತ್ರುರಾಷ್ಟ್ರವೊಂದರ ಸಂಕಷ್ಟವನ್ನು ತನ್ನ ದೇಶದ ಅನುಕೂಲಕ್ಕೆ ಬಳಸಿಕೊಳ್ಳಲು ಇಂದಿರಾ ಹಿಂಜರಿಯಲಿಲ್ಲ.  ಎರಡನೆಯದಾಗಿ ತನಗೆ ತಿಳಿಯದಿದ್ದ ವಿಷಯಗಳಲ್ಲಿ “ಬಲ್ಲವರ” ಅಭಿಪ್ರಾಯವನ್ನು ಮಾನ್ಯಮಾಡುವ ವಿವೇಕವನ್ನು ಅವರು ಪ್ರದರ್ಶಿಸಿದರು.  ಮೂರನೆಯದಾಗಿ, ವೈರಿಯ ತಂತ್ರಕ್ಕೆ ತಕ್ಕ ಪ್ರತಿತಂತ್ರವನ್ನು ತಕ್ಷಣವೇ ರೂಪಿಸುವ ಬುದ್ಧಿವಂತಿಕೆಯನ್ನವರು ಹೊಂದಿದ್ದರು.  ಈ ಬಗೆಯಾಗಿ ಇಂದಿರಾ ತೋರಿದ ಚಾಣಾಕ್ಷತೆ ಮತ್ತು ಕುಟಿಲನೀತಿಗಳು ಸ್ವತಃ ತನ್ನ ತಂದೆ ಜವಾಹರ್‌ಲಾಲ್ ನೆಹರೂರ ಸ್ವಭಾವಕ್ಕೆ ಸಂಪೂರ್ಣ ವಿರುದ್ಧವಾಗಿದ್ದವು.
ಪೂರ್ವ ಪಾಕಿಸ್ತಾನದಲ್ಲಿ ಸ್ವಾತಂತ್ರ್ಯದ ಕಹಳೆ ಮೊಳಗಿದಾಗ ಅದನ್ನು ಭಾರತಕ್ಕೆ ಅನುಕೂಲವಾಗುವಂತೆ ಉಪಯೋಗಿಸಿಕೊಳ್ಳಲು ಇಂದಿರಾ ಹಂಚಿಕೆ ಹಾಕಿ ಹಂತಹಂತವಾಗಿ ಕಾರ್ಯಯೋಜನೆ ರೂಪಿಸಿದರು.  ಪೂರ್ವ ಪಾಕಿಸ್ತಾನದಲ್ಲಿ ಪಾಕಿಸ್ತಾನೀ ಸೇನೆಯ ಶಕ್ತಿಯನ್ನು ಕುಂದಿಸುವುದು ಮೊದಲ ಹಂತ.  ಅದಕ್ಕಾಗಿ ಆಕೆ ಕೈಗೊಂಡ ಕ್ರಮ ವಿಶ್ವನಾಯಕರನ್ನು ಇಂದಿಗೂ ಬೆಚ್ಚಿಸುತ್ತಿದೆ.
            ತನ್ನ ವಾಯುಪ್ರದೇಶದ ಮೂಲಕ ಪಾಕಿಸ್ತಾನ ತನ್ನ ಎರಡೂ ಅಂಗಗಳ ನಡುವೆ ನೇರ ವಿಮಾನಯಾನ ಸಂಪರ್ಕ ಹೊಂದಲು ಭಾರತ ಅಂತರರಾಷ್ಟ್ರೀಯ ವಾಯುಯಾನ ನಿಯಮಗಳಿಗೆ ಅನುಗುಣವಾಗಿ ಅವಕಾಶ ನೀಡಿತ್ತು.  ಈ ಅವಕಾಶವನ್ನು ನಾಗರಿಕರ ಹಾಗೂ ನಾಗರಿಕ ವಸ್ತುಗಳ ಸಾಗಾಣಿಕೆಗಾಗಿ ಮಾತ್ರ ಪಾಕಿಸ್ತಾನ ಉಪಯೋಗಿಸಿಕೊಳ್ಳಬೇಕಾಗಿತ್ತು.  ಆದರೆ ಪೂರ್ವ ಪಾಕಿಸ್ತಾನದಲ್ಲಿ ಪರಿಸ್ಥಿತಿ ಹದಗೆಟ್ಟಾಗ ಯಾಹ್ಯಾ ಖಾನ್ ಸರಕಾರ ನಿಯಮಗಳನ್ನು ಉಲ್ಲಂಘಿಸಿ ಸೇನೆ ಮತ್ತು ಸೇನಾಸಾಮಗ್ರಿಗಳನ್ನೂ ರಹಸ್ಯವಾಗಿ ಭಾರತದ ವಾಯುಪ್ರದೇಶದ ಮೂಲಕ ಸಾಗಿಸತೊಡಗಿತು.  ಇದು ಭಾರತ ಸರಕಾರಕ್ಕೆ ತಿಳಿದರೂ ಸ್ಪಷ್ಟ ಆಧಾರಗಳಿಲ್ಲದೇ ಪಾಕಿಸ್ತಾನಕ್ಕೆ ನೀಡಿದ್ದ ಸೌಲಭ್ಯವನ್ನು ಹಿಂತೆಗೆದುಕೊಳ್ಳುವುದು ಸಾಧ್ಯವಿರಲಿಲ್ಲ.
ಅದು 30 ಜನವರಿ 1971.  ಶ್ರೀನಗರದಿಂದ ಜಮ್ಮುವಿಗೆ ಹೊರಟ ಇಂಡಿಯನ್ ಏರ್‌ಲೈನ್ಸ್ “ಗಂಗಾ” ವಿಮಾನವನ್ನು ಹಶೀಮ್ ಖುರೇಶಿ ಎಂಬ ಹದಿವಯಸ್ಸಿನ ಕಾಶ್ಮೀರೀ ವಿಭಜನವಾದಿಯೊಬ್ಬ ಅಪಹರಿಸಿ ಲಾಹೋರ್‌ಗೆ ಕೊಂಡೊಯ್ದ.  ಭಾರತದ ಜೈಲುಗಳಲ್ಲಿರುವ ತನ್ನ ಸಹಚರರನ್ನು ಬಿಡುಗಡೆಗೊಳಿಸದಿದ್ದರೆ ಪ್ರಯಾಣಿಕರನ್ನು ಕೊಲ್ಲುವುದಾಗಿಯೂ, ವಿಮಾನವನ್ನು ಸ್ಪೋಟಿಸುವುದಾಗಿಯೂ ಬೆದರಿಕೆಯಿತ್ತ.  ಭಾರತ ಸರಕಾರ ಮಣಿಯಲಿಲ್ಲ.  ಫೆಬ್ರವರಿ 1ರಂದು ಅಪಹರಣಕಾರ ಪ್ರಯಾಣಿಕರನ್ನು ಬಿಡುಗಡೆಗೊಳಿಸಿದ.  ಆದರೆ ವಿಮಾನವನ್ನು ನಾಶಪಡಿಸಿದ.  ಭಾರತಕ್ಕೆ ಇದು ಮುಖಭಂಗ.  ಉಭಯರಾಷ್ಟ್ರಗಳ ನಡುವೆ ವೃದ್ದಿಸುತ್ತಿದ್ದ ವೈಮನಸ್ಯದ ಆ ದಿನಗಳಲ್ಲಿ ಭಾರತಕ್ಕೆ ಹೀಗೆ ಅವಮಾನವಾದದ್ದು ಪಾಕಿಸ್ತಾನೀ ನಾಯಕರಿಗೆ ಸಂತೋಷ ತಂದಿತು.  ವಿದೇಶ ಮಂತ್ರಿ  ಜುಲ್ಫಿಕರ್ ಆಲಿ ಭುಟ್ಟೋ ಲಾಹೋರ್ ಏರ್‌ಪೋರ್ಟ್‌ಗೆ ಹೋಗಿ ಬಹಿರಂಗವಾಗಿಯೇ ಅಪಹರಣಕಾರನ ಬೆನ್ನುತಟ್ಟಿದರು.  ಅಪಹರಣಕಾರ ಪಾಕಿಸ್ತಾನದಲ್ಲಿ ಹೀರೋ ಅನಿಸಿಕೊಂಡ.
ಅಪಹರಣಕಾರನಿಗೆ ಪಾಕಿಸ್ತಾನ ನೀಡಿದ ಸಹಕಾರ/ಸೌಲಭ್ಯಗಳನ್ನು ಭಾರತ-ವಿರೋಧೀ ಕೃತ್ಯವೆಂದು ಬಣ್ಣಿಸಿದ ಭಾರತ ಸರಕಾರ ಆ ನೆಪವೊಡ್ಡಿ ತನ್ನ ವಾಯುಪ್ರದೇಶವನ್ನು ಉಪಯೋಗಿಸಿಕೊಳ್ಳಲು ಪಾಕಿಸ್ತಾನಕ್ಕೆ ನೀಡಿದ್ದ ಸೌಲಭ್ಯವನ್ನು ಹಿಂತೆಗೆದುಕೊಂಡಿತು.  ಪರಿಣಾಮವಾಗಿ ಪೂರ್ವ ಪಾಕಿಸ್ತಾನ ತಲುಪಲು ಪಾಕಿಸ್ತಾನೀ ಸೇನೆ ಇಡೀ ಭಾರತ ಪರ್ಯಾಯದ್ವೀಪವನ್ನು ಸುತ್ತಿ ಶ್ರೀಲಂಕಾ ಮೂಲಕ ಸಾಗುವ ದೀರ್ಘಕಾಲಿಕ, ದುಬಾರಿ ಮಾರ್ಗ ಹಿಡಿಯಬೇಕಾಯಿತು.
            ಆದರೆ ಇಡೀ ವಿಮಾನಾಪಹರಣ ಪ್ರಕರಣ ಭಾರತೀಯ ಗುಪ್ತಚರ ಇಲಾಖೆ RAW ರಹಸ್ಯವಾಗಿ ರೂಪಿಸಿದ ಷಡ್ಯಂತ್ರವಾಗಿತ್ತು ಮತ್ತು ಅಪಹರಣಕಾರ ಭಾರತದ ಏಜಂಟ್ ಎನ್ನುವುದು ವರ್ಷದೊಳಗೆ ಬಹಿರಂಗಗೊಂಡಿತು.  ಪಾಕಿಸ್ತಾನಕ್ಕೆ ನೀಡಿದ್ದ ವಾಯುಮಾರ್ಗದ ಉಪಯೋಗದ ಸೌಲಭ್ಯವನ್ನು ಹಿಂತೆಗೆದುಕೊಳ್ಳಲು ನೆಪವೊಂದರ ಸೃಷ್ಟಿಗೋಸ್ಕರ ಇಂದಿರಾ ಸರಕಾರ ಹೂಡಿದ ಹೂಟ ಇದಾಗಿತ್ತು ಹಾಗೂ ಭಾರತ ಹೆಣೆದು ಹರಡಿದ ಜಾಲದಲ್ಲಿ ಪಾಕಿಸ್ತಾನ ಸುಲಭವಾಗಿ ಸಿಕ್ಕಿಕೊಂಡಿತ್ತು.
ಮುಂದೆ ಜೂನ್‌ನಲ್ಲಿ ಪಾಕಿಸ್ತಾನದೊಡನೆ ಯುದ್ಧ ಹೂಡಿ ಪೂರ್ವ ಪಾಕಿಸ್ತಾನವನ್ನು ಬೇರ್ಪಡಿಸಲು ಇಂದಿರಾ ಗಾಂಧಿ ಹಂಚಿಕೆ ಹಾಕಿದರು.  ಆದರೆ ಸೇನಾ ದಂಡನಾಯಕ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಪ್ರಕಾರ ಬೇಸಗೆಯಲ್ಲಿ ಯುದ್ಧ ಹೂಡುವುದು ಸಾಮರಿಕ ದೃಷ್ಟಿಯಿಂದ ನಮಗೆ ಅನುಕೂಲಕರವಾಗಿರಲಿಲ್ಲ.  ಆ ಸಮಯದಲ್ಲಿ ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳು ಚೀನಾ (ಟಿಬೆಟ್) ಜತೆ ಹೊಂದಿರುವ ಹಿಮಾಲಯದ ಗಡಿಯಲ್ಲಿನ ಪರ್ವತ ಕಣಿವೆಗಳು ಹಿಮರಹಿತವಾಗಿರುವುದರಿಂದ ಪಾಕಿಸ್ತಾನದ ಪರವಾಗಿ ಚೀನಾ ತನ್ನ ಸೇನೆಯನ್ನು ಸುಲಭವಾಗಿ ಈಶಾನ್ಯ ಭಾರತದೊಳಗೆ ನುಗ್ಗಿಸುವ ಅಪಾಯವಿದೆ ಎಂದು ಮಾಣಿಕ್ ಶಾ ತರ್ಕಿಸಿದರು.  ಜತೆಗೇ ಸಧ್ಯದಲ್ಲೇ ಮಾನ್ಸೂನ್ ಆರಂಭವಾಗುವುದರಿಂದ ನೂರೊಂದು ನದೀಕವಲುಗಳಿಂದ ಗಿಡಿದಿರುವ ಪೂರ್ವ ಪಾಕಿಸ್ತಾನದಲ್ಲಿ ಸೇನೆ, ಮುಖ್ಯವಾಗಿ ಯುದ್ಧ ಟ್ಯಾಂಕ್‍ಗಳು, ಮುಂದುವರೆಯಲು ತೊಡಕಾಗುತ್ತದೆ ಎಂದೂ ಮಾಣಿಕ್ ಶಾ ವಾದಿಸಿದರು.   ಅವರ ವಾದವನ್ನು ಇಂದಿರಾ ತಾಳ್ಮೆಯಿಂದ ಆಲಿಸಿದ್ದಷ್ಟೇ ಅಲ್ಲ, ವಾದದಲ್ಲಿನ ವಾಸ್ತವವನ್ನು ಪುರಸ್ಕರಿಸಿ ಯುದ್ಧವನ್ನು ಚಳಿಗಾಲಕ್ಕೆ ಮುಂದೂಡಿದರು.
ಭಾರತ ರಹಸ್ಯವಾಗಿ ಯುದ್ಧದ ತಯಾರಿ ನಡೆಸುತ್ತಿದ್ದಾಗಲೇ ಜುಲೈನಲ್ಲಿ ಪಾಕಿಸ್ತಾನದ ಮಧ್ಯಸ್ತಿಕೆಯಲ್ಲಿ ಅಮೆರಿಕಾದ ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಹೆನ್ರಿ ಕಿಸಿಂಜರ್ ಚೀನಾಗೆ ರಹಸ್ಯವಾಗಿ ಭೇಟಿ ನೀಡಿ ಅಮೆರಿಕಾ-ಚೀನಾ ಸೌಹಾರ್ದಕ್ಕೆ ಚಾಲನೆ ನೀಡಿದರು.  ಈ ಬೆಳವಣಿಗೆಯಿಂದಾಗಿ ಭಾರತದ ವಿರುದ್ಧ “ವಾಷಿಂಗ್‌ಟನ್-ಬೀಜಿಂಗ್-ಇಸ್ಲಾಮಾಬಾದ್”ಗಳು ಸೇರಿದ ಒಂದು ದುಷ್ಟಕೂಟ ರೂಪುಗೊಂಡಿತು.  ಭಾರತವೇನಾದರೂ ಪಾಕಿಸ್ತಾನದ ಮೇಲೆ ಯುದ್ಧ ಸಾರಿದರೆ ಅಮೆರಿಕಾ ಮತ್ತು ಚೀನಾಗಳು ಪಾಕಿಸ್ತಾನದ ಪರ ನಿಲ್ಲುವ ಸಾಧ್ಯತೆ ಕಂಡುಬಂದಿತು.  ಈ ಅಪಾಯವನ್ನು ಮನಗಂಡ ಇಂದಿರಾ ಮರುತಿಂಗಳೇ ಸೋವಿಯೆತ್ ಯೂನಿಯನ್ ಜತೆ “ಸ್ನೇಹ ಮತ್ತು ಸೌಹಾರ್ದಗಳ ಒಪ್ಪಂದ” ಮಾಡಿಕೊಂಡರು.  ಈ ಒಪ್ಪಂದ ಮೆಲ್ನೋಟಕ್ಕೆ ಒಂದು ಸಾಮಾನ್ಯ ನಾಗರಿಕ ಒಪ್ಪಂದದಂತೆ ಕಂಡರೂ ವಾಸ್ತವವಾಗಿ ಸೇನಾ ಒಪ್ಪಂದವೊಂದಕ್ಕೆ ಸಮಾನವಾಗಿತ್ತು.  ಒಪ್ಪಂದದ ಹನ್ನೆರಡನೇ ಕಲಮಿನ ಪ್ರಕಾರ ಅಗತ್ಯ ಬಿದ್ದರೆ ಭಾರತಕ್ಕೆ ಸೇನಾ ಸಹಾಯ ನೀಡಲು ಸೋವಿಯೆತ್ ಯೂನಿಯನ್ ಬದ್ಧವಾಗಿತ್ತು.  ಪಾಕಿಸ್ತಾನದ ಜತೆಗಿನ ತನ್ನ ಯುದ್ಧದಲ್ಲಿ ಅಮೆರಿಕಾ ಮತ್ತು ಚೀನಾಗಳು ಪ್ರವೇಶಿಸದಂತೆ ತಡೆಯಲು ಇಂದಿರಾ ರೂಪಿಸಿದ ತಂತ್ರ ಇದಾಗಿತ್ತು.  ಇದೆಲ್ಲದರ ಪರಿಣಾಮವಾಗಿ ಭಾರತ 1971ರಲ್ಲಿ ಅಭೂತಪೂರ್ವ ಜಯ ಗಳಿಸಿತು.  ಸ್ವತಂತ್ರ ಭಾರತ ಗಳಿಸಿದ ಏಕೈಕ ನಿರ್ಣಾಯಕ ವಿಜಯವಾದ ಇದು ಸಾಧ್ಯವಾದದ್ದು ಇಂದಿರಾ ಗಾಂಧಿಯವರ ದಿಟ್ಟತನ ಹಾಗೂ ಚಾಣಾಕ್ಷತನದಿಂದ.  ಗುಣಗ್ರಾಹಿಯಾದ ಅಟಲ್ ಬಿಹಾರಿ ವಾಜಪೇಯಿಯವರು ಇಂದಿರಾರನ್ನು “ದುರ್ಗಾ” ಎಂದು ಬಣ್ಣಿಸಿದ್ದು ಈ ಕಾರಣದಿಂದಾಗಿಯೇ.
ಒಂದು ಆಂತರಿಕ ನೀತಿಯನ್ನು ಚರ್ಚೆಗೆತ್ತಿಕೊಳ್ಳುವುದಾದರೆ ಪಂಜಾಬ್‍ನಲ್ಲಿ ಉಗ್ರವಾದಿ ಜರ್ನೇಲ್ ಸಿಂಗ್ ಭಿಂದ್ರಾಂವಾಲೇಯನ್ನು ಎತ್ತಿಕಟ್ಟಿದ್ದೇ ಇಂದಿರಾ ಎಂದು ಹಲವರು ಕ್ಲೀಶೆಯಾಗುವ ಮಟ್ಟಿಗೆ ಹೇಳುತ್ತಾ ಬಂದಿದ್ದಾರೆ.  ಆದರೆ ಈ ಆಪಾದನೆ ವಸ್ತುನಿಷ್ಟ ತರ್ಕಕ್ಕೆ ವಿರುದ್ಧವಾದುದು ಎಂಬುದು ನನ್ನ ಅಭಿಪ್ರಾಯ.   ಪಂಜಾಬ್‍ನಲ್ಲಿ ಕಾಂಗ್ರೆಸ್‌ಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಬೆಳೆದು ನಿಂತಿದ್ದ ಅಕಾಲಿದಲ್‍ನ ಶಕ್ತಿಯನ್ನು ಕುಂದಿಸುವುದು ಕಾಂಗ್ರೆಸ್ ನಾಯಕಿಯಾಗಿ ಇಂದಿರಾರಿಗೆ ಅಗತ್ಯವಾಗಿತ್ತು.  ಅಕಾಲಿ ನಾಯಕತ್ವಕ್ಕೆ ತಲೆಬಾಗದೇ ಇದ್ದ ಭಿಂದ್ರಾಂವಾಲೇ ಎಂಬ ಯುವ ಅಕಾಲಿಯನ್ನು ಈ ವಿಷಯದಲ್ಲಿ ಉಪಯೋಗಿಸಿಕೊಳ್ಳಲು ಇಂದಿರಾ ಬಯಸಿದ್ದರಲ್ಲಿ ಅಸಹಜತೆಯೇನೂ ಇಲ್ಲ.  ಅಕಾಲಿಗಳ ವಿರುದ್ಧ ಭಿಂದ್ರಾಂವಾಲೇಯನ್ನು ಇಂದಿರಾ ಎತ್ತಿಕಟ್ಟುವಾಗ ಈತ ಮುಂದೊಮ್ಮೆ ರಾಷ್ಟ್ರ ವಿರೋಧಿಯಾಗಿ ಬೆಳೆದು ನಿಲ್ಲುತ್ತಾನೆಂದು ಯಾರೂ ಊಹಿಸಿರಲಿಲ್ಲ.  ಆ ಆತಂಕ ಸಹಜವಾಗಿಯೇ ಇಂದಿರಾರಿಗೂ ಇರಲಿಲ್ಲ.   ಎಲ್ಲರ ಊಹೆಗಳನ್ನೂ ಮೀರಿ ಆತ ಉಗ್ರ ರಾಷ್ಟ್ರವಿರೊಧಿಯಾದ.  ಪವಿತ್ರ ಸ್ಥಳವಾದ ಸ್ವರ್ಣಮಂದಿರ ಭಯೋತ್ಪಾದಕರ ಅಡಗುದಾಣವಾಗಿ ಬದಲಾಯಿತು.  ಯಾವಾಗ ಅವನು ರಾಷ್ಟ್ರವಿರೋಧಿ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿದನೋ ಆಗ ಅವನನ್ನು ನಿರ್ವೀರ್ಯಗೊಳಿಸುವ ಪ್ರಯತ್ನಗಳನ್ನು ಇಂದಿರಾ ಕೈಗೊಂಡರು.  ಅವರು ಬಯಸಿದ್ದು ಭಿಂದ್ರಾಂವಾಲೆ ಅಕಾಲಿಗಳ ವಿರುದ್ಧದ ಶಕ್ತಿಯಾಗಿ ಬೆಳೆಯಬೇಕೆಂದು, ರಾಷ್ಟ್ರವಿರೋಧಿ ಶಕ್ತಿಯಾಗಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.  ಭಯೋತ್ಪಾದಕರನ್ನು ಮಣಿಸುವ ಸೀಮಿತ ಕಾರ್ಯತಂತ್ರಗಳು ವಿಫಲವಾದಾಗ ಅವರನ್ನು ನೇರವಾಗಿ ಎದುರಿಸುವ ಯೋಜನೆಯನ್ನು ಇಂದಿರಾ ರೂಪಿಸಿದರು.  ಸ್ವರ್ಣಮಂದಿರದಲ್ಲಿನ ಭಯೋತ್ಪಾದಕರ ಅಡಗುದಾಣವನ್ನು ನಾಶಪಡಿಸದೇ ಖಲಿಸ್ತಾನೀ ಭಯೋತ್ಪಾದನೆಯನ್ನು ಅಡಗಿಸಲು ಸಾಧ್ಯವಿಲ್ಲ ಎಂದರಿತ ಭಾರತೀಯ ಸೇನೆ, ಜೂನ್ 3-4, 1984ರಂದು ಕಾರ್ಯಾಚರಣೆ ಕೈಗೊಂಡಿತು.  ಈ ಆಪರೇಶನ್ ಬ್ಲೂಸ್ಟಾರ್ ರಾಷ್ಟ್ರವಿರೋಧಿ ಶಕ್ತಿಗಳನ್ನು ಮಣಿಸುವುದರಲ್ಲಿ ಇಂದಿರಾ ಸರಕಾರದ ದೃಢಸಂಕಲ್ಪದ ದ್ಯೋತಕ.  ಸೇನೆ ಕಳುಹಿಸಿ ಇಂದಿರಾ ಮಂದಿರವನ್ನು ಅಪವಿತ್ರಗೊಳಿಸಿದರು ಎಂಬ ವಾದ ಹುರುಳಿಲ್ಲದ್ದು.  ಸ್ವರ್ಣಮಂದಿರದ ಪವಿತ್ರತೆ ಹಾಳಾಗಿದ್ದರೆ ಅದು ಮಂದಿರವನ್ನು ಯಾವಾಗ ಕೊಲೆಗಡುಕರು, ಭಯೋತ್ಪಾದಕರು ತಮ್ಮ ಅಡಗುದಾಣವನ್ನಾಗಿ ಪರಿವರ್ತಿಸಿದರೋ ಆವಾಗಲೇ ಆಯಿತು, ಸೇನೆ ಪ್ರವೇಶಿಸಿದಾಗಲ್ಲ.  ಈ ಕಾರ್ಯಾಚರಣೆಯ ಸಮಯದಲ್ಲಿ ಸೇನೆ ವರ್ತಿಸಿದ ರೀತಿಯನ್ನೂ ನಾವು ಗಮನಿಸಬೇಕು.  ಸೈನಿಕರು ಏಕಾಏಕಿ ಮಂದಿರದೊಳಗೆ ಪ್ರವೇಶಿಸಲಿಲ್ಲ.  ಶರಣಾಗತರಾಗಲು ಮಾಡಿದ ಹಲವಾರು ಮನವಿಗಳಿಗೆ ಭಯೋತ್ಪಾದಕರು ಸೊಪ್ಪು ಹಾಕದಿದ್ದಾಗ, ಸೈನಿಕರ ವಿರುದ್ಧ ಮಂದಿರದ ಒಳಗಿನಿಂದ ನಿರಂತರವಾಗಿ ಗುಂಡುಗಳನ್ನು ಹಾರಿಸತೊಡಗಿದಾಗ ಅಂತಿಮ ಮಾರ್ಗವಾಗಿ ಸೇನೆ ಮಂದಿರದೊಳಗೆ ಪ್ರವೇಶಿಸಿತು.  ಬೂಟುಗಳನ್ನು ಕಳಚಿಟ್ಟು, ಮಂದಿರದ ಹೊಸ್ತಿಲಿಗೆ ತಲೆಬಾಗಿ ವಂದಿಸಿ ಸೈನಿಕರು ಒಳಪ್ರವೇಶಿಸಿದರು.   ಹಾಗೆ ಮಾಡುವಾಗ ಸೈನಿಕರು ಭಯೋತ್ಪಾದಕರ ಗುಂಡುಗಳಿಗೆ ನೇರವಾಗಿ ನಿಲ್ಲುವಂತಹ ಪ್ರತಿಕೂಲ ಪರಿಸ್ಥಿತಿಗೊಳಗಾದರು.  ಇದರಿಂದಾಗಿ ಮುನ್ನೂರರಷ್ಟು ಸೈನಿಕರು ಜೀವತೆರುವಂತಾಯಿತು.  ಪ್ರಪಂಚದ ಯಾವ ಸೇನೆಯೂ ತನ್ನ ಕಾರ್ಯಾಚರಣೆಯನ್ನು ಈ ಪರಿಯಾಗಿ ಅರಂಭಿಸಿದ ಮತ್ತೊಂದು ಉದಾಹರಣೆ ಇಲ್ಲ.  ಪವಿತ್ರ ಸ್ಥಳವೊಂದನ್ನು ಭಯೋತ್ಪಾದಕ ಕೃತ್ಯಗಳಿಗೆ ಇಷ್ಟು ದೀರ್ಘಕಾಲ ಉಪಯೋಗಿಸಿಕೊಳ್ಳಲು ರಾಷ್ಟ್ರವೊಂದು ಅವಕಾಶ ನೀಡಿದ ಉದಾಹರಣೆ ಸಹಾ ಮತ್ತೊಂದಿಲ್ಲ.  1979ರ ನವೆಂಬರ್‌ನಲ್ಲಿ ಮೆಕ್ಕಾದ ಪವಿತ್ರ ಮಸೀದಿಯಲ್ಲಿ ನಡೆದ ಘಟನಾವಳಿಗಳನ್ನು ನೆನಪಿಸಿಕೊಳ್ಳಿ.  ಸೌದಿ ಅರೇಬಿಯಾ ಸರಕಾರ ಕೈಗೊಂಡ ಕ್ರಮಗಳನ್ನೇ ಇಂದಿರಾ ಸರಕಾರ ಕೈಗೊಂಡಿದ್ದರೆ ಖಲಿಸ್ತಾನೀ ಭಯೊತ್ಪಾದನೆ 1981ರಲ್ಲೇ ಅಂದರೆ ಮೊಳಕೆಯಲ್ಲೇ ಇತಿಶ್ರೀಯಾಗುತ್ತಿತ್ತು.
ಜತೆಗೇ ಇಡೀ ಪ್ರಕರಣದಲ್ಲಿ ಪಾಕಿಸ್ತಾನದ ಜಿಯಾ-ಉಲ್-ಹಖ್ ಪಾತ್ರದ ಬಗ್ಗೆ ನಮ್ಮಲ್ಲಿ ಹೆಚ್ಚು ಜನ ತಲೆಕೆಡಿಸಿಕೊಳ್ಳುತ್ತಿಲ್ಲ.  ಇಡೀ ಖಲಿಸ್ತಾನ್ ಚಳುವಳಿ ಪಾಕಿಸ್ತಾನ-ಪ್ರೇರಿತ.  ಸಿಖ್ಕರನ್ನು ಭಾರತದ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನವನ್ನು ಪಾಕಿಸ್ತಾನ ಅರವತ್ತರ ದಶಕದಲ್ಲೇ ಆರಂಭಿಸಿತ್ತು.  1965ರ ಯುದ್ಧದ ಆರಂಭದ ದಿನಗಳಲ್ಲಿ ಸಿಖ್ಖರನ್ನು ಹಿಂದೂಗಳ ವಿರುದ್ಧ ಪ್ರಚೋದಿಸುವ ಹಲವಾರು ಕಾರ್ಯಕ್ರಮಗಳನ್ನು ರೇಡಿಯೋ ಪಾಕಿಸ್ತಾನದ ಲಾಹೋರ್ ಕೇಂದ್ರ ಅವಿರತವಾಗಿ ಪ್ರಸಾರ ಮಾಡಿತು.  ಅದು ಕೊನೆಗೂ ನಿಂತದ್ದು ಭಾರತೀಯ ಸೇನೆ ರೇಡಿಯೋ ಕೇಂದ್ರವನ್ನು ಧ್ವಂಸಗೊಳಿಸಿದಾಗ.  ಮತ್ತೆ, ಇಂದಿರಾ ಹತ್ಯೆಯಲ್ಲಿ ಜಿಯಾ ಕೈವಾಡವಿತ್ತು, ಅದಕ್ಕೆ ಪ್ರತಿಯಾಗಿ ರಾಜೀವ್ ಗಾಂಧಿಯವರು ಜಿಯಾರ ತಲೆದಂಡ ಕೇಳಿದರು, ರಾಜೀವ್‍ ಇಂಗಿತವನ್ನು ಕಾರ್ಯಗತಗೊಳಿಸಿದ್ದು ಸೋವಿಯೆತ್ ಕೆಜಿಬಿ ಎಂದು ಪಾಕಿಸ್ತಾನದ ಸೇನೆಯ ಉನ್ನತ ವಲಯಗಳಲ್ಲಿ ವದಂತಿ ಈಗಲೂ ಇದೆ.  ಇವೆಲ್ಲದರ ಹಿಂದಿನ ಸತ್ಯಗಳು ನಮ್ಮಂತಹ ಸಾಮಾನ್ಯ ನಾಗರಿಕರ ಕೈಗೆ ಬಹುಶಃ ಎಂದಿಗೂ ಸಿಗುವುದಿಲ್ಲ.  ಆದರೂ ಇಂದಿರಾ ಮತ್ತೆಮತ್ತೆ ಉಲ್ಲೇಖಿಸುತ್ತಿದ್ದ “foreign hand” ಯಾವುದೆಂದು ಗುರುತಿಸಿದರೆ ಸ್ವತಂತ್ರ ಭಾರತದ ಅನೇಕ ಸಮಸ್ಯೆಗಳ ಮೂಲಗಳಿಗೆ ನಾವು ತಲುಪಬಹುದು.

No comments:

Post a Comment